ಪ್ರಸಂಗಿ 7:1-29

  • ಒಳ್ಳೇ ಹೆಸ್ರು ಮತ್ತು ಮರಣದ ದಿನ (1-4)

  • ವಿವೇಕಿಯ ಗದರಿಕೆ (5-7)

  • ಆರಂಭಕ್ಕಿಂತ ಅಂತ್ಯನೇ ಉತ್ತಮ (8-10)

  • ವಿವೇಕದ ಪ್ರಯೋಜನ (11, 12)

  • ಒಳ್ಳೇ ದಿನಗಳು ಕೆಟ್ಟ ದಿನಗಳು (13-15)

  • ಯಾವುದನ್ನೂ ಅತಿಯಾಗಿ ಮಾಡಬೇಡ (16-22)

  • ಪ್ರಸಂಗಿ ಗಮನಿಸಿದ ವಿಷ್ಯಗಳು (23-29)

7  ಬೆಲೆಬಾಳೋ ಸುಗಂಧತೈಲಕ್ಕಿಂತ ಒಳ್ಳೇ ಹೆಸ್ರು ಉತ್ತಮ.+ ಹುಟ್ಟಿದ ದಿನಕ್ಕಿಂತ ಮರಣದ ದಿನನೇ ಮೇಲು.  ಔತಣದ ಮನೆಗೆ+ ಹೋಗೋದಕ್ಕಿಂತ ಸಾವಿನ ಮನೆಗೆ ಹೋಗೋದೇ ಒಳ್ಳೇದು. ಯಾಕಂದ್ರೆ ಇವತ್ತಲ್ಲ ನಾಳೆ ಎಲ್ಲ ಮನುಷ್ಯರಿಗೆ ಸಾವು ಬಂದೇ ಬರುತ್ತೆ, ಇದನ್ನ ಬದುಕಿರುವವರು ಮನಸ್ಸಲ್ಲಿಡಬೇಕು.  ನಗುಗಿಂತ ನೋವೇ ಉತ್ತಮ.+ ಯಾಕಂದ್ರೆ ಸಪ್ಪೆ ಮುಖ ಹೃದಯವನ್ನ ಸುಧಾರಿಸುತ್ತೆ.+  ವಿವೇಕಿ ಸಾವಿನ ಮನೆಯಲ್ಲಿರೋಕೆ ಇಷ್ಟಪಡ್ತಾನೆ. ಆದ್ರೆ ಅವಿವೇಕಿ ಯಾವಾಗ್ಲೂ ಮಜಾ ಮಾಡ್ತಾ ಇರೋಕೆ ಇಷ್ಟಪಡ್ತಾನೆ.+  ಮೂಢರ ಬೆಣ್ಣೆ ಮಾತುಗಳನ್ನ ಕೇಳೋದಕ್ಕಿಂತ ವಿವೇಕಿಯ ಗದರಿಕೆ ಕೇಳೋದು ಉತ್ತಮ.+  ಮೂಢನ ನಗು ಹಂಡೆಯ ಕೆಳಗೆ ಉರಿಯೋ ಮುಳ್ಳಿನ ಚಟಪಟ ಶಬ್ದದ ಹಾಗೆ.+ ಅದೂ ವ್ಯರ್ಥ.  ದಬ್ಬಾಳಿಕೆಗೆ ತುತ್ತಾದಾಗ ವಿವೇಕಿನೂ ಹುಚ್ಚನ ತರ ನಡ್ಕೊಳ್ತಾನೆ. ಲಂಚ ಒಬ್ಬನ ಹೃದಯನ ಹಾಳು ಮಾಡುತ್ತೆ.+  ಒಂದು ವಿಷ್ಯದ ಆರಂಭಕ್ಕಿಂತ ಅದ್ರ ಅಂತ್ಯನೇ ಉತ್ತಮ. ಗರ್ವ ಪಡೋದಕ್ಕಿಂತ ತಾಳ್ಮೆಯಿಂದ ಇರೋದೇ ಒಳ್ಳೇದು.+  ತಟ್ಟಂತ ಕೋಪ ಮಾಡ್ಕೊಬೇಡ.+ ಯಾಕಂದ್ರೆ ಮೂಗಿನ ತುದಿಯಲ್ಲೇ ಕೋಪ ಇರೋದು ಮೂಢರಿಗೆ.*+ 10  “ಈಗ ಇರೋದಕ್ಕಿಂತ ಹಿಂದೆ ನಾವು ತುಂಬ ಚೆನ್ನಾಗಿದ್ವಿ” ಅಂತ ನೀನು ಹೇಳಬೇಡ. ಹಾಗೆ ಹೇಳೋದು ಬುದ್ಧಿವಂತನ ಲಕ್ಷಣ ಅಲ್ಲ.+ 11  ವಿವೇಕದ ಜೊತೆ ಆಸ್ತಿಪಾಸ್ತಿ ಇದ್ರೆ ಒಳ್ಳೇದು. ವಿವೇಕ ಬದುಕಿರುವವರಿಗೆ ಪ್ರಯೋಜನಕರ. 12  ಯಾಕಂದ್ರೆ, ಹಣ ಸಂರಕ್ಷಣೆ ಕೊಡೋ+ ತರ ವಿವೇಕನೂ ಸಂರಕ್ಷಣೆ ಕೊಡುತ್ತೆ.+ ಆದ್ರೆ ಹಣಕ್ಕಿಂತ ಜ್ಞಾನ, ವಿವೇಕ ಶ್ರೇಷ್ಠ. ಹೇಗಂದ್ರೆ ಅವು ಯಾರಲ್ಲಿ ಇರುತ್ತೋ ಅವ್ರ ಜೀವ ಉಳಿಯುತ್ತೆ.+ 13  ಸತ್ಯ ದೇವರ ಕೆಲಸದ ಬಗ್ಗೆ ಯೋಚಿಸು, ಆತನು ಸೊಟ್ಟ ಮಾಡಿರೋದನ್ನ ನೆಟ್ಟಗೆ ಮಾಡೋಕೆ ಯಾರಿಂದಾದ್ರೂ ಸಾಧ್ಯನಾ?+ 14  ಒಳ್ಳೇ ದಿನದಲ್ಲಿ ಒಳ್ಳೇದನ್ನ ಮಾಡು.+ ಕಷ್ಟದ ದಿನದಲ್ಲಿ ಒಂದು ವಿಷ್ಯ ಅರ್ಥಮಾಡ್ಕೊ. ಅದೇನಂದ್ರೆ ಒಳ್ಳೇ ದಿನ, ಕೆಟ್ಟ ದಿನ, ಈ ಎರಡನ್ನೂ ದೇವರು ಅನುಮತಿಸಿದ್ದಾನೆ+ ಮತ್ತು ಮನುಷ್ಯರು ತಮಗೆ ಮುಂದೆ ಏನಾಗುತ್ತೆ ಅಂತ ತಿಳುಕೊಳ್ಳೋಕೆ* ಆಗದಂತೆ ಆತನು ಹೀಗೆ ಮಾಡಿದ್ದಾನೆ.+ 15  ನನ್ನ ಅಲ್ಪ* ಜೀವನದಲ್ಲಿ+ ನಾನು ಎಲ್ಲ ನೋಡಿದ್ದೀನಿ. ನೀತಿಯಿಂದ ನಡಿಯೋ ನೀತಿವಂತ ಬೇಗ ಸಾಯೋದನ್ನ ನೋಡಿದ್ದೀನಿ,+ ದುಷ್ಟ ಕೆಟ್ಟದ್ದನ್ನ ಮಾಡಿದ್ರೂ ತುಂಬ ಕಾಲ ಬದುಕೋದನ್ನೂ ನೋಡಿದ್ದೀನಿ.+ 16  ನೀನು ಅತಿ ನೀತಿವಂತ ಆಗಿರಬೇಡ,+ ದೊಡ್ಡ ವಿವೇಕಿ ಅಂತ ತೋರಿಸ್ಕೊಳ್ಳಬೇಡ.+ ನಿನ್ನ ಮೇಲೆ ನೀನೇ ಯಾಕೆ ನಾಶ ತಂದ್ಕೊಳ್ತೀಯಾ?+ 17  ನೀನು ತುಂಬ ಕೆಟ್ಟವನಾಗಿ ಇರಬೇಡ, ಮೂರ್ಖನಾಗಿರಲೂ ಬೇಡ.+ ನೀನು ಅಕಾಲ ಮರಣಕ್ಕೆ ಯಾಕೆ ತುತ್ತಾಗಬೇಕು?+ 18  ನಿನಗೆ ಕೊಟ್ಟಿರೋ ಮೊದಲ ಎಚ್ಚರಿಕೆಗೆ ಕಿವಿಗೊಡು, ಎರಡನೇ ಎಚ್ಚರಿಕೆಯನ್ನೂ ಕಡೆಗಣಿಸಬೇಡ.+ ಅದೇ ನಿನಗೆ ಒಳ್ಳೇದು. ದೇವಭಯ ಇರುವವನು ಅವೆರಡಕ್ಕೂ ಕಿವಿಗೊಡ್ತಾನೆ. 19  ವಿವೇಕ ಒಬ್ಬ ವಿವೇಕಿಯನ್ನ ಪಟ್ಟಣದಲ್ಲಿರೋ ಹತ್ತು ಬಲಶಾಲಿ ಗಂಡಸ್ರಿಗಿಂತ್ಲೂ ಶಕ್ತಿಶಾಲಿಯಾಗಿ ಮಾಡುತ್ತೆ.+ 20  ಯಾವಾಗ್ಲೂ ಒಳ್ಳೇದನ್ನೇ ಮಾಡ್ತಾ ಪಾಪನೇ ಮಾಡದಿರೋ ನೀತಿವಂತ ಭೂಮಿ ಮೇಲೆ ಯಾರೂ ಇಲ್ಲ.+ 21  ಜನ ಹೇಳೋ ಪ್ರತಿಯೊಂದು ಮಾತನ್ನ ಮನಸ್ಸಿಗೆ ತಗೊಳ್ಳಬೇಡ.+ ಹಾಗೆ ತಗೊಂಡ್ರೆ ನಿನ್ನ ಸೇವಕ ನಿನ್ನನ್ನ ಕೆಟ್ಟದಾಗಿ ಬೈಯೋದು* ನಿನ್ನ ಕಿವಿಗೆ ಬೀಳಬಹುದು. 22  ಯಾಕಂದ್ರೆ ನೀನು ಸಹ ಬೇರೆಯವ್ರನ್ನ ಎಷ್ಟೋ ಸಾರಿ ಕೆಟ್ಟದ್ದಾಗಿ ಬೈದಿದ್ದೀಯ ಅನ್ನೋದಕ್ಕೆ ನಿನ್ನ ಹೃದಯನೇ ಸಾಕ್ಷಿ.+ 23  ನಾನು ಇವೆಲ್ಲವನ್ನ ವಿವೇಕದಿಂದ ಪರೀಕ್ಷಿಸಿ “ವಿವೇಕಿ ಆಗ್ತೀನಿ” ಅಂತ ನಿರ್ಣಯಿಸಿದೆ. ಆದ್ರೆ ಅದು ನನ್ನ ಕೈಗೆ ಎಟುಕದೆ ಇರುವಂಥದ್ದು. 24  ಇಲ್ಲಿ ತನಕ ಆಗಿರೋದೆಲ್ಲ ನನ್ನ ಗ್ರಹಿಕೆಗೆ ಮೀರಿದ್ದು ಮತ್ತು ತುಂಬ ಗಾಢವಾದದ್ದು. ಅದನ್ನ ಅರ್ಥ ಮಾಡ್ಕೊಳ್ಳೋಕೆ ಯಾರಿಂದನೂ ಆಗಲ್ಲ.+ 25  ವಿವೇಕದ ಬಗ್ಗೆ ಮತ್ತು ಪ್ರತಿಯೊಂದರ ಹಿಂದಿರೋ ಕಾರಣದ ಬಗ್ಗೆ ತಿಳ್ಕೊಳ್ಳೋಕೆ, ಅದನ್ನ ಪರಿಶೋಧಿಸೋಕೆ, ಹುಡುಕೋಕೆ ನಾನು ನಿರ್ಧರಿಸಿದೆ. ಅಷ್ಟೇ ಅಲ್ಲ ಅವಿವೇಕ ಎಷ್ಟು ಕೆಟ್ಟದ್ದು, ಹುಚ್ಚುತನ ಎಷ್ಟು ಮೂರ್ಖತನವಾಗಿದೆ ಅಂತ ಅರ್ಥ ಮಾಡ್ಕೊಳ್ಳೋಕೆ ನಿಶ್ಚಯಿಸಿದೆ.+ 26  ಆಮೇಲೆ ಮರಣಕ್ಕಿಂತ ಕೆಟ್ಟದ್ದು ಒಂದಿದೆ, ಅದು ಬೇಟೆಗಾರನ ಬಲೆಯಂತಿರೋ ಸ್ತ್ರೀನೇ ಅಂತ ನನಗೆ ಗೊತ್ತಾಯ್ತು. ಅವಳ ಹೃದಯ ಮೀನು ಹಿಡಿಯೋ ಬಲೆಗಳ ತರ ಇದೆ. ಅವಳ ಕೈಗಳು ಸೆರೆಯ ಬೇಡಿಗಳು. ಸತ್ಯ ದೇವರನ್ನ ಮೆಚ್ಚಿಸುವವನು ಅವಳ ಕೈಯಿಂದ ತಪ್ಪಿಸಿಕೊಳ್ತಾನೆ,+ ಆದ್ರೆ ಅವಳು ಪಾಪಿಯನ್ನ ಸೆರೆಹಿಡಿತಾಳೆ.+ 27  ಪ್ರಸಂಗಿ+ ಹೀಗನ್ನುತ್ತಾನೆ: “ನೋಡು, ನಾನು ಒಂದರ ನಂತ್ರ ಒಂದನ್ನ ಪರೀಕ್ಷಿಸಿ ಒಂದು ವಿಷ್ಯ ಕಂಡುಹಿಡಿದು ಒಂದು ನಿರ್ಣಯಕ್ಕೆ ಬಂದೆ. ಅದೇನಂದ್ರೆ 28  ನಾನು ಪ್ರಯತ್ನಬಿಡದೆ ಹುಡುಕಿದ್ದು ನನಗೆ ಸಿಗಲಿಲ್ಲ. ಸಾವಿರ ಪುರುಷರಲ್ಲಿ ನೀತಿವಂತನಾದ ಒಬ್ಬ ಪುರುಷ ನನಗೆ ಸಿಕ್ಕಿದ್ರೂ ಸಾವಿರ ಸ್ತ್ರೀಯರಲ್ಲಿ ನೀತಿವಂತಳಾದ ಒಬ್ಬ ಸ್ತ್ರೀನೂ ಸಿಗಲಿಲ್ಲ. 29  ನಾನು ಕಂಡುಹಿಡಿದದ್ದು ಇಷ್ಟನ್ನೇ: ಸತ್ಯ ದೇವರು ಮಾನವರನ್ನ ನೀತಿವಂತರನ್ನಾಗಿ ಸೃಷ್ಟಿಮಾಡಿದನು,+ ಆದ್ರೆ ಅವರು ತಮ್ಮದೇ ಆದ ದಾರಿಗಳನ್ನ ಹುಡುಕಿ ಅವುಗಳಲ್ಲಿ ನಡೆದಿದ್ದಾರೆ.”+

ಪಾದಟಿಪ್ಪಣಿ

ಅಕ್ಷ. “ಕೋಪ ಮೂಢರ ಎದೆಯಲ್ಲಿ ನೆಲೆಸಿರುತ್ತೆ.” ಬಹುಶಃ, “ಕೋಪ ಮೂಢರ ಲಕ್ಷಣ.”
ಅಥವಾ “ಕಂಡುಹಿಡಿಯೋಕೆ.”
ಅಥವಾ “ವ್ಯರ್ಥ.”
ಅಕ್ಷ. “ಶಪಿಸೋದು.”