ಮಲಾಕಿ 1:1-14

  • ತನ್ನ ಜನ್ರ ಕಡೆ ಯೆಹೋವನಿಗಿರೋ ಪ್ರೀತಿ (1-5)

  • ಕಡಿಮೆ ಗುಣಮಟ್ಟದ ಬಲಿ ಅರ್ಪಣೆ (6-14)

    • ಜನಾಂಗಗಳ ಮಧ್ಯ ದೇವರ ಹೆಸ್ರಿಗೆ ಗೌರವ (11)

1  ದೇವರಿಂದ ಒಂದು ಸಂದೇಶ: ಇಸ್ರಾಯೇಲ್ಯರ ಬಗ್ಗೆ ಯೆಹೋವ ಮಲಾಕಿಯ* ಮೂಲಕ ಹೇಳಿದ ಸಂದೇಶ:  “ನಾನು ನಿಮಗೆ ಪ್ರೀತಿ ತೋರಿಸಿದೆ”+ ಅಂತ ಯೆಹೋವ ಹೇಳ್ತಿದ್ದಾನೆ. ಆದ್ರೆ ನೀವು ಆತನಿಗೆ “ಯಾವ ತರ ಪ್ರೀತಿ ತೋರಿಸಿದೆ?” ಅಂತ ಕೇಳ್ತೀರ. ಆಗ ಯೆಹೋವ “ಏಸಾವ ಯಾಕೋಬನ ಅಣ್ಣ ಅಲ್ವಾ?+ ಆದ್ರೆ ನಾನು ಯಾಕೋಬನನ್ನ ಪ್ರೀತಿಸಿದೆ.  ಏಸಾವನನ್ನ ದ್ವೇಷಿಸಿದೆ.+ ಅವನ ಬೆಟ್ಟಗಳನ್ನ ನಿರ್ಜನ ಪ್ರದೇಶ ಮಾಡ್ದೆ.+ ಅವನ ಆಸ್ತಿಯನ್ನ ಕಾಡು ಗುಳ್ಳೆನರಿಗಳಿಗೆ ಕೊಟ್ಟೆ”+ ಅಂತ ಹೇಳ್ತಾನೆ.  “ಎದೋಮ್‌ ‘ನಾವು ಚದರಿಹೋಗಿದ್ದೀವಿ. ಆದ್ರೆ ವಾಪಸ್‌ ಹೋಗಿ ಹಾಳುಬಿದ್ದಿರೋ ಸ್ಥಳವನ್ನ ಮತ್ತೆ ಕಟ್ತೀವಿ’ ಅಂತ ಹೇಳುತ್ತೆ. ಹಾಗಿದ್ರೂ ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: ‘ಅವರು ಕಟ್ತಾರೆ, ಆದ್ರೆ ನಾನು ಕೆಡವಿಹಾಕ್ತೀನಿ. ಆ ಸ್ಥಳಕ್ಕೆ “ಕೆಟ್ಟವರ ಪ್ರಾಂತ್ಯ” ಅಂತ ಹೆಸ್ರು ಬರುತ್ತೆ. ಅಲ್ಲಿನ ಜನ್ರನ್ನ “ಯೆಹೋವನಿಂದ ಶಾಶ್ವತವಾಗಿ ಅವಮಾನಕ್ಕೆ ಗುರಿಯಾದವರು” ಅಂತ ಕರಿತಾರೆ.+  ಅದನ್ನ ನೀವು ಕಣ್ಣಾರೆ ನೋಡಿ “ಯೆಹೋವನನ್ನ ಇಡೀ ಇಸ್ರಾಯೇಲ್‌ ಮಹಿಮೆಪಡಿಸಲಿ” ಅಂತ ಹೇಳ್ತೀರ.’”  “ಸೈನ್ಯಗಳ ದೇವರಾದ ಯೆಹೋವನ ಹೆಸ್ರನ್ನ ಅವಮಾನಿಸೋ ಪುರೋಹಿತರೇ,+ ನಾನು ನಿಮಗೆ ಕೇಳೋದು ಏನಂದ್ರೆ: ‘ಮಗ ತಂದೆಯನ್ನ ಗೌರವಿಸ್ತಾನೆ.+ ಸೇವಕ ಯಜಮಾನನಿಗೆ ಭಯಪಡ್ತಾನೆ. ನಾನು ನಿಮ್ಮ ತಂದೆಯಾಗಿದ್ರೆ,+ ನೀವು ನನಗೆ ಕೊಡಬೇಕಾದ ಗೌರವ ಯಾಕೆ ಕೊಡ್ತಿಲ್ಲ?+ ನಾನು ನಿಮ್ಮ ಯಜಮಾನನಾಗಿದ್ರೆ,* ನೀವ್ಯಾಕೆ ನನಗೆ ಭಯಪಡ್ತಿಲ್ಲ?’* ‘ಆದ್ರೆ ನೀವು “ನಾವು ನಿನ್ನ ಹೆಸ್ರನ್ನ ಹೇಗೆ ಅಸಡ್ಡೆ ಮಾಡಿದ್ದೀವಿ?” ಅಂತ ಕೇಳ್ತೀರ’  ‘ನನ್ನ ಯಜ್ಞವೇದಿ ಮೇಲೆ ಅಶುದ್ಧ ಆಹಾರವನ್ನ* ಅರ್ಪಿಸೋ ಮೂಲಕ ಹಾಗೆ ಮಾಡಿದ್ರಿ.’ ಆದ್ರೆ ಈಗ ‘ನಾವು ನಿನ್ನನ್ನ ಹೇಗೆ ಅಶುದ್ಧ ಮಾಡಿದ್ದೀವಿ?’ ಅಂತ ಕೇಳ್ತೀರ. ‘ಯೆಹೋವನ ಮೇಜನ್ನ+ ನೋಡಿ, “ಇದೂ ಒಂದು ಮೇಜಾ?” ಅಂತ ಮಾತಾಡಿ ಅಶುದ್ಧ ಮಾಡಿದ್ದೀರ.  ನೀವು ಕುರುಡು ಪ್ರಾಣಿಯನ್ನ ಬಲಿ ಅರ್ಪಿಸಿ “ಅದ್ರಲ್ಲೇನೂ ತಪ್ಪಿಲ್ಲ” ಅಂತ ಹೇಳ್ತೀರ. ಕುಂಟ ಅಥವಾ ರೋಗ ಇರೋ ಪ್ರಾಣಿಯನ್ನ ಬಲಿ ಅರ್ಪಿಸಿ “ಅದ್ರಲ್ಲೇನೂ ತಪ್ಪಿಲ್ಲ” ಅಂತ ಹೇಳ್ತೀರ.’”+ “ಅದನ್ನೇ ನಿಮ್ಮ ರಾಜ್ಯಪಾಲನಿಗೆ ಕೊಡಿ ನೋಡೋಣ? ಆಗ ಅವನಿಗೆ ಖುಷಿ ಆಗುತ್ತಾ? ಅವನು ನಿಮಗೆ ದಯೆ ತೋರಿಸ್ತಾನಾ?” ಅಂತ ಸೈನ್ಯಗಳ ದೇವರಾದ ಯೆಹೋವ ಕೇಳ್ತಿದ್ದಾನೆ.  “ಈಗ ನಮಗೆ ದಯೆ ತೋರಿಸೋಕೆ ದೇವರ ಹತ್ರ ದಯವಿಟ್ಟು ಬೇಡ್ಕೊಳ್ಳಿ. ಅಂಥ ಬಲಿಗಳನ್ನ ನೀವು ನಿಮ್ಮ ಕೈಯಾರೆ ಅರ್ಪಿಸುವಾಗ ದೇವರು ನಿಮ್ಮನ್ನ ಸಂತೋಷದಿಂದ ಸ್ವೀಕರಿಸ್ತಾನಾ?” ಅಂತ ಸೈನ್ಯಗಳ ದೇವರಾದ ಯೆಹೋವ ಕೇಳ್ತಿದ್ದಾನೆ. 10  “ದುಡ್ಡು ತಗೊಳ್ಳದೆ ನನ್ನ ಯಜ್ಞವೇದಿ ಮೇಲೆ ಬೆಂಕಿಯನ್ನೂ ಹಚ್ಚದ+ ನೀವು ಆಲಯದ ಬಾಗಿಲು ಮುಚ್ಚೋದು+ ದೂರದ ಮಾತೇ ಬಿಡಿ.* ನಿಮ್ಮಿಂದ ನನಗೆ ಸ್ವಲ್ಪನೂ ಸಂತೋಷ ಇಲ್ಲ. ನೀವು ಕೊಡೋ ಯಾವ ಉಡುಗೊರೆ ಅರ್ಪಣೆಯಲ್ಲೂ ನನಗೆ ಸಂತೋಷವಿಲ್ಲ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ. 11  “ಪೂರ್ವದಿಂದ ಪಶ್ಚಿಮದ ತನಕ ಇರೋ ಜನಾಂಗಗಳ ಮಧ್ಯ ನನ್ನ ಹೆಸ್ರಿಗೆ ಗೌರವ ಸಿಗುತ್ತೆ.+ ಎಲ್ಲ ಸ್ಥಳಗಳಲ್ಲಿ ಬಲಿಗಳನ್ನ ಅರ್ಪಿಸಿ ಅದ್ರ ಹೊಗೆ ಮೇಲೇರೋ ತರ ಮಾಡಲಾಗುತ್ತೆ ಮತ್ತು ಅರ್ಪಣೆಗಳನ್ನ ಒಂದು ಶುದ್ಧ ಉಡುಗೊರೆ ತರ ನನ್ನ ಹೆಸ್ರಿಗಾಗಿ ಕೊಡಲಾಗುತ್ತೆ. ಯಾಕಂದ್ರೆ ಜನಾಂಗಗಳ ಮಧ್ಯ ನನ್ನ ಹೆಸ್ರಿಗೆ ಗೌರವ ಸಿಗುತ್ತೆ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ. 12  “ಆದ್ರೆ ನೀವು ‘ಯೆಹೋವನ ಮೇಜು ಅಶುದ್ಧವಾಗಿದೆ, ಅದ್ರ ಮೇಲಿರೋ ಹಣ್ಣು, ಆಹಾರ ಅಸಹ್ಯ’+ ಅಂತ ಹೇಳಿ ಅದನ್ನ* ಕೀಳಾಗಿ ನೋಡಿದ್ದೀರ.+ 13  ಅಷ್ಟೇ ಅಲ್ಲ ‘ಅಯ್ಯೋ ಸಾಕಾಯ್ತು!’ ಅನ್ನುತ್ತಾ ತಿರಸ್ಕಾರ ಭಾವದಿಂದ ಮುಖ ಕಿವುಚ್ತೀರ” ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ. ಅಷ್ಟೇ ಅಲ್ಲ “ಕದ್ದು ತಂದ, ಕುಂಟಾದ, ಕಾಯಿಲೆ ಇರೋ ಪ್ರಾಣಿಗಳನ್ನ ತರ್ತಿರ. ಹೌದು, ನೀವು ಅಂಥವುಗಳನ್ನ ಉಡುಗೊರೆಯಾಗಿ ತರ್ತಿರ! ಅವುಗಳನ್ನ ನಾನು ನಿಮ್ಮ ಕೈಯಿಂದ ತಗೋಬೇಕಾ?”+ ಅಂತ ಯೆಹೋವ ಕೇಳ್ತಿದ್ದಾನೆ. 14  “ಹರಕೆ ಹೊತ್ತು ತನ್ನ ಮಂದೆಯಲ್ಲಿ ಯಾವುದೇ ಲೋಪ ಇಲ್ಲದ ಗಂಡು ಪ್ರಾಣಿ ಇದ್ರೂ ಸಾಯೋ ಸ್ಥಿತಿಯಲ್ಲಿರೋ ಪ್ರಾಣಿಯನ್ನ ಯೆಹೋವನಿಗೆ ಅರ್ಪಿಸೋ ಕುತಂತ್ರಿಗೆ ಶಾಪ ತಗಲುತ್ತೆ. ಯಾಕಂದ್ರೆ ನಾನು ಮಹಾರಾಜ+ ಮತ್ತು ನನ್ನ ಹೆಸ್ರು ಜನಾಂಗಗಳ ಮಧ್ಯ ಭಯವಿಸ್ಮಯ ಉಂಟುಮಾಡುತ್ತೆ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.

ಪಾದಟಿಪ್ಪಣಿ

ಅರ್ಥ “ನನ್ನ ಸಂದೇಶವಾಹಕ.”
ಅಥವಾ “ದೊಡ್ಡ ಯಜಮಾನನಾಗಿದ್ರೆ.”
ಅಥವಾ “ಗೌರವ ಕೊಡ್ತಿಲ್ಲ.”
ಅಕ್ಷ. “ರೊಟ್ಟಿ.”
ದೇವರ ಆಲಯದ ಬಾಗಿಲುಗಳನ್ನ ಮುಚ್ಚೋ ಜವಾಬ್ದಾರಿ ಅವರಿಗಿತ್ತು ಅಂತ ಇದ್ರಿಂದ ಗೊತ್ತಾಗುತ್ತೆ
ಬಹುಶಃ, “ನನ್ನನ್ನ.”