ನ್ಯಾಯಸ್ಥಾಪಕರು 17:1-13

  • ಮೀಕನ ಮೂರ್ತಿಗಳು, ಅವನ ಪುರೋಹಿತ (1-13)

17  ಎಫ್ರಾಯೀಮ್‌ ಬೆಟ್ಟದ ಪ್ರದೇಶದಲ್ಲಿ+ ಮೀಕ ಅನ್ನೋ ಒಬ್ಬ ಮನುಷ್ಯ ಇದ್ದ.  ಅವನು ತನ್ನ ತಾಯಿಗೆ “ನಿನಗೆ ನೆನಪಿದ್ಯಾ, ಯಾರೋ ನಿನ್ನಿಂದ 1,100 ಬೆಳ್ಳಿ ಶೆಕೆಲ್‌ನ ಕದ್ದಿದ್ರು. ಕದ್ದವ್ರ ಮೇಲೆ ನೀನು ಶಾಪ ಹಾಕಿದ್ದೆ. ನಾನು ಕೇಳಿಸ್ಕೊಂಡೆ. ಇಲ್ಲಿ ನೋಡು! ಆ ಬೆಳ್ಳಿ ನನ್ನ ಹತ್ರನೇ ಇದೆ. ಅದನ್ನ ಕದ್ದಿದ್ದು ನಾನೇ” ಅಂದ. ಅದಕ್ಕೆ ಅವನ ತಾಯಿ “ಯೆಹೋವ ನನ್ನ ಮಗನನ್ನ ಆಶೀರ್ವಾದ ಮಾಡ್ಲಿ” ಅಂದಳು.  ಆಗ ಅವನು 1,100 ಬೆಳ್ಳಿ ಶೆಕೆಲ್‌ನ ತಾಯಿಗೆ ವಾಪಸ್‌ ಕೊಟ್ಟ. ಆದ್ರೆ ಅವನ ತಾಯಿ “ಈ ಬೆಳ್ಳಿನ ನನ್ನ ಕೈಯಾರೆ ಯೆಹೋವನಿಗೆ ಕೊಡ್ತೀನಿ. ಇದ್ರಿಂದ ನೀನು ನಿನಗಾಗಿ ಒಂದು ಕೆತ್ತಿದ ಮೂರ್ತಿ ಮತ್ತೆ ಒಂದು ಲೋಹದ ಮೂರ್ತಿ* ಮಾಡಿಸ್ಕೊಬೇಕು ಅನ್ನೋದು ನನ್ನಾಸೆ.+ ಆಗ ಈ ಬೆಳ್ಳಿ ನಿಂದಾಗುತ್ತೆ” ಅಂದಳು.  ಬೆಳ್ಳಿ ಸಿಕ್ಕ ತಕ್ಷಣ ಮೀಕನ ತಾಯಿ ಅದ್ರಿಂದ 200 ಬೆಳ್ಳಿ ಶೆಕೆಲ್‌ ತಗೊಂಡು ಮೂರ್ತಿ ಮಾಡೋರಿಗೆ ಕೊಟ್ಟಳು. ಅದ್ರಿಂದ ಒಂದು ಕೆತ್ತಿದ ಮೂರ್ತಿ, ಒಂದು ಲೋಹದ ಮೂರ್ತಿ ಮಾಡಿದ. ಅದನ್ನ ಮೀಕನ ಮನೇಲಿ ಇಟ್ರು.  ಮೀಕ ಒಂದು ಗುಡಿ ಕಟ್ಟಿಸಿದ್ದ. ಒಂದು ಏಫೋದನ್ನ,+ ಮನೆದೇವರುಗಳ ಮೂರ್ತಿಗಳನ್ನ+ ತಯಾರಿಸಿ ಅದ್ರಲ್ಲಿಟ್ಟ. ತನಗೋಸ್ಕರ ಪುರೋಹಿತನಾಗಿ ಸೇವೆ ಮಾಡೋಕೆ ತನ್ನ ಮಕ್ಕಳಲ್ಲಿ ಒಬ್ಬನನ್ನ ನೇಮಿಸಿದ.+  ಆ ಕಾಲದಲ್ಲಿ ಇಸ್ರಾಯೇಲ್ಯರಿಗೆ ರಾಜ ಇರಲಿಲ್ಲ.+ ಪ್ರತಿಯೊಬ್ರೂ ತಮಗೆ ಸರಿ ಅನ್ಸಿದ್ದನ್ನ ಮಾಡ್ತಿದ್ರು.+  ಆಗ ಯೆಹೂದದ ಬೆತ್ಲೆಹೇಮಲ್ಲಿ+ ಲೇವಿ ಕುಲದ ಒಬ್ಬ ಯುವಕ ಇದ್ದ.+ ಸ್ವಲ್ಪ ಕಾಲ ಅವನು ಯೆಹೂದದಲ್ಲಿದ್ದ.  ಆಮೇಲೆ ಯೆಹೂದದ ಬೆತ್ಲೆಹೇಮನ್ನ ಬಿಟ್ಟು ಬೇರೆ ಜಾಗ ಹುಡುಕ್ತಾ ಹೋದ. ಹೀಗೆ ಅವನು ಪ್ರಯಾಣಿಸ್ತಾ ಎಫ್ರಾಯೀಮಿನ ಬೆಟ್ಟ ಪ್ರದೇಶಕ್ಕೆ ಬಂದಾಗ ಅವನಿಗೆ ಮೀಕನ+ ಮನೆ ಸಿಕ್ತು.  ಆಗ ಮೀಕ “ನೀನು ಎಲ್ಲಿಂದ ಬರ್ತಾ ಇದ್ದೀಯಾ?” ಅಂತ ಕೇಳಿದಾಗ “ನಾನು ಯೆಹೂದದ ಬೆತ್ಲೆಹೇಮಿಂದ ಬರ್ತಿದ್ದೀನಿ. ನಾನೊಬ್ಬ ಲೇವಿ. ಇರೋಕೆ ಒಂದು ಜಾಗ ಹುಡುಕ್ತಾ ಇದ್ದೀನಿ” ಅಂದ. 10  ಅದಕ್ಕೆ ಮೀಕ ಅವನಿಗೆ “ನನ್ನ ಜೊತೆನೇ ಇದ್ದು ನನಗೆ ಸಲಹೆಗಾರನಾಗಿ,* ಪುರೋಹಿತನಾಗಿ ಸೇವೆಮಾಡು. ನಿನಗೆ ಊಟ, ಒಂದು ಜೊತೆ ಬಟ್ಟೆ, ವರ್ಷಕ್ಕೆ 10 ಬೆಳ್ಳಿ ಶೆಕೆಲ್‌ ಕೊಡ್ತೀನಿ” ಅಂದ. ಆಗ ಆ ಲೇವಿ ಒಳಗೆ ಹೋದ. 11  ಹೀಗೆ ಆ ಲೇವಿ ಮೀಕನ ಜೊತೆ ಇರೋಕೆ ಒಪ್ಕೊಂಡ. ಮೀಕ ಆ ಯುವಕನನ್ನ ತನ್ನ ಸ್ವಂತ ಮಗನ ತರ ನೋಡ್ಕೊಂಡ. 12  ಆ ಲೇವಿನ ತನಗೋಸ್ಕರ ಪುರೋಹಿತನಾಗಿ ಸೇವೆ ಮಾಡೋಕೆ ನೇಮಿಸಿದ.+ ಅವನು ಮೀಕನ ಜೊತೆನೇ ಇದ್ದ. 13  ಆಗ ಮೀಕ “ಈಗ ಯೆಹೋವ ನನಗೆ ಖಂಡಿತ ಒಳ್ಳೇದನ್ನ ಮಾಡ್ತಾನೆ. ಯಾಕಂದ್ರೆ ಒಬ್ಬ ಲೇವಿ ನನ್ನ ಪುರೋಹಿತ ಆಗಿದ್ದಾನೆ” ಅಂದ.

ಪಾದಟಿಪ್ಪಣಿ

ಅಥವಾ “ಅಚ್ಚಲ್ಲಿ ಹಾಕಿ ಮಾಡಿದ ಮೂರ್ತಿಯನ್ನ.”
ಅಕ್ಷ. “ತಂದೆಯಾಗಿ.”