ಯೆರೆಮೀಯ 26:1-24

  • ಯೆರೆಮೀಯನಿಗೆ ಜೀವ ಬೆದರಿಕೆ (1-15)

  • ಯೆರೆಮೀಯನನ್ನ ಕಾಪಾಡಿದ್ದು (16-19)

    • ಮೀಕನ ಪ್ರವಾದನೆಯನ್ನ ತಿಳಿಸಿದ್ದು (18)

  • ಪ್ರವಾದಿ ಊರೀಯಾ (20-24)

26  ಯೋಷೀಯನ ಮಗನೂ ಯೆಹೂದದ ರಾಜನೂ ಆದ ಯೆಹೋಯಾಕೀಮನ+ ಆಳ್ವಿಕೆಯ ಆರಂಭದಲ್ಲಿ ಯೆಹೋವ ನನಗೆ ಹೀಗೆ ಹೇಳಿದನು  “ಯೆಹೋವ ಹೇಳೋದು ಏನಂದ್ರೆ ‘ನೀನು ಯೆಹೋವನ ಆಲಯದ ಅಂಗಳದಲ್ಲಿ ನಿಂತ್ಕೊ. ಆರಾಧನೆಗಾಗಿ ಯೆಹೋವನ ಆಲಯಕ್ಕೆ ಬರ್ತಿರೋ ಯೆಹೂದದ ಪಟ್ಟಣದ ಎಲ್ಲ ಜನ್ರಿಗೆ* ನಾನು ಹೇಳೋ ಮಾತುಗಳನ್ನ ಹೇಳು. ಒಂದು ಮಾತೂ ಬಿಡದೆ ಎಲ್ಲವನ್ನ ತಿಳಿಸು.  ಆಗ ಅವರು ಅದನ್ನ ಕೇಳಿ ಪ್ರತಿಯೊಬ್ರು ತನ್ನ ಕೆಟ್ಟ ದಾರಿ ಬಿಟ್ಟು ವಾಪಸ್‌ ಬರಬಹುದು. ಹಾಗೆ ಮಾಡಿದ್ರೆ ನಾನು ಮನಸ್ಸು ಬದಲಾಯಿಸ್ಕೊಳ್ತೀನಿ. ಅವ್ರ ಕೆಟ್ಟ ಕೆಲಸಗಳಿಗಾಗಿ ಅವ್ರ ಮೇಲೆ ತರಬೇಕಂತ ಇದ್ದ ಕಷ್ಟ ತರಲ್ಲ.+  ಅವ್ರಿಗೆ ಹೀಗೆ ಹೇಳು “ಯೆಹೋವ ಹೇಳೋದು ಏನಂದ್ರೆ ‘ನೀವು ನನ್ನ ಮಾತು ಕೇಳದಿದ್ರೆ, ನಾನು ನಿಮಗೆ ಕೊಟ್ಟಿರೋ ನಿಯಮವನ್ನ* ಪಾಲಿಸದಿದ್ರೆ,  ನಾನು ನಿಮ್ಮ ಹತ್ರ ಪದೇ ಪದೇ* ಕಳಿಸಿದ ನನ್ನ ಸೇವಕರಾದ ಪ್ರವಾದಿಗಳ ಮಾತನ್ನ ನೀವು ಇಷ್ಟರ ತನಕ ಕೇಳದ ಹಾಗೆ ಇನ್ನು ಮುಂದೆನೂ ಕೇಳದಿದ್ರೆ+  ನಾನು ಈ ಆಲಯವನ್ನ ಶೀಲೋ ತರ ಮಾಡ್ತೀನಿ.+ ಈ ಪಟ್ಟಣವನ್ನ ಭೂಮಿಯ ಎಲ್ಲ ಜನ್ರ ಶಾಪಕ್ಕೆ ಗುರಿ ಮಾಡ್ತೀನಿ.’”’”+  ಯೆರೆಮೀಯ ಯೆಹೋವನ ಆಲಯದಲ್ಲಿ ಈ ಮಾತುಗಳನ್ನ ಹೇಳ್ತಿರೋವಾಗ ಪುರೋಹಿತರು, ಪ್ರವಾದಿಗಳು ಜನ್ರೆಲ್ಲ ಕೇಳಿಸ್ಕೊಂಡ್ರು.+  ಎಲ್ಲ ಜನ್ರಿಗೆ ಹೇಳಬೇಕು ಅಂತ ಯೆಹೋವ ಹೇಳಿದ ಮಾತುಗಳನ್ನೆಲ್ಲ ಯೆರೆಮೀಯ ಹೇಳಿ ಮುಗಿಸಿದ ತಕ್ಷಣ ಪುರೋಹಿತರು, ಪ್ರವಾದಿಗಳು, ಎಲ್ಲ ಜನ್ರು ಅವನನ್ನ ಹಿಡಿದು ಅವನಿಗೆ “ನಿನ್ನನ್ನ ಸಾಯಿಸ್ದೆ ಬಿಡಲ್ಲ.  ‘ಈ ಆಲಯ ಶೀಲೋ ತರ ಆಗುತ್ತೆ, ಈ ಪಟ್ಟಣ ನಾಶ ಆಗುತ್ತೆ, ಇಲ್ಲಿ ಯಾರೂ ವಾಸ ಮಾಡಲ್ಲ’ ಅಂತ ಯೆಹೋವನ ಹೆಸ್ರಲ್ಲಿ ನೀನ್ಯಾಕೆ ಭವಿಷ್ಯ ಹೇಳ್ದೆ?” ಅಂತ ಹೇಳಿದ್ರು. ಅಷ್ಟೇ ಅಲ್ಲ ಯೆಹೋವನ ಆಲಯದಲ್ಲಿ ಜನ್ರೆಲ್ಲ ಯೆರೆಮೀಯನ ಸುತ್ತ ಮುತ್ಕೊಂಡ್ರು. 10  ಇದನ್ನ ಯೆಹೂದದ ಅಧಿಕಾರಿಗಳು ಕೇಳಿಸ್ಕೊಂಡಾಗ ರಾಜನ ಅರಮನೆಯಿಂದ ಹೊರಟು ಯೆಹೋವನ ಆಲಯಕ್ಕೆ ಬಂದ್ರು. ಅವರು ಯೆಹೋವನ ಆಲಯದ ಹೊಸ ಬಾಗಿಲ ಹತ್ರ ಕೂತ್ರು.+ 11  ಆಗ ಪುರೋಹಿತರು, ಪ್ರವಾದಿಗಳು ಆ ಅಧಿಕಾರಿಗಳಿಗೆ, ಎಲ್ಲ ಜನ್ರಿಗೆ “ಇವನಿಗೆ ಮರಣ ಶಿಕ್ಷೆ ಕೊಡಿ.+ ಯಾಕಂದ್ರೆ ಇವನು ಈ ಪಟ್ಟಣದ ವಿರುದ್ಧ ಭವಿಷ್ಯ ಹೇಳಿದ್ದಾನೆ. ಅದನ್ನ ನೀವೇ ನಿಮ್ಮ ಕಿವಿಯಾರೆ ಕೇಳಿಸ್ಕೊಂಡ್ರಲ್ಲಾ” ಅಂದ್ರು.+ 12  ಆಗ ಯೆರೆಮೀಯ ಎಲ್ಲ ಅಧಿಕಾರಿಗಳಿಗೆ, ಎಲ್ಲ ಜನ್ರಿಗೆ ಹೀಗೆ ಹೇಳಿದ “ಈ ಆಲಯದ, ಈ ಪಟ್ಟಣದ ವಿರುದ್ಧ ನಾನು ಈ ಭವಿಷ್ಯವಾಣಿ ಹೇಳೋಕೆ ನನ್ನನ್ನ ಕಳಿಸಿದ್ದು ಯೆಹೋವನೇ.+ 13  ಹಾಗಾಗಿ ಈಗ ನಿಮ್ಮ ನಡತೆ ಸರಿ ಮಾಡ್ಕೊಂಡು ನಿಮ್ಮ ಕೆಟ್ಟ ಕೆಲಸಗಳನ್ನ ಬಿಟ್ಟುಬಿಡಿ, ನಿಮ್ಮ ದೇವರಾದ ಯೆಹೋವನ ಮಾತನ್ನ ಕೇಳಿ. ಆಗ ಯೆಹೋವ ತನ್ನ ಮನಸ್ಸನ್ನ ಬದಲಾಯಿಸ್ಕೊಳ್ತಾನೆ, ನಿಮ್ಮ ಮೇಲೆ ತರ್ತಿನಿ ಅಂತ ಹೇಳಿದ ಕಷ್ಟ ತರಲ್ಲ.+ 14  ನಾನು ನಿಮ್ಮ ಕೈಯಲ್ಲಿ ಇದ್ದೀನಿ. ನಿಮಗೆ ಯಾವುದು ಒಳ್ಳೇದು, ಯಾವುದು ಸರಿ ಅಂತ ಅನ್ಸುತ್ತೋ ಅದನ್ನ ನನಗೆ ಮಾಡಿ. 15  ಆದ್ರೆ ನೆನಪಿಟ್ಕೊಳ್ಳಿ, ನೀವೇನಾದ್ರೂ ನನ್ನನ್ನ ಕೊಂದ್ರೆ ಅಮಾಯಕನ ರಕ್ತ ಸುರಿಸಿದ ಪಾಪ ನಿಮ್ಮ ಮೇಲೆ, ಈ ಪಟ್ಟಣದ ಮೇಲೆ, ಈ ಜನ್ರ ಮೇಲೆ ಬರುತ್ತೆ. ಯಾಕಂದ್ರೆ ಈ ಎಲ್ಲ ಮಾತುಗಳನ್ನ ನಿಮಗೆ ಮುಟ್ಟಿಸೋಕೆ ನನ್ನನ್ನ ಕಳಿಸಿದ್ದು ಯೆಹೋವ. ಇದು ಸತ್ಯ.” 16  ಆಗ ಅಧಿಕಾರಿಗಳು, ಎಲ್ಲ ಜನ್ರು “ಇವನು ಮರಣ ಶಿಕ್ಷೆ ಕೊಡೋಷ್ಟು ತಪ್ಪು ಏನೂ ಮಾಡಿಲ್ಲ, ಯಾಕಂದ್ರೆ ಇವನು ನಮ್ಮ ದೇವರಾದ ಯೆಹೋವನ ಹೆಸ್ರಲ್ಲಿ ಈ ವಿಷ್ಯಗಳನ್ನ ನಮಗೆ ಹೇಳಿದ್ದಾನೆ” ಅಂತ ಪುರೋಹಿತರಿಗೆ, ಪ್ರವಾದಿಗಳಿಗೆ ಹೇಳಿದ್ರು. 17  ದೇಶದ ಕೆಲವು ಹಿರಿಯರು ಎದ್ದು ನಿಂತು ಜನ್ರ ಇಡೀ ಸಭೆಗೆ ಹೀಗಂದ್ರು 18  “ಯೆಹೂದದ ರಾಜ ಹಿಜ್ಕೀಯ+ ಆಳ್ತಿದ್ದಾಗ ಮೋರೆಷೆತಿನವನಾದ ಮೀಕ+ ಭವಿಷ್ಯ ಹೇಳ್ತಿದ್ದ. ಅವನು ಯೆಹೂದದ ಎಲ್ಲ ಜನ್ರಿಗೆ ‘ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ“ಚೀಯೋನನ್ನ ಹೊಲವನ್ನ ಊಳೋ ತರ ಉಳುಮೆ ಮಾಡ್ತಾರೆ,ಯೆರೂಸಲೇಮ್‌ ಹಾಳುಬಿದ್ದ ಪಟ್ಟಣ ಆಗುತ್ತೆ,+ದೇವಾಲಯ ಇರೋ ಬೆಟ್ಟ ಕಾಡಲ್ಲಿರೋ ಗುಡ್ಡಗಳ ತರ ಆಗುತ್ತೆ.”’+ 19  ಆಗ ಯೆಹೂದದ ರಾಜ ಹಿಜ್ಕೀಯ, ಯೆಹೂದದ ಜನ್ರೆಲ್ಲ ಅವನನ್ನ ಕೊಂದ್ರಾ? ಇಲ್ಲ ತಾನೆ? ರಾಜ ಯೆಹೋವನಿಗೆ ಭಯಪಟ್ಟು ಯೆಹೋವನ ದಯೆಗಾಗಿ ಬೇಡ್ಕೊಂಡ. ಇದ್ರಿಂದ ಯೆಹೋವ ತನ್ನ ಮನಸ್ಸನ್ನ ಬದಲಾಯಿಸ್ಕೊಂಡ, ಅವ್ರ ಮೇಲೆ ತರ್ತಿನಿ ಅಂತ ಹೇಳಿದ ಕಷ್ಟ ತರಲಿಲ್ಲ.+ ಆದ್ರೆ ನಾವೀಗ ಮೈಮೇಲೆ ದೊಡ್ಡ ಕಷ್ಟ ಎಳ್ಕೊಳ್ತಾ ಇದ್ದೀವಿ. 20  ಅಷ್ಟೇ ಅಲ್ಲ ಶೆಮಾಯನ ಮಗನು ಕಿರ್ಯತ್‌-ಯಾರೀಮಿನವನು+ ಆದ ಊರೀಯಾ ಕೂಡ ಯೆರೆಮೀಯನ ತರ ಈ ಪಟ್ಟಣದ ವಿರುದ್ಧ ಈ ದೇಶದ ವಿರುದ್ಧ ಯೆಹೋವನ ಹೆಸ್ರಲ್ಲಿ ಭವಿಷ್ಯ ಹೇಳ್ತಿದ್ದ. 21  ಆ ಮಾತುಗಳನ್ನ ರಾಜ ಯೆಹೋಯಾಕೀಮ+ ಅವನ ಎಲ್ಲ ವೀರ ಸೈನಿಕರು ಎಲ್ಲ ಅಧಿಕಾರಿಗಳು ಕೇಳಿಸ್ಕೊಂಡ್ರು. ಆಗ ರಾಜ ಅವನನ್ನ ಕೊಲ್ಲೋಕೆ ಪ್ರಯತ್ನಿಸಿದ.+ ಈ ವಿಷ್ಯ ಊರೀಯಾನಿಗೆ ಗೊತ್ತಾದ ತಕ್ಷಣ ಅವನು ಹೆದರಿ ಈಜಿಪ್ಟಿಗೆ ಓಡಿಹೋದ. 22  ಆಮೇಲೆ ರಾಜ ಯೆಹೋಯಾಕೀಮ ಅಕ್ಬೋರನ ಮಗ ಎಲ್ನಾಥಾನನನ್ನ+ ಅವನ ಜೊತೆ ಇನ್ನು ಕೆಲವ್ರನ್ನ ಈಜಿಪ್ಟಿಗೆ ಕಳಿಸಿದ. 23  ಅವರು ಊರೀಯಾನನ್ನ ಈಜಿಪ್ಟಿಂದ ಹಿಡಿದು ತಂದು ರಾಜ ಯೆಹೋಯಾಕೀಮನಿಗೆ ಒಪ್ಪಿಸಿದ್ರು. ಅವನು ಊರೀಯಾನನ್ನ ಕತ್ತಿಯಿಂದ ಕೊಂದು+ ಅವನ ಶವವನ್ನ ಜನಸಾಮಾನ್ಯರ ಸಮಾಧಿಯಲ್ಲಿ ಬಿಸಾಕಿದ.” 24  ಆದ್ರೆ ಶಾಫಾನನ+ ಮಗ ಅಹೀಕಾಮ+ ಯೆರೆಮೀಯನಿಗೆ ಬೆಂಬಲ ಕೊಟ್ಟ. ಹೀಗೆ ಯೆರೆಮೀಯ ಜನ್ರ ಕೈಗೆ ಸಿಕ್ಕಿ ಸಾಯೋದನ್ನ ಅವನು ತಪ್ಪಿಸಿದ.+

ಪಾದಟಿಪ್ಪಣಿ

ಅಥವಾ “ಜನ್ರ ಬಗ್ಗೆ.”
ಅಥವಾ “ನಿಯಮ ಪುಸ್ತಕವನ್ನ.”
ಅಕ್ಷ. “ಬೆಳಿಗ್ಗೆ ಬೇಗ ಎದ್ದು.”