ಮತ್ತಾಯ 9:1-38
9 ಆಗ ಯೇಸು ದೋಣಿ ಹತ್ತಿ ಆಕಡೆ ಇದ್ದ ತನ್ನ ಊರಿಗೆ ಹೋದನು.+
2 ಅಲ್ಲಿ, ಜನ ಲಕ್ವ ಹೊಡೆದಿದ್ದ ಒಬ್ಬನನ್ನ ಮಂಚ ಸಮೇತ ಹೊತ್ಕೊಂಡು ಬರೋದನ್ನ ನೋಡಿದನು. ಅವ್ರ ನಂಬಿಕೆ ನೋಡಿ ಯೇಸು ಲಕ್ವ ಹೊಡೆದವನಿಗೆ “ಮಗನೇ ಧೈರ್ಯವಾಗಿರು! ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ”+ ಅಂದನು.
3 ಅಲ್ಲಿದ್ದ ಕೆಲವು ಪಂಡಿತರು “ಇವನು ದೇವರ ವಿರುದ್ಧ ಮಾತಾಡ್ತಿದ್ದಾನೆ” ಅಂತ ತಮ್ಮತಮ್ಮೊಳಗೆ ಅಂದ್ಕೊಂಡ್ರು.
4 ಯೇಸು ಅವ್ರ ಆಲೋಚನೆಗಳನ್ನ ತಿಳ್ಕೊಂಡು “ನೀವ್ಯಾಕೆ ಕೆಟ್ಟದಾಗಿ ಯೋಚಿಸ್ತೀರಾ?+
5 ಈ ವ್ಯಕ್ತಿಗೆ ನಾನು ‘ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ’ ಅನ್ನೋದು ಸುಲಭನಾ? ಅಥವಾ ‘ಎದ್ದು ನಡಿ’ ಅನ್ನೋದು ಸುಲಭನಾ?+
6 ಆದ್ರೆ ಭೂಮಿ ಮೇಲೆ ಪಾಪಗಳನ್ನ ಕ್ಷಮಿಸೋ ಅಧಿಕಾರ ಮನುಷ್ಯಕುಮಾರನಿಗೆ ಇದೆ ಅನ್ನೋದು ನಿಮಗೆ ಗೊತ್ತಾಗಲಿ...” ಅಂತ ಹೇಳಿ ಲಕ್ವ ಹೊಡೆದವನಿಗೆ “ಎದ್ದು ಹಾಸಿಗೆ ತಗೊಂಡು ಮನೆಗೆ ಹೋಗು”+ ಅಂದನು.
7 ಅವನು ಎದ್ದು ಮನೆಗೆ ಹೋದ.
8 ಇದನ್ನ ನೋಡಿ ಜನ ತುಂಬ ಹೆದರಿದ್ರು. ಒಬ್ಬ ಮನುಷ್ಯನಿಗೆ ಇಂಥ ಅಧಿಕಾರ ಕೊಟ್ಟಿರೋದಕ್ಕೆ ದೇವರನ್ನ ಹೊಗಳಿದ್ರು.
9 ಯೇಸು ಅಲ್ಲಿಂದ ಹೋಗ್ತಿದ್ದಾಗ, ತೆರಿಗೆ ವಸೂಲಿ ಕಚೇರಿಯಲ್ಲಿ ಕೂತಿದ್ದ ಮತ್ತಾಯನನ್ನ ನೋಡಿ “ಬಾ, ನನ್ನ ಶಿಷ್ಯನಾಗು” ಅಂದನು. ಆಗ ಮತ್ತಾಯ ಎದ್ದು ಆತನ ಹಿಂದೆ ಹೋದ.+
10 ಆಮೇಲೆ ಯೇಸು ಅವನ ಮನೆಯಲ್ಲಿ ಊಟಕ್ಕೆ ಕೂತಿದ್ದಾಗ ತೆರಿಗೆ ವಸೂಲಿ ಮಾಡುವವರು, ಪಾಪಿಗಳು ಬಂದು ಯೇಸು ಮತ್ತು ಶಿಷ್ಯರ ಜೊತೆ ಊಟಕ್ಕೆ ಕೂತರು.+
11 ಇದನ್ನ ನೋಡಿ ಫರಿಸಾಯರು ಶಿಷ್ಯರಿಗೆ “ನಿಮ್ಮ ಗುರು ತೆರಿಗೆ ವಸೂಲಿ ಮಾಡುವವರ ಜೊತೆ, ಪಾಪಿಗಳ ಜೊತೆ ಯಾಕೆ ಊಟಮಾಡ್ತಾನೆ?”+ ಅಂತ ಕೇಳಿದ್ರು.
12 ಅದನ್ನ ಕೇಳಿಸ್ಕೊಂಡ ಯೇಸು “ಆರೋಗ್ಯವಾಗಿ ಇರೋರಿಗೆ ವೈದ್ಯ ಬೇಕಾಗಿಲ್ಲ, ರೋಗಿಗಳಿಗೆ ಬೇಕು.+
13 ನೀವು ಮೊದ್ಲು ಹೋಗಿ ‘ನನಗೆ ಬಲಿ ಬೇಡ, ಜನ್ರಿಗೆ ಕರುಣೆ ತೋರಿಸಿ’+ ಅನ್ನೋ ಮಾತಿನ ಅರ್ಥ ತಿಳ್ಕೊಳ್ಳಿ. ಯಾಕಂದ್ರೆ ನಾನು ನೀತಿವಂತರನ್ನಲ್ಲ, ಪಾಪಿಗಳನ್ನ ಕರಿಯೋಕೆ ಬಂದಿದ್ದೀನಿ” ಅಂದನು.
14 ಆಗ ಯೋಹಾನನ ಶಿಷ್ಯರು ಯೇಸು ಹತ್ರ ಬಂದು “ನಾವು ಮತ್ತು ಫರಿಸಾಯರು ಉಪವಾಸ ಮಾಡ್ತೀವಿ. ಆದ್ರೆ ನಿನ್ನ ಶಿಷ್ಯರು ಯಾಕೆ ಉಪವಾಸ ಮಾಡಲ್ಲ?”+ ಅಂತ ಕೇಳಿದ್ರು.
15 ಅದಕ್ಕೆ ಯೇಸು ಹೀಗಂದನು “ಮದುಮಗ ಜೊತೆ ಇರೋವಾಗ ಅವನ ಸ್ನೇಹಿತರು ದುಃಖಪಡಬೇಕಾ?+ ಇಲ್ಲ ತಾನೇ? ಆದ್ರೆ ಮದುಮಗನನ್ನ ಕರ್ಕೊಂಡು ಹೋಗೋ ಸಮಯ ಬರುತ್ತೆ.+ ಆಗ ಅವರು ಉಪವಾಸ ಮಾಡ್ತಾರೆ.
16 ಹರಿದಿರೊ ಹಳೇ ಬಟ್ಟೆ ಮೇಲೆ ಯಾರೂ ಹೊಸ ಬಟ್ಟೆ ತುಂಡನ್ನ ತೇಪೆ ಹಾಕಲ್ಲ. ಹಾಗೆ ಹಾಕಿದ್ರೆ ಹೊಸ ಬಟ್ಟೆ ತುಂಡು ಮುದರಿದಾಗ ಹಳೇ ಬಟ್ಟೆ ಇನ್ನೂ ಜಾಸ್ತಿ ಹರಿಯುತ್ತೆ.+
17 ಹಾಗೆನೇ ಜನ ಹೊಸ ದ್ರಾಕ್ಷಾಮದ್ಯವನ್ನ ಹಳೇ ಚರ್ಮದ ಚೀಲದಲ್ಲಿ ಹಾಕಲ್ಲ. ಹಾಕಿಟ್ರೆ ಚರ್ಮದ ಚೀಲ ಹರಿದು ದ್ರಾಕ್ಷಾಮದ್ಯ ಚೆಲ್ಲುತ್ತೆ. ಚರ್ಮದ ಚೀಲನೂ ಹಾಳಾಗುತ್ತೆ. ಅದಕ್ಕೆ ಜನ ಹೊಸ ದ್ರಾಕ್ಷಾಮದ್ಯವನ್ನ ಹೊಸ ಚರ್ಮದ ಚೀಲದಲ್ಲಿ ಹಾಕ್ತಾರೆ. ಆಗ ಎರಡೂ ಹಾಳಾಗಲ್ಲ.”
18 ಯೇಸು ಇದನ್ನ ಹೇಳ್ತಿದ್ದಾಗ ಒಬ್ಬ ಅಧಿಕಾರಿ ಬಂದು ಅಡ್ಡಬಿದ್ದು “ನಾನು ಮನೆಯಿಂದ ಬರ್ತಿದ್ದಾಗ ನನ್ನ ಮಗಳು ಸಾಯೋ ಸ್ಥಿತಿಯಲ್ಲಿದ್ದಳು. ನೀನು ಬಂದು ಅವಳ ಮೇಲೆ ಕೈಯಿಟ್ರೆ ಸಾಕು, ಅವಳು ಬದುಕ್ತಾಳೆ”+ ಅಂದ.
19 ಆಗ ಯೇಸು ಎದ್ದು ಅವನ ಹಿಂದೆ ಹೋದ, ಶಿಷ್ಯರೂ ಹೋದ್ರು.
20 ಹೀಗೆ ಹೋಗ್ತಿರುವಾಗ, 12 ವರ್ಷದಿಂದ ರಕ್ತಸ್ರಾವ+ ರೋಗದಿಂದ ನರಳ್ತಿದ್ದ ಸ್ತ್ರೀ ಹಿಂದಿಂದ ಬಂದು ಯೇಸುವಿನ ಬಟ್ಟೆ ತುದಿ ಮುಟ್ಟಿದಳು.+
21 ಅವಳು ಮನಸ್ಸಲ್ಲಿ “ನಾನು ಆತನ ಬಟ್ಟೆ ಮುಟ್ಟಿದ್ರೆ ಸಾಕು, ವಾಸಿಯಾಗ್ತೀನಿ” ಅಂತ ನೆನಸಿದ್ದಳು.
22 ಯೇಸು ಹಿಂದೆ ತಿರುಗಿ ಅವಳನ್ನ ನೋಡಿ “ಮಗಳೇ, ಧೈರ್ಯವಾಗಿರು. ನಿನ್ನ ನಂಬಿಕೆನೇ ನಿನ್ನನ್ನ ವಾಸಿಮಾಡಿದೆ”+ ಅಂದನು. ತಕ್ಷಣ ಅವಳ ರೋಗ ವಾಸಿ ಆಯ್ತು.+
23 ಯೇಸು ಆ ಅಧಿಕಾರಿಯ ಮನೆಗೆ ಬಂದಾಗ ಜನ ಕೊಳಲಿನಿಂದ ಶೋಕಗೀತೆ ನುಡಿಸ್ತಿದ್ರು. ಇನ್ನು ಕೆಲವರು ಜೋರಾಗಿ ಅಳ್ತಿದ್ರು.+
24 ಯೇಸು ಅವ್ರಿಗೆ “ಹೊರಗೆ ಹೋಗಿ. ಹುಡುಗಿ ಸತ್ತಿಲ್ಲ, ನಿದ್ದೆ ಮಾಡ್ತಿದ್ದಾಳೆ”+ ಅಂದನು. ಇದನ್ನ ಕೇಳಿ ಜನ ನಗ್ತಾ ಯೇಸುವನ್ನ ಗೇಲಿ ಮಾಡಿದ್ರು.
25 ಅವರು ಹೋದ ಮೇಲೆ ಯೇಸು ಒಳಗೆ ಹೋಗಿ ಆ ಹುಡುಗಿ ಕೈ ಮುಟ್ಟಿದಾಗ+ ಅವಳು ಎದ್ದಳು.+
26 ಈ ಸುದ್ದಿ ಆ ಪ್ರದೇಶದಲ್ಲೆಲ್ಲ ಹಬ್ಬಿತು.
27 ಯೇಸು ಅಲ್ಲಿಂದ ಹೋಗ್ತಿರುವಾಗ ಇಬ್ರು ಕುರುಡರು+ ಆತನ ಹಿಂದೆ ಬರ್ತಾ “ದಾವೀದನ ಮಗನೇ, ನಮಗೆ ಕರುಣೆ ತೋರಿಸು” ಅಂತ ಕೂಗ್ತಿದ್ರು.
28 ಆತನು ಒಂದು ಮನೆಗೆ ಹೋದಾಗ ಆ ಕುರುಡರೂ ಅಲ್ಲಿಗೆ ಬಂದ್ರು. ಯೇಸು ಅವ್ರಿಗೆ “ನಾನು ನಿಮ್ಮನ್ನ ವಾಸಿ ಮಾಡ್ತೀನಿ ಅನ್ನೋ ನಂಬಿಕೆ ನಿಮಗಿದ್ಯಾ?”+ ಅಂತ ಕೇಳಿದನು. ಅದಕ್ಕೆ ಅವರು “ಇದೆ ಸ್ವಾಮಿ” ಅಂದ್ರು.
29 ಆಗ ಯೇಸು ಅವರ ಕಣ್ಣು ಮುಟ್ಟಿ+ “ನಂಬಿಕೆ ಇರೋದ್ರಿಂದ ನಿಮಗೆ ಕಣ್ಣು ಕಾಣಿಸುತ್ತೆ” ಅಂದನು.
30 ಆಗ ಅವ್ರಿಗೆ ದೃಷ್ಟಿ ಬಂತು. ಯೇಸು ಅವ್ರಿಗೆ “ಈ ವಿಷ್ಯ ಯಾರಿಗೂ ಗೊತ್ತಾಗಬಾರದು” ಅಂತ ಎಚ್ಚರಿಸಿದನು.+
31 ಆದ್ರೂ ಅವರು ಹೊರಗೆ ಹೋಗಿ ಆ ಇಡೀ ಪ್ರದೇಶದಲ್ಲಿ ಆತನ ಬಗ್ಗೆ ಎಲ್ರಿಗೂ ಹೇಳಿದ್ರು.
32 ಅವರು ಹೋಗ್ತಿದ್ದಾಗ ಕೆಟ್ಟ ದೇವದೂತ ಹಿಡಿದಿದ್ದ ಒಬ್ಬ ಮೂಕನನ್ನ ಜನ ಯೇಸು ಹತ್ರ ಕರ್ಕೊಂಡು ಬಂದ್ರು.+
33 ಯೇಸು ಆ ಕೆಟ್ಟ ದೇವದೂತನನ್ನ ಬಿಡಿಸಿದ ಮೇಲೆ ಆ ಮೂಕ ಮಾತಾಡಿದ.+ ಆಗ ಜನ ಆಶ್ಚರ್ಯದಿಂದ “ಇಸ್ರಾಯೇಲಲ್ಲಿ ಇಂಥದ್ದನ್ನ ನಾವು ಯಾವತ್ತೂ ನೋಡೇ ಇಲ್ಲ”+ ಅಂದ್ರು.
34 ಆದ್ರೆ ಫರಿಸಾಯರು “ಇವನು ಸೈತಾನನ ಸಹಾಯದಿಂದಾನೇ ಕೆಟ್ಟ ದೇವದೂತರನ್ನ ಬಿಡಿಸ್ತಿದ್ದಾನೆ”+ ಅಂತ ಹೇಳ್ತಿದ್ರು.
35 ಯೇಸು ಎಲ್ಲ ಪಟ್ಟಣಗಳಿಗೆ, ಹಳ್ಳಿಗಳಿಗೆ ಪ್ರಯಾಣ ಮಾಡೋಕೆ ಶುರುಮಾಡಿದನು. ಆತನು ಅವ್ರ ಸಭಾಮಂದಿರಗಳಲ್ಲಿ ಕಲಿಸ್ತಾ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರುತ್ತಾ ಜನ್ರ ಎಲ್ಲ ರೀತಿಯ ರೋಗಗಳನ್ನೂ ಕಾಯಿಲೆಗಳನ್ನೂ ವಾಸಿಮಾಡ್ತಾ ಇದ್ದನು.+
36 ಆತನು ಜನ್ರ ಗುಂಪನ್ನ ನೋಡಿದಾಗ ತುಂಬ ಕನಿಕರಪಟ್ಟನು.+ ಯಾಕಂದ್ರೆ ಅವರು ಕುರುಬನಿಲ್ಲದ ಕುರಿಗಳ ತರ ಇದ್ರು. ಅವ್ರ ಮೇಲೆ ದಬ್ಬಾಳಿಕೆ ಮಾಡಿ ಅವ್ರನ್ನ ಮೂಲೆಗುಂಪು ಮಾಡಿದ್ರು.*+
37 ಆಮೇಲೆ ಯೇಸು ತನ್ನ ಶಿಷ್ಯರಿಗೆ “ಕೊಯ್ಲು ಜಾಸ್ತಿ ಇದೆ. ಕೆಲಸದವರು ಕಮ್ಮಿ ಇದ್ದಾರೆ.+
38 ಹಾಗಾಗಿ ಹೊಲದ ಯಜಮಾನನ ಹತ್ರ ಕೆಲಸದವ್ರನ್ನ ಕಳಿಸು ಅಂತ ಬೇಡ್ಕೊಳ್ಳಿ”+ ಅಂದನು.
ಪಾದಟಿಪ್ಪಣಿ
^ ಅಕ್ಷ. “ಚರ್ಮ ಸುಲಿದು ಬಿಸಾಕಿದ್ರು.”