ಯೆಹೆಜ್ಕೇಲ 41:1-26

  • ಆಲಯದ ಪವಿತ್ರ ಸ್ಥಳ (1-4)

  • ಗೋಡೆ ಮತ್ತು ಕೊಠಡಿಗಳು (5-11)

  • ಪಶ್ಚಿಮ ಕಟ್ಟಡ (12)

  • ಕಟ್ಟಡಗಳ ಅಳತೆ ಮಾಡಲಾಯ್ತು (13-15ಎ)

  • ದೇವಾಲಯದ ಒಳಗಿನ ಭಾಗ (15ಬಿ-26)

41  ಆಮೇಲೆ ಅವನು ನನ್ನನ್ನ ಆಲಯದ ಪವಿತ್ರ ಸ್ಥಳದ ಒಳಗೆ* ಕರ್ಕೊಂಡು ಬಂದ. ಅದ್ರ ಅಕ್ಕಪಕ್ಕ ಇದ್ದ ಎರಡು ಕಂಬಗಳನ್ನ ಅಳತೆ ಮಾಡಿದ. ಒಂದೊಂದು ಕಂಬದ ಅಗಲ ಆರು ಮೊಳ ಇತ್ತು.*  ಅದ್ರ ಬಾಗಿಲು ಹತ್ತು ಮೊಳ ಅಗಲ ಇತ್ತು. ಬಾಗಿಲ ಅಕ್ಕಪಕ್ಕ ಇದ್ದ ಗೋಡೆಗಳ ಅಳತೆ ಐದೈದು ಮೊಳ ಇತ್ತು. ಆಮೇಲೆ ಅವನು ಪವಿತ್ರ ಸ್ಥಳವನ್ನ ಅಳತೆ ಮಾಡಿದ. ಅದು 40 ಮೊಳ ಉದ್ದ, 20 ಮೊಳ ಅಗಲ ಇತ್ತು.  ಆಮೇಲೆ ಅವನು ಒಳಗೆ* ಹೋಗಿ ಅಲ್ಲಿನ ಬಾಗಿಲ ಅಕ್ಕಪಕ್ಕ ಇದ್ದ ಕಂಬಗಳನ್ನ ಅಳತೆ ಮಾಡಿದ. ಆ ಕಂಬಗಳು ಎರಡು ಮೊಳ ದಪ್ಪ ಇತ್ತು. ಬಾಗಿಲು ಆರು ಮೊಳ ಅಗಲ ಇತ್ತು. ಅದ್ರ ಎರಡು ಕಡೆ ಇದ್ದ ಗೋಡೆಗಳ ಅಳತೆ ಏಳು ಮೊಳ ಇತ್ತು.⁠  ಆಮೇಲೆ ಅವನು ಪವಿತ್ರ ಸ್ಥಳಕ್ಕೆ ಮುಖ ಮಾಡಿರೋ ಒಳಗಿದ್ದ ಕೋಣೆಯನ್ನ ಅಳತೆ ಮಾಡಿದ. ಅದು 20 ಮೊಳ ಉದ್ದ ಮತ್ತು 20 ಮೊಳ ಅಗಲ ಇತ್ತು.+ ಆಗ ಅವನು ನನಗೆ “ಇದು ಅತಿ ಪವಿತ್ರ ಸ್ಥಳ” ಅಂದ.+  ಆಮೇಲೆ ಅವನು ದೇವಾಲಯದ ಗೋಡೆಯನ್ನ ಅಳತೆ ಮಾಡಿದ. ಅದು ಆರು ಮೊಳ ದಪ್ಪ ಇತ್ತು. ದೇವಾಲಯದ ಸುತ್ತ ಇದ್ದ ಕೋಣೆಗಳು ನಾಲ್ಕು ಮೊಳ ಅಗಲ ಇದ್ವು.+  ಈ ಕೋಣೆಗಳು ಒಂದ್ರ ಮೇಲೆ ಒಂದ್ರ ಹಾಗೆ ಮೂರು ಅಂತಸ್ತು ಇದ್ವು. ಒಂದೊಂದು ಅಂತಸ್ತಲ್ಲಿ 30 ಕೋಣೆಗಳಿದ್ವು. ಈ ಕೋಣೆಗಳನ್ನ ದೇವಾಲಯದ ಗೋಡೆಯ ಸುತ್ತ ಇದ್ದ ಅಂಚುಗಳ ಮೇಲೆ ಕೂರೋ ತರ ಮಾಡಲಾಗಿತ್ತು. ಹಾಗಾಗಿ ಕೋಣೆಯ ಅಡ್ಡತೊಲೆಗಳನ್ನ ಇಡೋಕೆ ಗೋಡೆಗೆ ತೂತುಮಾಡೋ ಅಗತ್ಯ ಇರಲಿಲ್ಲ.+  ದೇವಾಲಯದ ಎರಡೂ ಕಡೆ ಸುರುಳಿ ಆಕಾರದಲ್ಲಿ ಮೆಟ್ಟಿಲುಗಳು ಇದ್ವು. ಕೆಳಗಿನ ಅಂತಸ್ತಿನ ಕೋಣೆಗಳಿಗಿಂತ ಮಧ್ಯದ ಅಂತಸ್ತಿನ ಕೋಣೆಗಳು ತುಂಬ ಅಗಲವಾಗಿದ್ವು.+ ಮಧ್ಯದ ಅಂತಸ್ತಿನ ಕೋಣೆಗಳಿಗಿಂತ ಅದ್ರ ಮೇಲಿನ ಅಂತಸ್ತಿನ ಕೋಣೆಗಳು ಇನ್ನೂ ಅಗಲವಾಗಿದ್ವು.  ದೇವಾಲಯದ ಸುತ್ತ ಎತ್ತರವಾದ ಕಟ್ಟೆ ಇರೋದನ್ನ ನಾನು ನೋಡ್ದೆ. ಪಕ್ಕದಲ್ಲಿದ್ದ ಕೋಣೆಗಳ ಅಡಿಪಾಯದ ಅಳತೆ ನೆಲದಿಂದ ಮೇಲಿನ ಅಂಚಿನ ತನಕ ಆರು ಮೊಳ ಇತ್ತು.  ಅವುಗಳ ಹೊರಗಿನ ಗೋಡೆ ಐದು ಮೊಳ ಅಗಲ ಇತ್ತು. ಕೋಣೆಗಳ ಕಟ್ಟಡದ ಪಕ್ಕದಲ್ಲಿ ಉದ್ದವಾದ ಖಾಲಿ ಜಾಗ* ಇತ್ತು. ಇದೂ ದೇವಾಲಯಕ್ಕೆ ಸೇರಿತ್ತು. 10  ದೇವಾಲಯ ಮತ್ತು ಊಟದ ಕೋಣೆಗಳ+ ಮಧ್ಯ 20 ಮೊಳ ಅಗಲವಾದ ಜಾಗ ಇತ್ತು. ಎರಡೂ ಕಡೆ ಹೀಗೇ ಇತ್ತು. 11  ಪಕ್ಕದಲ್ಲಿದ್ದ ಕೋಣೆಗಳ ಮತ್ತು ಖಾಲಿ ಜಾಗದ ಮಧ್ಯ ಒಂದು ಬಾಗಿಲಿತ್ತು. ಉತ್ತರದ ಕಡೆಗೊಂದು, ದಕ್ಷಿಣದ ಕಡೆಗೊಂದು, ಹೀಗೆ ಎರಡು ಬಾಗಿಲಿದ್ವು. ಸುತ್ತ ಇರೋ ಖಾಲಿ ಜಾಗದ ಅಗಲ ಐದು ಮೊಳ ಇತ್ತು. 12  ಪಶ್ಚಿಮಕ್ಕೆ, ಖಾಲಿ ಜಾಗದ ಮುಂದೆ ಇರೋ ಕಟ್ಟಡ 70 ಮೊಳ ಅಗಲ, 90 ಮೊಳ ಉದ್ದ ಇತ್ತು. ಆ ಕಟ್ಟಡದ ಸುತ್ತ ಇದ್ದ ಗೋಡೆ ಐದು ಮೊಳ ದಪ್ಪ ಇತ್ತು. 13  ಅವನು ದೇವಾಲಯವನ್ನ ಅಳತೆ ಮಾಡಿದ. ಅದು 100 ಮೊಳ ಉದ್ದ ಇತ್ತು. ಖಾಲಿ ಜಾಗ, ಕಟ್ಟಡ* ಮತ್ತು ಅದ್ರ ಗೋಡೆಗಳು ಇವೆಲ್ಲದ್ರ ಒಟ್ಟು ಉದ್ದ 100 ಮೊಳ ಇತ್ತು. 14  ಪೂರ್ವಕ್ಕೆ ಮುಖ ಮಾಡಿರೋ ದೇವಾಲಯದ ಮುಂಭಾಗ ಮತ್ತು ಖಾಲಿ ಜಾಗ ಒಟ್ಟು 100 ಮೊಳ ಅಗಲ ಇತ್ತು. 15  ಹಿಂದೆ ಇದ್ದ ಖಾಲಿ ಜಾಗದ ಎದುರಿಗಿದ್ದ ಕಟ್ಟಡವನ್ನ ಅದ್ರ ಎರಡೂ ಕಡೆ ಇದ್ದ ವರಾಂಡದ ಸಮೇತ ಅವನು ಅಳತೆ ಮಾಡಿದ. ಅದು 100 ಮೊಳ ಉದ್ದ ಇತ್ತು. ಅಷ್ಟೇ ಅಲ್ಲ, ಅವನು ಪವಿತ್ರ ಸ್ಥಳ, ಅತಿ ಪವಿತ್ರ ಸ್ಥಳ,+ ಅಂಗಳದಲ್ಲಿದ್ದ ಮಂಟಪಗಳು, 16  ಹೊಸ್ತಿಲುಗಳು, ಒಳಭಾಗಕ್ಕೆ ಅಗಲವಾಗಿದ್ದು ಹೊರಭಾಗಕ್ಕೆ ಕಿರಿದಾಗಿದ್ದ ಕಿಟಕಿಗಳು,+ ಆ ಮೂರು ಕಡೆ ಇದ್ದ ವರಾಂಡಗಳು, ಇವೆಲ್ಲವನ್ನ ಅಳತೆ ಮಾಡಿದ. ಹೊಸ್ತಿಲ ಹತ್ರ ನೆಲದಿಂದ ಕಿಟಕಿಗಳ ತನಕ ಮರದ ಹಲಗೆಗಳನ್ನ ಹೊದಿಸಿದ್ರು.+ ಕಿಟಕಿಗಳ ಸುತ್ತ ಹಲಗೆಯ ಚೌಕಟ್ಟುಗಳಿದ್ವು. 17  ಬಾಗಿಲ ಮೇಲೆ, ದೇವಾಲಯದ ಒಳಗೆ, ಹೊರಗೆ ಮತ್ತು ಸುತ್ತ ಇದ್ದ ಗೋಡೆಯನ್ನ ಅಳತೆ ಮಾಡಿದ. 18  ಗೋಡೆ ಮೇಲೆ ಕೆರೂಬಿಯರ ಕೆತ್ತನೆ+ ಮತ್ತು ಖರ್ಜೂರ ಮರಗಳ ಚಿತ್ರಗಳು ಇದ್ವು.+ ಇಬ್ಬಿಬ್ಬರು ಕೆರೂಬಿಯರ ಮಧ್ಯ ಒಂದೊಂದು ಖರ್ಜೂರ ಮರದ ಚಿತ್ರ ಇತ್ತು. ಪ್ರತಿಯೊಬ್ಬ ಕೆರೂಬಿಗೆ ಎರಡೆರಡು ಮುಖಗಳಿದ್ವು. 19  ಒಂದು ಮುಖ ಮನುಷ್ಯನದ್ದು, ಇನ್ನೊಂದು ಸಿಂಹದ್ದು. ಮನುಷ್ಯನ ಮುಖ ಒಂದು ಕಡೆಯಿದ್ದ ಖರ್ಜೂರ ಮರದ ಕಡೆಗಿತ್ತು. ಸಿಂಹದ ಮುಖ ಇನ್ನೊಂದು ಕಡೆಯಿದ್ದ ಖರ್ಜೂರ ಮರದ ಕಡೆಗಿತ್ತು.+ ಇಡೀ ದೇವಾಲಯದಲ್ಲಿ ಇದೇ ತರದ ಕೆತ್ತನೆ ಇತ್ತು. 20  ದೇವಾಲಯದ ಗೋಡೆ ಮೇಲೆ ಅಂದ್ರೆ ನೆಲದಿಂದ ಹಿಡಿದು ಬಾಗಿಲ ಮೇಲಿನ ತನಕ ಕೆರೂಬಿಯರ ಕೆತ್ತನೆ ಮತ್ತು ಖರ್ಜೂರ ಮರಗಳ ಚಿತ್ರಗಳು ಇದ್ವು. 21  ದೇವಾಲಯದ ಬಾಗಿಲುಗಳ ಚೌಕಟ್ಟುಗಳು* ಚೌಕಾಕಾರವಾಗಿದ್ವು.+ ಪವಿತ್ರವಾದ ಸ್ಥಳದ* ಮುಂದೆ 22  ಮರದ ಯಜ್ಞವೇದಿ+ ತರ ಕಾಣ್ತಿದ್ದ ಏನೋ ಒಂದು ಇತ್ತು. ಅದು ಮೂರು ಮೊಳ ಎತ್ತರ, ಎರಡು ಮೊಳ ಉದ್ದ ಇತ್ತು. ಅದಕ್ಕೆ ನಾಲ್ಕು ಮೂಲೆ ಇತ್ತು. ಅದನ್ನ ಮರದಿಂದ ಮಾಡಿದ್ರು. ಆಮೇಲೆ ಅವನು ನನಗೆ “ಯೆಹೋವನ ಮುಂದೆ ಇರೋ ಮೇಜು ಇದೇ” ಅಂದ.+ 23  ದೇವಾಲಯದ ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳ ಎರಡಕ್ಕೂ ಎರಡು ಕದಗಳಿರೋ ಬಾಗಿಲಿತ್ತು.+ 24  ಪ್ರತಿಯೊಂದು ಬಾಗಿಲಿನ ಎರಡೂ ಕದಗಳಿಗೆ ಮಡಚೋ ಎರಡೆರಡು ಭಾಗಗಳಿದ್ವು. 25  ಗೋಡೆಗಳ ಮೇಲೆ ಇದ್ದ ಹಾಗೇ ದೇವಾಲಯದ ಬಾಗಿಲುಗಳ ಮೇಲೂ ಕೆರೂಬಿಯರ ಕೆತ್ತನೆ ಮತ್ತು ಖರ್ಜೂರ ಮರಗಳ ಚಿತ್ರಗಳು ಇದ್ವು.+ ಮಂಟಪದ ಹೊರಗೆ ಮುಂಭಾಗದಲ್ಲಿ ಮರದ ಚಪ್ಪರನೂ ಇತ್ತು. 26  ಮಂಟಪದ ಎರಡೂ ಕಡೆ ದೇವಾಲಯದ ಅಕ್ಕಪಕ್ಕ ಇರೋ ಕೋಣೆಗಳ ಪಕ್ಕದಲ್ಲಿ ಮತ್ತು ಚಪ್ಪರಗಳ ಹತ್ರ ಕಿಟಕಿಗಳಿದ್ವು.+ ಅಷ್ಟೇ ಅಲ್ಲ, ಖರ್ಜೂರ ಮರಗಳ ಚಿತ್ರಗಳೂ ಇದ್ವು. ಆ ಕಿಟಕಿಗಳು ಒಳಗೆ ಅಗಲವಾಗಿ ಹೊರಗೆ ಚಿಕ್ಕದಾಗಿ ಇದ್ವು.

ಪಾದಟಿಪ್ಪಣಿ

ಅಕ್ಷ. “ದೇವಾಲಯ.” ಈ ಪದ ಅಧ್ಯಾಯ 41, 42ರಲ್ಲಿ ಪವಿತ್ರ ಸ್ಥಳವನ್ನ ಮಾತ್ರ ಅಥವಾ ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳ ಎರಡೂ ಸೇರಿರೋ ದೇವಾಲಯವನ್ನ ಸೂಚಿಸುತ್ತೆ.
ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.
ಅಂದ್ರೆ, ಅತಿ ಪವಿತ್ರ ಸ್ಥಳ.
ಇದು ದೇವಾಲಯದ ಸುತ್ತ ಇರೋ ಚಿಕ್ಕ ಮೊಗಸಾಲೆ ಆಗಿರಬಹುದು.
ಇದು ದೇವಾಲಯದ ಪಶ್ಚಿಮಕ್ಕಿರೋ ಕಟ್ಟಡ.
ಅಕ್ಷ. “ಬಾಗಿಲಿನ ಚೌಕಟ್ಟು.” ಇದು ಪವಿತ್ರ ಸ್ಥಳದ ಬಾಗಿಲನ್ನ ಸೂಚಿಸುತ್ತಿರಬಹುದು.
ಇದು ಅತಿ ಪವಿತ್ರ ಸ್ಥಳವನ್ನ ಸೂಚಿಸುತ್ತಿರಬಹುದು.