ನ್ಯಾಯಸ್ಥಾಪಕರು 7:1-25

  • ಗಿದ್ಯೋನ ಮತ್ತು 300 ವೀರರು (1-8)

  • ಮಿದ್ಯಾನ್ಯರನ್ನ ಗಿದ್ಯೋನನ ಸೈನ್ಯ ಸೋಲಿಸ್ತು (9-25)

    • “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ!” (20)

    • ಮಿದ್ಯಾನ್ಯರ ಪಾಳೆಯದಲ್ಲಿ ಗಲಿಬಿಲಿ (21, 22)

7  ಆಮೇಲೆ ಯೆರುಬ್ಬಾಳ ಅಂದ್ರೆ ಗಿದ್ಯೋನ+ ಮತ್ತು ಎಲ್ಲ ಜನ ಬೆಳಿಗ್ಗೆ ಬೇಗ ಎದ್ದು ಹರೋದಿನ ಬುಗ್ಗೆ ಹತ್ರ ಪಾಳೆಯ ಹೂಡಿದ್ರು. ಅದೇ ಸಮಯದಲ್ಲಿ ಗಿದ್ಯೋನನ ಪಾಳೆಯದ ಉತ್ತರಕ್ಕಿದ್ದ ಮೋರೆ ಬೆಟ್ಟದ ಕಣಿವೆ ಬಯಲಲ್ಲಿ ಮಿದ್ಯಾನ್ಯರು ಪಾಳೆಯ ಹೂಡಿದ್ದರು.  ಯೆಹೋವ ಗಿದ್ಯೋನನಿಗೆ “ನಿನ್ನ ಜೊತೆ ತುಂಬ ಜನ್ರಿದ್ದಾರೆ. ನಾನು ಮಿದ್ಯಾನ್ಯರನ್ನ ನಿಮ್ಮ ಕೈಗೆ ಒಪ್ಪಿಸಿದ್ರೆ,+ ಇಸ್ರಾಯೇಲ್ಯರು ‘ನಮ್ಮ ಶಕ್ತಿಯಿಂದ ಗೆದ್ವಿ’+ ಅಂತ ತಮ್ಮ ಬಗ್ಗೆನೇ ಜಂಬ ಕೊಚ್ಕೊಳ್ಳಬಹುದು.  ಹಾಗಾಗಿ ದಯವಿಟ್ಟು ಜನ್ರೆಲ್ರ ಮುಂದೆ ಹೋಗಿ ಹೀಗೆ ಹೇಳು: ‘ಯಾರಿಗಾದ್ರೂ ಭಯ ಆಗ್ತಿದ್ರೆ ಮನೆಗೆ ವಾಪಸ್‌ ಹೋಗ್ಲಿ’”+ ಅಂದ. ಗಿದ್ಯೋನ ಅವ್ರನ್ನ ಪರೀಕ್ಷಿಸಿದಾಗ 22,000 ಜನ ಮನೆಗೆ ವಾಪಸ್‌ ಹೋದ್ರು. 10,000 ಜನ ಉಳ್ಕೊಂಡ್ರು.  ಮತ್ತೊಮ್ಮೆ ಯೆಹೋವ ಗಿದ್ಯೋನನಿಗೆ “ನಿನ್ನ ಹತ್ರ ಈಗ್ಲೂ ಜಾಸ್ತಿ ಜನ ಇದ್ದಾರೆ. ಅವ್ರನ್ನ ನೀರಿನ ಹತ್ರ ಕರ್ಕೊಂಡು ಹೋಗು. ನಿನಗೋಸ್ಕರ ಅವ್ರನ್ನ ಪರೀಕ್ಷಿಸ್ತೀನಿ. ನಿನ್ನ ಜೊತೆ ಕರ್ಕೊಂಡು ಹೋಗು ಅಂತ ನಾನು ಹೇಳೋರನ್ನ ಕರ್ಕೊಂಡು ಹೋಗು. ನಾನು ಬೇಡ ಅಂದವ್ರನ್ನ ಬಿಟ್ಟು ಹೋಗು” ಅಂದನು.  ಆಗ ಅವನು ಜನ್ರನ್ನ ನೀರಿನ ಹತ್ರ ಕರ್ಕೊಂಡು ಹೋದ. ಆಮೇಲೆ ಯೆಹೋವ ಗಿದ್ಯೋನನಿಗೆ “ನಾಯಿ ತರ ನಾಲಿಗೆಯಿಂದ ನೆಕ್ಕಿ ನೀರು ಕುಡ್ಯೋರನ್ನ, ಮಂಡಿಯೂರಿ ಬಗ್ಗಿ ನೀರು ಕುಡ್ಯೋರಿಂದ ಬೇರೆ ಮಾಡು” ಅಂದನು.  ನೀರನ್ನ ಕೈಯಿಂದ ತಗೊಂಡು ನೆಕ್ಕಿ ಕುಡಿದ ಜನ್ರ ಸಂಖ್ಯೆ 300. ಉಳಿದವರು ಮಂಡಿಯೂರಿ ಬಗ್ಗಿ ನೀರು ಕುಡಿದ್ರು.  ಯೆಹೋವ ಆಗ ಗಿದ್ಯೋನನಿಗೆ “ಕೈಯಿಂದ ನೀರು ತಗೊಂಡು ನೆಕ್ಕಿ ಕುಡಿದ ಈ 300 ಗಂಡಸ್ರ ಮೂಲಕ ನಿಮ್ಮನ್ನ ರಕ್ಷಿಸ್ತೀನಿ, ಮಿದ್ಯಾನ್ಯರನ್ನ ನಿನ್ನ ಕೈಗೆ ಒಪ್ಪಿಸ್ತೀನಿ.+ ಉಳಿದವ್ರೆಲ್ಲ ಮನೆಗೆ ವಾಪಸ್‌ ಹೋಗ್ಲಿ” ಅಂದನು.  ಆಗ ಗಿದ್ಯೋನ ಆ 300 ಗಂಡಸ್ರನ್ನ ಬಿಟ್ಟು ಮಿಕ್ಕಿದವ್ರನ್ನ ಮನೆಗೆ ಕಳಿಸಿದ. ಹಾಗೆ ಕಳಿಸುವಾಗ ಅವ್ರ ಹತ್ರ ಇದ್ದ ಆಹಾರವನ್ನ ಕೊಂಬುಗಳನ್ನ ತಗೊಂಡ. ಶತ್ರುಗಳಾಗಿದ್ದ ಮಿದ್ಯಾನ್ಯರು ಕೆಳಗಿದ್ದ ಕಣಿವೆ ಬಯಲಲ್ಲಿ ಪಾಳೆಯ ಹೂಡಿದ್ದರು.+  ಆ ರಾತ್ರಿ ಯೆಹೋವ ಗಿದ್ಯೋನನಿಗೆ “ಹೋಗಿ ಪಾಳೆಯದ ಮೇಲೆ ದಾಳಿ ಮಾಡು. ಯಾಕಂದ್ರೆ ಅದನ್ನ ನಿನ್ನ ಕೈಗೆ ಒಪ್ಪಿಸಿದ್ದೀನಿ.+ 10  ದಾಳಿ ಮಾಡೋಕೆ ನಿನಗೆ ಭಯ ಆದ್ರೆ ನೀನು ನಿನ್ನ ಸೇವಕ ಪುರನನ್ನ ಅವ್ರ ಪಾಳೆಯಕ್ಕೆ ಕರ್ಕೊಂಡು ಹೋಗು. 11  ಅವ್ರು ಏನು ಮಾತಾಡ್ಕೊಳ್ತಾರಂತ ಕೇಳಿಸ್ಕೊ. ಆಗ ನಿನಗೆ ಪಾಳೆಯದ ಮೇಲೆ ದಾಳಿ ಮಾಡೋಕೆ ಧೈರ್ಯ ಬರುತ್ತೆ”* ಅಂದನು. ಆಗ ಅವನು ತನ್ನ ಸೇವಕ ಪುರನ ಜೊತೆ ಶತ್ರು ಸೈನಿಕರ ಪಾಳೆಯದ ಅಂಚಿಗೆ ಹೋದ. 12  ಮಿದ್ಯಾನ್ಯರು, ಅಮಾಲೇಕ್ಯರು, ಪೂರ್ವ ದಿಕ್ಕಲ್ಲಿರೋರು+ ಮಿಡತೆ ದಂಡಿನ ತರ ಕಣಿವೆ ಬಯಲನ್ನ ಆವರಿಸ್ಕೊಂಡಿದ್ರು. ಅವ್ರ ಒಂಟೆಗಳು ಸಮುದ್ರ ತೀರದ ಮರಳಿನ ಕಣಗಳ ತರ ಲೆಕ್ಕ ಮಾಡೋಕೆ ಆಗದಷ್ಟು ಇತ್ತು.+ 13  ಗಿದ್ಯೋನ ಅಲ್ಲಿಗೆ ಬಂದಾಗ ಅವ್ರಲ್ಲಿ ಒಬ್ಬ ತನ್ನ ಕನಸಿನ ಬಗ್ಗೆ ಜೊತೆಗಾರನಿಗೆ ಹೇಳ್ತಾ “ನನಗೊಂದು ಕನಸು ಬಿತ್ತು. ಅದ್ರಲ್ಲಿ ಬಾರ್ಲಿಯ* ಒಂದು ರೊಟ್ಟಿ ಉರುಳ್ತಾ ಮಿದ್ಯಾನ್ಯರ ಪಾಳೆಯಕ್ಕೆ ಬಂತು. ಅದು ಬಂದು ಡೇರೆಗೆ ಎಷ್ಟು ಜೋರಾಗಿ ಅಪ್ಪಳಿಸಿತೆಂದ್ರೆ ಡೇರೆನೇ ಕುಸಿದುಬಿತ್ತು.+ ಇಡೀ ಡೇರೆ ತಲೆಕೆಳಗಾಗಿ ಬಿದ್ದು ನೆಲಸಮ ಆಯ್ತು” ಅಂದ. 14  ಆಗ ಅವನ ಜೊತೆಗಾರ “ಆ ರೊಟ್ಟಿ ಗಿದ್ಯೋನನ ಕತ್ತಿನೇ, ಬೇರೇನೂ ಅಲ್ಲ.+ ಗಿದ್ಯೋನ ಇಸ್ರಾಯೇಲ್ಯನಾದ ಯೋವಾಷನ ಮಗ. ಮಿದ್ಯಾನ್ಯರನ್ನ ಇಡೀ ಪಾಳೆಯವನ್ನ ದೇವರು ಅವನ ಕೈಗೆ ಒಪ್ಪಿಸಿದ್ದಾನೆ”+ ಅಂದ. 15  ಆ ಕನಸನ್ನ ಅದ್ರ ಅರ್ಥ ಕೇಳಿಸ್ಕೊಂಡ+ ತಕ್ಷಣ ಗಿದ್ಯೋನ ದೇವರಿಗೆ ಅಡ್ಡಬಿದ್ದು ನಮಸ್ಕಾರ ಮಾಡಿದ. ಆಮೇಲೆ ಅವನು ಇಸ್ರಾಯೇಲ್ಯರ ಪಾಳೆಯಕ್ಕೆ ವಾಪಸ್‌ ಹೋಗಿ “ಎದ್ದೇಳಿ, ಯಾಕಂದ್ರೆ ಮಿದ್ಯಾನ್ಯರ ಪಾಳೆಯವನ್ನ ಯೆಹೋವ ನಿಮ್ಮ ಕೈಗೆ ಒಪ್ಪಿಸಿದ್ದಾನೆ” ಅಂದ. 16  ಆಮೇಲೆ ಅವನು ಆ 300 ಗಂಡಸ್ರನ್ನ ಮೂರು ಗುಂಪು ಮಾಡಿ ಅವ್ರಿಗೆಲ್ಲ ಕೊಂಬುಗಳನ್ನ+ ದೊಡ್ಡ ಮಡಿಕೆಗಳನ್ನ ಕೊಟ್ಟ. ಆ ಮಡಿಕೆಗಳಲ್ಲಿ ಪಂಜುಗಳನ್ನ ಇಟ್ಟ. 17  “ನಾನು ಮಾಡೋದನ್ನ ಚೆನ್ನಾಗಿ ನೋಡಿ ಅದೇ ತರ ಮಾಡಿ. ನಾನು ಪಾಳೆಯದ ಅಂಚಿಗೆ ಬಂದಾಗ ನಾನು ಮಾಡಿದ ಹಾಗೇ ನೀವು ಮಾಡಬೇಕು. 18  ನಾನು, ನನ್ನ ಜೊತೆ ಇರೋರು ಯಾವಾಗ ಕೊಂಬುಗಳನ್ನ ಊದುತ್ತೀವೋ ಆಗ ಪಾಳೆಯದ ಸುತ್ತ ಇರೋ ನೀವು ಕೂಡ ಕೊಂಬುಗಳನ್ನ ಊದಿ ‘ಯೆಹೋವನಿಗೋಸ್ಕರ, ಗಿದ್ಯೋನನಿಗೋಸ್ಕರ’ ಅಂತ ಕೂಗಬೇಕು!” ಅಂದ. 19  ಮಧ್ಯರಾತ್ರಿ ಎರಡನೇ ಜಾವದ ಆರಂಭದಲ್ಲಿ* ಕಾವಲುಗಾರರು ಬದಲಾದ್ರು. ತಕ್ಷಣ ಗಿದ್ಯೋನ, ಅವನ ಜೊತೆ ಇದ್ದ 100 ಗಂಡಸ್ರು ಪಾಳೆಯದ ಅಂಚಿಗೆ ಬಂದು ಕೊಂಬುಗಳನ್ನ ಊದಿ+ ಕೈಯಲ್ಲಿದ್ದ ದೊಡ್ಡ ಮಡಿಕೆಗಳನ್ನ ಒಡೆದ್ರು.+ 20  ಒಂದೇ ಸಾರಿಗೆ ಮೂರೂ ಗುಂಪಿನವರು ಕೊಂಬುಗಳನ್ನ ಊದಿ ಮಡಿಕೆಗಳನ್ನ ಒಡೆದ್ರು. ಎಡಗೈಯಲ್ಲಿ ಪಂಜುಗಳನ್ನ, ಬಲಗೈಯಲ್ಲಿ ಕೊಂಬುಗಳನ್ನ ಹಿಡ್ಕೊಂಡು “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ!” ಅಂತ ಕೂಗಿದ್ರು. 21  ಅಷ್ಟೂ ಹೊತ್ತು ಪ್ರತಿಯೊಬ್ರೂ ಪಾಳೆಯದ ಸುತ್ತ ಅವ್ರವ್ರ ಜಾಗದಲ್ಲೇ ನಿಂತಿದ್ರು. ಆಗ ಇಡೀ ಶತ್ರುಸೈನ್ಯ ಚೀರುತ್ತಾ ಓಡೋಯ್ತು.+ 22  ಆ 300 ಜನ ಮತ್ತೆ ಕೊಂಬು ಊದ್ತಾ ಇದ್ರು. ಆಗ ಪಾಳೆಯದಲ್ಲಿದ್ದ ಶತ್ರುಸೈನ್ಯದವರು ಒಬ್ರನ್ನೊಬ್ರು ಕತ್ತಿಯಿಂದ ಕೊಲ್ಲೋ ಹಾಗೆ ಯೆಹೋವ ಮಾಡಿದನು.+ ಆ ಶತ್ರುಸೈನ್ಯ ಚೆರೇರದ ದಾರಿಯಲ್ಲಿರೋ ಬೇತ್‌-ಷಿಟ್ಟದ ತನಕ ಟಬ್ಬಾತಿನ ಹತ್ರ ಇರೋ ಆಬೇಲ್‌-ಮೆಹೋಲಾದ+ ಹೊರವಲಯದ ತನಕ ಓಡೋಯ್ತು. 23  ಆಮೇಲೆ ನಫ್ತಾಲಿ, ಅಶೇರ್‌, ಮನಸ್ಸೆ ಕುಲದಿಂದ+ ಇಸ್ರಾಯೇಲ್‌ ಗಂಡಸ್ರನ್ನ ಒಟ್ಟು ಸೇರಿಸಿದ್ರು. ಅವ್ರೆಲ್ಲ ಮಿದ್ಯಾನ್ಯರನ್ನ ಅಟ್ಟಿಸ್ಕೊಂಡು ಹೋದ್ರು. 24  ಗಿದ್ಯೋನ ಸಂದೇಶವಾಹಕರ ಮೂಲಕ ಬೆಟ್ಟ ಪ್ರದೇಶಗಳಲ್ಲಿದ್ದ ಎಫ್ರಾಯೀಮ್ಯರಿಗೆ “ನೀವು ಹೋಗಿ ಮಿದ್ಯಾನ್ಯರ ಮೇಲೆ ದಾಳಿ ಮಾಡಿ. ಅವ್ರಿಗಿಂತ ಮುಂಚೆ ಹೋಗಿ ಯೋರ್ದನ್‌ ನದಿ ದಾಟುವಂಥ ಜಾಗಗಳನ್ನ ಬೇತ್‌-ಬಾರಾದ ತನಕ ಹರಿಯೋ ಅದ್ರ ಹೊಳೆಗಳನ್ನ ವಶ ಮಾಡ್ಕೊಳ್ಳಿ” ಅಂತ ಹೇಳಿ ಕಳಿಸಿದ. ಆಗ ಎಫ್ರಾಯೀಮ್ಯರೆಲ್ಲ ಒಟ್ಟು ಸೇರಿ ಯೋರ್ದನ್‌ ನದಿ ದಾಟೋ ಜಾಗಗಳನ್ನ ಬೇತ್‌-ಬಾರಾದ ತನಕ ಹರಿಯೋ ಅದ್ರ ಹೊಳೆಗಳನ್ನ ವಶ ಮಾಡ್ಕೊಂಡ್ರು. 25  ಅವರು ಮಿದ್ಯಾನಿನ ಅಧಿಕಾರಿಗಳಾದ ಓರೇಬನನ್ನ ಜೇಬನನ್ನ ಸೆರೆಹಿಡಿದ್ರು. ಓರೇಬನ ಬಂಡೆ ಮೇಲೆ ಓರೇಬನನ್ನ ಕೊಂದ್ರು.+ ಜೇಬನ ದ್ರಾಕ್ಷಾಮದ್ಯ ತಯಾರಿಸೋ ತೊಟ್ಟಿಯಲ್ಲಿ ಜೇಬನನ್ನ ಕೊಂದ್ರು. ಅವರು ಮಿದ್ಯಾನ್ಯರನ್ನ+ ಅಟ್ಟಿಸ್ಕೊಂಡು ಹೋದ್ರು. ಓರೇಬ ಮತ್ತು ಜೇಬನ ತಲೆಗಳನ್ನ ಯೋರ್ದನ್‌ ಪ್ರದೇಶದಲ್ಲಿದ್ದ ಗಿದ್ಯೋನನ ಹತ್ರ ತಗೊಂಡು ಬಂದ್ರು.

ಪಾದಟಿಪ್ಪಣಿ

ಅಕ್ಷ. “ಕೈ ಬಲಗೊಳ್ಳುತ್ತೆ.”
ಅಥವಾ “ಜವೆಗೋದಿಯ.”
ರಾತ್ರಿ ಸುಮಾರು 10 ಗಂಟೆಯಿಂದ 2 ಗಂಟೆ ತನಕ ಸಮಯ.