ಮತ್ತಾಯ 5:1-48
-
ಬೆಟ್ಟದ ಭಾಷಣ (1-48)
5 ಯೇಸು ತುಂಬ ಜನ ಬಂದಿರೋದನ್ನ ನೋಡಿ ಒಂದು ಬೆಟ್ಟದ ಮೇಲೆ ಹೋಗಿ ಕೂತ್ಕೊಂಡನು. ಶಿಷ್ಯರು ಅಲ್ಲಿಗೆ ಬಂದ್ರು.
2 ಆತನು ಹೀಗೆ ಕಲಿಸಿದನು:
3 “ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು* ಖುಷಿಯಾಗಿ ಇರ್ತಾರೆ.+ ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ.
4 ದುಃಖಪಡುವವರು ಸಂತೋಷವಾಗಿ ಇರ್ತಾರೆ. ಯಾಕಂದ್ರೆ ಅವ್ರಿಗೆ ಸಾಂತ್ವನ ಸಿಗುತ್ತೆ.+
5 ಮೃದು* ಸ್ವಭಾವದವರು+ ಸಂತೋಷವಾಗಿ ಇರ್ತಾರೆ. ಯಾಕಂದ್ರೆ ದೇವರು ಅವ್ರಿಗೆ ಭೂಮಿಯನ್ನ ಆಸ್ತಿಯಾಗಿ ಕೊಡ್ತಾನೆ.+
6 ನೀತಿಗಾಗಿ ಹಸಿದು ಬಾಯಾರಿದವರು ಸಂತೋಷವಾಗಿ ಇರ್ತಾರೆ. ಯಾಕಂದ್ರೆ ಅವ್ರಿಗೆ ತೃಪ್ತಿಯಾಗೋ ತರ ದೇವರು ನೋಡ್ಕೊಳ್ತಾನೆ.+
7 ಕರುಣೆ ತೋರಿಸುವವರು ಸಂತೋಷವಾಗಿ ಇರ್ತಾರೆ.+ ಯಾಕಂದ್ರೆ ಬೇರೆಯವರು* ಅವ್ರಿಗೆ ಕರುಣೆ ತೋರಿಸ್ತಾರೆ.
8 ಶುದ್ಧ ಹೃದಯದ ಜನ ಸಂತೋಷವಾಗಿ ಇರ್ತಾರೆ.+ ಯಾಕಂದ್ರೆ ಅವರು ದೇವರನ್ನ ನೋಡ್ತಾರೆ.
9 ಬೇರೆಯವರ ಜೊತೆ ಸಮಾಧಾನ ಮಾಡ್ಕೊಳ್ಳುವವರು ಸಂತೋಷವಾಗಿ ಇರ್ತಾರೆ.+ ಯಾಕಂದ್ರೆ ಅವ್ರಿಗೆ ‘ದೇವರ ಮಕ್ಕಳು’ ಅನ್ನೋ ಹೆಸ್ರು ಬರುತ್ತೆ.
10 ನೀತಿಗಾಗಿ ಹಿಂಸೆ ಅನುಭವಿಸುವವರು ಸಂತೋಷವಾಗಿ ಇರ್ತಾರೆ.+ ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ.
11 ನನ್ನ ಶಿಷ್ಯರಾಗಿರೋ ಕಾರಣಕ್ಕೆ ಜನ ನಿಮಗೆ ಅವಮಾನ ಮಾಡಿ,+ ಹಿಂಸಿಸಿ,+ ನಿಮ್ಮ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನ ಹೇಳಿದ್ರೆ ಖುಷಿಪಡಿ.+
12 ಸ್ವರ್ಗದಲ್ಲಿ ನಿಮಗಾಗಿ ದೊಡ್ಡ ಬಹುಮಾನ+ ಕಾಯ್ತಿದೆ. ಹಾಗಾಗಿ ಹರ್ಷಿಸಿ, ಅತ್ಯಾನಂದಪಡಿ.+ ಯಾಕಂದ್ರೆ ಜನ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳಿಗೂ ಹೀಗೇ ಹಿಂಸೆ ಕೊಟ್ರು.+
13 ನೀವು ಲೋಕಕ್ಕೆ ಉಪ್ಪಿನ ತರ ಇದ್ದೀರ.+ ಉಪ್ಪು ಅದ್ರ ರುಚಿ ಕಳ್ಕೊಂಡ್ರೆ ಮತ್ತೆ ಆ ರುಚಿ ಬರೋ ತರ ಯಾರಿಂದಾದ್ರೂ ಮಾಡೋಕಾಗುತ್ತಾ? ಜನ ಅದನ್ನ ಹೊರಗೆ ಬಿಸಾಡ್ತಾರೆ,+ ತುಳಿತಾರೆ. ಆ ಉಪ್ಪಿಂದ ಏನೂ ಪ್ರಯೋಜನ ಇಲ್ಲ.
14 ನೀವು ಲೋಕಕ್ಕೆ ಬೆಳಕಿನ ತರ ಇದ್ದೀರ.+ ಬೆಟ್ಟದ ಮೇಲಿರೋ ಪಟ್ಟಣ ಕಾಣಿಸದೆ ಇರಲ್ಲ.
15 ಜನ ದೀಪ ಹಚ್ಚಿ ಬುಟ್ಟಿಯಿಂದ* ಮುಚ್ಚಿಡಲ್ಲ. ಬದಲಿಗೆ ದೀಪಸ್ತಂಭದ ಮೇಲೆ ಇಡ್ತಾರೆ. ಆಗ ಅದು ಮನೆಯಲ್ಲಿ ಎಲ್ರಿಗೂ ಬೆಳಕು ಕೊಡುತ್ತೆ.+
16 ಅದೇ ತರ ನಿಮ್ಮ ಬೆಳಕು ಜನ್ರ ಮುಂದೆ ಬೆಳಗಬೇಕು.+ ಆಗ ಅವರು ನಿಮ್ಮ ಒಳ್ಳೇ ಕೆಲಸ+ ನೋಡಿ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಗೌರವ ಕೊಡ್ತಾರೆ.+
17 ನಾನು ನಿಯಮ ಪುಸ್ತಕವನ್ನಾಗಲಿ ಪ್ರವಾದಿಗಳ ಮಾತುಗಳನ್ನಾಗಲಿ ತೆಗೆದುಹಾಕೋಕೆ ಬಂದೆ ಅಂತ ನೆನಸಬೇಡಿ. ತೆಗೆದುಹಾಕೋಕಲ್ಲ, ನೆರವೇರಿಸೋಕೆ ಬಂದಿದ್ದೀನಿ.+
18 ನಿಮಗೆ ನಿಜ ಹೇಳ್ತೀನಿ, ಭೂಮಿ ಆಕಾಶ ನಾಶವಾದ್ರೂ ನಿಯಮ ಪುಸ್ತಕದಲ್ಲಿರೋ ಒಂದು ಅಕ್ಷರವಾಗಲಿ ಚುಕ್ಕಿಯಾಗಲಿ ನೆರವೇರದೆ ಹೋಗಲ್ಲ.+
19 ಹಾಗಾಗಿ ಒಬ್ಬ ವ್ಯಕ್ತಿ ಇದ್ರಲ್ಲಿರೋ ಚಿಕ್ಕ ಆಜ್ಞೆನ ಮುರಿದು, ಅದನ್ನೇ ಬೇರೆಯವ್ರಿಗೂ ಕಲಿಸಿದ್ರೆ ಅವನು ದೇವರ ಆಳ್ವಿಕೆಯಲ್ಲಿ ಇರೋಕೆ ಯೋಗ್ಯನಲ್ಲ. ಆದ್ರೆ ಈ ಆಜ್ಞೆಗಳನ್ನ ಪಾಲಿಸ್ತಾ ಅದನ್ನೇ ಬೇರೆಯವ್ರಿಗೂ ಕಲಿಸಿದ್ರೆ ಅವನು ದೇವರ ಆಳ್ವಿಕೆಯಲ್ಲಿ ಇರೋಕೆ ಯೋಗ್ಯನಾಗ್ತಾನೆ.
20 ನೀವು ಪಂಡಿತರಿಗಿಂತ ಫರಿಸಾಯರಿಗಿಂತ ನೀತಿವಂತರಾಗಿ ಇರಬೇಕು.+ ಇಲ್ಲದಿದ್ರೆ ದೇವರ ಆಳ್ವಿಕೆ ಬರುವಾಗ ನೀವು ಖಂಡಿತ ಇರಲ್ಲ ಅಂತ ನಿಮಗೆ ಹೇಳ್ತೀನಿ.+
21 ‘ಕೊಲೆ ಮಾಡಬಾರದು,+ ಮಾಡಿದ್ರೆ ನ್ಯಾಯಾಲಯಕ್ಕೆ ಲೆಕ್ಕಕೊಡಬೇಕು’+ ಅಂತ ಹಿಂದಿನ ಕಾಲದವರು ಹೇಳಿದ್ದನ್ನ ನೀವು ಕೇಳಿರಬಹುದು.
22 ಆದ್ರೆ ನಾನು ಹೇಳೋದು, ಸಹೋದರನ ಮೇಲೆ ಕೋಪ+ ಇಟ್ಕೊಂಡಿರುವವನು ಸಹ ನ್ಯಾಯಾಲಯಕ್ಕೆ ಲೆಕ್ಕಕೊಡಬೇಕು. ಸಹೋದರನಿಗೆ ಕೆಟ್ಟ ಮಾತುಗಳಿಂದ ಅವಮಾನ ಮಾಡಿದ್ರೆ ಸರ್ವೋಚ್ಚ ನ್ಯಾಯಾಲಯಕ್ಕೆ ಲೆಕ್ಕಕೊಡಬೇಕು. ಸಹೋದರನನ್ನ ‘ಕೆಲಸಕ್ಕೆ ಬಾರದ ಮೂರ್ಖ!’ ಅಂತ ಹೇಳುವವನು ಸಂಪೂರ್ಣ ನಾಶನಕ್ಕೆ* ಗುರಿ ಆಗ್ತಾನೆ.+
23 ಹಾಗಾಗಿ ನೀನು ಕಾಣಿಕೆನ ಯಜ್ಞವೇದಿ+ ಮುಂದೆ ತರ್ತಿರೋವಾಗ, ನಿನ್ನ ಸಹೋದರನಿಗೆ ನಿನ್ನ ಮೇಲೆ ಏನೋ ಬೇಜಾರು ಆಗಿದೆ ಅಂತ ನಿಂಗೆ ನೆನಪಾದ್ರೆ
24 ನಿನ್ನ ಕಾಣಿಕೆನ ಯಜ್ಞವೇದಿ ಮುಂದೆ ಬಿಟ್ಟು ಮೊದ್ಲು ಹೋಗಿ ನಿನ್ನ ಸಹೋದರನ ಜೊತೆ ಸಮಾಧಾನ ಮಾಡ್ಕೊ. ಆಮೇಲೆ ಕಾಣಿಕೆ ಕೊಡು.+
25 ಯಾರಾದ್ರೂ ನಿನ್ನ ವಿರುದ್ಧ ನ್ಯಾಯಾಲಯಕ್ಕೆ ಹೋಗ್ತಿರೋದಾದ್ರೆ ದಾರಿಯಲ್ಲಿ ಇರುವಾಗಲೇ ಅವನ ಜೊತೆ ಮಾತಾಡಿ ರಾಜಿಮಾಡ್ಕೊ. ಇಲ್ಲದಿದ್ರೆ ಅವನು ಏನಾದ್ರೂ ಮಾಡಿ ನಿನ್ನನ್ನ ನ್ಯಾಯಾಧೀಶನಿಗೆ ಒಪ್ಪಿಸಬಹುದು. ಆ ನ್ಯಾಯಾಧೀಶ ನಿನ್ನನ್ನ ಕಾವಲುಗಾರನಿಗೆ ಒಪ್ಪಿಸಿ ಜೈಲಿಗೆ ಹಾಕಬಹುದು.+
26 ನಾನು ನಿನಗೆ ನಿಜ ಹೇಳ್ತೀನಿ, ಒಂದು ಪೈಸೆನೂ ಬಿಡದೆ ಪೂರ್ತಿ ಸಾಲ ತೀರಿಸೋ ತನಕ ನಿನಗೆ ಅಲ್ಲಿಂದ ಹೊರಗೆ ಬರೋಕಾಗಲ್ಲ.
27 ‘ವ್ಯಭಿಚಾರ ಮಾಡಬಾರದು’+ ಅಂತ ಹೇಳಿದ್ದನ್ನ ನೀವು ಕೇಳಿರಬಹುದು.
28 ಆದ್ರೆ ನಾನು ನಿಮಗೆ ಹೇಳ್ತೀನಿ, ಒಬ್ಬ ಸ್ತ್ರೀನ ಕೆಟ್ಟ ಉದ್ದೇಶದಿಂದ ನೋಡ್ತಾ+ ಇರೋ ಪ್ರತಿಯೊಬ್ಬ ಈಗಾಗಲೇ ಹೃದಯದಲ್ಲಿ ಅವಳ ಜೊತೆ ವ್ಯಭಿಚಾರ ಮಾಡಿದ್ದಾನೆ.+
29 ಹಾಗಾಗಿ ನಿನ್ನ ಬಲಗಣ್ಣು ನಿನ್ನಿಂದ ಪಾಪ ಮಾಡಿಸಿದ್ರೆ ಅದನ್ನ ಕಿತ್ತು ಬಿಸಾಡು.+ ನಿನ್ನ ಇಡೀ ದೇಹ ಸಂಪೂರ್ಣವಾಗಿ ನಾಶ* ಆಗೋದಕ್ಕಿಂತ ನಿನ್ನ ಒಂದು ಅಂಗನ ಕಳ್ಕೊಳ್ಳೋದೇ ಒಳ್ಳೇದು.+
30 ಅಷ್ಟೇ ಅಲ್ಲ ನಿನ್ನ ಬಲಗೈ ನಿನ್ನಿಂದ ಪಾಪ ಮಾಡಿಸಿದ್ರೆ ಅದನ್ನ ಕತ್ತರಿಸಿ ಬಿಸಾಡು.+ ನಿನ್ನ ಇಡೀ ದೇಹ ಸಂಪೂರ್ಣವಾಗಿ ನಾಶ* ಆಗೋದಕ್ಕಿಂತ ನಿನ್ನ ಒಂದು ಅಂಗನ ಕಳ್ಕೊಳ್ಳೋದೇ ಒಳ್ಳೇದು.+
31 ‘ಹೆಂಡತಿಯನ್ನ ಬಿಟ್ಟುಬಿಡಬೇಕು ಅನ್ನುವವನು ಅವಳಿಗೆ ವಿಚ್ಛೇದನ ಪತ್ರ ಕೊಡಬೇಕು’+ ಅಂತ ಹೇಳ್ತಾ ಇದ್ರು.
32 ಆದ್ರೆ ನಾನು ನಿಮಗೆ ಹೇಳ್ತೀನಿ, ಲೈಂಗಿಕ ಅನೈತಿಕತೆ ಕಾರಣ ಅಲ್ಲದೆ ಬೇರೆ ಯಾವ ಕಾರಣಕ್ಕಾದ್ರೂ ಹೆಂಡತಿಗೆ ವಿಚ್ಛೇದನ ಕೊಟ್ರೆ ಅವನು ಅವಳನ್ನ ವ್ಯಭಿಚಾರ ಮಾಡೋ ಅಪಾಯಕ್ಕೆ ತಳ್ಳುತ್ತಾನೆ. ಅಷ್ಟೇ ಅಲ್ಲ ಈ ತರ ವಿಚ್ಛೇದನ ಆಗಿರೋ ಸ್ತ್ರೀಯನ್ನ ಮದುವೆ ಆಗುವವನು ಸಹ ವ್ಯಭಿಚಾರಿ ಆಗ್ತಾನೆ.+
33 ‘ಸುಳ್ಳು ಆಣೆ ಇಡಬಾರದು.+ ಯೆಹೋವನಿಗೆ* ಮಾಡ್ಕೊಂಡ ಹರಕೆಗಳನ್ನ ತೀರಿಸಬೇಕು’+ ಅಂತ ಹಿಂದಿನ ಕಾಲದವರು ಹೇಳಿದ್ದನ್ನ ನೀವು ಕೇಳಿರಬಹುದು.
34 ಆದ್ರೆ ನಾನು ನಿಮಗೆ ಹೇಳ್ತೀನಿ, ಆಣೆ ಇಡಲೇಬೇಡಿ.+ ಆಕಾಶದ ಮೇಲೆ ಆಣೆ ಇಡಬೇಡಿ. ಯಾಕಂದ್ರೆ ಅದು ದೇವರ ಸಿಂಹಾಸನ.
35 ಭೂಮಿ ಮೇಲೆ ಆಣೆ ಇಡಬೇಡಿ. ಯಾಕಂದ್ರೆ ಅದು ಆತನ ಪಾದಪೀಠ.+ ಯೆರೂಸಲೇಮಿನ ಮೇಲೆ ಆಣೆ ಇಡಬೇಡಿ. ಯಾಕಂದ್ರೆ ಅದು ಮಹಾರಾಜನ ಪಟ್ಟಣ.+
36 ನಿಮ್ಮ ತಲೆ ಮೇಲೂ ಆಣೆ ಇಡಬೇಡಿ. ಯಾಕಂದ್ರೆ ನಿಮ್ಮ ಒಂದು ಕೂದಲನ್ನೂ ಬೆಳ್ಳಗಾಗಲಿ ಕಪ್ಪಗಾಗಲಿ ಮಾಡೋಕೆ ನಿಮ್ಮಿಂದ ಆಗಲ್ಲ.
37 ನಿಮ್ಮ ಮಾತು ಹೌದು ಅಂದ್ರೆ ಹೌದು, ಇಲ್ಲ ಅಂದ್ರೆ ಇಲ್ಲ ಅಂತಿರಲಿ.+ ಇದಕ್ಕಿಂತ ಬೇರೆ ಏನೇ ಬಂದ್ರೂ ಅದು ಸೈತಾನನಿಂದ* ಬಂದಿರುತ್ತೆ.+
38 ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಕೊಡಬೇಕು’+ ಅಂತ ಹೇಳಿದ್ದನ್ನ ನೀವು ಕೇಳಿರಬಹುದು.
39 ಆದ್ರೆ ನಾನು ನಿಮಗೆ ಹೇಳ್ತೀನಿ, ಕೆಟ್ಟವನ ಜೊತೆ ಜಗಳಕ್ಕೆ ಇಳಿಬೇಡಿ. ಯಾರಾದ್ರೂ ನಿನ್ನ ಬಲಗೆನ್ನೆಗೆ ಹೊಡೆದ್ರೆ ನಿನ್ನ ಎಡಗೆನ್ನೆನೂ ತೋರಿಸು.+
40 ಒಬ್ಬ ನಿನ್ನ ಅಂಗಿ ಕಿತ್ಕೊಳ್ಳೋಕೆ ನಿನ್ನನ್ನ ನ್ಯಾಯಾಲಯಕ್ಕೆ ಕರ್ಕೊಂಡು ಹೋಗಬೇಕು ಅಂದ್ಕೊಂಡ್ರೆ ನಿನ್ನ ಮೇಲಂಗಿನೂ ಅವನಿಗೆ ಕೊಟ್ಟುಬಿಡು.+
41 ಒಬ್ಬ ಅಧಿಕಾರಿ ಬಂದು ಅವನ ವಸ್ತುಗಳನ್ನ ಎತ್ಕೊಂಡು ಒಂದು ಮೈಲಿ ದೂರ ಬಾ ಅಂತ ಹೇಳಿದ್ರೆ ಅವನ ಜೊತೆ ಎರಡು ಮೈಲಿ ಹೋಗು.
42 ಯಾರಾದ್ರೂ ಸಹಾಯ ಕೇಳಿದ್ರೆ ಅದನ್ನ ಮಾಡು. ಬಡ್ಡಿಯಿಲ್ಲದೆ ಸಾಲ ಕೇಳಿದ್ರೆ ಮುಖ ತಿರುಗಿಸಬೇಡ.+
43 ‘ನಿನ್ನ ನೆರೆಯವನನ್ನ ಪ್ರೀತಿಸಿ+ ನಿನ್ನ ಶತ್ರುವನ್ನ ದ್ವೇಷಿಸು’ ಅಂತ ಹೇಳಿದ್ದನ್ನ ನೀವು ಕೇಳಿರಬಹುದು.
44 ಆದ್ರೆ ನಾನು ನಿಮಗೆ ಹೇಳ್ತೀನಿ, ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ.+ ನಿಮಗೆ ಹಿಂಸೆ ಕೊಡುವವರಿಗಾಗಿ ಪ್ರಾರ್ಥಿಸ್ತಾ ಇರಿ.+
45 ಆಗ ನೀವು ಸ್ವರ್ಗದಲ್ಲಿರೋ ತಂದೆಯ ಮಕ್ಕಳು+ ಅಂತ ತೋರಿಸ್ತೀರ. ಯಾಕಂದ್ರೆ ಆತನು ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಸೂರ್ಯ ಹುಟ್ಟೋ ತರ ಮಾಡ್ತಾನೆ. ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆ ಸುರಿಸ್ತಾನೆ.+
46 ನಿಮ್ಮನ್ನ ಪ್ರೀತಿಸುವವರನ್ನ ಪ್ರೀತಿಸಿದ್ರೆ ನಿಮಗೆ ಏನು ಬಹುಮಾನ ಸಿಗುತ್ತೆ?+ ತೆರಿಗೆ ವಸೂಲಿ ಮಾಡುವವರು ಸಹ ಅದನ್ನೇ ಮಾಡ್ತಾರಲ್ವಾ?
47 ನಿಮ್ಮ ಸಹೋದರರಿಗೆ ಮಾತ್ರ ನಮಸ್ಕಾರ ಹೇಳಿದ್ರೆ ನೀವು ಬೇರೆಯವರಿಗಿಂತ ಒಳ್ಳೇ ಕೆಲಸ ಮಾಡಿದ ಹಾಗೆ ಆಗುತ್ತಾ? ಬೇರೆ ಜನ ಸಹ ಅದನ್ನೇ ಮಾಡ್ತಾರಲ್ವಾ?
48 ಹಾಗಾಗಿ ಸ್ವರ್ಗದಲ್ಲಿರೋ ನಿಮ್ಮ ತಂದೆ ಪರಿಪೂರ್ಣನಾಗಿರೋ ತರ* ನೀವೂ ಪರಿಪೂರ್ಣರಾಗಿ ಇರಬೇಕು.+
ಪಾದಟಿಪ್ಪಣಿ
^ ಅಥವಾ “ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ ಇರೋರು.”
^ ಅಥವಾ “ಸೌಮ್ಯ.”
^ ‘ಬೇರೆಯವರು’ ಅನ್ನೋದ್ರಲ್ಲಿ ದೇವರೂ ಸೇರಿದ್ದಾನೆ.
^ ಅಥವಾ “ಅಳತೆಮಾಡೋ ಕೊಳಗದ ಕೆಳಗೆ.”
^ ಪರಿಶಿಷ್ಟ ಎ5 ನೋಡಿ.
^ ಅಕ್ಷ. “ಕೆಟ್ಟ.”
^ ಅದು, ಸಂಪೂರ್ಣವಾಗಿ ಪ್ರೀತಿಸೋ ತರ.