ಮಲಾಕಿ 4:1-6

  • ಯೆಹೋವನ ದಿನ ಬರೋ ಮುಂಚೆ ಎಲೀಯ ಬರ್ತಾನೆ (1-6)

    • “ನೀತಿಯ ಸೂರ್ಯ ಹೊಳಿತಾನೆ” (2)

4  ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ನೋಡಿ! ಧಗಧಗ ಉರಿಯೋ ಕುಲುಮೆ ತರ ಇರೋ ಆ ದಿನ ಬರ್ತಿದೆ.+ ಆಗ ಅಹಂಕಾರಿಗಳು, ಕೆಟ್ಟ ಕೆಲಸ ಮಾಡುವವರು ಹುಲ್ಲು ಕಡ್ಡಿ ತರ ಆಗ್ತಾರೆ. ಬರ್ತಿರೋ ಆ ದಿನ ಖಂಡಿತ ಅವ್ರನ್ನ ನುಂಗಿಬಿಡುತ್ತೆ. ಆ ದಿನ ಅವ್ರ ಬೇರನ್ನಾಗಲಿ ಕೊಂಬೆಯನ್ನಾಗಲಿ ಬಿಡಲ್ಲ.  ಆದ್ರೆ ನನ್ನ ಹೆಸ್ರನ್ನ ಗೌರವಿಸೋ* ನಿಮ್ಮ ಮೇಲೆ ನೀತಿಯ ಸೂರ್ಯ ಹೊಳಿತಾನೆ. ಅವನ ಕಿರಣಗಳಿಂದ* ನೀವು ವಾಸಿ ಆಗ್ತೀರ. ದಷ್ಟಪುಷ್ಟವಾದ ಕರುಗಳ ತರ ಕುಣಿದು ಕುಪ್ಪಳಿಸ್ತೀರ.”  “ನಾನು ಕ್ರಮ ತಗೊಳ್ಳೋ ಆ ದಿನದಲ್ಲಿ ಕೆಟ್ಟವರು ನಿಮ್ಮ ಕಾಲ ಕೆಳಗಿನ ಧೂಳಿನ ತರ ಇರ್ತಾರೆ. ಹಾಗಾಗಿ ನೀವು ಅವ್ರನ್ನ ತುಳಿದುಹಾಕ್ತೀರ” ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.  “ನನ್ನ ಸೇವಕನಾದ ಮೋಶೆಯ ನಿಯಮ ಪುಸ್ತಕವನ್ನ ನೆನಪಿಟ್ಕೊಳ್ಳಿ. ಇಸ್ರಾಯೇಲ್ಯರು ಪಾಲಿಸಬೇಕಂತ ನಾನು ಹೋರೇಬ್‌ ಬೆಟ್ಟದಲ್ಲಿ ಅವ್ರಿಗೆ ಕೊಟ್ಟ ನಿಯಮಗಳನ್ನ, ತೀರ್ಪುಗಳನ್ನ ಮರಿಬೇಡಿ.+  ನೋಡಿ! ಭಯವಿಸ್ಮಯಗೊಳಿಸೋ ಯೆಹೋವನ ಮಹಾ ದಿನ ಬರೋ ಮುಂಚೆ+ ನಾನು ನಿಮ್ಮ ಹತ್ರ ಪ್ರವಾದಿ ಎಲೀಯನನ್ನ ಕಳಿಸ್ತೀನಿ.+  ಅವನು ತಂದೆಯ ಹೃದಯವನ್ನ ಗಂಡು ಮಕ್ಕಳ ಕಡೆಗೂ+ ಗಂಡು ಮಕ್ಕಳ ಹೃದಯವನ್ನ ತಂದೆ ಕಡೆಗೂ ತಿರುಗಿಸ್ತಾನೆ. ಆಗ ನಾನು ಬಂದು ಭೂಮಿಯನ್ನ ಅಳಿಸಿಹಾಕಿ ಅದನ್ನ ಸಂಪೂರ್ಣವಾಗಿ ನಾಶಮಾಡೋ ಅಗತ್ಯ ಇರಲ್ಲ.”

ಪಾದಟಿಪ್ಪಣಿ

ಅಕ್ಷ. “ಭಯಪಡೋ.”
ಅಕ್ಷ. “ರೆಕ್ಕೆಗಳಿಂದ.”