ಯೆರೆಮೀಯ 19:1-15

  • ಮಣ್ಣಿನ ಜಾಡಿ ಒಡೆಯೋಕೆ ಯೆರೆಮೀಯನಿಗೆ ಹೇಳಿದ್ದು (1-15)

    • ಬಾಳನಿಗೆ ಮಕ್ಕಳ ಬಲಿ (5)

19  ಯೆಹೋವ ಹೇಳೋದು ಏನಂದ್ರೆ “ನೀನು ಕುಂಬಾರನ ಹತ್ರ ಹೋಗಿ ಮಣ್ಣಿನ ಒಂದು ಜಾಡಿ ತಗೊ.+ ನಿನ್ನ ಜೊತೆ ಜನ್ರ ಹಿರಿಯರಲ್ಲಿ ಕೆಲವ್ರನ್ನ, ಪುರೋಹಿತರಲ್ಲಿರೋ ಹಿರಿಯರಲ್ಲಿ ಕೆಲವ್ರನ್ನ ಕರ್ಕೊಂಡು  ಹಿನ್ನೋಮ್‌* ಕಣಿವೆಗೆ+ ಹೋಗಿ ‘ಮಡಿಕೆಚೂರಿನ ಬಾಗಿಲ’ ಹತ್ರ ನಿಲ್ಲು. ನಾನು ನಿನಗೆ ಹೇಳೋ ಮಾತುಗಳನ್ನ ಅಲ್ಲಿ ಸಾರಿಹೇಳು.  ನೀನೇನು ಹೇಳಬೇಕಂದ್ರೆ ‘ಯೆಹೂದದ ರಾಜರೇ, ಯೆರೂಸಲೇಮಿನ ಜನ್ರೇ, ಯೆಹೋವನ ಮಾತು ಕೇಳಿ. ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೀಗೆ ಹೇಳ್ತಾನೆ “ಈ ಜಾಗದಲ್ಲಿ ಬೇಗ ಒಂದು ಕಷ್ಟ ತರ್ತಿನಿ. ಅದು ಹೇಗಿರುತ್ತೆ ಅಂದ್ರೆ ಅದ್ರ ಸುದ್ದಿ ಕೇಳಿದವರ ಕಿವಿಗಳು ಗುಂಯ್‌ಗುಟ್ಟುತ್ತೆ.  ಯಾಕಂದ್ರೆ ಅವರು ನನ್ನನ್ನ ಬಿಟ್ಟುಬಿಟ್ಟಿದ್ದಾರೆ,+ ಈ ಜಾಗದ ಗುರುತೇ ಸಿಗದ ಹಾಗೆ ಮಾಡಿದ್ದಾರೆ.+ ಅವ್ರಿಗೆ ಅವ್ರ ಪೂರ್ವಜರಿಗೆ ಯೆಹೂದದ ರಾಜರಿಗೆ ಗೊತ್ತಿಲ್ಲದ ಬೇರೆ ದೇವರುಗಳಿಗೆ ಇಲ್ಲಿ ಅವರು ಬಲಿಗಳನ್ನ ಅರ್ಪಿಸ್ತಿದ್ದಾರೆ. ಈ ಜಾಗವನ್ನ ಅಮಾಯಕರ ರಕ್ತದಿಂದ ತುಂಬಿಸಿದ್ದಾರೆ.+  ಅವರು ಬಾಳನ ಆರಾಧನೆಗಾಗಿ ದೇವಸ್ಥಾನಗಳನ್ನ ಕಟ್ಟಿ ಅಲ್ಲಿ ಬಾಳನಿಗೆ ಬೆಂಕಿಯಲ್ಲಿ ತಮ್ಮ ಗಂಡುಮಕ್ಕಳನ್ನ ಸರ್ವಾಂಗಹೋಮ ಬಲಿ ಅರ್ಪಿಸಿದ್ದಾರೆ.+ ಹಾಗೆ ಮಾಡೋ ತರ ನಾನು ಅವ್ರಿಗೆ ಹೇಳಿರಲಿಲ್ಲ, ಅದ್ರ ಬಗ್ಗೆ ಮಾತೇ ಎತ್ತಿರಲಿಲ್ಲ, ಅಂಥ ಯೋಚನೆ ಕೂಡ ನನ್ನ ಮನಸ್ಸಲ್ಲಿ ಯಾವತ್ತೂ ಬಂದಿರಲಿಲ್ಲ.’”+  ‘ಯೆಹೋವ ಹೇಳೋದು ಏನಂದ್ರೆ “ಹಾಗಾಗಿ ನೋಡು, ಈ ಜಾಗಕ್ಕೆ ತೋಫೆತ್‌ ಅಥವಾ ಹಿನ್ನೋಮ್‌* ಕಣಿವೆ ಅಂತ ಕರಿಯದೆ ಸಂಹಾರದ ಕಣಿವೆ ಅಂತ ಕರಿಯೋ ದಿನ ಬರುತ್ತೆ.+  ಯೆಹೂದದ, ಯೆರೂಸಲೇಮಿನ ಯೋಜನೆಗಳನ್ನ ನಾನು ಈ ಜಾಗದಲ್ಲಿ ಮಣ್ಣುಪಾಲು ಮಾಡ್ತೀನಿ. ಅವ್ರ ಜೀವ ತೆಗಿಯೋಕೆ ಕಾಯ್ತಿರೋರ ಮತ್ತು ಅವ್ರ ಶತ್ರುಗಳ ಕಣ್ಮುಂದೆನೇ ಅವರು ಕತ್ತಿಯಿಂದ ಸಾಯೋ ತರ ಮಾಡ್ತೀನಿ. ಅವ್ರ ಶವಗಳನ್ನ ಪ್ರಾಣಿಪಕ್ಷಿಗಳಿಗೆ ಆಹಾರವಾಗಿ ಕೊಡ್ತೀನಿ.+  ಈ ದೇಶಕ್ಕೆ ಆಗೋ ಪಾಡನ್ನ ನೋಡಿದ ಜನ್ರ ಎದೆ ಡವಡವ ಅಂತ ಹೊಡ್ಕೊಳ್ಳೋ ತರ, ಸೀಟಿ ಹೊಡೆದು ಅದನ್ನ ಅವಮಾನ ಮಾಡೋ ತರ ಮಾಡ್ತೀನಿ. ಅಲ್ಲಿಂದ ದಾಟಿ ಹೋಗೋರೆಲ್ಲ ಅದನ್ನ ನೋಡಿ ಭಯಪಡ್ತಾರೆ, ಅದಕ್ಕೆ ಬಂದಿರೋ ಕಾಯಿಲೆಗಳನ್ನ ನೋಡಿ ಸೀಟಿ ಹೊಡೆದು ಅವಮಾನ ಮಾಡ್ತಾರೆ.+  ಶತ್ರುಗಳು, ಜೀವ ತೆಗಿಯೋಕೆ ಕಾಯ್ತಾ ಇರೋರು ಅವ್ರನ್ನ ಸುತ್ತುವರಿದಾಗ ಅವ್ರಿಗೆ ತುಂಬ ಒತ್ತಡ ಆಗುತ್ತೆ. ಬೇರೆ ದಾರಿ ಇಲ್ಲದೆ ಒಬ್ರು ಇನ್ನೊಬ್ರ ಮಾಂಸ ತಿಂತಾರೆ. ಅವರು ತಮ್ಮ ಮಕ್ಕಳ ಮಾಂಸವನ್ನೇ ತಿನ್ನೋ ಗತಿ ಬರೋ ಹಾಗೆ ನಾನು ಮಾಡ್ತೀನಿ.”’+ 10  ಆಮೇಲೆ ನಿನ್ನ ಜೊತೆ ಬರೋ ಗಂಡಸರ ಕಣ್ಮುಂದೆನೇ ಆ ಮಣ್ಣಿನ ಜಾಡಿ ಒಡೆದುಬಿಡು. 11  ಆಮೇಲೆ ಅವ್ರಿಗೆ ‘ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ “ಮಣ್ಣಿನ ಪಾತ್ರೆ ಒಡೆದ ಮೇಲೆ ಅದನ್ನ ಹೇಗೆ ಜೋಡಿಸೋಕೆ ಆಗಲ್ವೋ ಹಾಗೇ ನಾನು ಈ ಜನ್ರನ್ನ, ಈ ಪಟ್ಟಣವನ್ನ ನಾಶ ಮಾಡಿಬಿಡ್ತೀನಿ. ಆಗ ಅವರು ತೋಫೆತಲ್ಲಿ ಶವಗಳನ್ನ ಸಮಾಧಿ ಮಾಡ್ತಾರೆ. ಶವಗಳು ಎಷ್ಟು ಇರುತ್ತೆ ಅಂದ್ರೆ ಸಮಾಧಿ ಮಾಡೋಕೆ ಜಾಗಾನೇ ಇರಲ್ಲ”’ ಅಂತೇಳು.+ 12  ಯೆಹೋವ ಹೇಳೋದು ಏನಂದ್ರೆ ‘ಈ ಪಟ್ಟಣವನ್ನ ತೋಫೆತಿನ ಸ್ಥಿತಿಗೆ ತರೋಕೆ ಈ ಜಾಗಕ್ಕೆ ಇಲ್ಲಿನ ಜನ್ರಿಗೆ ಹೀಗೆಲ್ಲ ಮಾಡ್ತೀನಿ. 13  ಯೆರೂಸಲೇಮಲ್ಲಿರೋ ಮನೆಗಳು, ಯೆಹೂದದ ರಾಜರ ಅರಮನೆಗಳು ತೋಫೆತಿನ ತರ ಅಶುದ್ಧ ಸ್ಥಳ ಆಗುತ್ತೆ.+ ಯಾಕಂದ್ರೆ ಅವರು ತಮ್ಮ ಮನೆಗಳ ಮಾಳಿಗೆ ಮೇಲೆ ಆಕಾಶದ ಇಡೀ ಸೈನ್ಯಕ್ಕೆ ಬಲಿಗಳನ್ನ ಅರ್ಪಿಸಿದ್ರು,+ ಬೇರೆ ದೇವರುಗಳಿಗೆ ಪಾನ ಅರ್ಪಣೆಗಳನ್ನ ಸುರಿದ್ರು.’”+ 14  ಯೆಹೋವ ಹೇಳಿದ ಹಾಗೆ ಯೆರೆಮೀಯ ತೋಫೆತಲ್ಲಿ ಭವಿಷ್ಯ ಹೇಳಿದ ಮೇಲೆ ಅಲ್ಲಿಂದ ಯೆಹೋವನ ಆಲಯದ ಅಂಗಳಕ್ಕೆ ಬಂದ. ಅಲ್ಲಿ ಅವನು ನಿಂತು ಎಲ್ಲ ಜನ್ರಿಗೆ 15  “ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೀಗೆ ಹೇಳ್ತಾನೆ: ‘ನಾನು ಈ ಪಟ್ಟಣದ ಮೇಲೆ, ಅದ್ರ ಎಲ್ಲ ಊರುಗಳ ಮೇಲೆ ತರ್ತಿನಿ ಅಂತ ಹೇಳಿದ ಎಲ್ಲ ಕಷ್ಟಗಳನ್ನ ಖಂಡಿತ ತರ್ತಿನಿ. ಯಾಕಂದ್ರೆ ಅಲ್ಲಿರೋರು ಹಠಹಿಡಿದು ನನ್ನ ಮಾತು ಕೇಳಿಲ್ಲ’” ಅಂದ.+

ಪಾದಟಿಪ್ಪಣಿ

ಅಕ್ಷ. “ಹಿನ್ನೋಮನ ಮಗನ.”
ಅಕ್ಷ. “ಹಿನ್ನೋಮನ ಮಗನ.”