ಯಾಜಕಕಾಂಡ 5:1-19

  • ಪಾಪಗಳು ಮತ್ತು ಕೊಡಬೇಕಾದ ಬಲಿಗಳು (1-6)

    • ಬೇರೆಯವರ ಪಾಪವನ್ನ ವರದಿಸಬೇಕು (1)

  • ಬಡವರು ಕೊಡಬೇಕಾದ ಅರ್ಪಣೆಗಳು (7-13)

  • ಗೊತ್ತಿಲ್ಲದೆ ಮಾಡಿದ ಪಾಪಕ್ಕೆ ದೋಷಪರಿಹಾರಕ ಬಲಿ (14-19)

5  ಯಾರಾದ್ರೂ ಪಾಪ ಮಾಡೋದನ್ನ ಒಬ್ಬ ನೋಡಿದ್ರೆ ಅಥವಾ ಅದ್ರ ಬಗ್ಗೆ ಏನಾದ್ರೂ ಅವನಿಗೆ ಗೊತ್ತಾದ್ರೆ ಅವನು ಅದಕ್ಕೆ ಸಾಕ್ಷಿ ಆಗಿದ್ದಾನೆ. ಪಾಪ ಮಾಡಿದ ವ್ಯಕ್ತಿ ವಿರುದ್ಧ ಸಾಕ್ಷಿ ಹೇಳಬೇಕು ಅನ್ನೋ ಪ್ರಕಟಣೆ* ಕೇಳಿಸ್ಕೊಂಡ ಮೇಲೂ+ ಅವನು ಬಂದು ಸಾಕ್ಷಿ ಹೇಳದಿದ್ರೆ ಅದು ಪಾಪ. ಆ ಪಾಪಕ್ಕಾಗಿ ಅವನಿಗೆ ಶಿಕ್ಷೆ ಆಗಬೇಕು.  ಸತ್ತುಹೋಗಿರೋ ಅಶುದ್ಧ ಕಾಡುಪ್ರಾಣಿನ, ಅಶುದ್ಧ ಸಾಕುಪ್ರಾಣಿನ, ಚಿಕ್ಕ ಅಶುದ್ಧ ಜೀವಿನ*+ ಹೀಗೆ ಅಶುದ್ಧವಾದ ಯಾವುದನ್ನೇ ಆಗ್ಲಿ ಮುಟ್ಟಿದವನು ಅಶುದ್ಧನಾಗ್ತಾನೆ, ಅಪರಾಧಿ ಆಗ್ತಾನೆ. ಅವನಿಗೆ ಅದು ಗೊತ್ತಿಲ್ಲದಿದ್ರೂ ಅಪರಾಧಿ ಆಗಿದ್ದಾನೆ.  ಮನುಷ್ಯ ದೇಹಕ್ಕೆ ಸಂಬಂಧಿಸಿದ ಯಾವುದೇ ಅಶುದ್ಧತೆಯನ್ನ+ ಅಥವಾ ತನ್ನನ್ನ ಅಶುದ್ಧನನ್ನಾಗಿ ಮಾಡೋ ಬೇರೆ ಏನನ್ನಾದ್ರೂ ಒಬ್ಬ ಗೊತ್ತಿಲ್ಲದೆ ಮುಟ್ಟಿ, ಆಮೇಲೆ ಗೊತ್ತಾದ್ರೆ ಅವನು ಅಪರಾಧಿ ಆಗ್ತಾನೆ.  ಒಳ್ಳೇದನ್ನಾಗ್ಲಿ ಕೆಟ್ಟದನ್ನಾಗ್ಲಿ ಮಾಡ್ತೀನಿ ಅಂತ ಒಬ್ಬ ದುಡುಕಿ ಮಾತುಕೊಟ್ಟು, ಆಮೇಲೆ ಹಿಂದೆ ಮುಂದೆ ಯೋಚ್ನೆ ಮಾಡ್ದೆ ಮಾತುಕೊಟ್ಟೆ ಅಂತ ಗೊತ್ತಾದ್ರೆ ಅವನು ಅಪರಾಧಿ ಆಗ್ತಾನೆ.*+  ಒಬ್ಬ ವ್ಯಕ್ತಿ ಇದ್ರಲ್ಲಿ ಯಾವ ಪಾಪ ಮಾಡಿ ಅಪರಾಧಿ ಆದ್ರೂ ತಾನು ಯಾವ ಪಾಪ ಮಾಡಿದ್ದಿನಿ ಅಂತ ಅವನು ಹೇಳಬೇಕು.+  ಆ ಪಾಪಕ್ಕಾಗಿ ಒಂದು ಹೆಣ್ಣು ಕುರಿಮರಿ ಅಥವಾ ಹೆಣ್ಣು ಆಡುಮರಿಯನ್ನ ತಂದು ಯೆಹೋವನಿಗೆ ಅರ್ಪಿಸಲೂಬೇಕು.+ ಇದು ದೋಷಪರಿಹಾರಕ ಬಲಿ. ಆಗ ಅವನ ಪಾಪಕ್ಕಾಗಿ ಪುರೋಹಿತ ಪ್ರಾಯಶ್ಚಿತ್ತ ಮಾಡ್ತಾನೆ.  ಒಂದು ಕುರಿಯನ್ನ ತಗೊಳ್ಳೋಕೆ ಹಣ ಇಲ್ಲದಿದ್ರೆ ಅವನು ಎರಡು ಕಾಡುಪಾರಿವಾಳಗಳನ್ನ ಅಥವಾ ಪಾರಿವಾಳದ ಎರಡು ಮರಿಗಳನ್ನ+ ದೋಷಪರಿಹಾರಕ್ಕಾಗಿ ಯೆಹೋವನಿಗೆ ಕೊಡಬೇಕು. ಅವುಗಳಲ್ಲಿ ಒಂದನ್ನ ಪಾಪಪರಿಹಾರಕ ಬಲಿಗಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಗಾಗಿ+  ಪುರೋಹಿತನಿಗೆ ಕೊಡಬೇಕು. ಪಾಪಪರಿಹಾರಕ ಬಲಿಗಾಗಿ ತಂದ ಪಕ್ಷಿಯನ್ನ ಪುರೋಹಿತ ಮೊದ್ಲು ತಗೊಂಡು ಅದ್ರ ಕುತ್ತಿಗೆಯ ಮುಂಭಾಗವನ್ನ ಚಿವುಟಬೇಕು. ಆದ್ರೆ ತಲೆಯನ್ನ ದೇಹದಿಂದ ಬೇರೆ ಮಾಡಬಾರದು.  ಪುರೋಹಿತ ಆ ಪಕ್ಷಿಯ ಸ್ವಲ್ಪ ರಕ್ತನ ಯಜ್ಞವೇದಿಯ ಬದಿಗೆ ಚಿಮಿಕಿಸಿ ಉಳಿದ ರಕ್ತನ ಯಜ್ಞವೇದಿಯ ಬುಡದಲ್ಲಿ ಸುರಿಸಬೇಕು.+ ಇದು ಪಾಪಪರಿಹಾರಕ ಬಲಿ. 10  ಪುರೋಹಿತ ಇನ್ನೊಂದು ಪಕ್ಷಿನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಸರ್ವಾಂಗಹೋಮ ಬಲಿಗಳನ್ನ ಯಾವಾಗ್ಲೂ ಅರ್ಪಿಸಬೇಕಾದ ಕ್ರಮದಲ್ಲೇ+ ಇದನ್ನೂ ಅರ್ಪಿಸಬೇಕು. ಆ ವ್ಯಕ್ತಿ ಮಾಡಿದ ಪಾಪಕ್ಕಾಗಿ ಪುರೋಹಿತ ಪ್ರಾಯಶ್ಚಿತ್ತ ಮಾಡ್ತಾನೆ, ದೇವರು ಆ ವ್ಯಕ್ತಿಯ ಪಾಪ ಕ್ಷಮಿಸ್ತಾನೆ.+ 11  ಎರಡು ಕಾಡುಪಾರಿವಾಳ ಅಥವಾ ಎರಡು ಪಾರಿವಾಳ ಮರಿ ತಗೊಳೋಕೆ ಹಣ ಇಲ್ಲದವರು ಏಫಾ ಅಳತೆಯ ಹತ್ತನೇ ಒಂದು ಭಾಗದಷ್ಟು*+ ನುಣ್ಣಗಿನ ಹಿಟ್ಟನ್ನ ಪಾಪಪರಿಹಾರಕ ಅರ್ಪಣೆಯಾಗಿ ಕೊಡೋಕೆ ತರಬೇಕು. ಇದು ಪಾಪಪರಿಹಾರಕ ಅರ್ಪಣೆ ಆಗಿರೋದ್ರಿಂದ ಅದಕ್ಕೆ ಎಣ್ಣೆ ಸೇರಿಸಬಾರದು, ಅದ್ರ ಮೇಲೆ ಸಾಂಬ್ರಾಣಿ ಇಡಬಾರದು. 12  ಅವನು ಆ ಹಿಟ್ಟನ್ನ ಪುರೋಹಿತನಿಗೆ ಕೊಡಬೇಕು. ಪುರೋಹಿತ ಅದ್ರಿಂದ ಒಂದು ಹಿಡಿತುಂಬ ತಗೊಂಡು ಯಜ್ಞವೇದಿ ಮೇಲೆ ಅರ್ಪಿಸಿದ ಯೆಹೋವನ ಅರ್ಪಣೆಗಳ ಮೇಲಿಟ್ಟು ಸುಡಬೇಕು. ಅದ್ರಿಂದ ಹೊಗೆ ಮೇಲೆ ಹೋಗಬೇಕು. ಇದು ಎಲ್ಲ ಹಿಟ್ಟನ್ನ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಇದು ಪಾಪಪರಿಹಾರಕ ಅರ್ಪಣೆ. 13  ಈ ಮುಂಚೆ ಹೇಳಿದ ಪಾಪಗಳಲ್ಲಿ ಯಾವುದನ್ನೇ ಅವನು ಮಾಡಿರಲಿ ಆ ಪಾಪಕ್ಕಾಗಿ ಪುರೋಹಿತ ಪ್ರಾಯಶ್ಚಿತ್ತ ಮಾಡ್ತಾನೆ. ಆಗ ದೇವರು ಅವನ ಪಾಪ ಕ್ಷಮಿಸ್ತಾನೆ.+ ಧಾನ್ಯ ಅರ್ಪಣೆಯಲ್ಲಿ ಉಳಿದಿದ್ದು ಹೇಗೆ ಪುರೋಹಿತನಿಗೆ ಸೇರುತ್ತೋ+ ಅದೇ ತರ ಈ ಅರ್ಪಣೆಯಲ್ಲಿ ಉಳಿದಿದ್ದು ಪುರೋಹಿತನಿಗೆ ಸೇರುತ್ತೆ.’”+ 14  ಯೆಹೋವ ಮೋಶೆ ಜೊತೆ ಮಾತು ಮುಂದುವರಿಸಿ ಹೀಗಂದನು: 15  “ಒಬ್ಬ ಯೆಹೋವನ ಪವಿತ್ರ ವಸ್ತುಗಳ ವಿಷ್ಯದಲ್ಲಿ ಗೊತ್ತಿಲ್ಲದೆ ಪಾಪಮಾಡಿ ನಂಬಿಕೆ ದ್ರೋಹ ಮಾಡಿದ್ರೆ+ ಅವನು ಯಾವುದೇ ದೋಷ ಇಲ್ಲದ ಒಂದು ಟಗರನ್ನ ದೋಷಪರಿಹಾರಕ ಬಲಿಯಾಗಿ ಯೆಹೋವನಿಗೆ ಅರ್ಪಿಸಬೇಕು.+ ಪುರೋಹಿತ ಹೇಳುವಷ್ಟೇ ಬೆಳ್ಳಿಯ ಶೆಕೆಲ್‌* ಮೌಲ್ಯದ ಟಗರನ್ನ ತರಬೇಕು. ಆ ಶೆಕೆಲ್‌ ಮೌಲ್ಯ ಆರಾಧನಾ ಸ್ಥಳದ ತೂಕದ ಪ್ರಕಾರ* ಇರಬೇಕು.+ 16  ಅವನು ಯಾವ ಪವಿತ್ರ ವಸ್ತುಗಳ ವಿಷ್ಯದಲ್ಲಿ ಪಾಪ ಮಾಡಿದ್ದಾನೊ ಆ ವಸ್ತುಗಳ ಬೆಲೆ ಕೊಡಬೇಕು. ಅದ್ರ ಜೊತೆ ಆ ಬೆಲೆಯ ಐದನೇ ಒಂದು ಭಾಗ ಸಹ ಸೇರಿಸಿ ಕೊಡಬೇಕು.+ ಅವನು ಈ ಬೆಲೆಯನ್ನ ದೋಷಪರಿಹಾರಕ ಬಲಿಯಾಗಿ ಅರ್ಪಿಸೋ ಟಗರಿನ ಜೊತೆ ಪುರೋಹಿತನಿಗೆ ಕೊಡಬೇಕು. ಅವನಿಗಾಗಿ ಪುರೋಹಿತ ಪ್ರಾಯಶ್ಚಿತ್ತ ಮಾಡ್ತಾನೆ.+ ಆಗ ದೇವರು ಅವನ ಪಾಪ ಕ್ಷಮಿಸ್ತಾನೆ.+ 17  ಮಾಡಬಾರದು ಅಂತ ಯೆಹೋವ ಹೇಳಿರೋ ಒಂದು ಪಾಪವನ್ನ ಒಬ್ಬ ಮಾಡಿದ್ರೆ, ಅದು ಅವನಿಗೆ ಗೊತ್ತಿಲ್ಲದೇ ಇದ್ರೂ ಅವನು ಅಪರಾಧಿನೇ. ಆ ಪಾಪಕ್ಕಾಗಿ ಅವನಿಗೆ ಶಿಕ್ಷೆ ಆಗಬೇಕು.+ 18  ಅವನು ದೋಷಪರಿಹಾರಕ ಬಲಿಗಾಗಿ ಒಂದು ಟಗರನ್ನ ತರಬೇಕು. ಪುರೋಹಿತ ನಿರ್ಧರಿಸೋ ಬೆಲೆಯ ಟಗರನ್ನ ಅವನು ಕೊಡಬೇಕು. ಅದ್ರಲ್ಲಿ ಯಾವುದೇ ದೋಷ ಇರಬಾರದು.+ ಆಮೇಲೆ ಪುರೋಹಿತ ಆ ವ್ಯಕ್ತಿ ಗೊತ್ತಿಲ್ಲದೆ ಮಾಡಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡ್ತಾನೆ. ಆಗ ದೇವರು ಅವನನ್ನ ಕ್ಷಮಿಸ್ತಾನೆ. 19  ಅವನು ಯೆಹೋವನ ವಿರುದ್ಧ ಪಾಪ ಮಾಡಿ ಅಪರಾಧಿ ಆಗಿರೋದ್ರಿಂದ ಈ ದೋಷಪರಿಹಾರಕ ಬಲಿ ಅರ್ಪಿಸಬೇಕು.”

ಪಾದಟಿಪ್ಪಣಿ

ಈ ಪ್ರಕಟಣೆಯಲ್ಲಿ ತಪ್ಪು ಮಾಡಿದವರಿಗೆ ಅಥವಾ ಸಾಕ್ಷಿ ಹೇಳದವರಿಗೆ ತಗಲೋ ಶಾಪವನ್ನ ತಿಳಿಸೋದೂ ಸೇರಿರಬಹುದು.
ಅಥವಾ “ಗುಂಪುಗುಂಪಾಗಿರೋ ಜೀವಿಗಳು.” ಈ ಪದ ಕೀಟಗಳು, ಸರೀಸೃಪಗಳು, ಬೇರೆ ಚಿಕ್ಕ ಚಿಕ್ಕ ಜೀವಿಗಳನ್ನ ಸೂಚಿಸಬಹುದು.
ಇದು, ಅವನು ಕೊಟ್ಟ ಮಾತಿನ ಪ್ರಕಾರ ನಡ್ಕೊಂಡಿಲ್ಲ ಅಂತ ಸೂಚಿಸಬಹುದು.
ಅಂದ್ರೆ, 2.2 ಲೀ. ಪರಿಶಿಷ್ಟ ಬಿ14 ನೋಡಿ.
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”