ಮತ್ತಾಯ 19:1-30
19 ಯೇಸು ಇದನ್ನೆಲ್ಲ ಹೇಳಿದ ಮೇಲೆ ಗಲಿಲಾಯ ಬಿಟ್ಟು ಯೋರ್ದನ್ ನದಿ ಆಕಡೆ ಇದ್ದ ಯೂದಾಯದ ಗಡಿಪ್ರದೇಶಕ್ಕೆ ಬಂದನು.+
2 ತುಂಬ ಜನ ಆತನ ಹಿಂದೆ ಹೋದ್ರು. ಅಲ್ಲಿ ಯೇಸು ಜನ್ರ ಕಾಯಿಲೆಗಳನ್ನ ವಾಸಿಮಾಡಿದನು.
3 ಆಗ ಫರಿಸಾಯರು ಯೇಸುನ ಪರೀಕ್ಷಿಸೋಕೆ “ಒಬ್ಬ ವ್ಯಕ್ತಿ ಯಾವ ಕಾರಣಕ್ಕೆ ಬೇಕಾದ್ರೂ ಹೆಂಡತಿಗೆ ವಿಚ್ಛೇದನ ಕೊಡಬಹುದಾ?”+ ಅಂತ ಕೇಳಿದ್ರು.
4 ಯೇಸು ಅವ್ರಿಗೆ “ನೀವು ಇದನ್ನ ಓದಿಲ್ವಾ? ದೇವರು ಆರಂಭದಲ್ಲಿ ಗಂಡು ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದಾಗ್ಲೇ+ ಅವ್ರಿಗೆ
5 ಹೀಗಂದನು ‘ಅದಕ್ಕೇ ಒಬ್ಬ ಪುರುಷ ಅಪ್ಪಅಮ್ಮನನ್ನ ಬಿಟ್ಟು ತನ್ನ ಹೆಂಡತಿ ಜೊತೆ ಇರ್ತಾನೆ.* ಅವರಿಬ್ರು ಒಂದೇ ದೇಹ ಆಗ್ತಾರೆ.’+
6 ಹಾಗಾಗಿ ಅವರು ಇನ್ನು ಮುಂದೆ ಇಬ್ರಲ್ಲ, ಒಂದೇ ಶರೀರ. ಹಾಗಾಗಿ ದೇವರು ಒಂದು ಮಾಡಿದ್ದನ್ನ ಯಾವ ಮನುಷ್ಯನೂ ದೂರ ಮಾಡಬಾರದು”+ ಅಂದನು.
7 ಅವರು ಯೇಸುಗೆ “ಆದ್ರೆ ವಿಚ್ಛೇದನ ಪತ್ರ ಕೊಟ್ಟು ಹೆಂಡತಿನ ಕಳಿಸಿಬಿಡೋಕೆ ಮೋಶೆ ಯಾಕೆ ಹೇಳಿದ?”+ ಅಂತ ಕೇಳಿದ್ರು.
8 ಅದಕ್ಕೆ ಆತನು “ನಿಮ್ಮ ಮೊಂಡು ಹೃದಯ ನೋಡಿ ಹೆಂಡತಿಗೆ ವಿಚ್ಛೇದನ ಕೊಡೋಕೆ ಮೋಶೆ ಅನುಮತಿ ಕೊಟ್ಟ.+ ಆದ್ರೆ ದೇವರು ಮೊದಲ ಪುರುಷ ಸ್ತ್ರೀಯನ್ನ ಸೃಷ್ಟಿ ಮಾಡಿದಾಗ ಹಾಗಿರಲಿಲ್ಲ.+
9 ಲೈಂಗಿಕ ಅನೈತಿಕತೆ* ಕಾರಣ ಬಿಟ್ಟು ಬೇರೆ ಯಾವುದೇ ಕಾರಣಕ್ಕೆ ಹೆಂಡತಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬಳನ್ನ ಮದುವೆ ಆಗುವವನು ವ್ಯಭಿಚಾರಿ ಆಗಿದ್ದಾನೆ ಅಂತ ನಿಮಗೆ ಹೇಳ್ತೀನಿ”+ ಅಂದನು.
10 ಶಿಷ್ಯರು ಆತನಿಗೆ “ಗಂಡಹೆಂಡತಿ ಸಂಬಂಧ ಈ ತರ ಇರಬೇಕಂದ್ರೆ ಮದುವೆಯಾಗದೆ ಇರೋದೇ ಒಳ್ಳೇದು” ಅಂದ್ರು.
11 ಅದಕ್ಕೆ ಯೇಸು “ನಾನು ಹೇಳೋದನ್ನ ಎಲ್ರಿಗೂ ಮಾಡೋಕಾಗಲ್ಲ. ದೇವರ ಸಹಾಯ ಇದ್ರೆ* ಮಾತ್ರ ಮಾಡೋಕಾಗುತ್ತೆ.+
12 ಕೆಲವ್ರಿಗೆ ಹುಟ್ಟಿಂದಾನೇ ಸಮಸ್ಯೆ ಇರೋದ್ರಿಂದ ಮದುವೆಯಾಗಲ್ಲ. ಇನ್ನು ಕೆಲವ್ರಿಗೆ ಮದುವೆ ಮಾಡ್ಕೊಳ್ಳೋಕೆ ಆಗದ ಹಾಗೆ ಮನುಷ್ಯರೇ ಮಾಡಿಬಿಡ್ತಾರೆ. ಆದ್ರೆ ಇನ್ನು ಕೆಲವರು ದೇವರ ಆಳ್ವಿಕೆಗಾಗಿ ಮದುವೆ ಮಾಡ್ಕೊಳ್ಳದೇ ಇರ್ತಾರೆ. ಈ ತರ ಇರಕ್ಕಾಗೋರು ಇರಿ”+ ಅಂದನು.
13 ಆಮೇಲೆ ಜನ ಚಿಕ್ಕ ಮಕ್ಕಳನ್ನ ಯೇಸು ಹತ್ರ ಕರ್ಕೊಂಡು ಬಂದ್ರು. ಆ ಮಕ್ಕಳ ಮೇಲೆ ಯೇಸು ಕೈಯಿಟ್ಟು ಪ್ರಾರ್ಥನೆ ಮಾಡಬೇಕು ಅಂತ ಅವರು ಬಯಸಿದ್ರು. ಆದ್ರೆ ಶಿಷ್ಯರು ಅವ್ರಿಗೆ ಬೈದ್ರು.+
14 ಆಗ ಯೇಸು “ಆ ಚಿಕ್ಕ ಮಕ್ಕಳನ್ನ ತಡಿಬೇಡಿ, ಅವರು ನನ್ನ ಹತ್ರ ಬರ್ಲಿ. ಈ ಚಿಕ್ಕ ಮಕ್ಕಳ ತರ ಇರೋರೇ ದೇವರ ಆಳ್ವಿಕೆಯಲ್ಲಿ ಇರ್ತಾರೆ”+ ಅಂದನು.
15 ಆಮೇಲೆ ಯೇಸು ಆ ಮಕ್ಕಳಿಗೆ ಆಶೀರ್ವಾದ ಮಾಡಿ ಅಲ್ಲಿಂದ ಹೋದನು.
16 ಆಗ ಯೇಸು ಹತ್ರ ಒಬ್ಬ ಬಂದು “ಗುರು, ನನಗೆ ಶಾಶ್ವತ ಜೀವ ಸಿಗಬೇಕಾದ್ರೆ ಯಾವ ಒಳ್ಳೇ ಕೆಲಸ ಮಾಡಬೇಕು?”+ ಅಂತ ಕೇಳಿದ.
17 ಅದಕ್ಕೆ ಯೇಸು “ಯಾವುದು ಒಳ್ಳೇ ಕೆಲಸ ಅಂತ ನನ್ನನ್ನ ಯಾಕೆ ಕೇಳ್ತಿದ್ದೀಯ? ದೇವರನ್ನ ಬಿಟ್ಟು ಬೇರೆ ಯಾರೂ ಒಳ್ಳೆಯವ್ರಲ್ಲ.+ ನಿನಗೆ ಶಾಶ್ವತ ಜೀವ ಬೇಕಂದ್ರೆ ದೇವರ ಆಜ್ಞೆಗಳನ್ನ ಪಾಲಿಸ್ತಾ ಇರು”+ ಅಂದನು.
18 ಅವನು “ಯಾವ ಆಜ್ಞೆಗಳನ್ನ?” ಅಂತ ಕೇಳಿದಾಗ ಯೇಸು “ನೀನು ಕೊಲೆ ಮಾಡಬಾರದು,+ ವ್ಯಭಿಚಾರ ಮಾಡಬಾರದು,+ ಕದಿಬಾರದು,+ ಸುಳ್ಳುಸಾಕ್ಷಿ ಹೇಳಬಾರದು,+
19 ಅಪ್ಪಅಮ್ಮಗೆ ಗೌರವ ಕೊಡಬೇಕು.+ ನಿನ್ನನ್ನ ನೀನು ಪ್ರೀತಿಸೋ ತರ ಬೇರೆಯವರನ್ನ ಪ್ರೀತಿಸಬೇಕು”+ ಅಂದನು.
20 ಆ ಯುವಕ “ನಾನು ಇದನ್ನೆಲ್ಲ ಪಾಲಿಸ್ತಾ ಇದ್ದೀನಿ. ನನ್ನಲ್ಲಿ ಇನ್ನೇನಾದ್ರೂ ಕೊರತೆ ಇದ್ಯಾ?” ಅಂತ ಕೇಳಿದ.
21 ಯೇಸು ಅವನಿಗೆ “ನಿನ್ನಲ್ಲಿ ಯಾವುದೇ ಕೊರತೆ ಇರಬಾರ್ದು ಅಂತಿದ್ರೆ ಹೋಗಿ ನಿನ್ನ ಆಸ್ತಿಯನ್ನೆಲ್ಲ ಮಾರಿ ಬಡವ್ರಿಗೆ ಕೊಡು. ಆಗ ಸ್ವರ್ಗದಲ್ಲಿ ನಿನಗೆ ಆಸ್ತಿ ಸಿಗುತ್ತೆ.+ ಆಮೇಲೆ ಬಂದು ನನ್ನ ಶಿಷ್ಯನಾಗು”+ ಅಂದನು.
22 ಈ ಮಾತು ಕೇಳಿ ಆ ಯುವಕ ದುಃಖದಿಂದ ಹೊರಟು ಹೋದ. ಯಾಕಂದ್ರೆ ಅವನ ಹತ್ರ ತುಂಬ ಆಸ್ತಿ ಇತ್ತು.+
23 ಆಗ ಯೇಸು ಶಿಷ್ಯರಿಗೆ ಹೀಗೆ ಹೇಳಿದನು “ನಿಮಗೆ ನಿಜ ಹೇಳ್ತೀನಿ, ದೇವರ ಆಳ್ವಿಕೆಯಲ್ಲಿ ಇರೋದು ಶ್ರೀಮಂತನಿಗೆ ತುಂಬ ಕಷ್ಟ.+
24 ನಿಮಗೆ ಮತ್ತೆ ಹೇಳ್ತೀನಿ, ಒಂದು ಒಂಟೆ ಸೂಜಿಯ ತೂತಲ್ಲಿ ಹೋಗೋದು ಸುಲಭ. ಆದ್ರೆ ಒಬ್ಬ ಶ್ರೀಮಂತ ದೇವರ ಆಳ್ವಿಕೆಯಲ್ಲಿ ಇರೋದು ತುಂಬ ಕಷ್ಟ.”+
25 ಶಿಷ್ಯರು ಇದಕ್ಕೆ ಆಶ್ಚರ್ಯದಿಂದ “ಹಾಗಾದ್ರೆ ಯಾರಿಗೆ ತಾನೇ ರಕ್ಷಣೆ ಸಿಗೋಕೆ ಸಾಧ್ಯ?”+ ಅಂತ ಕೇಳಿದ್ರು.
26 ಯೇಸು ಅವ್ರನ್ನೇ ನೋಡ್ತಾ “ಮನುಷ್ಯರಿಂದ ಇದು ಅಸಾಧ್ಯ. ಆದ್ರೆ ದೇವರಿಗೆ ಎಲ್ಲಾ ಸಾಧ್ಯ”+ ಅಂದನು.
27 ಆಗ ಪೇತ್ರ “ಗುರು, ನಾವು ಎಲ್ಲ ಬಿಟ್ಟು ನಿನ್ನ ಹಿಂದೆ ಬಂದಿದ್ದೀವಿ. ನಮಗೇನು ಸಿಗುತ್ತೆ?”+ ಅಂದ.
28 ಆಗ ಯೇಸು ಶಿಷ್ಯರಿಗೆ “ನಿಮಗೆ ನಿಜ ಹೇಳ್ತೀನಿ, ಎಲ್ಲವನ್ನ ಹೊಸದು ಮಾಡಿ ಮನುಷ್ಯಕುಮಾರ ರಾಜನಾಗಿ ಸಿಂಹಾಸನದಲ್ಲಿ ಕೂತ್ಕೊಳ್ಳೋವಾಗ ನನ್ನನ್ನ ಹಿಂಬಾಲಿಸಿದ ನೀವು ಸಹ 12 ಸಿಂಹಾಸನಗಳಲ್ಲಿ ಕೂತು ಇಸ್ರಾಯೇಲಿನ 12 ಕುಲಗಳಿಗೆ ತೀರ್ಪು ಮಾಡ್ತೀರ.+
29 ನನ್ನ ಶಿಷ್ಯರಾಗಿರೋ ಕಾರಣ ಮನೆ, ಅಣ್ಣತಮ್ಮ, ಅಕ್ಕತಂಗಿ, ಅಪ್ಪಅಮ್ಮ, ಮಕ್ಕಳು, ಹೊಲಗದ್ದೆನಾ ಬಿಟ್ಟುಬಂದವನಿಗೆ ಇದೆಲ್ಲ ನೂರು ಪಟ್ಟು ಹೆಚ್ಚು ಸಿಗುತ್ತೆ. ಅಷ್ಟೇ ಅಲ್ಲ ಶಾಶ್ವತ ಜೀವನೂ ಸಿಗುತ್ತೆ.+
30 ಆದ್ರೆ ಮುಂದೆ ಇರೋ ತುಂಬ ಜನ ಹಿಂದೆ ಹೋಗ್ತಾರೆ. ಹಿಂದೆ ಇರೋ ತುಂಬ ಜನ ಮುಂದೆ ಬರ್ತಾರೆ.+
ಪಾದಟಿಪ್ಪಣಿ
^ ಅಥವಾ “ವರ ಸಿಕ್ಕಿದ್ರೆ.”