ನೆಹೆಮೀಯ 8:1-18

  • ನಿಯಮ ಪುಸ್ತಕದ ಓದುವಿಕೆ ಮತ್ತು ವಿವರಣೆ (1-12)

  • ಚಪ್ಪರಗಳ ಹಬ್ಬ ಆಚರಣೆ (13-18)

8  ‘ನೀರು ಬಾಗಿಲಿನ’+ ಮುಂದೆ ಇದ್ದ ಪಟ್ಟಣದ ಮುಖ್ಯಸ್ಥಳದಲ್ಲಿ* ಜನ್ರೆಲ್ಲ ಒಂದೇ ಮನಸ್ಸಿಂದ ಸೇರಿಬಂದ್ರು. ನಕಲುಗಾರ* ಎಜ್ರನಿಗೆ+ ಮೋಶೆಯ ನಿಯಮ ಪುಸ್ತಕ+ ತಗೊಂಡು ಬರೋಕೆ ಹೇಳಿದ್ರು. ಯೆಹೋವ ಇಸ್ರಾಯೇಲ್ಯರಿಗೆ ಹೇಳಿದ್ದ ವಿಷ್ಯಗಳು ಅದ್ರಲ್ಲಿತ್ತು.+  ಹಾಗಾಗಿ ಪುರೋಹಿತ ಎಜ್ರ ಏಳನೇ ತಿಂಗಳ ಮೊದಲ್ನೇ ದಿನ+ ಸಭೆಯ ಮುಂದೆ ನಿಯಮ ಪುಸ್ತಕ ತಗೊಂಡು ಬಂದ.+ ಅಲ್ಲಿ ಗಂಡಸ್ರು, ಹೆಂಗಸ್ರು ಮತ್ತು ವಿಷ್ಯಗಳನ್ನ ಕೇಳಿ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇದ್ದವ್ರೆಲ್ಲ ಇದ್ರು.  ಆಮೇಲೆ ಅವನು ‘ನೀರು ಬಾಗಿಲಿನ’ ಮುಂದೆ ಇದ್ದ ಪಟ್ಟಣದ ಮುಖ್ಯಸ್ಥಳದಲ್ಲಿ* ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಗಂಡಸ್ರ, ಹೆಂಗಸ್ರ, ವಿಷ್ಯಗಳನ್ನ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇದ್ದ ಎಲ್ರ ಮುಂದೆ ಅದನ್ನ ಗಟ್ಟಿಯಾಗಿ ಓದಿದ.+ ನಿಯಮ ಪುಸ್ತಕದಲ್ಲಿದ್ದ ವಿಷ್ಯಗಳನ್ನ ಓದುವಾಗ ಜನ ಗಮನಕೊಟ್ಟು ಕೇಳಿದ್ರು.+  ಆಗ ನಕಲುಗಾರ* ಎಜ್ರ ಮರದ ವೇದಿಕೆ ಮೇಲೆ ನಿಂತ್ಕೊಂಡಿದ್ದ. ಅದನ್ನ ಈ ಸಮಾರಂಭಕ್ಕೆ ಅಂತಾನೆ ಮಾಡಿದ್ರು. ಎಜ್ರನ ಬಲಗಡೆ ಮತ್ತಿತ್ಯ, ಶೆಮ, ಅನಾಯ, ಊರೀಯ, ಹಿಲ್ಕೀಯ, ಮಾಸೇಯ ನಿಂತಿದ್ರು. ಅವನ ಎಡಗಡೆ ಪೆದಾಯ, ಮೀಷಾಯೇಲ್‌, ಮಲ್ಕೀಯ,+ ಹಾಷುಮ್‌, ಹಷ್ಬದ್ದಾನ, ಜೆಕರ್ಯ, ಮೆಷುಲ್ಲಾಮ್‌ ನಿಂತಿದ್ರು.  ಎಜ್ರ ಎಲ್ರಿಗಿಂತ ಎತ್ರದಲ್ಲಿ ನಿಂತಿದ್ರಿಂದ ಅವನು ಪುಸ್ತಕ ತೆರೆದಿದ್ದು ಎಲ್ರಿಗೂ ಕಾಣಿಸ್ತು. ಅವನು ಪುಸ್ತಕ ತೆರೆದ ಕೂಡ್ಲೇ ಜನ್ರೆಲ್ಲ ಎದ್ದು ನಿಂತ್ರು.  ಆಮೇಲೆ ಎಜ್ರ ಮಹಾನ್‌ ದೇವರೂ ಸತ್ಯ ದೇವರೂ ಆಗಿರೋ ಯೆಹೋವನನ್ನ ಹೊಗಳಿದ. ಆಗ ಎಲ್ಲ ಜನ ತಮ್ಮ ಕೈಗಳನ್ನ ಮೇಲಕ್ಕೆತ್ತಿ “ಆಮೆನ್‌!* ಆಮೆನ್‌!”+ ಅಂದ್ರು. ನೆಲದ ತನಕ ಬಗ್ಗಿ ಯೆಹೋವನಿಗೆ ಅಡ್ಡಬಿದ್ದು ನಮಸ್ಕಾರ ಮಾಡಿದ್ರು.  ಲೇವಿಯರಾದ ಯೆಷೂವ, ಬಾನಿ, ಶೇರೇಬ್ಯ,+ ಯಾಮೀನ್‌, ಅಕ್ಕೂಬ್‌, ಶಬ್ಬೆತೈ, ಹೋದೀಯ, ಮಾಸೇಯ, ಕೆಲೀಟ, ಅಜರ್ಯ, ಯೋಜಾಬಾದ್‌,+ ಹಾನಾನ್‌, ಪೆಲಾಯ ಅನ್ನೋರು ನಿಯಮ ಪುಸ್ತಕವನ್ನ ಜನ್ರಿಗೆ ವಿವರಿಸ್ತಿದ್ರು.+ ಆಗ ಜನ ನಿಂತೇ ಇದ್ರು.  ಲೇವಿಯರು ಸತ್ಯ ದೇವರ ನಿಯಮ ಪುಸ್ತಕವನ್ನ ಗಟ್ಟಿಯಾಗಿ ಓದ್ತಾ, ಸ್ಪಷ್ಟವಾಗಿ ವಿವರಿಸ್ತಾ ಅದ್ರ ಅರ್ಥ ಏನಂತ ಹೇಳ್ತಾ ಹೋದ್ರು. ಹೀಗೆ ಓದಿದ ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಜನ್ರಿಗೆ ಸಹಾಯ ಮಾಡಿದ್ರು.*+  ಆ ಸಮಯದಲ್ಲಿ ರಾಜ್ಯಪಾಲನಾಗಿದ್ದ* ನೆಹೆಮೀಯ, ಪುರೋಹಿತನೂ ನಕಲುಗಾರನೂ ಆಗಿದ್ದ ಎಜ್ರ+ ಮತ್ತು ಜನ್ರಿಗೆ ಕಲಿಸ್ತಿದ್ದ ಲೇವಿಯರು ಎಲ್ಲ ಜನ್ರಿಗೆ “ಈ ದಿನ ನಿಮ್ಮ ದೇವರಾದ ಯೆಹೋವನಿಗೆ ಪವಿತ್ರವಾದ ದಿನ.+ ಹಾಗಾಗಿ ಗೋಳಾಡಬೇಡಿ, ಅಳಬೇಡಿ” ಅಂದ್ರು. ಯಾಕಂದ್ರೆ ನಿಯಮ ಪುಸ್ತಕದ ಮಾತುಗಳನ್ನ ಕೇಳಿ ಜನ್ರೆಲ್ಲ ಅಳ್ತಿದ್ರು. 10  ನೆಹೆಮೀಯ ಅವ್ರಿಗೆ “ನೀವು ಹೋಗಿ ರುಚಿರುಚಿಯಾದ* ಅಡುಗೆ ಮಾಡಿ ಊಟ ಮಾಡಿ. ಸಿಹಿಯಾದ ಪಾನೀಯ ಕುಡಿರಿ. ತಿನ್ನೋಕೆ ಏನೂ ಇಲ್ಲದವ್ರಿಗೆ ಊಟ ಕಳಿಸ್ಕೊಡಿ.+ ಯಾಕಂದ್ರೆ ಈ ದಿನ ನಮ್ಮ ಒಡೆಯನಿಗೆ ಪವಿತ್ರ ದಿನ. ಯೆಹೋವ ಕೊಡೋ ಆನಂದನೇ ನಿಮ್ಮ ಬಲ.* ಹಾಗಾಗಿ ದುಃಖಪಡಬೇಡಿ” ಅಂದ. 11  ಲೇವಿಯರು ಎಲ್ಲ ಜನ್ರನ್ನ ಸಮಾಧಾನ ಮಾಡ್ತಾ “ಇದು ಪವಿತ್ರ ದಿನ. ಅಳಬೇಡಿ, ದುಃಖಪಡಬೇಡಿ!” ಅಂತಿದ್ರು. 12  ಹಾಗಾಗಿ ಎಲ್ಲ ಜನ ಊಟ ಮಾಡೋಕೆ, ಪಾನೀಯ ಕುಡಿಯೋಕೆ, ಬೇರೆಯವ್ರಿಗೆ ಊಟ ಕಳಿಸ್ಕೊಡೋಕೆ, ಖುಷಿಯಿಂದ ಇರೋಕೆ ಅಲ್ಲಿಂದ ಹೋದ್ರು.+ ಯಾಕಂದ್ರೆ ಅವ್ರಿಗೆ ವಿವರಿಸಿದ ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ರು.+ 13  ಎರಡನೇ ದಿನ ಎಲ್ಲ ಜನ್ರ ಕುಲಗಳ ಮುಖ್ಯಸ್ಥರು, ಪುರೋಹಿತರು, ಲೇವಿಯರು ನಿಯಮ ಪುಸ್ತಕದ ಮಾತುಗಳನ್ನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ* ನಕಲುಗಾರ* ಎಜ್ರನ ಸುತ್ತ ಬಂದು ನಿಂತ್ರು. 14  ಮೋಶೆ ಮೂಲಕ ಬರೆಸಿದ್ದ ನಿಯಮ ಪುಸ್ತಕದಲ್ಲಿ ಯೆಹೋವ ಇಸ್ರಾಯೇಲ್ಯರಿಗೆ ಒಂದು ಆಜ್ಞೆ ಕೊಟ್ಟಿದ್ದ. ಏಳನೇ ತಿಂಗಳ ಹಬ್ಬ ಆಚರಿಸುವಾಗ ನೀವು ಚಪ್ಪರಗಳಲ್ಲಿ* ವಾಸ ಮಾಡಬೇಕು+ ಅನ್ನೋ ಆಜ್ಞೆ ಇತ್ತು. ಈ ವಿಷ್ಯ ಇವ್ರಿಗೆ ನಿಯಮ ಪುಸ್ತಕದಲ್ಲಿ ಸಿಕ್ತು. 15  ಅಷ್ಟೇ ಅಲ್ಲ ಎಲ್ಲ ಪಟ್ಟಣಗಳಲ್ಲಿ, ಇಡೀ ಯೆರೂಸಲೇಮಲ್ಲಿ “ನಿಯಮ ಪುಸ್ತಕದಲ್ಲಿ ಬರೆದಿರೋ ಪ್ರಕಾರ ಚಪ್ಪರಗಳನ್ನ ಕಟ್ಟೋಕೆ ಬೆಟ್ಟ ಪ್ರದೇಶಕ್ಕೆ ಹೋಗಿ ಆಲಿವ್‌ ಮರ, ಪೈನ್‌ ಮರ, ಮರ್ಟಲ್‌ ಮರ,* ಖರ್ಜೂರ ಮರಗಳ ಗರಿಗಳನ್ನ, ತುಂಬ ಎಲೆ ಇರೋ ಬೇರೆ ಮರಗಳ ಕೊಂಬೆಗಳನ್ನ ತಗೊಂಡು ಬರಬೇಕು” ಅಂತ ಎಲ್ರಿಗೂ ಹೇಳಬೇಕಂತ ಅವ್ರಿಗೆ+ ಗೊತ್ತಾಯ್ತು. 16  ಹಾಗಾಗಿ ಜನ ಹೋಗಿ ತಮಗೋಸ್ಕರ ಚಪ್ಪರ ಕಟ್ಟೋಕೆ ತುಂಬಾ ಎಲೆಗಳಿರೋ ಕೊಂಬೆಗಳನ್ನ ತಂದ್ರು. ಪ್ರತಿಯೊಬ್ರೂ ತಮ್ಮತಮ್ಮ ಮನೆ ಚಾವಣಿ ಮೇಲೆ, ಅಂಗಳಗಳಲ್ಲಿ, ಸತ್ಯ ದೇವರ ಆಲಯದ ಅಂಗಳಗಳಲ್ಲಿ,+ ‘ನೀರು ಬಾಗಿಲಿನ’+ ಮತ್ತು ‘ಎಫ್ರಾಯೀಮ್‌ ಬಾಗಿಲಿನ’+ ಪಟ್ಟಣದ ಮುಖ್ಯಸ್ಥಳದಲ್ಲಿ* ಚಪ್ಪರಗಳನ್ನ ಕಟ್ಕೊಂಡ್ರು. 17  ಹೀಗೆ ಕೈದಿಗಳಾಗಿದ್ದು ವಾಪಸ್‌ ಬಂದಿದ್ದ ಜನ್ರೆಲ್ಲ ಚಪ್ಪರಗಳನ್ನ ಕಟ್ಟಿ ಅದ್ರಲ್ಲಿ ವಾಸಿಸೋಕೆ ಶುರು ಮಾಡಿದ್ರು. ನೂನನ ಮಗ ಯೆಹೋಶುವನ+ ಕಾಲದಿಂದ ಇಲ್ಲಿ ತನಕ ಇಸ್ರಾಯೇಲ್ಯರು ಈ ರೀತಿ ಚಪ್ಪರಗಳ ಹಬ್ಬ ಮಾಡಿರಲೇ ಇಲ್ಲ. ಹಾಗಾಗಿ ಅವರು ತುಂಬ ಸಂಭ್ರಮದಿಂದ ಆ ಹಬ್ಬ ಆಚರಿಸಿದ್ರು.+ 18  ಹಬ್ಬದ ಮೊದಲ್ನೇ ದಿನದಿಂದ ಕೊನೇ ದಿನ ತನಕ ಪ್ರತಿ ದಿನ ಸತ್ಯ ದೇವರ ನಿಯಮ ಪುಸ್ತಕ ಓದಲಾಯ್ತು.+ ಅವರು ಆ ಹಬ್ಬವನ್ನ ಏಳು ದಿನ ಆಚರಿಸಿದ್ರು. ನಿಯಮ ಪುಸ್ತಕದಲ್ಲಿ ಹೇಳಿದ ಹಾಗೆ ಎಂಟನೇ ದಿನ ದೇವರ ಆರಾಧನೆಗೆ ಸೇರಿಬರಬೇಕು.+

ಪಾದಟಿಪ್ಪಣಿ

ಅಥವಾ “ಬರಹಗಾರ.”
ಅಥವಾ “ಬರಹಗಾರ.”
ಅಥವಾ “ಹಾಗೇ ಆಗ್ಲಿ.”
ಅಥವಾ “ಹೀಗೆ ಜನ್ರಿಗೆ ಅರ್ಥ ಆಗೋ ತರ ಓದಿದ್ರು.”
ಅಥವಾ “ತಿರ್ಷಾತಾ,” ಇದು ಪ್ರಾಂತ್ಯದ ರಾಜ್ಯಪಾಲನಿಗಿರೋ ಪರ್ಶಿಯದ ಬಿರುದು.
ಅಕ್ಷ. “ಕೊಬ್ಬಿದ.”
ಅಥವಾ “ಆಶ್ರಯ.”
ಅಕ್ಷ. “ಹೆಚ್ಚಿನ ಒಳನೋಟ ಪಡೆಯೋಕೆ.”
ಅಥವಾ “ಬರಹಗಾರ.”
ಅಥವಾ “ತಾತ್ಕಾಲಿಕ ವಸತಿಗಳಲ್ಲಿ.”
ಇದು, ಹೊಳಪಿನ ಎಲೆಗಳು ಮತ್ತು ಸುವಾಸನೆಯುಳ್ಳ ಬಿಳಿ ಹೂಗಳನ್ನ ಬಿಡೋ ಪೊದೆ.