ಯಾಜಕಕಾಂಡ 27:1-34

  • ಹರಕೆ ವಸ್ತುಗಳನ್ನ ಬಿಡಿಸ್ಕೊಳ್ಳೋ ವಿಧ (1-27)

    • ಜನ್ರು (1-8)

    • ಪ್ರಾಣಿಗಳು (9-13)

    • ಮನೆಗಳು (14, 15)

    • ಹೊಲಗಳು (16-25)

    • ಮೊದ್ಲು ಹುಟ್ಟಿದ ಪ್ರಾಣಿಗಳು (26, 27)

  • ಯೆಹೋವನ ಸೇವೆಗಾಗಿ ಆರಿಸಿರೋ ವಿಷ್ಯಗಳು (28, 29)

  • ಹತ್ತನೇ ಒಂದು ಭಾಗನ ಬಿಡಿಸ್ಕೊಳ್ಳೋದು (30-34)

27  ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ  “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಯಾರಾದ್ರೂ ವಿಶೇಷ ಹರಕೆ+ ಮಾಡ್ಕೊಂಡ್ರೆ ಅಂದ್ರೆ ಒಬ್ಬ ವ್ಯಕ್ತಿಗೆ ನಿರ್ಧರಿಸಿದ ಹಣವನ್ನ ಯೆಹೋವನಿಗೆ ಕೊಡ್ತೀನಿ ಅಂತ ಮಾತು ಕೊಟ್ರೆ ಅದನ್ನ ಕೊಡಬೇಕು.  ಆ ಬೆಲೆ ಎಷ್ಟಂದ್ರೆ, 20 ರಿಂದ 60 ವರ್ಷದ ಪುರುಷರಿಗೆ 50 ಬೆಳ್ಳಿ ಶೆಕೆಲ್‌.* ಅದನ್ನ ಆರಾಧನಾ ಸ್ಥಳದ ತೂಕದ ಪ್ರಕಾರ* ಕೊಡಬೇಕು.  ಅದೇ ವಯಸ್ಸಿನ ಸ್ತ್ರೀಯರಿಗೆ 30 ಶೆಕೆಲ್‌.  5 ರಿಂದ 20 ವರ್ಷದ ಹುಡುಗರಿಗೆ 20 ಶೆಕೆಲ್‌, ಅದೇ ವಯಸ್ಸಿನ ಹುಡುಗಿಯರಿಗೆ 10 ಶೆಕೆಲ್‌.  ಒಂದು ತಿಂಗಳಿಂದ ಐದು ವರ್ಷದ ತನಕ ಇರೋ ಗಂಡು ಮಕ್ಕಳ ಬೆಲೆ ಐದು ಬೆಳ್ಳಿ ಶೆಕೆಲ್‌. ಅದೇ ವಯಸ್ಸಿನ ಹೆಣ್ಣು ಮಕ್ಕಳ ಬೆಲೆ ಮೂರು ಬೆಳ್ಳಿ ಶೆಕೆಲ್‌.  60 ವರ್ಷ ಅಥವಾ ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರಿಗೆ ಇರೋ ಬೆಲೆ 15 ಶೆಕೆಲ್‌, ಸ್ತ್ರೀಯರಿಗೆ 10 ಶೆಕೆಲ್‌.  ವಿಶೇಷ ಹರಕೆ ಮಾಡಿದವನು ತುಂಬ ಬಡವನಾಗಿ ಇರೋದ್ರಿಂದ ಆ ಬೆಲೆ ಕೊಡೋಕೆ ಆಗದಿದ್ರೆ+ ಅವನು ಆ ವ್ಯಕ್ತಿಯನ್ನ ಪುರೋಹಿತನ ಮುಂದೆ ನಿಲ್ಲಿಸಬೇಕು. ಹರಕೆ ಹೊತ್ತವನಿಂದ ಎಷ್ಟು ಬೆಲೆ ಕೊಡೋಕೆ ಆಗುತ್ತೆ+ ಅಂತ ನೋಡಿ ಪುರೋಹಿತ ಆ ವ್ಯಕ್ತಿ ಬೆಲೆನ ತೀರ್ಮಾನಿಸ್ತಾನೆ.  ಯಾರಾದ್ರೂ ಬಲಿಗೆ ಯೋಗ್ಯವಾಗಿರೋ ಒಂದು ಪ್ರಾಣಿನ ಯೆಹೋವನಿಗೆ ಕೊಡ್ತೀನಿ ಅಂತ ಹರಕೆ ಹೊತ್ಕೊಂಡ್ರೆ ಆ ಪ್ರಾಣಿ ಯೆಹೋವನಿಗೆ ಸೇರಿದ್ದು. 10  ಅವನು ಒಂದು ಪ್ರಾಣಿನ ಕೊಡ್ತೀನಿ ಅಂತ ಹೇಳಿ ಆಮೇಲೆ ಅದ್ರ ಬದ್ಲು ಅಂಥದ್ದೇ ಇನ್ನೊಂದು ಪ್ರಾಣಿನ ಕೊಡೋ ಹಾಗಿಲ್ಲ. ಅದಕ್ಕಿಂತ ಒಳ್ಳೇ ಅಥವಾ ಕೀಳ್ಮಟ್ಟದ ಬೇರೆ ಪ್ರಾಣಿನ ಕೊಡೋ ಹಾಗಿಲ್ಲ. ಅವನು ಆ ಪ್ರಾಣಿ ಬದ್ಲು ಬೇರೆ ಪ್ರಾಣಿನ ಕೊಟ್ರೆ ಮೊದ್ಲು ಕೊಡ್ತೀನಿ ಅಂತ ಹೇಳಿದ ಪ್ರಾಣಿ, ಈಗ ಕೊಟ್ಟಿರೋ ಪ್ರಾಣಿ ಎರಡೂ ದೇವರಿಗೆ ಸೇರುತ್ತೆ. 11  ಒಬ್ಬನು ಯೆಹೋವನಿಗೆ ಕೊಡ್ತೀನಿ ಅಂತ ಹೇಳಿದ ಪ್ರಾಣಿ ಬಲಿಗೆ ಯೋಗ್ಯವಲ್ಲದ ಅಶುದ್ಧ ಪ್ರಾಣಿ+ ಆಗಿದ್ರೆ ಅದನ್ನ ಪುರೋಹಿತನ ಮುಂದೆ ನಿಲ್ಲಿಸಬೇಕು. 12  ಆಗ ಪುರೋಹಿತ ಆ ಪ್ರಾಣಿ ಹೇಗಿದೆ ಅಂತ ನೋಡಿ ಅದ್ರ ಬೆಲೆನ ಹೇಳಬೇಕು. ಅವನು ಎಷ್ಟು ಹೇಳ್ತಾನೋ ಅದೇ ಆ ಪ್ರಾಣಿ ಬೆಲೆ. 13  ಹರಕೆ ಮಾಡಿದವನು ಮುಂದೆ ಯಾವತ್ತಾದ್ರು ಆ ಪ್ರಾಣಿನ ವಾಪಸ್‌ ಖರೀದಿಸೋಕೆ ಇಷ್ಟಪಟ್ರೆ ಅವನು ಅದ್ರ ಬೆಲೆ ಎಷ್ಟಿದೆಯೋ ಅದ್ರ ಜೊತೆ ಆ ಬೆಲೆಯ ಐದರ ಒಂದು ಭಾಗ ಸೇರಿಸಿ ಕೊಡ್ಬೇಕು.+ 14  ಯಾರಾದ್ರೂ ತನ್ನ ಮನೆನ ಯೆಹೋವನಿಗೆ ಕೊಡ್ತೀನಿ ಅಂತ ಹರಕೆ ಮಾಡಿದ್ರೆ ಪುರೋಹಿತ ಆ ಮನೆಯ ಗುಣಮಟ್ಟ ನೋಡಿ ಅದ್ರ ಬೆಲೆ ತೀರ್ಮಾನಿಸಬೇಕು. ಪುರೋಹಿತ ಎಷ್ಟು ಹೇಳ್ತಾನೋ ಅದೇ ಆ ಮನೆ ಬೆಲೆ.+ 15  ಹರಕೆ ಮಾಡಿದವನು ಮುಂದೆ ಯಾವತ್ತಾದ್ರೂ ಆ ಮನೆನ ವಾಪಸ್‌ ತಗೊಳ್ಳೋಕೆ ಬಯಸಿದ್ರೆ ಅದ್ರ ಬೆಲೆ ಎಷ್ಟಿದೆಯೋ ಅದ್ರ ಜೊತೆಗೆ ಆ ಬೆಲೆಯ ಐದರ ಒಂದು ಭಾಗ ಸೇರಿಸಿ ಕೊಡಬೇಕು. ಆಗ ಆ ಮನೆ ಅವನದ್ದಾಗುತ್ತೆ. 16  ಯಾರಾದ್ರೂ ಹೊಲದ ಒಂದು ಭಾಗನ ಯೆಹೋವನಿಗೆ ಕೊಡ್ತೀನಿ ಅಂತ ಹರಕೆ ಮಾಡಿದ್ರೆ ಅದ್ರಲ್ಲಿ ಎಷ್ಟು ಬೀಜ ಬಿತ್ತೋಕೆ ಆಗುತ್ತೆ ಅಂತ ನೋಡಿ ಅದ್ರ ಬೆಲೆನ ತೀರ್ಮಾನಿಸಲಾಗುತ್ತೆ. ಒಂದು ಹೋಮೆರ್‌* ಅಳತೆಯಷ್ಟು ಜವೆಗೋದಿನ* ಬಿತ್ತೋಕೆ ಆಗೋವಷ್ಟು ಹೊಲದ ಬೆಲೆ 50 ಬೆಳ್ಳಿ ಶೆಕೆಲ್‌. 17  ಅವನು ಬಿಡುಗಡೆ ವರ್ಷದಿಂದ+ ಹೊಲನ ಕೊಡ್ತೀನಿ ಅಂತ ಹರಕೆ ಹೊತ್ಕೊಂಡ್ರೆ ಈ ಲೆಕ್ಕದ ಪ್ರಕಾರನೇ ಬೆಲೆ ತೀರ್ಮಾನಿಸಬೇಕು. 18  ಅವನು ಬಿಡುಗಡೆ ವರ್ಷ ಮುಗಿದ ಮೇಲೆ ಹೊಲ ಕೊಡ್ತೀನಿ ಅಂತ ಹರಕೆ ಹೊತ್ಕೊಂಡ್ರೆ ಮುಂದಿನ ಬಿಡುಗಡೆ ವರ್ಷಕ್ಕೆ ಇನ್ನೆಷ್ಟು ವರ್ಷ ಉಳಿದಿದೆ ಅಂತ ಪುರೋಹಿತ ಲೆಕ್ಕ ಮಾಡಿ ಅದ್ರ ಪ್ರಕಾರ ಬೆಲೆ ಕಮ್ಮಿ ಮಾಡಬೇಕು.+ 19  ಹರಕೆ ಮಾಡಿದವನು ಮುಂದೆ ಯಾವತ್ತಾದ್ರೂ ಆ ಹೊಲನ ವಾಪಸ್‌ ತಗೋಬೇಕು ಅಂತಿದ್ರೆ ಅದ್ರ ಬೆಲೆ ಎಷ್ಟಿದ್ಯೋ ಅದ್ರ ಜೊತೆ ಐದ್ರಲ್ಲಿ ಒಂದು ಭಾಗನ ಸೇರಿಸಿ ಕೊಡಬೇಕು. ಆಗ ಆ ಹೊಲ ಅವನದ್ದಾಗುತ್ತೆ. 20  ಅವನು ಆ ಹೊಲನ ವಾಪಸ್‌ ತಗೊಳ್ಳದೆ ಇದ್ದಾಗ ಅದನ್ನ ಬೇರೆಯವರಿಗೆ ಮಾರಿಬಿಟ್ರೆ ಮತ್ತೆ ಅದನ್ನ ವಾಪಸ್‌ ತಗೊಳ್ಳೋಕೆ ಆಗಲ್ಲ. 21  ಬಿಡುಗಡೆ ವರ್ಷದಲ್ಲಿ ಮತ್ತೆ ಆ ಹೊಲ ಯೆಹೋವನಿಗೆ ಸೇರುತ್ತೆ. ಅದು ಪವಿತ್ರವಾಗಿದೆ. ಅದು ಆತನ ಸೇವೆಯಲ್ಲಿ ಬಳಸೋಕೆ ಅಂತಾನೇ ಇರುತ್ತೆ. ಹಾಗಾಗಿ ಅದು ಪುರೋಹಿತರ ಆಸ್ತಿ ಆಗುತ್ತೆ.+ 22  ಯಾರಾದ್ರೂ ತಾನು ತಗೊಂಡ ಹೊಲವನ್ನ ಅಂದ್ರೆ ಪಿತ್ರಾರ್ಜಿತ ಆಸ್ತಿಯಾಗಿ+ ಪಡ್ಕೊಳ್ಳದ ಹೊಲವನ್ನ ಯೆಹೋವನಿಗೆ ಕೊಡ್ತೀನಿ ಅಂತ ಹರಕೆ ಮಾಡಿದ್ರೆ, 23  ಪುರೋಹಿತ ಬಿಡುಗಡೆ ವರ್ಷಕ್ಕೆ ಇನ್ನೆಷ್ಟು ವರ್ಷ ಉಳಿದಿದೆ ಅಂತ ಲೆಕ್ಕಮಾಡಿ ಆ ಹೊಲದ ಬೆಲೆ ತೀರ್ಮಾನಿಸ್ತಾನೆ. ಅಷ್ಟು ಬೆಲೆನ ಅದೇ ದಿನ ಅವನು ಕೊಡಬೇಕು.+ ಆ ಹಣ ಯೆಹೋವನಿಗೆ ಸೇರಿದ್ದು. 24  ಆದ್ರೆ ಬಿಡುಗಡೆ ವರ್ಷದಲ್ಲಿ ಆ ಹೊಲನ ಅವನು ಯಾರಿಂದ ತಗೊಂಡಿದ್ದನೋ ಆ ವ್ಯಕ್ತಿಗೆ ವಾಪಸ್‌ ಕೊಡಬೇಕು. ಯಾಕಂದ್ರೆ ಆ ಹೊಲ ಆ ವ್ಯಕ್ತಿಗೆ ಸೇರಿದ್ದು.+ 25  ಇದೆಲ್ಲದ್ರ ಬೆಲೆನ ಆರಾಧನಾ ಸ್ಥಳದ ತೂಕಕ್ಕೆ ತಕ್ಕಂತೆ ತೀರ್ಮಾನಿಸಬೇಕು. ಅದ್ರ ಪ್ರಕಾರ ಒಂದು ಶೆಕೆಲಿನ ತೂಕ 20 ಗೇರಾ* ಆಗಿರಬೇಕು. 26  ಆದ್ರೆ ಪ್ರಾಣಿಗಳ ಮೊದಲ ಮರಿಗಳನ್ನ ದೇವರಿಗೆ ಕೊಡ್ತೀನಿ ಅಂತ ಹರಕೆ ಮಾಡಬಾರದು. ಯಾಕಂದ್ರೆ ಮೊದಲ ಮರಿಗಳು ಹುಟ್ಟುವಾಗ್ಲೇ ಯೆಹೋವನಿಗೆ ಸೇರಿದ್ದು.+ ಅದು ಕರು ಆಗ್ಲಿ, ಕುರಿ ಆಗ್ಲಿ ಹುಟ್ಟುವಾಗ್ಲೇ ಯೆಹೋವನಿಗೆ ಸೇರಿದ್ದು.+ 27  ಆದ್ರೆ ಅಶುದ್ಧ ಪ್ರಾಣಿಗಳ ಮೊದಲ ಮರಿಗಳನ್ನ ಬಿಡಿಸ್ಕೊಬಹುದು. ತೀರ್ಮಾನಿಸಿದ ಬೆಲೆನ, ಜೊತೆಗೆ ಆ ಬೆಲೆಯ ಐದರ ಒಂದನೇ ಭಾಗನ ಸೇರಿಸಿ ಕೊಟ್ಟು ಆ ಮರಿನ ಬಿಡಿಸ್ಕೊಬೇಕು.+ ಹೀಗೆ ಅದನ್ನ ಬಿಡಿಸದೆ ಹೋದ್ರೆ ಪುರೋಹಿತ ತೀರ್ಮಾನಿಸಿದ ಬೆಲೆಗೆ ಮಾರಬೇಕು. 28  ಯಾರಾದ್ರೂ ತನಗೆ ಸೇರಿದ ವ್ಯಕ್ತಿ, ಪ್ರಾಣಿ ಅಥವಾ ಹೊಲವನ್ನ ಶಾಶ್ವತಕ್ಕೂ ಯೆಹೋವನಿಗೆ ಅಂತ ಕೊಟ್ರೆ ಅವನು ಅದನ್ನ ಮಾರೋ ಹಾಗಿಲ್ಲ. ವಾಪಸ್‌ ತಗೊಳ್ಳೋ ಹಾಗಿಲ್ಲ. ಹೀಗೆ ಯೆಹೋವನಿಗೆ ಅಂತ ಏನೇ ಕೊಟ್ರೂ ಅದು ಆತನ ದೃಷ್ಟಿಯಲ್ಲಿ ಅತಿ ಪವಿತ್ರ.+ 29  ಆದ್ರೆ ಮರಣಶಿಕ್ಷೆ ಆಗಿ ನಾಶಕ್ಕೆ ಅಂತಾನೇ ಇಟ್ಟಿರೋ ವ್ಯಕ್ತಿನ ಬಿಡಿಸ್ಕೊಬಾರದು.+ ಅವನನ್ನ ಸಾಯಿಸ್ಲೇಬೇಕು.+ 30  ಹೊಲದ ಬೆಳೆಯಲ್ಲಿ ಮರದ ಹಣ್ಣುಗಳಲ್ಲಿ ಹತ್ತನೇ ಒಂದು ಭಾಗ*+ ಯೆಹೋವನಿಗೆ ಸೇರಿದ್ದು. ಅದು ಯೆಹೋವನ ದೃಷ್ಟಿಯಲ್ಲಿ ಪವಿತ್ರ. 31  ಯಾರಾದ್ರೂ ದೇವರಿಗೆ ಕೊಡೋ ಆ ಹತ್ತನೇ ಒಂದು ಭಾಗನ ವಾಪಸ್‌ ತಗೊಳ್ಳೋಕೆ ಇಷ್ಟಪಟ್ರೆ ಅದ್ರ ಬೆಲೆ ಜೊತೆಗೆ ಆ ಬೆಲೆಯ ಐದರ ಒಂದು ಭಾಗ ಸೇರಿಸಿ ಕೊಡಬೇಕು. 32  ಹಸು, ಆಡು, ಕುರಿಗಳಲ್ಲಿ ಹತ್ತನೇ ಒಂದು ಭಾಗನ ಯೆಹೋವನಿಗೆ ಕೊಡಬೇಕು. ಪ್ರತಿ ಹತ್ತನೆ ಪ್ರಾಣಿ ಪವಿತ್ರ. ಕುರುಬ ತನ್ನ ಪ್ರಾಣಿಗಳನ್ನ ಕೋಲಿನ ಕೆಳಗಿಂದ ಹೋಗೋ ತರ ಮಾಡಿ ಹತ್ತತ್ತರಂತೆ ಲೆಕ್ಕ ಮಾಡುವಾಗ ಹತ್ತನೇದನ್ನ ದೇವರಿಗೆ ಅಂತಾನೇ ಪಕ್ಕಕ್ಕೆ ಇಡಬೇಕು. 33  ಅವನು ಆ ಹತ್ತನೆ ಪ್ರಾಣಿನ ಚೆನ್ನಾಗಿದ್ಯಾ ಇಲ್ವಾ ಅಂತ ನೋಡಬಾರದು. ಅದ್ರ ಬದ್ಲು ಬೇರೊಂದನ್ನ ಕೊಡಬಾರದು. ಅದನ್ನ ಬದಲಾಯಿಸಿ ಬೇರೆದನ್ನ ಕೊಡೋಕೆ ಪ್ರಯತ್ನಿಸಿದ್ರೆ ಆ ಪ್ರಾಣಿ, ಮೊದ್ಲು ಲೆಕ್ಕ ಮಾಡಿದ ಪ್ರಾಣಿ ಎರಡೂ ದೇವರಿಗೆ ಸೇರುತ್ತೆ.+ ಅವುಗಳನ್ನ ವಾಪಸ್‌ ತಗೊಳ್ಳೋ ಹಾಗಿಲ್ಲ.’” 34  ಸಿನಾಯಿ ಬೆಟ್ಟದ+ ಮೇಲೆ ಯೆಹೋವ ಮೋಶೆ ಮೂಲಕ ಇಸ್ರಾಯೇಲ್ಯರಿಗೆ ಈ ಆಜ್ಞೆಗಳನ್ನ ಕೊಟ್ಟನು.

ಪಾದಟಿಪ್ಪಣಿ

ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಒಂದು ಹೋಮೆರ್‌ ಜವೆಗೋದಿ ಅಂದ್ರೆ ಸುಮಾರು 130 ಕೆಜಿ ಇದ್ದಿರಬಹುದು. ಪರಿಶಿಷ್ಟ ಬಿ14 ನೋಡಿ.
ಅಥವಾ “ಬಾರ್ಲಿ.”
ಒಂದು ಗೇರಾದ ತೂಕ 0.57 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ದಶಮಾಂಶ.”