ಯಾಜಕಕಾಂಡ 1:1-17

  • ಸರ್ವಾಂಗಹೋಮ ಬಲಿ (1-17)

1  ಯೆಹೋವ ಮೋಶೆನ ಕರೆದು ದೇವದರ್ಶನ ಡೇರೆ ಒಳಗಿಂದ+ ಮಾತಾಡ್ತಾ ಹೀಗಂದನು:  “ನೀನು ಇಸ್ರಾಯೇಲ್ಯರಿಗೆ ಏನು ಹೇಳಬೇಕಂದ್ರೆ ‘ನಿಮ್ಮಲ್ಲಿ ಯಾರಾದ್ರೂ ಯೆಹೋವನಿಗೆ ಸಾಕುಪ್ರಾಣಿಯನ್ನ ಬಲಿ ಅರ್ಪಿಸಬೇಕಂತ ಇದ್ರೆ ಹಸು ಅಥವಾ ಆಡು ಅಥವಾ ಕುರಿಯನ್ನೇ ಅರ್ಪಿಸಬೇಕು.+  ಸರ್ವಾಂಗಹೋಮ ಬಲಿಗಾಗಿ ಹಸುನ ಕೊಡೋದಾದ್ರೆ ಗಂಡನ್ನೇ ಕೊಡಬೇಕು.+ ಅದ್ರಲ್ಲಿ ಯಾವುದೇ ದೋಷ ಇರಬಾರದು. ಅದನ್ನ ಯೆಹೋವನಾದ ನನ್ನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ತರಬೇಕು. ಅದನ್ನ ಕೊಡೋನು ಸ್ವಂತ ಇಷ್ಟದಿಂದ ಕೊಡಬೇಕು.+  ತನ್ನ ಕೈಯನ್ನ ಆ ಹೋರಿ ತಲೆ ಮೇಲೆ ಇಡಬೇಕು. ತನ್ನ ಪ್ರಾಯಶ್ಚಿತ್ತಕ್ಕಾಗಿ ಅರ್ಪಿಸೋ ಆ ಹೋರಿನ ನಾನು ಸ್ವೀಕರಿಸ್ತಿನಿ.  ಆಮೇಲೆ ಯೆಹೋವನಾದ ನನ್ನ ಮುಂದೆ ಅಂದ್ರೆ ದೇವದರ್ಶನ ಡೇರೆಯ ಬಾಗಿಲ ಹತ್ರ ಆ ಎಳೇ ಹೋರಿನ ಕಡಿಬೇಕು. ಪುರೋಹಿತರಾದ*+ ಆರೋನನ ಮಕ್ಕಳು ಆ ಹೋರಿಯ ರಕ್ತನ ಯಜ್ಞವೇದಿ ಹತ್ರ ತಂದು ಅದ್ರ ಎಲ್ಲ ಬದಿಗಳಿಗೆ ಚಿಮಿಕಿಸಬೇಕು.+  ಸರ್ವಾಂಗಹೋಮ ಬಲಿಯಾಗಿ ಕೊಡೋ ಪ್ರಾಣಿಯ ಚರ್ಮ ಸುಲಿದು ಅದನ್ನ ತುಂಡುತುಂಡು ಮಾಡಬೇಕು.+  ಪುರೋಹಿತರಾದ ಆರೋನನ ಮಕ್ಕಳು ಯಜ್ಞವೇದಿ ಮೇಲೆ ಕೆಂಡ ಇಟ್ಟು+ ಅದ್ರ ಮೇಲೆ ಕಟ್ಟಿಗೆಗಳನ್ನ ಜೋಡಿಸಬೇಕು.  ಪುರೋಹಿತರಾದ ಆರೋನನ ಮಕ್ಕಳು ಬಲಿ ಕೊಟ್ಟ ಪ್ರಾಣಿಯ+ ತಲೆ, ಕೊಬ್ಬು* ಮತ್ತು ತುಂಡುಗಳನ್ನ ಯಜ್ಞವೇದಿ ಮೇಲಿರೋ ಕೆಂಡದ ಮೇಲಿನ ಕಟ್ಟಿಗೆಗಳ ಮೇಲೆ ಜೋಡಿಸಬೇಕು.  ಪ್ರಾಣಿಯ ಕರುಳನ್ನ ಕಾಲನ್ನ ನೀರಲ್ಲಿ ತೊಳಿಬೇಕು. ಪುರೋಹಿತ ಅದನ್ನೆಲ್ಲ ಯಜ್ಞವೇದಿ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು. ಅದ್ರಿಂದ ಮೇಲೆ ಹೋಗೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಇದು ಬೆಂಕಿ ಮೂಲಕ ಆತನಿಗೆ ಮಾಡೋ ಅರ್ಪಣೆ.+ 10  ಒಬ್ಬ ಸರ್ವಾಂಗಹೋಮ ಬಲಿಗಾಗಿ ಕುರಿ+ ಅಥವಾ ಆಡನ್ನ ಕೊಡೋದಾದ್ರೆ ಗಂಡನ್ನೇ ಕೊಡಬೇಕು. ಅದ್ರಲ್ಲಿ ಯಾವುದೇ ದೋಷ ಇರಬಾರದು.+ 11  ಅದನ್ನ ಯೆಹೋವನ ಮುಂದೆ ಯಜ್ಞವೇದಿಯ ಉತ್ತರ ದಿಕ್ಕಿಗೆ ಕಡಿಬೇಕು. ಪುರೋಹಿತರಾದ ಆರೋನನ ಮಕ್ಕಳು ಅದ್ರ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಲ್ಲಿ ಚಿಮಿಕಿಸಬೇಕು.+ 12  ಅದನ್ನ ತುಂಡುತುಂಡಾಗಿ ಕಡಿಬೇಕು. ಪುರೋಹಿತ ಅದ್ರ ತಲೆ, ಕೊಬ್ಬು* ಮತ್ತು ಆ ತುಂಡುಗಳನ್ನ ಯಜ್ಞವೇದಿ ಮೇಲಿರೋ ಕೆಂಡದ ಮೇಲಿನ ಕಟ್ಟಿಗೆಗಳ ಮೇಲೆ ಜೋಡಿಸಬೇಕು. 13  ಕರುಳನ್ನ ಕಾಲನ್ನ ನೀರಲ್ಲಿ ತೊಳಿಬೇಕು. ಪುರೋಹಿತ ಅದನ್ನೆಲ್ಲ ಯಜ್ಞವೇದಿ ಮೇಲೆ ಅರ್ಪಿಸಬೇಕು. ಅದ್ರಿಂದ ಮೇಲೆ ಹೋಗೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಇದು ಸರ್ವಾಂಗಹೋಮ ಬಲಿ. ಇದು ಬೆಂಕಿ ಮೂಲಕ ಆತನಿಗೆ ಮಾಡೋ ಅರ್ಪಣೆ. 14  ಯೆಹೋವನಿಗೆ ಸರ್ವಾಂಗಹೋಮ ಬಲಿ ಅರ್ಪಿಸೋಕೆ ಪಕ್ಷಿಯನ್ನ ಕೊಡೋದಾದ್ರೆ ಕಾಡುಪಾರಿವಾಳ ಅಥವಾ ಪಾರಿವಾಳದ ಮರಿಯನ್ನೇ ಕೊಡಬೇಕು.+ 15  ಪುರೋಹಿತ ಯಜ್ಞವೇದಿ ಹತ್ರ ಅದ್ರ ಕುತ್ತಿಗೆ ಚಿವುಟಿ ರಕ್ತವನ್ನ ಯಜ್ಞವೇದಿಯ ಬದಿಗೆ ಸುರಿಸಬೇಕು. ಆಮೇಲೆ ಆ ಪಕ್ಷಿನ ಯಜ್ಞವೇದಿ ಮೇಲೆ ಅರ್ಪಿಸಬೇಕು, ಅದ್ರ ಹೊಗೆ ಮೇಲೆ ಹೋಗಬೇಕು. 16  ಅವನು ಆ ಪಕ್ಷಿಯ ಎರೆಚೀಲ ತೆಗೆದು, ಪುಕ್ಕಗಳನ್ನ ಕಿತ್ತು ಅವುಗಳನ್ನ ಯಜ್ಞವೇದಿಯ ಪೂರ್ವಕ್ಕೆ ಬೂದಿ*+ ಹಾಕೋ ಸ್ಥಳದಲ್ಲಿ ಎಸಿಬೇಕು. 17  ಪಕ್ಷಿಯನ್ನ ಅದ್ರ ಎರಡು ರೆಕ್ಕೆಗಳ ಮಧ್ಯದಲ್ಲಿ ಸೀಳಬೇಕು. ಆದ್ರೆ ಎರಡು ಭಾಗ ಮಾಡಬಾರದು. ಯಜ್ಞವೇದಿಯ ಕೆಂಡದ ಮೇಲಿನ ಕಟ್ಟಿಗೆ ಮೇಲೆ ಅದನ್ನ ಅರ್ಪಿಸಬೇಕು. ಅದ್ರಿಂದ ಮೇಲೆ ಹೋಗೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಇದು ಸರ್ವಾಂಗಹೋಮ ಬಲಿ. ಇದು ಬೆಂಕಿ ಮೂಲಕ ಆತನಿಗೆ ಮಾಡೋ ಅರ್ಪಣೆ.

ಪಾದಟಿಪ್ಪಣಿ

ಅಕ್ಷ. “ಯಾಜಕರಾದ.”
ಅಥವಾ “ಮೂತ್ರಪಿಂಡಗಳ ಸುತ್ತ ಇರೋ ಕೊಬ್ಬು.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಮೂತ್ರಪಿಂಡಗಳ ಸುತ್ತ ಇರೋ ಕೊಬ್ಬು.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅದು, ಬಲಿಗಳ ಕೊಬ್ಬಿಂದ ನೆನೆದ ಬೂದಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”