ಯೆಶಾಯ 30:1-33
30 ಯೆಹೋವ ಹೀಗೆ ಹೇಳ್ತಾನೆ “ಹಠಮಾರಿ ಮಕ್ಕಳ ಗತಿಯನ್ನ ಏನು ಹೇಳಲಿ,+ನನ್ನದಲ್ಲದ ಯೋಜನೆಗಳನ್ನ ಅವರು ಕಾರ್ಯರೂಪಕ್ಕೆ ಹಾಕ್ತಾರೆ,+ನನ್ನ ಇಷ್ಟಕ್ಕೆ ವಿರುದ್ಧವಾಗಿ ಮೈತ್ರಿ ಮಾಡ್ಕೊಳ್ತಾರೆ,*ಹೀಗೆ ಅವರು ಪಾಪದ ಮೇಲೆ ಪಾಪ ಮಾಡ್ತಾ ಅದನ್ನ ಕೂಡಿಸ್ತಿದ್ದಾರೆ.
2 ನನ್ನ ಹತ್ರ ವಿಚಾರಿಸದೆ+ ಅವರು ಈಜಿಪ್ಟಿಗೆ ಹೋಗ್ತಾರೆ,+ಫರೋಹನ ಸಂರಕ್ಷಣೆಯ ಕೆಳಗೆ ಆಸರೆ ಪಡ್ಕೊಳ್ಳೋಕೆ ಹೋಗ್ತಾರೆ!
ಈಜಿಪ್ಟಿನ ನೆರಳಲ್ಲಿ ಆಶ್ರಯ ಕಂಡ್ಕೊಳ್ಳೋಕೆ ಹೋಗ್ತಾರೆ!
3 ಆದ್ರೆ ಫರೋಹನ ಸಂರಕ್ಷಣೆ ನಿಮ್ಮನ್ನ ನಾಚಿಕೆಗೆ ಗುರಿಮಾಡುತ್ತೆ,ಈಜಿಪ್ಟಿನ ನೆರಳಿನ ಆಶ್ರಯ ನಿಮ್ಮ ಅವಮಾನಕ್ಕೆ ಕಾರಣವಾಗುತ್ತೆ.+
4 ಯಾಕಂದ್ರೆ ಅವನ ಅಧಿಕಾರಿಗಳು ಸೋನ್ ಪಟ್ಟಣದಲ್ಲಿ+ ಇದ್ದಾರೆ,ಅವನ ಪ್ರತಿನಿಧಿಗಳು ಹಾನೇಸನ್ನ ತಲುಪಿದ್ದಾರೆ.
5 ಎಲ್ಲ ಇಸ್ರಾಯೇಲ್ಯರು ಅವಮಾನ ಅನುಭವಿಸಬೇಕಾಗುತ್ತೆ,ಯಾಕಂದ್ರೆ ಈಜಿಪ್ಟಿನವರಿಂದ ಅವ್ರಿಗೆ ಏನೂ ಪ್ರಯೋಜನ ಆಗಲ್ಲ.
ಕೇವಲ ಅವಮಾನ, ಅಪಮಾನಗಳೇ ಹೊರತು+ಅವ್ರಿಂದ ಯಾವುದೇ ಸಹಾಯವಾಗಲಿ, ಲಾಭವಾಗಲಿ ಸಿಗಲ್ಲ.”
6 ದಕ್ಷಿಣದ ಮೃಗಗಳ ವಿರುದ್ಧ ಬಂದ ಸಂದೇಶ:
ಕಷ್ಟಕಣ್ಣೀರಿಂದ ತುಂಬಿರೋ ದೇಶದ ಮೂಲಕ,ಅಂದ್ರೆ ಸಿಂಹ, ಗರ್ಜಿಸೋ ಸಿಂಹ ವಾಸಿಸೋ ದೇಶದ ಮೂಲಕ,ಮಂಡಲದ ಹಾವು ಮತ್ತು ಜ್ವಲಿಸ್ತಾ ಹಾರೋ* ಹಾವು ವಾಸಿಸೋ ದೇಶದ ಮೂಲಕಅವರು ತಮ್ಮ ಸಂಪತ್ತನ್ನ ಕತ್ತೆಗಳ ಬೆನ್ನಿನ ಮೇಲೆ,ತಮ್ಮ ವಸ್ತುಗಳನ್ನ ಒಂಟೆಗಳ ಡುಬ್ಬದ ಮೇಲೆ ಹೇರ್ಕೊಂಡು ಹೋಗ್ತಿದ್ದಾರೆ.
ಆದ್ರೆ ಅವುಗಳಿಂದ ಜನ್ರಿಗೆ ಯಾವುದೇ ಪ್ರಯೋಜನ ಆಗಲ್ಲ.
7 ಈಜಿಪ್ಟಿನ ನೆರವು ಪ್ರಯೋಜನಕ್ಕೆ ಬರಲ್ಲ.+
ಹಾಗಾಗಿ ನಾನು ಅದನ್ನ “ಏನೂ ಮಾಡದೆ ಸುಮ್ಮನೆ ಕೂತಿರೋ ರಾಹಾಬ”+ ಅಂತ ಕರೆದೆ.
8 “ಈಗ ನೀನು ಹೋಗಿ ಅವ್ರ ಮುಂದೆ ಈ ವಿಷ್ಯವನ್ನ ಒಂದು ಹಲಗೆ ಮೇಲೆ ಕೆತ್ತು,ಅದನ್ನ ಒಂದು ಪುಸ್ತಕದಲ್ಲಿ ದಾಖಲಿಸು,+ಆಗ ಅದು ಮುಂದೊಂದು ದಿನಶಾಶ್ವತವಾದ ಸಾಕ್ಷಿಯಾಗಿ ಕೆಲಸಕ್ಕೆ ಬರುತ್ತೆ.+
9 ಯಾಕಂದ್ರೆ ಅವರು ದಂಗೆಕೋರ ಜನ,+ ಮೋಸಮಾಡೋ ಗಂಡುಮಕ್ಕಳು,+ಯೆಹೋವನ ನಿಯಮ ಪುಸ್ತಕಕ್ಕೆ* ಕಿವಿಗೊಡೋಕೆ ಮನಸ್ಸಿಲ್ಲದ ಗಂಡುಮಕ್ಕಳು.+
10 ಅವರು ದಿವ್ಯದೃಷ್ಟಿ ಇರುವವರಿಗೆ ‘ನೋಡಬೇಡಿ’ ಅಂತಾರೆ,ದರ್ಶನಗಳನ್ನ ನೋಡುವವರಿಗೆ ‘ನಿಜವಾದ ದರ್ಶನಗಳ ಕುರಿತು ನಮಗೆ ಹೇಳಬೇಡಿ,+ನಮಗೆ ಇಷ್ಟವಾಗೋದನ್ನ ಮಾತ್ರ ಹೇಳಿ, ಮೋಸದಿಂದ ಕೂಡಿರೋ ಭ್ರಮೆಗಳನ್ನ ಮಾತ್ರ ನೋಡಿ.+
11 ಸರಿಯಾದ ದಾರಿಯನ್ನ ಬಿಟ್ಟು, ಬೇರೆ ದಾರಿ ಹಿಡಿರಿ.
ನಮ್ಮ ಮುಂದೆ ಇಸ್ರಾಯೇಲ್ಯರ ಪವಿತ್ರ ದೇವರ ಮಾತೆತ್ತಬೇಡಿ’ ಅಂತಾರೆ.”+
12 ಈಗ ಇಸ್ರಾಯೇಲ್ಯರ ಪವಿತ್ರ ದೇವರು ಏನು ಹೇಳ್ತಿದ್ದಾನೆ ಅಂತ ಕೇಳಿಸ್ಕೊಳ್ಳಿ:
“ನೀವು ನನ್ನ ಮಾತನ್ನ ತಿರಸ್ಕಾರದಿಂದ ಕಂಡ್ರಿ,+ವಂಚಕರ ಮೇಲೆ ಮೋಸಗಾರರ ಮೇಲೆ ಭರವಸೆ ಇಟ್ರಿ,ಅವ್ರನ್ನ ನೆಚ್ಚಿಕೊಂಡ್ರಿ.+
13 ಹಾಗಾಗಿ ನೀವು ಮಾಡಿದ ಈ ತಪ್ಪು ನಿಮಗೆ ಬಿರುಕುಬಿಟ್ಟಿರೋ ಗೋಡೆ ತರ ಇರುತ್ತೆ,ಉಬ್ಬಿಹೋಗಿ ಬೀಳೋಕೆ ಸಿದ್ಧವಾಗಿರೋ ಎತ್ರವಾದ ಗೋಡೆ ತರ ಇರುತ್ತೆ.
ಅದು ತಟ್ಟನೇ ಒಂದೇ ಕ್ಷಣದಲ್ಲಿ ಕುಸಿದುಬೀಳುತ್ತೆ.
14 ಅದು ಕುಂಬಾರನ ದೊಡ್ಡ ಮಡಿಕೆ ತರ ಒಡೆದುಹೋಗುತ್ತೆ,ಅದನ್ನ ನುಚ್ಚುನೂರು ಮಾಡಲಾಗುತ್ತೆ, ಅದ್ರ ಒಂದೇ ಒಂದು ತುಂಡು ಸಹ ಉಳಿಯಲ್ಲ.
ಅದ್ರಿಂದ ಒಲೆಯಲ್ಲಿರೋ ಕೆಂಡ ತೆಗಿಯೋಕಾಗಲಿಕೆಸರುಗುಂಡಿಯಿಂದ* ನೀರು ಎತ್ತೋಕಾಗಲಿ ಆಗಲ್ಲ.”
15 ವಿಶ್ವದ ರಾಜನೂ ಇಸ್ರಾಯೇಲ್ಯರ ಪವಿತ್ರ ದೇವರೂ ಆಗಿರೋ ಯೆಹೋವ ಹೀಗೆ ಹೇಳ್ತಾನೆ“ನನ್ನ ಹತ್ರ ವಾಪಸ್ ಬಂದು ವಿಶ್ರಾಂತಿ ತಗೊಳ್ಳೋದಾದ್ರೆ ನಿಮಗೆ ರಕ್ಷಣೆ ಸಿಗುತ್ತೆ,ಶಾಂತಿಯಿಂದ ಇದ್ದು ಭರವಸೆ ಇಟ್ರೆ ನಿಮಗೆ ಬಲ ಸಿಗುತ್ತೆ.”+
ಆದ್ರೆ ಅದನ್ನ ನೀವು ಒಪ್ಕೊಳ್ಳಲಿಲ್ಲ.+
16 ಬದಲಾಗಿ ನೀವು “ಇಲ್ಲ, ನಾವು ಕುದುರೆಗಳನ್ನ ಹತ್ತಿ ಓಡಿಹೋಗ್ತೀವಿ!” ಅಂದ್ರಿ.
ಹಾಗಾಗಿ ನೀವು ನಿಜಕ್ಕೂ ಓಡಬೇಕಾಗುತ್ತೆ.
“ನಾವು ವೇಗವಾಗಿ ಓಡೋ ಕುದುರೆ ಮೇಲೆ ಸವಾರಿ ಮಾಡ್ತೀವಿ”+ ಅಂತಾನೂ ನೀವು ಹೇಳಿದ್ರಿ.
ಆದ್ರೆ ನಿಮ್ಮನ್ನ ಬೆನ್ನಟ್ಟುವವರು ವೇಗವಾಗಿ ಬರ್ತಾರೆ.+
17 ಒಬ್ಬ ಮನುಷ್ಯನ ಬೆದರಿಕೆಗೆ ನಿಮ್ಮಲ್ಲಿರೋ ಸಾವಿರ ಜನ ಹೆದ್ರಿ ನಡುಗ್ತಾರೆ,+ಐದು ಜನ್ರ ಬೆದರಿಕೆಗೆ ನೀವು ಓಡಿಹೋಗ್ತೀರ.
ನಿಮ್ಮಲ್ಲಿ ಯಾರು ಉಳಿತಾರೋ ಅವರು ಬೆಟ್ಟದ ಮೇಲಿರೋ ಕಂಬದ ತರ,ಬೆಟ್ಟದ ಮೇಲಿರೋ ಸೂಚನಾಕಂಬ ತರ ಆಗೋ ತನಕ ಹೀಗೆ ನಡಿಯುತ್ತೆ.+
18 ಆದ್ರೆ ನಿಮಗೆ ಕೃಪೆ ತೋರಿಸೋಕೆ ಯೆಹೋವ ತಾಳ್ಮೆಯಿಂದ ಕಾಯ್ತಿದ್ದಾನೆ,+ನಿಮಗೆ ಕರುಣೆ ತೋರಿಸೋಕೆ ಆತನು ಹೆಜ್ಜೆ ತಗೊಳ್ತಾನೆ,+ಯಾಕಂದ್ರೆ ಯೆಹೋವ ನ್ಯಾಯವಂತ ದೇವರು.+
ಆತನ ಮೇಲೆ ನಿರೀಕ್ಷೆ ಇಟ್ಕೊಂಡಿರೋ ಎಲ್ರೂ* ಸಂತೋಷವಾಗಿ ಇರ್ತಾರೆ.+
19 ಜನ ಚೀಯೋನಲ್ಲಿ ಅಂದ್ರೆ ಯೆರೂಸಲೇಮಲ್ಲಿ ವಾಸಿಸುವಾಗ+ ಯಾವುದೇ ಕಾರಣಕ್ಕೂ ನೀನು ಕಣ್ಣೀರು ಹಾಕಲ್ಲ.+ ಸಹಾಯಕ್ಕಾಗಿ ನೀನಿಡೋ ಮೊರೆಗೆ ಆತನು ತಪ್ಪದೇ ನಿನಗೆ ಕೃಪೆ ತೋರಿಸ್ತಾನೆ. ನಿನ್ನ ಬಿನ್ನಹ ಕೇಳಿಸ್ಕೊಂಡ ತಕ್ಷಣ ಆತನು ನಿನಗೆ ಉತ್ರ ಕೊಡ್ತಾನೆ.+
20 ಯೆಹೋವ ನಿನಗೆ ಕಷ್ಟಗಳನ್ನ ರೊಟ್ಟಿ ತರ, ದಬ್ಬಾಳಿಕೆನ ನೀರಿನ ತರ ಕೊಡೋದಾದ್ರೂ+ ನಿನ್ನ ಮಹಾ ಬೋಧಕ ಇನ್ಮುಂದೆ ನಿನ್ನಿಂದ ಮರೆಯಾಗಿರಲ್ಲ. ನೀನು ನಿನ್ನ ಮಹಾ ಬೋಧಕನನ್ನ+ ಕಣ್ಣಾರೆ ನೋಡ್ತೀಯ.
21 ನೀನು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿದ್ರೆ “ಇದೇ ದಾರಿ,+ ಇದ್ರಲ್ಲೇ ನಡಿ” ಅನ್ನೋ ಮಾತು ನಿನ್ನ ಹಿಂದಿಂದ ನಿನ್ನ ಕಿವಿಗೆ ಬೀಳುತ್ತೆ.+
22 ನೀನು ನಿನ್ನ ಕೆತ್ತಿದ ಮೂರ್ತಿಗಳ ಮೇಲಿರೋ ಬೆಳ್ಳಿಯ ತಗಡನ್ನ, ನಿನ್ನ ಲೋಹದ ಮೂರ್ತಿಗಳ ಮೇಲಿರೋ ಬಂಗಾರದ ಲೇಪನವನ್ನ ಅಶುದ್ಧ ಮಾಡ್ತೀಯ.+ ಮುಟ್ಟಿನ ಬಟ್ಟೆಯನ್ನ ಎಸೆಯೋ ತರ ಎಸೆದು ಅವುಗಳಿಗೆ “ತೊಲಗಿ ಹೋಗು!”* ಅಂತ ಹೇಳ್ತೀಯ.+
23 ನೀನು ಭೂಮಿಯಲ್ಲಿ ಬಿತ್ತೋ ಬೀಜಕ್ಕೆ ಆತನು ಮಳೆ ಕೊಡ್ತಾನೆ.+ ಆಗ ಭೂಮಿ ಶ್ರೇಷ್ಠವಾದ ಆಹಾರವನ್ನ ಅಪಾರವಾಗಿ ನೀಡುತ್ತೆ.+ ಆ ದಿನ ನಿನ್ನ ಪ್ರಾಣಿಗಳು ವಿಸ್ತಾರವಾದ ಹುಲ್ಲುಗಾವಲುಗಳಲ್ಲಿ ಮೇಯ್ತವೆ.+
24 ಭೂಮಿ ಉಳೋ ಪಶುಗಳು ಮತ್ತು ಕತ್ತೆಗಳು ಸಲಿಕೆಯಿಂದನೂ ಕವೆಗೋಲಿನಿಂದನೂ ಕೇರೋ ಉತ್ತಮ ಆಹಾರದ ಮಿಶ್ರಣವನ್ನ ತಿನ್ನುವವು.
25 ಮಹಾ ಸಂಹಾರದ ದಿನ ಗೋಪುರಗಳು ಬಿದ್ದುಹೋಗುವಾಗ ಎತ್ರವಾದ ಪ್ರತಿಯೊಂದು ಪರ್ವತದ ಮೇಲೂ ಬೆಟ್ಟದ ಮೇಲೂ ತೊರೆಗಳು ಮತ್ತು ಝರಿಗಳು ಹರಿತವೆ.+
26 ಮುರಿದು ಹೋದ ತನ್ನ ಜನ್ರ ಎಲುಬುಗಳಿಗೆ ಯೆಹೋವ ಕಟ್ಟು ಕಟ್ಟಿ,+ ತಾನು ಹೊಡೆದಿದ್ರಿಂದ ಆಗಿದ್ದ ಗಂಭೀರ ಗಾಯಗಳನ್ನ ವಾಸಿಮಾಡೋ+ ದಿನ ಹುಣ್ಣಿಮೆಯ ಚಂದ್ರ ಸೂರ್ಯನ ತರ ಪ್ರಕಾಶಿಸ್ತಾನೆ, ಸೂರ್ಯನ ಬೆಳಕು ಏಳು ಪಟ್ಟು ಹೆಚ್ಚಾಗುತ್ತೆ,+ ಏಳು ದಿನದ ಪ್ರಕಾಶವು ಒಂದೇ ದಿನದಲ್ಲಿ ಬಂದಿರೋ ತರ ಕಾಣುತ್ತೆ.
27 ಇಗೋ! ದೂರದಿಂದ ಯೆಹೋವ ಬರ್ತಿದ್ದಾನೆ,*ದಟ್ಟ ಮೋಡಗಳಿಂದ, ಉರಿತಿರೋ ಕೋಪದಿಂದ ಆತನು ಬರ್ತಿದ್ದಾನೆ.
ಆತನ ತುಟಿಗಳು ಕ್ರೋಧದಿಂದ ತುಂಬಿವೆ,ಆತನ ನಾಲಿಗೆ ಉರಿಯೋ ಬೆಂಕಿ ತರ ಇದೆ.+
28 ಆತನ ಶ್ವಾಸ ಕುತ್ತಿಗೆ ತನಕ ತುಂಬಿ ಹರಿಯೋ ಪ್ರವಾಹದ ಹಾಗಿರುತ್ತೆ,ಅದು ನಾಶನ ಅನ್ನೋ ಜರಡಿಯಲ್ಲಿ ದೇಶಗಳನ್ನ ಜರಡಿ ಹಿಡಿಯುತ್ತೆ.
ಜನಾಂಗಗಳು ತಪ್ಪುದಾರಿ ಹಿಡಿಯೋ ಹಾಗೆ ಅವುಗಳ ಬಾಯಿಗೆ ಕಡಿವಾಣ ಹಾಕುತ್ತೆ.+
29 ಹಬ್ಬಕ್ಕಾಗಿ ಸಿದ್ಧರಾಗುವಾಗ+ರಾತ್ರಿಯಲ್ಲಿ ಹಾಡೋ ಹಾಡಿನ ಹಾಗೆ ನಿನ್ನ ಹಾಡು ಇರುತ್ತೆ,ಯೆಹೋವನ ಬೆಟ್ಟಕ್ಕೆ, ಇಸ್ರಾಯೇಲ್ಯರ ಬಂಡೆ ಹತ್ರ+ಕೊಳಲು ಊದುತ್ತಾ ಹೋಗೋ ವ್ಯಕ್ತಿ ತರನಿನ್ನ ಹೃದಯ ಸಂತೋಷಿಸುತ್ತೆ.
30 ಯೆಹೋವ ತನ್ನ ಗಂಭೀರ ಧ್ವನಿ+ ಕೇಳೋ ತರ ಮಾಡ್ತಾನೆ,ಆತನು ತನ್ನ ಬಾಹುಬಲವನ್ನ+ ಉರಿಯೋ ಅಗ್ನಿಜ್ವಾಲೆ+ ಮೂಲಕ,+ಮೇಘಸ್ಫೋಟದ+ ಮೂಲಕ, ಚಂಡಮಾರುತದ ಮತ್ತು ಆಲಿಕಲ್ಲಿನ ಮಳೆ+ ಮೂಲಕ ತೋರಿಸ್ತಾನೆ.
31 ಯೆಹೋವನ ಧ್ವನಿಯನ್ನ ಕೇಳಿಸ್ಕೊಂಡು ಅಶ್ಶೂರಿನಲ್ಲಿ ಆತಂಕ ಆವರಿಸುತ್ತೆ,+ಆತನು ಅದನ್ನ ಕೋಲಿಂದ ಹೊಡಿತಾನೆ.+
32 ಯೆಹೋವ ಅಶ್ಶೂರನ್ನ ಶಿಕ್ಷಿಸೋಕೆಅದ್ರ ಮೇಲೆ ತನ್ನ ಕೋಲನ್ನ ಎತ್ತುವಾಗೆಲ್ಲ,ಯುದ್ಧದಲ್ಲಿ ಆತನು ಅವ್ರ ವಿರುದ್ಧ ತನ್ನ ಬಾಹುವನ್ನ ಬೀಸುವಾಗೆಲ್ಲ+ದಮ್ಮಡಿಗಳನ್ನ ಬಡಿಯಲಾಗುತ್ತೆ, ತಂತಿವಾದ್ಯಗಳನ್ನ ನುಡಿಸಲಾಗುತ್ತೆ.+
33 ಯಾಕಂದ್ರೆ ಅಶ್ಶೂರಿನ ತೋಫೆತ್*+ ಈಗಾಗಲೇ ಸಿದ್ಧವಾಗಿದೆ,ಅದನ್ನ ರಾಜನಿಗಾಗಿ ಸಿದ್ಧಪಡಿಸಲಾಗಿದೆ.+
ದೇವರು ಕಟ್ಟಿಗೆಗಳ ರಾಶಿಯನ್ನ ಜೋಡಿಸೋಕೆ ಅದನ್ನ ಆಳವಾಗಿ ಅಗಲವಾಗಿ ಮಾಡಿದ್ದಾನೆ.
ಅದ್ರಲ್ಲಿ ಕಟ್ಟಿಗೆ ಬೆಂಕಿ ಸಿಕ್ಕಾಪಟ್ಟೆ ಇದೆ.
ಯೆಹೋವನ ಉಸಿರು ಗಂಧಕದ ತೊರೆ ತರ ಇದೆ,ಅದು ಬಂದು ಆ ರಾಶಿಗೆ ಬೆಂಕಿ ಹಚ್ಚುತ್ತೆ.
ಪಾದಟಿಪ್ಪಣಿ
^ ಅಕ್ಷ. “ಪಾನೀಯವನ್ನ ಸುರಿತಾರೆ.” ಇದು ಖಂಡಿತ ಒಪ್ಪಂದ ಮಾಡಿಕೊಳ್ಳೋದನ್ನ ಸೂಚಿಸುತ್ತೆ.
^ ಅಥವಾ “ಹಠಾತ್ತನೆ ಚಲಿಸೋ ವಿಷಪೂರಿತ.”
^ ಅಥವಾ “ಬೋಧನೆಗೆ.”
^ ಬಹುಶಃ, “ನೀರು ಗುಂಡಿ.”
^ ಅಥವಾ “ಆತನಿಗಾಗಿ ಕಾತರದಿಂದ ಕಾಯ್ತಿರುವವರೆಲ್ಲ.”
^ ಬಹುಶಃ, “ಅವುಗಳನ್ನ ಹೊಲಸು ಅಂತ ಕರಿತೀಯ.”
^ ಅಕ್ಷ. “ಯೆಹೋವನ ಹೆಸರು ಬರ್ತಿದೆ.”
^ ಇಲ್ಲಿ “ತೋಫೆತ್” ಅನ್ನೋ ಪದವನ್ನ ಬೆಂಕಿಯಿಂದ ಸುಡೋ ಸ್ಥಳಕ್ಕೆ ಅಲಂಕಾರಿಕವಾಗಿ ಬಳಸಲಾಗಿದೆ. ಅದು ನಾಶನವನ್ನ ಸೂಚಿಸುತ್ತೆ.