ಯೆಹೆಜ್ಕೇಲ 10:1-22

  • ಚಕ್ರಗಳ ಮಧ್ಯದಿಂದ ಕೆಂಡಗಳನ್ನ ತಗೊಂಡ (1-8)

  • ಕೆರೂಬಿಯರ ಮತ್ತು ಚಕ್ರಗಳ ವರ್ಣನೆ (9-17)

  • ದೇವರ ಮಹಿಮೆ ಆಲಯವನ್ನ ಬಿಟ್ಟು ಹೋಯ್ತು (18-22)

10  ನಾನು ನೋಡ್ತಿದ್ದಾಗ, ಕೆರೂಬಿಯರ ತಲೆ ಮೇಲೆ ಕಲ್ಲಿನ ನೆಲ ಕಾಣಿಸ್ತು, ಅದ್ರ ಮೇಲೆ ನೀಲಮಣಿಯಿಂದ ಮಾಡಿದ ಏನೋ ಒಂದಿತ್ತು. ಅದು ಸಿಂಹಾಸನದ ತರ ಕಾಣ್ತಿತ್ತು.+  ಆಮೇಲೆ ಆತನು ನಾರುಬಟ್ಟೆ ಹಾಕಿದ್ದ ವ್ಯಕ್ತಿಗೆ+ “ನೀನು ಚಕ್ರಗಳ ಮಧ್ಯ,+ ಕೆರೂಬಿಯರ ಕೆಳಗೆ ಹೋಗು. ಕೆರೂಬಿಯರ ಮಧ್ಯ ಇರೋ ಕೆಂಡಗಳನ್ನ+ ಎರಡೂ ಕೈಗಳಲ್ಲಿ ತುಂಬಿಸ್ಕೊಂಡು ಬಂದು ಪಟ್ಟಣದ ಮೇಲೆ ಎರಚು”+ ಅಂದನು. ಅದೇ ತರ ಅವನು ಹೋಗಿದ್ದನ್ನ ನಾನು ನೋಡಿದೆ.  ಆ ವ್ಯಕ್ತಿ ಒಳಗೆ ಹೋದಾಗ ಕೆರೂಬಿಯರು ದೇವಾಲಯದ ಬಲಗಡೆ ನಿಂತಿದ್ರು. ಒಳಗಿರೋ ಅಂಗಳದಲ್ಲಿ ಮೋಡ ತುಂಬ್ತು.  ಯೆಹೋವನ ಮಹಿಮೆ+ ಕೆರೂಬಿಯರ ಮೇಲಿಂದ ಎದ್ದು ಆಲಯದ ಬಾಗಿಲಿನ ಹೊಸ್ತಿಲಿಗೆ ಹೋಯ್ತು. ದೇವಾಲಯದಲ್ಲಿ ಮೋಡ ನಿಧಾನವಾಗಿ ತುಂಬ್ಕೊಳ್ತು.+ ಅಂಗಳದಲ್ಲೆಲ್ಲ ಯೆಹೋವನ ಮಹಿಮೆಯ ಬೆಳಕು ಆವರಿಸಿತ್ತು.  ಕೆರೂಬಿಯರ ರೆಕ್ಕೆಗಳ ಶಬ್ದ ಎಷ್ಟು ಜೋರಾಗಿತ್ತಂದ್ರೆ ಅದು ಹೊರಗಿನ ಅಂಗಳದ ತನಕ ಕೇಳಿಸ್ತಿತ್ತು, ಅದು ಸರ್ವಶಕ್ತ ದೇವರು ಮಾತಾಡೋ ಶಬ್ದದ ತರ ಇತ್ತು.+  ಆಮೇಲೆ ಆತನು ನಾರುಬಟ್ಟೆ ಹಾಕಿದ್ದ ವ್ಯಕ್ತಿಗೆ “ಚಕ್ರಗಳ ಮಧ್ಯದಿಂದ, ಕೆರೂಬಿಯರ ಮಧ್ಯದಿಂದ ಬೆಂಕಿ ತಗೊ” ಅಂತ ಆಜ್ಞೆ ಕೊಟ್ಟನು. ಆಗ ಅವನು ಹೋಗಿ ಚಕ್ರದ ಪಕ್ಕದಲ್ಲಿ ನಿಂತ.  ಕೆರೂಬಿಯರ ಮಧ್ಯ ಇದ್ದ ಬೆಂಕಿ ಕಡೆ ಒಬ್ಬ ಕೆರೂಬಿ ಕೈಚಾಚಿ ಸ್ವಲ್ಪ ಬೆಂಕಿಯನ್ನ ತಗೊಂಡು,+ ನಾರುಬಟ್ಟೆ ಹಾಕಿದ್ದ ವ್ಯಕ್ತಿಯ+ ಎರಡೂ ಕೈಗಳಲ್ಲಿ ಇಟ್ಟ. ಆ ವ್ಯಕ್ತಿ ಅದನ್ನ ತಗೊಂಡು ಹೊರಗೆ ಹೋದ.  ಆ ಕೆರೂಬಿಯರ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗಳ ತರ ಇದ್ದ ಏನೋ ಒಂದು ನನಗೆ ಕಾಣಿಸ್ತು.+  ನಾನು ಗಮನಿಸ್ತಿದ್ದಾಗ ಕೆರೂಬಿಯರ ಪಕ್ಕ ನಾಲ್ಕು ಚಕ್ರಗಳು ಇರೋದು ಕಾಣಿಸ್ತು. ಒಬ್ಬೊಬ್ಬ ಕೆರೂಬಿಯ ಪಕ್ಕದಲ್ಲಿ ಒಂದೊಂದು ಚಕ್ರ ಇತ್ತು. ಆ ಚಕ್ರಗಳು ಕ್ರಿಸಲೈಟ್‌ ರತ್ನಗಳ ಹಾಗೆ ಪಳಪಳ ಅಂತ ಹೊಳೀತಿತ್ತು.+ 10  ಆ ನಾಲ್ಕು ಚಕ್ರಗಳು ನೋಡೋಕೆ ಒಂದೇ ತರ ಇದ್ವು. ಪ್ರತಿಯೊಂದು ಚಕ್ರಾನೂ, ಒಂದು ಚಕ್ರದೊಳಗೆ ಇನ್ನೊಂದು ಚಕ್ರ ಇರೋ ಹಾಗೆ ಕಾಣ್ತಿತ್ತು. 11  ಅವು ಹೋಗುವಾಗ ನಾಲ್ಕು ದಿಕ್ಕಲ್ಲಿ ಯಾವ ದಿಕ್ಕಿಗೆ ಬೇಕಾದ್ರೂ ಹೋಗೋಕೆ ಆಗ್ತಿತ್ತು, ತಿರುಗೋದೇ ಬೇಕಾಗಿರಲಿಲ್ಲ. ಯಾಕಂದ್ರೆ, ಕೆರೂಬಿಯರ ತಲೆ ಯಾವ ದಿಕ್ಕಿಗೆ ಇತ್ತೋ ಆ ದಿಕ್ಕಿಗೇ ಚಕ್ರಗಳು ಹೋಗ್ತಿದ್ವು, ತಿರುಗ್ತಿರಲಿಲ್ಲ. 12  ಕೆರೂಬಿಯರ ಮೈಮೇಲೆ, ಬೆನ್ನ ಮೇಲೆ, ಕೈ ಮತ್ತು ರೆಕ್ಕೆಗಳ ಮೇಲೆಲ್ಲ ತುಂಬ ಕಣ್ಣುಗಳು ಇದ್ವು. ನಾಲ್ಕೂ ಕೆರೂಬಿಯರ ಪಕ್ಕದಲ್ಲಿದ್ದ ಚಕ್ರಗಳ ಸುತ್ತಾನೂ ತುಂಬ ಕಣ್ಣುಗಳು ಇದ್ವು.+ 13  ಆಮೇಲೆ ಒಂದು ಸ್ವರ “ಚಕ್ರಗಳೇ!” ಅಂತ ಕೂಗಿ ಕರೆದಿದ್ದು ನನಗೆ ಕೇಳಿಸ್ತು. 14  ಪ್ರತಿಯೊಬ್ಬ ಕೆರೂಬಿಗೆ ನಾಲ್ಕು ಮುಖ ಇತ್ತು. ಮೊದಲನೇದು ಕೆರೂಬಿಯ ಮುಖ, ಎರಡನೇದು ಮನುಷ್ಯನ* ಮುಖ, ಮೂರನೇದು ಸಿಂಹದ ಮುಖ, ನಾಲ್ಕನೇದು ಹದ್ದಿನ ಮುಖ.+ 15  ನಾನು ಕೆಬಾರ್‌ ನದಿ+ ಹತ್ರ ನೋಡಿದ ಆ ಜೀವಿಗಳೇ ಈ ಕೆರೂಬಿಯರಾಗಿದ್ರು. ಆ ಕೆರೂಬಿಯರು ಮೇಲೆ ಏಳುವಾಗ 16  ಮತ್ತು ಮುಂದೆ ಹೋಗುವಾಗ ಅವ್ರ ಪಕ್ಕದಲ್ಲಿ ಚಕ್ರಗಳೂ ಹೋಗ್ತಿದ್ವು. ಕೆರೂಬಿಯರು ತಮ್ಮ ರೆಕ್ಕೆಗಳನ್ನ ಮೇಲೆ ಚಾಚಿ ಭೂಮಿಯಿಂದ ಮೇಲೆ ಏಳುವಾಗ ಚಕ್ರಗಳು ಕೆರೂಬಿಯರ ಪಕ್ಕದಿಂದ ದೂರ ಸರೀತಿರಲಿಲ್ಲ, ಬೇರೆ ಕಡೆಗೂ ತಿರುಗ್ತಿರಲಿಲ್ಲ.+ 17  ಆ ಜೀವಿಗಳು ನಿಂತಾಗ ಚಕ್ರಗಳೂ ನಿಲ್ತಿದ್ವು. ಆ ಜೀವಿಗಳು ಭೂಮಿಯಿಂದ ಮೇಲೆ ಎದ್ದಾಗ ಅವುಗಳ ಜೊತೆ ಆ ಚಕ್ರಗಳೂ ಮೇಲೆ ಏಳುತ್ತಿದ್ವು. ಯಾಕಂದ್ರೆ ಆ ಜೀವಿಗಳನ್ನ ಪ್ರೇರಿಸ್ತಿದ್ದ ಪವಿತ್ರಶಕ್ತಿನೇ ಚಕ್ರಗಳಲ್ಲೂ ಇತ್ತು. 18  ಆಮೇಲೆ ಆಲಯದ ಬಾಗಿಲಿನ ಹೊಸ್ತಿಲ ಮೇಲಿದ್ದ ಯೆಹೋವನ ಮಹಿಮೆ+ ಕೆರೂಬಿಯರ ಮೇಲೆ ಹೋಗಿ ನಿಲ್ತು.+ 19  ನಾನು ನೋಡ್ತಿದ್ದಾಗ ಕೆರೂಬಿಯರು ತಮ್ಮ ರೆಕ್ಕೆಗಳನ್ನ ಮೇಲೆ ಚಾಚಿ ಭೂಮಿಯಿಂದ ಮೇಲೆ ಎದ್ದು ಮುಂದೆ ಹೋದ್ರು. ಚಕ್ರಗಳೂ ಅವ್ರ ಪಕ್ಕದಲ್ಲೇ ಇದ್ವು. ಕೆರೂಬಿಯರು ಯೆಹೋವನ ಆಲಯದ ಪೂರ್ವದ ಬಾಗಿಲಲ್ಲಿ ನಿಂತ್ರು ಮತ್ತು ಇಸ್ರಾಯೇಲಿನ ದೇವರ ಮಹಿಮೆ ಅವ್ರ ಮೇಲಿತ್ತು.+ 20  ನಾನು ಕೆಬಾರ್‌ ನದಿ+ ಹತ್ರ ಇಸ್ರಾಯೇಲಿನ ದೇವರ ಸಿಂಹಾಸನದ ಕೆಳಗೆ ನೋಡಿದ ಜೀವಿಗಳು ಇವ್ರೇ. ಹಾಗಾಗಿ ಆ ಜೀವಿಗಳು ಕೆರೂಬಿಯರು ಅಂತ ನನಗೀಗ ಗೊತ್ತಾಯ್ತು. 21  ನಾಲ್ಕೂ ಕೆರೂಬಿಯರಿಗೆ ನಾಲ್ಕು ಮುಖ ಮತ್ತು ನಾಲ್ಕು ರೆಕ್ಕೆ ಇತ್ತು. ಮನುಷ್ಯನ ಕೈಗಳ ತರ ಕಾಣ್ತಿದ್ದ ಏನೋ ಒಂದು ಅವ್ರ ರೆಕ್ಕೆಗಳ ಕೆಳಗಿತ್ತು.+ 22  ಅವ್ರ ಮುಖಗಳು ನಾನು ಕೆಬಾರ್‌ ನದಿ ಹತ್ರ ನೋಡಿದವ್ರ ಮುಖಗಳ ತರಾನೇ ಕಾಣ್ತಿದ್ವು.+ ಪ್ರತಿಯೊಬ್ಬ ಕೆರೂಬಿ ನೇರವಾಗಿ ಮುಂದಕ್ಕೆ ಹೋಗ್ತಿದ್ದ.+

ಪಾದಟಿಪ್ಪಣಿ

ಅಥವಾ “ಗಂಡಸಿನ.”