ಯಾಜಕಕಾಂಡ 24:1-23

  • ಪವಿತ್ರ ಡೇರೆಯ ದೀಪಗಳಿಗೆ ಎಣ್ಣೆ (1-4)

  • ಅರ್ಪಣೆಯ ರೊಟ್ಟಿಗಳು (5-9)

  • ದೇವರ ಹೆಸ್ರನ್ನ ಬೈಯೋರಿಗೆ ಮರಣಶಿಕ್ಷೆ (10-23)

24  ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ  “ನನ್ನ ಆಲಯದ ದೀಪಗಳು ಯಾವಾಗ್ಲೂ ಉರೀತಾ ಇರೋ ಹಾಗೆ ಶುದ್ಧ ಆಲಿವ್‌ ಎಣ್ಣೆಯನ್ನ ತಂದು ಕೊಡೋಕೆ ಇಸ್ರಾಯೇಲ್ಯರಿಗೆ ಆಜ್ಞೆ ಕೊಡು.+  ದೇವದರ್ಶನ ಡೇರೆಯಲ್ಲಿ ಸಾಕ್ಷಿ ಮಂಜೂಷದ ಹತ್ರ ಇರೋ ಪರದೆ ಹೊರಗೆ ದೀಪಗಳು ಸಂಜೆಯಿಂದ ಬೆಳಿಗ್ಗೆ ತನಕ ಯೆಹೋವನ ಮುಂದೆ ಉರೀತಾ ಇರೋಕೆ ಆರೋನ ಏರ್ಪಾಡು ಮಾಡಬೇಕು. ಇದು ಶಾಶ್ವತ ನಿಯಮ. ಇದನ್ನ ಎಲ್ಲ ಪೀಳಿಗೆಯವರು ಪಾಲಿಸಬೇಕು.  ಯೆಹೋವನ ಮುಂದೆ ಇರೋ ಶುದ್ಧ ಚಿನ್ನದ ದೀಪಸ್ತಂಭದ+ ಮೇಲೆ ದೀಪಗಳು ಯಾವಾಗ್ಲೂ ಜೋಡಿಸಿ ಇಟ್ಟಿರೋ ಹಾಗೆ ಅವನು ನೋಡ್ಕೊಬೇಕು.  ನೀನು ನುಣ್ಣಗಿನ ಹಿಟ್ಟನ್ನ ತಗೊಂಡು ಅದ್ರಿಂದ ಬಳೆ ಆಕಾರದ 12 ರೊಟ್ಟಿಗಳನ್ನ ಸುಡಬೇಕು. ಒಂದೊಂದು ರೊಟ್ಟಿನ ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು* ಹಿಟ್ಟಿಂದ ಮಾಡಿರಬೇಕು.  ಶುದ್ಧ ಚಿನ್ನದಿಂದ ಮಾಡಿದ ಮೇಜಿನ+ ಮೇಲೆ ಯೆಹೋವನ ಮುಂದೆ ಅವನ್ನ ಒಂದ್ರ ಮೇಲೆ ಒಂದ್ರ ತರ ಎರಡು ಸಾಲಾಗಿ ಇಡಬೇಕು. ಒಂದು ಸಾಲಲ್ಲಿ ಆರು ರೊಟ್ಟಿ ಇರಬೇಕು.+  ಎರಡೂ ಸಾಲಿನ ಮೇಲೆ ಶುದ್ಧ ಸಾಂಬ್ರಾಣಿ ಇಡಬೇಕು. ರೊಟ್ಟಿಗಳ ಬದ್ಲು ಆ ಸಾಂಬ್ರಾಣಿನ ಅರ್ಪಿಸಬೇಕು.+ ಇದು ಯೆಹೋವನಿಗೆ ಬೆಂಕಿಯಲ್ಲಿ ಮಾಡೋ ಅರ್ಪಣೆ ಆಗಿದೆ.  ಪ್ರತಿ ಸಬ್ಬತ್‌ ದಿನ ಆ ರೊಟ್ಟಿಗಳನ್ನ ಯೆಹೋವನ ಮುಂದೆ ಜೋಡಿಸಿ ಇಡಬೇಕು.+ ಇದು ನಾನು ಇಸ್ರಾಯೇಲ್ಯರ ಜೊತೆ ಮಾಡ್ಕೊಂಡಿರೋ ಶಾಶ್ವತ ಒಪ್ಪಂದ.  ಆ ರೊಟ್ಟಿಗಳು ಆರೋನನಿಗೆ ಅವನ ಮಕ್ಕಳಿಗೆ ಸೇರಿದ್ದು.+ ಆ ರೊಟ್ಟಿಗಳನ್ನ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆಯಾಗಿ ಕೊಡೋದ್ರಿಂದ ಅವು ಪುರೋಹಿತರಿಗೆ ಪವಿತ್ರವಾಗಿವೆ. ಹಾಗಾಗಿ ಅವರು ಅವುಗಳನ್ನ ಒಂದು ಪವಿತ್ರ ಜಾಗದಲ್ಲಿ* ತಿನ್ನಬೇಕು.+ ಇದು ಶಾಶ್ವತ ನಿಯಮ.” 10  ಒಬ್ಬ ಇಸ್ರಾಯೇಲ್ಯ ಸ್ತ್ರೀಗೆ ಈಜಿಪ್ಟಿನ ಪುರುಷನಿಂದ ಹುಟ್ಟಿದ ಒಬ್ಬ ಮಗನಿದ್ದ.+ ಒಂದಿನ ಪಾಳೆಯದಲ್ಲಿ ಅವನಿಗೂ ಒಬ್ಬ ಇಸ್ರಾಯೇಲ್ಯನಿಗೂ ಜಗಳ ಆಯ್ತು. 11  ಇಸ್ರಾಯೇಲ್ಯ ಸ್ತ್ರೀಗೆ ಈಜಿಪ್ಟಿನ ಪುರುಷನಿಂದ ಹುಟ್ಟಿದ ಆ ಮಗ ದೇವರ ಹೆಸರನ್ನ ಬೈಯೋಕೆ* ಮತ್ತು ಶಪಿಸೋಕೆ* ಶುರುಮಾಡಿದ.+ ಹಾಗಾಗಿ ಜನ್ರು ಅವನನ್ನ ಮೋಶೆ ಹತ್ರ ಕರ್ಕೊಂಡು ಬಂದ್ರು.+ ಅವನ ತಾಯಿ ಹೆಸ್ರು ಶೆಲೋಮೀತ್‌. ಅವಳು ದಾನ್‌ ಕುಲದ ದಿಬ್ರೀ ಅನ್ನೋನ ಮಗಳು. 12  ಅವಳ ಮಗನ ಬಗ್ಗೆ ಯೆಹೋವನ ತೀರ್ಪು ಏನಂತ ಗೊತ್ತಾಗೋ ತನಕ ಅವನನ್ನ ಬಂಧಿಸಿಟ್ರು.+ 13  ಆಮೇಲೆ ಯೆಹೋವ ಮೋಶೆಗೆ ಹೀಗಂದನು: 14  “ನನ್ನ ಹೆಸರಿಗೆ ಶಾಪ ಹಾಕಿದ ಆ ವ್ಯಕ್ತಿನ ಪಾಳೆಯದ ಹೊರಗೆ ಕರ್ಕೊಂಡು ಬಾ. ಅವನು ಆಡಿದ ಮಾತನ್ನ ಕೇಳಿಸ್ಕೊಂಡವರೆಲ್ಲ ಅವನ ತಲೆ ಮೇಲೆ ಕೈ ಇಡಬೇಕು. ಆಮೇಲೆ ಎಲ್ಲ ಇಸ್ರಾಯೇಲ್ಯರು ಅವನನ್ನ ಕಲ್ಲು ಹೊಡೆದು ಸಾಯಿಸಬೇಕು.+ 15  ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಯಾರಾದ್ರೂ ದೇವರಿಗೆ ಅವಮಾನ ಆಗೋ ತರ ಮಾತಾಡಿದ್ರೆ ಅದು ಪಾಪ. ಹಾಗಾಗಿ ಅವನಿಗೆ ಶಿಕ್ಷೆ ಆಗಬೇಕು. 16  ಯೆಹೋವನ ಹೆಸರಿಗೆ ಗೌರವ ಕೊಡದೆ ಮಾತಾಡಿದ ವ್ಯಕ್ತಿಗೆ ಖಂಡಿತ ಮರಣಶಿಕ್ಷೆ ಆಗಬೇಕು.+ ಎಲ್ಲ ಇಸ್ರಾಯೇಲ್ಯರು ಕಲ್ಲು ಹೊಡೆದು ಅವನನ್ನ ಸಾಯಿಸಬೇಕು. ದೇವರ ಹೆಸರಿಗೆ ಗೌರವ ಕೊಡದೆ ಮಾತಾಡೋನು ಇಸ್ರಾಯೇಲ್ಯನಾಗಿರಲಿ ವಿದೇಶಿಯಾಗಿರಲಿ ಮರಣಶಿಕ್ಷೆ ಆಗಬೇಕು. 17  ಕೊಲೆಗಾರನನ್ನ ಸಾಯಿಸ್ಲೇಬೇಕು.+ 18  ಬೇರೆಯವರ ಸಾಕುಪ್ರಾಣಿನ ಹೊಡೆದು ಕೊಂದ್ರೆ ಕೊಂದವನು ನಷ್ಟಭರ್ತಿ ಮಾಡಬೇಕು. ಅವನು ಪ್ರಾಣಿಗೆ ಬದಲಾಗಿ ಪ್ರಾಣಿನ ಕೊಡಬೇಕು. 19  ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಹಾನಿ ಮಾಡಿದ್ರೆ ಇವನು ಅಷ್ಟೇ ಹಾನಿಯನ್ನ ಅವನಿಗೂ ಮಾಡಬೇಕು.+ 20  ಅವನು ಮೂಳೆ ಮುರಿದ್ರೆ ಇವನೂ ಮೂಳೆಯನ್ನ ಮುರಿಬೇಕು. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಕೊಡಬೇಕು. ಅವನು ಯಾವ ತರ ಹಾನಿ ಮಾಡಿದ್ದಾನೋ ಅದೇ ತರ ಅವನಿಗೂ ಹಾನಿ ಮಾಡಬೇಕು.+ 21  ಒಬ್ಬನು ಒಂದು ಪ್ರಾಣಿನ ಹೊಡೆದು ಕೊಂದ್ರೆ ಅವನು ನಷ್ಟಭರ್ತಿ ಮಾಡಬೇಕು.+ ಆದ್ರೆ ಅವನು ಒಬ್ಬ ವ್ಯಕ್ತಿನ ಹೊಡೆದು ಕೊಂದ್ರೆ ಅವನನ್ನ ಸಾಯಿಸಬೇಕು.+ 22  ಇಸ್ರಾಯೇಲ್ಯನಾಗಿರಲಿ ಅವರ ಮಧ್ಯ ಇರೋ ವಿದೇಶಿಯಾಗಿರಲಿ ಎಲ್ರಿಗೂ ಒಂದೇ ನಿಯಮ,+ ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ.’” 23  ಈ ಎಲ್ಲ ಮಾತುಗಳನ್ನ ಮೋಶೆ ಇಸ್ರಾಯೇಲ್ಯರಿಗೆ ಹೇಳಿದ. ದೇವರ ಹೆಸರನ್ನ ಶಪಿಸಿದ ಆ ವ್ಯಕ್ತಿನ ಜನ್ರು ಪಾಳೆಯದ ಹೊರಗೆ ಕರ್ಕೊಂಡು ಬಂದು ಕಲ್ಲು ಹೊಡೆದು ಸಾಯಿಸಿದ್ರು.+ ಹೀಗೆ ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ತರಾನೇ ಇಸ್ರಾಯೇಲ್ಯರು ಮಾಡಿದ್ರು.

ಪಾದಟಿಪ್ಪಣಿ

ಅಂದ್ರೆ, 4.4 ಲೀ. ಪರಿಶಿಷ್ಟ ಬಿ14 ನೋಡಿ.
ಬಹುಶಃ ಪವಿತ್ರ ಡೇರೆ ಅಂಗಳದಲ್ಲಿ.
ಅಥವಾ “ಕೇಡಾಗಲಿ ಅಂತ ಬೈಯೋಕೆ.”
ವಚನ 15, 16 ಸೂಚಿಸುವಂತೆ ಅವನು ಯೆಹೋವನ ಹೆಸರನ್ನ ದೂಷಿಸಿದನು.