ಯೆರೆಮೀಯ 35:1-19
-
ವಿಧೇಯತೆಗೆ ಮಾದರಿಯಾಗಿದ್ದ ರೇಕಾಬ್ಯರು (1-19)
35 ಯೋಷೀಯನ ಮಗ ಯೆಹೂದದ ರಾಜ ಯೆಹೋಯಾಕೀಮ+ ಆಳ್ತಿದ್ದ ಸಮ್ಯದಲ್ಲಿ ಯೆಹೋವ ಯೆರೆಮೀಯನಿಗೆ
2 “ನೀನು ರೇಕಾಬ್ಯರ+ ಕುಟುಂಬದ ಹತ್ರ ಹೋಗು. ಅವ್ರ ಜೊತೆ ಮಾತಾಡಿ ಅವ್ರನ್ನ ಯೆಹೋವನ ಆಲಯದ ಒಂದು ಊಟದ ಕೋಣೆಗೆ ಕರ್ಕೊಂಡು ಬಾ. ಆಮೇಲೆ ಅವ್ರಿಗೆ ದ್ರಾಕ್ಷಾಮದ್ಯ ಕುಡಿಯೋಕೆ ಕೊಡು” ಅಂತ ಹೇಳಿದನು.
3 ಹಾಗಾಗಿ ನಾನು ಹೋಗಿ ಯೆರೆಮೀಯನ ಮಗ ಹಬಚ್ಚಿನ್ಯನ ಮೊಮ್ಮಗ ಯಾಜನ್ಯನನ್ನ, ಅವನ ಅಣ್ಣತಮ್ಮಂದಿರನ್ನ, ಅವನ ಎಲ್ಲ ಗಂಡುಮಕ್ಕಳನ್ನ ಅಂತೂ ರೇಕಾಬ್ಯರ ಕುಟುಂಬದವ್ರನ್ನೆಲ್ಲ ಕರ್ಕೊಂಡು
4 ಯೆಹೋವನ ಆಲಯದ ಒಳಗೆ ಹೋದೆ. ಅವ್ರನ್ನ ಸತ್ಯ ದೇವರ ಮನುಷ್ಯನೂ ಇಗ್ದಲ್ಯನ ಮಗನೂ ಆದ ಹಾನಾನನ ಗಂಡುಮಕ್ಕಳ ಊಟದ ಕೋಣೆಗೆ ಕರ್ಕೊಂಡು ಬಂದೆ. ಆ ಕೋಣೆ ಅಧಿಕಾರಿಗಳ ಊಟದ ಕೋಣೆಯ ಪಕ್ಕದಲ್ಲಿತ್ತು. ಅಧಿಕಾರಿಗಳ ಊಟದ ಕೋಣೆ ಕೆಳಗೆ ಬಾಗಿಲು ಕಾಯೋನಾದ ಶಲ್ಲೂಮನ ಮಗ ಮಾಸೇಯನ ಊಟದ ಕೋಣೆ ಇತ್ತು.
5 ನಾನು ದ್ರಾಕ್ಷಾಮದ್ಯ ತುಂಬಿದ ಲೋಟಗಳನ್ನ, ಮದ್ಯದ ಬಟ್ಟಲುಗಳನ್ನ ಆ ರೇಕಾಬ್ಯ ಗಂಡಸರ ಮುಂದೆ ಇಟ್ಟು “ತಗೊಳ್ಳಿ, ದ್ರಾಕ್ಷಾಮದ್ಯ ಕುಡಿರಿ” ಅಂದೆ.
6 ಅದಕ್ಕೆ ಅವರು “ಬೇಡ, ನಾವು ದ್ರಾಕ್ಷಾಮದ್ಯ ಕುಡಿಯಲ್ಲ. ಯಾಕಂದ್ರೆ ರೇಕಾಬನ ಮಗ ನಮ್ಮ ಪೂರ್ವಜ ಯೆಹೋನಾದಾಬ,*+ ‘ನೀವಾಗ್ಲಿ ನಿಮ್ಮ ಮಕ್ಕಳಾಗ್ಲಿ ಯಾವತ್ತೂ ದ್ರಾಕ್ಷಾಮದ್ಯ ಕುಡಿಬಾರದು.
7 ನೀವು ಮನೆ ಕಟ್ಕೊಳ್ಳಬಾರದು, ಬೀಜ ಬಿತ್ತಬಾರದು, ದ್ರಾಕ್ಷಿ ಬಳ್ಳಿ ನೆಡಬಾರದು, ನಿಮಗೆ ದ್ರಾಕ್ಷಿತೋಟನೂ ಇರಬಾರದು. ನೀವು ಯಾವಾಗ್ಲೂ ಡೇರೆಗಳಲ್ಲೇ ಇರಬೇಕು. ಆಗ ನೀವು ವಿದೇಶಿಯರಾಗಿ ವಾಸಿಸ್ತಿರೋ ದೇಶದಲ್ಲಿ ತುಂಬ ವರ್ಷ ಇರ್ತಿರ’ ಅಂತ ನಮಗೆ ಆಜ್ಞೆ ಕೊಟ್ಟ.
8 ಹಾಗಾಗಿ ನಮ್ಮ ಪೂರ್ವಜನಾದ ರೇಕಾಬನ ಮಗ ಯೆಹೋನಾದಾಬ ನಮಗೆ ಕೊಟ್ಟ ಎಲ್ಲ ಆಜ್ಞೆಗಳನ್ನ ಪಾಲಿಸ್ತಾ ಇದ್ದೀವಿ. ಅವನ ಮಾತಿನ ಪ್ರಕಾರ ನಾವಾಗ್ಲಿ ನಮ್ಮ ಹೆಂಡತಿಯರಾಗ್ಲಿ ನಮ್ಮ ಮಕ್ಕಳಾಗ್ಲಿ ಯಾವತ್ತೂ ದ್ರಾಕ್ಷಾಮದ್ಯ ಕುಡಿಯಲ್ಲ.
9 ನಮ್ಮ ವಾಸಕ್ಕಾಗಿ ಮನೆ ಕಟ್ಕೊಳ್ಳಲ್ಲ, ನಮಗಾಗಿ ದ್ರಾಕ್ಷಿತೋಟ, ಹೊಲ ಮಾಡ್ಕೊಳ್ಳಲ್ಲ, ಬೀಜ ಬಿತ್ತೋದೂ ಇಲ್ಲ.
10 ನಾವು ಯಾವಾಗ್ಲೂ ಡೇರೆಗಳಲ್ಲೇ ಇರ್ತಿವಿ, ನಮ್ಮ ಪೂರ್ವಜನಾದ ಯೆಹೋನಾದಾಬ* ನಮಗೆ ಕೊಟ್ಟ ಎಲ್ಲ ಆಜ್ಞೆಗಳನ್ನ ಪಾಲಿಸ್ತೀವಿ.
11 ಆದ್ರೆ ಬಾಬೆಲಿನ ರಾಜ ನೆಬೂಕದ್ನೆಚ್ಚರ* ಈ ದೇಶದ ಮೇಲೆ ದಾಳಿ ಮಾಡಿದಾಗ+ ನಾವು ‘ಬನ್ನಿ ಯೆರೂಸಲೇಮಿಗೆ ಓಡಿಹೋಗೋಣ. ಕಸ್ದೀಯರ, ಅರಾಮ್ಯರ ಸೈನ್ಯದಿಂದ ತಪ್ಪಿಸ್ಕೊಳ್ಳೋಣ’ ಅಂತೇಳಿ ಯೆರೂಸಲೇಮಿಗೆ ಬಂದ್ವಿ. ಈಗ ಇಲ್ಲೇ ವಾಸ ಮಾಡ್ತಾ ಇದ್ದೀವಿ” ಅಂದ್ರು.
12 ಆಗ ಯೆಹೋವ ಯೆರೆಮೀಯನಿಗೆ ಹೀಗಂದನು
13 “ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನೀನು ಯೆಹೂದದ ಜನ್ರ ಹತ್ರ, ಯೆರೂಸಲೇಮಿನ ಜನ್ರ ಹತ್ರ ಹೀಗೆ ಹೇಳು, ಯೆಹೋವ ಹೇಳೋದು ಏನಂದ್ರೆ “ನನ್ನ ಮಾತು ಕೇಳಿ ಅಂತ ನಿಮಗೆ ಪದೇಪದೇ ಹೇಳಿದ್ನಲ್ಲಾ?+
14 ರೇಕಾಬನ ಮಗ ಯೆಹೋನಾದಾಬ ತನ್ನ ವಂಶದವರಿಗೆ ದ್ರಾಕ್ಷಾಮದ್ಯ ಕುಡಿಬಾರದಂತ ಆಜ್ಞೆ ಕೊಟ್ಟ. ಅವನು ಹೇಳಿದ ಹಾಗೇ ಅವನ ವಂಶದವರು ಇವತ್ತಿನ ತನಕ ಒಂದು ತೊಟ್ಟು ದ್ರಾಕ್ಷಾಮದ್ಯ ಕುಡಿದಿಲ್ಲ. ಹೀಗೆ ಅವರು ತಮ್ಮ ಪೂರ್ವಜನ ಮಾತಿನ ತರ ನಡ್ಕೊಂಡಿದ್ದಾರೆ.+ ಆದ್ರೆ ನೀವು ನನ್ನ ಮಾತಿನ ಪ್ರಕಾರ ನಡಿತಿಲ್ಲ, ನಿಮಗೆ ಪದೇಪದೇ ಹೇಳಿದ್ರೂ* ನೀವು ಕೇಳೋದೇ ಇಲ್ಲ.+
15 ನನ್ನ ಸೇವಕರಾದ ಪ್ರವಾದಿಗಳನ್ನ ನಿಮ್ಮ ಹತ್ರ ಪದೇಪದೇ* ಕಳಿಸ್ತಾ+ ‘ದಯವಿಟ್ಟು ನೀವೆಲ್ಲ ಕೆಟ್ಟದಾರಿ ಬಿಟ್ಟು ವಾಪಸ್ ಬನ್ನಿ,+ ಸರಿಯಾಗಿರೋದನ್ನೇ ಮಾಡಿ! ಬೇರೆ ದೇವರುಗಳನ್ನ ಆರಾಧಿಸಬೇಡಿ, ಅವುಗಳ ಸೇವೆ ಮಾಡಬೇಡಿ. ಆಗ ನಾನು ನಿಮಗೆ, ನಿಮ್ಮ ಪೂರ್ವಜರಿಗೆ ಕೊಟ್ಟ ದೇಶದಲ್ಲೇ ನೀವು ಯಾವಾಗ್ಲೂ ಇರ್ತಿರ’+ ಅಂತ ಹೇಳ್ತಿದ್ದೆ. ಆದ್ರೆ ನೀವು ನನಗೆ ಒಂಚೂರೂ ಕಿವಿಗೊಡಲಿಲ್ಲ. ನನ್ನ ಮಾತು ಕೇಳಲಿಲ್ಲ.
16 ರೇಕಾಬನ ಮಗ ಯೆಹೋನಾದಾಬನ ವಂಶದವರು ತಮ್ಮ ಪೂರ್ವಜನ ಮಾತನ್ನ ಪಾಲಿಸ್ತಾ ಬಂದಿದ್ದಾರೆ.+ ಆದ್ರೆ ಈ ಜನ್ರು ನನ್ನ ಮಾತನ್ನ ಕೇಳಲೇ ಇಲ್ಲ.”’”
17 “ಹಾಗಾಗಿ ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನಾನು ಮೊದಲೇ ಹೇಳಿದ್ದ ಎಲ್ಲ ಕಷ್ಟವನ್ನ ಯೆಹೂದದ ಮೇಲೆ, ಯೆರೂಸಲೇಮಿನ ಎಲ್ಲ ಜನ್ರ ಮೇಲೆ ತರ್ತಿನಿ.+ ಯಾಕಂದ್ರೆ ನಾನು ಅವ್ರಿಗೆ ಎಷ್ಟು ಹೇಳಿದ್ರೂ ಅವರು ನನ್ನ ಮಾತು ಕೇಳಲಿಲ್ಲ, ಅವ್ರನ್ನ ಎಷ್ಟು ಕರೆದ್ರೂ ಕೇಳಿಸ್ಕೊಳ್ಳಲೇ ಇಲ್ಲ.’”+
18 ಆಮೇಲೆ ಯೆರೆಮೀಯ ರೇಕಾಬ್ಯರ ಕುಟುಂಬದವರಿಗೆ ಹೀಗೆ ಹೇಳಿದ “ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನಿಮ್ಮ ಪೂರ್ವಜನಾದ ಯೆಹೋನಾದಾಬ ಕೊಟ್ಟ ಅಪ್ಪಣೆ ಪ್ರಕಾರ ನಡ್ಕೊಂಡ್ರಿ. ಅವನು ನಿಮಗೆ ಹೇಳಿದ ತರಾನೇ ಮಾಡಿ ಅವನು ಹೇಳಿದ್ದನ್ನೆಲ್ಲ ಪಾಲಿಸಿದ್ರಿ. ಹಾಗಾಗಿ
19 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ನನ್ನ ಸನ್ನಿಧಿಯಲ್ಲಿ ಸೇವೆ ಮಾಡೋಕೆ ಯಾವಾಗ್ಲೂ ರೇಕಾಬನ ಮಗ ಯೆಹೋನಾದಾಬನ* ವಂಶದವರಲ್ಲಿ ಯಾರಾದ್ರೂ ಇದ್ದೇ ಇರ್ತಾರೆ.”’”
ಪಾದಟಿಪ್ಪಣಿ
^ ಅಕ್ಷ. “ಯೋನಾದಾಬ.” ಇದು ಯೆಹೋನಾದಾಬ್ ಹೆಸರಿನ ಸಂಕ್ಷಿಪ್ತರೂಪ.
^ ಅಕ್ಷ. “ಯೋನಾದಾಬ.” ಇದು ಯೆಹೋನಾದಾಬ್ ಹೆಸರಿನ ಸಂಕ್ಷಿಪ್ತರೂಪ.
^ ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
^ ಅಕ್ಷ. “ಬೆಳಿಗ್ಗೆ ಬೇಗ ಎದ್ದು ಮಾತಾಡ್ತಿದ್ರೂ.”
^ ಅಕ್ಷ. “ಬೆಳಿಗ್ಗೆ ಬೇಗ ಎದ್ದು.”
^ ಅಕ್ಷ. “ಯೋನಾದಾಬ.” ಇದು ಯೆಹೋನಾದಾಬ್ ಹೆಸರಿನ ಸಂಕ್ಷಿಪ್ತರೂಪ.