ನ್ಯಾಯಸ್ಥಾಪಕರು 15:1-20
-
ಫಿಲಿಷ್ಟಿಯರ ಮೇಲೆ ಸಂಸೋನನ ಸೇಡು (1-20)
15 ಸ್ವಲ್ಪ ದಿನ ಆದ್ಮೇಲೆ ಗೋದಿ ಕೊಯ್ಲಿನ ಕಾಲ ಬಂತು. ಆಗ ಸಂಸೋನ ಒಂದು ಮೇಕೆ ತಗೊಂಡು ತನ್ನ ಹೆಂಡತಿನ ನೋಡೋಕೆ ಹೋದ. ಅವನು ಹುಡುಗಿ ಅಪ್ಪಗೆ “ನಾನು ನನ್ನ ಹೆಂಡತಿ ಕೋಣೆಗೆ* ಹೋಗ್ತೀನಿ” ಅಂದ. ಆದ್ರೆ ಅವಳ ಅಪ್ಪ ಅವನನ್ನ ಒಳಗೆ ಬಿಡಲಿಲ್ಲ.
2 ಅವಳ ಅಪ್ಪ “‘ನಿಂಗೆ ನನ್ನ ಮಗಳು ಇಷ್ಟ ಇಲ್ಲ’+ ಅಂತ ಅಂದ್ಕೊಂಡು ಅವಳನ್ನ ನಿನ್ನ ಜೊತೆ ಇದ್ದ ಹುಡುಗನಿಗೆ ಮದುವೆ ಮಾಡ್ಕೊಟ್ಟೆ.+ ಅವಳ ತಂಗಿ ಅವಳಿಗಿಂತ ಸುಂದರಿ. ಅವಳನ್ನ ಮದ್ವೆ ಮಾಡ್ಕೊ” ಅಂದ.
3 ಆಗ ಸಂಸೋನ “ಈ ಸಾರಿ ನಾನು ಫಿಲಿಷ್ಟಿಯರಿಗೆ ಹಾನಿ ಮಾಡಿದ್ರೂ ಪರ್ವಾಗಿಲ್ಲ! ಅವ್ರು ನನ್ನ ಮೇಲೆ ತಪ್ಪು ಹೊರಿಸಕ್ಕಾಗಲ್ಲ” ಅಂದ.
4 ಸಂಸೋನ ಹೋಗಿ 300 ನರಿಗಳನ್ನ ಹಿಡಿದ. ಪಂಜುಗಳನ್ನ ತಗೊಂಡ. ಅವನು ನರಿಗಳ ಒಂದ್ರ ಬಾಲ ಇನ್ನೊಂದಕ್ಕೆ ಕಟ್ಟಿ ಆ ಎರಡು ಬಾಲಗಳ ಮಧ್ಯ ಒಂದು ಪಂಜು ಸಿಕ್ಕಿಸಿದ.
5 ಆ ಪಂಜುಗಳಿಗೆ ಬೆಂಕಿ ಹಚ್ಚಿ ನರಿಗಳನ್ನ ಚೆನ್ನಾಗಿ ಬೆಳೆದಿರೋ ತೆನೆಗಳಿದ್ದ ಫಿಲಿಷ್ಟಿಯರ ಹೊಲಗಳಿಗೆ ಕಳಿಸಿದ. ಹೀಗೆ ಅವನು ಫಿಲಿಷ್ಟಿಯರು ಇನ್ನೂ ಕಟಾವು ಮಾಡದ ಬೆಳೆಗೂ ಕಟಾವು ಮಾಡಿದ ಬೆಳೆಗೂ ದ್ರಾಕ್ಷಿ ಬಳ್ಳಿಯ ತೋಟಗಳಿಗೂ ಆಲಿವ್ ತೋಟಗಳಿಗೂ ಬೆಂಕಿ ಹಚ್ಚಿ ಸುಟ್ಟುಹಾಕಿದ.
6 “ಯಾರ ಕೆಲ್ಸ ಇದು?” ಅಂತ ಫಿಲಿಷ್ಟಿಯರು ಕೇಳಿದ್ದಕ್ಕೆ ಅವರು “ಇದನ್ನ ಮಾಡಿದ್ದು ಸಂಸೋನ. ತಿಮ್ನಾ ಊರಲ್ಲಿರೋ ವ್ಯಕ್ತಿಯ ಅಳಿಯ. ಅವನ ಹೆಂಡತಿನ ಬೇರೆಯವ್ನಿಗೆ ಕೊಟ್ಟು ಮದ್ವೆ ಮಾಡಿದ್ದಿಕ್ಕೇ ಹೀಗೆ ಮಾಡಿದ್ದಾನೆ”+ ಅಂದ್ರು. ಆಗ ಫಿಲಿಷ್ಟಿಯರು ಹೋಗಿ ಅವಳನ್ನ ಅವಳ ಅಪ್ಪನನ್ನ ಸುಟ್ಟುಬಿಟ್ರು.+
7 ಆಗ ಸಂಸೋನ ಫಿಲಿಷ್ಟಿಯರಿಗೆ “ನೀವು ಹೀಗೆ ಮಾಡಿದ್ರಿಂದ ನಿಮ್ಮ ಮೇಲೆ ಸೇಡು ತೀರಿಸ್ಕೊಳ್ಳದೇ ಬಿಡಲ್ಲ”+ ಅಂದ.
8 ಒಬ್ರಾದ ಮೇಲೆ ಒಬ್ರನ್ನ ಕೊಲ್ತಾ* ಶವಗಳನ್ನ ರಾಶಿ ಹಾಕಿದ. ಆಮೇಲೆ ಏಟಾಮಿನ ಬಂಡೆಯ ಗುಹೆಯಲ್ಲಿ* ಇದ್ದ.
9 ಫಿಲಿಷ್ಟಿಯರು ಬಂದು ಯೆಹೂದದಲ್ಲಿ ಪಾಳೆಯ ಹೂಡಿ ಲೆಹೀಯಲ್ಲಿ+ ಸದ್ದು ಮಾಡ್ತಾ ಸುತ್ತಾಡ್ತಿದ್ರು.
10 ಆಗ ಯೆಹೂದದ ಜನ್ರು ಅವ್ರಿಗೆ “ನೀವ್ಯಾಕೆ ನಮ್ಮ ವಿರುದ್ಧ ಬಂದಿದ್ದೀರ?” ಅಂತ ಕೇಳಿದ್ದಿಕ್ಕೆ “ನಾವು ಸಂಸೋನನನ್ನ ಕಟ್ಟಿಹಾಕಿ ಅವನು ನಮಗೆ ಮಾಡಿದ ತರಾನೇ ಅವನಿಗೂ ಮಾಡೋಕೆ ಬಂದಿದ್ದೀವಿ” ಅಂದ್ರು.
11 ಹಾಗಾಗಿ ಯೆಹೂದದ 3,000 ಗಂಡಸ್ರು ಏಟಾಮಿನ ಬಂಡೆಯ ಗುಹೆಯಲ್ಲಿ* ಇದ್ದ ಸಂಸೋನನ ಹತ್ರ ಹೋಗಿ “ನಾವು ಫಿಲಿಷ್ಟಿಯರ ಕೈಕೆಳಗೆ ಇದ್ದೀವಿ ಅಂತ ನಿಂಗೆ ಗೊತ್ತಿಲ್ವಾ?+ ನೀನ್ಯಾಕೆ ಹೀಗೆ ಮಾಡ್ದೆ?” ಅಂದ್ರು. ಅದಕ್ಕೆ ಸಂಸೋನ “ಅವರು ನನಗೆ ಮಾಡಿದ್ದನ್ನೇ ನಾನೂ ಅವ್ರಿಗೆ ಮಾಡ್ದೆ” ಅಂದ.
12 ಆಗ ಅವ್ರು “ನಾವು ನಿನ್ನನ್ನ ಹಿಡ್ಕೊಂಡು* ಫಿಲಿಷ್ಟಿಯರ ಕೈಗೆ ಒಪ್ಪಿಸೋಕೆ ಬಂದಿದ್ದೀವಿ” ಅಂದ್ರು. ಆಗ ಸಂಸೋನ “ನನ್ನನ್ನ ಸಾಯಿಸಲ್ಲ ಅಂತ ಮೊದ್ಲು ಮಾತು ಕೊಡಿ” ಅಂದ.
13 ಅದಕ್ಕವರು “ನಿನ್ನ ಕಟ್ಟಿ ಅವ್ರ ಕೈಗೆ ಒಪ್ಪಿಸ್ತೀವಿ ಅಷ್ಟೇ. ನಿನ್ನನ್ನ ಕೊಲ್ಲಲ್ಲ” ಅಂದ್ರು.
ಅವನನ್ನ ಎರಡು ಹೊಸ ಹಗ್ಗದಿಂದ ಕಟ್ಟಿ ಗುಹೆಯಿಂದ ಕರ್ಕೊಂಡು ಬಂದ್ರು.
14 ಲೆಹೀಗೆ ಬಂದಾಗ ಅವನನ್ನ ನೋಡಿ ಫಿಲಿಷ್ಟಿಯರು ಗೆದ್ದುಬಿಟ್ವಿ ಅನ್ನೋ ತರ ಕೂಗಾಡಿದ್ರು. ಆಗ ಯೆಹೋವನ ಪವಿತ್ರಶಕ್ತಿ ಅವನಲ್ಲಿ ಬಲ ತುಂಬ್ತು.+ ಆಗ ಅವನ ಕೈಗೆ ಕಟ್ಟಿದ್ದ ಹಗ್ಗ ಬೆಂಕಿಯಲ್ಲಿ ಸುಟ್ಟ ದಾರದ ತರ ಅವನ ಕೈಯಿಂದ ಜಾರಿಬಿತ್ತು.+
15 ಅಲ್ಲಿ ಒಂದು ಗಂಡು ಕತ್ತೆಯ ದವಡೆಯ ಹಸಿ ಮೂಳೆ ಅವನ ಕಣ್ಣಿಗೆ ಬಿತ್ತು. ಅದನ್ನ ತಗೊಂಡು ಅದ್ರಿಂದ 1,000 ಗಂಡಸ್ರನ್ನ ಸಾಯಿಸಿದ.+
16 ಆಮೇಲೆ ಅವನು
“ಒಂದು ಕತ್ತೆಯ ದವಡೆ ಮೂಳೆಯಿಂದ ಶತ್ರುಗಳ ಶವನ ರಾಶಿ ಹಾಕ್ದೆ!
ಒಂದೇ ಮೂಳೆಯಿಂದ 1,000 ಗಂಡಸ್ರನ್ನ ಸಾಯಿಸಿದೆ”+ ಅಂದ.
17 ಹೀಗೆ ಹೇಳಿದ್ಮೇಲೆ ಆ ದವಡೆ ಮೂಳೆಯನ್ನ ಬಿಸಾಕಿ ಆ ಜಾಗಕ್ಕೆ ರಾಮತ್-ಲೆಹೀ*+ ಅಂತ ಹೆಸ್ರಿಟ್ಟ.
18 ಅವನಿಗೆ ತುಂಬ ಬಾಯಾರಿಕೆ ಆಯ್ತು. ಅವನು ಯೆಹೋವನಿಗೆ “ದೇವರೇ, ನೀನೇ ಈ ಸೇವಕನನ್ನ ಕಾಪಾಡ್ದೆ. ಆದ್ರೆ ಈಗ ನಾನು ಬಾಯಾರಿಕೆಯಿಂದ ಸಾಯಬೇಕಂತ ಬಯಸ್ತೀಯ? ಸುನ್ನತಿ ಆಗಿರದ ಈ ಜನ್ರ ಕೈಗೆ ನಾನು ಸಿಕ್ಕಿಬೀಳಬೇಕಾ?” ಅಂತ ಪ್ರಾರ್ಥಿಸಿದ.
19 ಹಾಗಾಗಿ ದೇವರು ಲೆಹೀಯಲ್ಲಿ ಒಂದು ತಗ್ಗನ್ನ ಸೀಳಿ ಅದ್ರಿಂದ ನೀರು ಹರಿಯೋ ತರ ಮಾಡಿದನು.+ ಸಂಸೋನ ಆ ನೀರು ಕುಡಿದಾಗ ಅವನಿಗೆ ಮತ್ತೆ ಶಕ್ತಿ ಬಂತು, ಚೈತನ್ಯ ಪಡ್ಕೊಂಡ. ಅವನು ಆ ಜಾಗಕ್ಕೆ ಏನ್-ಹಕ್ಕೋರೇ* ಅಂತ ಹೆಸ್ರಿಟ್ಟ. ಅದು ಇವತ್ತಿಗೂ ಲೆಹೀಯಲ್ಲಿದೆ.
20 ಅವನು ಫಿಲಿಷ್ಟಿಯರ ಕಾಲದಲ್ಲಿ 20 ವರ್ಷ ಇಸ್ರಾಯೇಲಿನ ನ್ಯಾಯಾಧೀಶನಾಗಿ ಕೆಲಸಮಾಡಿದ.+
ಪಾದಟಿಪ್ಪಣಿ
^ ಅಥವಾ “ಒಳಗಿರೋ ಕೋಣೆಗೆ.”
^ ಅಥವಾ “ಅವ್ರ ತೊಡೆ ಸೊಂಟಗಳನ್ನ ಮುರೀತಾ.”
^ ಅಥವಾ “ಸಂದಿಯಲ್ಲಿ.”
^ ಅಥವಾ “ಸಂದಿಯಲ್ಲಿ.”
^ ಅಥವಾ “ಕಟ್ಟಿಹಾಕಿ.”
^ ಅರ್ಥ “ದವಡೆ ಎಲುಬುಗಳ ಬೆಟ್ಟ.”
^ ಅರ್ಥ “ಕರೆಯುವವನ ನೀರಿನ ಬುಗ್ಗೆ.”