ಯೆಹೆಜ್ಕೇಲ 2:1-10

  • ಯೆಹೆಜ್ಕೇಲ ಪ್ರವಾದಿಯಾಗಿ ನೇಮಕ (1-10)

    • ‘ಅವರು ಮಾತು ಕೇಳಲಿ ಬಿಡಲಿ’ (5)

    • ಶೋಕಗೀತೆಗಳ ಸುರುಳಿ ಕಾಣಿಸ್ತು (9, 10)

2  ಆತನು ನನಗೆ “ಮನುಷ್ಯಕುಮಾರನೇ,* ಎದ್ದು ನಿಂತ್ಕೊ. ನಾನು ನಿನ್ನ ಜೊತೆ ಮಾತಾಡಬೇಕು”+ ಅಂದನು.  ಆತನು ನನ್ನ ಜೊತೆ ಮಾತಾಡ್ದಾಗ ಪವಿತ್ರಶಕ್ತಿ ನನ್ನೊಳಗೆ ಬಂದು ನಾನು ಎದ್ದು ನಿಲ್ಲೋ ಹಾಗೆ ಮಾಡ್ತು.+ ಹಾಗಾಗಿ ನನಗೆ ಆತನ ಮಾತುಗಳನ್ನ ಕೇಳಿಸ್ಕೊಳ್ಳೋಕೆ ಆಯ್ತು.  ಆತನು ಹೀಗಂದನು: “ಮನುಷ್ಯಕುಮಾರನೇ, ನಾನು ನಿನ್ನನ್ನ ಇಸ್ರಾಯೇಲ್‌ ಜನ್ರ ಹತ್ರ,+ ನನ್ನ ವಿರುದ್ಧ ದಂಗೆ ಎದ್ದಿರೋ ದಂಗೆಕೋರ ಜನಾಂಗಗಳ* ಹತ್ರ ಕಳಿಸ್ತಿದ್ದೀನಿ.+ ಅವರು ಇವತ್ತಿನ ತನಕ ತಮ್ಮ ಪೂರ್ವಜರ ಹಾಗೆ ನನ್ನ ನಿಯಮಗಳನ್ನ ಮುರಿತಾ ಇದ್ದಾರೆ.+  ನನಗೆ ತಿರಿಗಿಬೀಳೋ ಮತ್ತು ಕಲ್ಲೆದೆಯ ಜನ್ರ+ ಹತ್ರ ನಿನ್ನನ್ನ ಕಳಿಸ್ತಿದ್ದೀನಿ. ನೀನು ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ’ ಅಂತ ಹೇಳಬೇಕು.  ಅವರು ನಿನ್ನ ಮಾತನ್ನ ಕೇಳಲಿ ಅಥವಾ ದಂಗೆಕೋರ ಜನ್ರಾಗಿರೋದ್ರಿಂದ+ ನಿನ್ನ ಮಾತನ್ನ ಕೇಳದೆ ಹೋಗಲಿ ತಮ್ಮ ಮಧ್ಯ ಒಬ್ಬ ಪ್ರವಾದಿ ಇದ್ದ ಅನ್ನೋದಂತೂ ನಿಜವಾಗ್ಲೂ ತಿಳ್ಕೊಳ್ತಾರೆ.+  ಆದ್ರೆ ಮನುಷ್ಯಕುಮಾರನೇ, ನೀನು ಅವ್ರಿಗೆ ಭಯಪಡಬೇಡ.+ ನಿನ್ನ ಸುತ್ತ ಮುಳ್ಳುಪೊದೆಗಳು, ಮುಳ್ಳುಗಳು ಇದ್ರೂ*+ ನೀನು ಚೇಳುಗಳ ಮಧ್ಯ ವಾಸಿಸ್ತಿದ್ರೂ ಅವ್ರ ಮಾತುಗಳಿಗೆ ಹೆದರಬೇಡ. ಅವರು ದಂಗೆಕೋರರು. ಅವ್ರ ಮಾತುಗಳಿಗೆ ನೀನು ಭಯಪಡಬೇಡ.+ ಅವ್ರ ಮುಖ ನೋಡಿ ಗಾಬರಿ ಆಗಬೇಡ.+  ಅವರು ಕೇಳಲಿ ಕೇಳದೇ ಇರಲಿ ನೀನು ನನ್ನ ಮಾತುಗಳನ್ನ ಅವ್ರಿಗೆ ಹೇಳಲೇಬೇಕು. ಯಾಕಂದ್ರೆ ಅವರು ದಂಗೆಕೋರರು.+  ಆದ್ರೆ ಮನುಷ್ಯಕುಮಾರನೇ, ನಾನು ಹೇಳೋದನ್ನ ಗಮನಕೊಟ್ಟು ಕೇಳು. ನೀನು ಈ ದಂಗೆಕೋರ ಜನ್ರ ತರ ಆಗಬೇಡ. ನೀನೀಗ ಬಾಯಿ ತೆಗೆದು ನಾನು ಕೊಡೋದನ್ನ ತಿನ್ನು.”+  ಆಗ ನಾನು ಒಂದು ಕೈ ನನ್ನ ಕಡೆ ಚಾಚಿರೋದನ್ನ ನೋಡಿದೆ.+ ಆ ಕೈಯಲ್ಲಿ ಒಂದು ಸುರುಳಿ+ ಇತ್ತು. ಅದ್ರಲ್ಲಿ ಏನೋ ಬರೆದಿತ್ತು. 10  ಆತನು ಆ ಸುರುಳಿಯನ್ನ ನನ್ನ ಮುಂದೆ ಬಿಚ್ಚಿದನು. ಆ ಸುರುಳಿಯ ಎರಡೂ ಕಡೆ ಬರೆದಿತ್ತು.+ ಶೋಕಗೀತೆಗಳು, ಜನ್ರು ಶೋಕಿಸೋ ಹಾಗೆ ಗೋಳಾಡೋ ಹಾಗೆ ಮಾಡೋ ವಿಷ್ಯಗಳು ಅದ್ರಲ್ಲಿ ಬರೆದಿದ್ವು.+

ಪಾದಟಿಪ್ಪಣಿ

“ಮನುಷ್ಯಕುಮಾರ” ಅನ್ನೋ ಪದ ಈ ಪುಸ್ತಕದಲ್ಲಿ 93 ಸಲ ಇದೆ. ಮೊದಲ್ನೇ ಸಲ ಬಂದಿರೋದು ಈ ವಚನದಲ್ಲಿ.
ಇಸ್ರಾಯೇಲ್‌ ಮತ್ತು ಯೆಹೂದದ ಜನ್ರನ್ನ ಸೂಚಿಸ್ತಿರಬೇಕು.
ಬಹುಶಃ, “ಜನ್ರು ಹಠಮಾರಿಗಳಾಗಿದ್ರೂ ನಿನ್ನನ್ನ ಚುಚ್ಚೋ ವಸ್ತುಗಳ ಹಾಗಿದ್ರೂ.”