ಮಾರ್ಕ 5:1-43

  • ಯೇಸು ಕೆಟ್ಟ ದೇವದೂತರನ್ನ ಹಂದಿ ಹಿಂಡಿಗೆ ಕಳಿಸಿದನು (1-20)

  • ಯಾಯೀರನ ಮಗಳು; ಒಬ್ಬ ಸ್ತ್ರೀ ಯೇಸುವಿನ ಬಟ್ಟೆ ಮುಟ್ತಾಳೆ (21-43)

5  ಅವರು ಸಮುದ್ರದ ಆಕಡೆ ದಡದಲ್ಲಿದ್ದ ಗೆರಸ ಪಟ್ಟಣಕ್ಕೆ ಬಂದ್ರು.+  ಯೇಸು ದೋಣಿಯಿಂದ ಇಳಿದ ತಕ್ಷಣ ಕೆಟ್ಟ ದೇವದೂತರ ನಿಯಂತ್ರಣದಲ್ಲಿದ್ದ ಒಬ್ಬ ವ್ಯಕ್ತಿ ಸ್ಮಶಾನದ ಮಧ್ಯದಿಂದ ನಡ್ಕೊಂಡು ಆತನ ಹತ್ರ ಬಂದ.  ಆ ವ್ಯಕ್ತಿ ಸ್ಮಶಾನದಲ್ಲಿ ಆಕಡೆ ಈಕಡೆ ತಿರುಗಾಡ್ಕೊಂಡು ಇರ್ತಿದ್ದ. ಇಲ್ಲಿ ತನಕ ಅವನನ್ನ ಸರಪಳಿಯಿಂದ ಕಟ್ಟಿಹಾಕೋಕೆ ಯಾರಿಂದಾನೂ ಆಗಿರ್ಲಿಲ್ಲ.  ತುಂಬ ಸಲ ಅವನ ಕೈಕಾಲನ್ನ ಸರಪಳಿಯಿಂದ ಕಟ್ಟಿಹಾಕಿದ್ರೂ ಪ್ರತಿಸಾರಿ ಅದನ್ನ ಕಿತ್ತು ತುಂಡುತುಂಡು ಮಾಡ್ತಿದ್ದ. ಅವನನ್ನ ಹತೋಟಿಗೆ ತರೋ ಶಕ್ತಿ ಯಾರಿಗೂ ಇರ್ಲಿಲ್ಲ.  ಹಗಲೂರಾತ್ರಿ ಸ್ಮಶಾನಗಳಲ್ಲಿ, ಬೆಟ್ಟಗಳಲ್ಲಿ ಕಿರುಚ್ತಾ ತಿರುಗಾಡ್ತಿದ್ದ. ಕಲ್ಲಿಂದ ಗಾಯ ಮಾಡ್ಕೊಳ್ತಿದ್ದ.  ಆದ್ರೆ ಯೇಸುವನ್ನ ದೂರದಿಂದ ನೋಡಿ ಓಡಿ ಬಂದು ಆತನಿಗೆ ಬಗ್ಗಿ ನಮಸ್ಕರಿಸಿದ.+  ಆಮೇಲೆ ಜೋರಾಗಿ “ಯೇಸುವೇ, ಸರ್ವೋನ್ನತ ದೇವರ ಮಗನೇ, ಯಾಕೆ ಇಲ್ಲಿಗೆ ಬಂದೆ? ನನಗೆ ಶಿಕ್ಷೆ ಕೊಡಲ್ಲ ಅಂತ ದೇವರ ಮೇಲೆ ಆಣೆ ಮಾಡು”+ ಅಂದ.  ಯಾಕಂದ್ರೆ ಯೇಸು ಅವನಿಗೆ “ಕೆಟ್ಟ ದೇವದೂತ, ಅವನನ್ನ ಬಿಟ್ಟುಹೋಗು”+ ಅಂತ ಹೇಳ್ತಾ ಇದ್ದನು.  ಯೇಸು ಅವನಿಗೆ “ನಿನ್ನ ಹೆಸ್ರೇನು?” ಅಂತ ಕೇಳಿದನು. “ನನ್ನ ಹೆಸ್ರು ಸೇನೆ. ಯಾಕಂದ್ರೆ ನಾವು ತುಂಬ ಜನ ಇದ್ದೀವಿ” ಅಂತ ಆ ಕೆಟ್ಟ ದೇವದೂತ ಹೇಳಿದ. 10  ಆ ದೇಶದಿಂದ ತಮ್ಮನ್ನ ಕಳಿಸಬಾರದು ಅಂತ ಯೇಸುವನ್ನ ಬೇಡ್ಕೊಳ್ತಾ ಇದ್ದ.+ 11  ಆ ಸಮಯದಲ್ಲಿ ಬೆಟ್ಟದ ಮೇಲೆ ಹಂದಿಗಳ+ ದೊಡ್ಡ ಹಿಂಡು ಮೇಯ್ತಾ ಇತ್ತು.+ 12  ಆ ಕೆಟ್ಟ ದೇವದೂತರು “ನಾವು ಹೋಗಿ ಆ ಹಂದಿಗಳ ಒಳಗೆ ಸೇರಿಕೊಳ್ತೀವಿ. ನಮ್ಮನ್ನ ಬಿಟ್ಟುಬಿಡು” ಅಂತ ಯೇಸುವನ್ನ ಬೇಡ್ಕೊಂಡ್ರು. 13  ಅದಕ್ಕೆ “ಸರಿ, ಹೋಗಿ” ಅಂದನು. ಆಗ ಕೆಟ್ಟ ದೇವದೂತರು ಹೊರಗೆ ಬಂದು ಹಂದಿಗಳ ಒಳಗೆ ಸೇರಿಕೊಂಡ್ರು. ಆ ಹಿಂಡಲ್ಲಿ 2,000 ಹಂದಿಗಳಿದ್ದವು. ಅವೆಲ್ಲ ಬೆಟ್ಟದ ತುದಿಗೆ ಓಡಿಹೋಗಿ ಸಮುದ್ರಕ್ಕೆ ಹಾರಿ ಸತ್ತವು. 14  ಅವುಗಳನ್ನ ಕಾಯ್ತಿದ್ದವರು ಪಟ್ಟಣಕ್ಕೆ, ಅಕ್ಕಪಕ್ಕದ ಹಳ್ಳಿಗಳಿಗೆ ಓಡಿಹೋಗಿ ನಡೆದ ವಿಷ್ಯ ಹೇಳಿದ್ರು. ಅದನ್ನ ಕೇಳಿದ ಜನ ಏನು ನಡೀತು ಅಂತ ನೋಡೋಕೆ ಅಲ್ಲಿಗೆ ಬಂದ್ರು.+ 15  ಅವರು ಯೇಸು ಹತ್ರ ಬಂದು ನೋಡಿದಾಗ ಕೆಟ್ಟ ದೇವದೂತರು ಸೇರಿಕೊಂಡಿದ್ದ ಆ ವ್ಯಕ್ತಿ ಬಟ್ಟೆ ಹಾಕಿ ಕೂತಿದ್ದ. ಹುಚ್ಚುಹುಚ್ಚಾಗಿ ಆಡದೆ ಚೆನ್ನಾಗಿದ್ದ. ಇದನ್ನ ನೋಡಿ ಅವ್ರಿಗೆ ಭಯ ಆಯ್ತು. 16  ಆ ವ್ಯಕ್ತಿ ಹೇಗೆ ಹುಷಾರಾದ, ಹಂದಿಗಳೆಲ್ಲ ಹೇಗೆ ಸತ್ತವು ಅಂತ ನೋಡಿದವರು ಬಂದವ್ರಿಗೆ ಹೇಳಿದ್ರು. 17  ಆಗ ಆ ಪ್ರದೇಶ ಬಿಟ್ಟು ಹೋಗು ಅಂತ ಯೇಸುನ ಅವರು ಬೇಡ್ಕೊಂಡ್ರು.+ 18  ಆತನು ದೋಣಿ ಹತ್ತುತ್ತಿದ್ದಾಗ ಕೆಟ್ಟ ದೇವದೂತರು ಬಿಟ್ಟುಹೋಗಿದ್ದ ಆ ವ್ಯಕ್ತಿ ಬಂದು ‘ನನ್ನನ್ನ ನಿಮ್ಮ ಜೊತೆ ಕರ್ಕೊಂಡು ಹೋಗಿ’+ ಅಂತ ಬೇಡ್ಕೊಂಡ. 19  ಆದ್ರೆ ಯೇಸು ಅದಕ್ಕೆ ಒಪ್ಪದೆ ಆ ವ್ಯಕ್ತಿಗೆ “ನಿನ್ನ ಮನೆಗೆ ಹೋಗು, ಯೆಹೋವ* ನಿನಗೆ ಮಾಡಿದ ಎಲ್ಲ ವಿಷ್ಯಗಳ ಬಗ್ಗೆ ಮತ್ತು ಆತನು ನಿನಗೆ ತೋರಿಸಿದ ಕರುಣೆ ಬಗ್ಗೆ ನಿನ್ನ ಸಂಬಂಧಿಕರಿಗೆ ಹೇಳು” ಅಂದನು. 20  ಆಗ ಅವನು ಹೋಗಿ ಯೇಸು ತನಗಾಗಿ ಮಾಡಿದ ಎಲ್ಲ ವಿಷ್ಯದ ಬಗ್ಗೆ ದೆಕಪೊಲಿಯಲ್ಲಿ* ಸಾರೋಕೆ ಶುರುಮಾಡಿದ. ಎಲ್ಲ ಜನ ಅದನ್ನ ಕೇಳಿ ಆಶ್ಚರ್ಯಪಟ್ರು. 21  ಯೇಸು ದೋಣಿಯಲ್ಲಿ ಆಕಡೆ ದಡಕ್ಕೆ ಇನ್ನೊಂದು ಸಲ ಹೋದನು. ಆತನು ಸಮುದ್ರ ತೀರದಲ್ಲಿದ್ದಾಗ ತುಂಬ ಜನ ಆತನ ಹತ್ರ ಬಂದ್ರು.+ 22  ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯಿರ ಬಂದ. ಯೇಸುವನ್ನ ನೋಡಿದ ತಕ್ಷಣ ಕಾಲಿಗೆ ಬಿದ್ದ.+ 23  “ನನ್ನ ಪುಟ್ಟ ಮಗಳಿಗೆ ತುಂಬ ಹುಷಾರಿಲ್ಲ.* ದಯವಿಟ್ಟು ಬಂದು ಅವಳ ಮೇಲೆ ಕೈಯಿಟ್ಟು ವಾಸಿಮಾಡು.+ ಅವಳು ಹುಷಾರಾಗಿ ಬದುಕಬೇಕು” ಅಂತ ತುಂಬ ಸಲ ಬೇಡ್ಕೊಂಡ. 24  ಯೇಸು ಯಾಯಿರನ ಜೊತೆ ಹೋದನು. ಜನ ಒಬ್ಬರು ಇನ್ನೊಬ್ಬರನ್ನ ನೂಕ್ತಾ ಆತನ ಹಿಂದೆನೇ ಹೋದ್ರು. 25  ಆ ಜನ್ರಲ್ಲಿ ಒಬ್ಬಳು 12 ವರ್ಷ ರಕ್ತಸ್ರಾವ ರೋಗದಿಂದ+ ನರಳ್ತಾ ಇದ್ದಳು.+ 26  ಅವಳು ತುಂಬ ವೈದ್ಯರ ಚಿಕಿತ್ಸೆಯಿಂದ ಕಷ್ಟ ಅನುಭವಿಸಿದ್ದಳು. ಇದ್ದ ಹಣ ಎಲ್ಲ ಖರ್ಚು ಮಾಡಿದ್ರೂ ಏನೂ ಪ್ರಯೋಜನ ಆಗಿಲ್ಲ. ಆ ಕಾಯಿಲೆ ಇನ್ನೂ ಜಾಸ್ತಿ ಆಗಿತ್ತು. 27  ಅವಳು ಯೇಸು ಬಗ್ಗೆ ಕೇಳಿಸ್ಕೊಂಡು ಜನ್ರ ಗುಂಪಲ್ಲಿ ಹಿಂದಿನಿಂದ ಬಂದು ಆತನ ಬಟ್ಟೆ ತುದಿ ಮುಟ್ಟಿದಳು.+ 28  ಯಾಕಂದ್ರೆ ಅವಳು ಮನಸ್ಸೊಳಗೆ “ನಾನು ಯೇಸುವಿನ ಬಟ್ಟೆ ಮುಟ್ಟಿದ್ರೆ ಸಾಕು, ವಾಸಿ ಆಗಿಬಿಡ್ತೀನಿ”+ ಅಂದ್ಕೊಂಡಿದ್ದಳು. 29  ಅವಳು ಬಟ್ಟೆ ಮುಟ್ಟಿದ ತಕ್ಷಣ ಅವಳ ರಕ್ತಸ್ರಾವ ನಿಂತುಹೋಯ್ತು. ಜೀವ ಹಿಂಡ್ತಿದ್ದ ಆ ಕಾಯಿಲೆ ವಾಸಿ ಆಯ್ತು ಅಂತ ಅವಳಿಗೆ ಗೊತ್ತಾಯ್ತು. 30  ಆ ಕ್ಷಣ ಯೇಸುಗೆ ತನ್ನಿಂದ ಶಕ್ತಿ ಹೋದ ಹಾಗೆ ಅನಿಸ್ತು.+ ಆತನು ಜನ್ರ ಕಡೆ ತಿರುಗಿ “ನನ್ನ ಬಟ್ಟೆ ಮುಟ್ಟಿದವರು ಯಾರು?”+ ಅಂತ ಕೇಳಿದನು. 31  ಆತನ ಶಿಷ್ಯರು “ಜನ್ರ ಗುಂಪು ನಿನ್ನನ್ನ ನೂಕ್ತಿರೋದು ನಿನಗೆ ಗೊತ್ತಲ್ವಾ? ಅಂಥದ್ರಲ್ಲಿ ‘ನನ್ನನ್ನ ಮುಟ್ಟಿದವರು ಯಾರು’ ಅಂತ ಕೇಳ್ತೀಯಲ್ಲಾ?” ಅಂದ್ರು. 32  ಆದ್ರೆ ಯೇಸು ತನ್ನನ್ನ ಮುಟ್ಟಿದವರು ಯಾರು ಅಂತ ಸುತ್ತಲೂ ಹುಡುಕಿದನು. 33  ತಾನು ವಾಸಿಯಾಗಿರೋ ವಿಷ್ಯ ತಿಳ್ಕೊಂಡ ಆ ಸ್ತ್ರೀ ಭಯದಿಂದ ನಡುಗ್ತಾ ಬಂದು ಆತನ ಮುಂದೆ ಮಂಡಿಯೂರಿದಳು. ನಡೆದ ವಿಷ್ಯನೆಲ್ಲ ಮುಚ್ಚಿಡದೆ ಹೇಳಿದಳು. 34  ಅದಕ್ಕೆ ಯೇಸು “ಮಗಳೇ, ನಿನ್ನ ನಂಬಿಕೆನೇ ನಿನ್ನನ್ನ ವಾಸಿಮಾಡಿದೆ. ಸಮಾಧಾನವಾಗಿ ಹೋಗು.+ ನಿನಗೆ ನೋವು ಕೊಟ್ಟ ಆ ಕಾಯಿಲೆ ಇನ್ಯಾವತ್ತೂ ನಿನ್ನನ್ನ ಕಾಡದಿರಲಿ”+ ಅಂದನು. 35  ಆತನು ಮಾತಾಡ್ತಿದ್ದಾಗಲೇ ಸಭಾಮಂದಿರದ ಅಧಿಕಾರಿಯ ಮನೆಯಿಂದ ಕೆಲವರು ಬಂದು “ನಿನ್ನ ಮಗಳು ಸತ್ತು ಹೋದಳು! ಗುರುಗೆ ಯಾಕೆ ಸುಮ್ಮನೆ ತೊಂದರೆ ಕೊಡ್ತೀಯಾ?”+ ಅಂದ್ರು. 36  ಆದ್ರೆ ಯೇಸು ಅವ್ರ ಮಾತನ್ನ ಕೇಳಿಸ್ಕೊಂಡು ಸಭಾಮಂದಿರದ ಅಧಿಕಾರಿಗೆ “ಚಿಂತೆ ಮಾಡಬೇಡ, ನಂಬಿಕೆ ಇಡು”+ ಅಂದನು. 37  ಯೇಸು ತನ್ನ ಜೊತೆ ಪೇತ್ರ, ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನ ಬಿಟ್ಟು ಬೇರೆ ಯಾರನ್ನೂ ಬರೋಕೆ ಬಿಡಲಿಲ್ಲ.+ 38  ಅವರು ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ತುಂಬ ಗದ್ದಲ ಇತ್ತು. ಜನ ಜೋರಾಗಿ ಅಳ್ತಾ ಗೋಳಾಡ್ತಾ ಇದ್ರು.+ 39  ಯೇಸು ಮನೆಯೊಳಗೆ ಹೋಗಿ “ನೀವು ಯಾಕೆ ಗದ್ದಲ ಮಾಡ್ತಿದ್ದೀರಾ? ಯಾಕೆ ಅಳ್ತಿದ್ದೀರಾ? ಹುಡುಗಿ ಸತ್ತಿಲ್ಲ, ನಿದ್ದೆ ಮಾಡ್ತಿದ್ದಾಳೆ”+ ಅಂದನು. 40  ಇದನ್ನ ಕೇಳಿ ಅವರು ಗೇಲಿ ಮಾಡಿ ನಗೋಕೆ ಶುರುಮಾಡಿದ್ರು. ಆದ್ರೆ ಯೇಸು ಅವ್ರನ್ನೆಲ್ಲ ಹೊರಗೆ ಕಳಿಸಿದನು. ಹುಡುಗಿಯ ತಂದೆತಾಯಿ ಮತ್ತು ತನ್ನ ಜೊತೆ ಇದ್ದವ್ರನ್ನ ಕರ್ಕೊಂಡು ಒಳಗೆ ಹೋದನು. ಅಲ್ಲಿ ಹುಡುಗಿ ಮಲಗಿದ್ದಳು. 41  ಯೇಸು ಅವಳ ಕೈಹಿಡಿದು “ತಾಲಿಥ ಕೂಮಿ” ಅಂದನು. ಹಾಗಂದ್ರೆ “ಪುಟ್ಟಿ, ಎದ್ದೇಳು!”+ ಅಂತ ಅರ್ಥ. 42  ತಕ್ಷಣ ಆ ಹುಡುಗಿ ಎದ್ದು ನಡಿಯೋಕೆ ಶುರುಮಾಡಿದಳು. (ಅವಳಿಗೆ 12 ವರ್ಷ.) ಇದನ್ನ ನೋಡಿ ಅವಳ ಹೆತ್ತವರು ಸಂತೋಷದಲ್ಲಿ ತೇಲಾಡಿದ್ರು. 43  ಆದ್ರೆ ಯೇಸು ಅವ್ರಿಗೆ ನಡೆದ ವಿಷ್ಯವನ್ನ ಯಾರಿಗೂ ಹೇಳಬೇಡಿ+ ಅಂತ ಪದೇಪದೇ ಅಪ್ಪಣೆ ಕೊಟ್ಟನು. ಆಮೇಲೆ ಆ ಹುಡುಗಿಗೆ ಏನಾದ್ರೂ ತಿನ್ನೋಕೆ ಕೊಡಿ ಅಂದನು.

ಪಾದಟಿಪ್ಪಣಿ

ಅಥವಾ “10 ಪಟ್ಟಣಗಳ ಪ್ರದೇಶದಲ್ಲಿ.”
ಅಥವಾ “ಮಗಳು ಸಾಯೋ ಸ್ಥಿತಿಯಲ್ಲಿದ್ದಾಳೆ.”