ಮಲಾಕಿ 2:1-17
2 “ಪುರೋಹಿತರೇ, ಈಗ ಈ ಆಜ್ಞೆ ಕೊಡ್ತೀನಿ.+
2 ಇದನ್ನ ಕೇಳದಿದ್ರೆ, ನನ್ನ ಹೆಸ್ರನ್ನ ಮಹಿಮೆಪಡಿಸೋ ವಿಷ್ಯವನ್ನ ಗಂಭೀರವಾಗಿ* ತಗೊಳ್ಳದಿದ್ರೆ ನಿಮಗೆ ಶಾಪ ಕೊಡ್ತೀನಿ.+ ನಿಮ್ಮ ಆಶೀರ್ವಾದಗಳನ್ನ ಶಾಪವಾಗಿ ಬದಲಾಯಿಸ್ತೀನಿ.+ ಹೌದು, ನಿಮ್ಮ ಆಶೀರ್ವಾದಗಳನ್ನ ಶಾಪವಾಗಿ ಬದಲಾಯಿಸಿದ್ದೀನಿ. ಯಾಕಂದ್ರೆ ನೀವು ಈ ವಿಷ್ಯಗಳನ್ನ ಗಂಭೀರವಾಗಿ* ತಗೊಳ್ಳಲಿಲ್ಲ” ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.
3 “ನೋಡಿ! ನೀವು ಬಿತ್ತಿರೋ ಬೀಜವನ್ನ ನಾನು ನಿಮ್ಮಿಂದಾಗಿ ನಾಶಮಾಡ್ತೀನಿ.*+ ನಿಮ್ಮ ಮುಖಗಳಿಗೆ ಸಗಣಿ ಎರಚ್ತೀನಿ. ನೀವು ನಿಮ್ಮ ಹಬ್ಬಗಳಲ್ಲಿ ಬಲಿಯಾಗಿ ಕೊಡೋ ಪ್ರಾಣಿಗಳ ಸಗಣಿಯನ್ನ ಎರಚ್ತೀನಿ. ಆ ಸಗಣಿ ಜೊತೆ ನೀವು ಸಹ ತಿಪ್ಪೆಯ* ಪಾಲಾಗ್ತೀರ.
4 ಲೇವಿ ಜೊತೆ ನಾನು ಮಾಡ್ಕೊಂಡಿದ್ದ ಒಪ್ಪಂದ ಮುಂದುವರಿಯೋಕೆ ನಾನು ನಿಮಗೆ ಈ ಆಜ್ಞೆ ಕೊಟ್ಟಿದ್ದೀನಿ ಅಂತ ನೀವು ಆಗ ತಿಳ್ಕೊಳ್ತೀರ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.
5 “ನಾನು ಅವನ ಜೊತೆ ಮಾಡ್ಕೊಂಡ ಒಪ್ಪಂದ ಅವನ ಜೀವ ಉಳಿಸ್ತು. ಅದ್ರಿಂದ ನೆಮ್ಮದಿಯ ಜೀವನ ನಡೆಸೋಕಾಯ್ತು. ಈ ಆಶೀರ್ವಾದಗಳಿಂದಾಗಿ ಅವನು ನನಗೆ ಭಯಭಕ್ತಿ ತೋರಿಸಿದ. ಅವನು ನನ್ನ ಹೆಸ್ರನ್ನ ಗೌರವಿಸಿದ್ರಿಂದ ನಾನು ಇಷ್ಟಪಡದ ವಿಷ್ಯಗಳನ್ನ ದ್ವೇಷಿಸಿದ.
6 ಅವನ ಬಾಯಲ್ಲಿ ಸತ್ಯದ ನಿಯಮ ಇತ್ತು.*+ ಅವನ ತುಟಿಗಳಿಂದ ಕೆಟ್ಟ ಮಾತು ಬರಲಿಲ್ಲ. ಅವನು ನನ್ನ ಜೊತೆ ಶಾಂತಿಯಿಂದ, ನೀತಿಯಿಂದ ಇದ್ದ.+ ತಪ್ಪುದಾರಿ ಹಿಡಿದಿದ್ದ ಎಷ್ಟೋ ಜನ್ರನ್ನ ಸರಿ ದಾರಿಗೆ ತಂದ.
7 ಯಾಕಂದ್ರೆ ಪುರೋಹಿತನ ತುಟಿಗಳ ಮೇಲೆ ಯಾವಾಗ್ಲೂ ಜ್ಞಾನ ಇರಬೇಕು. ನಿಯಮದ* ಬಗ್ಗೆ ತಿಳ್ಕೊಳ್ಳೋಕೆ ಜನ ಅವನನ್ನ ಹುಡ್ಕೊಂಡು ಹೋಗಬೇಕು.+ ಕಾರಣ, ಅವನು ಸೈನ್ಯಗಳ ದೇವರಾದ ಯೆಹೋವನ ಸಂದೇಶವಾಹಕ.”
8 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ಆದ್ರೆ ಪುರೋಹಿತರೇ, ನೀವು ತಪ್ಪು ದಾರಿಯಲ್ಲಿ ಹೋಗ್ತಿದ್ದೀರ. ಎಷ್ಟೋ ಜನ ನಿಯಮವನ್ನ* ಪಾಲಿಸದೆ ಎಡವೋ ತರ ಮಾಡಿದ್ದೀರ.+ ಲೇವಿ ಜೊತೆ ಮಾಡ್ಕೊಂಡ ಒಪ್ಪಂದವನ್ನ ನೀವು ಮುರಿದಿದ್ದೀರ.+
9 ಹಾಗಾಗಿ ಎಲ್ಲ ಜನ್ರ ಮುಂದೆ ನಾನು ನಿಮ್ಮನ್ನ ತುಚ್ಛವಾಗಿ ನೋಡ್ತೀನಿ, ಕೀಳಾಗಿ ಕಾಣ್ತೀನಿ. ಯಾಕಂದ್ರೆ ನೀವು ನನ್ನ ಮಾರ್ಗಗಳಲ್ಲಿ ನಡಿಲಿಲ್ಲ. ನಿಯಮಗಳಿಗೆ ಸಂಬಂಧಪಟ್ಟ ವಿಷ್ಯಗಳಲ್ಲಿ ಭೇದಭಾವ ಮಾಡಿದ್ರಿ.”+
10 “ನಮ್ಮೆಲ್ರ ತಂದೆ ಒಬ್ಬನೇ ಅಲ್ವಾ?+ ಒಬ್ಬನೇ ದೇವರು ನಮ್ಮನ್ನೆಲ್ಲ ಸೃಷ್ಟಿ ಮಾಡಿದನಲ್ವಾ? ಹಾಗಂದ್ಮೇಲೆ ನಮ್ಮ ಪೂರ್ವಜರ ಒಪ್ಪಂದ ಮುರಿದು ನಾವು ಯಾಕೆ ಒಬ್ಬರಿಗೊಬ್ರು ಮೋಸ ಮಾಡ್ತಾ ಇದ್ದೀವಿ?+
11 ಯೆಹೂದ ವಂಚಿಸಿದೆ. ಇಸ್ರಾಯೇಲಲ್ಲಿ ಮತ್ತು ಯೆರೂಸಲೇಮಲ್ಲಿ ಅಸಹ್ಯವಾದ ಒಂದು ಕೆಲಸ ನಡೆದಿದೆ. ಪವಿತ್ರವಾದದ್ದನ್ನ ಪ್ರೀತಿಸೋ ಯೆಹೋವನನ್ನ ಯೆಹೂದ ಅಗೌರವಿಸಿದೆ.+ ಬೇರೆ ದೇವರನ್ನ ಆರಾಧಿಸೋ ಸ್ತ್ರೀಯನ್ನ* ಮದುವೆಯಾಗಿದೆ.+
12 ಇಂಥ ಕೆಲಸ ಮಾಡುವವರು ಯಾರೇ ಆಗಿರಲಿ ಅವ್ರನ್ನ ಯೆಹೋವ ಯಾಕೋಬನ ಡೇರೆಗಳಿಂದ ನಾಶ ಮಾಡ್ತಾನೆ. ಅವರು ಸೈನ್ಯಗಳ ದೇವರಾದ ಯೆಹೋವನಿಗೆ ಉಡುಗೊರೆ ಅರ್ಪಣೆಯನ್ನ ಅರ್ಪಿಸುವವ್ರೇ ಆಗಿದ್ರೂ ಸರಿ ಅವರನ್ನ ನಾಶ ಮಾಡ್ತಾನೆ.”+
13 “ನೀವು ಇನ್ನೊಂದು ವಿಷ್ಯ ಮಾಡಿದ್ದೀರ. ಅದ್ರಿಂದ ಯೆಹೋವನ ಯಜ್ಞವೇದಿ ಕಣ್ಣೀರು, ಗೋಳಾಟ ಮತ್ತು ನಿಟ್ಟುಸಿರಿಂದ ತುಂಬಿದೆ. ಹಾಗಾಗಿ ಆತನು ನಿಮ್ಮ ಉಡುಗೊರೆ ಅರ್ಪಣೆಯ ಕಡೆ ಗಮನಕೊಡಲ್ಲ ಅಥವಾ ನೀವು ನಿಮ್ಮ ಕೈಯಿಂದ ಕೊಡೋ ಯಾವುದನ್ನೂ ಮೆಚ್ಚಲ್ಲ.+
14 ಅಷ್ಟೇ ಅಲ್ಲ ನೀವು ‘ನಾವು ಅಂಥದ್ದೇನು ಮಾಡಿದ್ವಿ?’ ಅಂತ ಕೇಳ್ತೀರ. ನೀನು ನಿನ್ನ ಯೌವನದ ಹೆಂಡತಿಗೆ ದ್ರೋಹ ಮಾಡಿದ್ದಕ್ಕೆ ಯೆಹೋವನೇ ಸಾಕ್ಷಿ. ಅವಳು ನಿನ್ನ ಜೊತೆಗಾತಿ ಆಗಿರೋದಾದ್ರೂ ಒಪ್ಪಂದದ ಪ್ರಕಾರ* ನಿನ್ನ ಹೆಂಡತಿ ಆಗಿರೋದಾದ್ರೂ ನೀನು ಅವಳಿಗೆ ಮೋಸ ಮಾಡಿದ್ದೀಯ.+
15 ಹಾಗಿದ್ರೂ ನಿಮ್ಮಲ್ಲಿ ಒಬ್ಬ ಈ ರೀತಿ ಮಾಡಬಾರದು ಅಂತ ತನ್ನ ಹೃದಯದಲ್ಲಿ ದೃಢಸಂಕಲ್ಪ ಮಾಡಿದ್ದಾನೆ. ದೇವರು ಆರಿಸ್ಕೊಂಡಿರೋ ವಂಶವನ್ನ ಕಾಪಾಡಬೇಕು ಅನ್ನೋ ನಿಯತ್ತಿಂದಾನೇ ಅವನು ಹೀಗೆ ಮಾಡಿದ್ದಾನೆ. ಅವನು ಈಗ್ಲೂ ದೇವರ ಶಕ್ತಿಯ ಮಾರ್ಗದರ್ಶನದ ಪ್ರಕಾರ ನಡಿತಿದ್ದಾನೆ. ಈಗ ನೀವೂ ನಿಮ್ಮ ಹೃದಯಗಳನ್ನ ಪರೀಕ್ಷಿಸ್ಕೊಳ್ಳಿ ಮತ್ತು ಸರಿಯಾದ ಮನೋಭಾವ ಬೆಳೆಸ್ಕೊಳ್ಳಿ. ಯೌವನದ ಹೆಂಡತಿಗೆ ಮೋಸ ಮಾಡಲ್ಲ ಅಂತ ದೃಢತೀರ್ಮಾನ ಮಾಡ್ಕೊಳ್ಳಿ.
16 ಯಾಕಂದ್ರೆ ನಾನು ವಿವಾಹ ವಿಚ್ಛೇದನವನ್ನ ದ್ವೇಷಿಸ್ತೀನಿ”+ ಅಂತ ಇಸ್ರಾಯೇಲ್ ದೇವರಾದ ಯೆಹೋವ ಹೇಳ್ತಿದ್ದಾನೆ. “ಹಿಂಸಾಚಾರದಲ್ಲಿ ಒಳಗೂಡುವವನನ್ನ* ಸಹ ನಾನು ದ್ವೇಷಿಸ್ತೀನಿ” ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ. ಹಾಗಾಗಿ ನಿಮ್ಮ ಮನಸ್ಸು ವಾಲದ ಹಾಗೆ ಕಾಪಾಡ್ಕೊಳ್ಳಿ ಮತ್ತು ಮೋಸ ಮಾಡಲ್ಲ ಅಂತ ದೃಢತೀರ್ಮಾನ ಮಾಡ್ಕೊಳ್ಳಿ.+
17 “ನಿಮ್ಮ ಮಾತುಗಳಿಂದ ಯೆಹೋವ ಬೇಸತ್ತು ಹೋಗಿದ್ದಾನೆ.+ ಆದ್ರೆ ನೀವು ‘ನಾವು ಹೇಗೆ ಆತನು ಬೇಸತ್ತು ಹೋಗೋ ತರ ಮಾಡಿದ್ವಿ?’ ಅಂತ ಕೇಳ್ತೀರ. ‘ತಪ್ಪು ಮಾಡುವವ್ರೆಲ್ಲ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವರು, ಅವ್ರಿಂದ ಖುಷಿ ಆಗ್ತಾನೆ+ ಅಂತ’ ಹೇಳೋ ಮೂಲಕ ಅಥವಾ ‘ನ್ಯಾಯದ ದೇವರು ಎಲ್ಲಿದ್ದಾನೆ?’ ಅಂತ ಕೇಳೋ ಮೂಲಕ ನೀವು ಹಾಗೆ ಮಾಡಿದ್ದೀರ.”
ಪಾದಟಿಪ್ಪಣಿ
^ ಅಕ್ಷ. “ಹೃದಯಕ್ಕೆ.”
^ ಅಕ್ಷ. “ಹೃದಯಕ್ಕೆ.”
^ ಅಕ್ಷ. “ಬೆಳೆಯದ ಹಾಗೆ ಖಂಡಿಸ್ತೀನಿ.”
^ ಅದು, ಬಲಿ ಅರ್ಪಿಸ್ತಿದ್ದ ಪ್ರಾಣಿಯ ಸಗಣಿ ಹಾಕ್ತಿದ್ದ ಸ್ಥಳ.
^ ಅಥವಾ “ನಿರ್ದೇಶನ ಇತ್ತು.”
^ ಅಥವಾ “ನಿರ್ದೇಶನದ.”
^ ಬಹುಶಃ, “ನಿಮ್ಮ ನಿರ್ದೇಶನದಿಂದ.”
^ ಅಕ್ಷ. “ಮಗಳು.”
^ ಅಥವಾ “ಕಾನೂನುಬದ್ಧವಾಗಿ.”
^ ಅಕ್ಷ. “ಹಿಂಸೆಯನ್ನ ಕಂಬಳಿ ತರ ಹೊದ್ದುಕೊಂಡಿರುವವನು.”