ಪ್ರಸಂಗಿ 10:1-20
10 ಸತ್ತ ನೊಣಗಳಿಂದಾಗಿ ಸುಗಂಧ ತೈಲ ಗಬ್ಬುನಾತ ಹಿಡಿದು ನೊರೆ ಬರೋ ಹಾಗೆ ಸ್ವಲ್ಪ ಮೂರ್ಖತನ ವಿವೇಕಿಯ ತುಂಬ ಗೌರವ ಇರೋ ಹೆಸ್ರನ್ನ ಹಾಳು ಮಾಡುತ್ತೆ.+
2 ವಿವೇಕಿಯ ಹೃದಯ ಅವನನ್ನ ಸರಿ ದಾರಿಯಲ್ಲಿ ನಡಿಸುತ್ತೆ. ಆದ್ರೆ ಅವಿವೇಕಿಯ ಹೃದಯ ತಪ್ಪಾದ ದಾರಿಯಲ್ಲಿ ನಡಿಸುತ್ತೆ.+
3 ಮೂರ್ಖ ಯಾವ ದಾರಿಯಲ್ಲಿ ಹೋದ್ರೂ ಬುದ್ಧಿ ಇಲ್ಲದವನ ತರ ನಡ್ಕೊಳ್ತಾನೆ+ ಮತ್ತು ತಾನು ಮೂರ್ಖ ಅಂತ ಎಲ್ರಿಗೂ ತೋರಿಸ್ಕೊಡ್ತಾನೆ.+
4 ರಾಜ ನಿನ್ನ ಮೇಲೆ ಕೋಪ ಕಾರಿದ್ರೆ ನಿನ್ನ ಸ್ಥಳ ಬಿಟ್ಟು ಹೋಗಬೇಡ.+ ಯಾಕಂದ್ರೆ ನೀನು ಶಾಂತವಾಗಿದ್ರೆ ದೊಡ್ಡ ಪಾಪಗಳನ್ನ ತಡಿಬಹುದು.+
5 ನಾನು ಭೂಮಿ ಮೇಲೆ* ಆಗೋ ದುಃಖದ ಒಂದು ವಿಷ್ಯ ನೋಡಿದ್ದೀನಿ. ಅದು ಅಧಿಕಾರದಲ್ಲಿ ಇರುವವರು ಮಾಡೋ ಒಂದು ತಪ್ಪು.+
6 ಅದೇನಂದ್ರೆ ಮೂರ್ಖರಿಗೆ ದೊಡ್ಡ ಸ್ಥಾನ ಸಿಗುತ್ತೆ, ಸಮರ್ಥರು* ಕೆಳಮಟ್ಟದ ಸ್ಥಾನಗಳಲ್ಲೇ ಇರ್ತಾರೆ.
7 ಸೇವಕರು ಕುದುರೆ ಮೇಲೆ ಕೂತು ಸವಾರಿ ಮಾಡೋದನ್ನ, ಆದ್ರೆ ಅಧಿಕಾರಿಗಳು ಸೇವಕರ ತರ ನೆಲದ ಮೇಲೆ ನಡಿಯೋದನ್ನ ನೋಡಿದ್ದೀನಿ.+
8 ಗುಂಡಿ ತೋಡಿದವನು ಆ ಗುಂಡಿಯಲ್ಲಿ ಬೀಳಬಹುದು,+ ಕಲ್ಲಿನ ಗೋಡೆ ಕೆಡವಿ ಹಾಕುವವನನ್ನ ಹಾವು ಕಚ್ಚಬಹುದು.
9 ಕಲ್ಲು ಗಣಿಯಿಂದ ಕಲ್ಲು ತೆಗಿಯೋ ವ್ಯಕ್ತಿಗೆ ಅವುಗಳಿಂದ ಹಾನಿ ಆಗಬಹುದು. ದಿಮ್ಮಿಗಳನ್ನ ಒಡೆಯೋ ವ್ಯಕ್ತಿಗೆ ಅವುಗಳಿಂದ ಅಪಾಯ ಆಗಬಹುದು.*
10 ಮೊಂಡು ಕೊಡಲಿಯನ್ನ ಹರಿತ ಮಾಡದಿದ್ರೆ ಜಾಸ್ತಿ ಬಲ ಉಪಯೋಗಿಸಿ ಹೊಡಿಬೇಕಾಗುತ್ತೆ. ಆದ್ರೆ ವಿವೇಕದಿಂದ ಕೆಲಸ ಮಾಡಿದ್ರೆ ಯಶಸ್ಸು ಸಿಗುತ್ತೆ.
11 ಹಾವಾಡಿಗ ಹಾವನ್ನ ಪಳಗಿಸೋ* ಮುಂಚೆನೇ ಅದು ಅವನನ್ನ ಕಚ್ಚಿದ್ರೆ ಅವನು ಚತುರ ಹಾವಾಡಿಗನಾಗಿದ್ದೂ ಏನು ಪ್ರಯೋಜನ?
12 ವಿವೇಕಿ ತನ್ನ ನುಡಿಗಳಿಂದ ಮೆಚ್ಚುಗೆ ಪಡಿತಾನೆ.+ ಅವಿವೇಕಿ ತನ್ನ ನುಡಿಗಳಿಂದ ತನ್ನ ಮೇಲೆ ತಾನೇ ನಾಶ ತಂದ್ಕೊಳ್ತಾನೆ.+
13 ಅವನ ಬಾಯಿಂದ ಬರೋ ಮೊದಲ ಮಾತುಗಳು ಮೂರ್ಖತನ,+ ಕೊನೇ ಮಾತುಗಳೂ ಹುಚ್ಚುತನ. ಅವು ನಾಶಕ್ಕೆ ನಡಿಸುತ್ತೆ.
14 ಹಾಗಿದ್ರೂ ಅವನು ಮಾತಾಡ್ತಾ ಇರ್ತಾನೆ.+
ಮುಂದೆ ಏನಾಗುತ್ತೆ ಅಂತ ಮನುಷ್ಯನಿಗೆ ಗೊತ್ತಿಲ್ಲ, ಅವನು ಸತ್ತಮೇಲೆ ಏನಾಗುತ್ತೆ ಅಂತ ಅವನಿಗೆ ಹೇಳೋಕೆ ಯಾರಿಂದ ತಾನೇ ಸಾಧ್ಯ?+
15 ಅವಿವೇಕಿಯ ಪರಿಶ್ರಮ ಅವನನ್ನ ಬಳಲಿಸುತ್ತೆ, ಯಾಕಂದ್ರೆ ಅವನಿಗೆ ಪಟ್ಟಣಕ್ಕೆ ಹೋಗೋ ದಾರಿ ಸಹ ಗೊತ್ತಾಗಲ್ಲ.
16 ಒಂದು ದೇಶದ ರಾಜ ಚಿಕ್ಕ ಹುಡುಗನಾಗಿದ್ರೆ+ ಮತ್ತು ಅಧಿಕಾರಿಗಳು ಬೆಳಬೆಳಿಗ್ಗೆನೇ ಔತಣದ ಊಟಕ್ಕೆ ಕೂತ್ರೆ ಆ ದೇಶದ ಗತಿ ಅಧೋಗತಿ!
17 ಆದ್ರೆ ರಾಜಮನೆತನದಲ್ಲಿ ಹುಟ್ಟಿದವನು ದೇಶದ ರಾಜನಾಗಿದ್ರೆ ಆ ದೇಶ ಏಳಿಗೆ ಹೊಂದುತ್ತೆ! ಅಷ್ಟೇ ಅಲ್ಲ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಊಟ ಮಾಡಿದ್ರೆ, ಮಿತಿಮೀರಿ ಕುಡಿಯೋಕಲ್ಲ, ಬದಲಾಗಿ ಬಲ ಪಡ್ಕೊಳ್ಳೋಕಂತ ತಿಂದು ಕುಡಿದ್ರೆ ಆ ದೇಶ ಅಭಿವೃದ್ಧಿ ಹೊಂದುತ್ತೆ.+
18 ಒಬ್ಬ ವ್ಯಕ್ತಿ ಶುದ್ಧ ಸೋಮಾರಿ ಆಗಿದ್ರೆ ಅವನ ಮನೆಯ ಚಾವಣಿಯ ತೊಲೆಗಳು ಕುಸಿದು ಬೀಳುತ್ತೆ, ಕೈಕಟ್ಟಿ ಕೂತ್ರೆ ಅವನ ಮನೆ ಸೋರುತ್ತೆ.+
19 ಆಹಾರ ಖುಷಿ ಕೊಡುತ್ತೆ, ದ್ರಾಕ್ಷಾಮದ್ಯ ಜೀವನದಲ್ಲಿ ಆನಂದ ತುಂಬುತ್ತೆ.+ ಆದ್ರೆ ಹಣ ಪ್ರತಿಯೊಂದು ಅಗತ್ಯವನ್ನ ಪೂರೈಸುತ್ತೆ.+
20 ಮನಸ್ಸಲ್ಲೂ* ರಾಜನಿಗೆ ಶಾಪ ಹಾಕಬೇಡ,*+ ಮಲಗೋ ಕೋಣೆಯಲ್ಲಿ ಇದ್ದಾಗ್ಲೂ ಶ್ರೀಮಂತನಿಗೆ ಶಾಪ ಹಾಕಬೇಡ. ಯಾಕಂದ್ರೆ ಪಕ್ಷಿ ಹೋಗಿ ಅದನ್ನ ಅವನಿಗೆ ಹೇಳಬಹುದು, ಹಾರಾಡೋ ಪಕ್ಷಿ ಹೋಗಿ ನೀನು ಹೇಳಿದ್ದನ್ನ ಹಾಗೇ ಹೇಳಬಹುದು.
ಪಾದಟಿಪ್ಪಣಿ
^ ಅಕ್ಷ. “ಸೂರ್ಯನ ಕೆಳಗೆ.”
^ ಅಕ್ಷ. “ಶ್ರೀಮಂತರು.”
^ ಬಹುಶಃ, “ಒಡೆಯುವವನು ಜಾಗ್ರತೆ ವಹಿಸಬೇಕು.”
^ ಅಥವಾ “ಮಂತ್ರಿಸೋ.”
^ ಬಹುಶಃ, “ಹಾಸಿಗೆ ಮೇಲಿದ್ದಾಗ್ಲೂ.”
^ ಅಥವಾ “ಕೆಟ್ಟದಾಗ್ಲಿ ಅಂತ ಬಯ್ಯಬೇಡ.”