ಪ್ರಲಾಪ 4:1-22

  • ಯೆರೂಸಲೇಮ್‌ ಮುತ್ತಿಗೆಯಿಂದ ಘೋರ ಪರಿಣಾಮಗಳು

    • ಆಹಾರದ ಅಭಾವ (4, 5, 9)

    • ಸ್ತ್ರೀಯರು ಹೆತ್ತ ಮಕ್ಕಳನ್ನೇ ಬೇಯಿಸಿದ್ರು (10)

    • ಯೆಹೋವ ಕೋಪಾಗ್ನಿ ಸುರಿಸಿದ್ದಾನೆ (11)

א [ಆಲೆಫ್‌] 4  ಅಯ್ಯೋ! ಫಳಫಳ ಅಂತ ಹೊಳಿತಿದ್ದ ಶುದ್ಧ ಚಿನ್ನ ಈಗ ಕಾಂತಿಹೀನ ಆಗಿದೆ!+ ಪವಿತ್ರ ಕಲ್ಲುಗಳು*+ ಪ್ರತಿಯೊಂದು ಬೀದಿಯ ಮೂಲೆಮೂಲೆಗಳಲ್ಲಿ ಬಿದ್ದಿವೆ!+ ב [ಬೆತ್‌]   ಚೀಯೋನಿನ ಗೌರವಾನ್ವಿತ ಪುತ್ರರು ಶುದ್ಧೀಕರಿಸಿದ ಚಿನ್ನದಷ್ಟು ಅಮೂಲ್ಯರಾಗಿದ್ರು,ಈಗ ಅವ್ರನ್ನ ಕುಂಬಾರನ ಕೈಕೆಲಸವಾಗಿರೋ ಮಣ್ಣಿನ ಮಡಿಕೆಗಳ ತರ ನೋಡಲಾಗ್ತಿದೆ! ג [ಗಿಮೆಲ್‌]   ಗುಳ್ಳೆನರಿಗಳು ಸಹ ತಮ್ಮ ಮರಿಗಳಿಗೆ ಹಾಲುಣಿಸುತ್ತೆ,ಆದ್ರೆ ನನ್ನ ಮಗಳು ಅಂದ್ರೆ ನನ್ನ ಜನ ಕಾಡಲ್ಲಿರೋ* ಉಷ್ಟ್ರಪಕ್ಷಿಗಳ+ ತರ ಕ್ರೂರಿ ಆಗಿದ್ದಾರೆ.+ ד [ಡಾಲತ್‌]   ಹಾಲು ಕುಡಿಯೋ ಮಗುವಿನ ನಾಲಿಗೆ ಬಾಯಾರಿಕೆಯಿಂದ ಒಣಗಿ ಅಂಗುಳಿಗೆ ಅಂಟ್ಕೊಂಡಿದೆ. ಮಕ್ಕಳು ತುತ್ತು ಅನ್ನಕ್ಕಾಗಿ ಬೇಡ್ತಿದ್ದಾರೆ,+ ಆದ್ರೆ ಯಾರೂ ಅವ್ರಿಗೆ ಆಹಾರ ಕೊಡ್ತಿಲ್ಲ.+ ה [ಹೆ]   ರುಚಿರುಚಿಯಾಗಿ ತಿಂತಿದ್ದವರು ಈಗ ಹೊಟ್ಟೆಗಿಲ್ಲದೆ ಬೀದಿಗಳಲ್ಲಿ ಬಿದ್ದಿದ್ದಾರೆ.+ ಚಿಕ್ಕಂದಿನಿಂದ ದುಬಾರಿ* ಬಟ್ಟೆ ಹಾಕ್ತಿದ್ದವರು+ ಈಗ ಬೂದಿ ರಾಶಿಗಳಲ್ಲಿ ಬಿದ್ಕೊಂಡಿದ್ದಾರೆ. ו [ವಾವ್‌]   ಸೊದೋಮ್‌ ಒಂದೇ ಕ್ಷಣದಲ್ಲಿ ನಾಶವಾಯ್ತು, ಅವಳಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ,+ಸೊದೋಮಿನ ಪಾಪಕ್ಕೆ ಸಿಕ್ಕಿದ ಆ ಶಿಕ್ಷೆಗಿಂತ ನನ್ನ ಮಗಳಿಗೆ ಅಂದ್ರೆ ನನ್ನ ಜನ್ರಿಗೆ ಸಿಕ್ಕಿದ ಶಿಕ್ಷೆ ತೀವ್ರವಾಗಿದೆ.+ ז [ಜಯಿನ್‌]   ಅವಳ ನಾಜೀರರು+ ಹಿಮಕ್ಕಿಂತ ಶುಭ್ರರಾಗಿದ್ರು, ಹಾಲಿಗಿಂತ ಬೆಳ್ಳಗಿದ್ರು. ಹವಳಗಳಿಗಿಂತ ಕೆಂಪಗಿದ್ರು, ಮೆರಗು ಕೊಟ್ಟ ನೀಲಮಣಿಗಳ ತರ ಇದ್ರು. ח [ಹೆತ್‌]   ಈಗ ಅವರು ಹೊಗೆಮಸಿಗಿಂತ ಕಪ್ಪಾಗಿದ್ದಾರೆ,ಬೀದಿಗಳಲ್ಲಿ ಯಾರಿಗೂ ಅವ್ರ ಗುರುತೇ ಸಿಗ್ತಿಲ್ಲ. ಅವ್ರ ಚರ್ಮ ಸುಕ್ಕುಗಟ್ಟಿ ಮೂಳೆಗಳಿಗೆ ಅಂಟ್ಕೊಂಡಿದೆ,+ ಒಣಗಿಹೋದ ಕಟ್ಟಿಗೆ ತರ ಆಗಿದೆ. ט [ಟೆತ್‌]   ಕ್ಷಾಮದಿಂದ ಸತ್ತು ಹೋದವ್ರಿಗಿಂತ ಕತ್ತಿಯಿಂದ ಸತ್ತವ್ರೇ ಮೇಲು,+ಕತ್ತಿಯಿಂದ ಏಟಾಗಿ ನರಳೋ ಹಾಗೆ ಜನ ಆಹಾರ ಸಿಗದೆ ನರಳ್ತಿದ್ದಾರೆ. י [ಯೋದ್‌] 10  ಮಮತೆ ತೋರಿಸ್ತಿದ್ದ ಸ್ತ್ರೀಯರು ತಾವು ಹೆತ್ತ ಮಕ್ಕಳನ್ನೇ ಬೇಯಿಸ್ತಿದ್ದಾರೆ.+ ನನ್ನ ಮಗಳು ಅಂದ್ರೆ ನನ್ನ ಜನ ನಾಶ ಆದ ಸಮಯದಲ್ಲಿ ಅವ್ರಿಗೆ ತಮ್ಮ ಮಕ್ಕಳೇ ಆಹಾರ ಆಗಿದ್ದಾರೆ.*+ כ [ಕಾಫ್‌] 11  ಯೆಹೋವ ತನ್ನ ಕೋಪ ತೋರಿಸಿದ್ದಾನೆ,ಆತನು ತನ್ನ ಕೋಪಾಗ್ನಿ ಸುರಿಸಿದ್ದಾನೆ.+ ಆತನು ಚೀಯೋನಲ್ಲಿ ಬೆಂಕಿ ಹಚ್ಚಿದ್ದಾನೆ, ಅದು ಅವಳ ಅಡಿಪಾಯ ಸುಟ್ಟು ಹಾಕ್ತಿದೆ.+ ל [ಲಾಮೆದ್‌] 12  ವಿರೋಧಿ, ಶತ್ರು ಯೆರೂಸಲೇಮಿನ ಬಾಗಿಲೊಳಗೆ ನುಗ್ತಾರಂತ+ಭೂಮಿಯ ರಾಜರಾಗಲಿ ಅದ್ರ ಎಲ್ಲ ಜನ್ರಾಗಲಿ ನಂಬಲಿಲ್ಲ. מ [ಮೆಮ್‌] 13  ಅವಳ ಪ್ರವಾದಿಗಳು ಮಾಡಿದ ಪಾಪಗಳಿಂದಾಗಿ, ಅವಳ ಪುರೋಹಿತರು ಮಾಡಿದ ತಪ್ಪುಗಳಿಂದಾಗಿ ಅವಳಿಗೆ ಈ ಗತಿ ಬಂತು,+ಅವರು ಅವಳ ಮಧ್ಯ ನೀತಿವಂತರ ರಕ್ತ ಸುರಿಸಿದ್ರು.+ נ [ನೂನ್‌] 14  ಅವರು ಬೀದಿಗಳಲ್ಲಿ ಕುರುಡರ ತರ+ ಅಲೆದಾಡಿದ್ದಾರೆ. ಅವರು ರಕ್ತದಿಂದ ಕೊಳಕಾಗಿದ್ದಾರೆ,+ಹಾಗಾಗಿ ಯಾರೂ ಅವ್ರ ಬಟ್ಟೆ ಮುಟ್ಟೋಕಾಗ್ತಿಲ್ಲ. ס [ಸಾಮೆಕ್‌] 15  ಜನ ಅವ್ರಿಗೆ “ದೂರ ಹೋಗಿ, ನೀವು ಅಶುದ್ಧರು! ಹೋಗಿ, ದೂರ ಹೋಗಿ! ನಮ್ಮನ್ನ ಮುಟ್ಟಬೇಡಿ!” ಅಂತ ಹೇಳ್ತಿದ್ದಾರೆ. ಪ್ರವಾದಿಗಳೂ ಪುರೋಹಿತರೂ ಮನೆಯಿಲ್ಲದೆ ಅಲೆದಾಡ್ತಿದ್ದಾರೆ. ಜನಾಂಗಗಳ ಜನ “ನಮ್ಮ ಜೊತೆ* ಇಲ್ಲಿ ವಾಸಿಸಬಾರದು.+ פ [ಪೇ] 16  ಅವ್ರನ್ನ ಯೆಹೋವನೇ ಚದರಿಸಿ ಬಿಟ್ಟಿದ್ದಾನೆ,+ಆತನು ಇನ್ನು ಅವ್ರನ್ನ ಮೆಚ್ಚಲ್ಲ. ಜನ ಪುರೋಹಿತರಿಗೆ ಸ್ವಲ್ಪನೂ ಗೌರವ ಕೊಡಲ್ಲ,+ ಹಿರಿಯರಿಗೆ ದಯೆದಾಕ್ಷಿಣ್ಯ ತೋರಿಸಲ್ಲ”+ ಅಂತ ಹೇಳಿದ್ದಾರೆ. ע [ಅಯಿನ್‌] 17  ಸಹಾಯಕ್ಕಾಗಿ ಎದುರು ನೋಡಿನೋಡಿ ನಮ್ಮ ಕಣ್ಣುಗಳು ಸೋತುಹೋಗಿವೆ, ಆದ್ರೆ ಯಾವ ಸಹಾಯನೂ ಸಿಗಲಿಲ್ಲ.+ ನಮ್ಮನ್ನ ರಕ್ಷಿಸೋಕೆ ಆಗದ ಜನಾಂಗದಿಂದ ಸಹಾಯಕ್ಕಾಗಿ ಕಾದು ಕಾದು ಸುಸ್ತಾಗಿದ್ದೀವಿ.+ צ [ಸಾದೆ] 18  ಅವರು ನಮ್ಮನ್ನ ಹೆಜ್ಜೆಹೆಜ್ಜೆಗೂ ಬೇಟೆಯಾಡಿದ್ದಾರೆ,+ ಪಟ್ಟಣದ ಮುಖ್ಯಸ್ಥಳಗಳಲ್ಲಿ ನಾವು ನಡೆಯದ ಹಾಗೆ ಮಾಡಿದ್ದಾರೆ. ನಮ್ಮ ಅಂತ್ಯ ಹತ್ರ ಆಗಿದೆ, ನಮ್ಮ ಜೀವನ ಕೊನೆ ಆಗಿದೆ, ನಮ್ಮ ಅಂತ್ಯ ಬಂದಿದೆ. ק [ಕೊಫ್‌] 19  ನಮ್ಮನ್ನ ಬೆನ್ನಟ್ಟಿದವರು ಆಕಾಶದಲ್ಲಿ ಹಾರೋ ಹದ್ದುಗಳಿಗಿಂತ ವೇಗವಾಗಿ ಅಟ್ಟಿಸ್ಕೊಂಡು ಬಂದಿದ್ರು.+ ಬೆಟ್ಟಗಳ ಮೇಲೆ ಅವರು ನಮ್ಮನ್ನ ಓಡಿಸ್ಕೊಂಡು ಹೋದ್ರು, ಕಾಡಲ್ಲಿ ನಮಗಾಗಿ ಹೊಂಚುಹಾಕಿ ಹಿಡಿದ್ರು. ר [ರೆಶ್‌] 20  ನಾವು ನಮ್ಮ ಉಸಿರಾಗಿರುವವನ ಬಗ್ಗೆ, ಯೆಹೋವನ ಅಭಿಷಿಕ್ತನ ಬಗ್ಗೆ+ “ಜನಾಂಗಗಳ ಮಧ್ಯ ಅವನ ನೆರಳಲ್ಲಿ ನಾವು ವಾಸಿಸ್ತೀವಿ” ಅಂತ ಹೇಳ್ತಿದ್ವಿ,ಆದ್ರೆ ಅವನನ್ನೇ ಅವರು ದೊಡ್ಡ ಗುಂಡಿಯಲ್ಲಿ ಹಿಡಿದಿದ್ದಾರೆ.+ ש [ಸಿನ್‌] 21  ಊಚ್‌ ದೇಶದಲ್ಲಿ ವಾಸಿಸ್ತಿರೋ ಎದೋಮ್‌ ಅನ್ನೋಳೇ,+ ಸಂಭ್ರಮಿಸು, ಹರ್ಷಿಸು. ಆದ್ರೆ ನಿನಗೂ ಪಾತ್ರೆ ದಾಟಿಸಲಾಗುತ್ತೆ,+ ನೀನು ಅದನ್ನ ಕುಡಿದು ಅಮಲೇರಿ ನಿನ್ನನ್ನ ನೀನೇ ಬೆತ್ತಲೆ ಮಾಡ್ಕೊಳ್ತೀಯ.+ ת [ಟಾವ್‌] 22  ಚೀಯೋನ್‌ ಅನ್ನೋಳೇ, ನಿನ್ನ ತಪ್ಪಿಗಾಗಿ ಸಿಕ್ಕಿರೋ ಶಿಕ್ಷೆ ಕೊನೆ ಆಯ್ತು. ಆತನು ನಿನ್ನನ್ನ ಮತ್ತೆ ಸೆರೆಗೆ ಹಾಕಲ್ಲ.+ ಆದ್ರೆ ಎದೋಮ್‌ ಅನ್ನೋಳೇ, ಆತನು ನಿನ್ನ ತಪ್ಪುಗಳ ಕಡೆ ಗಮನ ಕೊಡ್ತಾನೆ. ಆತನು ನಿನ್ನ ಪಾಪಗಳನ್ನ ಬಯಲು ಮಾಡ್ತಾನೆ.+

ಪಾದಟಿಪ್ಪಣಿ

ಅಥವಾ “ಆರಾಧನಾ ಸ್ಥಳದ ಕಲ್ಲುಗಳು.”
ಅಕ್ಷ. “ಕಡುಗೆಂಪು ಬಣ್ಣದ.”
ಅಥವಾ “ಶೋಕದ ಆಹಾರವಾಗಿದ್ದಾರೆ.”
ಅಥವಾ “ವಿದೇಶಿಯರಾಗಿ.”