ಯಾಜಕಕಾಂಡ 2:1-16
-
ಧಾನ್ಯ ಅರ್ಪಣೆ (1-16)
2 ಯಾರಾದ್ರೂ ಯೆಹೋವನಿಗೆ ಧಾನ್ಯ ಅರ್ಪಣೆ+ ಕೊಡೋಕೆ ಇಷ್ಟಪಟ್ರೆ ಧಾನ್ಯವನ್ನ ನುಣ್ಣಗೆ ಹಿಟ್ಟು* ಮಾಡಿ ಕೊಡಬೇಕು. ಅದ್ರ ಮೇಲೆ ಎಣ್ಣೆ ಸುರಿದು ಸಾಂಬ್ರಾಣಿ ಇಡಬೇಕು.+
2 ಅದನ್ನ ಪುರೋಹಿತರಾದ ಆರೋನನ ಮಕ್ಕಳ* ಹತ್ರ ತರಬೇಕು. ಪುರೋಹಿತ ಎಣ್ಣೆ ಬೆರೆತ ನುಣ್ಣಗಿನ ಆ ಹಿಟ್ಟನ್ನ ಮತ್ತು ಅದ್ರ ಮೇಲಿರೋ ಎಲ್ಲ ಸಾಂಬ್ರಾಣಿನ ಹಿಡಿತುಂಬ ತಗೊಂಡು ಯಜ್ಞವೇದಿ ಮೇಲಿರೋ ಬೆಂಕಿಯಲ್ಲಿ ಅರ್ಪಿಸಬೇಕು. ಈ ರೀತಿ ಮಾಡೋದು ಧಾನ್ಯ ಅರ್ಪಣೆನ+ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಯಜ್ಞವೇದಿಯಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.
3 ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಿದ ಆ ಧಾನ್ಯ ಅರ್ಪಣೆಯಲ್ಲಿ ಉಳಿದಿರೋದು ಅತಿ ಪವಿತ್ರವಾಗಿರುತ್ತೆ.+ ಅದು ಆರೋನನಿಗೆ, ಅವನ ಮಕ್ಕಳಿಗೆ+ ಸೇರಬೇಕು.
4 ನೀವು ಒಲೆಯಲ್ಲಿ ಸುಟ್ಟದ್ದನ್ನ ಧಾನ್ಯ ಅರ್ಪಣೆಯಾಗಿ ಕೊಡೋಕೆ ಇಷ್ಟಪಟ್ರೆ ನುಣ್ಣಗಿನ ಹಿಟ್ಟಿಗೆ ಎಣ್ಣೆ ಬೆರೆಸಿ ಹುಳಿ ಇಲ್ಲದ ರೊಟ್ಟಿಗಳನ್ನ ಬಳೆ ಆಕಾರದಲ್ಲಿ ಮಾಡಿ ಕೊಡಬೇಕು ಅಥವಾ ನುಣ್ಣಗಿನ ಹಿಟ್ಟಿಂದ ಹುಳಿ ಇಲ್ಲದ ತೆಳುವಾದ ರೊಟ್ಟಿಗಳನ್ನ ಮಾಡಿ ಎಣ್ಣೆ ಸವರಿ ಕೊಡಬೇಕು.+
5 ನೀವು ಹೆಂಚಿನ ಮೇಲೆ ಸುಟ್ಟದ್ದನ್ನ+ ಧಾನ್ಯ ಅರ್ಪಣೆಯಾಗಿ ಕೊಡೋಕೆ ಇಷ್ಟಪಟ್ರೆ ಮೊದ್ಲು ನುಣ್ಣಗಿನ ಹಿಟ್ಟಿಗೆ ಎಣ್ಣೆ ಬೆರೆಸಿ ಹುಳಿ ಇಲ್ಲದ ರೊಟ್ಟಿ ಮಾಡಬೇಕು.
6 ಅದನ್ನ ಮುರಿದು ತುಂಡುತುಂಡುಗಳಾಗಿ ಮಾಡಿ ಅದ್ರ ಮೇಲೆ ಎಣ್ಣೆ ಸುರಿದು ಕೊಡಬೇಕು.+ ಅದು ಧಾನ್ಯ ಅರ್ಪಣೆ.
7 ನೀವು ಬಾಂಡ್ಲಿಯಲ್ಲಿ ತಯಾರಿಸಿದ್ದನ್ನ ಧಾನ್ಯ ಅರ್ಪಣೆಯಾಗಿ ಕೊಡೋಕೆ ಇಷ್ಟಪಟ್ರೆ ಅದು ನುಣ್ಣಗಿನ ಹಿಟ್ಟಿಗೆ ಎಣ್ಣೆ ಬೆರೆಸಿ ಮಾಡಿದ್ದಾಗಿರಬೇಕು.
8 ನೀವು ಯೆಹೋವನಿಗೆ ಕೊಡಬೇಕು ಅಂತಿರೋ ಧಾನ್ಯ ಅರ್ಪಣೆನ ತಂದು ಪುರೋಹಿತನಿಗೆ ಕೊಡಬೇಕು. ಅವನು ಅದನ್ನ ಯಜ್ಞವೇದಿ ಹತ್ರ ತಗೊಂಡು ಹೋಗ್ತಾನೆ.
9 ಪುರೋಹಿತ ಧಾನ್ಯ ಅರ್ಪಣೆಯಲ್ಲಿ ಸ್ವಲ್ಪ ತಗೊಂಡು ಯಜ್ಞವೇದಿ ಮೇಲಿರೋ ಬೆಂಕಿಯಲ್ಲಿ ಅರ್ಪಿಸ್ತಾನೆ.+ ಇದು ಧಾನ್ಯ ಅರ್ಪಣೆನ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಯಜ್ಞವೇದಿಯಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.+
10 ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಿದ ಧಾನ್ಯ ಅರ್ಪಣೆಯಲ್ಲಿ ಉಳಿದಿರೋದು ಅತಿ ಪವಿತ್ರವಾಗಿರುತ್ತೆ. ಅದು ಆರೋನನಿಗೆ, ಅವನ ಮಕ್ಕಳಿಗೆ ಸೇರಬೇಕು.+
11 ನೀವು ಯೆಹೋವನಿಗೆ ಕೊಡೋ ಯಾವುದೇ ಧಾನ್ಯ ಅರ್ಪಣೆಯಲ್ಲಿ ಹುಳಿ ಬೆರೆಸಬಾರದು.+ ಯಾಕಂದ್ರೆ ಹುಳಿಹಿಟ್ಟನ್ನ ಹಣ್ಣುಗಳ ರಸವನ್ನ* ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಿ ಹೊಗೆ ಮೇಲೇರಿಸೋದು ತಪ್ಪು.
12 ಹುಳಿಹಿಟ್ಟನ್ನ ಅಥವಾ ಹಣ್ಣುಗಳ ರಸವನ್ನ ನೀವು ಮೊದಲ ಬೆಳೆಯ ಅರ್ಪಣೆಯಾಗಿ ಯೆಹೋವನಿಗೆ ಕೊಡಬಹುದು.+ ಆದ್ರೆ ಸುವಾಸನೆಯ ಅರ್ಪಣೆಯಾಗಿ ಅವುಗಳನ್ನ ಯಜ್ಞವೇದಿ ಮೇಲೆ ಅರ್ಪಿಸಬಾರದು.
13 ದೇವರಿಗೆ ಅರ್ಪಿಸೋ ಪ್ರತಿಯೊಂದು ಧಾನ್ಯ ಅರ್ಪಣೆಯಲ್ಲಿ ನೀವು ಉಪ್ಪು ಸೇರಿಸಬೇಕು. ಉಪ್ಪಿಲ್ಲದೆ ಧಾನ್ಯ ಅರ್ಪಣೆ ಕೊಡಬಾರದು. ಯಾಕಂದ್ರೆ ಆ ಉಪ್ಪು ದೇವರು ನಿಮ್ಮ ಜೊತೆ ಮಾಡ್ಕೊಂಡಿರೋ ಒಪ್ಪಂದನ* ನೆನಪಿಸುತ್ತೆ. ನೀವು ಪ್ರತಿಯೊಂದು ಅರ್ಪಣೆ ಜೊತೆ ಉಪ್ಪನ್ನ ಅರ್ಪಿಸ್ಲೇಬೇಕು.+
14 ನೀವು ಮೊದಲ ಬೆಳೆಯಿಂದ ಧಾನ್ಯ ಅರ್ಪಣೆನ ಯೆಹೋವನಿಗೆ ಕೊಡೋದಾದ್ರೆ ಆ ಹೊಸ ಧಾನ್ಯವನ್ನ* ಬೆಂಕಿಯಲ್ಲಿ ಹುರಿದು ಕುಟ್ಟಿ ನುಚ್ಚು ಮಾಡಬೇಕು. ಇದು ಧಾನ್ಯದ ಮೊದಲ ಬೆಳೆಯ ಅರ್ಪಣೆ.+
15 ಅದ್ರ ಮೇಲೆ ಎಣ್ಣೆ ಹಾಕಿ ಸಾಂಬ್ರಾಣಿ ಇಟ್ಟು ಕೊಡಬೇಕು. ಇದೇ ಧಾನ್ಯ ಅರ್ಪಣೆ.
16 ಪುರೋಹಿತ ಎಣ್ಣೆ ಬೆರೆತ ನುಚ್ಚಿನಲ್ಲಿ ಸ್ವಲ್ಪವನ್ನ,+ ಎಲ್ಲ ಸಾಂಬ್ರಾಣಿಯನ್ನ ತಗೊಂಡು ಯಜ್ಞವೇದಿ ಮೇಲಿರೋ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಬೇಕು. ಯಜ್ಞವೇದಿಯಿಂದ ಹೊಗೆ ಮೇಲೆ ಹೋಗಬೇಕು. ಇದು ಧಾನ್ಯ ಅರ್ಪಣೆಯನ್ನ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ.
ಪಾದಟಿಪ್ಪಣಿ
^ ಅಥವಾ “ಉತ್ತಮ ಗುಣಮಟ್ಟದ ಹಿಟ್ಟು.”
^ ಅಥವಾ “ವಂಶದವರ.”
^ ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
^ ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
^ ಅಕ್ಷ. “ಜೇನುತುಪ್ಪ.” ಇದು ಅಂಜೂರ ಅಥವಾ ಬೇರೆ ಹಣ್ಣುಗಳ ರಸ ಇರಬೇಕು.
^ ಅಥವಾ “ಒಡಂಬಡಿಕೆಯನ್ನ.”
^ ಅಥವಾ “ಹಸಿರು ತೆನೆಗಳನ್ನ.”