ಮಾರ್ಕ 13:1-37

  • ಲೋಕಾಂತ್ಯ (1-37)

    • ಯುದ್ಧ, ಭೂಕಂಪ, ಆಹಾರದ ಕೊರತೆ (8)

    • ಸಿಹಿಸುದ್ದಿ ಸಾರಬೇಕಿದೆ (10)

    • ಮಹಾ ಸಂಕಟ (19)

    • ಮನುಷ್ಯಕುಮಾರ ಬರ್ತಾನೆ (26)

    • ಅಂಜೂರ ಮರದ ಉದಾಹರಣೆ (28-31)

    • ಎಚ್ಚರವಾಗಿರಿ (32-37)

13  ಯೇಸು ದೇವಾಲಯದಿಂದ ಹೊರಗೆ ಬರ್ತಿದ್ದಾಗ ಶಿಷ್ಯರಲ್ಲಿ ಒಬ್ಬ “ಗುರು, ಅಲ್ಲಿ ನೋಡು! ಆ ಕಲ್ಲುಗಳು, ಕಟ್ಟಡಗಳು ಎಷ್ಟು ಅದ್ಭುತವಾಗಿ ಇವೆ ಅಲ್ವಾ!” ಅಂದ.+  ಅದಕ್ಕೆ ಯೇಸು “ನೀನು ನೋಡ್ತಿರೋ ಈ ದೊಡ್ಡ ಕಟ್ಟಡ ಯಾವುದೂ ಉಳಿಯಲ್ಲ. ಒಂದು ಕಲ್ಲಿನ ಮೇಲೆ ಇನ್ನೊಂದು ಕಲ್ಲು ಇರದ ಹಾಗೆ ಎಲ್ಲ ಬೀಳಿಸ್ತಾರೆ” ಅಂದನು.+  ಆತನು ಆಲೀವ್‌ ಗುಡ್ಡದ ಮೇಲೆ ಕೂತಿದ್ದ. ಅಲ್ಲಿಂದ ದೇವಾಲಯ ಕಾಣ್ತಾ ಇತ್ತು. ಆಗ ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೆಯ ಮಾತ್ರ ಆತನ ಹತ್ರ ಹೋಗಿ  “ಆ ವಿಷ್ಯಗಳೆಲ್ಲ ಯಾವಾಗ ನಡಿಯುತ್ತೆ? ಇವೆಲ್ಲದ್ರ ಅಂತ್ಯ ಹತ್ರ ಇದೆ ಅನ್ನೋದಕ್ಕೆ ಸೂಚನೆ ಏನು? ನಮಗೆ ಹೇಳು” ಅಂತ ಕೇಳಿದ್ರು.+  ಆಗ ಯೇಸು ಹೀಗಂದನು “ಯಾರೂ ನಿಮ್ಮನ್ನ ದಾರಿತಪ್ಪಿಸದ ಹಾಗೆ ನೋಡ್ಕೊಳ್ಳಿ.+  ತುಂಬ ಜನ ನನ್ನ ಹೆಸ್ರಲ್ಲಿ ಬರ್ತಾರೆ. ‘ನಾನೇ ಕ್ರಿಸ್ತ’ ಅಂತ ಹೇಳಿ ಎಷ್ಟೋ ಜನ್ರನ್ನ ದಾರಿತಪ್ಪಿಸ್ತಾರೆ.  ಅಷ್ಟೇ ಅಲ್ಲ ಯುದ್ಧ ನಡಿಯೋದನ್ನ, ಯುದ್ಧ ಆಗ್ತಾ ಇದೆ ಅನ್ನೋ ಸುದ್ದಿಯನ್ನ ನೀವು ಕೇಳ್ತೀರ. ಆಗ ಭಯಪಡಬೇಡಿ. ಯಾಕಂದ್ರೆ ಅವೆಲ್ಲ ಆಗಲೇಬೇಕು. ಆದ್ರೆ ಅದೇ ಅಂತ್ಯ ಅಲ್ಲ.+  ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧ ಮಾಡುತ್ತೆ.+ ಒಂದರ ನಂತ್ರ ಇನ್ನೊಂದು ಸ್ಥಳದಲ್ಲಿ ಭೂಕಂಪ ಆಗುತ್ತೆ. ಆಹಾರದ ಕೊರತೆ ಇರುತ್ತೆ.+ ಇವೆಲ್ಲ ಕಷ್ಟಕಾಲದ* ಆರಂಭ ಅಷ್ಟೇ.+  ಆದ್ರೆ ನೀವು ಎಚ್ಚರವಾಗಿರಬೇಕು. ನನ್ನಿಂದಾಗಿ ಜನ ನಿಮ್ಮನ್ನ ನ್ಯಾಯಾಲಯದ+ ಮೆಟ್ಟಿಲು ಹತ್ತಿಸ್ತಾರೆ. ಸಭಾಮಂದಿರಗಳಲ್ಲಿ ಹೊಡಿತಾರೆ.+ ರಾಜ್ಯಪಾಲರ, ರಾಜರ ಹತ್ರ ಎಳ್ಕೊಂಡು ಹೋಗ್ತಾರೆ. ಆಗ ಅವ್ರಿಗೆ ಸಾಕ್ಷಿ ಕೊಡೋ ಅವಕಾಶ ನಿಮಗೆ ಸಿಗುತ್ತೆ.+ 10  ಅಷ್ಟೇ ಅಲ್ಲ ಎಲ್ಲ ದೇಶಗಳಲ್ಲಿ ಮೊದಲು ಸಿಹಿಸುದ್ದಿ ಸಾರಬೇಕು.+ 11  ಅವರು ನಿಮ್ಮನ್ನ ವಿಚಾರಿಸೋಕೆ ಹಿಡ್ಕೊಂಡು ಹೋಗುವಾಗ ಏನು ಮಾತಾಡಬೇಕು ಅಂತ ತುಂಬ ತಲೆಕೆಡಿಸ್ಕೊಳ್ಳಬೇಡಿ. ಏನು ಹೇಳಬೇಕು ಅಂತ ಆ ಸಮಯ ಬಂದಾಗ ನಿಮಗೇ ಗೊತ್ತಾಗುತ್ತೆ, ಅದನ್ನೇ ಹೇಳಿ. ಯಾಕಂದ್ರೆ ಅಲ್ಲಿ ಮಾತಾಡೋದು ನೀವಲ್ಲ, ಪವಿತ್ರಶಕ್ತಿನೇ.+ 12  ಅಷ್ಟೇ ಅಲ್ಲ ಅಣ್ಣ ತಮ್ಮನನ್ನ, ಅಪ್ಪ ಮಗನನ್ನ ಮರಣಕ್ಕೆ ಒಪ್ಪಿಸ್ತಾರೆ. ಮಕ್ಕಳು ಹೆತ್ತವರ ವಿರುದ್ಧ ತಿರುಗಿಬಿದ್ದು ಅವ್ರನ್ನ ಕೊಲ್ಲಿಸ್ತಾರೆ.+ 13  ನನ್ನ ಶಿಷ್ಯರಾಗಿರೋ ಕಾರಣ ನಿಮ್ಮನ್ನ ಜನ್ರೆಲ್ಲ ದ್ವೇಷಿಸ್ತಾರೆ.+ ಆದ್ರೆ ಕೊನೆ ತನಕ ತಾಳ್ಕೊಂಡ್ರೆ*+ ರಕ್ಷಣೆ ಸಿಗುತ್ತೆ.+ 14  ಆದ್ರೆ ಹಾಳುಮಾಡೋ ಅಸಹ್ಯ ವಸ್ತು+ ನಿಲ್ಲಬಾರದ ಜಾಗದಲ್ಲಿ ನಿಂತಿರೋದನ್ನ ನೀವು ನೋಡುವಾಗ (ಓದುವವರು ಬುದ್ಧಿ ಉಪಯೋಗಿಸಲಿ) ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಬೇಕು.+ 15  ಮನೆ ಮೇಲೆ ಇರುವವನು ಕೆಳಗೆ ಇಳಿಬಾರದು, ಏನನ್ನಾದ್ರೂ ತಗೊಳಕ್ಕೆ ಮನೆಯೊಳಗೆ ಹೋಗಬಾರದು. 16  ಹೊಲದಲ್ಲಿ ಇರುವವನು ತನ್ನ ಬಟ್ಟೆ ತಗೊಳ್ಳೋಕೆ ವಾಪಸ್‌ ಹೋಗಬಾರದು. 17  ಆಗ ಗರ್ಭಿಣಿಯರಿಗೆ, ಮೊಲೆಕೂಸು ಇರೋರಿಗೆ ತುಂಬ ಕಷ್ಟ ಆಗುತ್ತೆ!+ 18  ಚಳಿಗಾಲದಲ್ಲಿ ಆ ಸಮಯ ಬರಬಾರದು ಅಂತ ಪ್ರಾರ್ಥನೆ ಮಾಡ್ತಾ ಇರಿ. 19  ಯಾಕಂದ್ರೆ ಆ ಸಮಯದಲ್ಲಿ ಮಹಾ ಸಂಕಟ ಇರುತ್ತೆ.+ ದೇವರು ಜನ್ರನ್ನ ಸೃಷ್ಟಿ ಮಾಡಿದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದೇ ಇಲ್ಲ. ಇನ್ನು ಮುಂದೆನೂ ಬರಲ್ಲ.+ 20  ಯೆಹೋವ* ಆ ದಿನಗಳನ್ನ ಕಡಿಮೆ ಮಾಡದಿದ್ರೆ ಒಬ್ಬನೂ ಉಳಿಯಲ್ಲ. ಆದ್ರೆ ತಾನು ಆರಿಸ್ಕೊಂಡಿರೋ ಜನ್ರಿಗೋಸ್ಕರ ಆ ದಿನಗಳನ್ನ ಕಡಿಮೆ ಮಾಡ್ತಾನೆ.+ 21  ಅಷ್ಟೇ ಅಲ್ಲ ಯಾರಾದ್ರೂ ‘ಕ್ರಿಸ್ತ ಇಲ್ಲಿದ್ದಾನೆ,’ ‘ಕ್ರಿಸ್ತ ಅಲ್ಲಿದ್ದಾನೆ’ ಅಂತ ಹೇಳಿದ್ರೆ ನಂಬಬೇಡಿ.+ 22  ಯಾಕಂದ್ರೆ ಸುಳ್ಳು ಕ್ರಿಸ್ತರು, ಸುಳ್ಳು ಪ್ರವಾದಿಗಳು ಬಂದು+ ಬೇರೆಬೇರೆ ರೀತಿಯ ದೊಡ್ಡದೊಡ್ಡ ಅದ್ಭುತಗಳನ್ನ ಮಾಡ್ತಾರೆ. ಹೀಗೆ ಮಾಡಿ ದೇವರು ಆರಿಸ್ಕೊಂಡಿರೋ ಜನ್ರನ್ನ ಸಹ ದಾರಿ ತಪ್ಪಿಸೋಕೆ ಪ್ರಯತ್ನಿಸ್ತಾರೆ. 23  ಹಾಗಾಗಿ ಎಚ್ಚರವಾಗಿರಿ.+ ನಾನು ಎಲ್ಲ ವಿಷ್ಯಗಳನ್ನ ನಿಮಗೆ ಮುಂಚೆನೇ ಹೇಳಿದ್ದೀನಿ. 24  ಆದ್ರೆ ಆ ದಿನಗಳಲ್ಲಿ, ಕಷ್ಟ ಮುಗಿದ ಮೇಲೆ ಸೂರ್ಯ ಕತ್ತಲಾಗ್ತಾನೆ. ಚಂದ್ರ ಬೆಳಕು ಕೊಡಲ್ಲ.+ 25  ಆಕಾಶದಿಂದ ನಕ್ಷತ್ರಗಳು ಬೀಳ್ತವೆ. ಆಕಾಶದ ಶಕ್ತಿಗಳು ನಡುಗ್ತವೆ. 26  ಆಗ ಮನುಷ್ಯಕುಮಾರ ಶಕ್ತಿ ಮತ್ತು ಮಹಾ ಅಧಿಕಾರದಿಂದ ಮೋಡಗಳ ಮೇಲೆ ಬರೋದನ್ನ+ ಅವರು ನೋಡ್ತಾರೆ.+ 27  ಆಮೇಲೆ ಆತನು ತನ್ನ ದೂತರನ್ನ ಕಳಿಸ್ತಾನೆ. ಈ ದೂತರು ಮನುಷ್ಯಕುಮಾರ ಆರಿಸ್ಕೊಂಡಿರುವವರನ್ನ ಭೂಮಿಯ ಒಂದು ಮೂಲೆಯಿಂದ ಆಕಾಶದ ಇನ್ನೊಂದು ಮೂಲೆ ತನಕ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸ್ತಾರೆ.+ 28  ಈಗ ಅಂಜೂರ ಮರದಿಂದ ಒಂದು ಪಾಠ ಕಲಿರಿ: ಆ ಮರದ ಕೊಂಬೆ ಚಿಗುರಿ ಎಲೆ ಬಿಡುವಾಗ ಬೇಸಿಗೆ ಶುರುವಾಯ್ತು ಅಂತ ಅರ್ಥ ಮಾಡ್ಕೊಳ್ತೀರಲ್ಲ.+ 29  ಅದೇ ತರ ಇದೆಲ್ಲ ನಡಿಯೋದನ್ನ ನೀವು ನೋಡುವಾಗ ಆತನು ಬಾಗಿಲ ಹತ್ರಾನೇ ಇದ್ದಾನೆ ಅಂತ ತಿಳ್ಕೊಳ್ಳಿ.+ 30  ಈ ಎಲ್ಲ ವಿಷ್ಯ ನಡಿಯೋ ತನಕ ಈ ಪೀಳಿಗೆ ನಾಶ ಆಗಲ್ಲ ಅಂತ ನಿಮಗೆ ನಿಜ ಹೇಳ್ತೀನಿ.+ 31  ಆಕಾಶ ಭೂಮಿ ನಾಶ ಆಗುತ್ತೆ.*+ ಆದ್ರೆ ನನ್ನ ಮಾತುಗಳು ಯಾವತ್ತೂ ನಾಶ ಆಗಲ್ಲ.+ 32  ಆದ್ರೆ ಆ ದಿನ ಮತ್ತು ಸಮಯ ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಸ್ವರ್ಗದಲ್ಲಿರೋ ದೇವದೂತರಿಗೂ ಗೊತ್ತಿಲ್ಲ, ಮಗನಿಗೂ ಗೊತ್ತಿಲ್ಲ. ತಂದೆಗೆ ಮಾತ್ರ ಗೊತ್ತು.+ 33  ದೇವರು ಆರಿಸ್ಕೊಂಡಿರೋ ಸಮಯ ಯಾವಾಗ ಅಂತ ಗೊತ್ತಿಲ್ಲದೆ ಇರೋದ್ರಿಂದ+ ಜಾಗ್ರತೆಯಿಂದ ಇರಿ, ಎಚ್ಚರವಾಗಿ ಇರಿ.+ 34  ಇದನ್ನ ವಿದೇಶಕ್ಕೆ ಹೋಗೋ ಒಬ್ಬ ವ್ಯಕ್ತಿಗೆ ಹೋಲಿಸಬಹುದು. ಅವನು ಮನೆಯಿಂದ ಹೋಗುವಾಗ ತನ್ನ ಸೇವಕರಿಗೆ ಅಧಿಕಾರ ಕೊಟ್ಟು,+ ಅವರವ್ರ ಕೆಲಸ ಏನಂತ ಹೇಳಿ, ಕಾವಲುಗಾರನಿಗೆ ಎಚ್ಚರವಾಗಿ ಇರು ಅಂತ ಆಜ್ಞೆ ಕೊಟ್ಟು ಹೋದ.+ 35  ಮನೆ ಯಜಮಾನ ಸಂಜೆ ಬರ್ತಾನೋ, ಮಧ್ಯರಾತ್ರಿ ಬರ್ತಾನೋ, ನಸುಕಲ್ಲಿ* ಬರ್ತಾನೋ, ಬೆಳಗಾದ ಮೇಲೆ ಬರ್ತಾನೋ ನಿಮಗೆ ಗೊತ್ತಿಲ್ಲ.+ ಅದಕ್ಕೇ ಯಾವಾಗ್ಲೂ ಎಚ್ಚರವಾಗಿರಿ.+ 36  ಎಚ್ಚರವಾಗಿಲ್ಲ ಅಂದ್ರೆ ಅವನು ದಿಢೀರಂತ ಬಂದಾಗ ನೀವು ನಿದ್ದೆ ಮಾಡೋದನ್ನ+ ನೋಡ್ತಾನೆ. 37  ಹಾಗಾಗಿ ನಾನು ನಿಮಗೆ ಹೇಳೋದನ್ನೇ ಎಲ್ರಿಗೂ ಹೇಳ್ತಾ ಇದ್ದೀನಿ, ಸದಾ ಎಚ್ಚರವಾಗಿರಿ.”+

ಪಾದಟಿಪ್ಪಣಿ

ಅಕ್ಷ. “ಹೆರಿಗೆ ನೋವು.”
ಅಥವಾ “ತಾಳಿದವನಿಗೆ.”
ಇಲ್ಲಿ ಕೆಟ್ಟ ಜನ್ರನ್ನ ಮತ್ತು ಅವ್ರ ನಾಯಕನನ್ನ ಸೂಚಿಸಿ ಮಾತಾಡಲಾಗಿದೆ.
ಅಕ್ಷ. “ಕೋಳಿ ಕೂಗೋ ಮುಂಚೆ.”