ಯೆರೆಮೀಯ 37:1-21

  • ಕಸ್ದೀಯರು ಸ್ವಲ್ಪ ಸಮಯಕ್ಕಷ್ಟೇ ಹಿಂದೆ ಹೋದ್ರು (1-10)

  • ಯೆರೆಮೀಯ ಜೈಲಿಗೆ (11-16)

  • ಚಿದ್ಕೀಯ ಯೆರೆಮೀಯನನ್ನ ಭೇಟಿಯಾದ (17-21)

    • ಯೆರೆಮೀಯನಿಗೆ ರೊಟ್ಟಿ ಕೊಟ್ರು (21)

37  ಬಾಬೆಲಿನ ರಾಜ ನೆಬೂಕದ್ನೆಚ್ಚರ* ಯೆಹೂದ ದೇಶದಲ್ಲಿ ಯೋಷೀಯನ ಮಗ ಚಿದ್ಕೀಯನನ್ನ+ ರಾಜನಾಗಿ ಮಾಡಿದ.+ ಚಿದ್ಕೀಯ ಯೆಹೋಯಾಕೀಮನ ಮಗನಾದ ಕೊನ್ಯನಿಗೆ*+ ಬದಲು ಆಳೋಕೆ ಶುರುಮಾಡಿದ.  ಆದ್ರೆ ಅವನಾಗಲಿ ಅವನ ಸೇವಕರಾಗಲಿ ಆ ದೇಶದ ಜನ್ರಾಗಲಿ ಯೆಹೋವ ಪ್ರವಾದಿ ಯೆರೆಮೀಯನ ಮೂಲಕ ಹೇಳಿದ ಮಾತನ್ನ ಕಿವಿಗೇ ಹಾಕೊಳ್ಳಲಿಲ್ಲ.  ರಾಜ ಚಿದ್ಕೀಯ ಶೆಲೆಮ್ಯನ ಮಗ ಯೆಹೂಕಲನನ್ನ,+ ಪುರೋಹಿತ ಮಾಸೇಯನ ಮಗ ಚೆಫನ್ಯನನ್ನ+ ಪ್ರವಾದಿ ಯೆರೆಮೀಯನ ಹತ್ರ ಕಳಿಸಿ “ದಯವಿಟ್ಟು ನಮ್ಮ ಪರವಾಗಿ ನಮ್ಮ ದೇವರಾದ ಯೆಹೋವನ ಹತ್ರ ಪ್ರಾರ್ಥನೆ ಮಾಡು” ಅಂದ.  ಆಗಿನ್ನೂ ಯೆರೆಮೀಯನನ್ನ ಜೈಲಿಗೆ ಹಾಕಿರಲಿಲ್ಲ.+ ಹಾಗಾಗಿ ಅವನು ಜನ್ರ ಮಧ್ಯ ಓಡಾಡಬಹುದಿತ್ತು, ಎಲ್ಲಿಗೆ ಬೇಕಾದ್ರೂ ಹೋಗಬಹುದಿತ್ತು, ಯಾವ ಅಡೆತಡೆನೂ ಇರಲಿಲ್ಲ.  ಆ ಸಮಯದಲ್ಲಿ ಯೆರೂಸಲೇಮಿಗೆ ಮುತ್ತಿಗೆ ಹಾಕಿದ್ದ ಕಸ್ದೀಯರಿಗೆ ಈಜಿಪ್ಟಿಂದ ಫರೋಹನ ಸೈನ್ಯ ಹೊರಟಿದೆ+ ಅನ್ನೋ ಸುದ್ದಿ ಸಿಕ್ತು. ಹಾಗಾಗಿ ಕಸ್ದೀಯರು ಯೆರೂಸಲೇಮಿನ ಮೇಲೆ ದಾಳಿ ಮಾಡೋದನ್ನ ಬಿಟ್ಟು ವಾಪಸ್‌ ಬಂದ್ರು.+  ಆಗ ಪ್ರವಾದಿ ಯೆರೆಮೀಯನಿಗೆ ಯೆಹೋವ ಹೀಗೆ ಹೇಳಿದನು  “ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ಸಂದೇಶವಾಹಕರೇ, ನನ್ನ ಹತ್ರ ವಿಚಾರಿಸೋಕೆ ನಿಮ್ಮನ್ನ ಕಳಿಸಿದ ಯೆಹೂದದ ರಾಜನಿಗೆ ನೀವು ಹೀಗೆ ಹೇಳಬೇಕು “ನೋಡು! ನಿಮಗೆ ಸಹಾಯ ಮಾಡೋಕೆ ಈಜಿಪ್ಟಿಂದ ಬರ್ತಿರೋ ಫರೋಹನ ಸೈನ್ಯ ತನ್ನ ದೇಶಕ್ಕೆ ವಾಪಸ್‌ ಹೋಗಬೇಕಾಗುತ್ತೆ.+  ಕಸ್ದೀಯರು ಮತ್ತೆ ಬಂದು ಈ ಪಟ್ಟಣದ ವಿರುದ್ಧ ಯುದ್ಧ ಮಾಡಿ, ಇದನ್ನ ವಶ ಮಾಡ್ಕೊಂಡು ಬೆಂಕಿಯಿಂದ ಸುಟ್ಟುಬಿಡ್ತಾರೆ.”+  ಯೆಹೋವ ಹೀಗೆ ಹೇಳ್ತಾನೆ “‘ಕಸ್ದೀಯರು ವಾಪಸ್‌ ಬರಲ್ಲ’ ಅಂತ ಹೇಳ್ಕೊಂಡು ನಿಮಗೆ ನೀವೇ ಮೋಸ ಮಾಡ್ಕೊಳ್ಳಬೇಡಿ. ಯಾಕಂದ್ರೆ ಅವರು ಮತ್ತೆ ಬಂದೇ ಬರ್ತಾರೆ. 10  ನೀವು ನಿಮ್ಮ ವಿರುದ್ಧ ಹೋರಾಡ್ತಿರೋ ಕಸ್ದೀಯರ ಇಡೀ ಸೈನ್ಯವನ್ನ ಸೋಲಿಸಿದ್ರೂ ಅವ್ರಲ್ಲಿ ಗಾಯ ಆದವರು ತಮ್ಮ ಡೇರೆಗಳಿಂದ ಎದ್ದುಬಂದು ಈ ಪಟ್ಟಣವನ್ನ ಸುಟ್ಟುಬಿಡ್ತಾರೆ.”’”+ 11  ಫರೋಹನ ಸೈನ್ಯ ಬರ್ತಾ ಇರೋದ್ರಿಂದ ಕಸ್ದೀಯರ ಸೈನ್ಯ ಯೆರೂಸಲೇಮಿಂದ ವಾಪಸ್‌ ಹೋಯ್ತು.+ 12  ಆಗ ಯೆರೆಮೀಯ ತನ್ನ ಜನ್ರ ಮಧ್ಯ ತನಗೆ ಸಿಗಬೇಕಾಗಿದ್ದ ಪಾಲು ತಗೊಳ್ಳೋಕೆ ಯೆರೂಸಲೇಮಿಂದ ಬೆನ್ಯಾಮೀನ್‌ ಪ್ರದೇಶಕ್ಕೆ ಹೊರಟ.+ 13  ಅವನು ‘⁠ಬೆನ್ಯಾಮೀನ್‌ ಬಾಗಿಲ’ ಹತ್ರ ಬಂದಾಗ ಇರೀಯ ಯೆರೆಮೀಯನನ್ನ ಹಿಡಿದ. ಇರೀಯ ಶೆಲೆಮ್ಯನ ಮಗ ಹನನ್ಯನ ಮೊಮ್ಮಗ ಕಾವಲುಗಾರರ ಅಧಿಕಾರಿ. ಅವನು ಯೆರೆಮೀಯನಿಗೆ “ನೀನು ನಮ್ಮನ್ನ ಬಿಟ್ಟು ಕಸ್ದೀಯರ ಜೊತೆ ಸೇರ್ಕೊಳ್ಳೋಕೆ ಓಡಿಹೋಗ್ತಾ ಇದ್ದೀಯ!” ಅಂದ. 14  ಅದಕ್ಕೆ ಯೆರೆಮೀಯ “ಇಲ್ಲ, ನಿಜವಾಗ್ಲೂ ಇಲ್ಲ. ನಾನು ಕಸ್ದೀಯರ ಜೊತೆ ಸೇರ್ಕೊಳ್ತಿಲ್ಲ” ಅಂದ. ಆದ್ರೆ ಇರೀಯ ಅವನ ಮಾತು ನಂಬಲಿಲ್ಲ. ಅವನನ್ನ ಬಂಧಿಸಿ ಅಧಿಕಾರಿಗಳ ಹತ್ರ ಕರ್ಕೊಂಡು ಹೋದ. 15  ಆ ಅಧಿಕಾರಿಗಳು ಕೋಪದಿಂದ ಕೆಂಡಾಮಂಡಲ ಆದ್ರು.+ ಅವರು ಯೆರೆಮೀಯನನ್ನ ಹೊಡೆದು ಜೈಲಿಗೆ ಹಾಕಿದ್ರು.+ ಆ ಜೈಲು ಮುಂಚೆ ಕಾರ್ಯದರ್ಶಿಯಾದ ಯೆಹೋನಾತಾನನ ಮನೆ ಆಗಿತ್ತು, ಈಗ ಅದನ್ನ ಸೆರೆಮನೆ ಮಾಡಿದ್ರು. 16  ಯೆರೆಮೀಯನನ್ನ ನೆಲಮಾಳಿಗೆಯಲ್ಲಿ ಇದ್ದ ಒಂದು ಕತ್ತಲೆ ಕೋಣೆಯಲ್ಲಿ ಹಾಕಿದ್ರು. ಅವನು ತುಂಬ ದಿನ ಅಲ್ಲೇ ಇದ್ದ. 17  ಆಮೇಲೆ ರಾಜ ಚಿದ್ಕೀಯ ಯೆರೆಮೀಯನನ್ನ ಅರಮನೆಗೆ ಕರೆಸಿ ಅವನ ಹತ್ರ ಗುಟ್ಟಾಗಿ “ಯೆಹೋವ ಏನಾದ್ರೂ ಸಂದೇಶ ಕೊಟ್ಟಿದ್ದಾನಾ?” ಅಂತ ಕೇಳಿದ.+ ಅದಕ್ಕೆ ಯೆರೆಮೀಯ “ಹೌದು!” ಅಂದ. “ನೀನು ಬಾಬೆಲಿನ ರಾಜನ ಕೈಯಲ್ಲಿ ಸಿಕ್ಕಿ ಬೀಳ್ತೀಯ”+ ಅಂದ. 18  ಅಷ್ಟೇ ಅಲ್ಲ ಯೆರೆಮೀಯ ರಾಜ ಚಿದ್ಕೀಯನಿಗೆ “ನಿನ್ನ ವಿರುದ್ಧ ನಾನು ಏನು ಪಾಪ ಮಾಡ್ದೆ? ನಿನ್ನ ಸೇವಕರ ವಿರುದ್ಧ ಆಗಲಿ ಈ ಜನ್ರ ವಿರುದ್ಧ ಆಗಲಿ ನಾನೇನಾದ್ರೂ ಪಾಪ ಮಾಡಿದ್ದೀನಾ? ನನ್ನನ್ನ ಯಾಕೆ ಜೈಲಿಗೆ ಹಾಕಿದ್ದೀರ? 19  ‘ಬಾಬೆಲಿನ ರಾಜ ನಿಮ್ಮ ವಿರುದ್ಧ, ಈ ದೇಶದ ವಿರುದ್ಧ ಬರೋದೇ ಇಲ್ಲ’ ಅಂತ ನಿಮ್ಮ ಪ್ರವಾದಿಗಳು ಹೇಳಿದ್ರಲ್ಲಾ, ಅವ್ರೆಲ್ಲ ಈಗ ಎಲ್ಲಿ ಹೋದ್ರು?+ 20  ನನ್ನ ಒಡೆಯ, ರಾಜ, ದಯವಿಟ್ಟು ನನ್ನ ಬೇಡಿಕೆಯನ್ನ ಕೇಳು, ದಯವಿಟ್ಟು ದಯೆ ತೋರಿಸು. ನನ್ನನ್ನ ಮತ್ತೆ ಕಾರ್ಯದರ್ಶಿ ಯೆಹೋನಾತಾನನ ಮನೆಗೆ ಕಳಿಸಬೇಡ.+ ನಾನು ಅಲ್ಲಿದ್ರೆ ಸತ್ತೇ ಹೋಗ್ತೀನಿ”+ ಅಂದ. 21  ಹಾಗಾಗಿ ರಾಜ ಚಿದ್ಕೀಯ ‘ಕಾವಲುಗಾರರ ಅಂಗಳದಲ್ಲಿ’+ ಯೆರೆಮೀಯನನ್ನ ಜೈಲಲ್ಲಿ ಇಡಿ ಅಂತ ಅಪ್ಪಣೆ ಕೊಟ್ಟ. ಅಲ್ಲಿ ಅವನಿಗೆ ಪ್ರತಿ ದಿನ ಒಂದೊಂದು ದುಂಡಗಿನ ರೊಟ್ಟಿ ಸಿಗ್ತಿತ್ತು.+ ಪಟ್ಟಣದಲ್ಲಿ ಎಷ್ಟರ ತನಕ ರೊಟ್ಟಿ ಸಿಗ್ತಿತ್ತೋ ಅಷ್ಟರ ತನಕ ರೊಟ್ಟಿ ತಯಾರಿ ಮಾಡೋರ ಬೀದಿಯಿಂದ ಅವನಿಗೆ ರೊಟ್ಟಿ ತಂದು ಕೊಡ್ತಿದ್ರು.+ ಯೆರೆಮೀಯ ‘ಕಾವಲುಗಾರರ ಅಂಗಳದಲ್ಲೇ’ ಇದ್ದ.

ಪಾದಟಿಪ್ಪಣಿ

ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಇವನಿಗಿದ್ದ ಬೇರೆ ಹೆಸ್ರುಗಳು, ಯೆಹೋಯಾಖೀನ ಮತ್ತು ಯೆಕೊನ್ಯ.