ಯೆಹೆಜ್ಕೇಲ 40:1-49

  • ದರ್ಶನದಲ್ಲಿ ಯೆಹೆಜ್ಕೇಲನನ್ನ ಇಸ್ರಾಯೇಲಿಗೆ ಕರ್ಕೊಂಡು ಹೋಗಿದ್ದು (1, 2)

  • ದರ್ಶನದಲ್ಲಿ ಯೆಹೆಜ್ಕೇಲ ಆಲಯ ನೋಡಿದ (3, 4)

  • ಅಂಗಳಗಳು, ಬಾಗಿಲುಗಳು (5-47)

    • ಹೊರಗಿನ ಪೂರ್ವ ಬಾಗಿಲು (6-16)

    • ಹೊರಗಿನ ಅಂಗಳ, ಬೇರೆ ಬಾಗಿಲುಗಳು (17-26)

    • ಒಳಗಿನ ಅಂಗಳ ಮತ್ತು ಬಾಗಿಲುಗಳು (27-37)

    • ದೇವಾಲಯದ ಸೇವೆಗಾಗಿ ಕೋಣೆಗಳು (38-46)

    • ಯಜ್ಞವೇದಿ (47)

  • ದೇವಾಲಯದ ಮಂಟಪ (48, 49)

40  ಅದು ನಾವು ಕೈದಿಗಳಾಗಿ ಹೋದ 25ನೇ ವರ್ಷ+ ಅಂದ್ರೆ ಯೆರೂಸಲೇಮ್‌ ಪಟ್ಟಣ ಶತ್ರುಗಳ ವಶವಾದ 14ನೇ ವರ್ಷ. ಆ ವರ್ಷದ ಮೊದಲ್ನೇ ತಿಂಗಳಿನ ಹತ್ತನೇ ದಿನ+ ಯೆಹೋವನ ಪವಿತ್ರಶಕ್ತಿ ನನ್ನ ಮೇಲೆ ಬಂತು. ಆತನು ನನ್ನನ್ನ ಪಟ್ಟಣಕ್ಕೆ ಕರ್ಕೊಂಡು ಹೋದನು.+  ದೇವರು ನನಗೆ ದರ್ಶನಗಳನ್ನ ತೋರಿಸ್ತಾ ಇಸ್ರಾಯೇಲ್‌ ದೇಶಕ್ಕೆ ಕರ್ಕೊಂಡು ಹೋಗಿ ಅತೀ ಎತ್ತರದ ಒಂದು ಬೆಟ್ಟದ ಮೇಲೆ ಇಟ್ಟನು.+ ಆ ಬೆಟ್ಟದ ಮೇಲೆ ದಕ್ಷಿಣಕ್ಕೆ ಪಟ್ಟಣದ ತರ ಇದ್ದ ಏನೋ ಕಾಣಿಸ್ತು.  ಆತನು ನನ್ನನ್ನ ಅಲ್ಲಿಗೆ ಕರ್ಕೊಂಡು ಬಂದಾಗ ನಾನಲ್ಲಿ ಒಬ್ಬ ಪುರುಷನನ್ನ ನೋಡಿದೆ. ಅವನು ತಾಮ್ರದ ತರ ಹೊಳಿತಿದ್ದ.+ ಅವನ ಕೈಯಲ್ಲಿ ಅಗಸೆಯ ಒಂದು ಹಗ್ಗ ಮತ್ತು ಒಂದು ಅಳತೆ ಕೋಲು* ಇತ್ತು.+ ಅವನು ಬಾಗಿಲಲ್ಲಿ ನಿಂತಿದ್ದ.  ಅವನು ನನಗೆ “ಮನುಷ್ಯಕುಮಾರನೇ, ನಾನು ನಿನಗೆ ತೋರಿಸೋದನ್ನೆಲ್ಲ ಗಮನಕೊಟ್ಟು ನೋಡು, ನಾನು ಹೇಳೋದನ್ನ ಕೇಳಿಸ್ಕೊ. ನಿನ್ನನ್ನ ಇಲ್ಲಿ ಕರ್ಕೊಂಡು ಬಂದಿರೋದು ಅದಕ್ಕೇ. ನೀನು ಏನೇನು ನೋಡ್ತಿಯೋ ಅದನ್ನೆಲ್ಲ ಇಸ್ರಾಯೇಲ್ಯರಿಗೆ ಹೇಳು”+ ಅಂದ.  ದೇವಾಲಯದ* ಹೊರಗೆ ಸುತ್ತ ಒಂದು ಗೋಡೆ ಇರೋದನ್ನ ನಾನು ನೋಡ್ದೆ. ಆ ಪುರುಷನ ಕೈಯಲ್ಲಿದ್ದ ಅಳತೆ ಕೋಲು ಆರು ಮೊಳ ಉದ್ದ ಇತ್ತು. (ಇಲ್ಲಿ ಹೇಳಿರೋ ಮೊಳಕ್ಕೆ ಒಂದು ಕೈಯಗಲ ಜಾಸ್ತಿ ಸೇರಿಸಲಾಗಿತ್ತು.)* ಅವನು ಗೋಡೆಯನ್ನ ಅಳತೆ ಮಾಡೋಕೆ ಶುರುಮಾಡಿದ. ಆ ಗೋಡೆಯ ದಪ್ಪ ಮತ್ತು ಎತ್ತರ ಒಂದು ಅಳತೆ ಕೋಲಿನಷ್ಟಿತ್ತು.  ಆಮೇಲೆ ಅವನು ಪೂರ್ವಕ್ಕೆ ಮುಖ ಮಾಡಿದ್ದ ಬಾಗಿಲಿಗೆ ಬಂದು+ ಅದ್ರ ಮೆಟ್ಟಿಲು ಹತ್ತಿದ. ಆ ಬಾಗಿಲ ಹೊಸ್ತಿಲನ್ನ ಅಳತೆ ಮಾಡಿದ. ಅದ್ರ ಅಗಲ ಒಂದು ಅಳತೆ ಕೋಲಿನಷ್ಟಿತ್ತು. ಇನ್ನೊಂದು ಹೊಸ್ತಿಲ ಅಗಲನೂ ಅಷ್ಟೇ ಇತ್ತು.  ಅಲ್ಲಿದ್ದ ಬಾಗಿಲು ಕಾಯುವವ್ರ ಪ್ರತಿಯೊಂದು ಕೋಣೆಯ ಉದ್ದ ಮತ್ತು ಅಗಲ ಒಂದು ಅಳತೆ ಕೋಲಿನಷ್ಟಿತ್ತು. ಬಾಗಿಲು ಕಾಯುವವ್ರ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಐದು ಮೊಳ ಅಂತರ ಇತ್ತು.+ ದೇವಾಲಯಕ್ಕೆ ಮುಖಮಾಡಿದ್ದ ದ್ವಾರಮಂಟಪದ ಪಕ್ಕದಲ್ಲಿದ್ದ ಬಾಗಿಲ ಹೊಸ್ತಿಲಿನ ಅಳತೆ ಒಂದು ಅಳತೆ ಕೋಲಿನಷ್ಟಿತ್ತು.  ದೇವಾಲಯಕ್ಕೆ ಮುಖ ಮಾಡಿದ್ದ ದ್ವಾರಮಂಟಪವನ್ನ ಅವನು ಅಳತೆ ಮಾಡಿದ. ಅದ್ರ ಅಳತೆ ಒಂದು ಅಳತೆ ಕೋಲಿನಷ್ಟಿತ್ತು.  ಅವನು ದ್ವಾರಮಂಟಪವನ್ನ ಅಳತೆ ಮಾಡಿದ. ಅದು ಎಂಟು ಮೊಳ ಇತ್ತು. ಅದ್ರ ಎರಡೂ ಪಕ್ಕದಲ್ಲಿದ್ದ ಕಂಬಗಳನ್ನ ಅವನು ಅಳತೆ ಮಾಡಿದ. ಅವು ಎರಡು ಮೊಳ ಇದ್ವು. ದ್ವಾರಮಂಟಪ ದೇವಾಲಯಕ್ಕೆ ಮುಖ ಮಾಡಿತ್ತು. 10  ಪೂರ್ವ ಬಾಗಿಲಿನ ಅಕ್ಕಪಕ್ಕ ಬಾಗಿಲು ಕಾಯುವವ್ರ ಮೂರು ಕೋಣೆಗಳಿದ್ವು. ಅವುಗಳ ಅಳತೆ ಒಂದೇ ಆಗಿತ್ತು. ಅದ್ರ ಪಕ್ಕದಲ್ಲಿದ್ದ ಕಂಬಗಳ ಅಳತೆನೂ ಒಂದೇ ಆಗಿತ್ತು. 11  ಆಮೇಲೆ ಅವನು ಬಾಗಿಲನ್ನ ಅಳತೆ ಮಾಡಿದ. ಅದ್ರ ಅಗಲ 10 ಮೊಳ. ಉದ್ದ 13 ಮೊಳ ಇತ್ತು. 12  ಎರಡೂ ಕಡೆ ಇದ್ದ ಬಾಗಿಲು ಕಾಯುವವ್ರ ಕೋಣೆಗಳ ಮುಂದೆ ಸ್ವಲ್ಪ ಖಾಲಿ ಜಾಗ ಇತ್ತು. ಅದನ್ನ ತಗ್ಗುಗೋಡೆ ಕಟ್ಟಿ ಮುಚ್ಚಲಾಗಿತ್ತು. ಆ ಜಾಗದ ಅಳತೆ ಒಂದು ಮೊಳ ಇತ್ತು. ಆ ಕೋಣೆಗಳ ಅಳತೆ ಆರು ಮೊಳ ಇತ್ತು. 13  ಆಮೇಲೆ ಅವನು ಬಾಗಿಲ ಅಗಲವನ್ನ ಅಳತೆ ಮಾಡೋಕೆ ಬಾಗಿಲು ಕಾಯುವವ್ರ ಒಂದು ಕಡೆಯಿದ್ದ ಕೋಣೆಯ ಚಾವಣಿಯಿಂದ* ಇನ್ನೊಂದು ಕಡೆಯಿದ್ದ ಕೋಣೆಯ ಚಾವಣಿ ತನಕ ಅಳತೆ ಮಾಡಿದ. ಅದು 25 ಮೊಳ ಅಗಲ ಇತ್ತು. ಒಂದು ಕಡೆಯಿದ್ದ ಬಾಗಿಲು ಕಾಯುವವ್ರ ಕೋಣೆಗಳು ಮತ್ತು ಇನ್ನೊಂದು ಕಡೆಯಿದ್ದ ಬಾಗಿಲು ಕಾಯುವವ್ರ ಕೋಣೆಗಳು ಎದುರುಬದುರಾಗಿ ಇದ್ವು.+ 14  ಆಮೇಲೆ ಅವನು ಎರಡೂ ಕಡೆಯಿದ್ದ ಕಂಬಗಳನ್ನ ಅಳತೆ ಮಾಡಿದ. ಅಷ್ಟೇ ಅಲ್ಲ ಅಂಗಳದ ಸುತ್ತ ಇದ್ದ ಬೇರೆಲ್ಲ ಬಾಗಿಲುಗಳ ಎರಡು ಕಡೆಯಿದ್ದ ಕಂಬಗಳನ್ನ ಅಳತೆ ಮಾಡಿದ. ಆ ಕಂಬಗಳು 60 ಮೊಳ ಎತ್ತರ ಇದ್ವು. 15  ಬಾಗಿಲ ಮುಂಭಾಗದಿಂದ ಒಳಗಿನ ದ್ವಾರಮಂಟಪದ ಮುಂಭಾಗದ ತನಕ 50 ಮೊಳ ಇತ್ತು. 16  ಬಾಗಿಲ ಒಳಗೆ ಎರಡೂ ಕಡೆಯಿದ್ದ ಬಾಗಿಲು ಕಾಯುವವ್ರ ಕೋಣೆಗಳಿಗೆ ಮತ್ತು ಅದ್ರ ಪಕ್ಕದಲ್ಲಿದ್ದ ಕಂಬಗಳಿಗೆ ಕಿಟಕಿಗಳಿದ್ವು.* ಅವು ಒಳಗೆ ಅಗಲವಾಗಿ ಹೊರಗೆ ಚಿಕ್ಕದಾಗಿ ಇದ್ವು.+ ಮಂಟಪಗಳ ಒಳಗೆ ಎಲ್ಲ ಕಡೆನೂ ಕಿಟಕಿಗಳು ಇದ್ವು. ಪಕ್ಕದಲ್ಲಿದ್ದ ಕಂಬಗಳ ಮೇಲೆ ಖರ್ಜೂರ ಮರದ ಚಿತ್ರಗಳಿದ್ವು.+ 17  ಆಮೇಲೆ ಆ ಪುರುಷ ನನ್ನನ್ನ ಹೊರಗಿನ ಅಂಗಳಕ್ಕೆ ಕರ್ಕೊಂಡು ಬಂದ. ಅಲ್ಲಿ ನಾನು ಊಟದ ಕೋಣೆಗಳನ್ನ ನೋಡಿದೆ*+ ಮತ್ತು ಅಂಗಳದ ಸುತ್ತ ಕಲ್ಲಿನ ನೆಲ ಇರೋದನ್ನ ನೋಡ್ದೆ. ಆ ನೆಲದ ಮೇಲೆ 30 ಊಟದ ಕೋಣೆಗಳು ಇದ್ವು. 18  ಬಾಗಿಲುಗಳ ಪಕ್ಕದಲ್ಲಿದ್ದ ಕಲ್ಲಿನ ನೆಲದ ಅಗಲ ಬಾಗಿಲುಗಳ ಉದ್ದಕ್ಕೆ ಸಮವಾಗಿತ್ತು. ಈ ನೆಲ ಒಳಗಿನ ಅಂಗಳಕ್ಕಿಂತ ತಗ್ಗಾಗಿತ್ತು. 19  ಆಮೇಲೆ ಅವನು ಕೆಳಗಿನ ಬಾಗಿಲ ಮುಂಭಾಗದಿಂದ ಒಳಗಿನ ಅಂಗಳದ ಅಂಚಿನ ತನಕ ಅಳತೆ ಮಾಡಿದ. ಪೂರ್ವದಲ್ಲೂ ಉತ್ತರದಲ್ಲೂ ಅದು 100 ಮೊಳ ಇತ್ತು. 20  ಹೊರಗಿನ ಅಂಗಳಕ್ಕೆ ಉತ್ತರದ ಕಡೆಗೆ ಮುಖ ಮಾಡಿರೋ ಒಂದು ಬಾಗಿಲಿತ್ತು. ಅವನು ಅದ್ರ ಉದ್ದ-ಅಗಲವನ್ನೂ ಅಳೆದ. 21  ಎರಡೂ ಕಡೆ ಬಾಗಿಲು ಕಾಯುವವ್ರ ಮೂರು ಮೂರು ಕೋಣೆಗಳಿದ್ವು. ಆ ಬಾಗಿಲ ಪಕ್ಕದಲ್ಲಿದ್ದ ಕಂಬಗಳ ಅಳತೆ ಮತ್ತು ಮಂಟಪದ ಅಳತೆ ಮೊದಲ್ನೇ ಬಾಗಿಲ ಪಕ್ಕದಲ್ಲಿದ್ದ ಕಂಬಗಳ ಅಳತೆ ಮತ್ತು ಮಂಟಪದ ಅಳತೆಯಷ್ಟೇ ಇತ್ತು. ಅದು 50 ಮೊಳ ಉದ್ದ 25 ಮೊಳ ಅಗಲ ಇತ್ತು. 22  ಅದ್ರ ಕಿಟಕಿಗಳು, ಮಂಟಪ, ಖರ್ಜೂರ ಮರದ ಚಿತ್ರಗಳ+ ಅಳತೆ ಪೂರ್ವದ ಬಾಗಿಲಲ್ಲಿದ್ದ ಕಿಟಕಿಗಳು, ಮಂಟಪ, ಖರ್ಜೂರ ಮರದ ಚಿತ್ರಗಳ ಅಳತೆಯಷ್ಟೇ ಇತ್ತು. ಉತ್ತರದ ಬಾಗಿಲಿಗೆ ಹೋಗೋಕೆ ಜನರು ಏಳು ಮೆಟ್ಟಿಲು ಹತ್ತಬೇಕಿತ್ತು. ಅವುಗಳ ಮುಂದೆ ಮಂಟಪ ಇತ್ತು. 23  ಉತ್ತರದ ಬಾಗಿಲ ಮುಂದೆ ಒಳಗಿನ ಅಂಗಳದಲ್ಲಿ ಒಂದು ಬಾಗಿಲಿತ್ತು ಮತ್ತು ಪೂರ್ವ ಬಾಗಿಲ ಮುಂದೆನೂ ಒಂದು ಬಾಗಿಲಿತ್ತು. ಎದುರುಬದುರಾಗಿದ್ದ ಆ ಬಾಗಿಲುಗಳ ಮಧ್ಯ ಇದ್ದ ಅಂತರವನ್ನ ಅವನು ಅಳತೆ ಮಾಡಿದ. ಅದು 100 ಮೊಳ ಇತ್ತು. 24  ಆಮೇಲೆ ಅವನು ನನ್ನನ್ನ ದಕ್ಷಿಣದ ಕಡೆಗೆ ಕರ್ಕೊಂಡು ಬಂದ. ಅಲ್ಲೂ ಒಂದು ಬಾಗಿಲು ಇರೋದನ್ನ ನೋಡ್ದೆ.+ ಅದ್ರ ಪಕ್ಕದಲ್ಲಿದ್ದ ಕಂಬಗಳನ್ನ ಮತ್ತು ಅದ್ರ ಮಂಟಪವನ್ನ ಅವನು ಅಳತೆ ಮಾಡಿದ. ಅವುಗಳ ಅಳತೆ ಬೇರೆ ಬಾಗಿಲುಗಳ ಪಕ್ಕದಲ್ಲಿದ್ದ ಕಂಬಗಳ ಅಳತೆ ಮತ್ತು ಮಂಟಪದ ಅಳತೆಯಷ್ಟೇ ಇತ್ತು. 25  ಬೇರೆ ಬಾಗಿಲುಗಳಲ್ಲಿ ಇದ್ದ ಹಾಗೆ ಈ ಬಾಗಿಲ ಎರಡೂ ಕಡೆಗಳಲ್ಲಿ ಮತ್ತು ಮಂಟಪದಲ್ಲಿ ಕಿಟಕಿಗಳು ಇದ್ವು. ಈ ಬಾಗಿಲು 50 ಮೊಳ ಉದ್ದ, 25 ಮೊಳ ಅಗಲ ಇತ್ತು. 26  ದಕ್ಷಿಣ ಬಾಗಿಲಿಗೆ ಹೋಗೋಕೆ ಜನ ಏಳು ಮೆಟ್ಟಿಲು ಹತ್ತಬೇಕಿತ್ತು.+ ಅವುಗಳ ಮುಂದೆ ಮಂಟಪ ಇತ್ತು. ಅದ್ರ ಅಕ್ಕಪಕ್ಕ ಒಂದೊಂದು ಕಂಬ ಇತ್ತು. ಅವುಗಳ ಮೇಲೆ ಖರ್ಜೂರ ಮರದ ಚಿತ್ರಗಳಿದ್ವು. 27  ಒಳಗಿನ ಅಂಗಳದಲ್ಲಿ ದಕ್ಷಿಣಕ್ಕೆ ಮುಖಮಾಡಿರೋ ಒಂದು ಬಾಗಿಲಿತ್ತು. ಈ ಬಾಗಿಲು ಮತ್ತು ದಕ್ಷಿಣದ ಕಡೆಗಿದ್ದ ಇನ್ನೊಂದು ಬಾಗಿಲ ಮಧ್ಯ ಇದ್ದ ಅಂತರವನ್ನ ಅವನು ಅಳೆದ. ಅದು 100 ಮೊಳ ಇತ್ತು. 28  ಆಮೇಲೆ ಅವನು ನನ್ನನ್ನ ದಕ್ಷಿಣದ ಬಾಗಿಲಿಂದ ಒಳಗಿನ ಅಂಗಳಕ್ಕೆ ಕರ್ಕೊಂಡು ಬಂದ. ಅವನು ದಕ್ಷಿಣದ ಬಾಗಿಲನ್ನ ಅಳತೆ ಮಾಡಿದ. ಅದ್ರ ಅಳತೆ ಬೇರೆ ಬಾಗಿಲುಗಳ ಅಳತೆಯಷ್ಟೇ ಇತ್ತು. 29  ಅದ್ರ ಬಾಗಿಲು ಕಾಯುವವ್ರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪದ ಅಳತೆ ಬೇರೆ ಬಾಗಿಲುಗಳಲ್ಲಿದ್ದ ಬಾಗಿಲು ಕಾಯುವವ್ರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪಗಳ ಅಳತೆಯಷ್ಟೇ ಇತ್ತು. ಆ ಬಾಗಿಲ ಎರಡೂ ಕಡೆಗಳಲ್ಲಿ ಮತ್ತು ಮಂಟಪದಲ್ಲಿ ಕಿಟಕಿಗಳಿದ್ವು. ಆ ಬಾಗಿಲು 50 ಮೊಳ ಉದ್ದ, 25 ಮೊಳ ಅಗಲ ಇತ್ತು.+ 30  ಒಳಗಿನ ಅಂಗಳಕ್ಕೆ ನಡೆಸೋ ಎಲ್ಲ ಬಾಗಿಲುಗಳಿಗೂ ಮಂಟಪಗಳಿದ್ವು. ಪ್ರತಿಯೊಂದು ಮಂಟಪ 25 ಮೊಳ ಉದ್ದ, 5 ಮೊಳ ಅಗಲ ಇತ್ತು. 31  ಆ ದಕ್ಷಿಣ ಬಾಗಿಲ ಮಂಟಪ ಹೊರಗಿನ ಅಂಗಳಕ್ಕೆ ಮುಖಮಾಡಿತ್ತು. ಅದ್ರ ಅಕ್ಕಪಕ್ಕ ಇದ್ದ ಕಂಬಗಳ ಮೇಲೆ ಖರ್ಜೂರ ಮರದ ಚಿತ್ರಗಳಿದ್ವು.+ ಆ ಬಾಗಿಲ ಒಳಗೆ ಬರೋಕೆ ಎಂಟು ಮೆಟ್ಟಿಲು ಹತ್ತಬೇಕಿತ್ತು.+ 32  ಅವನು ನನ್ನನ್ನ ಪೂರ್ವದ ಕಡೆಯಿಂದ ಒಳಗಿನ ಅಂಗಳಕ್ಕೆ ಕರ್ಕೊಂಡು ಬಂದ. ಅಲ್ಲಿನ ಬಾಗಿಲನ್ನ ಅಳತೆ ಮಾಡಿದ. ಅದ್ರ ಅಳತೆನೂ ಬೇರೆ ಬಾಗಿಲ ಅಳತೆಯಷ್ಟೇ ಇತ್ತು. 33  ಅದ್ರ ಬಾಗಿಲು ಕಾಯುವವ್ರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪದ ಅಳತೆ ಬೇರೆ ಬಾಗಿಲುಗಳಲ್ಲಿದ್ದ ಬಾಗಿಲು ಕಾಯುವವ್ರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪಗಳ ಅಳತೆಯಷ್ಟೇ ಇತ್ತು. ಆ ಬಾಗಿಲ ಎರಡು ಕಡೆಗಳಲ್ಲಿ ಮತ್ತು ಮಂಟಪದಲ್ಲಿ ಕಿಟಕಿಗಳಿದ್ವು. ಆ ಬಾಗಿಲು 50 ಮೊಳ ಉದ್ದ, 25 ಮೊಳ ಅಗಲ ಇತ್ತು. 34  ಅದ್ರ ಮಂಟಪ ಹೊರಗಿನ ಅಂಗಳಕ್ಕೆ ಮುಖಮಾಡಿತ್ತು. ಅದ್ರ ಅಕ್ಕಪಕ್ಕ ಇದ್ದ ಕಂಬಗಳ ಮೇಲೆ ಖರ್ಜೂರ ಮರದ ಚಿತ್ರಗಳಿದ್ವು. ಆ ಬಾಗಿಲ ಒಳಗೆ ಬರೋಕೆ ಎಂಟು ಮೆಟ್ಟಿಲು ಹತ್ತಬೇಕಿತ್ತು. 35  ಆಮೇಲೆ ಅವನು ನನ್ನನ್ನ ಉತ್ತರದ ಬಾಗಿಲ ಒಳಗೆ ಕರ್ಕೊಂಡು ಬಂದು+ ಆ ಬಾಗಿಲನ್ನ ಅಳತೆ ಮಾಡಿದ. ಅದ್ರ ಅಳತೆ ಬೇರೆ ಬಾಗಿಲುಗಳ ಅಳತೆಯಷ್ಟೇ ಇತ್ತು. 36  ಅದ್ರ ಬಾಗಿಲು ಕಾಯೋರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪದ ಅಳತೆ ಬೇರೆ ಬಾಗಿಲುಗಳಲ್ಲಿದ್ದ ಬಾಗಿಲು ಕಾಯುವವ್ರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪಗಳ ಅಳತೆಯಷ್ಟೇ ಇತ್ತು. ಆ ಬಾಗಿಲ ಎರಡೂ ಕಡೆ ಕಿಟಕಿಗಳಿದ್ವು. ಆ ಬಾಗಿಲು 50 ಮೊಳ ಉದ್ದ, 25 ಮೊಳ ಅಗಲ ಇತ್ತು. 37  ಅದ್ರ ಅಕ್ಕಪಕ್ಕದಲ್ಲಿದ್ದ ಕಂಬಗಳು ಹೊರಗಿನ ಅಂಗಳಕ್ಕೆ ಮುಖಮಾಡಿದ್ವು. ಆ ಕಂಬಗಳ ಮೇಲೆ ಖರ್ಜೂರ ಮರದ ಚಿತ್ರಗಳಿದ್ವು. ಆ ಬಾಗಿಲ ಒಳಗೆ ಬರೋಕೆ ಎಂಟು ಮೆಟ್ಟಿಲು ಹತ್ತಬೇಕಿತ್ತು. 38  ಒಳಗಿನ ಅಂಗಳದ ಬಾಗಿಲುಗಳ ಪಕ್ಕದಲ್ಲಿದ್ದ ಕಂಬಗಳ ಹತ್ರ ಒಂದು ಊಟದ ಕೋಣೆ ಇತ್ತು. ಅದಕ್ಕೊಂದು ಬಾಗಿಲಿತ್ತು. ಸರ್ವಾಂಗಹೋಮ ಬಲಿಯಾಗಿ ಕೊಟ್ಟಿದ್ದನ್ನ ಅಲ್ಲಿ ತೊಳೀತಿದ್ರು.+ 39  ಉತ್ತರದ ಬಾಗಿಲ ಮಂಟಪದ ಅಕ್ಕಪಕ್ಕ ಎರಡೆರಡು ಮೇಜುಗಳಿದ್ವು. ಆ ಮೇಜುಗಳ ಮೇಲೆ ಸರ್ವಾಂಗಹೋಮ ಬಲಿಗಳು,+ ಪಾಪಪರಿಹಾರಕ ಬಲಿಗಳು+ ಮತ್ತು ದೋಷಪರಿಹಾರಕ ಬಲಿಗಳಾಗಿ+ ಕೊಡ್ತಿದ್ದ ಪ್ರಾಣಿಗಳನ್ನ ಕಡಿತಿದ್ರು. 40  ಉತ್ತರದ ಬಾಗಿಲ ಮೆಟ್ಟಿಲುಗಳ ಅಕ್ಕಪಕ್ಕ ಅಂದ್ರೆ ದ್ವಾರಮಂಟಪದ ಹತ್ರ ಎರಡೆರಡು ಮೇಜುಗಳಿದ್ವು. 41  ಬಾಗಿಲ ಒಂದು ಕಡೆ ನಾಲ್ಕು, ಇನ್ನೊಂದು ಕಡೆ ನಾಲ್ಕು ಹೀಗೆ ಒಟ್ಟು ಎಂಟು ಮೇಜುಗಳು ಇದ್ವು. ಅವುಗಳ ಮೇಲೆ ಬಲಿಪ್ರಾಣಿಗಳನ್ನ ಕಡಿತಿದ್ರು. 42  ಸರ್ವಾಂಗಹೋಮ ಬಲಿಗಾಗಿ ನಾಲ್ಕು ಮೇಜುಗಳನ್ನ ಕತ್ತರಿಸಿದ ಕಲ್ಲಿಂದ ಮಾಡಿದ್ರು. ಅವು ಒಂದೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಮತ್ತು ಒಂದು ಮೊಳ ಎತ್ತರ ಇದ್ವು. ಸರ್ವಾಂಗಹೋಮ ಬಲಿಗಳ ಮತ್ತು ಬೇರೆ ಬಲಿಗಳ ಪ್ರಾಣಿಗಳನ್ನ ಕಡಿಯೋಕೆ ಬಳಸೋ ವಸ್ತುಗಳನ್ನ ಆ ಮೇಜುಗಳ ಮೇಲೆ ಇಟ್ಟಿದ್ರು. 43  ಒಳಗಿನ ಗೋಡೆಗಳ ಸುತ್ತ ಗೋಡೆಗೆ ಜೋಡಿಸಿದ್ದ ಕಪಾಟುಗಳು ಇದ್ವು. ಅವು ಕೈಯಗಲದಷ್ಟು ಅಗಲ ಇದ್ವು. ಉಡುಗೊರೆ ಅರ್ಪಣೆಗಳ ಮಾಂಸವನ್ನ ಮೇಜುಗಳ ಮೇಲೆ ಇಡ್ತಿದ್ರು. 44  ಒಳಗಿನ ಬಾಗಿಲ ಆಚೆ ಗಾಯಕರ ಊಟದ ಕೋಣೆಗಳಿದ್ವು.+ ಅವು ಒಳಗಿನ ಅಂಗಳದ ಒಳಗೆ ಉತ್ತರದ ಬಾಗಿಲ ಹತ್ರ ಇದ್ವು ಮತ್ತು ದಕ್ಷಿಣಕ್ಕೆ ಮುಖಮಾಡಿದ್ವು. ಇನ್ನೊಂದು ಊಟದ ಕೋಣೆ ಪೂರ್ವದ ಬಾಗಿಲ ಹತ್ರ ಇತ್ತು ಮತ್ತು ಉತ್ತರಕ್ಕೆ ಮುಖಮಾಡಿತ್ತು. 45  ಅವನು ನನಗೆ “ದಕ್ಷಿಣಕ್ಕೆ ಮುಖಮಾಡಿರೋ ಈ ಊಟದ ಕೋಣೆ ದೇವಾಲಯದಲ್ಲಿ ಸೇವೆ ಮಾಡೋ ಪುರೋಹಿತರದ್ದು.+ 46  ಉತ್ತರಕ್ಕೆ ಮುಖಮಾಡಿರೋ ಊಟದ ಕೋಣೆ ಯಜ್ಞವೇದಿಗೆ ಸಂಬಂಧಿಸಿದ ಸೇವೆಮಾಡೋ ಪುರೋಹಿತರದ್ದು.+ ಅವರು ಚಾದೋಕನ ವಂಶದವರು.+ ಲೇವಿಯರಲ್ಲಿ ಯೆಹೋವನ ಮುಂದೆ ಹೋಗಿ ಆತನ ಸೇವೆಮಾಡೋ ನೇಮಕ ಇರೋ ಪುರೋಹಿತರು ಇವರೇ”+ ಅಂದ. 47  ಆಮೇಲೆ ಅವನು ಒಳಗಿನ ಅಂಗಳವನ್ನ ಅಳತೆ ಮಾಡಿದ. ಅದು ಚೌಕದ ಆಕಾರದಲ್ಲಿತ್ತು, 100 ಮೊಳ ಉದ್ದ, 100 ಮೊಳ ಅಗಲ ಇತ್ತು. ದೇವಾಲಯದ ಮುಂದೆ ಯಜ್ಞವೇದಿ ಇತ್ತು. 48  ಆಮೇಲೆ ಅವನು ನನ್ನನ್ನ ದೇವಾಲಯದ ಮಂಟಪದ ಒಳಗೆ ಕರ್ಕೊಂಡು ಬಂದ.+ ಆ ಮಂಟಪದ ಅಕ್ಕಪಕ್ಕ ಇದ್ದ ಕಂಬಗಳನ್ನ ಅಳತೆಮಾಡಿದ. ಅವೆರಡರ ಅಳತೆನೂ ಐದೈದು ಮೊಳ ಇತ್ತು. ಬಾಗಿಲ ಅಗಲ ಒಂದು ಕಡೆ ಮೂರು ಮೊಳ ಮತ್ತು ಇನ್ನೊಂದು ಕಡೆ ಮೂರು ಮೊಳ ಇತ್ತು. 49  ಮಂಟಪವು 20 ಮೊಳ ಉದ್ದ, 11* ಮೊಳ ಅಗಲ ಇತ್ತು. ಜನ್ರು ಮೆಟ್ಟಿಲು ಹತ್ತಿ ಮಂಟಪದ ಒಳಗೆ ಹೋಗ್ತಿದ್ರು. ಮಂಟಪದ ಎರಡೂ ಕಡೆ ನಿಲುವು ಕಂಬಗಳ ಹತ್ರ ಒಂದೊಂದು ಕಂಬ ಇತ್ತು.+

ಪಾದಟಿಪ್ಪಣಿ

ಅಕ್ಷ. “ಮನೆ.” ಅಧ್ಯಾಯ 40-48ರಲ್ಲಿ ಎಲ್ಲೆಲ್ಲಿ “ಮನೆ” ಅಂತ ಇದ್ದು ಅದು ದೇವಾಲಯವನ್ನ ಅಥವಾ ದೇವಾಲಯದ ಕಟ್ಟಡವನ್ನ ಸೂಚಿಸುತ್ತೋ ಅಲ್ಲೆಲ್ಲ ಅದನ್ನ “ದೇವಾಲಯ” ಅಂತ ಹೇಳಲಾಗಿದೆ.
ಇದು ಉದ್ದ ಮೊಳವನ್ನ ಸೂಚಿಸುತ್ತೆ. ಪರಿಶಿಷ್ಟ ಬಿ14 ನೋಡಿ.
ಬಹುಶಃ ಇದು ಬಾಗಿಲು ಕಾಯುವವ್ರ ಕೋಣೆಯ ಗೋಡೆಯ ಮೇಲಿನ ಭಾಗವನ್ನ ಸೂಚಿಸುತ್ತೆ.
ಅಥವಾ “ಇಳಿಜಾರಿನಂತೆ ಇರೋ (ಓರೆಯಾಗಿರೋ) ಕಿಟಕಿಗಳು ಇದ್ವು.”
ಅಥವಾ “ನಾನು ಕೊಠಡಿಗಳನ್ನ ನೋಡಿದೆ.”
ಬಹುಶಃ, “12.”