ಯೋಹಾನನಿಗೆ ಕೊಟ್ಟ ಪ್ರಕಟನೆ 22:1-21

  • ಜೀವ ಕೊಡೋ ನೀರಿನ ನದಿ (1-5)

  • ಕೊನೆ ಮಾತು (6-21)

    • ‘ಬನ್ನಿ! ಜೀವ ಕೊಡೋ ನೀರನ್ನ ಉಚಿತವಾಗಿ ತಗೊಳ್ಳಿ’ (17)

    • “ಪ್ರಭು ಯೇಸುವೇ, ಬಾ” (20)

22  ಆಮೇಲೆ ಆ ದೇವದೂತ ನನಗೆ ಜೀವ ಕೊಡೋ ನೀರಿನ ನದಿಯನ್ನ ತೋರಿಸಿದ.+ ಅದು ಗಾಜಿನ ತರ ಸ್ಪಷ್ಟವಾಗಿತ್ತು. ದೇವರ ಮತ್ತು ಕುರಿಮರಿಯ ಸಿಂಹಾಸನದಿಂದ ಆ ನದಿ ಹರಿದು ಬರ್ತಿತ್ತು.+  ಪಟ್ಟಣದ ಮುಖ್ಯ ಬೀದಿಯ ಮಧ್ಯ ಆ ನದಿ ಹರಿತಿತ್ತು. ನದಿಯ ಎರಡೂ ಕಡೆ ಜೀವ ಕೊಡೋ ಮರಗಳಿದ್ವು. ಆ ಮರಗಳು ಒಂದು ವರ್ಷದಲ್ಲಿ ಎಲ್ಲ ತಿಂಗಳು 12 ಬೆಳೆ ಕೊಡ್ತಾ ಇದ್ವು. ಅದ್ರ ಎಲೆಗಳಿಗೆ ದೇಶಗಳ ಜನ್ರನ್ನ ವಾಸಿಮಾಡೋ ಶಕ್ತಿ ಇತ್ತು.+  ಅಷ್ಟೇ ಅಲ್ಲ ಇನ್ಮುಂದೆ ಅಲ್ಲಿ ಯಾವ ಶಾಪನೂ ಇರಲ್ಲ. ಆ ಪಟ್ಟಣದಲ್ಲಿ ದೇವರ ಮತ್ತು ಕುರಿಮರಿಯ ಸಿಂಹಾಸನ ಇರುತ್ತೆ.+ ದೇವರ ದಾಸರು ಆತನಿಗೆ ಪವಿತ್ರ ಸೇವೆ ಮಾಡ್ತಾರೆ.  ಅವರು ದೇವರ ಮುಖ ನೋಡ್ತಾರೆ.+ ಅವ್ರ ಹಣೆ ಮೇಲೆ ದೇವರ ಹೆಸ್ರು ಇರುತ್ತೆ.+  ಇನ್ಮುಂದೆ ಅಲ್ಲಿ ರಾತ್ರಿನೇ ಇರಲ್ಲ.+ ಅವ್ರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗಲ್ಲ. ಯಾಕಂದ್ರೆ ಯೆಹೋವ* ದೇವರು ಅವ್ರಿಗೆ ಬೆಳಕು ಕೊಡ್ತಾನೆ.+ ಅವರು ರಾಜರಾಗಿ ಯಾವಾಗ್ಲೂ ಆಳ್ತಾರೆ.+  ಆ ದೇವದೂತ ನನಗೆ “ಜನ್ರು ಇದನ್ನ ನಂಬಬಹುದು ಯಾಕಂದ್ರೆ ಈ ಮಾತುಗಳು ಸತ್ಯ.+ ಪ್ರವಾದಿಗಳ ಮೂಲಕ ಮಾತಾಡೋ ಯೆಹೋವ*+ ದೇವರು ಬೇಗ ನಡ್ಯೋ ವಿಷ್ಯಗಳನ್ನ ತನ್ನ ದಾಸರಿಗೆ ತೋರಿಸೋಕೆ ತನ್ನ ದೂತನನ್ನ ಕಳಿಸ್ಕೊಟ್ಟ.  ನೋಡು, ನಾನು ಬೇಗ ಬರ್ತಾ ಇದ್ದೀನಿ.+ ಈ ಸುರುಳಿಯಲ್ಲಿ ಇರೋ ಭವಿಷ್ಯವಾಣಿಗಳನ್ನ ಪಾಲಿಸೋ ಜನ್ರೆಲ್ಲ ಖುಷಿಯಾಗಿ ಇರ್ತಾರೆ”+ ಅಂದ.  ಯೋಹಾನ ಅನ್ನೋ ನಾನೇ ಈ ವಿಷ್ಯಗಳನ್ನ ಕೇಳಿಸ್ಕೊಂಡೆ, ಇದನ್ನೆಲ್ಲ ನೋಡ್ದೆ. ನಾನು ಕೇಳಿಸ್ಕೊಂಡ ಮೇಲೆ, ನೋಡಿದ ಮೇಲೆ ಇದನ್ನೆಲ್ಲ ನನಗೆ ತೋರಿಸ್ಕೊಟ್ಟ ಆ ದೇವದೂತನನ್ನ ಆರಾಧಿಸೋಕೆ ಅವನ ಕಾಲಿಗೆ ಬಿದ್ದೆ.  ಆಗ ಅವನು ನನಗೆ “ಬೇಡ! ಹಾಗೆ ಮಾಡಬೇಡ! ದೇವರನ್ನ ಆರಾಧಿಸು. ನಾನೊಬ್ಬ ಸೇವಕ ಅಷ್ಟೆ! ನಾನು ನಿನ್ನ ತರ, ಭವಿಷ್ಯ ಹೇಳೋ ನಿನ್ನ ಸಹೋದರರ ತರ, ಈ ಸುರುಳಿಯಲ್ಲಿ ಹೇಳಿರೋ ಪ್ರಕಾರ ನಡಿತಾ ಇರುವವ್ರ ತರ ಇದ್ದೀನಿ”+ ಅಂದ. 10  ಆಮೇಲೆ ಆ ದೇವದೂತ ನನಗೆ “ಈ ಸುರುಳಿಯಲ್ಲಿ ಇರೋ ಭವಿಷ್ಯವಾಣಿಗಳನ್ನ ರಹಸ್ಯವಾಗಿ ಇಡಬೇಡ. ಯಾಕಂದ್ರೆ ಇದೆಲ್ಲ ನಿಜ ಆಗೋ ಸಮಯ ಹತ್ರ ಇದೆ. 11  ಅನ್ಯಾಯ ಮಾಡುವವರು ಅನ್ಯಾಯ ಮಾಡ್ತಾ ಇರಲಿ. ಕೆಟ್ಟ ನಡತೆ ಇರುವವರು ಅದನ್ನೇ ಮಾಡ್ತಾ ಇರಲಿ. ಆದ್ರೆ ನೀತಿವಂತರು ಏನು ಮಾಡ್ತಿದ್ದಾರೋ ಅದನ್ನೇ ಮಾಡ್ತಾ ಇರಲಿ. ಪವಿತ್ರ ಜನ್ರು ಪವಿತ್ರವಾದ ವಿಷ್ಯಗಳನ್ನೇ ಮಾಡ್ತಾ ಇರಲಿ. 12  ‘ನೋಡು, ನಾನು ಬೇಗ ಬರ್ತಾ ಇದ್ದೀನಿ. ಎಲ್ರಿಗೂ ಅವ್ರವ್ರ ಕೆಲಸಕ್ಕೆ ತಕ್ಕ ಹಾಗೆ ಪ್ರತಿಫಲ ಕೊಡ್ತೀನಿ.+ 13  ನಾನೇ ಆಲ್ಫ, ನಾನೇ ಒಮೇಗ,*+ ನಾನೇ ಮೊದಲನೆಯವನು, ನಾನೇ ಕೊನೆಯವನು, ನಾನೇ ಆದಿ, ನಾನೇ ಅಂತ್ಯ. 14  ತಮ್ಮ ಬಟ್ಟೆಯನ್ನ ಒಗೆದು ಶುದ್ಧ ಮಾಡ್ಕೊಳ್ಳುವವರು+ ಖುಷಿಯಾಗಿ ಇರ್ತಾರೆ. ಅವ್ರಿಗೆ ಜೀವ ಕೊಡೋ ಮರದ ಹಣ್ಣನ್ನ ತಿನ್ನೋ ಅಧಿಕಾರ ಸಿಗುತ್ತೆ.+ ಬಾಗಿಲಿಂದ ಪಟ್ಟಣದ ಒಳಗೆ ಹೋಗೋಕೆ ಅವ್ರಿಗೆ ಆಗುತ್ತೆ.+ 15  ಆದ್ರೆ ನಾಯಿಗಳ ತರ ಇರೋ ಜನ್ರು,* ಮಾಟಮಂತ್ರ ಮಾಡುವವರು, ಲೈಂಗಿಕ ಅನೈತಿಕತೆ* ಮಾಡುವವರು, ಕೊಲೆ ಮಾಡುವವರು, ಮೂರ್ತಿಪೂಜೆ ಮಾಡುವವರು, ಸುಳ್ಳು ಹೇಳುವವರು, ಸುಳ್ಳು ಹೇಳೋದನ್ನ ಇಷ್ಟಪಡುವವರು ಇವ್ರೆಲ್ಲ ಪಟ್ಟಣದ ಹೊರಗೆ ಇರಬೇಕು.’+ 16  ‘ಯೇಸು ಅನ್ನೋ ನಾನು ಈ ವಿಷ್ಯಗಳಿಂದ ಸಭೆಗೆ ಪ್ರಯೋಜನ ಆಗ್ಲಿ ಅಂತ ನನ್ನ ದೇವದೂತನನ್ನ ನಿನ್ನ ಹತ್ರ ಕಳಿಸಿದೆ. ನಾನು ದಾವೀದನ ಬೇರು, ದಾವೀದನ ವಂಶ,+ ಹೊಳೆಯೋ ಬೆಳಗಿನ ನಕ್ಷತ್ರ.’”+ 17  ಅಷ್ಟೇ ಅಲ್ಲ ಪವಿತ್ರಶಕ್ತಿ ಮತ್ತು ಮದುಮಗಳು+ “ಬನ್ನಿ!” ಅಂತ ಹೇಳ್ತಾ ಇದ್ದಾರೆ. ಅದನ್ನ ಕೇಳಿಸ್ಕೊಳ್ಳುವವರು “ಬನ್ನಿ!” ಅಂತ ಹೇಳಲಿ. ಬಾಯಾರಿಕೆ ಆದವ್ರೆಲ್ಲ ಬರಲಿ!+ ಇಷ್ಟ ಇರೋ ಎಲ್ರೂ ಜೀವ ಕೊಡೋ ನೀರನ್ನ ಉಚಿತವಾಗಿ ತಗೊಳ್ಳಲಿ.+ 18  ಈ ಸುರುಳಿಯಲ್ಲಿ ಇರೋ ಭವಿಷ್ಯವಾಣಿಗಳನ್ನ ಕೇಳಿಸ್ಕೊಳ್ಳುವವ್ರಿಗೆ ನಾನು ಹೇಳೋದು ಏನಂದ್ರೆ, ಯಾರಾದ್ರೂ ಈ ವಿಷ್ಯಗಳಿಗೆ ಏನಾದ್ರೂ ಸೇರಿಸಿದ್ರೆ+ ಈ ಸುರುಳಿಯಲ್ಲಿ ಬರೆದಿರೋ ಕಷ್ಟಗಳು ಅವನ ಮೇಲೆ ಬರೋ ತರ ದೇವರು ಮಾಡ್ತಾನೆ.+ 19  ಯಾರಾದ್ರೂ ಈ ಸುರುಳಿಯಲ್ಲಿ ಇರೋ ಮಾತುಗಳಿಂದ ಏನಾದ್ರೂ ತೆಗೆದುಬಿಟ್ರೆ ಈ ಸುರುಳಿಯಲ್ಲಿ ಬರೆದಿರೋ ಒಳ್ಳೇ ವಿಷ್ಯಗಳು ಅವನಿಗೆ ಸಿಗದೇ ಇರೋ ತರ ಮಾಡ್ತಾನೆ. ಅಂದ್ರೆ ಜೀವ ಕೊಡೋ ಮರದ ಹಣ್ಣನ್ನ ತಿನ್ನೋಕೆ ಅವನನ್ನ ಬಿಡಲ್ಲ.+ ಪವಿತ್ರ ಪಟ್ಟಣದ+ ಒಳಗೆ ಹೋಗೋಕೆ ಅವನನ್ನ ದೇವರು ಬಿಡಲ್ಲ. 20  ಈ ವಿಷ್ಯಗಳನ್ನ ಹೇಳ್ತಾ ಇರುವವನು ‘ಹೌದು. ನಾನು ಬೇಗ ಬರ್ತಾ ಇದ್ದೀನಿ’ ಅಂತ ಹೇಳ್ತಾನೆ.”+ “ಆಮೆನ್‌! ಪ್ರಭು ಯೇಸುವೇ, ಬಾ!” 21  ಪ್ರಭು ಯೇಸು ಕ್ರಿಸ್ತ ಪವಿತ್ರ ಜನ್ರಾದ ನಿಮಗೆ ಅಪಾರ ಕೃಪೆ ತೋರಿಸ್ಲಿ ಅಂತ ನಾನು ದೇವರ ಹತ್ರ ಪ್ರಾರ್ಥನೆ ಮಾಡ್ತೀನಿ.

ಪಾದಟಿಪ್ಪಣಿ

ಇವು ಗ್ರೀಕ್‌ ಅಕ್ಷರಮಾಲೆಯ ಮೊದಲ ಮತ್ತು ಕೊನೇ ಅಕ್ಷರಗಳು.
ಅಂದ್ರೆ ದೇವರ ದೃಷ್ಟಿಯಲ್ಲಿ ಅಸಹ್ಯವಾದ ಕೆಲಸಗಳನ್ನ ಮಾಡುವವರು.