ಯೆಶಾಯ 20:1-6

  • ಈಜಿಪ್ಟಿನ ಮತ್ತು ಇಥಿಯೋಪ್ಯದ ವಿರುದ್ಧ ಗುರುತು (1-6)

20  ಅಶ್ಶೂರಿನ ರಾಜ ಸರ್ಗೋನ ತರ್ತಾನನನ್ನ* ಅಷ್ಡೋದಿಗೆ+ ಕಳಿಸಿದ ವರ್ಷದಲ್ಲಿ ಅವನು ಅಷ್ಡೋದಿನ ವಿರುದ್ಧ ಯುದ್ಧ ಮಾಡಿ ಅದನ್ನ ವಶಮಾಡ್ಕೊಂಡ.+  ಆಮೋಚನ ಮಗ ಯೆಶಾಯನಿಗೆ ಆ ಸಮ್ಯದಲ್ಲಿ ಯೆಹೋವನ ಈ ಸಂದೇಶ ಸಿಕ್ತು+ “ಹೋಗು, ಹೋಗಿ ನಿನ್ನ ಸೊಂಟದ ಮೇಲಿರೋ ಗೋಣಿಯನ್ನ, ನಿನ್ನ ಕಾಲಲ್ಲಿರೋ ಚಪ್ಪಲಿನ ತೆಗೆದುಹಾಕು.” ಯೆಶಾಯ ಹಾಗೇ ಮಾಡಿದ. ಅವನು ಬೆತ್ತಲೆಯಾಗಿ* ಬರಿಗಾಲಲ್ಲಿ ನಡೆದ.  ಆಮೇಲೆ ಯೆಹೋವ ಹೀಗೆ ಹೇಳಿದನು “ನನ್ನ ಸೇವಕ ಯೆಶಾಯ ಮೂರು ವರ್ಷಗಳ ತನಕ ಬೆತ್ತಲೆಯಾಗಿ ಬರಿಗಾಲಲ್ಲಿ ಅಲೆದಾಡಿದ. ಈ ವಿಷ್ಯ ಒಂದು ಗುರುತಾಗಿದೆ.+ ಮುಂದೆ ಈಜಿಪ್ಟಿಗೆ ಮತ್ತು ಇಥಿಯೋಪ್ಯಕ್ಕೆ ಏನಾಗುತ್ತೆ ಅಂತ ತಿಳಿಸೋ ಎಚ್ಚರಿಕೆಯಾಗಿದೆ.+  ಅಶ್ಶೂರಿನ ರಾಜ ಬಂದು ಈಜಿಪ್ಟಿನವರನ್ನ,+ ಇಥಿಯೋಪ್ಯದವರನ್ನ ಬಂದಿಗಳಾಗಿ ಕರ್ಕೊಂಡು ಹೋಗ್ತಾನೆ. ಅವನು ಚಿಕ್ಕವರಿಂದ ದೊಡ್ಡವರ ತನಕ ಎಲ್ಲ ಪುರುಷರ ಬಟ್ಟೆ ಕಳಚಿ ಅವ್ರನ್ನ ಬೆತ್ತಲೆ ಮಾಡಿ, ಅವರು ಬರಿಗಾಲಲ್ಲಿ ನಡೆಯೋ ತರ ಮಾಡ್ತಾನೆ. ಅವ್ರ ಕುಂಡಿಗಳು ಕಾಣಿಸೋ ತರ ಮಾಡ್ತಾನೆ. ಹೌದು, ಈಜಿಪ್ಟ್‌ ಅವಮಾನಕ್ಕೆ ಗುರಿಯಾಗುತ್ತೆ.  ಯಾರು ಇಥಿಯೋಪ್ಯದ ಮೇಲೆ ತಮ್ಮ ನಿರೀಕ್ಷೆ ಇಟ್ಕೊಂಡಿದ್ರೋ, ಯಾರಿಗೆ ಈಜಿಪ್ಟನ್ನ ಕಂಡ್ರೆ ಹೆಮ್ಮೆ ಆಗ್ತಿತ್ತೋ* ಅವರು ಅವುಗಳ ಪರಿಸ್ಥಿತಿ ನೋಡಿ ಹೆದರಿ ಹೋಗ್ತಾರೆ, ಅವಮಾನಕ್ಕೆ ಗುರಿ ಆಗ್ತಾರೆ.  ಕಡಲತೀರದಲ್ಲಿ ನೆಲೆಸಿರೋ ಜನ ಆ ದಿನ ‘ಯಾವುದರ ಮೇಲೆ ನಾವು ನಿರೀಕ್ಷೆ ಇಟ್ಕೊಂಡಿದ್ವೋ ಅದಕ್ಕೆ ಎಂಥ ಗತಿ ಬಂತು ನೋಡಿ. ಅಶ್ಶೂರಿನ ರಾಜನಿಂದ ತಪ್ಪಿಸ್ಕೊಳ್ಳೋಕೆ ಯಾವುದನ್ನ ಆಶ್ರಯಿಸ್ತಿದ್ದೀವೋ ಅದಕ್ಕೆ ಏನಾಯ್ತು ಅಂತ ನೋಡಿ. ಈಗ ನಾವು ಹೇಗೆ ಪಾರಾಗೋದು?’ ಅಂತ ಮಾತಾಡ್ಕೊಳ್ತಾರೆ.”

ಪಾದಟಿಪ್ಪಣಿ

ಅಥವಾ “ಸೇನಾಪತಿಯನ್ನ.”
ಅಥವಾ “ಕಡಿಮೆ ಬಟ್ಟೆ ಹಾಕಿ.”
ಅಥವಾ “ಯಾರು ಈಜಿಪ್ಟಿನ ಸೌಂದರ್ಯವನ್ನ ಮೆಚ್ಚಿಕೊಳ್ತಿದ್ರೋ.”