ಯೆಹೆಜ್ಕೇಲ 25:1-17

  • ಅಮ್ಮೋನಿಯರ ವಿರುದ್ಧ ಭವಿಷ್ಯವಾಣಿ (1-7)

  • ಮೋವಾಬಿನ ವಿರುದ್ಧ ಭವಿಷ್ಯವಾಣಿ (8-11)

  • ಎದೋಮಿನ ವಿರುದ್ಧ ಭವಿಷ್ಯವಾಣಿ (12-14)

  • ಫಿಲಿಷ್ಟಿಯರ ವಿರುದ್ಧ ಭವಿಷ್ಯವಾಣಿ (15-17)

25  ಯೆಹೋವ ಮತ್ತೆ ನನಗೆ ಹೀಗಂದನು:  “ಮನುಷ್ಯಕುಮಾರನೇ, ಅಮ್ಮೋನಿಯರ ಕಡೆ ಮುಖಮಾಡಿ+ ಅವ್ರ ವಿರುದ್ಧ ಭವಿಷ್ಯ ಹೇಳು.+  ನೀನು ಅಮ್ಮೋನಿಯರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವನ ಮಾತು ಕೇಳಿ. ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನ ಆರಾಧನಾ ಸ್ಥಳ ಅಪವಿತ್ರ ಆದಾಗ, ಇಸ್ರಾಯೇಲ್‌ ದೇಶ ಹಾಳಾದಾಗ ಮತ್ತು ಯೆಹೂದದ ಜನ ಕೈದಿಗಳಾಗಿ ಹೋದಾಗ ನೀವು ಅಣಕಿಸ್ತಾ ‘ಹೀಗೇ ಆಗಬೇಕಿತ್ತು!’ ಅಂತ ಹೇಳಿದ್ರಿ.  ಹಾಗಾಗಿ ನಾನು ನಿಮ್ಮನ್ನ ಪೂರ್ವ ದಿಕ್ಕಲ್ಲಿರೋ ಜನ್ರ ಕೈಗೆ ಕೊಡ್ತೀನಿ. ಅವರು ನಿಮ್ಮ ದೇಶದಲ್ಲಿ ಪಾಳೆಯಗಳನ್ನ* ಹಾಕ್ತಾರೆ ಮತ್ತು ಡೇರೆಗಳನ್ನ ಹಾಕೊಳ್ತಾರೆ. ನಿಮ್ಮ ದೇಶದ ಬೆಳೆಯನ್ನ ಅವರು ತಿಂತಾರೆ ಮತ್ತು ನಿಮ್ಮ ದನಕುರಿಗಳ ಹಾಲನ್ನ ಕುಡಿತಾರೆ.  ನಾನು ರಬ್ಬಾ+ ಪಟ್ಟಣವನ್ನ ಒಂಟೆಗಳಿಗೆ ಹುಲ್ಲುಗಾವಲಾಗಿ ಮಾಡ್ತೀನಿ. ಅಮ್ಮೋನಿಯರ ದೇಶವನ್ನ ದನಕುರಿಗಳ ದೊಡ್ಡಿ ಮಾಡ್ತೀನಿ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.”’”  “ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನೀವು ಇಸ್ರಾಯೇಲ್‌ ದೇಶಕ್ಕೆ ಬಂದ ಗತಿಯನ್ನ ನೋಡಿ ಖುಷಿಯಿಂದ ಚಪ್ಪಾಳೆ ಹೊಡೆದು,+ ಕಾಲನ್ನ ನೆಲಕ್ಕೆ ಬಡಿದ್ರಿ. ಸಿಕ್ಕಾಪಟ್ಟೆ ಅಣಕಿಸಿದ್ರಿ.+  ಹಾಗಾಗಿ ನಾನು ನನ್ನ ಕೈಯನ್ನ ಚಾಚಿ ನಿಮ್ಮನ್ನ ಬೇರೆ ಜನಾಂಗಗಳ ವಶಕ್ಕೆ ಕೊಡ್ತೀನಿ. ನಿಮ್ಮ ಹತ್ರ ಇರೋದನ್ನೆಲ್ಲಾ ಅವರು ಲೂಟಿ ಮಾಡ್ತಾರೆ. ನಾನು ನಿಮ್ಮನ್ನ ಜನಾಂಗಗಳ ಪಟ್ಟಿಯಲ್ಲಿ ಇಲ್ಲದ ಹಾಗೆ ಮಾಡಿ ದೇಶಗಳ ಮಧ್ಯದಿಂದ ತೆಗೆದುಬಿಡ್ತೀನಿ.+ ನಿಮ್ಮನ್ನ ನಾಶ ಮಾಡ್ತೀನಿ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’  ವಿಶ್ವದ ರಾಜ ಯೆಹೋವ ಹೀಗಂದನು: ‘ಮೋವಾಬ್‌+ ಮತ್ತು ಸೇಯೀರ್‌+ ಯೆಹೂದದ ಜನ್ರ ಬಗ್ಗೆ “ನೋಡಿ, ಇವರೂ ಬೇರೆ ಜನಾಂಗಗಳ ತರಾನೇ” ಅಂತ ಹೇಳಿವೆ.  ಹಾಗಾಗಿ ನಾನು ಮೋವಾಬಿನ ಗಡಿಯಲ್ಲಿರೋ ಪಟ್ಟಣಗಳ ಜೊತೆಗೆ ಮೋವಾಬಿನ ಸೌಂದರ್ಯ ಆಗಿರೋ* ಬೇತ್‌-ಯೆಷಿಮೋತ್‌, ಬಾಳ್‌-ಮೆಯೋನ್‌ ಮತ್ತು ಕಿರ್ಯಾತಯಿಮ್‌+ ಪಟ್ಟಣಗಳ ಮೇಲೂ ದಾಳಿ ಆಗೋ ಹಾಗೆ ಮಾಡ್ತೀನಿ. 10  ನಾನು ಮೋವಾಬ್ಯರನ್ನ ಮತ್ತು ಅಮ್ಮೋನಿಯರನ್ನ ಪೂರ್ವದಲ್ಲಿ ವಾಸಿಸ್ತಿರೋ ಜನ್ರ ಕೈಗೆ ಕೊಡ್ತೀನಿ.+ ಅದಾದ್ಮೇಲೆ ಅಮ್ಮೋನಿಯರನ್ನ ಯಾವ ಜನಾಂಗಗಳೂ ನೆನಪಿಸ್ಕೊಳ್ಳಲ್ಲ.+ 11  ನಾನು ಮೋವಾಬಿಗೆ ಶಿಕ್ಷೆ ಕೊಡ್ತೀನಿ.+ ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’ 12  ವಿಶ್ವದ ರಾಜ ಯೆಹೋವ ಹೀಗಂದನು: ‘ಎದೋಮ್‌ ಯೆಹೂದದ ಜನ್ರಿಗೆ ಸೇಡು ತೀರಿಸಿದೆ, ಪ್ರತೀಕಾರ ತಗೊಂಡು ದೊಡ್ಡ ಅಪರಾಧವನ್ನ ಮಾಡಿದೆ.+ 13  ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಎದೋಮಿನ ವಿರುದ್ಧ ಕೈಚಾಚಿ ಅದ್ರಲ್ಲಿರೋ ಮನುಷ್ಯರನ್ನೂ ಪ್ರಾಣಿಗಳನ್ನೂ ನಾಶಮಾಡ್ತೀನಿ ಮತ್ತು ಅದು ಹಾಳುಬೀಳೋ ಹಾಗೆ ಮಾಡ್ತೀನಿ.+ ತೇಮಾನಿನಿಂದ ದೆದಾನಿನ ತನಕ ಇರೋ ಜನ್ರೆಲ್ಲ ಕತ್ತಿಯಿಂದ ಸಾಯ್ತಾರೆ.+ 14  ‘ನಾನು ನನ್ನ ಜನ್ರಾದ ಇಸ್ರಾಯೇಲ್ಯರ ಕೈಯಿಂದ ಎದೋಮಿಗೆ ಸೇಡು ತೀರಿಸ್ತೀನಿ.+ ಅವ್ರ ಮೂಲಕ ಎದೋಮಿನ ಮೇಲೆ ನನ್ನ ಕೋಪ, ಕ್ರೋಧವನ್ನ ತೋರಿಸ್ತೀನಿ. ನಾನು ಹೇಗೆ ಸೇಡು ತೀರಿಸ್ತೀನಿ ಅಂತ ಆಗ ಎದೋಮಿಗೆ ಗೊತ್ತಾಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”’ 15  ವಿಶ್ವದ ರಾಜ ಯೆಹೋವ ಹೀಗಂದನು: ‘ಫಿಲಿಷ್ಟಿಯರು ಮುಂಚಿಂದಾನೂ ಇರೋ ದ್ವೇಷದಿಂದ ಇಸ್ರಾಯೇಲ್ಯರಿಗೆ ಸೇಡು ತೀರಿಸಿ ಸರ್ವನಾಶ ಮಾಡಬೇಕು ಅಂತ ಪ್ರಯತ್ನಿಸ್ತಾ ಕೆಟ್ಟ ಬುದ್ಧಿ ತೋರಿಸಿದ್ದಾರೆ.+ 16  ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಫಿಲಿಷ್ಟಿಯರಿಗೆ ಶಿಕ್ಷೆ ಕೊಡ್ತೀನಿ,+ ಕೆರೇತ್ಯರನ್ನ ನಾಶ ಮಾಡ್ತೀನಿ.+ ಸಮುದ್ರ ತೀರದಲ್ಲಿ ವಾಸಿಸೋ ಜನ್ರಲ್ಲಿ ಉಳಿದವ್ರನ್ನ ನಾಶ ಮಾಡ್ತೀನಿ.+ 17  ಹಾಗೇ ಕಠಿಣ ಶಿಕ್ಷೆಗಳನ್ನ ಕೊಟ್ಟು ಭಯಂಕರವಾಗಿ ಸೇಡು ತೀರಿಸ್ತೀನಿ. ನಾನು ಅವ್ರಿಗೆ ಸೇಡು ತೀರಿಸುವಾಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”’”

ಪಾದಟಿಪ್ಪಣಿ

ಅಥವಾ “ಗೋಡೆಯಿಂದ ಸುತ್ತುವರಿದ ಪಾಳೆಯಗಳನ್ನ.”
ಅಥವಾ “ಅಲಂಕಾರವಾಗಿರೋ.”