ಯೆಹೆಜ್ಕೇಲ 27:1-36

  • ತೂರಿನ ಮುಳುಗೋ ಹಡಗಿನ ಬಗ್ಗೆ ಶೋಕಗೀತೆ (1-36)

27  ಯೆಹೋವ ಮತ್ತೆ ನನಗೆ ಹೀಗಂದನು:  “ಮನುಷ್ಯಕುಮಾರನೇ, ನೀನು ತೂರಿನ ಬಗ್ಗೆ ಒಂದು ಶೋಕಗೀತೆ ಹಾಡು.+  ನೀನು ತೂರಿಗೆ ಏನು ಹೇಳಬೇಕಂದ್ರೆ‘ಸಮುದ್ರದ ಬಾಗಿಲ ಹತ್ರ ಇರೋಳೇ,ಎಷ್ಟೋ ದ್ವೀಪಗಳಲ್ಲಿರೋ ಜನಾಂಗಗಳ ಜೊತೆ ವ್ಯಾಪಾರ ಮಾಡೋಳೇ,ವಿಶ್ವದ ರಾಜ ಯೆಹೋವ ಹೀಗಂತಾನೆ: “ತೂರೇ, ನೀನು ನಿನ್ನ ಬಗ್ಗೆ, ‘ನನ್ನ ಸೌಂದರ್ಯಕ್ಕೆ ಸರಿಸಾಟಿ ಇಲ್ಲ’ ಅಂತ ಹೇಳಿದ್ದೀಯ.+   ನಿನ್ನ ಪ್ರದೇಶಗಳು ಸಮುದ್ರದ ಮಧ್ಯ ಇವೆ,ನಿನ್ನನ್ನ ಮಾಡಿದವರು ನಿನ್ನನ್ನ ಸೌಂದರ್ಯದ ಗಣಿಯಾಗಿ ಮಾಡಿದ್ದಾರೆ.   ಹಡಗನ್ನ ಮಾಡೋ ಹಾಗೆ ನಿನ್ನನ್ನ ಮಾಡ್ತಾ ನಿನ್ನ ಹಲಗೆಗಳನ್ನೆಲ್ಲ ಸೆನೀರಿನ ಜುನಿಪರ್‌ ಮರಗಳಿಂದ ಮಾಡಿದ್ರು.+ ಅವರು ನಿನ್ನ ಪಟ ಕಟ್ಟೋ ಕಂಬವನ್ನ ಲೆಬನೋನಿನ ದೇವದಾರು ಮರದಿಂದ ಮಾಡಿದ್ರು.   ಬಾಷಾನಿನ ಓಕ್‌ ಮರಗಳಿಂದ ಹುಟ್ಟು ಹಾಕೋ ಕೋಲುಗಳನ್ನ ಮಾಡಿದ್ರು. ದಂತ ಕೂರಿಸಿರೋ ಶಂಕುಮರದ ಹಲಗೆಗಳನ್ನ ಕಿತ್ತೀಮ್‌+ ದ್ವೀಪಗಳಿಂದ ತರಿಸಿ ನಿನ್ನ ಮುಂಭಾಗವನ್ನ ನಿರ್ಮಿಸಿದ್ರು.   ಈಜಿಪ್ಟಿನ ಬಣ್ಣಬಣ್ಣದ ನಾರುಬಟ್ಟೆಯಿಂದ ನಿನ್ನ ಹಾಯಿಯನ್ನ ಮಾಡಿದ್ರು,ಎಲೀಷಾ+ ದ್ವೀಪಗಳಿಂದ ತರಿಸಿದ ನೀಲಿ ದಾರ ಮತ್ತು ನೇರಳೆ ಬಣ್ಣದ ಉಣ್ಣೆಯಿಂದ ನಿನ್ನ ಅಟ್ಟದ ಚಾವಣಿಗಳನ್ನ ಮಾಡಿದ್ರು.   ಸೀದೋನ್‌ ಮತ್ತು ಅರ್ವಾದಿನ ಜನ+ ನಿನ್ನ ನಾವಿಕರಾಗಿದ್ರು. ತೂರೇ, ನಿನ್ನಲ್ಲಿದ್ದ ನಿಪುಣ ಗಂಡಸರು ನಿನ್ನ ಹಡಗನ್ನ ನಡಿಸ್ತಿದ್ರು.+   ಗೆಬಲಿನ+ ಅನುಭವ ಇರೋ ನಿಪುಣರು ನಿನ್ನ ಹಲಗೆಗಳ ಸಂದಿಗಳನ್ನ ಮುಚ್ಚಿದ್ರು.+ ಸಮುದ್ರದ ಎಲ್ಲ ಹಡಗುಗಳು ಮತ್ತು ಅದ್ರ ನಾವಿಕರು ಸರಕುಗಳನ್ನ ಕೊಂಡ್ಕೊಳ್ಳೋಕೆ, ಮಾರೋಕೆ ನಿನ್ನ ಹತ್ರ ಬಂದ್ರು. 10  ಪರ್ಶಿಯ, ಲೂದ್ಯ ಮತ್ತು ಪೂಟಿನ+ ಗಂಡಸರು ನಿನ್ನ ಸೈನ್ಯದಲ್ಲಿ ವೀರ ಸೈನಿಕರಾಗಿದ್ರು. ಅವರು ತಮ್ಮ ಗುರಾಣಿಗಳನ್ನ, ಶಿರಸ್ತ್ರಾಣಗಳನ್ನ ನಿನ್ನಲ್ಲಿ ನೇತುಹಾಕಿ ನಿನಗೆ ಕಳೆ ತಂದ್ರು. 11  ನಿನ್ನ ಸೈನ್ಯದಲ್ಲಿರೋ ಅರ್ವಾದಿನ ಗಂಡಸರು ನಿನ್ನ ಸುತ್ತ ಇದ್ದ ಗೋಡೆಗಳ ಮೇಲೆ ನಿಂತಿದ್ರು. ಕೆಚ್ಚೆದೆಯ ಗಂಡಸರು ನಿನ್ನ ಗೋಪುರಗಳಲ್ಲಿ ನಿಂತು ಕಾವಲು ಕಾಯ್ತಿದ್ರು. ಅವರು ನಿನ್ನ ಗೋಡೆಗಳ ಸುತ್ತ ವೃತ್ತಾಕಾರದ ಗುರಾಣಿಗಳನ್ನ ನೇತುಹಾಕಿದ್ರು. ಹೀಗೆ ಅವರು ನಿನ್ನನ್ನ ಸೌಂದರ್ಯದ ಗಣಿಯಾಗಿ ಮಾಡಿದ್ರು. 12  ನಿನ್ನ ಹತ್ರ ಜಾಸ್ತಿ ಸಂಪತ್ತು ಇದ್ದಿದ್ರಿಂದ ತಾರ್ಷೀಷ್‌+ ನಿನ್ನ ಜೊತೆ ವ್ಯಾಪಾರ ನಡಿಸ್ತಿತ್ತು.+ ಬೆಳ್ಳಿ, ಕಬ್ಬಿಣ, ತವರ ಮತ್ತು ಸೀಸವನ್ನ ಕೊಟ್ಟು ನಿನ್ನ ಹತ್ರ ಇದ್ದ ಸಾಮಾನುಗಳನ್ನ ಪಡ್ಕೊಳ್ತಿತ್ತು.+ 13  ಯಾವಾನ್‌, ತೂಬಲ್‌+ ಮತ್ತು ಮೇಷೆಕ್‌+ ನಿನ್ನ ಜೊತೆ ವ್ಯಾಪಾರ ನಡಿಸ್ತಿದ್ವು. ದಾಸರನ್ನ+ ಮತ್ತು ತಾಮ್ರದ ಸಾಮಗ್ರಿಗಳನ್ನ ಕೊಟ್ಟು ನಿನ್ನಿಂದ ಸರಕುಗಳನ್ನ ಪಡ್ಕೊಳ್ತಿದ್ವು. 14  ತೋಗರ್ಮನ+ ವಂಶದವರು ಕುದುರೆಗಳನ್ನೂ ಹೇಸರಗತ್ತೆಗಳನ್ನೂ ಕೊಟ್ಟು ನಿನ್ನಿಂದ ಸಾಮಾನುಗಳನ್ನ ಪಡ್ಕೊಳ್ತಿದ್ರು. 15  ದೆದಾನಿನ+ ಜನ ನಿನ್ನ ಜೊತೆ ವ್ಯಾಪಾರ ಮಾಡ್ತಿದ್ರು. ನೀನು ಎಷ್ಟೋ ದ್ವೀಪಗಳಲ್ಲಿ ವ್ಯಾಪಾರಿಗಳನ್ನ ಕೆಲಸಕ್ಕೆ ಇಟ್ಕೊಂಡೆ. ಅವರು ನಿನಗೆ ದಂತಗಳನ್ನೂ+ ಕರೀಮರಗಳನ್ನೂ ಕಪ್ಪವಾಗಿ ಕೊಡ್ತಿದ್ರು. 16  ನಿನ್ನ ಹತ್ರ ತುಂಬ ವಸ್ತುಗಳು ಇದ್ದಿದ್ರಿಂದ ಎದೋಮ್‌ ನಿನ್ನ ಜೊತೆ ವ್ಯಾಪಾರ ಮಾಡ್ತಿತ್ತು. ಅದು ವೈಢೂರ್ಯ, ನೇರಳೆ ಬಣ್ಣದ ಉಣ್ಣೆ, ಬಣ್ಣಬಣ್ಣದ ಕಸೂತಿ ಹಾಕಿರೋ ಬಟ್ಟೆ, ಒಳ್ಳೊಳ್ಳೇ ಬಟ್ಟೆ, ಹವಳ ಮತ್ತು ಮಾಣಿಕ್ಯವನ್ನ ಕೊಟ್ಟು ನಿನ್ನ ಹತ್ರ ಇರೋ ಸರಕುಗಳನ್ನ ತಗೋತಿತ್ತು. 17  ಯೆಹೂದ ಮತ್ತು ಇಸ್ರಾಯೇಲ್‌ ದೇಶ ನಿನ್ನ ಜೊತೆ ವ್ಯಾಪಾರ ಮಾಡ್ತಿತ್ತು. ಅವು ಮಿನ್ನೀತಿನ+ ಗೋದಿಯನ್ನ, ವಿಶೇಷ ಆಹಾರಗಳನ್ನ, ಜೇನು,+ ಎಣ್ಣೆ ಮತ್ತು ಸುಗಂಧ ತೈಲವನ್ನ+ ಕೊಟ್ಟು ನಿನ್ನ ಹತ್ರ ಇದ್ದ ಸಾಮಾನುಗಳನ್ನ ಪಡ್ಕೊಳ್ತಿತ್ತು.+ 18  ನಿನ್ನ ಹತ್ರ ಇರೋ ಇಷ್ಟೊಂದು ವಸ್ತುಗಳನ್ನ, ನಿನ್ನ ಎಲ್ಲ ಸಂಪತ್ತನ್ನ ನೋಡಿ ದಮಸ್ಕ+ ನಿನ್ನ ಜೊತೆ ವ್ಯಾಪಾರ ಮಾಡ್ತಿತ್ತು. ಅದು ಹೆಲ್ಬೋನಿನ ದ್ರಾಕ್ಷಾಮದ್ಯ ಮತ್ತು ಚಾಹರಿನ ಉಣ್ಣೆಯನ್ನ* ಕೊಟ್ಟು ನಿನ್ನಿಂದ ವಸ್ತುಗಳನ್ನ ಪಡ್ಕೊಳ್ತಿತ್ತು. 19  ವೆದಾನ್‌, ಊಜಾಲಿನ ಯಾವಾನ್‌ ನಿನಗೆ ಕಬ್ಬಿಣದ ವಸ್ತುಗಳನ್ನ, ದಾಲ್ಚಿನ್ನಿ ಚಕ್ಕೆ* ಮತ್ತು ಪರಿಮಳ ತುಂಬಿರೋ ಹುಲ್ಲನ್ನ ಕೊಟ್ಟು ನಿನ್ನ ಹತ್ರ ಇರೋ ಸಾಮಗ್ರಿಗಳನ್ನ ಪಡ್ಕೊಳ್ತಿದ್ವು. 20  ದೆದಾನ್‌+ ನಿನ್ನ ಸವಾರಿಗಾಗಿ ತಡಿಬಟ್ಟೆಗಳನ್ನ ಕೊಡ್ತಿತ್ತು. 21  ನೀನು ಕುರಿಮರಿ, ಟಗರು, ಆಡುಗಳ ವ್ಯಾಪಾರಿಗಳಾಗಿದ್ದ ಅರೇಬಿಯರನ್ನ ಮತ್ತು ಕೇದಾರಿನ+ ಎಲ್ಲ ಪ್ರಧಾನರನ್ನ ಕೆಲಸಕ್ಕೆ ಇಟ್ಕೊಂಡೆ.+ 22  ಶೆಬ ಮತ್ತು ರಮ್ಮದ+ ವ್ಯಾಪಾರಿಗಳು ನಿನ್ನ ಜೊತೆ ವ್ಯಾಪಾರ ಮಾಡಿದ್ರು. ಅವರು ಎಲ್ಲ ತರದ ಅತ್ಯುತ್ತಮ ಸುಗಂಧ ದ್ರವ್ಯಗಳನ್ನ, ಅಮೂಲ್ಯ ರತ್ನಗಳನ್ನ ಮತ್ತು ಚಿನ್ನವನ್ನ ಕೊಟ್ಟು ನಿನ್ನ ಸಾಮಗ್ರಿಗಳನ್ನ ಕೊಂಡ್ಕೊಳ್ತಿದ್ರು.+ 23  ಖಾರಾನ್‌,+ ಕನ್ನೆ ಮತ್ತು ಎದೆನ್‌+ ನಿನ್ನ ಜೊತೆ ವ್ಯಾಪಾರ ಮಾಡಿದ್ವು. ಶೆಬ,+ ಅಶ್ಶೂರ್‌,+ ಕಿಲ್ಮದಿನ ವ್ಯಾಪಾರಿಗಳು ನಿನ್ನ ಜೊತೆ ವ್ಯಾಪಾರ ಮಾಡಿದ್ರು. 24  ಅವರು ಚೆನ್ನಾಗಿರೋ ಬಟ್ಟೆಗಳನ್ನ, ನೀಲಿ ಬಟ್ಟೆಯಿಂದ ಮಾಡಿದ ಮತ್ತು ಬಣ್ಣಬಣ್ಣದ ಕಸೂತಿ ಇರೋ ಮೇಲಂಗಿಗಳನ್ನ, ಬೇರೆ ಬೇರೆ ಬಣ್ಣದ ಜಮಖಾನೆಗಳನ್ನ ಹಗ್ಗಗಳಿಂದ ಗಟ್ಟಿಯಾಗಿ ಕಟ್ಟಿ ನಿನ್ನ ಮಾರುಕಟ್ಟೆಯಲ್ಲಿ ಮಾರ್ತಿದ್ರು. 25  ನಿನ್ನ ಸರಕುಗಳಿಗೆ ತಾರ್ಷೀಷಿನ+ ಹಡಗುಗಳೇ ವಾಹನ ಆಗಿದ್ವು,ಹಾಗಾಗಿ ಸಮುದ್ರ ಮಧ್ಯ ನಿನ್ನಲ್ಲಿ ರಾಶಿ ರಾಶಿ ವಸ್ತುಗಳು ಇರ್ತಿದ್ವು.* 26  ನಿನ್ನ ನಾವಿಕರು ನಿನ್ನನ್ನ ಸಮುದ್ರದಲ್ಲಿ ಅಲ್ಲೋಲಕಲ್ಲೋಲ ಆಗಿರೋ ಜಾಗಕ್ಕೆ ಕರ್ಕೊಂಡು ಬಂದಿದ್ದಾರೆ. ಪೂರ್ವದ ಗಾಳಿ ನಿನ್ನನ್ನ ಸಮುದ್ರದ ಮಧ್ಯ ಒಡೆದು ಬಿಟ್ಟಿದೆ. 27  ನೀನು ನಾಶ ಆಗೋ ದಿನದಲ್ಲಿ ನಿನ್ನ ಸಿರಿಸಂಪತ್ತು, ಸಾಮಗ್ರಿಗಳು, ಸರಕುಗಳು, ನಾವಿಕರು,ನಿನ್ನ ಹಲಗೆಗಳ ಸಂದಿಗಳನ್ನ ಮುಚ್ಚೋರು, ಸರಕುಗಳನ್ನ ವ್ಯಾಪಾರ ಮಾಡೋರು,+ ಎಲ್ಲ ವೀರ ಸೈನಿಕರು,+ಹೀಗೆ ನಿನ್ನಲ್ಲಿರೋ ಎಲ್ಲರ ಗುಂಪುಸಮುದ್ರದ ಮಧ್ಯ ಮುಳುಗಿಹೋಗುತ್ತೆ.+ 28  ನಿನ್ನ ನಾವಿಕರ ಕಿರಿಚಾಟಕ್ಕೆ ಕರಾವಳಿ ಪ್ರದೇಶಗಳು ನಡುಗುತ್ತೆ. 29  ಹುಟ್ಟುಹಾಕೋರು, ನಾವಿಕರು, ಹಡಗುಪಡೆಯವರುಅವ್ರ ಹಡಗುಗಳಿಂದ ಇಳಿದು ಬಂದು ನೆಲದ ಮೇಲೆ ನಿಲ್ತಾರೆ. 30  ಅವರು ನಿನಗಾಗಿ ಗಟ್ಟಿಯಾಗಿ ಕೂಗ್ತಾ ಕಿರಿಚ್ತಾರೆ,+ತಲೆ ಮೇಲೆ ಮಣ್ಣು ಸುರ್ಕೊಂಡು ಬೂದಿಯಲ್ಲಿ ಬಿದ್ಕೊಂಡು ಒದ್ದಾಡ್ತಾರೆ. 31  ಅವರು ತಲೆ ಬೋಳಿಸ್ಕೊಂಡು ಗೋಣಿ ಬಟ್ಟೆ ಹಾಕ್ಕೋತಾರೆ,ಬಿಕ್ಕಿಬಿಕ್ಕಿ ಅಳ್ತಾ ನಿನಗಾಗಿ ಗೋಳಾಡ್ತಾರೆ. 32  ಅವರು ಯಾತನೆ ಪಡ್ತಾ ಒಂದು ಶೋಕಗೀತೆಯನ್ನ ಹಾಡ್ತಾ ಹೀಗೆ ಗೋಳಾಡ್ತಾರೆ: ‘ತೂರಿನ ತರ ಯಾರಿದ್ದಾರೆ? ಆದ್ರೆ ಈಗ ಅವಳು ಸಮುದ್ರದ ನಟ್ಟನಡುವೆ ಜಲಸಮಾಧಿ ಆಗಿದ್ದಾಳೆ.+ 33  ವಿಶಾಲ ಸಮುದ್ರದಿಂದ ನಿನ್ನ ಸಾಮಗ್ರಿಗಳು ಬರ್ತಿದ್ದಾಗ ನೀನು ಎಷ್ಟೋ ಜನಾಂಗಗಳಿಗೆ ಖುಷಿ ಕೊಟ್ಟೆ.+ ನಿನ್ನ ಸಂಪತ್ತು ಮತ್ತು ನಿನ್ನ ಸರಕು ಭೂಮಿಯ ರಾಜರನ್ನ ಶ್ರೀಮಂತರಾಗಿ ಮಾಡಿದ್ವು.+ 34  ಆದ್ರೆ ನೀನೀಗ ವಿಶಾಲ ಸಮುದ್ರದಲ್ಲಿ, ಆಳವಾದ ನೀರಲ್ಲಿ ಒಡೆದು ಚೂರುಚೂರಾಗಿದ್ದೀಯ,+ನಿನ್ನ ಜೊತೆ ನಿನ್ನ ಸರಕುಗಳೆಲ್ಲ, ನಿನ್ನ ಜನ್ರೆಲ್ಲ ಮುಳುಗಿ ಸಮುದ್ರ ತಳ ಸೇರಿದ್ದಾರೆ.+ 35  ದ್ವೀಪಗಳ ಜನ್ರೆಲ್ಲ ಕಣ್ಣುಬಾಯಿ ಬಿಟ್ಕೊಂಡು ನಿನ್ನನ್ನ ನೋಡ್ತಾರೆ,+ಅವುಗಳ ರಾಜರು ಭಯದಿಂದ ನಡುಗ್ತಾರೆ,+ ಅವ್ರ ಮುಖ ಭಯದಿಂದ ಬಿಳುಚ್ಕೊಳ್ಳುತ್ತೆ. 36  ಜನಾಂಗಗಳಲ್ಲಿರೋ ವ್ಯಾಪಾರಿಗಳು ನಿನಗೆ ಬಂದ ಗತಿ ನೋಡಿ ಸೀಟಿ ಹೊಡಿತಾರೆ. ನೀನು ದಿಢೀರ್‌ ಅಂತ ಭಯಂಕರವಾಗಿ ನಾಶ ಆಗ್ತೀಯ,ನೀನು ಇಲ್ಲದ ಹಾಗೆ ಅಳಿದು ಹೋಗ್ತೀಯ.’”’”+

ಪಾದಟಿಪ್ಪಣಿ

ಅಥವಾ “ನಸುಗೆಂಪು ಬೂದುಬಣ್ಣ ಮಿಶ್ರಿತ ಉಣ್ಣೆ.”
ಅಕ್ಷ., “ಕ್ಯಾಸಿಯ.” ಪದವಿವರಣೆಯಲ್ಲಿ “ಕ್ಯಾಸಿಯ” ನೋಡಿ.
ಬಹುಶಃ, “ತುಂಬಿ ವೈಭವದಿಂದ ಇದ್ದೆ.”