ಯೆಹೆಜ್ಕೇಲ 29:1-21

  • ಫರೋಹನ ವಿರುದ್ಧ ಭವಿಷ್ಯವಾಣಿ (1-16)

  • ಬಾಬೆಲಿಗೆ ಈಜಿಪ್ಟನ್ನ ಸಂಬಳವಾಗಿ ಕೊಟ್ಟಿದ್ದು (17-21)

29  ಹತ್ತನೇ ವರ್ಷದ* ಹತ್ತನೇ ತಿಂಗಳಿನ 12ನೇ ದಿನ ಯೆಹೋವ ನನಗೆ ಹೀಗಂದನು:  “ಮನುಷ್ಯಕುಮಾರನೇ, ನೀನು ಈಜಿಪ್ಟಿನ ರಾಜ ಫರೋಹನ ಕಡೆ ಮುಖಮಾಡಿ ಅವನ ವಿರುದ್ಧ ಮತ್ತು ಇಡೀ ಈಜಿಪ್ಟಿನ ವಿರುದ್ಧ ಭವಿಷ್ಯ ಹೇಳು.+  ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಈಜಿಪ್ಟಿನ ರಾಜ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೀನಿ.+ ನೈಲ್‌ ನದಿಯ* ತೊರೆಗಳಲ್ಲಿ ಮಲಗಿರೋ ಸಮುದ್ರದ ದೊಡ್ಡ ಪ್ರಾಣಿಯೇ,+‘ನೈಲ್‌ ನದಿ ನಂದು, ನನ್ನ ಸೊತ್ತು. ನಾನದನ್ನ ನನಗೋಸ್ಕರ ಮಾಡ್ಕೊಂಡೆ’ ಅಂತ ಹೇಳಿದೆ.+   ಆದ್ರೆ ನಾನು ನಿನ್ನ ದವಡೆಗಳಿಗೆ ಕೊಕ್ಕೆಗಳನ್ನ ಹಾಕಿ, ಚಿಪ್ಪುಗಳ ತರ ಇರೋ ನಿನ್ನ ಚರ್ಮಕ್ಕೆ ನೈಲ್‌ ನದಿಯ ಮೀನುಗಳು ಅಂಟ್ಕೊಳ್ಳೋ ಹಾಗೆ ಮಾಡ್ತೀನಿ. ನಿನ್ನನ್ನ ನಿನ್ನ ಚರ್ಮಕ್ಕೆ ಅಂಟ್ಕೊಂಡಿರೋ ಎಲ್ಲ ಮೀನುಗಳ ಸಮೇತ ನೈಲ್‌ ನದಿಯಿಂದ ಹೊರಗೆ ಎಳಿತೀನಿ.   ನಾನು ನಿನ್ನನ್ನ ಮತ್ತು ನಿನ್ನ ನೈಲ್‌ ನದಿಯ ಎಲ್ಲ ಮೀನುಗಳನ್ನ ಮರುಭೂಮಿಯಲ್ಲಿ ಹಾಕಿ ಬಿಡ್ತೀನಿ. ನೀನು ಬಟ್ಟಬಯಲಲ್ಲಿ ಬೀಳ್ತಿಯ, ಚೆಲ್ಲಾಪಿಲ್ಲಿಯಾದ ನಿನ್ನ ದೇಹದ ಭಾಗಗಳನ್ನ ಯಾರೂ ಒಟ್ಟುಸೇರಿಸಲ್ಲ, ಹೂಳಿಡೋದೂ ಇಲ್ಲ.+ ನಾನು ನಿನ್ನನ್ನ ಭೂಮಿಯಲ್ಲಿರೋ ಕಾಡುಪ್ರಾಣಿಗಳಿಗೂ ಪಕ್ಷಿಗಳಿಗೂ ಆಹಾರವಾಗಿ ಕೊಡ್ತೀನಿ.+   ಆಗ, ನಾನೇ ಯೆಹೋವ ಅಂತ ಈಜಿಪ್ಟಿನ ಜನ್ರಿಗೆಲ್ಲ ಗೊತ್ತಾಗುತ್ತೆ,ಯಾಕಂದ್ರೆ, ಅವರು ಇಸ್ರಾಯೇಲ್ಯರಿಗೆ ಒಣಗಿದ ಹುಲ್ಲುಕಡ್ಡಿಯ ಆಸರೆ ತರ ಇದ್ದರೇ ವಿನಃ ಯಾವ ಸಹಾಯನೂ ಮಾಡಲಿಲ್ಲ.+   ಇಸ್ರಾಯೇಲ್ಯರು ನಿನ್ನ ಕೈಯನ್ನ ಹಿಡಿದಾಗ ನೀನು ನಜ್ಜುಗುಜ್ಜಾದೆ,ನಿನ್ನಿಂದ ಅವ್ರ ಹೆಗಲಿನ ಚರ್ಮ ಕಿತ್ತು ಬಂತು. ಅವರು ನಿನ್ನ ಮೇಲೆ ಊರಿಕೊಂಡಾಗ ನೀನು ಮುರಿದುಹೋದೆ,ನಿನ್ನಿಂದಾಗಿ ಅವ್ರ ಕಾಲುಗಳು* ಆಕಡೆಯಿಂದ ಈಕಡೆ ತೂರಾಡಿದವು.”+  ಹಾಗಾಗಿ ವಿಶ್ವದ ರಾಜ ಯೆಹೋವ ಹೀಗಂತಾನೆ: “ನಾನೀಗ ನಿನ್ನ ಮೇಲೆ ಕತ್ತಿ ಬೀಸ್ತಿನಿ,+ ನಿನ್ನಲ್ಲಿರೋ ಮನುಷ್ಯರನ್ನೂ ಪ್ರಾಣಿಗಳನ್ನೂ ಸಾಯಿಸ್ತೀನಿ.  ಈಜಿಪ್ಟ್‌ ಜನ್ರಿಲ್ಲದೆ ಹಾಳು ಬೀಳುತ್ತೆ.+ ಆಗ, ನಾನೇ ಯೆಹೋವ ಅಂತ ಈಜಿಪ್ಟಿನ ಜನ್ರಿಗೆ ಗೊತ್ತಾಗುತ್ತೆ. ಯಾಕಂದ್ರೆ ನೀನು ‘ನೈಲ್‌ ನದಿ ನಂದು, ಅದನ್ನ ಮಾಡಿದ್ದು ನಾನೇ’ ಅಂತ ಹೇಳ್ದೆ.+ 10  ಹಾಗಾಗಿ ನಾನು ನಿನಗೂ ನಿನ್ನ ನೈಲ್‌ ನದಿಗೂ ವಿರುದ್ಧವಾಗಿದ್ದೀನಿ. ನಾನು ಈಜಿಪ್ಟನ್ನ ಹಾಳುಮಾಡಿ, ಅದು ಒಣಗಿ ಹೋಗೋ ಹಾಗೆ ಮಾಡ್ತೀನಿ.+ ಮಿಗ್ದೋಲಿಂದ+ ಹಿಡಿದು ಸೆವೇನೆಯ+ ತನಕ, ಇಥಿಯೋಪ್ಯದ ಗಡಿ ತನಕ ಇಡೀ ಈಜಿಪ್ಟನ್ನ ಜನ್ರಿಲ್ಲದ ಬಂಜರು ಭೂಮಿಯಾಗಿ ಮಾಡ್ತೀನಿ. 11  ಅಲ್ಲಿ ಯಾವ ಮನುಷ್ಯನೂ ಹೆಜ್ಜೆ ಇಡಲ್ಲ, ಯಾವ ಪ್ರಾಣಿನೂ ಆ ಕಡೆಯಿಂದ ಹೋಗಲ್ಲ.+ 40 ವರ್ಷ ಆ ದೇಶದಲ್ಲಿ ಯಾರೂ ಯಾವುದೂ ವಾಸಿಸಲ್ಲ. 12  ನಾನು ಈಜಿಪ್ಟನ್ನ ಯಾವ ಸ್ಥಿತಿಗೆ ತರ್ತಿನಿ ಅಂದ್ರೆ ಅದ್ರಷ್ಟು ಹಾಳುಬಿದ್ದಿರೋ ದೇಶ ಇನ್ನೊಂದು ಇರಲ್ಲ, ಅದ್ರ ಪಟ್ಟಣಗಳಷ್ಟು ಹಾಳುಬಿದ್ದಿರೋ ಪಟ್ಟಣ ಬೇರೆ ಯಾವುದೂ ಇರಲ್ಲ. 40 ವರ್ಷ ಅದು ಹಾಗೇ ಇರುತ್ತೆ.+ ನಾನು ಈಜಿಪ್ಟಿನ ಜನ್ರನ್ನ ಬೇರೆ ಜನಾಂಗಗಳಲ್ಲಿ ಚೆಲ್ಲಾಪಿಲ್ಲಿ ಮಾಡಿ, ಬೇರೆ ದೇಶಗಳಿಗೆ ಓಡಿಸಿಬಿಡ್ತೀನಿ.”+ 13  ವಿಶ್ವದ ರಾಜ ಯೆಹೋವ ಹೀಗಂತಾನೆ: “ನಾನು ಬೇರೆ ಜನಾಂಗಗಳಿಗೆ ಚೆಲ್ಲಾಪಿಲ್ಲಿ ಮಾಡಿದ ಈಜಿಪ್ಟಿನ ಜನ್ರನ್ನ 40 ವರ್ಷ ಆದ್ಮೇಲೆ ಒಟ್ಟುಸೇರಿಸ್ತಿನಿ.+ 14  ಕೈದಿಗಳಾಗಿ ಹೋದ ಈಜಿಪ್ಟಿನ ಜನ್ರನ್ನ ಮತ್ತೆ ಅವರು ಹುಟ್ಟಿದ ಜಾಗ ಪತ್ರೋಸ್‌ಗೆ+ ಕರ್ಕೊಂಡು ಬರ್ತಿನಿ. ಅಲ್ಲಿ ಅವರು ಒಂದು ಚಿಕ್ಕ ರಾಜ್ಯ ಆಗ್ತಾರೆ. 15  ಈಜಿಪ್ಟ್‌ ಬೇರೆ ರಾಜ್ಯಗಳಿಗಿಂತ ಚಿಕ್ಕ ರಾಜ್ಯ ಆಗುತ್ತೆ. ಆಮೇಲೆ ಅದು ಬೇರೆ ಜನಾಂಗಗಳ ಮೇಲೆ ಅಧಿಕಾರ ನಡಿಸಲ್ಲ.+ ನಾನು ಅದನ್ನ ಎಷ್ಟು ಚಿಕ್ಕ ರಾಜ್ಯವಾಗಿ ಮಾಡ್ತೀನಿ ಅಂದ್ರೆ ಬೇರೆ ಜನಾಂಗಗಳನ್ನ ಸೋಲಿಸೋಕೆ ಅದಕ್ಕೆ ಆಗಲ್ಲ.+ 16  ಇಸ್ರಾಯೇಲ್ಯರು ಇನ್ಯಾವತ್ತೂ ಈಜಿಪ್ಟ್‌ ಮೇಲೆ ಭರವಸೆ ಇಡಲ್ಲ.+ ಈಜಿಪ್ಟನ್ನ ನೋಡುವಾಗೆಲ್ಲ, ತಾವು ಸಹಾಯಕ್ಕಾಗಿ ಅವ್ರನ್ನ ಕೇಳ್ಕೊಂಡು ಹೋಗಿದ್ದು ಎಷ್ಟು ದೊಡ್ಡ ತಪ್ಪು ಅಂತ ಅವ್ರಿಗೆ ನೆನಪಾಗುತ್ತೆ. ಆಗ, ನಾನೇ ವಿಶ್ವದ ರಾಜ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”’” 17  ಇಪ್ಪತ್ತೇಳನೇ ವರ್ಷದ* ಮೊದಲನೇ ತಿಂಗಳ ಮೊದಲನೇ ದಿನದಂದು ಯೆಹೋವ ನನಗೆ ಹೀಗಂದನು: 18  “ಮನುಷ್ಯಕುಮಾರನೇ, ಬಾಬೆಲಿನ ರಾಜ ನೆಬೂಕದ್ನೆಚ್ಚರ*+ ತೂರಿನ ಮೇಲೆ ದಾಳಿ ಮಾಡುವಾಗ ತನ್ನ ಸೈನಿಕರನ್ನ ತುಂಬ ದುಡಿಸಿದ.+ ಎಷ್ಟರ ಮಟ್ಟಿಗೆ ಅಂದ್ರೆ ಅವ್ರೆಲ್ಲರ ತಲೆ ಬೋಳಾಯ್ತು. ಎಲ್ಲರ ಹೆಗಲ ಚರ್ಮ ಕಿತ್ಕೊಂಡು ಬಂತು. ಆದ್ರೆ ತೂರನ್ನ ಸೋಲಿಸೋಕೆ ಅವನು ಮತ್ತು ಅವನ ಸೈನಿಕರು ಪಟ್ಟ ಕಷ್ಟಕ್ಕೆ ಅವ್ರಿಗೆ ಯಾವ ಸಂಬಳಾನೂ ಸಿಗಲಿಲ್ಲ. 19  ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಬಾಬೆಲಿನ ರಾಜ ನೆಬೂಕದ್ನೆಚ್ಚರನಿಗೆ* ಈಜಿಪ್ಟನ್ನ ಕೊಡ್ತೀನಿ.+ ಅವನು ಆ ದೇಶದ ಸಿರಿಸಂಪತ್ತನ್ನ ಬಾಚ್ಕೊಂಡು ಹೋಗ್ತಾನೆ, ಅಲ್ಲಿರೋದನ್ನೆಲ್ಲ ಲೂಟಿ ಮಾಡ್ತಾನೆ. ಅದೇ ಅವನ ಸೈನಿಕರಿಗೆ ಸಿಗೋ ಸಂಬಳ. 20  ಅವನು ತೂರಿನ ವಿರುದ್ಧ ಹೋರಾಡೋಕೆ ಪಟ್ಟ ಪರಿಶ್ರಮಕ್ಕೆ ಸಂಬಳವಾಗಿ ನಾನು ಅವನಿಗೆ ಈಜಿಪ್ಟನ್ನ ಕೊಡ್ತೀನಿ. ಯಾಕಂದ್ರೆ ಅವನು ಮತ್ತು ಅವನ ಸೈನಿಕರು ನನಗೋಸ್ಕರ ಕೆಲಸ ಮಾಡಿದ್ರು’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 21  ನಾನು ಆ ದಿನದಲ್ಲಿ ಇಸ್ರಾಯೇಲ್ಯರಿಗಾಗಿ ಒಂದು ಕೊಂಬು ಮೊಳಕೆ ಒಡೆಯೋ ತರ ಮಾಡ್ತೀನಿ.*+ ಅಷ್ಟೇ ಅಲ್ಲ, ನೀನು ಅವ್ರ ಮಧ್ಯ ಇದ್ದು ಮಾತಾಡೋಕೆ ನಿನಗೊಂದು ಅವಕಾಶ ಕೊಡ್ತೀನಿ. ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”

ಪಾದಟಿಪ್ಪಣಿ

ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ 10ನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಇಲ್ಲಿ ಮತ್ತು ಮುಂದಿನ ವಚನಗಳಲ್ಲಿ “ನೈಲ್‌ ನದಿ” ಅನ್ನೋದು ಅದರ ಕಾಲುವೆಗಳನ್ನೂ ಸೂಚಿಸುತ್ತೆ.
ಅಕ್ಷ. “ಸೊಂಟ.”
ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ 27ನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಥವಾ “ಇಸ್ರಾಯೇಲ್ಯರಿಗೆ ಬಲ ಕೊಡ್ತೀನಿ.”