ಯಾಜಕಕಾಂಡ 26:1-46
26 “‘ಪ್ರಯೋಜನಕ್ಕೇ ಬರದ ದೇವರುಗಳನ್ನ ನೀವು ಮಾಡ್ಕೊಬಾರದು.+ ಕೆತ್ತಿದ ಮೂರ್ತಿಗಳನ್ನ+ ಅಥವಾ ವಿಗ್ರಹಸ್ತಂಭಗಳನ್ನ ಮಾಡ್ಕೊಂಡು ಪೂಜಿಸಬಾರದು. ಕಲ್ಲಿನ ಮೂರ್ತಿಗಳನ್ನ+ ಮಾಡಿ ಅವುಗಳಿಗೆ ಅಡ್ಡಬೀಳಬಾರದು.+ ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ.
2 ನಾನು ಆಜ್ಞೆ ಕೊಟ್ಟ ಹಾಗೇ ನೀವು ಸಬ್ಬತ್ ಆಚರಿಸಬೇಕು. ನನ್ನ ಆರಾಧನಾ ಸ್ಥಳನ ತುಂಬ ಗೌರವದಿಂದ* ನೋಡಬೇಕು. ನಾನು ಯೆಹೋವ.
3 “‘ನೀವು ಯಾವಾಗ್ಲೂ ನನ್ನ ನಿಯಮಗಳನ್ನ, ಆಜ್ಞೆಗಳನ್ನ ಕೇಳಿ ಅದ್ರ ಪ್ರಕಾರ ನಡಿದ್ರೆ+
4 ಕಾಲ ಕಾಲಕ್ಕೆ ಸರಿಯಾಗಿ ಮಳೆ ಬರೋ ತರ ಮಾಡ್ತೀನಿ.+ ನಿಮ್ಮ ಜಮೀನಲ್ಲಿ ಚೆನ್ನಾಗಿ ಬೆಳೆಯಾಗೋ+ ತರ, ಮರಗಳು ಜಾಸ್ತಿ ಹಣ್ಣು ಕೊಡೋ ತರ ಮಾಡ್ತೀನಿ.
5 ನಿಮಗೆ ಫಸಲು ಎಷ್ಟು ಸಮೃದ್ಧವಾಗಿ ಸಿಗುತ್ತೆ ಅಂದ್ರೆ ದ್ರಾಕ್ಷಿ ಕೊಯ್ಯೋ ಕಾಲ ಬಂದ್ರೂ ನೀವಿನ್ನೂ ಕಣದಲ್ಲಿ ಧಾನ್ಯವನ್ನ ತುಂಬ್ತಾ ಇರ್ತಿರ. ದ್ರಾಕ್ಷಿ ಬೆಳೆ ಎಷ್ಟು ಜಾಸ್ತಿ ಇರುತ್ತೆ ಅಂದ್ರೆ ಬಿತ್ತೋ ಸಮಯ ಬಂದ್ರೂ ನೀವಿನ್ನೂ ದ್ರಾಕ್ಷಿನ ಕೊಯ್ತಾ ಇರ್ತಿರ. ನಿಮಗೆ ಊಟಕ್ಕೇನೂ ಕೊರತೆ ಇರಲ್ಲ. ನೀವು ದೇಶದಲ್ಲಿ ಸುರಕ್ಷಿತವಾಗಿ ಇರ್ತಿರ.+
6 ನಿಮ್ಮ ದೇಶದಲ್ಲಿ ಶಾಂತಿ ಇರೋ ತರ ಮಾಡ್ತೀನಿ.+ ನಿಮಗೆ ಯಾರ ಭಯನೂ ಇಲ್ಲದೆ ಸುಖವಾಗಿ ನಿದ್ದೆ ಮಾಡ್ತೀರ.+ ನಿಮ್ಮ ದೇಶದೊಳಗೆ ಕ್ರೂರ ಪ್ರಾಣಿಗಳು ಬರದೇ ಇರೋ ತರ ಮಾಡ್ತೀನಿ. ಯಾರೂ ನಿಮ್ಮ ವಿರುದ್ಧ ಯುದ್ಧಕ್ಕೆ ಬರಲ್ಲ.
7 ನೀವು ಶತ್ರುಗಳನ್ನ ಸೋಲಿಸಿ ಅಟ್ಟಿಸ್ಕೊಂಡು ಹೋಗ್ತೀರ, ಅವ್ರನ್ನ ಕತ್ತಿಯಿಂದ ಸಾಯಿಸ್ತೀರ.
8 ನಿಮ್ಮಲ್ಲಿ ಐದು ಜನ 100 ಶತ್ರುಗಳನ್ನ, 100 ಜನ 10,000 ಶತ್ರುಗಳನ್ನ ಅಟ್ಟಿಸ್ಕೊಂಡು ಹೋಗ್ತೀರ. ನಿಮ್ಮ ಶತ್ರುಗಳನ್ನ ಕತ್ತಿಯಿಂದ ಸಾಯಿಸ್ತೀರ.+
9 “‘ನಾನು ನಿಮ್ಮನ್ನ ಆಶೀರ್ವದಿಸ್ತೀನಿ. ನಿಮಗೆ ಮಕ್ಕಳು ಹುಟ್ಟಿ ನಿಮ್ಮ ವಂಶ ದೊಡ್ಡದಾಗೋ ತರ ಮಾಡ್ತೀನಿ.+ ನಾನು ನಿಮ್ಮ ಜೊತೆ ಮಾಡ್ಕೊಂಡಿರೋ ಒಪ್ಪಂದದ ಪ್ರಕಾರ ನಡಿತೀನಿ.+
10 ನಿಮ್ಮ ಹೊಲದಲ್ಲಿ ಹೊಸ ಬೆಳೆ ಬಂದಿದ್ರೂ ನಿಮ್ಮ ಹಿಂದಿನ ವರ್ಷದ ಬೆಳೆ ಮುಗಿದಿರಲ್ಲ. ಆ ಹೊಸ ಬೆಳೆನ ಕೂಡಿಸಿ ಇಡೋಕೆ ಹಿಂದಿನ ವರ್ಷದ ಬೆಳೆನ ಖಾಲಿ ಮಾಡಬೇಕಾಗುತ್ತೆ.
11 ನನ್ನ ಪವಿತ್ರ ಡೇರೆನ ನಿಮ್ಮ ಮಧ್ಯ ಇಡ್ತೀನಿ.+ ನಾನು ನಿಮ್ಮ ಕೈಬಿಡಲ್ಲ.
12 ನಾನು ನಿಮ್ಮ ಮಧ್ಯ ನಡೆದಾಡ್ತೀನಿ. ನಾನು ನಿಮ್ಮ ದೇವರಾಗಿ ಇರ್ತಿನಿ.+ ನೀವು ನನ್ನ ಜನರಾಗಿ ಇರ್ತಿರ.+
13 ನಾನು ನಿಮ್ಮ ದೇವರಾದ ಯೆಹೋವ. ನೀವು ಇನ್ಮುಂದೆ ಈಜಿಪ್ಟಿನವರಿಗೆ ಗುಲಾಮರಾಗಿ ಇರಬಾರದು ಅಂತ ಆ ದೇಶದಿಂದ ನಿಮ್ಮನ್ನ ಕರ್ಕೊಂಡು ಬಂದೆ. ಅವರು ನಿಮ್ಮ ಹೆಗಲ ಮೇಲೆ ಹಾಕಿರೋ ನೊಗನ ಮುರಿದು ನೀವು ತಲೆಯೆತ್ತಿ ನಡಿಯೋ ತರ ಮಾಡ್ದೆ.
14 “‘ಆದ್ರೆ ನೀವು ನನ್ನ ಮಾತನ್ನ ಕೇಳದಿದ್ರೆ, ನಾನು ಕೊಡೋ ಆಜ್ಞೆಗಳ ಪ್ರಕಾರ ನಡೀದೆ ಇದ್ರೆ,+
15 ನನ್ನ ನಿಯಮಗಳನ್ನ ಮೀರಿದ್ರೆ,+ ನನ್ನ ತೀರ್ಪುಗಳನ್ನ ಕೇಳದೇ ನನ್ನ ಆಜ್ಞೆಗಳನ್ನ ಬಿಟ್ಟು ನಡೆದ್ರೆ ನನ್ನ ಒಪ್ಪಂದವನ್ನ ಮುರಿದ್ರೆ+
16 ನಾನು ನಿಮಗೆ ಈ ಶಿಕ್ಷೆಗಳನ್ನ ಕೊಡ್ತೀನಿ: ನೀವು ಗಾಬರಿಯಿಂದ ಕಂಗಾಲಾಗೋ ತರ ಮಾಡ್ತೀನಿ. ನಿಮಗೆ ಕ್ಷಯರೋಗ, ವಿಪರೀತ ಜ್ವರ ಬರೋ ತರ ಮಾಡ್ತೀನಿ. ಆಗ ನಿಮ್ಮ ದೃಷ್ಟಿ ಮಂದವಾಗುತ್ತೆ. ನೀವು ಸೊರಗಿ ಹೋಗ್ತೀರ. ನೀವು ಬೀಜ ಬಿತ್ತಿದ್ರೂ ಅದ್ರ ಫಲ ತಿನ್ನಲ್ಲ, ನಿಮ್ಮ ಶತ್ರುಗಳು ತಿಂತಾರೆ.+
17 ನಾನು ನಿಮ್ಮ ಕೈಬಿಡ್ತೀನಿ, ನಿಮ್ಮ ಶತ್ರುಗಳು ನಿಮ್ಮನ್ನ ಸೋಲಿಸಿಬಿಡ್ತಾರೆ.+ ನಿಮ್ಮನ್ನ ದ್ವೇಷಿಸೋರು ನಿಮ್ಮ ಮೇಲೆ ದಬ್ಬಾಳಿಕೆ ಮಾಡ್ತಾರೆ.+ ನಿಮ್ಮನ್ನ ಯಾರೂ ಅಟ್ಟಿಸ್ಕೊಂಡು ಬರದೇ ಇದ್ರೂ ನೀವು ಭಯದಿಂದ ಓಡ್ತೀರ.+
18 “‘ಇಷ್ಟೆಲ್ಲ ಆದ್ರೂ ನೀವು ನನ್ನ ಮಾತನ್ನ ಕೇಳದಿದ್ರೆ ನಾನು ನಿಮ್ಮ ಪಾಪಗಳಿಗಾಗಿ ಮುಂಚೆಗಿಂತ ಏಳು ಪಟ್ಟು ಜಾಸ್ತಿ ಶಿಕ್ಷೆ ಕೊಡಬೇಕಾಗುತ್ತೆ.
19 ನೀವು ಮೊಂಡುತನದಿಂದ ತೋರಿಸೋ ಅಹಂಕಾರನ ಅಡಗಿಸಿಬಿಡ್ತೀನಿ. ನಿಮ್ಮ ಮೇಲಿರೋ ಆಕಾಶನ ಕಬ್ಬಿಣದ ತರ*+ ಭೂಮಿನ ತಾಮ್ರದ ತರ* ಮಾಡ್ತೀನಿ.
20 ನೀವು ಎಷ್ಟೇ ಬೆವರು ಸುರಿಸಿ ದುಡಿದ್ರೂ ಹೊಲದಲ್ಲಿ ಬೆಳೆ ಬೆಳೆಯಲ್ಲ,+ ಮರಗಳು ಹಣ್ಣು ಕೊಡಲ್ಲ. ನೀವು ಪಟ್ಟ ಕಷ್ಟ ಎಲ್ಲ ವ್ಯರ್ಥ ಆಗುತ್ತೆ.
21 “‘ಹೀಗೆಲ್ಲ ಆದ ಮೇಲೂ ನೀವು ನನ್ನ ಮಾತನ್ನ ಕೇಳೋಕೆ ಒಪ್ಪದೆ ನನ್ನ ವಿರುದ್ಧ ನಡೀತಾ ಇದ್ರೆ ನಿಮ್ಮ ಪಾಪಗಳಿಗಾಗಿ ನಾನು ನಿಮಗೆ ಮುಂಚೆಗಿಂತ ಇನ್ನೂ ಏಳು ಪಟ್ಟು ಜಾಸ್ತಿ ಶಿಕ್ಷೆ ಕೊಡಬೇಕಾಗುತ್ತೆ.
22 ಆಗ ಕಾಡುಪ್ರಾಣಿಗಳು ನಿಮ್ಮ ಮಧ್ಯ ಬರೋ ತರ ಮಾಡ್ತೀನಿ.+ ಅವು ನಿಮ್ಮ ಮಕ್ಕಳನ್ನ ಹಿಡ್ಕೊಂಡು ಹೋಗುತ್ತೆ,+ ಸಾಕುಪ್ರಾಣಿಗಳನ್ನ ತಿಂದುಬಿಡುತ್ತೆ. ಆಗ ನಿಮ್ಮ ಸಂಖ್ಯೆ ಕಮ್ಮಿ ಆಗಿ ರಸ್ತೆಗಳೆಲ್ಲ ಬಿಕೋ ಅನ್ನುತ್ತೆ.+
23 “‘ಇಷ್ಟಾದ್ರೂ ನೀವು ನಿಮ್ಮನ್ನ ತಿದ್ಕೊಳ್ಳದೆ+ ಹಠದಿಂದ ನನ್ನ ವಿರುದ್ಧನೇ ನಡೀತಿದ್ರೆ
24 ನಾನೂ ನಿಮ್ಮನ್ನ ವಿರೋಧಿಸ್ತೀನಿ, ನಿಮ್ಮ ಪಾಪಗಳಿಗಾಗಿ ನಿಮಗೆ ಇನ್ನೂ ಏಳು ಪಟ್ಟು ಶಿಕ್ಷೆ ಕೊಡ್ತೀನಿ.
25 ನೀವು ನನ್ನ ಒಪ್ಪಂದನ ಮುರಿದಿದ್ದಕ್ಕೆ ನಿಮ್ಮ ಶತ್ರುಗಳು ಕತ್ತಿ ಹಿಡಿದು ನಿಮ್ಮನ್ನ ದಾಳಿ ಮಾಡೋ ಹಾಗೆ ಮಾಡ್ತೀನಿ.+ ನೀವು ತಪ್ಪಿಸ್ಕೊಂಡು ಪಟ್ಟಣಕ್ಕೆ ಓಡಿಹೋಗಿ ಬಚ್ಚಿಟ್ಕೊಂಡ್ರೆ ನಿಮಗೆ ಕಾಯಿಲೆ ಬರೋ ತರ ಮಾಡ್ತೀನಿ.+ ನಿಮ್ಮನ್ನ ಶತ್ರುಗಳ ವಶಮಾಡ್ತೀನಿ.+
26 ನೀವು ಕೂಡಿಸಿಟ್ಟ ಆಹಾರ* ನಾಶಮಾಡ್ತೀನಿ.+ ನಿಮಗೆ ಊಟ ಎಷ್ಟು ಕಮ್ಮಿ ಇರುತ್ತೆ ಅಂದ್ರೆ ಹತ್ತು ಸ್ತ್ರೀಯರಿಗೆ ರೊಟ್ಟಿ ಸುಡೋಕೆ ಒಂದೇ ಒಂದು ಒಲೆ ಸಾಕಾಗುತ್ತೆ. ಅವರು ನಿಮಗೆ ಆ ರೊಟ್ಟಿನ ತುಂಡುಮಾಡಿ ತೂಕಮಾಡಿ ಕೊಡ್ತಾರೆ.+ ನೀವು ಊಟ ಮಾಡಿದ್ರೂ ಹೊಟ್ಟೆ ತುಂಬಲ್ಲ.+
27 “‘ಇಷ್ಟೆಲ್ಲ ಆದ್ಮೇಲೂ ನೀವು ನನ್ನ ಮಾತನ್ನ ಕೇಳದೆ ಹಠದಿಂದ ನನ್ನ ವಿರುದ್ಧ ನಡೀತಾ ಇದ್ರೆ
28 ನಾನು ನಿಮ್ಮನ್ನ ಇನ್ನೂ ವಿರೋಧಿಸ್ತೀನಿ,+ ನಿಮ್ಮ ಪಾಪಗಳಿಗಾಗಿ ನಿಮಗೆ ಇನ್ನೂ ಏಳು ಪಟ್ಟು ಶಿಕ್ಷೆ ಕೊಡ್ತೀನಿ.
29 ಆಗ ನಿಮ್ಗೆ ಎಂಥಾ ಗತಿ ಬರುತ್ತೆ ಅಂದ್ರೆ ನೀವು ನಿಮ್ಮ ಮಕ್ಕಳ ಮಾಂಸನೇ ತಿನ್ನಬೇಕಾಗುತ್ತೆ.+
30 ನೀವು ಸುಳ್ಳು ದೇವರುಗಳನ್ನ ಆರಾಧಿಸೋ ಜಾಗಗಳನ್ನ* ನಾಶ ಮಾಡ್ತೀನಿ,+ ಧೂಪಸ್ತಂಭಗಳನ್ನ ಉರುಳಿಸಿಬಿಡ್ತೀನಿ. ನಿಮ್ಮ ಅಸಹ್ಯ ಮೂರ್ತಿಗಳ* ಪುಡಿ ಮೇಲೆ ನಿಮ್ಮ ಹೆಣಗಳನ್ನ ಗುಡ್ಡೆ ಹಾಕ್ತೀನಿ.+ ನಿಮ್ಮನ್ನ ನೋಡಿ ಅಸಹ್ಯಪಟ್ಟು ಮುಖ ತಿರಿಗಿಸ್ಕೊಳ್ತೀನಿ.+
31 ನಾನು ನಿಮ್ಮ ಪಟ್ಟಣಗಳನ್ನ ಮತ್ತು ನಿಮ್ಮ ದೇವರುಗಳನ್ನ ಆರಾಧಿಸೋ ಜಾಗಗಳನ್ನ ನಾಶಮಾಡ್ತೀನಿ.+ ನೀವು ಕೊಡೋ ಬಲಿಗಳ ಸುವಾಸನೆ ಮೇಲೆ ಹೋಗುವಾಗ ಮೂಗು ಮುಚ್ಕೊಳ್ತೀನಿ.
32 ನಿಮ್ಮ ದೇಶ ನಿರ್ಜನ ಆಗೋ ತರ ಮಾಡ್ತೀನಿ.+ ಆಗ ನಿಮ್ಮ ಶತ್ರುಗಳು ಬಂದು ಅಲ್ಲಿ ಇರ್ತಾರೆ, ನಿಮ್ಮ ದೇಶದ ಸ್ಥಿತಿ ನೋಡಿ ಆಶ್ಚರ್ಯ ಪಡ್ತಾರೆ.+
33 ನಾನು ನಿಮ್ಮನ್ನ ಬೇರೆ ದೇಶಗಳಿಗೆ ಚೆಲ್ಲಾಪಿಲ್ಲಿ ಮಾಡ್ತೀನಿ.+ ಶತ್ರುಗಳು ನಿಮ್ಮ ವಿರುದ್ಧ ಯುದ್ಧಕ್ಕೆ ಬರೋ ತರ ಮಾಡ್ತೀನಿ.+ ನಿಮ್ಮ ದೇಶದಲ್ಲಿ ಯಾರೂ ಇರಲ್ಲ.+ ನಿಮ್ಮ ಪಟ್ಟಣಗಳು ಹಾಳುಬೀಳುತ್ತೆ.
34 “‘ನೀವು ಶತ್ರುಗಳ ದೇಶದಲ್ಲಿ ಇರೋಷ್ಟು ದಿನ ನೀವಿದ್ದ ನೆಲ ಜನರಿಲ್ಲದೆ ವಿಶ್ರಾಂತಿ ತಗೊಳ್ಳುತ್ತೆ. ಅದಕ್ಕೇ ಅಲ್ಲಿ ತನಕ ಸಬ್ಬತ್ತಲ್ಲಿ ಸಿಗದಿದ್ದ ವಿಶ್ರಾಂತಿ ಆಗ ಸಿಗುತ್ತೆ.+
35 ನೀವು ಆ ನೆಲದಲ್ಲಿ ಇದ್ದಾಗ ಸಬ್ಬತ್‌ಗಳಲ್ಲಿ ಅದಕ್ಕೆ ವಿಶ್ರಾಂತಿ ಕೊಡಲಿಲ್ಲ. ಹಾಗಾಗಿ ಅದ್ರಲ್ಲಿ ಜನ್ರೇ ಇಲ್ಲದಿರೋ ದಿನಗಳೆಲ್ಲ ಅದು ವಿಶ್ರಾಂತಿ ಪಡಿಯುತ್ತೆ.
36 “‘ನಿಮ್ಮಲ್ಲಿ ಯಾರು ಬದುಕುಳಿದು+ ಶತ್ರುಗಳ ದೇಶದಲ್ಲಿ ಇರ್ತಿರೋ ಅವರಿಗೆ ನಿರಾಸೆ ಆಗೋ ತರ ಮಾಡ್ತೀನಿ. ಗಾಳಿಗೆ ಹಾರೋ ಒಣ ಎಲೆಯ ಸದ್ದಿಗೂ ಅವರು ಭಯಪಡ್ತಾರೆ. ಯಾರೂ ಅವ್ರನ್ನ ಅಟ್ಟಿಸ್ಕೊಂಡು ಬರದಿದ್ರೂ ಯಾರೋ ಕತ್ತಿ ಹಿಡಿದು ಹಿಂದೆ ಬರ್ತಿದ್ದಾರೆ ಅನ್ಕೊಂಡು ಓಡಿ ಓಡಿ ಬೀಳ್ತಾರೆ.+
37 ಅವರು ಒಬ್ಬರಿಗೊಬ್ರು ಡಿಕ್ಕಿ ಹೊಡಿದು ಒಬ್ರ ಮೇಲೆ ಒಬ್ರು ಬಿಳ್ತಾರೆ. ಹಿಂದೆ ಯಾರೂ ಇಲ್ಲದಿದ್ರೂ ಯಾರೋ ಕತ್ತಿ ಹಿಡಿದು ಹಿಂದೆ ಬರ್ತಿದ್ದಾರೆ ಅಂತ ಅವರಿಗೆ ಅನ್ಸುತ್ತೆ. ನಿಮ್ಮ ಶತ್ರುಗಳನ್ನ ಎದುರಿಸೋಕೆ ನಿಮ್ಮ ಕೈಯಿಂದ ಆಗಲ್ಲ.+
38 ನಿಮ್ಮಲ್ಲಿ ಎಷ್ಟೋ ಜನ ಬೇರೆ ದೇಶದಲ್ಲಿ ಸಾಯ್ತೀರ,+ ಶತ್ರುಗಳ ದೇಶದಲ್ಲಿ ಅಳಿದು ಹೋಗ್ತೀರ.
39 ಉಳಿದವರು ತಮ್ಮ ಪಾಪಗಳಿಂದ, ತಮ್ಮ ಪೂರ್ವಜರು ಮಾಡಿದ ಪಾಪಗಳಿಂದ ಶತ್ರುಗಳ ದೇಶದಲ್ಲೇ ಕೊಳೀತಾರೆ.+
40 ಆಗ ಅವರೂ ಅವ್ರ ಪೂರ್ವಜರೂ ಪಾಪ ಮಾಡಿದ್ದಾರೆ, ನನಗೆ ದ್ರೋಹ ಮಾಡಿದ್ದಾರೆ+ ಅಂತ ಒಪ್ಕೊಳ್ತಾರೆ.+
41 ಅದಕ್ಕೆ ನಾನು ಅವ್ರನ್ನ ವಿರೋಧಿಸಿ+ ಶತ್ರುಗಳ ದೇಶಕ್ಕೆ ಕೈದಿಗಳಾಗಿ ಹೋಗೋಕೆ ಬಿಟ್ಟೆ+ ಅಂತಾನೂ ಒಪ್ಕೊಳ್ತಾರೆ.
“‘ಆಗ್ಲಾದ್ರೂ ಅವರು ತಮ್ಮ ಹಠ* ಬಿಟ್ಟು ತಗ್ಗಿಸ್ಕೊಳ್ಳಬಹುದು.+ ತಮ್ಮ ಪಾಪಗಳಿಗೆ ದೇವರು ತಕ್ಕ ಶಿಕ್ಷೆ ಕೊಟ್ಟಿದ್ದಾನೆ ಅಂತ ತಿಳ್ಕೊಬಹುದು.
42 ಆಗ ನಾನು ಯಾಕೋಬ,+ ಇಸಾಕ+ ಮತ್ತು ಅಬ್ರಹಾಮನ+ ಜೊತೆ ಮಾಡ್ಕೊಂಡ ಒಪ್ಪಂದವನ್ನ ಮತ್ತು ನಾನು ನಿಮಗೆ ಕೊಟ್ಟ ದೇಶವನ್ನ ನೆನಪಿಸ್ಕೊಳ್ತೀನಿ.
43 ಇಸ್ರಾಯೇಲ್ಯರು ಆ ದೇಶದಲ್ಲಿ ಇಲ್ಲದಿದ್ದಾಗ ಅದು ಸಬ್ಬತ್‌ಗಳ ವಿಶ್ರಾಂತಿ ಪಡಿಯುತ್ತೆ.+ ಅಲ್ಲಿ ಜನ್ರೇ ಇರಲ್ಲ. ಅವರು ನನ್ನ ತೀರ್ಪುಗಳನ್ನ ತಾತ್ಸಾರಮಾಡಿ ನನ್ನ ನಿಯಮಗಳನ್ನ ತಿರಸ್ಕರಿಸಿದ ಕಾರಣ ಆ ಪಾಪಕ್ಕೆ ಶಿಕ್ಷೆ ಅನುಭವಿಸ್ತಾರೆ.+
44 ಆದ್ರೂ ಅವರು ಶತ್ರುಗಳ ದೇಶದಲ್ಲಿ ಇರುವಾಗ ನಾನು ಯಾವತ್ತೂ ಅವ್ರ ಕೈಯನ್ನ ಪೂರ್ತಿಯಾಗಿ ಬಿಡಲ್ಲ,+ ಪೂರ್ತಿ ನಾಶ ಆಗೋಕೆ ಬಿಡಲ್ಲ. ನಾನು ಅವ್ರನ್ನ ಹಾಗೆ ಬಿಟ್ಟುಬಿಟ್ರೆ ಅವ್ರ ಜೊತೆ ಮಾಡ್ಕೊಂಡ ಒಪ್ಪಂದನ ಮುರಿದ ಹಾಗಾಗುತ್ತೆ.+ ಆದ್ರೆ ನಾನು ಹಾಗೆ ಮಾಡಲ್ಲ. ಯಾಕಂದ್ರೆ ನಾನು ಅವ್ರ ದೇವರಾದ ಯೆಹೋವ.
45 ಅವರಿಗಾಗಿ ನಾನು ಅವ್ರ ಪೂರ್ವಜರ ಜೊತೆ ಮಾಡ್ಕೊಂಡ ಒಪ್ಪಂದನ ನೆನಪಿಸ್ಕೊಳ್ತೀನಿ.+ ನಾನು ಅವ್ರ ಪೂರ್ವಜರನ್ನ ಬೇರೆ ದೇಶದ ಜನ್ರ ಕಣ್ಮುಂದೆನೇ ಈಜಿಪ್ಟ್ ದೇಶದಿಂದ ಬಿಡಿಸ್ಕೊಂಡು ಬಂದೆ.+ ನಾನು ಅವ್ರ ದೇವರು ಅಂತ ತೋರಿಸ್ಕೊಡೋಕೆ ಹಾಗೆ ಮಾಡ್ದೆ. ನಾನು ಯೆಹೋವ.’”
46 ಸಿನಾಯಿ ಬೆಟ್ಟದ ಮೇಲೆ ಯೆಹೋವ ಮೋಶೆ ಮೂಲಕ ಇಸ್ರಾಯೇಲ್ಯರಿಗೆ ಈ ಎಲ್ಲ ಆಜ್ಞೆಗಳನ್ನ ತೀರ್ಪುಗಳನ್ನ ನಿಯಮಗಳನ್ನ ಕೊಟ್ಟನು.+
ಪಾದಟಿಪ್ಪಣಿ
^ ಅಕ್ಷ. “ಭಯದಿಂದ.”
^ ಅರ್ಥ, ಮಳೆ ಬರದ ತರ.
^ ಅರ್ಥ, ಬರಡಾಗೋ ತರ.
^ ಅಕ್ಷ. “ಕೋಲು.” ಬಹುಶಃ ರೊಟ್ಟಿ ಇಡೋಕೆ ಬಳಸ್ತಿದ್ದ ಕೋಲನ್ನ ಸೂಚಿಸುತ್ತೆ.
^ ಅಕ್ಷ. “ಎತ್ತರ ಸ್ಥಳಗಳನ್ನ.”
^ ಇದಕ್ಕೆ ಹೀಬ್ರು ಭಾಷೆಯಲ್ಲಿ ಬಳಸಿರೋ ಪದ “ಸಗಣಿ” ಅನ್ನೋದಕ್ಕೆ ಬಳಸಿರೋ ಪದಕ್ಕೆ ಸಂಬಂಧಿಸಿದೆ. ತುಂಬ ಅಸಹ್ಯ ಅಂತ ತೋರಿಸೋಕೆ ಈ ಪದ ಬಳಸಲಾಗಿದೆ.
^ ಅಕ್ಷ. “ಸುನ್ನತಿಯಾಗದ ಹೃದಯ.”