ಯೆಹೆಜ್ಕೇಲ 13:1-23

  • ಸುಳ್ಳು ಪ್ರವಾದಿಗಳ ವಿರುದ್ಧ ಹೇಳ್ತಿರೋ ಭವಿಷ್ಯ (1-16)

    • ಸುಣ್ಣ ಬಳಿದಿರೋ ಗೋಡೆಗಳು ಬಿದ್ದು ಹೋಗುತ್ತೆ (10-12)

  • ಸುಳ್ಳು ಭವಿಷ್ಯ ಹೇಳೋ ಹೆಂಗಸರ ಭವಿಷ್ಯ (17-23)

13  ಆಮೇಲೆ ಯೆಹೋವ ಮತ್ತೆ ನನಗೆ ಹೀಗಂದನು:  “ಮನುಷ್ಯಕುಮಾರನೇ, ಇಸ್ರಾಯೇಲಿನ ಪ್ರವಾದಿಗಳ ವಿರುದ್ಧ ಭವಿಷ್ಯ ಹೇಳು,+ ಅವ್ರೇ ಕಥೆ ಕಟ್ಕೊಂಡು ಭವಿಷ್ಯ ಹೇಳುವವರಿಗೆ+ ಹೀಗೆ ಹೇಳು: ‘ಯೆಹೋವನ ಮಾತನ್ನ ಕೇಳಿ.  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಯಾವ ದರ್ಶನ ನೋಡದಿದ್ರು ಮನಸ್ಸಿಗೆ ಬಂದ ಹಾಗೆ ಭವಿಷ್ಯ ಹೇಳೋ ಮೂರ್ಖ ಪ್ರವಾದಿಗಳ ಗತಿಯನ್ನ ಏನಂತ ಹೇಳಲಿ!+  ಇಸ್ರಾಯೇಲೇ, ನಿನ್ನ ಪ್ರವಾದಿಗಳು ಹಾಳು ಬಿದ್ದಿರೋ ಪ್ರದೇಶದ ನರಿಗಳ ತರ ಆಗಿದ್ದಾರೆ.  ಪ್ರವಾದಿಗಳೇ, ನೀವು ಕಲ್ಲಿನ ಗೋಡೆಗಳಲ್ಲಿ ಒಡೆದಿರೋ ಭಾಗಗಳನ್ನ ಇಸ್ರಾಯೇಲ್‌ ಜನ್ರಿಗೋಸ್ಕರ ಸರಿಮಾಡೋಕೆ ಅದ್ರ ಹತ್ರ ಹೋಗಲ್ಲ.+ ಹಾಗಾಗಿ ಯೆಹೋವನ ದಿನದಲ್ಲಿ ಆಗೋ ಯುದ್ಧದಲ್ಲಿ ಇಸ್ರಾಯೇಲ್ಯರು ಬದುಕಿ ಉಳಿಯಲ್ಲ.”+  “ಅವರು ನೋಡಿದ ದರ್ಶನಗಳೂ ಸುಳ್ಳು, ಅವರು ಹೇಳಿದ ಭವಿಷ್ಯನೂ ಸುಳ್ಳು. ಯೆಹೋವನಾದ ನಾನು ಅವ್ರನ್ನ ಕಳಿಸಿಲ್ಲಾಂದ್ರೂ ‘ಇದು ಯೆಹೋವ ಹೇಳಿದ ಮಾತು’ ಅಂತ ಅವರು ಹೇಳ್ತಿದ್ದಾರೆ. ಅಷ್ಟೇ ಅಲ್ಲ ಅವರು ಹೇಳಿದ ಭವಿಷ್ಯ ನಿಜ ಆಗೋಕೆ ಕಾಯ್ತಿದ್ದಾರೆ.+  ನಾನು ಏನೂ ಹೇಳಿಲ್ಲ ಅಂದ್ರೂ ‘ಇದು ಯೆಹೋವ ಹೇಳಿದ ಮಾತು’ ಅಂತ ನೀವು ಹೇಳ್ತಾ ಇದ್ದೀರಲ್ಲಾ, ನೀವು ನೋಡಿದ ದರ್ಶನ ಮತ್ತು ಹೇಳಿದ ಭವಿಷ್ಯ ಸುಳ್ಳು ಅಲ್ವಾ?’”  ‘ಹಾಗಾಗಿ ವಿಶ್ವದ ರಾಜ ಯೆಹೋವನು ಹೀಗಂತಾನೆ: “‘ನೀವು ಸುಳ್ಳು ಹೇಳಿದ್ರಿಂದ ಮತ್ತು ನಿಮ್ಮ ದರ್ಶನಗಳು ಸುಳ್ಳಾಗಿದ್ರಿಂದ ನಾನು ನಿಮಗೆ ವಿರುದ್ಧವಾಗಿದ್ದೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”+  ಸುಳ್ಳು ದರ್ಶನಗಳನ್ನ ನೋಡ್ತಿರೋ, ಸುಳ್ಳು ಭವಿಷ್ಯ ಹೇಳ್ತಿರೋ ಪ್ರವಾದಿಗಳ ವಿರುದ್ಧ ನಾನು ಕೈಚಾಚಿ ಅವ್ರನ್ನ ಶಿಕ್ಷಿಸ್ತೀನಿ.+ ಅವರು ನನ್ನ ಸ್ನೇಹಿತರಾಗಿ ಇರಲ್ಲ. ಇಸ್ರಾಯೇಲ್ಯರ ದಾಖಲೆ ಪುಸ್ತಕದಲ್ಲಿ ಅವ್ರ ಹೆಸ್ರೂ ಇರಲ್ಲ. ಅವರು ಇಸ್ರಾಯೇಲಿಗೆ ವಾಪಸ್‌ ಹೋಗೋದೂ ಇಲ್ಲ. ಆಗ, ನಾನೇ ವಿಶ್ವದ ರಾಜ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+ 10  ಶಾಂತಿ ಇಲ್ಲ ಅಂದ್ರೂ “ಶಾಂತಿ ಇದೆ!” ಅಂತ ಹೇಳ್ತಾ ನನ್ನ ಜನ್ರನ್ನ ದಾರಿ ತಪ್ಪಿಸಿದ್ರಿಂದಾನೇ ಇದೆಲ್ಲ ನಡಿಯುತ್ತೆ.+ ಒದ್ದರೆ ಬಿದ್ದುಹೋಗೋ ಗೋಡೆಗೆ ಅವರು ಸುಣ್ಣ ಬಳೀತಿದ್ದಾರೆ.’*+ 11  ಸುಣ್ಣ ಬಳಿಯೋರಿಗೆ ಆ ಗೋಡೆ ಬಿದ್ದು ಹೋಗುತ್ತೆ ಅಂತ ಹೇಳು. ಜೋರಾಗಿ ಸುರಿಯೋ ಮಳೆ, ಆಲಿಕಲ್ಲು ಮತ್ತು ಬೀಸೋ ಬಿರುಗಾಳಿ ಆ ಗೋಡೆಯನ್ನ ಬೀಳಿಸುತ್ತೆ.+ 12  ಗೋಡೆ ಬಿದ್ದಾಗ ‘ನೀವು ಬಳಿದ ಸುಣ್ಣ ಎಲ್ಲಿ ಹೋಯ್ತು?’+ ಅಂತ ಜನ ನಿಮ್ಮನ್ನ ಕೇಳ್ತಾರೆ. 13  ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ತುಂಬ ಕೋಪದಿಂದ ಬಿರುಗಾಳಿಗಳು ಬೀಸೋ ಹಾಗೆ ಮಾಡ್ತೀನಿ. ಸಿಟ್ಟಿಂದ ಧಾರಾಕಾರ ಮಳೆ ಸುರಿಸ್ತೀನಿ. ರೋಷದಿಂದ ಆಲಿಕಲ್ಲುಗಳನ್ನ ಸುರಿಸಿ ಆ ಗೋಡೆಯನ್ನ ನಾಶಮಾಡ್ತೀನಿ. 14  ನೀವು ಸುಣ್ಣ ಬಳಿದ ಗೋಡೆಯನ್ನ ನಾನು ಕೆಡವಿ ನೆಲಸಮ ಮಾಡ್ತೀನಿ. ಆಗ ಅದ್ರ ಅಡಿಪಾಯ ಕಾಣಿಸುತ್ತೆ. ಪಟ್ಟಣ ಬಿದ್ದು ಹೋಗುವಾಗ ನೀವೂ ಅದ್ರ ಜೊತೆ ನಾಶ ಆಗ್ತೀರ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’ 15  ‘ನಾನು ಗೋಡೆ ಮೇಲೆ ಮತ್ತು ಅದಕ್ಕೆ ಸುಣ್ಣ ಬಳಿಯೋರ ಮೇಲೆ ನನ್ನ ಕೋಪಾಗ್ನಿಯನ್ನ ಸುರಿಸಿದ ಮೇಲೆ “ಗೋಡೆನೂ ಇಲ್ಲ, ಅದಕ್ಕೆ ಸುಣ್ಣ ಬಳಿದವ್ರೂ ಇಲ್ಲ.+ 16  ಯೆರೂಸಲೇಮಿನ ಬಗ್ಗೆ ಭವಿಷ್ಯ ಹೇಳ್ತಿದ್ದ ಮತ್ತು ಪಟ್ಟಣದಲ್ಲಿ ಶಾಂತಿ ಇಲ್ಲದಿದ್ರೂ ಶಾಂತಿ ಬರುತ್ತೆ ಅಂತ ದರ್ಶನಗಳನ್ನ ನೋಡ್ತಿದ್ದ ಇಸ್ರಾಯೇಲಿನ ಪ್ರವಾದಿಗಳು ನಾಶ ಆಗಿದ್ದಾರೆ”+ ಅಂತ ಹೇಳ್ತೀನಿ.’ ಇದು ವಿಶ್ವದ ರಾಜ ಯೆಹೋವನ ಮಾತು. 17  ಮನುಷ್ಯಕುಮಾರನೇ, ಈಗ ನೀನು ನಿನ್ನ ಜನ್ರಲ್ಲಿ ಕಥೆ ಕಟ್ಕೊಂಡು ಭವಿಷ್ಯ ಹೇಳೋ ಹೆಂಗಸರ ಕಡೆ ಮುಖಮಾಡಿ ಅವ್ರ ವಿರುದ್ಧ ಭವಿಷ್ಯ ಹೇಳು. 18  ಅವ್ರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಜನ್ರ ಜೀವವನ್ನ ಬೇಟೆ ಆಡೋಕೆ ಅವ್ರೆಲ್ಲರ ಕೈಗಳಿಗೆ ಪಟ್ಟಿಗಳನ್ನ* ಹೊಲಿಯೋ ಮತ್ತು ಒಬ್ಬೊಬ್ಬರ ಎತ್ತರಕ್ಕೆ ತಕ್ಕ ಹಾಗೆ ತಲೆಮುಸುಕುಗಳನ್ನ ಹೊಲಿಯೋ ಸ್ತ್ರೀಯರಿಗೆ ಬರೋ ಗತಿಯನ್ನ ಏನಂತ ಹೇಳಲಿ! ನೀವು ನನ್ನ ಜನ್ರ ಪ್ರಾಣಗಳನ್ನ ಬೇಟೆ ಆಡ್ತಾ ನಿಮ್ಮ ಪ್ರಾಣಗಳನ್ನ ಉಳಿಸ್ಕೊಳ್ಳೋಕೆ ಪ್ರಯತ್ನ ಮಾಡ್ತಿದ್ದೀರಾ? 19  ನಿಮ್ಮ ಸುಳ್ಳುಗಳನ್ನ ಕೇಳೋ ನನ್ನ ಜನ್ರಿಗೆ ಸುಳ್ಳು ಹೇಳಿ ಬದುಕಬೇಕಾದವ್ರನ್ನ ಸಾಯಿಸಿ, ಸಾಯಬೇಕಾದವ್ರನ್ನ ಬದುಕಿಸಿ ನನ್ನ ಹೆಸ್ರು ಹಾಳು ಮಾಡ್ತೀರಾ?+ ಒಂದು ಹಿಡಿ ಬಾರ್ಲಿಗಾಗಿ ಮತ್ತು ತುಂಡು ರೊಟ್ಟಿಗಾಗಿ ನನ್ನ ಜನ್ರ ಮಧ್ಯ ನನಗೆ ಅವಮಾನ ಮಾಡ್ತೀರಾ?”’+ 20  ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಹೆಂಗಸರೇ, ಪಕ್ಷಿಗಳ ತರ ಜನ್ರನ್ನ ಬೇಟೆ ಆಡೋಕೆ ನೀವು ಬಳಸೋ ಪಟ್ಟಿಗಳನ್ನ ನಾನು ದ್ವೇಷಿಸ್ತೀನಿ. ಅವನ್ನ ನಿಮ್ಮ ಕೈಯಿಂದ ಕಿತ್ತು ಹಾಕ್ತೀನಿ ಮತ್ತು ನೀವು ಬೇಟೆ ಆಡ್ತಿರೋ ಪಕ್ಷಿಗಳ ತರ ಇರೋ ಜನ್ರನ್ನ ನಾನು ಬಿಡಿಸ್ತೀನಿ. 21  ನಿಮ್ಮ ಮುಸುಕನ್ನ ಕಿತ್ತು ಎಸಿತೀನಿ ಮತ್ತು ನನ್ನ ಜನ್ರನ್ನ ನಿಮ್ಮ ಕೈಯಿಂದ ಬಿಡಿಸಿ ಕಾಪಾಡ್ತೀನಿ. ಅದಾದ್ಮೇಲೆ ನೀವು ಅವ್ರನ್ನ ಬೇಟೆಯಾಡಿ ಹಿಡಿಯೋಕೆ ಆಗಲ್ಲ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+ 22  ನೀತಿವಂತ ಕಷ್ಟಪಡೋ* ತರ ಮಾಡೋಕೆ ನನಗೆ ಇಷ್ಟ ಇಲ್ಲ ಅಂದ್ರೂ ನೀವು ಸುಳ್ಳು ಹೇಳಿ ಅವನು ಧೈರ್ಯ ಕಳ್ಕೊಳ್ಳೋ ತರ ಮಾಡಿದ್ದೀರ.+ ಕೆಟ್ಟವನಿಗೆ ಕುಮ್ಮಕ್ಕು ಕೊಟ್ಟಿದ್ದೀರ.+ ಹಾಗಾಗಿ ಅವನು ತನ್ನ ಕೆಟ್ಟತನವನ್ನ ಬಿಡಲಿಲ್ಲ. ಇದ್ರಿಂದ ಅವನು ಪ್ರಾಣ ಕಳ್ಕೊಳ್ತಾನೆ.+ 23  ಹಾಗಾಗಿ ಹೆಂಗಸರೇ, ನೀವು ಇನ್ಮುಂದೆ ಸುಳ್ಳು ದರ್ಶನಗಳನ್ನ ನೋಡೋಕೆ, ಕಣಿ ಹೇಳೋಕೆ ಆಗಲ್ಲ.+ ನಾನು ನನ್ನ ಜನ್ರನ್ನ ನಿಮ್ಮ ಕೈಯಿಂದ ಬಿಡಿಸಿ ಕಾಪಾಡ್ತೀನಿ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”

ಪಾದಟಿಪ್ಪಣಿ

ಅಂದ್ರೆ, ಗಟ್ಟಿ ಇಲ್ಲದ ಗೋಡೆ ಕಟ್ಟಿ ಅದು ಗಟ್ಟಿ ಇದೆ ಅನ್ನೋ ತರ ಕಾಣೋಕೆ ಸುಣ್ಣ ಬಳೀತಾರೆ.
ಅಂದ್ರೆ, ಮೊಣಕೈ ಅಥವಾ ಮಣಿಕಟ್ಟಿಗೆ ಸುತ್ತೋ ಮಂತ್ರಿಸಿದ ಪಟ್ಟಿ.
ಅಥವಾ “ನೋವು ಅನುಭವಿಸೋ.”