ಮತ್ತಾಯ 25:1-46

  • ಕ್ರಿಸ್ತ ಬರೋ ಕಾಲದ ಸೂಚನೆ (1-46)

    • 10 ಕನ್ಯೆಯರ ಉದಾಹರಣೆ (1-13)

    • ತಲಾಂತುಗಳ ಉದಾಹರಣೆ (14-30)

    • ಕುರಿಗಳು ಮತ್ತು ಆಡುಗಳು (31-46)

25  ದೀಪಗಳನ್ನ ತಗೊಂಡು+ ಮದುಮಗನನ್ನ ಭೇಟಿಮಾಡೋಕೆ ಹೋದ ಹತ್ತು ಕನ್ಯೆಯರಿಗೆ+ ದೇವರ ಆಳ್ವಿಕೆಯನ್ನ ಹೋಲಿಸಬಹುದು.  ಅವ್ರಲ್ಲಿ ಐದು ಕನ್ಯೆಯರು ಮೂರ್ಖರಾಗಿದ್ರು. ಐದು ಕನ್ಯೆಯರು ಬುದ್ಧಿವಂತರಾಗಿದ್ರು.+  ಮೂರ್ಖ ಕನ್ಯೆಯರು ದೀಪಗಳನ್ನ ತಗೊಂಡು ಹೋದ್ರು. ಆದ್ರೆ ಎಣ್ಣೆ ತಗೊಂಡು ಹೋಗಲಿಲ್ಲ.  ಬುದ್ಧಿವಂತ ಕನ್ಯೆಯರು ದೀಪದ ಜೊತೆ ಎಣ್ಣೆನೂ ತಗೊಂಡು ಹೋದ್ರು.  ಮದುಮಗ ಬರೋಕೆ ತಡವಾದಾಗ ಎಲ್ರೂ ತೂಕಡಿಸಿ ನಿದ್ದೆಹೋದ್ರು.  ಮಧ್ಯರಾತ್ರಿ ‘ಮದುಮಗ ಬರ್ತಿದ್ದಾನೆ! ಹೊರಗೆ ಹೋಗಿ ಅವನನ್ನ ಭೇಟಿಮಾಡಿ’ ಅನ್ನೋ ಕೂಗು ಕೇಳಿಸ್ತು.  ಆಗ ಎಲ್ಲ ಕನ್ಯೆಯರು ಎದ್ದು ದೀಪಗಳನ್ನ ಸಿದ್ಧ ಮಾಡ್ಕೊಳ್ಳೋಕೆ ಶುರುಮಾಡಿದ್ರು.+  ಮೂರ್ಖ ಕನ್ಯೆಯರು ಬುದ್ಧಿವಂತ ಕನ್ಯೆಯರಿಗೆ ‘ನಮ್ಮ ದೀಪ ಆರಿಹೋಗುತ್ತೆ. ಸ್ವಲ್ಪ ಎಣ್ಣೆ ಕೊಡಿ’ ಅಂತ ಕೇಳಿದ್ರು.  ಬುದ್ಧಿವಂತ ಕನ್ಯೆಯರು ‘ನಿಮಗೆ ಕೊಟ್ರೆ ನಮಗೂ ಸಾಕಾಗಲ್ಲ ನಿಮಗೂ ಸಾಕಾಗಲ್ಲ. ನೀವೇ ಅಂಗಡಿಗೆ ಹೋಗಿ ತಗೊಂಡು ಬನ್ನಿ’ ಅಂದ್ರು. 10  ಅವರು ತಗೊಂಡು ಬರೋಕೆ ಹೋದಾಗ ಮದುಮಗ ಬಂದ. ಸಿದ್ಧರಾಗಿದ್ದ ಕನ್ಯೆಯರು ಅವನ ಜೊತೆ ಒಳಗೆ ಮದುವೆ ಊಟಕ್ಕೆ ಹೋದ್ರು.+ ಬಾಗಿಲನ್ನ ಮುಚ್ಚಿಬಿಟ್ರು. 11  ಆಮೇಲೆ ಮೂರ್ಖ ಕನ್ಯೆಯರು ಬಂದು ‘ಸ್ವಾಮಿ, ಸ್ವಾಮಿ, ಬಾಗಿಲು ತೆರಿ’+ ಅಂದ್ರು. 12  ಅದಕ್ಕೆ ಮದುಮಗ ‘ನೀವು ಯಾರಂತ ನಿಜವಾಗ್ಲೂ ಗೊತ್ತಿಲ್ಲ’ ಅಂದನು. 13  ಹಾಗಾಗಿ ಎಚ್ಚರವಾಗಿರಿ.+ ಯಾಕಂದ್ರೆ ಆ ದಿನ, ಆ ಸಮಯ ನಿಮಗೆ ಗೊತ್ತಿಲ್ಲ.+ 14  ದೇವರ ಆಳ್ವಿಕೆಯನ್ನ ವಿದೇಶಕ್ಕೆ ಹೋಗಬೇಕಂತಿದ್ದ ಒಬ್ಬ ವ್ಯಕ್ತಿಗೆ ಹೋಲಿಸಬಹುದು. ಅವನು ಹೋಗೋಕ್ಕಿಂತ ಮುಂಚೆ ಸೇವಕರನ್ನ ಕರಿಸಿ ತನ್ನ ಆಸ್ತಿಯನ್ನೆಲ್ಲ ನೋಡ್ಕೊಳ್ಳೋಕೆ ಹೇಳಿದ.+ 15  ಒಬ್ಬ ಸೇವಕನಿಗೆ ಐದು ತಲಾಂತನ್ನ, ಇನ್ನೊಬ್ಬನಿಗೆ ಎರಡು ತಲಾಂತನ್ನ, ಮತ್ತೊಬ್ಬನಿಗೆ ಒಂದು ತಲಾಂತನ್ನ ಹೀಗೆ ಅವ್ರ ಸಾಮರ್ಥ್ಯಕ್ಕೆ ತಕ್ಕಂತೆ ಕೊಟ್ಟು ವಿದೇಶಕ್ಕೆ ಹೋದ. 16  ಐದು ತಲಾಂತು ಸಿಕ್ಕವನು ತಕ್ಷಣ ಹೋಗಿ ವ್ಯಾಪಾರ ಮಾಡಿ ಇನ್ನೂ ಐದು ತಲಾಂತು ಸಂಪಾದಿಸಿದ. 17  ಅದೇ ತರ ಎರಡು ತಲಾಂತು ಸಿಕ್ಕವನು ಇನ್ನೂ ಎರಡು ತಲಾಂತು ಸಂಪಾದಿಸಿದ. 18  ಆದ್ರೆ ಒಂದು ತಲಾಂತು ಸಿಕ್ಕವನು ಹೋಗಿ ಯಜಮಾನನ ಹಣವನ್ನ ನೆಲ ಅಗೆದು ಬಚ್ಚಿಟ್ಟ. 19  ತುಂಬ ದಿನ ಆದಮೇಲೆ ಯಜಮಾನ ಬಂದು ಸೇವಕರಿಂದ ಲೆಕ್ಕ ಕೇಳಿದ.+ 20  ಆಗ ಐದು ತಲಾಂತು ಸಿಕ್ಕವನು ಮುಂದೆ ಬಂದು ಇನ್ನೂ ಐದು ತಲಾಂತನ್ನ ಕೊಟ್ಟು ‘ಯಜಮಾನ, ನೀನು ಐದು ತಲಾಂತು ಕೊಟ್ಟಿದ್ದೆ. ನಾನು ಇನ್ನೂ ಐದು ತಲಾಂತನ್ನ ಸಂಪಾದಿಸಿದ್ದೀನಿ’ ಅಂದ.+ 21  ಆಗ ಯಜಮಾನ ‘ಶಭಾಷ್‌, ನೀನು ಒಳ್ಳೇ ಆಳು, ನಂಬಿಗಸ್ತ ಆಳು! ನೀನು ಸ್ವಲ್ಪ ವಿಷ್ಯದಲ್ಲಿ ನಂಬಿಗಸ್ತನಾಗಿದ್ದೆ. ಅದಕ್ಕೆ ನಿನಗೆ ಇನ್ನು ಜಾಸ್ತಿ ವಿಷ್ಯಗಳ ಮೇಲೆ ಅಧಿಕಾರ ಕೊಡ್ತೀನಿ.+ ಬಾ, ನಿನ್ನ ಯಜಮಾನನ ಜೊತೆ ಖುಷಿಪಡು’+ ಅಂದ. 22  ಆಮೇಲೆ ಎರಡು ತಲಾಂತು ಸಿಕ್ಕವನು ಮುಂದೆ ಬಂದು ‘ಯಜಮಾನ, ನೀನು ಎರಡು ತಲಾಂತು ಕೊಟ್ಟಿದ್ದೆ. ನಾನು ಇನ್ನೂ ಎರಡು ತಲಾಂತು ಸಂಪಾದಿಸಿದ್ದೀನಿ’+ ಅಂದ. 23  ಅದಕ್ಕೆ ಯಜಮಾನ ‘ಶಭಾಷ್‌, ನೀನು ಒಳ್ಳೇ ಆಳು, ನಂಬಿಗಸ್ತ ಆಳು! ನೀನು ಸ್ವಲ್ಪ ವಿಷ್ಯದಲ್ಲಿ ನಂಬಿಗಸ್ತನಾಗಿದ್ದೆ. ಅದಕ್ಕೆ ನಾನು ನಿನಗೆ ಇನ್ನು ಜಾಸ್ತಿ ವಿಷ್ಯಗಳ ಮೇಲೆ ಅಧಿಕಾರ ಕೊಡ್ತೀನಿ. ಬಾ, ನಿನ್ನ ಯಜಮಾನನ ಜೊತೆ ಖುಷಿಪಡು’ ಅಂದ. 24  ಕೊನೆಗೆ ಒಂದು ತಲಾಂತು ಸಿಕ್ಕವನು ಮುಂದೆ ಬಂದು ‘ಯಜಮಾನ, ನೀನೊಬ್ಬ ಆಸೆಬುರುಕ. ಬಿತ್ತದೆ ಇರೋ ಜಾಗದಲ್ಲೂ ಕೊಯ್ತೀಯ. ಧಾನ್ಯ ತೂರದೆ ಇದ್ರೂ ರಾಶಿಮಾಡ್ತೀಯ ಅಂತ ನಂಗೊತ್ತಿತ್ತು.+ 25  ಅದಕ್ಕೆ ಹೆದರಿ ನೀನು ಕೊಟ್ಟ ತಲಾಂತನ್ನ ನೆಲದಲ್ಲಿ ಬಚ್ಚಿಟ್ಟೆ. ತಗೋ, ನಿಂದು ನಿನಗೆ ಕೊಡ್ತಾ ಇದ್ದೀನಿ’ ಅಂದ. 26  ಅದಕ್ಕೆ ಯಜಮಾನ ಅವನಿಗೆ ‘ಅಯೋಗ್ಯ, ಸೋಮಾರಿ ನೀನು. ನಾನು ಬಿತ್ತದಿದ್ರೂ ಕೊಯ್ಯುವವನು ತೂರದಿದ್ರೂ ರಾಶಿ ಮಾಡುವವನು ಅಂತ ನಿನಗೆ ಗೊತ್ತಿತ್ತಲ್ವಾ? 27  ಅಂದಮೇಲೆ ನೀನು ವ್ಯಾಪಾರಿಗಳ ಹತ್ರ ನನ್ನ ಹಣ ಜಮಾ ಮಾಡಬೇಕಿತ್ತು. ನಾನು ಬಂದಾಗ ನನಗೆ ಅದ್ರ ಬಡ್ಡಿಯಾದ್ರೂ ಸಿಗ್ತಾ ಇತ್ತು’ ಅಂದ. 28  ಯಜಮಾನ ಸೇವಕರಿಗೆ ‘ಇವನ ಹತ್ರ ಇರೋ ಆ ತಲಾಂತನ್ನ ತಗೊಂಡು ಹತ್ತು ತಲಾಂತು ಇರುವವನಿಗೆ ಕೊಡಿ.+ 29  ಯಾಕಂದ್ರೆ ಯಾರ ಹತ್ರ ಇದೆಯೋ ಅವ್ರಿಗೆ ಇನ್ನೂ ಹೆಚ್ಚು ಕೊಡಲಾಗುತ್ತೆ ಮತ್ತು ಅವ್ರ ಹತ್ರ ಸಮೃದ್ಧಿಯಾಗಿರುತ್ತೆ. ಆದ್ರೆ ಯಾರ ಹತ್ರ ಇಲ್ವೋ ಅವರಿಂದ ಇರೋದನ್ನೂ ಕಿತ್ತುಕೊಳ್ಳಲಾಗುತ್ತೆ.+ 30  ಈ ಅಯೋಗ್ಯ ಆಳನ್ನ ಹೊರಗೆ ಕತ್ತಲೆಗೆ ಹಾಕಿ. ಅಲ್ಲಿ ಅವನು ಜೋರಾಗಿ ಅಳ್ತಾ ಗೋಳಾಡಲಿ’ ಅಂದ. 31  ಮನುಷ್ಯಕುಮಾರ+ ತನ್ನ ಮಹಿಮೆಯಲ್ಲಿ ಎಲ್ಲ ದೇವದೂತರ ಜೊತೆ+ ಬಂದು ತನ್ನ ಮಹಿಮಾನ್ವಿತ ಸಿಂಹಾಸನದ ಮೇಲೆ ಕೂತ್ಕೊಳ್ತಾನೆ. 32  ಆಗ ಎಲ್ಲ ದೇಶದ ಜನ್ರನ್ನ ಆತನ ಮುಂದೆ ಒಟ್ಟು ಸೇರಿಸಲಾಗುತ್ತೆ. ಒಬ್ಬ ಕುರುಬ ಕುರಿಗಳನ್ನ ಆಡುಗಳಿಂದ ಬೇರೆ ಮಾಡೋ ತರ ಮನುಷ್ಯಕುಮಾರ ಜನ್ರನ್ನ ಎರಡು ಗುಂಪುಗಳಾಗಿ ಮಾಡ್ತಾನೆ. 33  ಆತನು ಕುರಿಗಳನ್ನ+ ತನ್ನ ಬಲಗಡೆಯಲ್ಲಿ, ಆಡುಗಳನ್ನ ಎಡಗಡೆಯಲ್ಲಿ ನಿಲ್ಲಿಸ್ತಾನೆ.+ 34  ಆಮೇಲೆ ರಾಜ ತನ್ನ ಬಲಗಡೆ ಇರೋರಿಗೆ ‘ನನ್ನ ತಂದೆಯಿಂದ ಆಶೀರ್ವಾದ ಸಿಕ್ಕವ್ರೇ ಬನ್ನಿ. ಲೋಕ ಹುಟ್ಟಿದಾಗಿಂದ ನಿಮಗಾಗಿ ಸಿದ್ಧಮಾಡ್ತಿರೋ ದೇವರ ಆಳ್ವಿಕೆಯ ಆಶೀರ್ವಾದಗಳನ್ನ ಆಸ್ತಿಯಾಗಿ ಪಡ್ಕೊಳ್ಳಿ. 35  ಯಾಕಂದ್ರೆ ನಾನು ಹಸಿದಿದ್ದಾಗ ತಿನ್ನೋಕೆ ಕೊಟ್ರಿ. ಬಾಯಾರಿಕೆ ಆದಾಗ ಕುಡಿಯೋಕೆ ಕೊಟ್ರಿ. ನಾನು ಅಪರಿಚಿತನಾಗಿದ್ರೂ ನನಗೆ ಅತಿಥಿಸತ್ಕಾರ ಮಾಡಿದ್ರಿ.+ 36  ಬಟ್ಟೆ ಇರ್ಲಿಲ್ಲ ನನಗೆ ಬಟ್ಟೆ ಕೊಟ್ರಿ.+ ನನಗೆ ಹುಷಾರು ಇಲ್ಲದಿದ್ದಾಗ ನನ್ನನ್ನ ನೋಡ್ಕೊಂಡ್ರಿ. ನಾನು ಜೈಲಲ್ಲಿದ್ದಾಗ ನನ್ನನ್ನ ನೋಡೋಕೆ ಬಂದ್ರಿ’ ಅಂತ ಹೇಳ್ತಾನೆ.+ 37  ಆಗ ನೀತಿವಂತರು ಆತನಿಗೆ ‘ಸ್ವಾಮಿ, ನೀನು ಹಸಿದಿದ್ದಾಗ ಯಾವಾಗ ತಿನ್ನೋಕೆ ಕೊಟ್ವಿ? ನಿನಗೆ ಬಾಯಾರಿಕೆ ಆದಾಗ ಯಾವಾಗ ಕುಡಿಯೋಕೆ ಕೊಟ್ವಿ?+ 38  ನೀನು ಅಪರಿಚಿತನಾಗಿದ್ದಾಗ ಅತಿಥಿಸತ್ಕಾರ ಯಾವಾಗ ಮಾಡಿದ್ವಿ? ನಿನಗೆ ಬಟ್ಟೆ ಇಲ್ಲದೆ ಇರೋದನ್ನ ನೋಡಿ ಯಾವಾಗ ಬಟ್ಟೆ ಕೊಟ್ವಿ? 39  ನಿನಗೆ ಯಾವಾಗ ಹುಷಾರು ಇರ್ಲಿಲ್ಲ? ನೀನು ಯಾವಾಗ ಜೈಲಲ್ಲಿದ್ದೆ? ಯಾವಾಗ ನೋಡೋಕೆ ಬಂದ್ವಿ?’ ಅಂತ ಕೇಳ್ತಾರೆ. 40  ಅದಕ್ಕೆ ರಾಜ ‘ನಾನು ನಿಮಗೆ ನಿಜ ಹೇಳ್ತೀನಿ, ನೀವು ನನ್ನ ಸಹೋದರರಲ್ಲೇ ಒಬ್ಬ ಸಾಮಾನ್ಯ ಸಹೋದರನಿಗೆ ಏನೆಲ್ಲ ಮಾಡಿದ್ರೋ ಅದನ್ನ ನನಗೂ ಮಾಡಿದ ತರ’+ ಅಂತಾನೆ. 41  ಆಮೇಲೆ ಆತನು ತನ್ನ ಎಡಗಡೆ ಇರುವವರಿಗೆ ‘ನನ್ನಿಂದ ದೂರ ಹೋಗಿ.+ ದೇವರು ನಿಮಗೆ ತೀರ್ಪು ಮಾಡಿದ್ದಾನೆ. ಸೈತಾನನಿಗೆ ಮತ್ತು ಅವನ ಕೆಟ್ಟ ದೇವದೂತರಿಗೆ ಸಿದ್ಧಮಾಡಿರೋ+ ನಿತ್ಯನಾಶದ ಬೆಂಕಿಗೆ ಹೋಗಿ ಧುಮುಕಿ.+ 42  ಯಾಕಂದ್ರೆ ನಾನು ಹಸಿದಿದ್ದಾಗ ನೀವು ತಿನ್ನೋಕೆ ಏನೂ ಕೊಡಲಿಲ್ಲ. ನನಗೆ ಬಾಯಾರಿಕೆ ಆದಾಗ ಕುಡಿಯೋಕೆ ಏನೂ ಕೊಡಲಿಲ್ಲ. 43  ನಾನು ಅಪರಿಚಿತನಾಗಿ ಇದ್ದಾಗ ನನಗೆ ಅತಿಥಿಸತ್ಕಾರ ಮಾಡಲಿಲ್ಲ. ಬಟ್ಟೆ ಇಲ್ಲದಿದ್ದಾಗ ನನಗೆ ಬಟ್ಟೆ ಕೊಡಲಿಲ್ಲ. ನನಗೆ ಹುಷಾರು ಇಲ್ಲದಿದ್ದಾಗ, ಜೈಲಲ್ಲಿದ್ದಾಗ, ನನ್ನನ್ನ ನೋಡೋಕೆ ಬರ್ಲಿಲ್ಲ’ ಅಂತಾನೆ. 44  ಆಗ ಅವರು ಸಹ ‘ಸ್ವಾಮಿ, ನೀನು ಯಾವಾಗ ಹಸಿದಿದ್ದೆ, ಬಾಯಾರಿದ್ದೆ, ಅಪರಿಚಿತನಾಗಿದ್ದೆ, ಬಟ್ಟೆ ಇಲ್ಲದೆ ಇದ್ದೆ, ಹುಷಾರಿಲ್ಲದೆ ಇದ್ದೆ, ಜೈಲಲ್ಲಿದ್ದೆ? ಒಂದುವೇಳೆ ಹಾಗಾಗಿದ್ರೆ ನಾವು ನಿನಗೆ ಸಹಾಯ ಮಾಡ್ತಿದ್ವಿ ಅಲ್ವಾ?’ ಅಂತಾರೆ. 45  ಅದಕ್ಕೆ ರಾಜ ‘ನಾನು ನಿಮಗೆ ನಿಜ ಹೇಳ್ತೀನಿ, ನೀವು ನನ್ನ ಸಹೋದರರಲ್ಲೇ ಒಬ್ಬ ಸಾಮಾನ್ಯ ಸಹೋದರನಿಗೆ ಏನೆಲ್ಲ ಮಾಡಿಲ್ವೋ ಅದನ್ನ ನನಗೂ ಮಾಡಿಲ್ಲ’+ ಅಂತ ಹೇಳ್ತಾನೆ. 46  ಇವ್ರಿಗೆ ಸಿಗೋದು ಶಾಶ್ವತ ಸಾವು,+ ಆದ್ರೆ ನೀತಿವಂತರಿಗೆ ಸಿಗೋದು ಶಾಶ್ವತ ಜೀವ.”+

ಪಾದಟಿಪ್ಪಣಿ