ಯೆಶಾಯ 40:1-31

  • ದೇವಜನ್ರಿಗೆ ಸಾಂತ್ವನ (1-11)

    • ಕಾಡಲ್ಲಿ ಕೇಳಿ ಬರೋ ಕೂಗು (3-5)

  • ದೇವರ ಶ್ರೇಷ್ಠತೆ (12-31)

    • ಜನಾಂಗಗಳು ಬಕೀಟಿಂದ ತೊಟ್ಟಿಕ್ಕೋ ತುಂತುರಿನ ತರ (15)

    • “ಭೂಗೋಳದ ಮೇಲೆ ದೇವರು ವಾಸಿಸ್ತಾನೆ” (22)

    • ಪ್ರತಿಯೊಂದು ನಕ್ಷತ್ರವನ್ನ ಹೆಸರಿಡಿದು ಕರಿತಾನೆ (26)

    • ದೇವರು ಯಾವತ್ತೂ ದಣಿದು ಹೋಗಲ್ಲ (28)

    • ಯೆಹೋವನಲ್ಲಿ ನಿರೀಕ್ಷೆ ಇಡುವವರು ಹೊಸ ಬಲ ಪಡಿತಾರೆ (29-31)

40  “ನನ್ನ ಜನ್ರನ್ನ ಸಂತೈಸಿ” ಅಂತ ನಿಮ್ಮ ದೇವರು ಹೇಳ್ತಾನೆ.+   “ಯೆರೂಸಲೇಮಿನ ಮನಸ್ಸಿಗೆ ಮುದ ನೀಡೋ ತರ ಮಾತಾಡಿ,ಅದ್ರ ಸಂಕಷ್ಟದ ದಿನಗಳು ಮುಗಿತು ಅಂತ,ಅದ್ರ ಅಪರಾಧಕ್ಕೆ ತಕ್ಕ ಪರಿಹಾರ ಸಿಕ್ತು ಅಂತ ತಿಳಿಸಿ.+ ಅದ್ರ ಪಾಪಗಳಿಗಾಗಿ ಯೆಹೋವನ ಕೈಯಿಂದ ಅದಕ್ಕೆ ಎರಡು ಪಟ್ಟು ಶಿಕ್ಷೆ ಸಿಕ್ತು.”+   ಯಾರೋ ಬಯಲು ಪ್ರದೇಶದಿಂದ ಹೀಗೆ ಕೂಗಿ ಹೇಳ್ತಿದ್ದಾರೆ:“ಯೆಹೋವನ ಮಾರ್ಗ ಸಿದ್ಧಮಾಡಿ!+ ಮರುಭೂಮಿಯನ್ನ ಹಾದುಹೋಗೋ ಒಂದು ನೇರವಾದ ಹೆದ್ದಾರಿಯನ್ನ ನಮ್ಮ ದೇವರಿಗಾಗಿ ತಯಾರಿ ಮಾಡಿ.+   ಎಲ್ಲ ಕಣಿವೆಗಳು ಮುಚ್ಚಲಿ,ಎಲ್ಲ ಪರ್ವತಗಳು ಮತ್ತು ಬೆಟ್ಟಗಳು ತಗ್ಗಲಿ. ಒರಟಾದ ನೆಲ ಸಮತಟ್ಟಾಗಲಿ,ಏರುಪೇರಾದ ನೆಲ ಕಣಿವೆಯ ಬಯಲಾಗಲಿ.+   ಯೆಹೋವನ ಮಹಿಮೆ ಎಲ್ರಿಗೂ ಗೊತ್ತಾಗುತ್ತೆ,+ಮನುಷ್ಯರೆಲ್ಲ ಅದನ್ನ ಒಟ್ಟಾಗಿ ನೋಡ್ತಾರೆ,+ಯಾಕಂದ್ರೆ ಯೆಹೋವ ಈ ಮಾತನ್ನ ಹೇಳಿದ್ದಾನೆ.”   ಕೇಳಿ! ಯಾರೋ ಒಬ್ಬ “ಕೂಗಿ ಹೇಳಿ!” ಅಂತ ಹೇಳ್ತಿದ್ದಾನೆ. ಮತ್ತೊಬ್ಬ “ಏನಂತ ಕೂಗಿ ಹೇಳಲಿ?” ಅಂತ ಕೇಳ್ತಿದ್ದಾನೆ. “ಮನುಷ್ಯರೆಲ್ಲ ಹಸಿರು ಹುಲ್ಲಿನ ತರ ಇದ್ದಾರೆ. ಅವರ ಶಾಶ್ವತ ಪ್ರೀತಿ ಹೊಲದ ಹೂವಿನ ತರ ಇದೆ.+   ಯೆಹೋವ ತನ್ನ ಉಸಿರನ್ನ ಊದಿದಾಗಹಸಿರು ಹುಲ್ಲು ಒಣಗಿ ಹೋಗುತ್ತೆ,ಹೂಗಳು ಬಾಡಿಹೋಗುತ್ತೆ.+ ನಿಜ, ಜನ್ರು ಬರೀ ಹಸಿರು ಹುಲ್ಲಿಗೆ ಸಮವಾಗಿದ್ದಾರೆ.   ಹಸಿರು ಹುಲ್ಲು ಒಣಗಿ ಹೋಗುತ್ತೆ,ಹೂಗಳು ಬಾಡಿಹೋಗುತ್ತೆ,ಆದ್ರೆ ನಮ್ಮ ದೇವರ ಮಾತು ಸದಾಕಾಲ ಉಳಿಯುತ್ತೆ.”+   ಚೀಯೋನಿಗೆ ಸಿಹಿಸುದ್ದಿ ತರುತ್ತಿರುವವಳೇ,+ಎತ್ರವಾದ ಬೆಟ್ಟಕ್ಕೆ ಹತ್ತಿಹೋಗು. ಯೆರೂಸಲೇಮಿಗೆ ಸಿಹಿಸುದ್ದಿ ತರುತ್ತಿರುವವಳೇ,ಗಟ್ಟಿಯಾದ ಧ್ವನಿಯಲ್ಲಿ ಕೂಗು. ಹೌದು, ಗಟ್ಟಿಯಾದ ಧ್ವನಿಯಲ್ಲಿ ಕೂಗು, ಹೆದರಬೇಡ. ಯೆಹೂದದ ಪಟ್ಟಣಗಳಿಗೆ “ಇಗೋ ನಿಮ್ಮ ದೇವರು ಇಲ್ಲಿದ್ದಾನೆ” ಅಂತ ಹೇಳು.+ 10  ನೋಡು! ವಿಶ್ವದ ರಾಜ ಯೆಹೋವ ಬರ್ತಾನೆ. ಬಂದು ತನ್ನ ಬಲವನ್ನ ತೋರಿಸ್ತಾನೆ,ಆತನ ಬಲಗೈ* ಆಳ್ವಿಕೆ ನಡೆಸುತ್ತೆ.+ ನೋಡು! ದೇವರು ಕೊಡೋ ಪ್ರತಿಫಲ ದೇವರ ಹತ್ರನೇ ಇದೆ,ಆತನು ಕೊಡೋ ಸಂಬಳ ಆತನ ಮುಂದೆನೇ ಇದೆ.+ 11  ಆತನು ಕುರುಬನ ತರ ತನ್ನ ಹಿಂಡಿನ ಕಾಳಜಿ ವಹಿಸ್ತಾನೆ.*+ ಆತನು ಎಲ್ಲ ಕುರಿಮರಿಗಳನ್ನ ಒಟ್ಟುಗೂಡಿಸಿ,ಅವುಗಳನ್ನ ಎತ್ತಿ ತನ್ನ ಎದೆಗೆ ಅಪ್ಪಿಕೊಳ್ತಾನೆ. ಮರಿ ಹಾಕಿರೋ ಕುರಿಗಳನ್ನ ಮೆಲ್ಲಮೆಲ್ಲನೆ ನಡಿಸ್ತಾನೆ.+ 12  ಸಮುದ್ರದ ನೀರನ್ನೆಲ್ಲ ಯಾರು ತಾನೇ ಕೈಯಿಂದ ಅಳತೆ ಮಾಡಿದ್ದಾರೆ?+ ಆಕಾಶವನ್ನ ಯಾರು ತಾನೇ ಗೇಣಿಂದ* ಅಳೆದಿದ್ದಾರೆ? ಭೂಮಿಯ ಮಣ್ಣನ್ನೆಲ್ಲ ಯಾರು ತಾನೇ ತಮ್ಮ ಮುಷ್ಟಿಯಲ್ಲಿ ಹಿಡ್ಕೊಂಡಿದ್ದಾರೆ?+ ತ್ರಾಸಿನಲ್ಲಿ ಪರ್ವತವನ್ನ, ತಕ್ಕಡಿಯಲ್ಲಿ ಬೆಟ್ಟವನ್ನ ಯಾರು ತಾನೇ ತೂಗಿ ನೋಡಿದ್ದಾರೆ? 13  ಯೆಹೋವನ ಪವಿತ್ರ ಶಕ್ತಿಯನ್ನ ಯಾರು ತಾನೇ ಅಳೆದು ನೋಡಿದ್ದಾರೆ?* ಯಾರು ತಾನೇ ಆತನಿಗೆ ಸಲಹೆ ಕೊಡೋಕೆ ಆಗುತ್ತೆ?+ 14  ತಿಳುವಳಿಕೆಯನ್ನ ಪಡ್ಕೊಳೋಕೆ ಆತನು ಯಾರ ಹತ್ರ ವಿಚಾರಿಸ್ತಾನೆ? ನ್ಯಾಯದ ದಾರಿ ಯಾವುದು ಅಂತ ಆತನಿಗೆ ಯಾರು ಕಲಿಸ್ತಾರೆ? ಆತನಿಗೆ ಯಾರು ಜ್ಞಾನ ಕೊಡ್ತಾರೆ? ನಿಜವಾದ ತಿಳುವಳಿಕೆಯ ದಾರಿಯನ್ನ ಆತನಿಗೆ ಯಾರು ತೋರಿಸ್ತಾರೆ?+ 15  ನೋಡಿ! ಜನಾಂಗಗಳು ಬಕೀಟಿಂದ* ತೊಟ್ಟಿಕ್ಕೋ ತುಂತುರು ಹನಿ ತರ ಇವೆ,ತಕ್ಕಡಿಯ ತಟ್ಟೆಯ ಮೇಲಿರೋ ಧೂಳಿನ ಕಣದ ತರ ಇವೆ.+ ಇಗೋ! ಆತನು ದ್ವೀಪಗಳನ್ನ ಧೂಳಿನ ಕಣಗಳ ತರ ಮೇಲೆತ್ತುತ್ತಾನೆ. 16  ಲೆಬನೋನಿನ ಎಲ್ಲ ಮರಗಳನ್ನ ಒಟ್ಟುಸೇರಿಸಿದ್ರೂ ಯಜ್ಞವೇದಿಗೆ ಸಾಕಷ್ಟು ಕಟ್ಟಿಗೆ ಸಿಗಲ್ಲ,ಅಲ್ಲಿರೋ ಕಾಡು ಪ್ರಾಣಿಗಳು ಸರ್ವಾಂಗಹೋಮ ಬಲಿಗೆ ಸಾಕಾಗಲ್ಲ. 17  ಜನಾಂಗಗಳೆಲ್ಲ ಆತನ ಮುಂದೆ ಅಸ್ತಿತ್ವದಲ್ಲೇ ಇಲ್ವೇನೋ ಅನ್ನೋ ತರ ಇರ್ತವೆ,+ಆತನ ದೃಷ್ಟಿಯಲ್ಲಿ ಅವು ಏನೇನೂ ಅಲ್ಲ, ಬರೀ ಶೂನ್ಯ.+ 18  ನೀವು ದೇವ್ರನ್ನ ಯಾರ ಜೊತೆ ಹೋಲಿಸೋಕಾಗುತ್ತೆ?+ ಯಾವ ವಸ್ತು ತಾನೇ ಆತನ ಹೋಲಿಕೆಯಲ್ಲಿದೆ?+ 19  ಕರಕುಶಲಗಾರ ಒಂದು ಮೂರ್ತಿಯನ್ನ ಕೆತ್ತುತ್ತಾನೆ,*ಲೋಹದ ಕೆಲಸಗಾರ ಅದಕ್ಕೆ ಚಿನ್ನದ ತಗಡನ್ನ ಹೊದಿಸ್ತಾನೆ,+ಆಮೇಲೆ ಅದಕ್ಕಾಗಿ ಬೆಳ್ಳಿಯ ಸರಪಣಿಗಳನ್ನ ಮಾಡ್ತಾನೆ. 20  ಒಬ್ಬ ಮನುಷ್ಯ ಮೂರ್ತಿಯನ್ನ ಮಾಡೋಕೆ ಒಂದು ಮರವನ್ನ,+ಅದ್ರಲ್ಲೂ ಹಾಳಾಗದ ಮರವನ್ನ ಆಯ್ಕೆಮಾಡ್ಕೊಳ್ತಾನೆ. ಆಮೇಲೆ ಉರುಳಿ ಬೀಳದ ಒಂದು ಮೂರ್ತಿಯನ್ನ ಕೆತ್ತಿಸೋಕೆ ಅವನುಒಬ್ಬ ಕರಕುಶಲಗಾರನಿಗಾಗಿ ಹುಡುಕ್ತಾನೆ.+ 21  ಇದು ನಿನಗೆ ಗೊತ್ತಿಲ್ವಾ? ಇದ್ರ ಬಗ್ಗೆ ನೀನು ಕೇಳಿಸ್ಕೊಂಡಿಲ್ವಾ? ಮುಂಚೆನೇ ಇದ್ರ ಬಗ್ಗೆ ನಿನಗೆ ಹೇಳಿರಲಿಲ್ವಾ? ಭೂಮಿಗೆ ಅಡಿಪಾಯ ಹಾಕಿದಾಗಿಂದ ಇದ್ರ ಬಗ್ಗೆ ನಿನಗೆ ತಿಳುವಳಿಕೆ ಇಲ್ವಾ?+ 22  ಭೂಗೋಳದ* ಮೇಲೆ ದೇವರು ವಾಸಿಸ್ತಾನೆ,+ಆತನ ಮುಂದೆ ಭೂಮಿಯಲ್ಲಿ ಇರೋ ಜನ ಮಿಡತೆಗಳ ತರ ಇದ್ದಾರೆ. ಆತನು ಆಕಾಶವನ್ನ ಒಂದು ತೆಳುವಾದ ಬಟ್ಟೆ ತರ ಹಾಸಿ,ವಾಸಿಸೋಕೆ ಒಂದು ಡೇರೆಯನ್ನ ಬಿಚ್ಚಿದ ಹಾಗೆ ಅವುಗಳನ್ನ ಬಿಚ್ಚಿಟ್ಟಿದ್ದಾನೆ.+ 23  ಆತನು ಉನ್ನತ ಅಧಿಕಾರಿಗಳನ್ನ ಕೆಳಗಿಳಿಸ್ತಾನೆ,ಭೂಮಿಯ ನ್ಯಾಯಾಧೀಶರನ್ನ* ನಿಷ್ಪ್ರಯೋಜಕರನ್ನಾಗಿ ಮಾಡ್ತಾನೆ. 24  ಅವರು ಈಗಷ್ಟೆ ನೆಟ್ಟಿರೋ ಗಿಡದ ತರ ಇದ್ದಾರೆ,ಅವ್ರನ್ನ ಈಗಷ್ಟೆ ಬಿತ್ತಲಾಗಿದೆ,ಅವ್ರ ಬೇರು ಭೂಮಿಯೊಳಕ್ಕೆ ಇಳಿಯೋ ಮುಂಚೆನೇಅವ್ರನ್ನ ಊದಲಾಯ್ತು, ಅವರು ಒಣಗಿಹೋದ್ರು. ಗಾಳಿ ಬಂದು ಕೂಳೆಯನ್ನ ತಗೊಂಡು ಹೋಗೋ ತರ ಅವ್ರನ್ನ ತಗೊಂಡು ಹೋಯ್ತು.+ 25  ಪವಿತ್ರ ದೇವರು ಹೀಗೆ ಹೇಳ್ತಿದ್ದಾನೆ “ನೀವು ನನ್ನನ್ನ ಯಾರಿಗೆ ಹೋಲಿಸ್ತೀರ? ನನ್ನನ್ನ ಯಾರಿಗೆ ಸರಿಸಮ ಮಾಡ್ತೀರ? 26  ನಿಮ್ಮ ಕಣ್ಣುಗಳನ್ನ ಮೇಲೆತ್ತಿ, ಆಕಾಶದ ಕಡೆ ನೋಡಿ. ನಕ್ಷತ್ರಗಳನ್ನ ಸೃಷ್ಟಿ ಮಾಡಿದವರು ಯಾರು?+ ಅವುಗಳಲ್ಲಿ ಒಂದೊಂದನ್ನ ಎಣಿಸಿ ಲೆಕ್ಕಮಾಡಿದವನೇ. ಆತನು ಅವುಗಳಲ್ಲಿ ಪ್ರತಿಯೊಂದನ್ನ ಹೆಸರಿಡಿದು ಕರಿತಾನೆ.+ ಆತನ ಅಪಾರ ಶಕ್ತಿಯಿಂದಾಗಿ, ಭಯವಿಸ್ಮಯ ಹುಟ್ಟಿಸೋ ಆತನ ಬಲದಿಂದಾಗಿ,+ಅವುಗಳಲ್ಲಿ ಒಂದೂ ಕಾಣದೆ ಹೋಗಲ್ಲ. 27  ‘ನಾನು ನಡೆಯೋ ದಾರಿ ಯೆಹೋವನಿಗೆ ಮರೆಯಾಗಿದೆ,ದೇವರಿಂದ ನನಗೆ ನ್ಯಾಯ ಸಿಗಲ್ಲ’ ಅಂತಯಾಕೋಬನೇ, ನೀನು ಯಾಕೆ ಹೇಳ್ತೀಯ? ಇಸ್ರಾಯೇಲೇ, ನೀನು ಯಾಕೆ ಘೋಷಿಸ್ತೀಯ?+ 28  ಭೂಮಿ ಮೇಲಿರೋ ಎಲ್ಲವನ್ನ ಸೃಷ್ಟಿಮಾಡಿದ ಯೆಹೋವ ಶಾಶ್ವತವಾಗಿ ದೇವರಾಗಿದ್ದಾನೆ+ ಅಂತ ನಿನಗೆ ಗೊತ್ತಿಲ್ವಾ? ಅದನ್ನ ನೀನು ಕೇಳಿಸ್ಕೊಂಡಿಲ್ವಾ? ಆತನು ಯಾವತ್ತೂ ದಣಿಯಲ್ಲ, ಯಾವತ್ತೂ ಬಳಲಿ ಹೋಗಲ್ಲ.+ ದೇವರಿಗಿರೋ ತಿಳುವಳಿಕೆಯ ಆಳವನ್ನ ಯಾರಿಂದಾನೂ ಅಳೆಯೋಕೆ ಆಗಲ್ಲ.*+ 29  ಬಳಲಿದವನಿಗೆ ಆತನು ಶಕ್ತಿ ಕೊಡ್ತಾನೆ,ನಿರ್ಬಲನಿಗೆ ಆತನು ತುಂಬ ಬಲ ಕೊಡ್ತಾನೆ.+ 30  ಹುಡುಗರು ದಣಿದು ಬಳಲಿ ಹೋಗ್ತಾರೆ,ಯುವಕರು ಎಡವಿ ಬೀಳ್ತಾರೆ. 31  ಆದ್ರೆ ಯೆಹೋವನಲ್ಲಿ ನಿರೀಕ್ಷೆ ಇಡೋರು ಹೊಸಬಲ ಪಡಿತಾರೆ. ಹದ್ದಿನ ತರ ರೆಕ್ಕೆಗಳನ್ನ ಚಾಚಿ ಅವರು ಎತ್ರದಲ್ಲಿ ಹಾರ್ತಾರೆ.+ ಅವರು ಓಡಿದ್ರೂ ದಣಿಯಲ್ಲ,ಅವರು ನಡೆದ್ರೂ ಬಳಲಿ ಹೋಗಲ್ಲ.”+

ಪಾದಟಿಪ್ಪಣಿ

ಅಕ್ಷ. “ಬಾಹು.”
ಅಥವಾ “ಪರಿಪಾಲನೆ ಮಾಡ್ತಾನೆ.”
ಅಂಗೈಯನ್ನ ಅಗಲಮಾಡಿದಾಗ ಹೆಬ್ಬೆರಳಿಂದ ಕಿರುಬೆರಳ ತನಕ ಇರೋ ಅಂತರವನ್ನ ಗೇಣು ಅಂತ ಕರಿತಾರೆ. ಪರಿಶಿಷ್ಟ ಬಿ14 ನೋಡಿ.
ಬಹುಶಃ, “ಗ್ರಹಿಸಿದ್ದಾರೆ.”
ಅಕ್ಷ. “ಕಪಿಲೆ.”
ಅಥವಾ “ಅಚ್ಚಲ್ಲಿ ಹೊಯ್ದು ಮೂರ್ತಿ ಮಾಡ್ತಾನೆ.”
ಅಥವಾ “ವೃತ್ತ, ಮಂಡಲದ.”
ಅಥವಾ “ಅಧಿಕಾರಿಗಳನ್ನ.”
ಅಥವಾ “ಯಾರಿಂದಲೂ ಅರ್ಥ ಮಾಡ್ಕೊಳ್ಳೋಕೆ ಸಾಧ್ಯ ಇಲ್ಲ.”