ಫಿಲಿಪ್ಪಿಯವರಿಗೆ ಬರೆದ ಪತ್ರ 2:1-30
2 ಕ್ರೈಸ್ತರಾದ ನೀವು ಬೇರೆಯವ್ರನ್ನ ಪ್ರೋತ್ಸಾಹಿಸೋಕೆ, ಪ್ರೀತಿಯಿಂದ ಸಮಾಧಾನ ಮಾಡೋಕೆ, ಒಟ್ಟಿಗೆ ಸಹವಾಸ ಮಾಡೋಕೆ, ಕೋಮಲ ಮಮತೆ, ಅನುಕಂಪ ತೋರಿಸೋಕೆ ನಿಮ್ಮ ಕೈಯಲ್ಲಿ ಆಗೋದನ್ನೆಲ್ಲ ಮಾಡಿ.
2 ನೀವು ಹೀಗೆ ಮಾಡಿದ್ರೆ ನನಗೆ ತುಂಬ ಖುಷಿಯಾಗುತ್ತೆ. ನೀವು ಒಬ್ರಿಗೊಬ್ರು ಹೊಂದ್ಕೊಂಡು, ಪ್ರೀತಿ ತೋರಿಸ್ತಾ, ಒಗ್ಗಟ್ಟಾಗಿ ಇರಿ. ನಿಮ್ಮ ಗುರಿ, ಮನಸ್ಸು ಒಂದೇ ಆಗಿರಲಿ.+
3 ಏನೇ ಆದ್ರೂ ಜಗಳ ಮಾಡಬೇಡಿ,+ ‘ನಾನೇ ಮೇಲು’ ಅಂತ ಹೆಮ್ಮೆಪಡದೆ+ ದೀನತೆ ತೋರಿಸಿ,* ನಿಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡಿ.+
4 ನಿಮ್ಮ ಬಗ್ಗೆ ಮಾತ್ರ ಯೋಚಿಸದೆ,+ ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.+
5 ಕ್ರಿಸ್ತ ಯೇಸುವಿನ ಈ ಮನೋಭಾವ ನಿಮ್ಮಲ್ಲೂ ಇರಲಿ.+
6 ಕ್ರಿಸ್ತನು ದೇವರ ಸ್ವರೂಪದಲ್ಲಿದ್ರೂ+ ದೇವರಿಗೆ ಸಮ ಆಗಬೇಕು ಅನ್ನೋ ಯೋಚ್ನೆ ಕೂಡ ಮಾಡಲಿಲ್ಲ.+
7 ಬದಲಿಗೆ ತನ್ನದು ಅಂತ ಏನೆಲ್ಲ ಇತ್ತೋ ಅದನ್ನೆಲ್ಲ ಬಿಟ್ಟು* ಆತನು ದಾಸನಾಗಿರೋಕೆ ಒಪ್ಕೊಂಡನು+ ಮತ್ತು ಮನುಷ್ಯನಾದನು.+
8 ಅಷ್ಟೇ ಅಲ್ಲ, ಮನುಷ್ಯನಾಗಿದ್ದಾಗ ಆತನು ತನ್ನನ್ನ ತಗ್ಗಿಸ್ಕೊಂಡನು. ಎಷ್ಟರ ಮಟ್ಟಿಗೆ ವಿಧೇಯತೆ ತೋರಿಸಿದನಂದ್ರೆ ಸಾವನ್ನೂ ಸಹಿಸ್ಕೊಂಡನು.+ ಹೌದು, ಹಿಂಸಾ ಕಂಬದ* ಮೇಲೆ ಸತ್ತನು.+
9 ಹಾಗಾಗಿ ದೇವರು ಆತನನ್ನ ಅತೀ ಉನ್ನತ ಸ್ಥಾನಕ್ಕೆ ಏರಿಸಿದನು+ ಮತ್ತು ಬೇರೆಲ್ಲ ಹೆಸ್ರಿಗಿಂತ ಶ್ರೇಷ್ಠ ಹೆಸ್ರನ್ನ ಆತನಿಗೆ ಕೊಟ್ಟನು.+
10 ಸ್ವರ್ಗ, ಭೂಮಿ, ನೆಲದ ಕೆಳಗೆ ಇರೋ* ಪ್ರತಿಯೊಬ್ರೂ ಯೇಸುವಿನ ಹೆಸ್ರಿಗೆ ಗೌರವ ಕೊಡಬೇಕಂತ+
11 ಮತ್ತು ಯೇಸು ಕ್ರಿಸ್ತನೇ ಪ್ರಭು ಅಂತ ಎಲ್ರೂ ಒಪ್ಕೊಂಡು+ ತಂದೆಯಾದ ದೇವರಿಗೆ ಮಹಿಮೆ ಕೊಡಬೇಕು ಅಂತಾನೇ ದೇವರು ಹೀಗೆ ಮಾಡಿದನು.
12 ಹಾಗಾಗಿ ನನ್ನ ಪ್ರೀತಿಯ ಸಹೋದರರೇ, ನೀವು ಯಾವಾಗ್ಲೂ ಆಜ್ಞೆಗಳನ್ನ ಪಾಲಿಸ್ತಾ ಇದ್ದೀರ. ನಾನು ನಿಮ್ಮ ಜೊತೆ ಇದ್ದಾಗ್ಲೂ ಪಾಲಿಸ್ತಿದ್ರಿ. ನಾನೀಗ ನಿಮ್ಮ ಜೊತೆ ಇಲ್ಲದಿದ್ರೂ ಇನ್ನೂ ಖುಷಿಖುಷಿಯಾಗಿ ಪಾಲಿಸ್ತಿದ್ದೀರ. ಅದೇ ತರ ಭಯದಿಂದ ನಡುಗ್ತಾ ನಿಮ್ಮ ರಕ್ಷಣೆಗಾಗಿ ಶ್ರಮ ಹಾಕ್ತಾ ಇರಿ.
13 ದೇವರಿಗೆ ಇಷ್ಟ ಆಗೋ ಕೆಲಸಗಳನ್ನ ಮಾಡೋಕೆ ನಮಗೆ ಬಯಕೆಯನ್ನ, ಅದ್ರ ಪ್ರಕಾರ ನಡ್ಕೊಳ್ಳೋ ಶಕ್ತಿನ ದೇವರೇ ಕೊಡ್ತಾನೆ. ಹಾಗೆ ಮಾಡೋದು ದೇವರಿಗೆ ತುಂಬ ಇಷ್ಟ.
14 ಏನೇ ಆದ್ರೂ ಯಾವತ್ತೂ ಗೊಣಗಬೇಡಿ,+ ಜಗಳ ಮಾಡಬೇಡಿ.+
15 ಆಗ ದೇವರ ಮಕ್ಕಳಾದ+ ನಿಮ್ಮ ಮೇಲೆ ಯಾವ ಅಪರಾಧ, ಕಳಂಕನೂ ಇರಲ್ಲ. ನೀವು ತಪ್ಪಿಲ್ಲದವರಾಗಿದ್ರೆ ಭ್ರಷ್ಟ, ಮೊಂಡ ಪೀಳಿಗೆಯ+ ಮಧ್ಯ ಜೀವಿಸ್ತಿದ್ರೂ ಬೆಳಕಿನ ತರ ಹೊಳಿತೀರ.+
16 ಜೀವ ಕೊಡೋ ಸಂದೇಶವನ್ನ ಯಾವಾಗ್ಲೂ ಗಟ್ಟಿಯಾಗಿ ಹಿಡ್ಕೊಳ್ಳಿ.+ ಆಗ ನನ್ನ ಪ್ರಯತ್ನ, ಶ್ರಮ ವ್ಯರ್ಥ ಆಗಿಲ್ಲ ಅಂತ ನೆನಸಿ ಕ್ರಿಸ್ತನ ದಿನದಲ್ಲಿ ಖುಷಿಪಡ್ತೀನಿ.
17 ನಂಬಿಕೆಯಿಂದ ನೀವು ಮಾಡ್ತಿರೋ ತ್ಯಾಗಕ್ಕೆ, ಪವಿತ್ರ ಸೇವೆಗೆ* ಸಹಾಯ ಮಾಡೋಕೆ ನಾನು ನನ್ನನ್ನೇ ಪಾನ ಅರ್ಪಣೆ ತರ ಪೂರ್ತಿ ಸುರೀತಾ ಇದ್ದೀನಿ.+ ಆದ್ರೂ ನಾನು ಖುಷಿಪಡ್ತೀನಿ, ನಿಮ್ಮ ಜೊತೆ ನಾನೂ ಸಂತೋಷ ಪಡ್ತೀನಿ.
18 ನೀವೂ ಖುಷಿಪಡಿ, ನನ್ನ ಜೊತೆ ಸಂತೋಷ ಪಡಿ.
19 ಯೇಸು ಪ್ರಭುಗೆ ಇಷ್ಟ ಇದ್ರೆ ನಾನು ತಿಮೊತಿಯನ್ನ ಆದಷ್ಟು ಬೇಗ ನಿಮ್ಮ ಹತ್ರ ಕಳಿಸ್ತೀನಿ.+ ಆಗ ಅವನಿಂದ ನಿಮ್ಮ ಬಗ್ಗೆ ತಿಳ್ಕೊಂಡು ನಾನು ಪ್ರೋತ್ಸಾಹ ಪಡಿಯೋಕೆ ಆಗುತ್ತೆ.
20 ಅವನ ತರ ನಿಮ್ಮ ಬಗ್ಗೆ ನಿಜವಾದ ಕಾಳಜಿ ತೋರಿಸೋ ವ್ಯಕ್ತಿ ನನ್ನ ಹತ್ರ ಬೇರೆ ಯಾರೂ ಇಲ್ಲ.
21 ಬೇರೆಯವ್ರೆಲ್ಲ ಯೇಸು ಕ್ರಿಸ್ತ ಏನು ಇಷ್ಟಪಡ್ತಾನೋ ಅದ್ರ ಬಗ್ಗೆ ಯೋಚಿಸದೆ ತಮ್ಮ ಬಗ್ಗೆನೇ ಯೋಚಿಸ್ತಿದ್ದಾರೆ.
22 ಆದ್ರೆ ತಿಮೊತಿ ಹಾಗಿಲ್ಲ ಅಂತ ತೋರಿಸ್ಕೊಟ್ಟಿದ್ದು ನಿಮಗೇ ಗೊತ್ತು. ಯಾಕಂದ್ರೆ ಮಗ+ ತಂದೆ ಜೊತೆ ಕೆಲಸ ಮಾಡೋ ಹಾಗೆ ಅವನು ನನ್ನ ಜೊತೆ ಸಿಹಿಸುದ್ದಿ ಸಾರೋಕೆ ಕಷ್ಟಪಟ್ಟು ಕೆಲಸ ಮಾಡಿದ.
23 ಹಾಗಾಗಿ ನನಗೆ ಏನಾಗುತ್ತೆ ಅಂತ ಗೊತ್ತಾದ ತಕ್ಷಣ ಅವನನ್ನೇ ನಿಮ್ಮ ಹತ್ರ ಕಳಿಸಬೇಕಂತ ಇದ್ದೀನಿ.
24 ಆದಷ್ಟು ಬೇಗ ನಾನೂ ನಿಮ್ಮ ಹತ್ರ ಬರೋಕೆ ಒಡೆಯ ಬಿಡ್ತಾನೆ ಅನ್ನೋ ನಂಬಿಕೆ ನನಗಿದೆ.+
25 ಆದ್ರೆ ಈಗ ನನ್ನ ಸಹೋದರ, ಜೊತೆ ಕೆಲಸಗಾರ, ಜೊತೆ ಸೈನಿಕನಾದ ಎಪಫ್ರೊದೀತನನ್ನ ನಿಮ್ಮ ಹತ್ರ ಕಳಿಸಿದ್ರೆ ಚೆನ್ನಾಗಿರುತ್ತೆ ಅಂತ ಅಂದ್ಕೊಳ್ತೀನಿ. ನನಗೆ ಬೇಕಾದ ಸಹಾಯ ಮಾಡೋಕೆ ನೀವು ಅವನನ್ನ ನಿಮ್ಮ ಪ್ರತಿನಿಧಿಯಾಗಿ ನನ್ನ ಹತ್ರ ಕಳಿಸಿದ್ರಿ.+
26 ನಿಮ್ಮನ್ನೆಲ್ಲ ನೋಡೋಕೆ ಅವನು ಕಾಯ್ತಾ ಇದ್ದಾನೆ. ಅವನಿಗೆ ಹುಷಾರಿಲ್ಲ ಅಂತ ನಿಮಗೆ ಗೊತ್ತಾಗಿದೆ ಅನ್ನೋ ಸುದ್ದಿ ಕೇಳಿ ಅವನ ಮನಸ್ಸು ಕುಗ್ಗಿಹೋಗಿದೆ.
27 ನಿಜ, ಅವನು ಹುಷಾರಿಲ್ಲದೆ ಸಾಯೋ ಸ್ಥಿತಿಯಲ್ಲಿದ್ದ. ಆದ್ರೆ ದೇವರು ಅವನಿಗೆ ಕರುಣೆ ತೋರಿಸಿದನು. ಅಷ್ಟೇ ಅಲ್ಲ, ದುಃಖದಲ್ಲಿದ್ದ ನನಗೆ ಇನ್ನೂ ದುಃಖ ಆಗದೆ ಇರೋ ತರ ನನಗೂ ಕರುಣೆ ತೋರಿಸಿದನು.
28 ಅವನನ್ನ ನೋಡಿ ನೀವು ಮತ್ತೆ ಖುಷಿಪಡಬೇಕು ಅಂತ ಬೇಗ ನಿಮ್ಮ ಹತ್ರ ಕಳಿಸ್ತಿದ್ದೀನಿ. ಆಗ ನಿಮ್ಮ ಬಗ್ಗೆ ನಾನು ಚಿಂತೆ ಮಾಡಬೇಕಾಗಿಲ್ಲ.
29 ನೀವು ಪ್ರಭುವಿನ ಶಿಷ್ಯರನ್ನ ಯಾವಾಗ್ಲೂ ಸ್ವಾಗತಿಸೋ ಹಾಗೆ ಅವನನ್ನೂ ಖುಷಿಯಿಂದ ಸ್ವಾಗತಿಸಿ. ಇಂಥ ಸಹೋದರರನ್ನ ಅಮೂಲ್ಯವಾಗಿ ನೋಡಿ.+
30 ಅವನು ಕ್ರಿಸ್ತನ* ಸೇವೆ ಮಾಡ್ತಾ ಸಾಯೋ ಸ್ಥಿತಿಗೆ ಹೋಗಿದ್ದ. ಅಷ್ಟೇ ಅಲ್ಲ ನಿಮಗೆ ಇಲ್ಲಿ ಬಂದು ನನಗೆ ಸಹಾಯ ಮಾಡೋಕೆ ಆಗದೆ ಇರೋದ್ರಿಂದ ಅವನು ನನಗೋಸ್ಕರ ತನ್ನ ಜೀವವನ್ನೇ ಪಣಕ್ಕಿಟ್ಟ.+
ಪಾದಟಿಪ್ಪಣಿ
^ ಅಥವಾ “ದೀನಮನಸ್ಸಿಂದ.”
^ ಅಕ್ಷ. “ಬರಿದು ಮಾಡ್ಕೊಂಡು.”
^ ಅಂದ್ರೆ, ಮತ್ತೆ ಜೀವ ಪಡ್ಕೊಳ್ಳೋರು.
^ ಅಥವಾ “ಜನಸೇವೆಗೆ.”
^ ಬಹುಶಃ, “ಒಡೆಯನ.”