ಯಾಜಕಕಾಂಡ 21:1-24

  • ಪುರೋಹಿತರು ಪವಿತ್ರರಾಗಿರಬೇಕು, ಅಶುದ್ಧರಾಗಬಾರದು (1-9)

  • ಮಹಾ ಪುರೋಹಿತ ಅಶುದ್ಧನಾಗಬಾರದು (10-15)

  • ಪುರೋಹಿತರು ಅಂಗವಿಕಲರಾಗಿ ಇರಬಾರದು (16-24)

21  ಯೆಹೋವ ಮೋಶೆಗೆ ಇದನ್ನೂ ಹೇಳಿದನು “ಪುರೋಹಿತರಿಗೆ ಅಂದ್ರೆ ಆರೋನನ ಮಕ್ಕಳಿಗೆ ಈ ಮಾತುಗಳನ್ನ ಹೇಳು: ‘ಒಬ್ಬ ಪುರೋಹಿತ ತನ್ನ ಜನ್ರಲ್ಲಿ ಯಾರಾದ್ರೂ ತೀರಿಹೋದ್ರೆ ಅವರಿಗೋಸ್ಕರ ತನ್ನನ್ನ ಅಶುದ್ಧ ಮಾಡ್ಕೊಬಾರದು.+  ಆದ್ರೆ ಅವನ ಹತ್ರದ ರಕ್ತ ಸಂಬಂಧಿಕರು ಅಂದ್ರೆ ಅವನ ಅಪ್ಪ, ಅಮ್ಮ, ಮಗ, ಮಗಳು, ಅಣ್ಣ, ತಮ್ಮಂದಿರಲ್ಲಿ ಯಾರಾದ್ರೂ ತೀರಿಹೋದಾಗ ತನ್ನನ್ನ ಅಶುದ್ಧ ಮಾಡ್ಕೊಬಹುದು.  ಅಷ್ಟೇ ಅಲ್ಲ ತನ್ನ ಹತ್ರ ಇರೋ ಅಕ್ಕ ಅಥವಾ ತಂಗಿ ಮದುವೆ ಆಗದೆ ತೀರಿಹೋದ್ರೆ ತನ್ನನ್ನ ಅಶುದ್ಧ ಮಾಡ್ಕೊಬಹುದು.  ಆದ್ರೆ ಅವನ ಜನ್ರಲ್ಲಿ ಮದುವೆ ಆಗಿರೋ ಒಬ್ಬ ಸ್ತ್ರೀ ತೀರಿಹೋದಾಗ ತನ್ನನ್ನ ಅಶುದ್ಧ ಮಾಡ್ಕೊಂಡು ಅಪವಿತ್ರ ಆಗಬಾರದು.  ಯಾರಾದ್ರೂ ತೀರಿಹೋದಾಗ ಪುರೋಹಿತರು ತಮ್ಮ ತಲೆನ ಅಥವಾ ಗಡ್ಡದ ಬದಿಗಳನ್ನ ಬೋಳಿಸ್ಕೊಬಾರದು,+ ದೇಹಕ್ಕೆ ಗಾಯ ಮಾಡ್ಕೊಬಾರದು.+  ಪುರೋಹಿತರು ದೇವರ ಮುಂದೆ ಪವಿತ್ರರಾಗಿ ಇರಬೇಕು.+ ಅವರು ದೇವರ ಆಹಾರನ ಅಂದ್ರೆ ಯೆಹೋವನಿಗೆ ಬೆಂಕಿಯಲ್ಲಿ ಬಲಿ ಕೊಡೋದ್ರಿಂದ ದೇವರ ಹೆಸರನ್ನ ಅಪವಿತ್ರ ಮಾಡಬಾರದು.+  ಪುರೋಹಿತ ದೇವರ ಮುಂದೆ ಪವಿತ್ರನಾಗಿ ಇರೋದ್ರಿಂದ ಅವನು ವೇಶ್ಯೆಯನ್ನಾಗಲಿ,+ ಶೀಲ ಕಳ್ಕೊಂಡಿರೋ ಸ್ತ್ರೀಯನ್ನಾಗಲಿ, ಗಂಡನಿಂದ ವಿಚ್ಛೇದನ ಪಡ್ಕೊಂಡಿರೋ ಸ್ತ್ರೀಯನ್ನಾಗಲಿ+ ಮದುವೆ ಆಗಬಾರದು.  ಇಸ್ರಾಯೇಲ್ಯರೇ, ಪುರೋಹಿತ ದೇವರ ಆಹಾರನ ಅಂದ್ರೆ ಬಲಿಗಳನ್ನ ಕೊಡೋದ್ರಿಂದ ನೀವು ಅವನನ್ನ ಪವಿತ್ರವಾಗಿ ನೋಡಬೇಕು.+ ಯೆಹೋವನಾದ ನಾನು ಪವಿತ್ರನಾಗಿದ್ದೀನಿ, ನಿಮ್ಮನ್ನ ಪವಿತ್ರ ಜನರಾಗಿ ಮಾಡಿದ್ದೀನಿ.+ ಹಾಗಾಗಿ ನೀವು ಪುರೋಹಿತನನ್ನ ಪವಿತ್ರವಾಗಿ ನೋಡಬೇಕು.  ಪುರೋಹಿತನ ಮಗಳು ವೇಶ್ಯೆಯಾಗಿ ತನ್ನನ್ನ ಅಪವಿತ್ರ ಮಾಡ್ಕೊಂಡ್ರೆ ತನ್ನ ತಂದೆನ ಅಪವಿತ್ರ ಮಾಡ್ತಾಳೆ. ಹಾಗಾಗಿ ಅವಳನ್ನ ಸಾಯಿಸಿ ಬೆಂಕಿಯಿಂದ ಸುಟ್ಟುಬಿಡಬೇಕು.+ 10  ಮಹಾ ಪುರೋಹಿತ ತನ್ನ ಜನ್ರಲ್ಲಿ ಯಾರಾದ್ರೂ ತೀರಿಹೋದಾಗ ತನ್ನ ಬಟ್ಟೆ ಹರ್ಕೊಳ್ಳಬಾರದು.+ ಯಾಕಂದ್ರೆ ವಿಶೇಷ ಬಟ್ಟೆನ ಹಾಕೊಳ್ಳೋ+ ನೇಮಕ ಅವನಿಗೆ ಸಿಕ್ಕಿರುತ್ತೆ. ಅವನು ತಲೆಕೂದಲನ್ನ ಬಾಚದೆ ಹಾಗೇ ಬಿಡಬಾರದು. ಯಾಕಂದ್ರೆ ಅವನ ತಲೆ ತೈಲದಿಂದ ಅಭಿಷೇಕ ಆಗಿರುತ್ತೆ.+ 11  ಮಹಾ ಪುರೋಹಿತ ಯಾರ ಶವದ* ಹತ್ರಾನೂ ಹೋಗಬಾರದು.+ ಅಪ್ಪ ಅಥವಾ ಅಮ್ಮ ತೀರಿಹೋದ್ರೂ ತನ್ನನ್ನ ಅಶುದ್ಧ ಮಾಡ್ಕೊಬಾರದು. 12  ದೇವರಿಗೆ ಸಮರ್ಪಿಸ್ಕೊಂಡಿದ್ದಾನೆ ಅನ್ನೋ ಗುರುತಾಗಿ ಅವನ ತಲೆ ಮೇಲೆ ಅಭಿಷೇಕ ತೈಲ ಹಾಕಿರೋದ್ರಿಂದ+ ಅವನು ಆರಾಧನಾ ಸ್ಥಳ ಬಿಟ್ಟು ಹೊರಗೆ ಹೋಗಬಾರದು. ಹಾಗೆ ಹೋಗಿ ದೇವರ ಆರಾಧನಾ ಸ್ಥಳನ ಅಪವಿತ್ರ ಮಾಡಬಾರದು.+ ನಾನು ಯೆಹೋವ. 13  ಅವನು ಕನ್ಯೆಯನ್ನೇ ಮದುವೆ ಆಗಬೇಕು.+ 14  ಅವನು ವಿಧವೆಯನ್ನಾಗಲಿ, ವಿಚ್ಛೇದನ ಪಡಿದಿರೋ ಸ್ತ್ರೀಯನ್ನಾಗಲಿ, ಶೀಲ ಕಳ್ಕೊಂಡಿರೋ ಸ್ತ್ರೀಯನ್ನಾಗಲಿ, ವೇಶ್ಯೆಯನ್ನಾಗಲಿ ಮದುವೆ ಆಗಬಾರದು. ಅವನು ತನ್ನ ಜನ್ರಲ್ಲಿ ಕನ್ಯೆಯನ್ನೇ ಮದುವೆ ಆಗಬೇಕು. 15  ಅವನು ತನ್ನ ಜನ್ರ ಮುಂದೆ ತನ್ನ ವಂಶದವರನ್ನ ಅಪವಿತ್ರ ಮಾಡಬಾರದು.+ ಹಾಗಾಗಿ ನಾನು ಆಜ್ಞೆ ಕೊಟ್ಟ ಹಾಗೇ ಅವನು ಮಾಡಬೇಕು. ನಾನು ಯೆಹೋವ, ಅವನು ನನ್ನ ಸೇವೆಗಂತಾನೇ ಇದ್ದಾನೆ.’” 16  ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ 17  “ನೀನು ಆರೋನನಿಗೆ ಹೀಗೆ ಹೇಳು: ‘ನಿನ್ನ ವಂಶದವರಲ್ಲಿ ಅಂಗವಿಕಲರು ಇದ್ರೆ ಅವರು ದೇವರಿಗೆ ಆಹಾರನ ಅಂದ್ರೆ ಬಲಿಗಳನ್ನ ಕೊಡಕ್ಕೆ ಹೋಗಬಾರದು. ಈ ನಿಯಮನ ಎಲ್ಲ ಪೀಳಿಗೆಯವರು ಪಾಲಿಸಬೇಕು. 18  ಒಬ್ಬನು ಕುರುಡನಾಗಿದ್ರೆ ಕುಂಟನಾಗಿದ್ರೆ ಮುಖ ವಿಕಾರ ಆಗಿದ್ರೆ ಒಂದು ಕೈ ಅಥವಾ ಕಾಲು ಉದ್ದವಾಗಿದ್ರೆ ಅವನು ತನ್ನ ದೇವರಿಗೆ ಆಹಾರನ ಅಂದ್ರೆ ಬಲಿಗಳನ್ನ ಕೊಡೋಕೆ ಹೋಗಬಾರದು. 19  ಕೈ ಅಥವಾ ಕಾಲಿನ ಮೂಳೆ ಮುರಿದಿದ್ರೆ 20  ಗೂನುಬೆನ್ನಿದ್ರೆ ತುಂಬ ಕುಳ್ಳಗಿದ್ರೆ,* ಕಣ್ಣಿನ ತೊಂದ್ರೆ ಇದ್ರೆ ಇಸಬು ಅಥವಾ ಹುಳಕಡ್ಡಿ ಇದ್ರೆ ಬೀಜಕ್ಕೆ ಹಾನಿಯಾಗಿದ್ರೆ+ ಅಂಥವನು ಕೂಡ ದೇವರಿಗೆ ಆಹಾರನ ಅಂದ್ರೆ ಬಲಿಗಳನ್ನ ಕೊಡೋಕೆ ಹೋಗಬಾರದು. 21  ಪುರೋಹಿತ ಆರೋನನ ವಂಶದವರಲ್ಲಿ ಅಂಗವಿಕಲ ಆದವನು ದೇವರಿಗೆ ಆಹಾರನ ಅಂದ್ರೆ ಯೆಹೋವನಿಗೆ ಬೆಂಕಿಯಲ್ಲಿ ಬಲಿಗಳನ್ನ ಕೊಡೋಕೆ ಹೋಗಬಾರದು. ಅವನು ಅಂಗವಿಕಲ ಆಗಿರೋದ್ರಿಂದ ಆ ಕೆಲಸ ಮಾಡಬಾರದು. 22  ದೇವರ ಆಹಾರನ ಅಂದ್ರೆ ಪವಿತ್ರ ಆಗಿರೋದನ್ನೂ+ ಅತಿ ಪವಿತ್ರ ಆಗಿರೋದನ್ನೂ+ ಅವನು ತಿನ್ನಬಹುದು. 23  ಆದ್ರೆ ಅವನು ಅಂಗವಿಕಲ ಆಗಿರೋದ್ರಿಂದ ಪವಿತ್ರ ಸ್ಥಳದ ಪರದೆ+ ಹತ್ರ ಮತ್ತು ಯಜ್ಞವೇದಿ+ ಹತ್ರ ಬರಬಾರದು. ಅವನು ನನ್ನ ಪವಿತ್ರ ಸ್ಥಳನ+ ಅಪವಿತ್ರ ಮಾಡಬಾರದು. ಯಾಕಂದ್ರೆ ನಾನು ಯೆಹೋವ ಮತ್ತು ನಾನು ಅವುಗಳನ್ನ ನನ್ನ ಸೇವೆಗಾಗಿ ಪವಿತ್ರ ಮಾಡಿದ್ದೀನಿ.’”+ 24  ಮೋಶೆ ಈ ಎಲ್ಲ ಮಾತುಗಳನ್ನ ಆರೋನನಿಗೆ, ಅವನ ಮಕ್ಕಳಿಗೆ, ಎಲ್ಲ ಇಸ್ರಾಯೇಲ್ಯರಿಗೆ ಹೇಳಿದ.

ಪಾದಟಿಪ್ಪಣಿ

ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಬಹುಶಃ, “ಬಡಕಲಾಗಿದ್ರೆ.”