ನ್ಯಾಯಸ್ಥಾಪಕರು 16:1-31

  • ಗಾಜಾದಲ್ಲಿ ಸಂಸೋನ (1-3)

  • ಸಂಸೋನ ಮತ್ತು ದೆಲೀಲ (4-22)

  • ಸಂಸೋನನ ಸೇಡು ಮತ್ತು ಸಾವು (23-31)

16  ಒಂದಿನ ಸಂಸೋನ ಗಾಜಾಗೆ ಹೋಗಿ ಅಲ್ಲಿ ಒಬ್ಬ ವೇಶ್ಯೆನ ನೋಡಿ ಅವಳ ಮನೆಗೆ ಹೋದ.  “ಸಂಸೋನ ಬಂದಿದ್ದಾನೆ” ಅನ್ನೋ ವಿಷ್ಯ ಗಾಜಾದವ್ರ ಕಿವಿಗೆ ಬಿತ್ತು. ಆಗ ಅವರು ಆ ಜಾಗನ ಸುತ್ತುವರಿದು ಪಟ್ಟಣದ ಬಾಗಿಲ ಹತ್ರ ಇಡೀ ರಾತ್ರಿ ಅವನಿಗಾಗಿ ಹೊಂಚುಹಾಕಿದ್ರು. “ಬೆಳಗಾದ ತಕ್ಷಣ ಅವನನ್ನ ಕೊಂದುಹಾಕೋಣ” ಅಂದ್ಕೊಂಡು ಇಡೀ ರಾತ್ರಿ ಸದ್ದು ಮಾಡ್ದೆ ಅಲ್ಲೇ ಕೂತ್ರು.  ಆದ್ರೆ ಸಂಸೋನ ಮಧ್ಯ ರಾತ್ರಿ ತನಕ ಅಲ್ಲೇ ಮಲಗಿ ಆಮೇಲೆ ಎದ್ದು ಪಟ್ಟಣದ ಬಾಗಿಲನ್ನ, ಎರಡು ಕಂಬಗಳನ್ನ ಚಿಲಕದ ಸಮೇತ ಕಿತ್ತು ಹೆಗಲ ಮೇಲೆ ಹೊತ್ಕೊಂಡು ಹೆಬ್ರೋನಿನ ಮುಂದೆ ಇದ್ದ ಬೆಟ್ಟ ಹತ್ತಿಹೋದ.  ಆಮೇಲೆ ಅವನು ಸೋರೇಕ್‌ ಕಣಿವೆಯಲ್ಲಿದ್ದ* ಒಬ್ಬ ಹುಡುಗಿನ ಪ್ರೀತಿಸಿದ. ಅವಳ ಹೆಸ್ರು ದೆಲೀಲ.+  ಹಾಗಾಗಿ ಫಿಲಿಷ್ಟಿಯರ ಅಧಿಪತಿಗಳು ಅವಳ ಹತ್ರ ಬಂದು “ಅವನನ್ನ ಹೇಗಾದ್ರೂ ಪುಸಲಾಯಿಸಿ+ ಅವನ ಮಹಾ ಶಕ್ತಿಯ ಗುಟ್ಟು ಏನಂತ ಕಂಡುಹಿಡಿ. ನಾವು ಅವನನ್ನ ಹೇಗೆ ಸೋಲಿಸಿ ಕಟ್ಟಿಹಾಕಬಹುದು ಅಂತ ತಿಳ್ಕೊ. ಹಾಗೆ ಮಾಡಿದ್ರೆ ನಾವೆಲ್ಲ ಒಬ್ಬೊಬ್ರೂ ನಿನಗೆ 1,100 ಬೆಳ್ಳಿ ಶೆಕೆಲನ್ನ ಕೊಡ್ತೀವಿ” ಅಂದ್ರು.  ಆಮೇಲೆ ದೆಲೀಲ ಸಂಸೋನಗೆ “ನಿನ್ನಲ್ಲಿ ತುಂಬ ಶಕ್ತಿ ಇದೆ! ಅದ್ರ ಗುಟ್ಟು ಏನಂತ ನಂಗೆ ಹೇಳಲ್ವಾ? ಯಾವುದ್ರಿಂದ ಕಟ್ಟಿದ್ರೆ ನಿನಗೆ ಬಿಡಿಸ್ಕೊಳ್ಳೋಕೆ ಆಗಲ್ಲ ಅಂತ ದಯವಿಟ್ಟು ನನಗೆ ಹೇಳು” ಅಂದಳು.  ಅದಕ್ಕೆ ಸಂಸೋನ “ಒಣಗದೆ ಇರೋ ಬಿಲ್ಲಿನ ಏಳು ಹಸಿ ತಂತಿಗಳಿಂದ* ನನ್ನನ್ನ ಕಟ್ಟಿದ್ರೆ ನಾನು ಶಕ್ತಿ ಕಳ್ಕೊಂಡು ಮಾಮೂಲಿ ಮನುಷ್ಯ ಆಗಿಬಿಡ್ತೀನಿ” ಅಂದ.  ಹಾಗಾಗಿ ಫಿಲಿಷ್ಟಿಯರ ಅಧಿಪತಿಗಳು ಒಣಗದೆ ಇರೋ ಬಿಲ್ಲಿನ ಏಳು ಹಸಿ ತಂತಿಗಳನ್ನ ಅವಳಿಗೆ ತಂದ್ಕೊಟ್ರು. ಅದ್ರಿಂದ ಕಟ್ಟಿದಳು.  ಅವರು ಒಳಗಿನ ಕೋಣೆಯಲ್ಲಿ ಅವನಿಗಾಗಿ ಹೊಂಚುಹಾಕಿ ಕೂತ್ರು. ಅವಳು “ಸಂಸೋನ, ಫಿಲಿಷ್ಟಿಯರು ಬಂದಿದ್ದಾರೆ!” ಅಂತ ಕೂಗಿದಳು. ಆಗ ಸಂಸೋನ ಅವನಿಗೆ ಕಟ್ಟಿದ್ದ ಬಿಲ್ಲಿನ ತಂತಿಗಳನ್ನ ಅಗಸೆ* ದಾರಕ್ಕೆ ಬೆಂಕಿ ಹಚ್ಚಿದಾಗ ಎಷ್ಟು ಸುಲಭವಾಗಿ ಬಂದುಬಿಡುತ್ತೋ ಅಷ್ಟೇ ಸುಲಭವಾಗಿ ಕಿತ್ತುಹಾಕಿದ.+ ಅವನ ಶಕ್ತಿಯ ಗುಟ್ಟು ಯಾರಿಗೂ ಗೊತ್ತಾಗಲಿಲ್ಲ. 10  ಆಗ ದೆಲೀಲ ಸಂಸೋನಗೆ “ನನಗೆ ಸುಳ್ಳು ಹೇಳ್ದೆ. ಮೋಸ ಮಾಡ್ದೆ.* ನಿಜ ಹೇಳು, ನಿನ್ನನ್ನ ಯಾವುದ್ರಿಂದ ಕಟ್ಟಿದ್ರೆ ನಿಂಗೆ ಬಿಡಿಸ್ಕೊಳ್ಳೋಕೆ ಆಗಲ್ಲ” ಅಂತ ಕೇಳಿದಳು. 11  ಆಗ ಅವನು “ಕೆಲಸಕ್ಕೆ ಬಳಸದೆ ಇರೋ ಹೊಸ ಹಗ್ಗದಿಂದ ನನ್ನನ್ನ ಕಟ್ಟಿದ್ರೆ ಶಕ್ತಿ ಕಳ್ಕೊಂಡು ಮಾಮೂಲಿ ಮನುಷ್ಯ ಆಗಿಬಿಡ್ತೀನಿ” ಅಂದ. 12  ಆಗ ದೆಲೀಲ ಹೊಸ ಹಗ್ಗ ತಂದು ಅವನನ್ನ ಕಟ್ಟಿ “ಸಂಸೋನ, ಫಿಲಿಷ್ಟಿಯರು ಬಂದಿದ್ದಾರೆ!” ಅಂತ ಕೂಗಿದಳು. (ಆ ಸಮಯದಲ್ಲಿ ಅವರು ಒಳಗಿನ ಕೋಣೆಯಲ್ಲಿ ಹೊಂಚುಹಾಕಿ ಕೂತಿದ್ರು.) ಆಗ ಅವನು ಕಟ್ಟಿದ್ದ ಹಗ್ಗನ ದಾರದ ತರ ಕಿತ್ತುಹಾಕಿದ.+ 13  ಇದಾದ್ಮೇಲೆ ದೆಲೀಲ ಸಂಸೋನಗೆ “ಇಲ್ಲಿ ತನಕ ನೀನು ಹೀಗೇ ಸುಳ್ಳು ಹೇಳ್ತಾ ನನಗೆ ಮೋಸ ಮಾಡ್ದೆ.+ ನಿನ್ನನ್ನ ಯಾವುದ್ರಿಂದ ಕಟ್ಟೋಕೆ ಆಗುತ್ತೆ ಅಂತ ಹೇಳು” ಅಂದಳು. ಆಗ ಅವನು “ನನಗಿರೋ ಏಳು ಜಡೆನ ಮಗ್ಗದ ದಾರದಿಂದ ನೇಯ್ದರೆ ಸಾಕು” ಅಂದ. 14  ಹಾಗಾಗಿ ಅವಳು ಸಂಸೋನನ ಜಡೆಗಳಿಗೆ ಗೂಟ ಸಿಕ್ಕಿಸಿ “ಸಂಸೋನ, ಫಿಲಿಷ್ಟಿಯರು ಬಂದಿದ್ದಾರೆ!” ಅಂತ ಕೂಗಿದಳು. ಆಗ ಸಂಸೋನ ನಿದ್ದೆಯಿಂದ ಎದ್ದು ಮಗ್ಗದ ಗೂಟ, ದಾರ ಕಿತ್ತುಹಾಕಿದ. 15  ಆಗ ಅವಳು “ನಿನ್ನ ಪ್ರೀತಿ ಸುಳ್ಳು,+ ನಿನಗೆ ನನ್ನ ಮೇಲೆ ನಂಬಿಕೆನೇ ಇಲ್ಲ. ಮೂರು ಸಲ! ಮೂರು ಸಲ ನನಗೆ ಮೋಸ ಮಾಡಿದ್ದೀಯ. ನಿನ್ನ ಶಕ್ತಿಯ ಗುಟ್ಟು ಏನಂತ ನನಗೆ ಹೇಳ್ಲೇ ಇಲ್ಲ”+ ಅಂದಳು. 16  ಅವಳು ದಿನಾ ಅವನ ಹಿಂದೆ ಬಿದ್ದು ಎಷ್ಟು ಕಾಟ ಕೊಡ್ತಿದ್ದಳು ಅಂದ್ರೆ ಅವನಿಗೆ ಸಾಯೋದೇ ಒಳ್ಳೇದು ಅನ್ನೋಷ್ಟರ ಮಟ್ಟಿಗೆ ಬೇಜಾರಾಯ್ತು.+ 17  ಕೊನೆಗೆ ಅವನು ಮನಸ್ಸಲ್ಲಿ ಇರೋದನ್ನೆಲ್ಲ ಅವಳಿಗೆ ಹೇಳಿಬಿಟ್ಟ. “ನಾನು ಹುಟ್ಟಿದಾಗಿಂದ* ದೇವರ ನಾಜೀರ.+ ಹಾಗಾಗಿ ಇಲ್ಲಿ ತನಕ ನನ್ನ ತಲೆಕೂದಲನ್ನ ಕತ್ತರಿಸಿಲ್ಲ. ಕತ್ತರಿಸಿದ್ರೆ ನನ್ನಲ್ಲಿರೋ ಶಕ್ತಿ ಹೋಗಿಬಿಡುತ್ತೆ. ಬೇರೆಯವರ ತರ ನಾನೂ ಮಾಮೂಲಿ ವ್ಯಕ್ತಿ ಆಗಿಬಿಡ್ತೀನಿ” ಅಂದ. 18  ಅವನು ಮನಸ್ಸಲ್ಲಿ ಇರೋದನ್ನೆಲ್ಲ ಹೇಳಿದ್ದಾನೆ ಅಂತ ಅವಳಿಗೆ ಗೊತ್ತಾದ ತಕ್ಷಣ ಅವಳು ಫಿಲಿಷ್ಟಿಯರ ಅಧಿಪತಿಗಳನ್ನ+ ಸೇರಿಸಿ “ಈ ಸಲ ಬನ್ನಿ, ಅವನು ತನ್ನ ಶಕ್ತಿಯ ಗುಟ್ಟನ್ನ ನನಗೆ ಹೇಳಿದ್ದಾನೆ” ಅಂದಳು. ಆಗ ಫಿಲಿಷ್ಟಿಯರ ಅಧಿಪತಿಗಳು ಹಣ ತಗೊಂಡು ಅವಳ ಹತ್ರ ಬಂದ್ರು. 19  ಅವಳು ಸಂಸೋನನನ್ನ ತನ್ನ ತೊಡೆ ಮೇಲೆ ಮಲಗಿಸ್ಕೊಂಡು ನಿದ್ದೆಗೆ ಜಾರಿದ ಮೇಲೆ ಒಬ್ಬನನ್ನ ಕರೆಸಿ ಅವನ ಏಳು ಜಡೆನ ಕತ್ತರಿಸಿದಳು. ಅವನ ಶಕ್ತಿ ಅವನಿಂದ ಹೋಗ್ತಾ ಇದ್ದದ್ರಿಂದ ಅವಳಿಗೆ ಅವನ ಮೇಲೆ ಹಿಡಿತ ಸಿಕ್ತು. 20  ಅವಳು “ಸಂಸೋನ, ಫಿಲಿಷ್ಟಿಯರು ಬಂದಿದ್ದಾರೆ!” ಅಂತ ಕೂಗಿದಳು. ಆಗ ಸಂಸೋನ ನಿದ್ದೆಯಿಂದ ಎದ್ದು “ಈ ಸಲನೂ ನಾನು ಅವ್ರ ಕೈಗೆ ಸಿಗಲ್ಲ”+ ಅಂದ. ಆದ್ರೆ ಯೆಹೋವ ಅವನನ್ನ ಬಿಟ್ಟುಹೋಗಿರೋ ವಿಷ್ಯ ಅವನಿಗೆ ಗೊತ್ತಿರಲಿಲ್ಲ. 21  ಹಾಗಾಗಿ ಫಿಲಿಷ್ಟಿಯರು ಅವನನ್ನ ಕಟ್ಟಿ ಅವನ ಕಣ್ಣುಗಳನ್ನ ಕಿತ್ತುಹಾಕಿದ್ರು. ಆಮೇಲೆ ಗಾಜಾಗೆ ಕರ್ಕೊಂಡು ಬಂದು ತಾಮ್ರದ ಬೇಡಿಗಳಿಂದ ಕಟ್ಟಿದ್ರು. ಅವನಿಗೆ ಜೈಲಲ್ಲಿ ಧಾನ್ಯ ಬೀಸೋ ಕೆಲಸ ಕೊಟ್ರು. 22  ಆದ್ರೆ ಅವನ ತಲೆಕೂದಲು+ ಮತ್ತೆ ಬೆಳಿಯೋಕೆ ಶುರು ಆಯ್ತು. 23  ಫಿಲಿಷ್ಟಿಯರ ಅಧಿಪತಿಗಳು ಒಟ್ಟುಸೇರಿ ಅವ್ರ ದೇವರಾದ ದಾಗೋನನಿಗೆ+ ತುಂಬ ಬಲಿಗಳನ್ನ ಕೊಟ್ಟು ಹಬ್ಬ ಮಾಡ್ತಾ “ನಮ್ಮ ಶತ್ರು ಸಂಸೋನನನ್ನ ದೇವರು ನಮ್ಮ ಕೈಗೆ ಒಪ್ಪಿಸಿದ್ದಾನೆ” ಅಂತ ಹೇಳ್ತಿದ್ರು. 24  ಜನ ಸಂಸೋನನನ್ನ ನೋಡಿ ತಮ್ಮ ದೇವರನ್ನ ಹೊಗಳಿ “ನಮ್ಮ ದೇಶ ನಾಶ ಮಾಡಿ+ ನಮ್ಮ ಜನ್ರನ್ನ ಕೊಂದ+ ನಮ್ಮ ಶತ್ರುನ ನಮ್ಮ ದೇವರು ಕೈಗೆ ಒಪ್ಪಿಸಿದ್ದಾನೆ” ಅಂದ್ರು. 25  ಅವರು ಖುಷಿಯಿಂದ ಕುಣಿತಿದ್ದಾಗ “ಸಂಸೋನನ ಕರ್ಕೊಂಡು ಬನ್ನಿ, ಸ್ವಲ್ಪ ಮಜಾ ನೋಡ್ಬೇಕು” ಅಂದ್ರು. ಅದಕ್ಕೆ ಅವರು ಸಂಸೋನನನ್ನ ಜೈಲಿಂದ ಹೊರಗೆ ತಂದು ಎರಡು ಕಂಬಗಳ ಮಧ್ಯ ಅವನನ್ನ ನಿಲ್ಲಿಸಿದ್ರು. 26  ಆಮೇಲೆ ಸಂಸೋನ ತನ್ನ ಕೈಯನ್ನ ಹಿಡ್ಕೊಂಡಿದ್ದ ಹುಡುಗನಿಗೆ “ಈ ಮನೆಗೆ ಆಧಾರವಾಗಿರೋ ಕಂಬಗಳಿಗೆ ಒರಗಿ ನಿಲ್ಲಬೇಕು” ಅಂದ. 27  (ಆಗ ಆ ಮನೆ ಜನ್ರಿಂದ ತುಂಬಿಹೋಗಿತ್ತು. ಫಿಲಿಷ್ಟಿಯರ ಎಲ್ಲ ಅಧಿಪತಿಗಳು ಅಲ್ಲಿದ್ರು. ಅದ್ರ ಚಾವಣಿ ಮೇಲೆ ನಿಂತಿದ್ದ ಸುಮಾರು 3,000 ಜನ ಸಂಸೋನನನ್ನ ನೋಡಿ ನಗ್ತಿದ್ರು.) 28  ಆಗ ಸಂಸೋನ+ ಯೆಹೋವನಿಗೆ “ವಿಶ್ವದ ರಾಜ ಯೆಹೋವನೇ, ದಯವಿಟ್ಟು ನನ್ನನ್ನ ನೆನಪಿಸ್ಕೊ. ದಯವಿಟ್ಟು ಇದೊಂದು ಸಲ ನನಗೆ ಶಕ್ತಿ ಕೊಡು.+ ಓ ದೇವರೇ, ನನ್ನ ಒಂದು ಕಣ್ಣಿಗೋಸ್ಕರ+ ಆದ್ರೂ ನಾನು ಫಿಲಿಷ್ಟಿಯರ ಮೇಲೆ ಸೇಡು ತೀರಿಸೋಕೆ ಬಿಡು” ಅಂತ ಪ್ರಾರ್ಥಿಸಿದ. 29  ಆಮೇಲೆ ಸಂಸೋನ ಮನೆಗೆ ಆಧಾರವಾಗಿ ಮಧ್ಯದಲ್ಲಿದ್ದ ಎರಡು ಕಂಬಗಳನ್ನ ಹಿಡ್ಕೊಂಡ. ಬಲಗೈಯನ್ನ ಒಂದು ಕಂಬದ ಮೇಲೆ, ಎಡಗೈನ ಇನ್ನೊಂದು ಕಂಬದ ಮೇಲೆ ಇಟ್ಟ. 30  ಆಮೇಲೆ ಸಂಸೋನ “ನನ್ನ ಜೊತೆ ಈ ಫಿಲಿಷ್ಟಿಯರೂ ಸಾಯೋಕೆ ಬಿಡು” ಅಂತ ಕೂಗಿ ತನ್ನ ಎಲ್ಲ ಶಕ್ತಿ ಕೂಡಿಸಿ ಕಂಬನ ತಳ್ಳಿದ. ಆಗ ಮನೆ ಕುಸಿದು ಅದ್ರಲ್ಲಿದ್ದ ಅಧಿಪತಿಗಳ ಮೇಲೆ, ಎಲ್ಲ ಜನ್ರ ಮೇಲೆ ಬಿತ್ತು.+ ಹೀಗೆ ಸಂಸೋನ ಬದುಕಿದ್ದಾಗ ಕೊಂದದ್ದಕ್ಕಿಂತ ಸಾಯುವಾಗ ಹೆಚ್ಚು ಜನ್ರನ್ನ ಕೊಂದ.+ 31  ಆಮೇಲೆ ಅವನ ಸಹೋದರರು, ಅವನ ತಂದೆ ಮನೆಯವ್ರೆಲ್ಲ ಬಂದು ಅವನ ಶವ ತಗೊಂಡು ಹೋದ್ರು. ಚೊರ್ಗ+ ಮತ್ತು ಎಷ್ಟಾವೋಲ್‌ ಮಧ್ಯದಲ್ಲಿದ್ದ ಅವನ ಅಪ್ಪ ಮಾನೋಹನ+ ಸಮಾಧಿಯಲ್ಲಿ ಇಟ್ರು. ಅವನು 20 ವರ್ಷ ಇಸ್ರಾಯೇಲ್ಯರಿಗೆ ನ್ಯಾಯಾಧೀಶನಾಗಿ ಕೆಲಸಮಾಡಿದ.+

ಪಾದಟಿಪ್ಪಣಿ

ಅಥವಾ “ನಾಲೆಯಲ್ಲಿದ್ದ.”
ಅಥವಾ “ಪ್ರಾಣಿಯ ಸ್ನಾಯುಗಳಿಂದ.”
ಅಥವಾ “ಸೆಣಬಿನ.”
ಅಥವಾ “ನನ್ನನ್ನ ಅಸಡ್ಡೆ ಮಾಡ್ದೆ.”
ಅಕ್ಷ. “ತಾಯಿಯ ಗರ್ಭದಿಂದಾನೇ.”