ಪ್ರಲಾಪ 3:1-66

  • ಯೆರೆಮೀಯನ ಭಾವನೆಗಳು ಮತ್ತು ನಿರೀಕ್ಷೆ

    • “ನಿನಗಾಗಿ ತಾಳ್ಮೆಯಿಂದ ಕಾಯ್ತೀನಿ” (21)

    • ದಿನದಿನ ದೇವರ ಕರುಣೆ ಹೊಸದಾಗುತ್ತೆ (22, 23)

    • ದೇವರ ಮೇಲೆ ಭರವಸೆ ಇಡುವವ್ರಿಗೆ ಆತನು ಒಳ್ಳೇದೇ ಮಾಡ್ತಾನೆ (25)

    • ಯುವಕರು ನೊಗ ಹೊರೋದು ಒಳ್ಳೇದು (27)

    • ಪ್ರಾರ್ಥನೆ ತನಗೆ ಮುಟ್ಟಬಾರದು ಅಂತ ದೇವರು ಮೋಡ ಅಡ್ಡ ಇಟ್ಟನು (43, 44)

א [ಆಲೆಫ್‌] 3  ದೇವರು ಕೋಪಗೊಂಡು ಶಿಕ್ಷೆ ಕೊಟ್ಟ ಕಾರಣ* ಜನ ಕಷ್ಟ ಅನುಭವಿಸೋದನ್ನ ನೋಡಿದ್ದೀನಿ.   ಆತನು ನನ್ನನ್ನ ಹೊರಗೆ ಅಟ್ಟಿಬಿಟ್ಟಿದ್ದಾನೆ. ಬೆಳಕಲ್ಲಲ್ಲ, ಕತ್ತಲಲ್ಲಿ ನಡಿಯೋ ತರ ಮಾಡ್ತಿದ್ದಾನೆ.+   ಎಷ್ಟರ ಮಟ್ಟಿಗಂದ್ರೆ ಆತನು ಇಡೀ ದಿನ ಪದೇಪದೇ ನನ್ನ ಮೇಲೆ ಕೈ ಮಾಡ್ತಿದ್ದಾನೆ.*+ ב [ಬೆತ್‌]   ಆತನು ನನ್ನ ದೇಹವನ್ನ ಬಲಹೀನಗೊಳಿಸಿ, ನನ್ನ ಚರ್ಮ ಸವೆದುಹೋಗೋ ತರ ಮಾಡಿದ್ದಾನೆ,ನನ್ನ ಮೂಳೆಗಳನ್ನ ಮುರಿದಿದ್ದಾನೆ.   ಆತನು ನನಗೆ ಮುತ್ತಿಗೆ ಹಾಕಿದ್ದಾನೆ, ಕಡು ವಿಷಾನೂ+ ಸಂಕಷ್ಟಾನೂ ನನ್ನನ್ನ ಸುತ್ತುವರಿಯೋ ತರ ಮಾಡಿದ್ದಾನೆ.   ತುಂಬ ಕಾಲದ ಹಿಂದೆ ಸತ್ತು ಹೋದ ಜನ್ರ ಹಾಗೆ ನಾನು ಕತ್ತಲೆ ಸ್ಥಳಗಳಲ್ಲಿ ಕೂರೋ ತರ ಆತನು ಬಲವಂತ ಮಾಡಿದ್ದಾನೆ. ג [ಗಿಮೆಲ್‌]   ನಾನು ತಪ್ಪಿಸ್ಕೊಂಡು ಹೋಗೋಕೆ ಆಗದ ಹಾಗೆ ಆತನು ನನ್ನ ಸುತ್ತಲೂ ಗೋಡೆ ಕಟ್ಟಿದ್ದಾನೆ,ತಾಮ್ರದ ಭಾರವಾದ ಬೇಡಿಗಳಿಂದ ನನ್ನನ್ನ ಕಟ್ಟಿ ಹಾಕಿದ್ದಾನೆ.+   ಹತಾಶೆಯ ಸ್ಥಿತಿಯಲ್ಲಿ ಸಹಾಯಕ್ಕಾಗಿ ನಾನು ಆತನಿಗೆ ಮೊರೆಯಿಟ್ಟಾಗ ಆತನು ನನ್ನ ಪ್ರಾರ್ಥನೆ ತಿರಸ್ಕರಿಸ್ತಾನೆ.*+   ಕತ್ತರಿಸಿದ ಕಲ್ಲುಗಳಿಂದ ನನ್ನ ದಾರಿಗಳನ್ನ ಮುಚ್ಚಿದ್ದಾನೆ,ನಾನು ಹೋಗೋ ರಸ್ತೆಗಳನ್ನ ಅಂಕುಡೊಂಕು ಮಾಡಿದ್ದಾನೆ.+ ד [ಡಾಲತ್‌] 10  ಆತನು ಕರಡಿ ತರ ಹೊಂಚುಹಾಕಿ, ಸಿಂಹದ ತರ ಅವಿತ್ಕೊಂಡು ನನ್ನನ್ನ ಹಿಡಿಯೋಕೆ ಕಾಯ್ತಿದ್ದಾನೆ.+ 11  ದಾರಿಯಿಂದ ಆತನು ನನ್ನನ್ನ ಪಕ್ಕಕ್ಕೆ ಎಳ್ಕೊಂಡು ಹೋಗಿ ತುಂಡುತುಂಡು* ಮಾಡಿಶೋಚನೀಯ ಸ್ಥಿತಿಗೆ ತಂದಿದ್ದಾನೆ.+ 12  ಆತನು ಬಿಲ್ಲು ಬಗ್ಗಿಸಿ ತನ್ನ ಬಾಣಕ್ಕೆ ನನ್ನನ್ನ ಗುರಿಯಾಗಿ ಇಟ್ಕೊಂಡಿದ್ದಾನೆ. ה [ಹೆ] 13  ಆತನು ತನ್ನ ಬತ್ತಳಿಕೆಯಲ್ಲಿರೋ ಬಾಣಗಳಿಂದ ನನ್ನ ಮೂತ್ರಪಿಂಡಗಳನ್ನ ತಿವಿದಿದ್ದಾನೆ. 14  ನಾನು ಎಲ್ಲ ಜನಾಂಗಗಳ ನಗೆಗೆ ಈಡಾಗಿದ್ದೀನಿ, ಅವರು ನನ್ನ ಮೇಲೆ ಹಾಡು ಕಟ್ಟಿ ಹಾಡ್ತಾ ಇಡೀ ದಿನ ಗೇಲಿ ಮಾಡ್ತಾರೆ. 15  ನಾನು ಯಾವಾಗ್ಲೂ ಕಹಿ ಆಹಾರವನ್ನ ತಿನ್ನೋ ತರ ಮತ್ತು ಮಾಚಿ ಪತ್ರೆಯನ್ನ* ಕುಡಿಯೋ ತರ ಮಾಡಿದ್ದಾನೆ.+ ו [ವಾವ್‌] 16  ಆತನು ಜಲ್ಲಿಕಲ್ಲಿಂದ ನನ್ನ ಹಲ್ಲುಗಳನ್ನ ಮುರಿದುಬಿಟ್ಟಿದ್ದಾನೆ,ನಾನು ಬೂದಿಯಲ್ಲಿ ಮುದುಡಿ ಕೂರೋ ತರ ಮಾಡಿದ್ದಾನೆ.+ 17  ನೀನು ನನ್ನಿಂದ ಶಾಂತಿ ನೆಮ್ಮದಿ ಕಿತ್ಕೊಂಡಿದ್ದೀಯ, ಸಂತೋಷ* ಅನ್ನೋದನ್ನೇ ಮರೆತುಬಿಟ್ಟಿದ್ದೀನಿ. 18  ಹಾಗಾಗಿ “ನನ್ನ ವೈಭವ ಮಾಸಿಹೋಗಿದೆ, ಯೆಹೋವನ ಮೇಲೆ ನಾನಿಟ್ಟ ನಿರೀಕ್ಷೆ ಸಹ ಅಳಿದುಹೋಗಿದೆ” ಅಂತ ನಾನು ಹೇಳ್ತೀನಿ. ז [ಜಯಿನ್‌] 19  ನಾನು ಪಡ್ತಿರೋ ಕಷ್ಟ, ಮನೆಯಿಲ್ಲದೆ ನಾನಿರೋ ಸ್ಥಿತಿನ ನೆನಪಿಸ್ಕೊ,+ ನಾನು ಮಾಚಿಪತ್ರೆ ಮತ್ತು ಕಡು ವಿಷವನ್ನ ಕುಡಿತಿದ್ದೀನಿ+ ಅಂತ ಜ್ಞಾಪಿಸ್ಕೊ. 20  ನೀನು ಇವುಗಳನ್ನೆಲ್ಲ ಖಂಡಿತ ನೆನಪಿಸ್ಕೊಳ್ತೀಯ ಮತ್ತು ನನ್ನ ಕಡೆ ಬಗ್ಗಿ ನನಗೆ ಸಹಾಯ ಮಾಡ್ತೀಯ.+ 21  ನಾನು ಇದನ್ನ ಮನಸ್ಸಲ್ಲಿಡ್ತೀನಿ. ಹಾಗಾಗಿ ನಿನಗಾಗಿ ತಾಳ್ಮೆಯಿಂದ ಕಾಯ್ತೀನಿ.*+ ח [ಹೆತ್‌] 22  ಯೆಹೋವ ಶಾಶ್ವತ ಪ್ರೀತಿ ತೋರಿಸಿದ್ರಿಂದಾನೇ ನಾವಿನ್ನೂ ನಾಶವಾಗದೆ ಉಳಿದಿದ್ದೀವಿ,+ಆತನ ಕರುಣೆಗೆ ಕೊನೆನೇ ಇಲ್ಲ.+ 23  ಪ್ರತಿದಿನ ಬೆಳಿಗ್ಗೆ ಆತನ ಕರುಣೆ ಹೊಸದಾಗುತ್ತೆ,+ ದೇವರೇ, ನೀನು ಯಾವಾಗ್ಲೂ ನಂಬಿಗಸ್ತ.+ 24  “ಯೆಹೋವ ನನ್ನ ಪಾಲು.+ ಹಾಗಾಗಿ ನಾನು ಆತನಿಗಾಗಿ ತಾಳ್ಮೆಯಿಂದ ಕಾಯ್ತೀನಿ”+ ಅಂತ ಹೇಳಿದೆ. ט [ಟೆತ್‌] 25  ಯೆಹೋವನ ಮೇಲೆ ಭರವಸೆ ಇಡುವವನಿಗೆ,+ ಆತನನ್ನ ಹುಡುಕ್ತಾ ಇರುವವನಿಗೆ ಆತನು ಒಳ್ಳೇದನ್ನ ಮಾಡ್ತಾನೆ.+ 26  ಯೆಹೋವ ಕೊಡೋ ರಕ್ಷಣೆಗೆ ಮನುಷ್ಯ ಮೌನವಾಗಿದ್ದು*+ ಕಾಯೋದೇ ಒಳ್ಳೇದು.+ 27  ಯೌವನದಲ್ಲಿ ಕಷ್ಟ ಪಡೋದು ಮನುಷ್ಯನಿಗೆ ಒಳ್ಳೇದು.+ י [ಯೋದ್‌] 28  ದೇವರು ಆ ಭಾರವನ್ನ ಅವನ ಮೇಲೆ ಇಟ್ಟಾಗ ಅವನು ಮೌನವಾಗಿದ್ದು ಒಬ್ಬನೇ ಕೂತ್ಕೊಳ್ಳಲಿ.+ 29  ಅವನು ತನ್ನ ಬಾಯನ್ನ ನೆಲದ ಮಣ್ಣಿಗೆ ತಾಗಿಸ್ಲಿ,+ ಅವನಿಗೆ ರಕ್ಷಣೆ ಆಗಬಹುದು.+ 30  ಹೊಡೆಯುವವನಿಗೆ ಅವನು ತನ್ನ ಕೆನ್ನೆ ತೋರಿಸ್ಲಿ, ಅವನು ಅವಮಾನವನ್ನ ಪೂರ್ತಿ ಸಹಿಸ್ಕೊಳ್ಳಲಿ. כ [ಕಾಫ್‌] 31  ಯೆಹೋವ ನಮ್ಮನ್ನ ನಿರಂತರಕ್ಕೂ ತಳ್ಳಿಬಿಡಲ್ಲ.+ 32  ಆತನು ನಮ್ಮನ್ನ ದುಃಖಪಡಿಸಿದ್ದಾನೆ ನಿಜ. ಆದ್ರೂ ಆತನು ಶಾಶ್ವತ ಪ್ರೀತಿಯನ್ನ ಹೇರಳವಾಗಿ ತೋರಿಸೋ ದೇವರು. ಹಾಗಾಗಿ ನಮಗೆ ಕರುಣೆ ಸಹ ತೋರಿಸ್ತಾನೆ.+ 33  ಮನುಷ್ಯರಿಗೆ ದುಃಖನೋವು ಕೊಡೋಕೆ ಆತನಿಗೆ ಹೃದಯದಲ್ಲಿ ಸ್ವಲ್ಪನೂ ಇಷ್ಟ ಇಲ್ಲ.+ ל [ಲಾಮೆದ್‌] 34  ಭೂಮಿಯ ಎಲ್ಲ ಕೈದಿಗಳನ್ನ ಕಾಲ ಕೆಳಗೆ ಹಾಕಿ ಜಜ್ಜೋದು,+ 35  ಸರ್ವೋನ್ನತ ದೇವರ ಮುಂದೆ ಒಬ್ಬನಿಗೆ ನ್ಯಾಯ ಸಿಗದೆ ಇರೋ ತರ ಮಾಡೋದು,+ 36  ಮೊಕದ್ದಮೆಯಲ್ಲಿ ಒಬ್ಬನಿಗೆ ಮೋಸ ಮಾಡೋದುಇಂಥದ್ದನ್ನ ಯೆಹೋವ ಸಹಿಸಲ್ಲ. מ [ಮೆಮ್‌] 37  ಯೆಹೋವ ಅಪ್ಪಣೆ ಕೊಡದೇ ಇದ್ರೆ, ಯಾರಾದ್ರೂ ಒಂದು ವಿಷ್ಯ ಹೇಳಿ ಅದನ್ನ ಮಾಡೋಕೆ ಆಗುತ್ತಾ? 38  ಸರ್ವೋನ್ನತ ದೇವರ ಬಾಯಿಂದಒಳ್ಳೇದ್ರ ಜೊತೆಗೆ ಕೆಟ್ಟದ್ದೂ ಬರಲ್ಲ. 39  ಒಬ್ಬ ತನ್ನ ಪಾಪದ ಕೆಟ್ಟ ಪರಿಣಾಮಗಳನ್ನ ಅನುಭವಿಸ್ತಿರುವಾಗ ಅದ್ರ ಬಗ್ಗೆ ಅವನು ಯಾಕೆ ದೂರಬೇಕು?+ נ [ನೂನ್‌] 40  ನಾವು ನಮ್ಮ ನಡತೆ ಪರೀಕ್ಷಿಸೋಣ, ಸೂಕ್ಷ್ಮವಾಗಿ ಪರಿಶೀಲಿಸೋಣ+ ಮತ್ತು ಯೆಹೋವನ ಹತ್ರ ವಾಪಸ್‌ ಹೋಗೋಣ.+ 41  ಸ್ವರ್ಗದಲ್ಲಿರೋ ದೇವರಿಗೆ ನಾವು ಯಥಾರ್ಥ ಹೃದಯದಿಂದ ಬೇಡ್ಕೊಳ್ಳೋಣ, ನಮ್ಮ ಕೈಗಳನ್ನ ಮೇಲಕ್ಕೆತ್ತಿ,+ 42  “ನಾವು ಪಾಪ ಮಾಡಿದ್ದೀವಿ, ದಂಗೆ ಎದ್ದಿದ್ದೀವಿ,+ ನೀನು ನಮ್ಮನ್ನ ಕ್ಷಮಿಸಲಿಲ್ಲ.+ ס [ಸಾಮೆಕ್‌] 43  ನೀನು ಕೋಪ ಮಾಡ್ಕೊಂಡು ನಾವು ನಿನ್ನ ಹತ್ರ ಬರದ ಹಾಗೆ ತಡೆದಿದ್ದೀಯ,+ನೀನು ನಮ್ಮನ್ನ ಹಿಂದಟ್ಟಿ ಬಂದು ಕನಿಕರ ತೋರಿಸದೆ ಕೊಂದು ಹಾಕಿದ್ದೀಯ.+ 44  ನಮ್ಮ ಪ್ರಾರ್ಥನೆ ನಿನಗೆ ಮುಟ್ಟಬಾರದು ಅಂತ ಮೋಡ ಅಡ್ಡ ಇಟ್ಟಿದ್ದೀಯ.+ 45  ನೀನು ನಮ್ಮನ್ನ ಜನಾಂಗಗಳ ಮಧ್ಯ ಹೊಲಸನ್ನಾಗಿ, ಕಸವನ್ನಾಗಿ ಮಾಡಿದ್ದೀಯ” ಅಂತ ಹೇಳೋಣ. פ [ಪೇ] 46  ಶತ್ರುಗಳೆಲ್ಲ ನಮ್ಮನ್ನ ಅಪಹಾಸ್ಯ ಮಾಡ್ತಾರೆ.*+ 47  ನಾವು ಯಾವಾಗ್ಲೂ ಭಯದಲ್ಲೇ ಜೀವಿಸ್ತಿದ್ದೀವಿ, ಗುಂಡಿಯಲ್ಲಿ ಬಿದ್ದಿದ್ದೀವಿ.+ ನಾವು ದಿಕ್ಕಿಲ್ಲದ ಜನ್ರಾಗಿದ್ದೀವಿ, ನಾಶಕ್ಕೆ ತುತ್ತಾಗಿದ್ದೀವಿ.+ 48  ನನ್ನ ಮಗಳ ಅಂದ್ರೆ ನನ್ನ ಜನ್ರ ನಾಶನದಿಂದಾಗಿ ನನ್ನ ಕಣ್ಣುಗಳಿಂದ ಕಣ್ಣೀರ ಧಾರೆ ಹರಿದು ಬರ್ತಿದೆ.+ ע [ಅಯಿನ್‌] 49  ಸ್ವಲ್ಪನೂ ನಿಲ್ಲಿಸದೆ ಒಂದೇ ಸಮ ನಾನು ಅಳ್ತಿದ್ದೀನಿ,+ 50  ಯೆಹೋವ ಸ್ವರ್ಗದಿಂದ ಕೆಳಗೆ ನೋಡಿ ತನ್ನ ಜನ್ರ ಕಡೆ ಗಮನ ಕೊಡೋ ತನಕ ನಾನು ಅಳ್ತಿರ್ತಿನಿ.+ 51  ನನ್ನ ಪಟ್ಟಣದ ಎಲ್ಲ ಪುತ್ರಿಯರಿಗಾದ ಗತಿ ನೋಡಿ ನನಗೆ ತುಂಬ ದುಃಖವಾಗಿದೆ.+ צ [ಸಾದೆ] 52  ನನ್ನ ಶತ್ರುಗಳು ವಿನಾ ಕಾರಣ ನನ್ನನ್ನ ಪಕ್ಷಿ ತರ ಬೇಟೆ ಆಡಿದ್ದಾರೆ. 53  ಅವರು ನನ್ನನ್ನ ಗುಂಡಿಗೆ ತಳ್ಳಿ ನನ್ನ ಉಸಿರನ್ನ ನಿಲ್ಲಿಸಿ ಬಿಟ್ಟಿದ್ದಾರೆ, ನನ್ನ ಮೇಲೆ ಕಲ್ಲುಗಳನ್ನ ಎಸಿತಿದ್ರು. 54  ಪ್ರವಾಹ ನನ್ನನ್ನ ಮುಳುಗಿಸಿತು “ನನ್ನ ಕಥೆ ಮುಗಿತು” ಅಂತ ನಾನಾಗ ಹೇಳಿದೆ. ק [ಕೊಫ್‌] 55  ಯೆಹೋವನೇ, ಆಳವಾದ ಗುಂಡಿಯ ತಳದಿಂದ ನಾನು ನಿನ್ನ ಹೆಸ್ರನ್ನ ಕೂಗಿ ಕರೆದೆ.+ 56  ನನ್ನ ಕೂಗು ಕೇಳು, ಸಹಾಯಕ್ಕಾಗಿ, ಉಪಶಮನಕ್ಕಾಗಿ ನಾನು ಕೂಗಿಕೊಳ್ಳುವಾಗ ಕಿವಿ ಮುಚ್ಕೊಬೇಡ. 57  ನಾನು ನಿನ್ನನ್ನ ಕರೆದ ದಿನ ನೀನು ನನ್ನ ಹತ್ರ ಬಂದೆ. “ಭಯಪಡಬೇಡ” ಅಂತ ಹೇಳಿದೆ. ר [ರೆಶ್‌] 58  ಯೆಹೋವನೇ, ನ್ಯಾಯಾಲಯದಲ್ಲಿ ನೀನು ನನ್ನ ಪರ ವಾದಿಸಿದ್ದೀಯ, ನನ್ನ ಜೀವವನ್ನ ಬಿಡಿಸಿದ್ದೀಯ.+ 59  ಯೆಹೋವನೇ, ನನಗಾದ ಅನ್ಯಾಯವನ್ನ ನೀನು ನೋಡಿದ್ದೀಯಲ್ಲ, ದಯವಿಟ್ಟು ನನಗೆ ನ್ಯಾಯ ಕೊಡಿಸು.+ 60  ಅವರು ನನಗೆ ಹೇಗೆಲ್ಲ ಸೇಡು ತೀರಿಸಿದ್ರು ಅಂತ, ನನ್ನ ವಿರುದ್ಧ ಹೇಗೆಲ್ಲ ಸಂಚು ಮಾಡಿದ್ರು ಅಂತ ನೀನು ನೋಡಿದ್ದೀಯ. ש [ಸಿನ್‌] ಅಥವಾ [ಶಿನ್‌] 61  ಯೆಹೋವನೇ, ಅವ್ರ ಹಂಗಿಸೋ ಮಾತುಗಳನ್ನ ನೀನು ಕೇಳಿದ್ದೀಯ, ಅವರು ನನ್ನ ವಿರುದ್ಧ ಮಾಡಿದ ಪಿತೂರಿಗಳನ್ನೆಲ್ಲ ನೋಡಿದ್ದೀಯ.+ 62  ದಿನವಿಡೀ ಶತ್ರುಗಳು ನನ್ನ ವಿರುದ್ಧ ಮಾತಾಡೋದನ್ನ ಪಿಸುಗುಟ್ಟೋದನ್ನ ನೀನು ಕೇಳಿದ್ದೀಯ. 63  ಅವ್ರನ್ನ ನೋಡು, ಕೂತ್ರೂ ನಿಂತ್ರೂ ಹಾಡುಗಳನ್ನ ಹಾಡಿ ನನ್ನನ್ನ ಗೇಲಿ ಮಾಡ್ತಾರೆ! ת [ಟಾವ್‌] 64  ಯೆಹೋವನೇ, ನೀನು ಅವ್ರ ಕೆಲಸಗಳಿಗೆ ತಕ್ಕ ಪ್ರತಿಫಲ ಕೊಡ್ತೀಯ. 65  ನೀನು ಅವ್ರಿಗೆ ಶಾಪಕೊಟ್ಟು ಅವ್ರನ್ನ ಕಲ್ಲೆದೆಯ ಜನ್ರನ್ನಾಗಿ ಮಾಡ್ತೀಯ. 66  ಯೆಹೋವನೇ, ನೀನು ಕೋಪದಿಂದ ಅವ್ರನ್ನ ಅಟ್ಟಿಸ್ಕೊಂಡು ಹೋಗಿ ಭೂಮಿ ಮೇಲಿಂದ ಅವ್ರನ್ನ ನಾಶ ಮಾಡಿಬಿಡ್ತೀಯ.

ಪಾದಟಿಪ್ಪಣಿ

ಅಕ್ಷ. “ರೋಷ ಅನ್ನೋ ಕೋಲಿನಿಂದಾಗಿ.”
ಅಕ್ಷ. “ಆತನ ಕೈ ನನಗೆ ವಿರುದ್ಧವಾಗಿದೆ.”
ಅಥವಾ “ತಡೆಯೊಡ್ತಾನೆ; ಪ್ರಾರ್ಥನೆ ತನಗೆ ಮುಟ್ಟದ ಹಾಗೆ ಮಾಡಿದ್ದಾನೆ.”
ಬಹುಶಃ, “ಬಂಜರು ಪ್ರದೇಶವಾಗಿರೋ ತರ.”
ಅಕ್ಷ. “ಒಳ್ಳೇದನ್ನ.”
ಅಥವಾ “ಕಾಯೋ ಮನೋಭಾವ ತೋರಿಸ್ತೀನಿ.”
ಅಥವಾ “ತಾಳ್ಮೆಯಿಂದ.”
ಅಕ್ಷ. “ಬಾಯಿ ತೆರೆದಿದ್ದಾರೆ.”