ಯಾಜಕಕಾಂಡ 19:1-37

  • ಪವಿತ್ರರಾಗೋಕೆ ಬೇರೆ ಬೇರೆ ನಿಯಮಗಳು (1-37)

    • ಕೊಯ್ಲು ಮಾಡೋ ವಿಧ (9, 10)

    • ಕಿವುಡರಿಗೆ, ಕುರುಡರಿಗೆ ದಯೆ ತೋರಿಸಿ (14)

    • ಸುಳ್ಳು ಸುದ್ದಿ ಹಬ್ಬಿಸಬಾರದು (16)

    • ದ್ವೇಷ ಸಾಧಿಸಬಾರದು (18)

    • ಮಾಟಮಂತ್ರ ತಪ್ಪು, ಸತ್ತವರನ್ನ ವಿಚಾರಿಸಬಾರದು (26, 31)

    • ಹಚ್ಚೆ ಹಾಕೊಳ್ಳಬಾರದು (28)

    • ವಯಸ್ಸಾದವರನ್ನ ಗೌರವಿಸಬೇಕು (32)

    • ವಿದೇಶಿಯರ ಜೊತೆ ಹೇಗೆ ನಡ್ಕೊಬೇಕು (33, 34)

19  ಯೆಹೋವ ಮೋಶೆಗೆ ಹೇಳಿದ್ದು,  “ಎಲ್ಲ ಇಸ್ರಾಯೇಲ್ಯರಿಗೆ ಈ ಮಾತನ್ನ ತಿಳಿಸು: ‘ನೀವು ಪವಿತ್ರರಾಗಿ ಇರಬೇಕು. ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ ಪವಿತ್ರನಾಗಿದ್ದೀನಿ.+  ಪ್ರತಿಯೊಬ್ಬನು ಅಪ್ಪಅಮ್ಮಗೆ ಗೌರವ ಕೊಡಬೇಕು.+ ನಾನು ಆಜ್ಞೆ ಕೊಟ್ಟ ಹಾಗೆ ಸಬ್ಬತ್‌ ಆಚರಿಸಬೇಕು.+ ನಾನು ನಿಮ್ಮ ದೇವರಾದ ಯೆಹೋವ.  ಪ್ರಯೋಜನಕ್ಕೇ ಬರದ ದೇವರುಗಳನ್ನ ಆರಾಧಿಸಬೇಡಿ,+ ಲೋಹದ ಮೂರ್ತಿಗಳನ್ನ ಮಾಡ್ಕೊಬೇಡಿ.+ ನಾನು ನಿಮ್ಮ ದೇವರಾದ ಯೆಹೋವ.  ಯೆಹೋವನಾದ ನನಗೆ ನೀವು ಸಮಾಧಾನ ಬಲಿ ಕೊಡುವಾಗ+ ನಾನು ಹೇಳೋ ತರಾನೇ ಕೊಡಬೇಕು.+ ಆಗ ನಿಮ್ಮನ್ನ ಮೆಚ್ಕೊಳ್ತೀನಿ.  ನೀವು ಬಲಿ ಕೊಟ್ಟ ದಿನಾನೇ ಆ ಪ್ರಾಣಿಯ ಮಾಂಸನ ತಿನ್ನಬೇಕು. ಉಳಿದ ಮಾಂಸನ ಮಾರನೇ ದಿನ ತಿನ್ನಬಹುದು. ಆದ್ರೆ ಅದು ಮೂರನೇ ದಿನ ಉಳಿದ್ರೆ ಅದನ್ನ ತಿನ್ನಬಾರದು, ಬೆಂಕಿಯಿಂದ ಸುಟ್ಟುಬಿಡಬೇಕು.+  ಆ ಮಾಂಸನ ಮೂರನೇ ದಿನ ಯಾರಾದ್ರೂ ತಿಂದ್ರೆ ಅದು ಅಸಹ್ಯ. ಆ ಬಲಿನ ನಾನು ಮೆಚ್ಚಲ್ಲ.  ಒಂದುವೇಳೆ ಹಾಗೆ ಮಾಡಿದ್ರೆ ಯೆಹೋವನಾದ ನನಗೆ ಕೊಟ್ಟ ಪವಿತ್ರ ಬಲಿನ ಅಪವಿತ್ರ ಮಾಡಿದ್ದಾನೆ. ಹಾಗಾಗಿ ಅವನಿಗೆ ಶಿಕ್ಷೆ ಆಗಬೇಕು. ಅವನನ್ನ ಸಾಯಿಸಬೇಕು.  ನೀವು ಬೆಳೆ ಕೊಯ್ಯುವಾಗ ನಿಮ್ಮ ಹೊಲದ ಅಂಚಲ್ಲಿರೋ ಬೆಳೆನ ಪೂರ್ತಿ ಕೊಯ್ಯಬಾರದು. ನೀವು ಹೊಲದಲ್ಲಿ ಬಿಟ್ಟಿರೋ ತೆನೆಗಳನ್ನ ತಗೊಂಡು ಬರಬಾರದು.*+ 10  ಅಷ್ಟೇ ಅಲ್ಲ ಕೊಯ್ಯದೆ ಬಿಟ್ಟ ದ್ರಾಕ್ಷಿನ ಕೂಡಿಸಬಾರದು. ತೋಟದಲ್ಲಿ ಕೆಳಗೆ ಬಿದ್ದ ದ್ರಾಕ್ಷಿನ ಹೆಕ್ಕಬಾರದು. ಅದನ್ನ ಬಡವರಿಗೆ* ವಿದೇಶಿಯರಿಗೆ ಬಿಟ್ಟುಬಿಡಬೇಕು.+ ನಾನು ನಿಮ್ಮ ದೇವರಾದ ಯೆಹೋವ. 11  ನೀವು ಕದಿಬಾರದು,+ ಮೋಸ ಮಾಡಬಾರದು,+ ಅಪ್ರಾಮಾಣಿಕರಾಗಿ ನಡ್ಕೊಬಾರದು. 12  ಸುಳ್ಳು ಹೇಳಿ ನನ್ನ ಹೆಸ್ರಲ್ಲಿ ಆಣೆ ಇಡಬಾರದು.+ ಹೀಗೆ ಆಣೆಯಿಟ್ಟು ನನ್ನ ಹೆಸ್ರನ್ನ ಅಪವಿತ್ರ ಮಾಡಬಾರದು. ನಾನು ನಿಮ್ಮ ದೇವರಾದ ಯೆಹೋವ. 13  ನೀವು ಬೇರೆಯವರಿಗೆ ಮೋಸ ಮಾಡಬಾರದು.+ ಸುಲಿಗೆ* ಮಾಡಬಾರದು.+ ಕೂಲಿ ಮಾಡಿದವನಿಗೆ ಕೊಡಬೇಕಾದ ಸಂಬಳನ ಕೊಡದೇ ಮಾರನೇ ದಿನ ಬೆಳಿಗ್ಗೆ ತನಕ ನಿಮ್ಮ ಹತ್ರಾನೇ ಇಟ್ಕೊಬಾರದು.+ 14  ನೀವು ಕಿವುಡರಿಗೆ ಶಾಪ ಹಾಕಬಾರದು,* ಕುರುಡರು ಎಡವಿ ಬೀಳೋ ತರ ಅವರು ನಡಿಯೋ ದಾರೀಲಿ ಏನೂ ಅಡ್ಡ ಇಡಬಾರದು,+ ನೀವು ನಂಗೆ ಭಯಪಡಬೇಕು.+ ನಾನು ನಿಮ್ಮ ದೇವರಾದ ಯೆಹೋವ. 15  ನೀವು ಅನ್ಯಾಯವಾಗಿ ತೀರ್ಪು ಕೊಡಬಾರದು. ಒಬ್ಬ ವ್ಯಕ್ತಿ ಬಡವ ಅನ್ನೋ ಕಾರಣಕ್ಕೆ ಅವನಿಗೆ ದಯೆತೋರಿಸಿ ಅವನ ಪರವಾಗಿ ತೀರ್ಪು ಕೊಡಬಾರದು ಅಥವಾ ಶ್ರೀಮಂತ ಅನ್ನೋ ಕಾರಣಕ್ಕೆ ಅವನ ಪರವಹಿಸಿ ತೀರ್ಪು ಕೊಡಬಾರದು.+ ಎಲ್ರಿಗೂ ನ್ಯಾಯವಾಗಿ ತೀರ್ಪು ಕೊಡಬೇಕು. 16  ನೀವು ಬೇರೆಯವರ ಹೆಸ್ರು ಹಾಳು ಮಾಡೋಕೆ ಸುಳ್ಳುಗಳನ್ನ ಹಬ್ಬಿಸಬಾರದು.+ ನಿಮ್ಮಿಂದ ಇನ್ನೊಬ್ಬನ ಜೀವ ಹೋಗಬಾರದು.*+ ನಾನು ಯೆಹೋವ. 17  ನಿಮ್ಮ ಸಹೋದರನನ್ನ ಮನಸ್ಸಲ್ಲೂ ದ್ವೇಷಿಸಬಾರದು.+ ಯಾರಾದ್ರೂ ಪಾಪ ಮಾಡಿದ್ರೆ ನೀವು ಅವನನ್ನ ತಿದ್ಲೇಬೇಕು.+ ಇಲ್ಲಾಂದ್ರೆ ಅವನು ಮಾಡೋ ಪಾಪಕ್ಕೆ ನೀವೂ ಹೊಣೆ ಆಗ್ತೀರ. 18  ನೀವು ಯಾರಿಗೂ ಸೇಡು ತೀರಿಸಬಾರದು+ ಅಥವಾ ಯಾರ ಮೇಲೂ ದ್ವೇಷ ಸಾಧಿಸಬಾರದು. ನೀವು ನಿಮ್ಮನ್ನ ಪ್ರೀತಿಸೋ ತರಾನೇ ಬೇರೆಯವರನ್ನೂ ಪ್ರೀತಿಸಬೇಕು.+ ನಾನು ಯೆಹೋವ. 19  ನಾನು ಕೊಡೋ ಈ ನಿಯಮಗಳನ್ನ ನೀವು ಪಾಲಿಸಬೇಕು: ಎರಡು ಬೇರೆಬೇರೆ ತರದ ಸಾಕುಪ್ರಾಣಿಗಳು ಸಂಗಮಿಸೋ ಹಾಗೆ ಮಾಡಿ ಮಿಶ್ರತಳಿಯನ್ನ ಹುಟ್ಟಿಸಬಾರದು. ನೀವು ಹೊಲದಲ್ಲಿ ಎರಡು ತರದ ಬೀಜಗಳನ್ನ ಬಿತ್ತಬಾರದು.+ ಎರಡು ತರದ ನೂಲುಗಳನ್ನ ಸೇರಿಸಿ ತಯಾರಿಸಿದ ಬಟ್ಟೆನ ಹಾಕೊಳ್ಳಬಾರದು.+ 20  ಬೇರೆಯವನ ಜೊತೆ ಮದುವೆ ನಿಶ್ಚಯ ಆಗಿ ಇನ್ನೂ ಬಿಡುಗಡೆ ಬೆಲೆ ಕೊಟ್ಟು ಬಿಡಿಸ್ಕೊಳ್ಳದ ಒಬ್ಬ ಸೇವಕಿ ಜೊತೆ ಯಾರಾದ್ರೂ ಸಂಬಂಧ ಇಟ್ಕೊಂಡ್ರೆ ಅವರಿಬ್ರಿಗೂ ಶಿಕ್ಷೆ ಆಗಬೇಕು. ಆದ್ರೆ ಅವಳನ್ನ ಯಾರೂ ಬಿಡಿಸ್ಕೊಳ್ಳದೇ ಇರೋದ್ರಿಂದ ಅವರಿಗೆ ಮರಣಶಿಕ್ಷೆ ಆಗಬಾರದು. 21  ಅವನು ದೋಷಪರಿಹಾರಕ ಬಲಿನ ಯೆಹೋವನಿಗೆ ಕೊಡೋಕೆ ಒಂದು ಟಗರನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ತರಬೇಕು.+ 22  ಅವನು ತಂದ ಟಗರನ್ನ ಪುರೋಹಿತ ಯೆಹೋವನ ಮುಂದೆ ಅರ್ಪಿಸ್ತಾನೆ, ಆ ವ್ಯಕ್ತಿಯ ಪಾಪಕ್ಕೆ ಪ್ರಾಯಶ್ಚಿತ್ತ ಮಾಡ್ತಾನೆ. ಆಗ ಅವನ ಪಾಪಕ್ಕೆ ಕ್ಷಮೆ ಸಿಗುತ್ತೆ. 23  ನಾನು ಕೊಡೋ ದೇಶಕ್ಕೆ ನೀವು ಬಂದ ಮೇಲೆ ಅಲ್ಲಿ ನೀವು ಹಣ್ಣಿನ ಮರ ನೆಟ್ರೆ ಮೂರು ವರ್ಷ ಅದ್ರ ಹಣ್ಣು ಅಶುದ್ಧವಾಗಿರುತ್ತೆ. ಆ ಹಣ್ಣನ್ನ ತಿನ್ನೋದು ನಿಷೇಧ ಆಗಿರೋದ್ರಿಂದ ನೀವು ತಿನ್ನಬಾರದು. 24  ಆದ್ರೆ ನಾಲ್ಕನೇ ವರ್ಷ ಆ ಮರಗಳ ಹಣ್ಣು ಪವಿತ್ರವಾಗಿರುತ್ತೆ. ಅದನ್ನ ನೀವು ಸಂತೋಷದಿಂದ ಯೆಹೋವನಿಗೆ ಅರ್ಪಿಸಬೇಕು.+ 25  ಐದನೇ ವರ್ಷ ನೀವು ಆ ಹಣ್ಣುಗಳನ್ನ ತಿನ್ನಬಹುದು. ಹೀಗೆ ಮಾಡಿದ್ರೆ ನಿಮಗೆ ಫಲ ಸಮೃದ್ಧಿಯಾಗಿ ಸಿಗುತ್ತೆ. ನಾನು ನಿಮ್ಮ ದೇವರಾದ ಯೆಹೋವ. 26  ನೀವು ತಿನ್ನೋ ಮಾಂಸದಲ್ಲಿ ರಕ್ತ ಇರಬಾರದು.+ ಶಕುನ ನೋಡಬಾರದು, ಮಾಟಮಂತ್ರ ಮಾಡಬಾರದು.+ 27  ನಿಮ್ಮ ಕಣ್ಣು ಮತ್ತು ಕಿವಿ ಮಧ್ಯ ಇರೋ ಕೂದಲನ್ನ ಬೋಳಿಸಬಾರದು,* ಗಡ್ಡವನ್ನ ವಿಚಿತ್ರವಾಗಿ ಕತ್ತರಿಸಬಾರದು.+ 28  ಸತ್ತವರಿಗಾಗಿ ಅಳ್ತಾ ನಿಮ್ಮ ದೇಹನ ಗಾಯ ಮಾಡ್ಕೊಬಾರದು.+ ನಿಮ್ಮ ದೇಹದ ಮೇಲೆ ಹಚ್ಚೆ ಹಾಕಿಸ್ಕೊಳ್ಳಬಾರದು. ನಾನು ಯೆಹೋವ. 29  ನಿಮ್ಮ ಮಗಳನ್ನ ವೇಶ್ಯೆಯಾಗಿ ಮಾಡಿ ಅವಳಿಗೆ ಅವಮಾನ ಮಾಡಬಾರದು.+ ಹಾಗೆ ಮಾಡಿದ್ರೆ ದೇಶ ವೇಶ್ಯಾವಾಟಿಕೆಯಿಂದ ಅಶುದ್ಧ ಆಗುತ್ತೆ. ನಿಮ್ಮ ದೇಶದಲ್ಲಿ ನಾಚಿಕೆಗೆಟ್ಟ ನಡತೆ ಹೆಚ್ಚಾಗುತ್ತೆ.+ 30  ನಾನು ಆಜ್ಞೆ ಕೊಟ್ಟ ಹಾಗೆ ನೀವು ಸಬ್ಬತ್‌ ಆಚರಿಸಬೇಕು.+ ನನ್ನ ಆರಾಧನಾ ಸ್ಥಳನ ತುಂಬ ಗೌರವದಿಂದ* ನೋಡಬೇಕು. ನಾನು ಯೆಹೋವ. 31  ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರ ಹತ್ರ,+ ಭವಿಷ್ಯ ಹೇಳೋರ ಹತ್ರ+ ಹೋಗಿ ಅಶುದ್ಧ ಆಗಬಾರದು. ನಾನು ನಿಮ್ಮ ದೇವರಾದ ಯೆಹೋವ. 32  ವಯಸ್ಸಾದ ವೃದ್ಧರ ಮುಂದೆ ಎದ್ದು ನಿಂತು+ ಅವರನ್ನ ಗೌರವಿಸಬೇಕು.+ ನಿಮ್ಮ ದೇವರಿಗೆ ಭಯಪಡಬೇಕು.+ ನಾನು ಯೆಹೋವ. 33  ನಿಮ್ಮ ದೇಶದಲ್ಲಿ ವಾಸಿಸೋ ವಿದೇಶಿಯರಿಗೆ ಕಾಟ ಕೊಡಬಾರದು.+ 34  ಅವರನ್ನ ನಿಮ್ಮ ದೇಶದವರ ತರಾನೇ ನೋಡ್ಕೊಬೇಕು.+ ನೀವು ನಿಮ್ಮನ್ನ ಪ್ರೀತಿಸೋ ತರಾನೇ ಅವರನ್ನೂ ಪ್ರೀತಿಸಬೇಕು. ಯಾಕಂದ್ರೆ ನೀವೂ ಒಂದು ಕಾಲದಲ್ಲಿ ಈಜಿಪ್ಟ್‌ ದೇಶದಲ್ಲಿ ವಿದೇಶಿಯರಾಗಿದ್ರಿ.+ ನಾನು ನಿಮ್ಮ ದೇವರಾದ ಯೆಹೋವ. 35  ಅಳತೆ* ಮಾಡುವಾಗ, ತೂಕ ಮಾಡುವಾಗ ಮೋಸ ಮಾಡಬಾರದು.+ 36  ನೀವು ಉಪಯೋಗಿಸೋ ತಕ್ಕಡಿ, ತೂಕದ ಕಲ್ಲು, ಅಳೆಯೋ ಮಾಪಕಗಳು* ಸರಿಯಾಗಿ ಇರಬೇಕು.+ ನಿಮ್ಮನ್ನ ಈಜಿಪ್ಟ್‌ ದೇಶದಿಂದ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವ ನಾನೇ. 37  ಹಾಗಾಗಿ ನಾನು ಕೊಟ್ಟಿರೋ ಎಲ್ಲ ನಿಯಮಗಳನ್ನ, ನನ್ನ ಎಲ್ಲ ತೀರ್ಪುಗಳನ್ನ ನೀವು ಮನಸ್ಸಲ್ಲಿ ಇಟ್ಕೊಂಡು ಅದ್ರ ಪ್ರಕಾರ ನಡಿಬೇಕು.+ ನಾನು ಯೆಹೋವ.’”

ಪಾದಟಿಪ್ಪಣಿ

ಅಥವಾ “ಹಕ್ಕಲಾಯಬಾರದು.” ಪದವಿವರಣೆ ನೋಡಿ.
ಅಥವಾ “ಕಷ್ಟದಲ್ಲಿ ಇರೋರಿಗೆ.”
ಇದು ಇನ್ನೊಬ್ಬನಿಗೆ ಸೇರಿದ್ದನ್ನ ಕೊಡದೇ ಇರೋದನ್ನೂ ಸೂಚಿಸುತ್ತೆ.
ಅಥವಾ “ಕೇಡಾಗಲಿ ಅಂತ ಬೈಬಾರದು.”
ಬಹುಶಃ, “ಇನ್ನೊಬ್ಬನ ಜೀವ ಅಪಾಯದಲ್ಲಿ ಇರುವಾಗ ಸುಮ್ನೆ ನೋಡ್ತಾ ನಿಲ್ಲಬಾರದು.”
ಅಥವಾ “ಕತ್ತರಿಸಬಾರದು.”
ಅಕ್ಷ. “ಭಯಭಕ್ತಿಯಿಂದ.”
ಇದರಲ್ಲಿ ದ್ರವ ಪದಾರ್ಥಗಳನ್ನೂ ಅಳತೆ ಮಾಡೋದು ಸೇರಿದೆ.