ಮತ್ತಾಯ 22:1-46
22 ಯೇಸು ಮತ್ತೆ ಉದಾಹರಣೆ ಬಳಸಿ ಹೀಗೆ ಹೇಳಿದನು
2 “ದೇವರ ಆಳ್ವಿಕೆಯನ್ನ ಮಗನ ಮದುವೆ ಊಟಕ್ಕೆ+ ಜನ್ರನ್ನ ಆಮಂತ್ರಿಸ್ತಿದ್ದ ಒಬ್ಬ ರಾಜನಿಗೆ ಹೋಲಿಸಬಹುದು.
3 ಅವನು ಮದುವೆಗೆ ಜನ್ರನ್ನ ಕರ್ಕೊಂಡು ಬರೋಕೆ ತನ್ನ ಆಳುಗಳನ್ನ ಕಳಿಸಿದ. ಆದ್ರೆ ಜನ್ರಿಗೆ ಬರೋಕೆ ಇಷ್ಟ ಇರ್ಲಿಲ್ಲ.+
4 ರಾಜ ಇನ್ನೊಮ್ಮೆ ಬೇರೆ ಆಳುಗಳನ್ನ ಕರೆದು ‘ನಾನು ಯಾರನ್ನೆಲ್ಲ ಮದುವೆಗೆ ಕರೆದಿದ್ದೆನೋ ಅವ್ರ ಹತ್ರ ಹೋಗಿ “ಊಟ ತಯಾರಿದೆ. ನನ್ನ ಹತ್ರ ಇದ್ದ ದಷ್ಟಪುಷ್ಟ ಹೋರಿಗಳನ್ನ, ಪಶುಗಳನ್ನ ಕಡಿಸಿದ್ದೀನಿ. ಎಲ್ಲಾ ಸಿದ್ಧವಾಗಿದೆ. ಮದುವೆ ಊಟಕ್ಕೆ ಬನ್ನಿ” ಅಂತ ಹೇಳಿ’ ಅಂದ.
5 ಅವರು ಹೋಗಿ ಹೇಳಿದ್ರೂ ಅತಿಥಿಗಳು ಕಿವಿಗೆ ಹಾಕೊಳ್ಳಲಿಲ್ಲ. ಕೆಲವರು ಹೊಲಕ್ಕೆ ಹೋದ್ರೆ ಕೆಲವರು ವ್ಯಾಪಾರಕ್ಕೆ ಹೋದ್ರು.+
6 ಇನ್ನು ಉಳಿದವರು ಆ ಆಳುಗಳನ್ನ ಹಿಡಿದು ಬೈದು ಹೊಡೆದು ಕೊಂದುಹಾಕಿದ್ರು.
7 ಆಗ ರಾಜನಿಗೆ ತುಂಬ ಕೋಪ ಬಂತು. ಅವನು ಸೈನಿಕರನ್ನ ಕಳಿಸಿ ಆ ಕೊಲೆಗಾರರನ್ನ ಸಾಯಿಸಿ ಅವ್ರ ಪಟ್ಟಣ ಸುಟ್ಟುಹಾಕಿಸಿದ.+
8 ಆಮೇಲೆ ಆಳುಗಳಿಗೆ ‘ಮದುವೆ ಊಟ ತಯಾರಾಗಿದೆ. ಆದ್ರೆ ನಾನು ಕರೆದವರು ಯಾರೂ ಯೋಗ್ಯರಲ್ಲ.+
9 ಹಾಗಾಗಿ ನೀವು ಪಟ್ಟಣದ ಹೊರಗೆ ಹೋಗಿ ಕಣ್ಣಿಗೆ ಬಿದ್ದವ್ರನ್ನೆಲ್ಲ ಊಟಕ್ಕೆ ಕರಿರಿ’+ ಅಂದ.
10 ಆಳುಗಳು ರಾಜ ಹೇಳಿದ ಹಾಗೇ ಹೋಗಿ ಒಳ್ಳೆಯವರು ಕೆಟ್ಟವರು ಅಂತ ಯೋಚನೆ ಮಾಡದೆ ಕಂಡವ್ರನ್ನೆಲ್ಲ ಕರೆದ್ರು. ಮದುವೆ ಮನೆ ಅತಿಥಿಗಳಿಂದ ತುಂಬಿಹೋಯ್ತು.
11 ರಾಜ ಅತಿಥಿಗಳನ್ನ ನೋಡೋಕೆ ಬಂದ. ಆಗ ಮದುವೆ ಬಟ್ಟೆ ಹಾಕದೆ ಬಂದಿದ್ದ ಒಬ್ಬ ಕಾಣಿಸಿದ.
12 ರಾಜ ‘ಏನಯ್ಯಾ, ಮದುವೆ ಬಟ್ಟೆ ಇಲ್ಲದೆ ನೀನು ಹೇಗೆ ಒಳಗೆ ಬಂದೆ?’ ಅಂತ ಕೇಳಿದ. ಅವನು ಏನೂ ಹೇಳಲಿಲ್ಲ.
13 ಆಗ ರಾಜ ತನ್ನ ಸೇವಕರಿಗೆ ‘ಇವನ ಕೈಕಾಲು ಕಟ್ಟಿ ಕತ್ತಲೆಗೆ ಹಾಕಿ. ಅಲ್ಲಿ ಅವನು ಗೋಳಾಡ್ತಾ, ಅಳ್ತಾ ಇರ್ತಾನೆ’ ಅಂದ.
14 ಹೀಗೆ ಕರೆದಿದ್ದು ತುಂಬ ಜನ್ರನ್ನ, ಆದ್ರೆ ಆರಿಸ್ಕೊಂಡಿದ್ದು ಸ್ವಲ್ಪ ಜನ್ರನ್ನ ಮಾತ್ರ.”
15 ಆಮೇಲೆ ಫರಿಸಾಯರು ಯೇಸುವಿನ ಮಾತಲ್ಲಿ ತಪ್ಪು ಹುಡುಕೋಕೆ ಪಿತೂರಿ ಮಾಡಿದ್ರು.+
16 ಅವರು ತಮ್ಮ ಶಿಷ್ಯರನ್ನ ಮತ್ತು ಹೆರೋದನ ಹಿಂಬಾಲಕರನ್ನ+ ಆತನ ಹತ್ರ ಕಳ್ಸಿದ್ರು. ಅವರು ಯೇಸುಗೆ “ಗುರು, ನಮಗೆ ಗೊತ್ತು, ನೀನು ಯಾವಾಗ್ಲೂ ಸತ್ಯನೇ ಹೇಳ್ತೀಯ, ದೇವರ ಮಾರ್ಗದ ಬಗ್ಗೆ ಸತ್ಯನೇ ಕಲಿಸ್ತೀಯ. ನೀನು ಜನ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡಲ್ಲ. ಯಾಕಂದ್ರೆ ನೀನು ಮನುಷ್ಯರ ಸ್ಥಾನಮಾನ ನೋಡಲ್ಲ.
17 ಅದಕ್ಕೇ ನಿನಗೆ ಕೇಳ್ತಿದ್ದೀವಿ. ರಾಜನಿಗೆ ತೆರಿಗೆ ಕೊಡೋದು ಸರಿನಾ? ನಿನ್ನ ಅಭಿಪ್ರಾಯ ಏನು?” ಅಂತ ಕೇಳಿದ್ರು.
18 ಅವ್ರ ಕುತಂತ್ರದ ಬಗ್ಗೆ ಯೇಸುಗೆ ಗೊತ್ತಿತ್ತು. ಹಾಗಾಗಿ “ಕಪಟಿಗಳೇ, ನೀವು ಯಾಕೆ ನನ್ನನ್ನ ಪರೀಕ್ಷಿಸ್ತೀರಾ?
19 ತೆರಿಗೆ ಕಟ್ಟೋ ಆ ನಾಣ್ಯ ತೋರಿಸಿ” ಅಂದನು. ಅವರು ಒಂದು ದಿನಾರು ನಾಣ್ಯ ಕೊಟ್ರು.
20 ಆಗ ಯೇಸು “ಇದ್ರ ಮೇಲಿರೋ ಚಿತ್ರ, ಹೆಸ್ರು ಯಾರ್ದು?” ಅಂತ ಕೇಳಿದನು.
21 ಅವರು “ರಾಜಂದು” ಅಂದ್ರು. ಆಗ ಯೇಸು “ಹಾಗಾದ್ರೆ ರಾಜಂದು ರಾಜನಿಗೆ ಕೊಡಿ, ದೇವರದ್ದು ದೇವ್ರಿಗೆ ಕೊಡಿ”+ ಅಂದ.
22 ಇದನ್ನ ಕೇಳಿ ಅವ್ರಿಗೆ ಆಶ್ಚರ್ಯ ಆಯ್ತು. ಅವರು ಯೇಸುನ ಬಿಟ್ಟುಹೋದ್ರು.
23 ಸತ್ತವರು ಮತ್ತೆ ಬದುಕಿ ಬರಲ್ಲ ಅಂತ ಹೇಳೋ ಸದ್ದುಕಾಯರು+ ಅದೇ ದಿನ ಆತನ ಹತ್ರ ಬಂದು+
24 “ಗುರು, ‘ಒಬ್ಬ ವ್ಯಕ್ತಿ ಮಕ್ಕಳಿಲ್ಲದೆ ಸತ್ರೆ ಅವನ ಹೆಂಡತಿನ ಅವನ ತಮ್ಮ ಮದುವೆ ಮಾಡ್ಕೊಂಡು ಅಣ್ಣನಿಗೋಸ್ಕರ ಮಕ್ಕಳು ಮಾಡ್ಕೋಬೇಕು’+ ಅಂತ ಮೋಶೆ ಹೇಳಿದ.
25 ನಮ್ಮ ಊರಲ್ಲಿ ಏಳು ಅಣ್ಣತಮ್ಮಂದಿರು ಇದ್ರು. ಮೊದಲನೆಯವನು ಮದುವೆಯಾಗಿ ಸತ್ತುಹೋದ. ಅವನಿಗೆ ಮಕ್ಕಳು ಇರಲಿಲ್ಲ. ಹಾಗಾಗಿ ಅವನ ಹೆಂಡತಿನ ಅವನ ತಮ್ಮ ಮದುವೆಯಾದ.
26 ಎರಡನೆಯವನಿಗೂ ಮೂರನೆಯವನಿಗೂ ಏಳನೆಯವನ ತನಕ ಎಲ್ರಿಗೂ ಹೀಗೇ ಆಯ್ತು.
27 ಕೊನೆಗೆ ಅವಳೂ ಸತ್ತುಹೋದಳು.
28 ಹಾಗಾದ್ರೆ ಸತ್ತವರೆಲ್ಲ ಮತ್ತೆ ಬದುಕುವಾಗ ಅವಳು ಆ ಏಳು ಮಂದಿಯಲ್ಲಿ ಯಾರಿಗೆ ಹೆಂಡತಿ ಆಗಿರ್ತಾಳೆ? ಏಳೂ ಮಂದಿ ಅವಳನ್ನ ಮದುವೆ ಮಾಡ್ಕೊಂಡ್ರಲ್ಲಾ?” ಅಂದ್ರು.
29 ಅದಕ್ಕೆ ಯೇಸು “ನೀವು ತಪ್ಪಾಗಿ ಅರ್ಥ ಮಾಡ್ಕೊಂಡಿದ್ದೀರ. ಪವಿತ್ರ ಗ್ರಂಥದಲ್ಲಿ ಇರೋ ವಿಷ್ಯಗಳಾಗಲಿ ದೇವರ ಶಕ್ತಿ ಬಗ್ಗೆಯಾಗಲಿ ನಿಮಗೆ ಗೊತ್ತಿಲ್ಲ.+
30 ಸತ್ತವರು ಬದುಕಿ ಬಂದಾಗ ಸ್ತ್ರೀಯರಾಗಲಿ ಪುರುಷರಾಗಲಿ ಮದುವೆ ಆಗಲ್ಲ. ಅವರು ಸ್ವರ್ಗದಲ್ಲಿರೋ ದೇವದೂತರ ತರ ಇರ್ತಾರೆ.+
31 ಆದ್ರೆ ಸತ್ತವರು ಬದುಕೋದ್ರ ಬಗ್ಗೆ ದೇವರು ಹೇಳಿದ್ದನ್ನ ನೀವು ಓದಿಲ್ವಾ?
32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’+ ಅಂತ ಆತನು ಹೇಳಿದನು. ಆತನು ಸತ್ತವರಿಗಲ್ಲ, ಬದುಕಿರೋರಿಗೆ ದೇವರಾಗಿದ್ದಾನೆ”+ ಅಂದನು.
33 ಯೇಸು ಕಲಿಸೋ ವಿಧ ಕೇಳಿ ಜನ್ರಿಗೆ ತುಂಬ ಆಶ್ಚರ್ಯ ಆಯ್ತು.+
34 ಆತನು ಸದ್ದುಕಾಯರ ಬಾಯಿ ಮುಚ್ಚಿಸಿದ ಅಂತ ಫರಿಸಾಯರು ಕೇಳಿಸ್ಕೊಂಡು ಗುಂಪಾಗಿ ಬಂದ್ರು.
35 ಅವ್ರಲ್ಲಿ ನಿಯಮ ಪುಸ್ತಕವನ್ನ ಚೆನ್ನಾಗಿ ಅರೆದು ಕುಡಿದಿದ್ದ ಒಬ್ಬ ಯೇಸುವನ್ನ ಪರೀಕ್ಷಿಸೋಕೆ,
36 “ಗುರು, ನಿಯಮ ಪುಸ್ತಕದಲ್ಲಿ ಪ್ರಾಮುಖ್ಯ ಆಜ್ಞೆ ಯಾವುದು?”+ ಅಂತ ಕೇಳಿದ.
37 ಅದಕ್ಕೆ ಆತನು “‘ನಿನ್ನ ದೇವರಾದ ಯೆಹೋವನನ್ನ* ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು.’+
38 ಇದೇ ಪ್ರಾಮುಖ್ಯವಾದ ಮತ್ತು ಮೊದಲು ಪಾಲಿಸಬೇಕಾದ ಆಜ್ಞೆ.
39 ಇದೇ ತರ ಎರಡನೇ ಆಜ್ಞೆ ‘ನೀನು ನಿನ್ನನ್ನ ಪ್ರೀತಿಸೋ ತರ ಬೇರೆಯವ್ರನ್ನೂ ಪ್ರೀತಿಸಬೇಕು.’+
40 ಈ ಎರಡು ಆಜ್ಞೆಗಳ ಮೇಲೆನೇ ಇಡೀ ನಿಯಮ ಪುಸ್ತಕ ಮತ್ತು ಪ್ರವಾದಿಗಳ ಮಾತು ಆಧರಿಸಿದೆ”+ ಅಂದನು.
41 ಫರಿಸಾಯರು ಇನ್ನೂ ಅಲ್ಲೇ ಇದ್ದಾಗ ಯೇಸು ಅವ್ರ ಹತ್ರ+
42 “ಕ್ರಿಸ್ತನ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅವನು ಯಾರ ಮಗ?” ಅಂತ ಕೇಳಿದನು. ಅದಕ್ಕೆ “ದಾವೀದನ ಮಗ”+ ಅಂದ್ರು.
43 ಆಗ ಯೇಸು “ಹಾಗಿದ್ರೆ ದಾವೀದ ಪವಿತ್ರಶಕ್ತಿಯ ಸಹಾಯದಿಂದ+ ಯಾಕೆ ಅವನನ್ನ ‘ಒಡೆಯ’ ಅಂತ ಕರೆದ? ಅವನು ಹೀಗೆ ಹೇಳಿದ
44 ‘ಯೆಹೋವ* ನನ್ನ ಒಡೆಯನಿಗೆ “ನಿನ್ನ ಶತ್ರುಗಳನ್ನ ನಾನು ನಿನ್ನ ಕಾಲಿನ ಕೆಳಗೆ ಹಾಕೋ ತನಕ ನೀನು ನನ್ನ ಬಲಗಡೆಯಲ್ಲಿ ಕೂತ್ಕೊ.”’+
45 ಇಲ್ಲಿ ದಾವೀದ ಕ್ರಿಸ್ತನನ್ನ ‘ಒಡೆಯ’ ಅಂತಿದ್ದಾನಲ್ಲಾ, ಹಾಗಿರುವಾಗ ಕ್ರಿಸ್ತ ದಾವೀದನ ಮಗ ಹೇಗೆ ಆಗ್ತಾನೆ?”+ ಅಂತ ಕೇಳಿದ.
46 ಆತನ ಈ ಪ್ರಶ್ನೆಗೆ ಒಬ್ರಿಂದಾನೂ ಉತ್ರ ಕೊಡೋಕೆ ಆಗಲಿಲ್ಲ. ಅವತ್ತಿಂದ ಯಾರೂ ಆತನಿಗೆ ಪ್ರಶ್ನೆ ಕೇಳೋ ಸಾಹಸ ಮಾಡಲಿಲ್ಲ.