ಮತ್ತಾಯ 15:1-39
15 ಆಗ ಯೆರೂಸಲೇಮಿಂದ ಫರಿಸಾಯರು, ಪಂಡಿತರು ಯೇಸು ಹತ್ರ ಬಂದು+
2 “ನಮ್ಮ ಹಿರಿಯರು ಮಾಡಿದ ಸಂಪ್ರದಾಯವನ್ನ ನಿನ್ನ ಶಿಷ್ಯರು ಯಾಕೆ ಪಾಲಿಸಲ್ಲ? ನೋಡು, ಅವರು ಊಟಕ್ಕಿಂತ ಮುಂಚೆ ಕೈ ತೊಳಿಯಲ್ಲ”* ಅಂತ ಹೇಳಿದ್ರು.+
3 ಅದಕ್ಕೆ ಯೇಸು “ಸಂಪ್ರದಾಯಕ್ಕೋಸ್ಕರ ನೀವು ದೇವರ ಆಜ್ಞೆನ ಯಾಕೆ ಪಾಲಿಸಲ್ಲ?+
4 ‘ಅಪ್ಪಅಮ್ಮಗೆ ಗೌರವ ಕೊಡಬೇಕು’+ ಮತ್ತು ‘ಅಪ್ಪಅಮ್ಮನನ್ನ ಬೈಯುವವನನ್ನ* ಸಾಯಿಸಬೇಕು’+ ಅಂತ ದೇವರು ಹೇಳಿದ್ದಾನೆ.
5 ಆದ್ರೆ ಒಬ್ಬ ವ್ಯಕ್ತಿ ಅಪ್ಪಅಮ್ಮಗೆ ‘ನನ್ನ ಹತ್ರ ಇರೋದನ್ನೆಲ್ಲ ದೇವ್ರಿಗೆ ಕಾಣಿಕೆಯಾಗಿ ಕೊಡಬೇಕಂತ ಇಟ್ಟಿದ್ದೀನಿ. ನಿಮಗೋಸ್ಕರ ನಾನು ಏನೂ ಮಾಡಕ್ಕಾಗಲ್ಲ’+ ಅಂತ ಹೇಳಿದ್ರೆ
6 ನೀವು ಅವನಿಗೆ ‘ಅಪ್ಪಅಮ್ಮನ ಗೌರವಿಸೋ ಅಗತ್ಯ ಇಲ್ಲ’ ಅಂತೀರ. ಹೀಗೆ ನಿಮ್ಮ ಸಂಪ್ರದಾಯಕ್ಕೋಸ್ಕರ ದೇವರ ಮಾತನ್ನ ತಳ್ಳಿಹಾಕ್ತೀರ.+
7 ಕಪಟಿಗಳೇ, ನಿಮ್ಮ ಬಗ್ಗೆ ಯೆಶಾಯ ಹೇಳಿದ್ದು ನಿಜ ಆಯ್ತು.+
8 ‘ಈ ಜನ್ರು ತುಟಿಗಳಿಂದ ನನ್ನನ್ನ ಗೌರವಿಸ್ತಾರೆ, ಆದ್ರೆ ಅದನ್ನ ಮನಸಾರೆ ಮಾಡಲ್ಲ.
9 ಅವರು ಮನುಷ್ಯರ ಆಜ್ಞೆಗಳನ್ನ ದೇವರ ಮಾತುಗಳ ತರ ಕಲಿಸ್ತಾರೆ. ಹಾಗಾಗಿ ಇವರು ನನ್ನನ್ನ ಆರಾಧಿಸೋದು ವ್ಯರ್ಥ’+ ಅಂತ ಅವನು ಹೇಳಿದ್ದಾನೆ” ಅಂದನು.
10 ಆಮೇಲೆ ಯೇಸು ಜನ್ರನ್ನ ಹತ್ರ ಕರೆದು “ನಾನು ಹೇಳೋದನ್ನ ಕೇಳಿ ಅರ್ಥಮಾಡ್ಕೊಳ್ಳಿ.+
11 ಬಾಯೊಳಗೆ ಹೋಗೋದು ಮನುಷ್ಯನನ್ನ ಅಶುದ್ಧ ಮಾಡಲ್ಲ. ಬಾಯಿಂದ ಬರೋದೇ ಅಶುದ್ಧ ಮಾಡುತ್ತೆ” ಅಂದನು.+
12 ಆಮೇಲೆ ಶಿಷ್ಯರು ಆತನ ಹತ್ರ ಬಂದು “ನೀನು ಹೇಳಿದ್ದನ್ನ ಕೇಳಿ ಫರಿಸಾಯರಿಗೆ ಕೋಪ ಬಂದಿದ್ದನ್ನ ನೋಡಿದ್ಯಾ?” ಅಂತ ಕೇಳಿದ್ರು.+
13 ಅದಕ್ಕೆ ಯೇಸು “ಸ್ವರ್ಗದಲ್ಲಿರೋ ನನ್ನ ತಂದೆ ನೆಡದ ಗಿಡಗಳನ್ನೆಲ್ಲ ಆತನು ಬೇರುಸಮೇತ ಕಿತ್ತುಹಾಕ್ತಾನೆ.
14 ಅವರ ಬಗ್ಗೆ ತಲೆಕೆಡಿಸ್ಕೊಬೇಡಿ. ಅವ್ರೇ ಕುರುಡರು, ಅಂಥದ್ರಲ್ಲಿ ಅವರು ಇನ್ನೊಬ್ಬರಿಗೆ ದಾರಿ ತೋರಿಸ್ತಾರೆ. ಒಬ್ಬ ಕುರುಡ ಇನ್ನೊಬ್ಬ ಕುರುಡನಿಗೆ ದಾರಿತೋರಿಸಿದ್ರೆ ಇಬ್ರೂ ಗುಂಡಿಗೆ ಬೀಳ್ತಾರೆ” ಅಂದನು.+
15 ಆಗ ಪೇತ್ರ ಯೇಸುಗೆ “ನೀನು ಮುಂಚೆ ಹೇಳಿದ ಉದಾಹರಣೆಯ ಅರ್ಥ ನಮಗೆ ಹೇಳು” ಅಂದ.
16 ಅದಕ್ಕೆ ಯೇಸು “ನಿಮಗೂ ಅದು ಅರ್ಥ ಆಗಲಿಲ್ವಾ?+
17 ಬಾಯೊಳಗೆ ಹೋಗೋದೆಲ್ಲ ಹೊಟ್ಟೆಗೆ ಹೋಗಿ ಆಮೇಲೆ ಹೊರಗೆ ಹೋಗುತ್ತೆ ಅಂತ ನಿಮಗೆ ಗೊತ್ತಲ್ವಾ?
18 ಆದ್ರೆ ಬಾಯಿಂದ ಹೊರಗೆ ಬರೋದೆಲ್ಲ ಹೃದಯದಿಂದ ಬರುತ್ತೆ. ಅದೇ ಒಬ್ಬ ಮನುಷ್ಯನನ್ನ ಅಶುದ್ಧ ಮಾಡುತ್ತೆ.+
19 ಕೆಟ್ಟ ಆಲೋಚನೆ+ ಅಂದ್ರೆ ಕೊಲೆ, ವ್ಯಭಿಚಾರ, ಲೈಂಗಿಕ ಅನೈತಿಕತೆ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ಆರೋಪ ಇವೆಲ್ಲ ಹೃದಯದಿಂದ ಬರ್ತವೆ.
20 ಇವು ಮನುಷ್ಯನನ್ನ ಅಶುದ್ಧ ಮಾಡ್ತವೆ. ಆದ್ರೆ ಕೈ ತೊಳಿದೆ ಊಟಮಾಡಿದ್ರೆ ಮನುಷ್ಯ ಅಶುದ್ಧ ಆಗಲ್ಲ” ಅಂತ ಹೇಳಿದನು.
21 ಯೇಸು ಅಲ್ಲಿಂದ ತೂರ್, ಸೀದೋನ್ ಪ್ರದೇಶಗಳಿಗೆ ಹೋದನು.+
22 ಅಲ್ಲಿ ಫೊಯಿನಿಕೆ ಪ್ರದೇಶಕ್ಕೆ ಸೇರಿದ ಒಬ್ಬ ಸ್ತ್ರೀ ಬಂದು “ಸ್ವಾಮಿ, ದಾವೀದನ ಮಗನೇ, ಕರುಣೆ ತೋರಿಸು. ಕೆಟ್ಟ ದೇವದೂತನ ಕಾಟದಿಂದ ನನ್ನ ಮಗಳು ತುಂಬ ಕಷ್ಟಪಡ್ತಿದ್ದಾಳೆ” ಅಂತ ಜೋರಾಗಿ ಅಳ್ತಾ ಹೇಳಿದಳು.+
23 ಆದ್ರೆ ಯೇಸು ಅವಳಿಗೆ ಏನೂ ಹೇಳಿಲ್ಲ. ಆತನ ಶಿಷ್ಯರು ಬಂದು “ಅವಳು ಕಿರಿಚ್ತಾ ಹಿಂದೆನೇ ಬರ್ತಿದ್ದಾಳೆ. ಅವಳಿಗೆ ಹೋಗೋಕೆ ಹೇಳು” ಅಂತ ಬೇಡ್ಕೊಂಡ್ರು.
24 ಅದಕ್ಕೆ ಯೇಸು ಶಿಷ್ಯರಿಗೆ “ದೇವರು ನನ್ನನ್ನ ಇಸ್ರಾಯೇಲ್ಯರ ಹತ್ರ ಮಾತ್ರ ಕಳಿಸಿದ್ದಾನೆ. ಅವರು ದಾರಿತಪ್ಪಿದ ಕುರಿಗಳ ಹಾಗೆ ಇದ್ದಾರೆ” ಅಂದನು.+
25 ಆದ್ರೆ ಆ ಸ್ತ್ರೀ ಯೇಸು ಹತ್ರ ಬಂದು ಬಗ್ಗಿ ನಮಸ್ಕರಿಸಿ “ಸ್ವಾಮಿ, ನನಗೆ ಸಹಾಯಮಾಡು” ಅಂತ ಕೇಳ್ಕೊಂಡಳು.
26 ಅದಕ್ಕೆ ಯೇಸು “ಮಕ್ಕಳಿಗೆ ಕೊಡೋ ರೊಟ್ಟಿನ ನಾಯಿಮರಿಗಳಿಗೆ ಹಾಕೋದು ಸರಿಯಲ್ಲ” ಅಂದನು.
27 ಆಗ ಅವಳು “ಸ್ವಾಮಿ, ಅದು ನಿಜ. ಆದ್ರೆ ನಾಯಿಮರಿ ಯಜಮಾನನ ಮೇಜಿನಿಂದ ಬೀಳೋ ರೊಟ್ಟಿ ತುಂಡನ್ನ ತಿನ್ನುತ್ತಲ್ವಾ” ಅಂದಳು.+
28 ಅದಕ್ಕೆ ಯೇಸು “ನಿಂಗೆ ತುಂಬ ನಂಬಿಕೆ ಇದೆ. ನಿನ್ನ ಇಷ್ಟದಂತೆ ಆಗಲಿ” ಅಂದನು. ತಕ್ಷಣ ಅವಳ ಮಗಳು ವಾಸಿಯಾದಳು.
29 ಯೇಸು ಅಲ್ಲಿಂದ ಗಲಿಲಾಯ ಸಮುದ್ರದ ಹತ್ರ ಬಂದನು.+ ಆಮೇಲೆ ಬೆಟ್ಟದ ಮೇಲೆ ಹೋಗಿ ಕೂತನು.
30 ಆಗ ತುಂಬಾ ಜನ ಆತನ ಹತ್ರ ಕುಂಟರನ್ನ, ಅಂಗವಿಕಲರನ್ನ, ಕುರುಡರನ್ನ, ಮೂಕರನ್ನ, ಬೇರೆ ಕಾಯಿಲೆ ಇದ್ದವರನ್ನ ಕರ್ಕೊಂಡು ಬಂದು ಯೇಸುವಿನ ಕಾಲಕೆಳಗೆ ಮಲಗಿಸಿದ್ರು. ಯೇಸು ಅವ್ರನ್ನೆಲ್ಲ ವಾಸಿಮಾಡಿದನು.+
31 ಕುರುಡರು ನೋಡೋದನ್ನ, ಮೂಕರು ಮಾತಾಡೋದನ್ನ, ಕುಂಟರು ನಡಿಯೋದನ್ನ ಜನ್ರು ನೋಡಿ ಆಶ್ಚರ್ಯಪಟ್ರು. ಇಸ್ರಾಯೇಲ್ಯರ ದೇವರನ್ನ ಹೊಗಳಿದ್ರು.+
32 ಯೇಸು ಶಿಷ್ಯರನ್ನ ಕರೆದು “ಈ ಜನ್ರನ್ನ ನೋಡಿ ನನಗೆ ಅಯ್ಯೋ ಪಾಪ ಅನಿಸ್ತಿದೆ.+ ಅವರು ಮೂರು ದಿನದಿಂದ ನನ್ನ ಜೊತೆನೇ ಇದ್ದಾರೆ. ಅವ್ರ ಹತ್ರ ತಿನ್ನೋಕೇನೂ ಇಲ್ಲ. ಅವ್ರಿಗೆ ಏನೂ ಕೊಡದೆ ಹಾಗೇ ಕಳಿಸೋಕೂ ನಂಗೆ ಮನಸ್ಸಿಲ್ಲ. ಯಾಕಂದ್ರೆ ಅವರು ದಾರಿಯಲ್ಲಿ ತಲೆಸುತ್ತಿ ಬೀಳಬಹುದು” ಅಂದನು.+
33 ಆಗ ಶಿಷ್ಯರು ಯೇಸುಗೆ “ನಾವು ತುಂಬ ದೂರ ಬಂದಿದ್ದೀವಿ. ಇವ್ರಿಗೆಲ್ಲ ಸಾಕಾಗುವಷ್ಟು ರೊಟ್ಟಿ ಎಲ್ಲಿಂದ ತರೋದು?” ಅಂತ ಕೇಳಿದ್ರು.+
34 ಯೇಸು “ನಿಮ್ಮ ಹತ್ರ ಎಷ್ಟು ರೊಟ್ಟಿ ಇದೆ?” ಅಂತ ಕೇಳಿದನು. ಅವರು “ಏಳು ರೊಟ್ಟಿ ಮತ್ತು ಸ್ವಲ್ಪ ಚಿಕ್ಕಪುಟ್ಟ ಮೀನು ಇದೆ” ಅಂದ್ರು.
35 ಆತನು ಜನ್ರಿಗೆ ನೆಲದ ಮೇಲೆ ಕೂರೋಕೆ ಹೇಳಿ
36 ಆ ಏಳು ರೊಟ್ಟಿ ಮತ್ತು ಮೀನು ತಗೊಂಡು ದೇವರಿಗೆ ಧನ್ಯವಾದ ಹೇಳಿದನು. ಆಮೇಲೆ ಅದನ್ನ ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅದನ್ನ ಜನ್ರಿಗೆ ಹಂಚಿದ್ರು.+
37 ಎಲ್ರಿಗೂ ತಿಂದು ತೃಪ್ತಿ ಆಯ್ತು. ಉಳಿದ ರೊಟ್ಟಿ ತುಂಡುಗಳನ್ನ ಕೂಡಿಸಿದಾಗ ಏಳು ಬುಟ್ಟಿ ತುಂಬ್ತು.+
38 ಊಟ ಮಾಡಿದವ್ರಲ್ಲಿ ಗಂಡಸರೇ ಸುಮಾರು 4,000 ಇದ್ರು. ಅಲ್ಲದೆ ಹೆಂಗಸ್ರು ಮತ್ತು ಮಕ್ಕಳೂ ಇದ್ರು.
39 ಕೊನೆಗೆ ಯೇಸು ಜನ್ರನ್ನೆಲ್ಲ ಕಳಿಸಿ ದೋಣಿ ಹತ್ತಿ ಮಗದಾನ ಪ್ರದೇಶಕ್ಕೆ ಹೋದನು.+
ಪಾದಟಿಪ್ಪಣಿ
^ ಅವರು ಕೈಯಲ್ಲಿದ್ದ ಕೊಳೆಯನ್ನ ತೊಳ್ಕೊಂಡಿಲ್ಲ ಅಂತಲ್ಲ, ಬದಲಿಗೆ ಯೆಹೂದಿ ಸಂಪ್ರದಾಯದ ಪ್ರಕಾರ ತಮ್ಮ ಕೈ ತೊಳಿಲಿಲ್ಲ ಅಂತ ಅದ್ರರ್ಥ.
^ ಅಥವಾ “ಅಪ್ಪಅಮ್ಮನ ಬಗ್ಗೆ ಕೆಟ್ಟದಾಗಿ ಮಾತಾಡುವವನನ್ನ.”