ಯೆರೆಮೀಯ 32:1-44

  • ಯೆರೆಮೀಯ ಹೊಲ ತಗೊಂಡಿದ್ದು (1-15)

  • ಯೆರೆಮೀಯನ ಪ್ರಾರ್ಥನೆ (16-25)

  • ಯೆಹೋವನ ಉತ್ರ (26-44)

32  ಯೆಹೂದದ ರಾಜ ಚಿದ್ಕೀಯನ ಆಳ್ವಿಕೆಯ 10ನೇ ವರ್ಷದಲ್ಲಿ ಯೆಹೋವ ಯೆರೆಮೀಯನಿಗೆ ಒಂದು ಸಂದೇಶ ಕೊಟ್ಟನು. ಆಗ ಅದು, ಬಾಬೆಲಿನ ರಾಜ ನೆಬೂಕದ್ನೆಚ್ಚರನ*+ ಆಳ್ವಿಕೆಯ 18ನೇ ವರ್ಷ ಆಗಿತ್ತು.  ಆ ಸಮಯದಲ್ಲಿ ಬಾಬೆಲಿನ ರಾಜನ ಸೈನ್ಯ ಯೆರೂಸಲೇಮನ್ನ ಮುತ್ತಿಗೆ ಹಾಕಿತ್ತು. ಪ್ರವಾದಿ ಯೆರೆಮೀಯ ಯೆಹೂದದ ರಾಜನ ಅರಮನೆಯಲ್ಲಿ ‘ಕಾವಲುಗಾರರ ಅಂಗಳದಲ್ಲಿ’+ ಕೈದಿ ಆಗಿದ್ದ.  ಅವನನ್ನ ಬಂಧಿಸಿದ್ದು ಯೆಹೂದದ ರಾಜ ಚಿದ್ಕೀಯ.+ ರಾಜ ಅವನಿಗೆ “ನೀನು ಯಾಕೆ ಹೀಗೆಲ್ಲಾ ಭವಿಷ್ಯ ಹೇಳ್ತೀಯ? ಏನಂದೆ ನೀನು? ‘ಯೆಹೋವ ಹೀಗೆ ಹೇಳ್ತಾನೆ “ನಾನು ಈ ಪಟ್ಟಣವನ್ನ ಬಾಬೆಲಿನ ರಾಜನ ಕೈಗೆ ಕೊಡ್ತೀನಿ, ಅವನು ಈ ಪಟ್ಟಣ ವಶ ಮಾಡ್ಕೊಳ್ತಾನೆ.+  ಯೆಹೂದದ ರಾಜ ಚಿದ್ಕೀಯ ಕಸ್ದೀಯರ ಕೈಯಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ. ಅವನು ಖಂಡಿತ ಬಾಬೆಲಿನ ರಾಜನ ಕೈಗೆ ಸೇರ್ತಾನೆ. ಅವನು ಆ ರಾಜನ ಮುಂದೆ ನಿಂತು ಮಾತಾಡಬೇಕಾಗುತ್ತೆ.”’+  ಯೆಹೋವ ಹೇಳೋದು ಏನಂದ್ರೆ ‘ಆ ರಾಜ ಚಿದ್ಕೀಯನನ್ನ ಹಿಡ್ಕೊಂಡು ಬಾಬೆಲಿಗೆ ಹೋಗ್ತಾನೆ, ನಾನು ಅವನಿಗೆ ಗಮನ ಕೊಡೋ ತನಕ ಅವನು ಅಲ್ಲೇ ಇರ್ತಾನೆ. ನೀವು ಕಸ್ದೀಯರ ಜೊತೆ ಎಷ್ಟೇ ಹೋರಾಡಿದ್ರೂ ಗೆಲ್ಲಲ್ಲ’ ಅಂತ ನೀನು ಹೇಳ್ದೆ ಅಲ್ವಾ” ಅಂದನು.+  ಯೆರೆಮೀಯ ಹೀಗಂದ “ಯೆಹೋವ ನನಗೆ  ‘ನಿನ್ನ ದೊಡ್ಡಪ್ಪ* ಶಲ್ಲೂಮನ ಮಗ ಹನಮೇಲ ನಿನ್ನ ಹತ್ರ ಬಂದು “ಅನಾತೋತಿನಲ್ಲಿರೋ+ ನನ್ನ ಹೊಲವನ್ನ ನೀನು ಕೊಂಡ್ಕೊ. ಅದನ್ನ ಕೊಂಡ್ಕೊಳ್ಳೋ ಹಕ್ಕಿರೋದು ಮೊದಲು ನಿನಗೇ”+ ಅಂತ ಹೇಳ್ತಾನೆ’ ಅಂದ.”  ಯೆಹೋವ ಹೇಳಿದ ಹಾಗೆ ನನ್ನ ದೊಡ್ಡಪ್ಪನ ಮಗ ಹನಮೇಲ ‘ಕಾವಲುಗಾರರ ಅಂಗಳದ ಒಳಗೆ’ ಬಂದು ನನಗೆ “ಬೆನ್ಯಾಮೀನ್‌ ಪ್ರದೇಶಕ್ಕೆ ಸೇರಿದ ಅನಾತೋತಿನಲ್ಲಿನ ನನ್ನ ಹೊಲವನ್ನ ದಯವಿಟ್ಟು ನೀನು ಕೊಂಡ್ಕೊ. ಅದನ್ನ ನಿನ್ನ ಆಸ್ತಿಯಾಗಿ ಮಾಡ್ಕೊ, ಅದನ್ನ ತಗೊಳ್ಳೋ ಹಕ್ಕು ನಿನಗಿದೆ. ಹಾಗಾಗಿ ನೀನೇ ತಗೊ” ಅಂದ. ನನಗಾಗ ಇದು ಯೆಹೋವನ ಆಸೆ ಅಂತ ಅರ್ಥ ಆಯ್ತು.  ಹಾಗಾಗಿ ನಾನು ನನ್ನ ದೊಡ್ಡಪ್ಪನ ಮಗ ಹನಮೇಲಿಂದ ಅನಾತೋತಿನಲ್ಲಿರೋ ಆ ಹೊಲವನ್ನ ತಗೊಂಡೆ. ನಾನು ಅವನಿಗೆ ಹದಿನೇಳು ಶೆಕೆಲ್‌* ಬೆಳ್ಳಿ* ತೂಕಮಾಡಿ ಕೊಟ್ಟೆ.+ 10  ಆಮೇಲೆ ಒಂದು ದಾಖಲೆ ಪತ್ರದಲ್ಲಿ ಅದನ್ನ ಬರೆದೆ,+ ಮುದ್ರೆ ಹಚ್ಚಿದೆ, ಸಾಕ್ಷಿಗಳನ್ನ ಕರೆಸಿ+ ಸಹಿ ಹಾಕಿಸಿದೆ, ತಕ್ಕಡಿಯಲ್ಲಿ ಬೆಳ್ಳಿ ತೂಕಮಾಡ್ದೆ. 11  ನಾನು ನಿಯಮಗಳ ಪ್ರಕಾರ, ಕಾನೂನು ಪ್ರಕಾರ ಮುದ್ರೆ ಹಾಕಿದ್ದ ದಾಖಲೆ ಪತ್ರ, ಮುದ್ರೆ ಹಾಕದಿದ್ದ ದಾಖಲೆ ಪತ್ರ ತಗೊಂಡೆ. 12  ಆಮೇಲೆ ನಾನು ಆ ದಾಖಲೆ ಪತ್ರವನ್ನ ನನ್ನ ದೊಡ್ಡಪ್ಪನ ಮಗ ಹನಮೇಲ, ಪತ್ರಕ್ಕೆ ಸಹಿಹಾಕಿದ ಸಾಕ್ಷಿಗಳು, ‘ಕಾವಲುಗಾರರ ಅಂಗಳದಲ್ಲಿ’+ ಕೂತಿದ್ದ ಎಲ್ಲ ಯೆಹೂದ್ಯರ ಮುಂದೆ ಬಾರೂಕನ+ ಕೈಗೆ ಕೊಟ್ಟೆ. ಬಾರೂಕ ಮಹ್ಸೇಮನ ಮೊಮ್ಮಗ, ನೇರೀಯ+ ಮಗ. 13  ನಾನಾಗ ಅವ್ರೆಲ್ಲರ ಮುಂದೆ ಬಾರೂಕನಿಗೆ ಹೀಗೆ ಹೇಳಿದೆ 14  “ಸೈನ್ಯಗಳ ದೇವರೂ ಇಸ್ರಾಯೇಲಿನ ದೇವರೂ ಆದ ಯೆಹೋವ ಹೇಳೋದು ಏನಂದ್ರೆ ‘ನೀನು ಹೊಲಕ್ಕೆ ಸಂಬಂಧಿಸಿದ ಈ ದಾಖಲೆ ಪತ್ರಗಳನ್ನ ಅಂದ್ರೆ ಮುದ್ರೆ ಹಾಕಿರೋ, ಮುದ್ರೆ ಹಾಕದಿರೋ ದಾಖಲೆ ಪತ್ರವನ್ನ ತಗೊ. ಅವು ಹಾಳಾಗದೆ ತುಂಬ ಸಮಯದ ತನಕ ಉಳಿಯೋ ತರ ಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿಡು.’ 15  ಸೈನ್ಯಗಳ ದೇವರೂ ಇಸ್ರಾಯೇಲಿನ ದೇವರೂ ಆದ ಯೆಹೋವ ಹೇಳೋದು ಏನಂದ್ರೆ ‘ಈ ದೇಶದಲ್ಲಿ ಮನೆಗಳನ್ನ, ಹೊಲಗಳನ್ನ, ದ್ರಾಕ್ಷಿತೋಟಗಳನ್ನ ಕೊಂಡ್ಕೊಳ್ಳೋ ಸಮಯ ಮತ್ತೆ ಬರುತ್ತೆ.’”+ 16  ಆ ದಾಖಲೆಪತ್ರವನ್ನ ನಾನು ನೇರೀಯನ ಮಗನಾದ ಬಾರೂಕನಿಗೆ ಕೊಟ್ಟ ಮೇಲೆ ಯೆಹೋವನಿಗೆ ಹೀಗೆ ಪ್ರಾರ್ಥಿಸಿದೆ 17  “ಅಯ್ಯೋ, ವಿಶ್ವದ ರಾಜ ಯೆಹೋವನೇ, ನೋಡು! ನೀನು ಮಹಾ ಶಕ್ತಿ, ಬಲದಿಂದ* ಆಕಾಶವನ್ನ, ಭೂಮಿಯನ್ನ ಮಾಡ್ದೆ.+ ನಿನ್ನಿಂದ ಮಾಡೋಕೆ ಅಸಾಧ್ಯವಾದ ಅದ್ಭುತ ಯಾವುದೂ ಇಲ್ಲ. 18  ನೀನು ಸಾವಿರಾರು ಜನ್ರಿಗೆ ಶಾಶ್ವತ ಪ್ರೀತಿ ತೋರಿಸುವಾತ, ತಂದೆಗಳು ಮಾಡಿದ ಪಾಪಗಳ ಪರಿಣಾಮಗಳನ್ನ ಮಕ್ಕಳು ಅನುಭವಿಸೋ ತರ ಬಿಡುವಾತ,+ ಸತ್ಯ ದೇವರು, ಮಹೋನ್ನತ, ಬಲಿಷ್ಠ, ಸೈನ್ಯಗಳ ದೇವರಾದ ಯೆಹೋವ ಅನ್ನೋ ಹೆಸ್ರಿರೋ ದೇವರು. 19  ನಿನಗೆ ದೊಡ್ಡ ದೊಡ್ಡ ಉದ್ದೇಶಗಳಿವೆ,* ನಿನ್ನ ಶಕ್ತಿ ಬಳಸಿ ಕೆಲಸಗಳನ್ನ ಮಾಡ್ತಿಯ.+ ಪ್ರತಿಯೊಬ್ಬನಿಗೆ ಅವನ ನಡತೆ, ಕೆಲಸಕ್ಕೆ ತಕ್ಕ ಪ್ರತಿಫಲ ಕೊಡೋಕೆ+ ಮನುಷ್ಯರ ನಡತೆಯನ್ನೆಲ್ಲ ನಿನ್ನ ಕಣ್ಣುಗಳು ಗಮನಿಸುತ್ತೆ.+ 20  ನೀನು ಈಜಿಪ್ಟ್‌ ದೇಶದಲ್ಲಿ ಮಾಡಿದ ಸೂಚಕಕಾರ್ಯಗಳು, ಅದ್ಭುತಗಳು ಇವತ್ತಿಗೂ ಎಲ್ರಿಗೆ ಗೊತ್ತು. ಹೀಗೆ ನೀನು ಇಸ್ರಾಯೇಲ್ಯರ, ಬೇರೆ ಎಲ್ಲಾ ಜನ್ರ ಮಧ್ಯ ನಿನ್ನ ಹೆಸ್ರಿಗೆ ಗೌರವ ತಂದ್ಕೊಂಡೆ.+ ಇವತ್ತಿಗೂ ನಿನ್ನ ಹೆಸ್ರು ಪ್ರಸಿದ್ಧವಾಗಿದೆ. 21  ನೀನು ಈಜಿಪ್ಟ್‌ ದೇಶದಲ್ಲಿ ಸೂಚಕಕಾರ್ಯಗಳನ್ನ ಅದ್ಭುತಗಳನ್ನ ಮಾಡಿ, ನಿನ್ನ ಮಹಾ ಶಕ್ತಿಶಾಲಿ ಕೈಯಿಂದ ದೊಡ್ಡ ದೊಡ್ಡ ಕೆಲಸಗಳನ್ನ ಮಾಡಿ ನಿನ್ನ ಜನ್ರಾದ ಇಸ್ರಾಯೇಲ್ಯರನ್ನ ಅಲ್ಲಿಂದ ಬಿಡಿಸ್ಕೊಂಡು ಬಂದೆ.+ 22  ನೀನು ಆಣೆ ಇಟ್ಟು ಪೂರ್ವಜರಿಗೆ ಕೊಡ್ತೀನಿ ಅಂತ ಹೇಳಿದ+ ಹಾಲೂ ಜೇನೂ ಹರಿಯೋ ದೇಶವನ್ನ ಸ್ವಲ್ಪ ಸಮಯ ಆದ್ಮೇಲೆ ಅವ್ರಿಗೆ ಕೊಟ್ಟೆ.+ 23  ಅವರು ಈ ದೇಶಕ್ಕೆ ಬಂದು ಅದನ್ನ ವಶ ಮಾಡ್ಕೊಂಡ್ರು. ಆದ್ರೆ ಅವರು ನಿನ್ನ ಮಾತನ್ನ ಕೇಳಿಲ್ಲ, ನೀನು ಕೊಟ್ಟ ನಿಯಮ ಪುಸ್ತಕದ ಪ್ರಕಾರ ನಡಿಲಿಲ್ಲ. ನೀನು ಕೊಟ್ಟ ಒಂದು ಆಜ್ಞೆನೂ ಪಾಲಿಸಲಿಲ್ಲ. ಇದ್ರಿಂದ ಈ ಎಲ್ಲ ಕಷ್ಟಗಳನ್ನ ಅವರು ಅನುಭವಿಸೋ ತರ ಮಾಡ್ದೆ.+ 24  ನೋಡು! ಜನ್ರು ಈ ಪಟ್ಟಣದ ಹತ್ರ ಬಂದು ದಾಳಿ ಮಾಡಿ ಇಳಿಜಾರುಗಳನ್ನ ಕಟ್ಟಿದ್ದಾರೆ.+ ಕತ್ತಿ,+ ಬರಗಾಲ, ಅಂಟುರೋಗದಿಂದಾಗಿ*+ ಖಂಡಿತ ಈ ಪಟ್ಟಣ ಅದ್ರ ವಿರುದ್ಧ ಹೋರಾಡ್ತಿರೋ ಕಸ್ದೀಯರ ಕೈವಶ ಆಗುತ್ತೆ. ನೀನು ಹೇಳಿದ್ದೆಲ್ಲ ನಡಿದಿದೆ, ನೀನದನ್ನ ನೋಡ್ತಾ ಇದ್ದೀಯಲ್ಲಾ. 25  ವಿಶ್ವದ ರಾಜ ಯೆಹೋವನೇ ಈ ಪಟ್ಟಣ ಖಂಡಿತ ಕಸ್ದೀಯರ ಕೈಗೆ ಹೋದ್ರೂ ನೀನು ನನಗೆ ‘ಹಣಕೊಟ್ಟು ಹೊಲ ಕೊಂಡ್ಕೊ, ಸಾಕ್ಷಿಗಳನ್ನ ಕರೆದು ಸಹಿ ಹಾಕಿಸು’ ಅಂದೆ.” 26  ಆಗ ಯೆಹೋವ ಯೆರೆಮೀಯನಿಗೆ ಹೀಗೆ ಹೇಳಿದನು 27  “ನಾನು ಯೆಹೋವ. ಇಡೀ ಮಾನವಕುಲಕ್ಕೆ ನಾನೇ ದೇವರು. ನನ್ನಿಂದ ಮಾಡೋಕೆ ಆಗದಿರೋ ಅದ್ಭುತ ಏನಾದ್ರೂ ಇದ್ಯಾ? 28  ಹಾಗಾಗಿ ಯೆಹೋವ ಹೇಳೋದು ಏನಂದ್ರೆ ‘ನಾನು ಈ ಪಟ್ಟಣವನ್ನ ಕಸ್ದೀಯರ ಕೈಗೆ, ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಕೈಗೆ ಕೊಡ್ತೀನಿ. ಅವನು ಇದನ್ನ ವಶ ಮಾಡ್ಕೊಳ್ತಾನೆ.+ 29  ಈ ಪಟ್ಟಣದ ವಿರುದ್ಧ ಹೋರಾಡ್ತಿರೋ ಕಸ್ದೀಯರು ಪಟ್ಟಣದ ಒಳಗೆ ಬಂದು ಬೆಂಕಿ ಹಚ್ತಾರೆ. ಇಲ್ಲಿರೋ ಮನೆಗಳನ್ನ ಸಹ ಸುಟ್ಟುಬಿಡ್ತಾರೆ.+ ಯಾಕಂದ್ರೆ ಈ ಜನ್ರು ತಮ್ಮ ಮನೆಗಳ ಮಾಳಿಗೆಗಳ ಮೇಲೆ ಬಾಳನಿಗಾಗಿ ಬಲಿಗಳನ್ನ ಅರ್ಪಿಸಿ, ಬೇರೆ ದೇವರುಗಳಿಗೆ ಪಾನ ಅರ್ಪಣೆಗಳನ್ನ ಸುರಿದು ನನಗೆ ಕೋಪ ಬರಿಸಿದ್ದಾರೆ.’+ 30  ‘ಇಸ್ರಾಯೇಲಿನ ಜನ್ರೂ ಯೆಹೂದದ ಜನ್ರೂ ಚಿಕ್ಕಂದಿಂದ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನ ಮಾಡ್ತಾ ಬಂದಿದ್ದಾರೆ.+ ಇಸ್ರಾಯೇಲಿನ ಜನ್ರು ತಮ್ಮ ಕೈಕೆಲಸಗಳಿಂದ ನನ್ನನ್ನ ರೇಗಿಸ್ತಾನೇ ಇದ್ದಾರೆ’ ಅಂತ ಯೆಹೋವ ಹೇಳ್ತಾನೆ. 31  ‘ಈ ಪಟ್ಟಣ ಅವರು ಅದನ್ನ ಕಟ್ಟಿದ ದಿನದಿಂದ ಇವತ್ತಿನ ತನಕ ನನಗೆ ಕೋಪ, ಕ್ರೋಧ ಬರಿಸಿದೆ.+ ಹಾಗಾಗಿ ಇದು ನನ್ನ ಕಣ್ಮುಂದೆ ಇರಬಾರದು.+ 32  ಇಸ್ರಾಯೇಲಿನ, ಯೆಹೂದದ ಜನ್ರು ತುಂಬ ಕೆಟ್ಟ ಕೆಲಸಗಳನ್ನ ಮಾಡಿದ್ರಿಂದ ಈ ಪಟ್ಟಣ ನನ್ನ ಮುಂದೆ ಇರಬಾರದು. ರಾಜರು,+ ಅಧಿಕಾರಿಗಳು,+ ಪುರೋಹಿತರು, ಪ್ರವಾದಿಗಳು,+ ಯೆಹೂದದ ಜನ್ರು, ಯೆರೂಸಲೇಮಿನ ಜನ್ರು, ಹೀಗೆ ಎಲ್ರೂ ನನ್ನ ಕೋಪ ಕೆರಳಿಸಿದ್ದಾರೆ. 33  ಅವರು ಯಾವಾಗ್ಲೂ ನನಗೆ ಬೆನ್ನು ಹಾಕ್ತಿದ್ರು, ನನ್ನ ಕಡೆ ನೋಡ್ತಾನೇ ಇರಲಿಲ್ಲ.+ ನಾನು ಪದೇಪದೇ* ಅವ್ರಿಗೆ ಕಲಿಸೋಕೆ ಪ್ರಯತ್ನಿಸಿದೆ, ಆದ್ರೆ ಒಬ್ರು ಕೂಡ ನನ್ನ ಮಾತನ್ನ ಕಿವಿಗೆ ಹಾಕೊಳ್ಳಲಿಲ್ಲ, ತಿದ್ಕೊಳ್ಳಲಿಲ್ಲ.+ 34  ನನ್ನ ಹೆಸ್ರಿಗಾಗಿರೋ ಈ ಆಲಯದಲ್ಲಿ ಅವರು ಅಸಹ್ಯ ಮೂರ್ತಿಗಳನ್ನ ಇಟ್ಟು ಅದನ್ನ ಅಶುದ್ಧ ಮಾಡಿದ್ರು.+ 35  ಅಷ್ಟೇ ಅಲ್ಲ ಅವರು ಹಿನ್ನೋಮ್‌* ಕಣಿವೆಯಲ್ಲಿ*+ ಬಾಳನಿಗೋಸ್ಕರ ಪೂಜಾಸ್ಥಳಗಳನ್ನ ಕಟ್ಟಿ ತಮ್ಮ ಮಕ್ಕಳನ್ನ ಮೋಲೆಕನಿಗೆ+ ಬೆಂಕಿಯಲ್ಲಿ ಆಹುತಿ ಕೊಟ್ರು. ಅಂಥ ನೀಚ ಕೆಲಸಗಳನ್ನ ಮಾಡಿ ಅಂತ ನಾನು ಹೇಳಿರಲಿಲ್ಲ,+ ಅಂಥ ಯೋಚನೆ ನನ್ನ ಮನಸ್ಸಲ್ಲಿ ಯಾವತ್ತೂ ಬಂದಿರಲಿಲ್ಲ. ಆದ್ರೆ ಯೆಹೂದ ಅದನ್ನ ಮಾಡಿ ತುಂಬ ದೊಡ್ಡ ಪಾಪ ಮಾಡಿದೆ.’ 36  ಕತ್ತಿ, ಬರಗಾಲ, ಅಂಟುರೋಗಕ್ಕೆ ತುತ್ತಾಗಿ ಬಾಬೆಲಿನ ರಾಜನ ಕೈ ಸೇರುತ್ತೆ ಅಂತ ನೀವು ಹೇಳೋ ಈ ಪಟ್ಟಣದ ಬಗ್ಗೆ ಇಸ್ರಾಯೇಲಿನ ದೇವರಾಗಿರೋ ಯೆಹೋವ ಹೇಳೋದು ಏನಂದ್ರೆ 37  ‘ನಾನು ಅವ್ರನ್ನ ಕೋಪ, ಕ್ರೋಧ, ಮಹಾ ರೋಷದಿಂದ ಚದರಿಸಿಬಿಟ್ಟಿದ್ದ ಎಲ್ಲ ದೇಶಗಳಿಂದ ಒಟ್ಟುಗೂಡಿಸ್ತೀನಿ.+ ಅವ್ರನ್ನ ಈ ಜಾಗಕ್ಕೆ ವಾಪಸ್‌ ಕರ್ಕೊಂಡು ಬರ್ತಿನಿ. ಅವರು ಸುರಕ್ಷಿತವಾಗಿ ವಾಸಿಸೋ ತರ ಮಾಡ್ತೀನಿ.+ 38  ಅವರು ನನ್ನ ಜನರಾಗಿ ಇರ್ತಾರೆ, ನಾನು ಅವ್ರ ದೇವರಾಗಿ ಇರ್ತಿನಿ.+ 39  ಅವರು ನನಗೆ ಯಾವಾಗ್ಲೂ ಭಯಪಡೋ ತರ ಒಂದೇ ಮನಸ್ಸು* ಕೊಡ್ತೀನಿ,+ ಅವ್ರನ್ನ ಒಂದೇ ದಾರಿಯಲ್ಲಿ ನಡಿಸ್ತೀನಿ. ಇದ್ರಿಂದ ಅವ್ರಿಗೆ ಅವ್ರ ಮಕ್ಕಳಿಗೆ ಒಳ್ಳೇದಾಗುತ್ತೆ.+ 40  ನಾನು ಅವ್ರಿಗೆ ಒಳ್ಳೇದು ಮಾಡೋದನ್ನ ಬಿಟ್ಟುಬಿಡಲ್ಲ+ ಅನ್ನೋ ಶಾಶ್ವತ ಒಪ್ಪಂದವನ್ನ ಅವ್ರ ಜೊತೆ ಮಾಡ್ಕೊಳ್ತೀನಿ.+ ಅವರು ನನ್ನನ್ನ ಬಿಟ್ಟು ಹೋಗದ ಹಾಗೆ ಅವ್ರ ಹೃದಯಗಳಲ್ಲಿ ನನ್ನ ಭಯ ಇಡ್ತೀನಿ.+ 41  ನಾನು ಖುಷಿಖುಷಿಯಿಂದ ಅವ್ರಿಗೆ ಒಳ್ಳೇದು ಮಾಡ್ತೀನಿ.+ ಅವರು ಸದಾಕಾಲಕ್ಕೂ ಈ ದೇಶದಲ್ಲೇ ಇರೋ ತರ ಮಾಡ್ತೀನಿ.+ ಇದನ್ನೆಲ್ಲ ನಾನು ಮನಸಾರೆ* ಪೂರ್ಣ ಶಕ್ತಿಯಿಂದ* ಮಾಡ್ತೀನಿ.’” 42  “ಯೆಹೋವ ಹೇಳೋದು ಏನಂದ್ರೆ ‘ನಾನು ಹೇಳಿದ ಎಲ್ಲ ದೊಡ್ಡ ಕಷ್ಟಗಳನ್ನ ಈ ಜನ್ರ ಮೇಲೆ ತಂದ ತರನೇ ನಾನು ಮಾತುಕೊಟ್ಟ ಎಲ್ಲ ಒಳ್ಳೇದನ್ನ* ಅವ್ರಿಗೆ ಮಾಡ್ತೀನಿ.+ 43  ನೀವು ಈ ದೇಶದ ಬಗ್ಗೆ “ಮನುಷ್ಯ ಪ್ರಾಣಿಗಳಿಲ್ಲದ ಬಂಜರುಭೂಮಿ, ಇದು ಕಸ್ದೀಯರ ಕೈವಶ ಆಗಿದೆ” ಅಂತ ಹೇಳ್ತಿದ್ರಿ. ಆದ್ರೆ ಮತ್ತೆ ಈ ದೇಶದಲ್ಲಿ ನೀವು ಹೊಲಗಳನ್ನ ಕೊಂಡ್ಕೊಳ್ತೀರ.’+ 44  ‘ಕೈದಿಗಳಾಗಿ ಹೋಗಿರೋ ಜನ್ರನ್ನ ನಾನು ವಾಪಸ್‌ ಕರ್ಕೊಂಡು ಬರ್ತಿನಿ.+ ಹಾಗಾಗಿ ಬೆನ್ಯಾಮೀನ್‌ ಪ್ರದೇಶದಲ್ಲಿ, ಯೆರೂಸಲೇಮಿನ ಸುತ್ತಾ ಇರೋ ಪ್ರದೇಶಗಳಲ್ಲಿ, ಯೆಹೂದದ ಪಟ್ಟಣಗಳಲ್ಲಿ,+ ಬೆಟ್ಟ ಪ್ರದೇಶದ ಪಟ್ಟಣಗಳಲ್ಲಿ, ತಗ್ಗುಪ್ರದೇಶದಲ್ಲಿರೋ ಪಟ್ಟಣಗಳಲ್ಲಿ,+ ದಕ್ಷಿಣದಲ್ಲಿರೋ ಪಟ್ಟಣಗಳಲ್ಲಿ ಜನ್ರು ಹೊಲಗಳನ್ನ ಹಣಕೊಟ್ಟು ಕೊಂಡ್ಕೊಳ್ತಾರೆ. ಹೊಲಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನ ಬರೆದು ಮುದ್ರೆ ಹಾಕ್ತಾರೆ, ಸಾಕ್ಷಿಗಳನ್ನ ಕರೆದು ಸಹಿ ಹಾಕಿಸ್ತಾರೆ’+ ಅಂತ ಯೆಹೋವ ಹೇಳ್ತಾನೆ.”

ಪಾದಟಿಪ್ಪಣಿ

ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಥವಾ “ಚಿಕ್ಕಪ್ಪ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಏಳು ಶೆಕೆಲ್‌, ಹತ್ತು ಬೆಳ್ಳಿ ತುಂಡುಗಳನ್ನ.”
ಅಕ್ಷ. “ಚಾಚಿದ ತೋಳಿಂದ.”
ಅಕ್ಷ. “ಸಲಹೆ.”
ಅಥವಾ “ಕಾಯಿಲೆಯಿಂದಾಗಿ.”
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಕ್ಷ. “ಬೆಳಿಗ್ಗೆ ಬೇಗ ಎದ್ದು.”
ಅಕ್ಷ. “ಹಿನ್ನೋಮನ ಮಗನ.”
ಪದವಿವರಣೆಯಲ್ಲಿ “ಗೆಹೆನ್ನ” ನೋಡಿ.
ಅಥವಾ “ಹೃದಯ.”
ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಅಥವಾ “ಪೂರ್ಣ ಹೃದಯದಿಂದ.”
ಅಥವಾ “ಒಳ್ಳೇ ವಿಷ್ಯಗಳನ್ನ.”