ಯೆಹೆಜ್ಕೇಲ 48:1-35

  • ದೇಶದ ವಿಭಾಗ (1-29)

  • ಪಟ್ಟಣದ 12 ಬಾಗಿಲುಗಳು (30-35)

    • ಪಟ್ಟಣಕ್ಕೆ “ಯೆಹೋವ ಅಲ್ಲಿದ್ದಾನೆ” ಅನ್ನೋ ಹೆಸ್ರು (35)

48  “ಉತ್ತರದ ಗಡಿಯ ಕೊನೆಯಿಂದ ಶುರುವಾಗೋ ಪಾಲುಗಳು. ಇವು ಕುಲಗಳ ಹೆಸ್ರಿನ ಪ್ರಕಾರ ಪಟ್ಟಿ ಆಗಿವೆ. ದಾನಿನ ಪಾಲು+ ಹೆತ್ಲೋನಿಗೆ ಹೋಗೋ ದಾರಿಯಿಂದ ಲೆಬೋ-ಹಾಮಾತಿನ+ ತನಕ* ಆಮೇಲೆ ಹಚರ್‌-ಏನಾನಿನ ತನಕ ಹಾಮಾತಿನ+ ಪಕ್ಕದಲ್ಲಿರೋ ದಮಸ್ಕದ ಉತ್ತರ ಗಡಿಯ ತನಕ ಇದೆ. ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ.  ದಾನಿನ ಪಾಲಿನ ದಕ್ಷಿಣಕ್ಕೆ ಅಶೇರಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ.  ಅಶೇರಿನ ಪಾಲಿನ ದಕ್ಷಿಣಕ್ಕೆ ನಫ್ತಾಲಿಯ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ.  ನಫ್ತಾಲಿಯ ಪಾಲಿನ ದಕ್ಷಿಣಕ್ಕೆ ಮನಸ್ಸೆಯ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ.  ಮನಸ್ಸೆಯ ಪಾಲಿನ ದಕ್ಷಿಣಕ್ಕೆ ಎಫ್ರಾಯೀಮಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ.  ಎಫ್ರಾಯೀಮಿನ ಪಾಲಿನ ದಕ್ಷಿಣಕ್ಕೆ ರೂಬೇನಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ.  ರೂಬೇನಿನ ಪಾಲಿನ ದಕ್ಷಿಣಕ್ಕೆ ಯೆಹೂದದ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ.  ಯೆಹೂದದ ಪಾಲಿನ ದಕ್ಷಿಣಕ್ಕೆ 25,000 ಮೊಳ* ಅಗಲ ಇರೋ ಭಾಗವನ್ನ ಕಾಣಿಕೆಯಾಗಿ ಪ್ರತ್ಯೇಕಿಸಬೇಕು.+ ಈ ಭಾಗ ಇರೋ ಜಮೀನಿನ ಪೂರ್ವದಿಂದ ಪಶ್ಚಿಮಕ್ಕಿರೋ ಉದ್ದ ಬೇರೆ ಕುಲಗಳ ಜಮೀನಿನ ಪೂರ್ವದಿಂದ ಪಶ್ಚಿಮಕ್ಕಿರೋ ಉದ್ದದಷ್ಟೇ ಇರಬೇಕು. ಕಾಣಿಕೆಯಾಗಿ ಪ್ರತ್ಯೇಕಿಸೋ ಈ ಭಾಗದ ಮಧ್ಯ ಆರಾಧನಾ ಸ್ಥಳ ಇರುತ್ತೆ.  ನೀವು ಯೆಹೋವನಿಗೆ ಕಾಣಿಕೆಯಾಗಿ ಪ್ರತ್ಯೇಕಿಸಬೇಕಾದ ಪ್ರದೇಶದ ಉದ್ದ 25,000 ಮೊಳ ಮತ್ತು ಅಗಲ 10,000 ಮೊಳ ಇರಬೇಕು. 10  ಇದು ಪುರೋಹಿತರಿಗಾಗಿರೋ ಪವಿತ್ರ ಕಾಣಿಕೆಯಾಗಿ ಇರುತ್ತೆ.+ ಇದು ಉತ್ತರಕ್ಕೆ 25,000 ಮೊಳ, ಪಶ್ಚಿಮಕ್ಕೆ 10,000 ಮೊಳ, ಪೂರ್ವಕ್ಕೆ 10,000 ಮೊಳ ಮತ್ತು ದಕ್ಷಿಣಕ್ಕೆ 25,000 ಮೊಳ ಇರಬೇಕು. ಅದ್ರ ಮಧ್ಯ ಯೆಹೋವನ ಆರಾಧನಾ ಸ್ಥಳ ಇರಬೇಕು. 11  ಪವಿತ್ರ ಕಾಣಿಕೆ ಆಗಿರೋ ಆ ಪ್ರದೇಶ ಪವಿತ್ರ ಸೇವೆಗಾಗಿ ಆರಿಸಿರೋ ಚಾದೋಕನ ವಂಶದ ಪುರೋಹಿತರಿಗಾಗಿ ಇರುತ್ತೆ.+ ಯಾಕಂದ್ರೆ, ಇಸ್ರಾಯೇಲ್ಯರು ಮತ್ತು ಲೇವಿಯರು ನನ್ನನ್ನ ಬಿಟ್ಟು ದೂರ ಹೋದಾಗ ಈ ಪುರೋಹಿತರು ನನ್ನನ್ನ ಬಿಟ್ಟು ಹೋಗಲಿಲ್ಲ.+ ನಾನು ಕೊಟ್ಟ ಜವಾಬ್ದಾರಿಗಳನ್ನ ನೋಡ್ಕೊಂಡ್ರು. 12  ಅತಿ ಪವಿತ್ರ ಅಂತ ಪ್ರತ್ಯೇಕಿಸಿದ ಕಾಣಿಕೆಯಾಗಿರೋ ಪ್ರದೇಶದ ಒಂದು ಭಾಗವನ್ನ ಆ ಪುರೋಹಿತರಿಗೆ ಕೊಡಲಾಗುತ್ತೆ. ಆ ಭಾಗ ಲೇವಿಯರ ಪ್ರದೇಶದ ದಕ್ಷಿಣಕ್ಕಿರುತ್ತೆ. 13  ಪುರೋಹಿತರ ಪ್ರದೇಶದ ಪಕ್ಕದಲ್ಲೇ ಲೇವಿಯರಿಗಾಗಿ ಒಂದು ಪಾಲು ಇರುತ್ತೆ. ಅದ್ರ ಉದ್ದ 25,000 ಮೊಳ ಮತ್ತು ಅಗಲ 10,000 ಮೊಳ ಇರುತ್ತೆ. (ಇಡೀ ಪ್ರದೇಶದ ಅಳತೆ 25,000 ಮೊಳ ಉದ್ದ, 10,000 ಮೊಳ ಅಗಲ.) 14  ದೇಶದ ಅತಿ ಶ್ರೇಷ್ಠವಾದ ಈ ಭಾಗದಲ್ಲಿ ಸ್ವಲ್ಪವನ್ನೂ ಅವರು ಮಾರಬಾರದು, ಅದಲುಬದಲು ಮಾಡಬಾರದು ಅಥವಾ ಬೇರೆಯವರಿಗೆ ಕೊಡಬಾರದು. ಯಾಕಂದ್ರೆ ಇದು ಯೆಹೋವನಿಗೆ ಪವಿತ್ರ ಭಾಗವಾಗಿದೆ. 15  25,000 ಮೊಳ ಉದ್ದ ಇರೋ ಗಡಿಯ ಪಕ್ಕದಲ್ಲಿ 5,000 ಮೊಳ ಅಗಲ ಪ್ರದೇಶ ಉಳಿದಿರುತ್ತೆ. ಈ ಉಳಿದ ಪ್ರದೇಶ ಪಟ್ಟಣದ ಸಾಮಾನ್ಯ ಉಪಯೋಗಕ್ಕಾಗಿದೆ.+ ಅಲ್ಲಿ ಮನೆಗಳು, ಹುಲ್ಲುಗಾವಲುಗಳು ಇರುತ್ತೆ. ಆ ಪ್ರದೇಶದ ಮಧ್ಯ ಪಟ್ಟಣ ಇರುತ್ತೆ.+ 16  ಪಟ್ಟಣದ ಅಳತೆ ಎಷ್ಟಂದ್ರೆ, ಉತ್ತರ ಗಡಿ 4,500 ಮೊಳ, ದಕ್ಷಿಣ ಗಡಿ 4,500 ಮೊಳ, ಪೂರ್ವ ಗಡಿ 4,500 ಮೊಳ ಮತ್ತು ಪಶ್ಚಿಮ ಗಡಿ 4,500 ಮೊಳ. 17  ಪಟ್ಟಣದ ಹುಲ್ಲುಗಾವಲು ಉತ್ತರಕ್ಕೆ 250 ಮೊಳ, ದಕ್ಷಿಣಕ್ಕೆ 250 ಮೊಳ, ಪೂರ್ವಕ್ಕೆ 250 ಮೊಳ ಮತ್ತು ಪಶ್ಚಿಮಕ್ಕೆ 250 ಮೊಳ ಇರುತ್ತೆ. 18  ಉಳಿದ ಪ್ರದೇಶದ ಉದ್ದ ಪವಿತ್ರ ಕಾಣಿಕೆಯಾಗಿ ಪ್ರತ್ಯೇಕಿಸೋ ಪ್ರದೇಶದ ಉದ್ದದಷ್ಟೇ ಇರುತ್ತೆ.+ ಅದು ಪೂರ್ವದಲ್ಲಿ 10,000 ಮೊಳ, ಪಶ್ಚಿಮದಲ್ಲಿ 10,000 ಮೊಳ ಇರುತ್ತೆ. ಈ ಪ್ರದೇಶದ ಉದ್ದ ಪವಿತ್ರ ಕಾಣಿಕೆಯಾಗಿ ಇರೋ ಪ್ರದೇಶದ ಉದ್ದಕ್ಕೆ ಸಮವಾಗಿರುತ್ತೆ. ಆ ಉಳಿದ ಪ್ರದೇಶದಲ್ಲಿ ಬೆಳೆದ ಬೆಳೆ ಪಟ್ಟಣಕ್ಕಾಗಿ ಕೆಲಸ ಮಾಡುವವ್ರಿಗೆ ಆಹಾರ ಆಗಿರುತ್ತೆ. 19  ಪಟ್ಟಣಕ್ಕಾಗಿ ಕೆಲಸಮಾಡೋ ಇಸ್ರಾಯೇಲಿನ ಎಲ್ಲ ಕುಲಗಳ ಜನ ಅಲ್ಲಿ ವ್ಯವಸಾಯ ಮಾಡ್ತಾರೆ.+ 20  ಕಾಣಿಕೆಯಾಗಿ ಪ್ರತ್ಯೇಕಿಸೋ ಇಡೀ ಪ್ರದೇಶ ಚೌಕಾಕಾರವಾಗಿ ಇರುತ್ತೆ. ಅದ್ರ ಉದ್ದ 25,000 ಮೊಳ, ಅಗಲ 25,000 ಮೊಳ. ಇದನ್ನ ಪವಿತ್ರ ಕಾಣಿಕೆಯಾಗಿ ಇಡಬೇಕು. ಇದ್ರಲ್ಲಿ ಪಟ್ಟಣಕ್ಕೆ ಸೇರಿದ ಆಸ್ತಿನೂ ಒಳಗೂಡಿದೆ. 21  ಪವಿತ್ರ ಕಾಣಿಕೆಯ ಮತ್ತು ಪಟ್ಟಣಕ್ಕೆ ಸೇರಿದ ಆಸ್ತಿಯ ಎರಡೂ ಕಡೆ ಇರೋ ಪ್ರದೇಶ ಪ್ರಧಾನನಿಗೆ ಸೇರುತ್ತೆ.+ ಇದು ಪವಿತ್ರ ಕಾಣಿಕೆಯಾಗಿರೋ ಪ್ರದೇಶದ ಪೂರ್ವ ಮತ್ತು ಪಶ್ಚಿಮ ಗಡಿಗಳ ಪಕ್ಕದಲ್ಲಿರುತ್ತೆ. ಆ ಎರಡೂ ಗಡಿಗಳ ಅಳತೆ 25,000 ಮೊಳ. ಪ್ರಧಾನನ ಪ್ರದೇಶದ ಗಡಿ ಮತ್ತು ಅದ್ರ ಅಕ್ಕಪಕ್ಕ ಇರೋ ಎರಡು ಕುಲಗಳ ಪ್ರದೇಶಗಳ ಗಡಿಗಳು ಒಂದೇ ಆಗಿರುತ್ತವೆ. ಆ ಪ್ರದೇಶ ಪ್ರಧಾನನಿಗಾಗಿ ಇರುತ್ತೆ. ಇದರ ಮಧ್ಯದಲ್ಲಿ ಪವಿತ್ರ ಕಾಣಿಕೆಯಾಗಿ ಪ್ರತ್ಯೇಕಿಸಿರೋ ಪ್ರದೇಶ ಮತ್ತು ಆರಾಧನಾ ಸ್ಥಳ ಇರುತ್ತೆ. 22  ಲೇವಿಯರ ಪ್ರದೇಶ ಮತ್ತು ಪಟ್ಟಣಕ್ಕೆ ಸೇರಿದ ಪ್ರದೇಶ ಪ್ರಧಾನನ ಪ್ರದೇಶದ ಮಧ್ಯ ಇರುತ್ತೆ. ಪ್ರಧಾನನ ಪ್ರದೇಶವು ಯೆಹೂದದ ಪ್ರದೇಶದ ಗಡಿ+ ಮತ್ತು ಬೆನ್ಯಾಮೀನಿನ ಪ್ರದೇಶದ ಗಡಿಯ ಮಧ್ಯ ಇರುತ್ತೆ. 23  ಉಳಿದ ಕುಲಗಳ ಪಾಲು ಯಾವುದಂದ್ರೆ, ಬೆನ್ಯಾಮೀನಿನ ಪಾಲು ಪೂರ್ವ ಗಡಿಯಿಂದ ಪಶ್ಚಿಮದ ಗಡಿಯ ತನಕ ಇರುತ್ತೆ.+ 24  ಬೆನ್ಯಾಮೀನಿನ ಪಾಲಿನ ದಕ್ಷಿಣಕ್ಕೆ ಸಿಮೆಯೋನಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿಯ ತನಕ ಇರುತ್ತೆ. 25  ಸಿಮೆಯೋನಿನ ಪಾಲಿನ ದಕ್ಷಿಣಕ್ಕೆ ಇಸ್ಸಾಕಾರಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿಯ ತನಕ ಇರುತ್ತೆ. 26  ಇಸ್ಸಾಕಾರಿನ ಪಾಲಿನ ದಕ್ಷಿಣಕ್ಕೆ ಜೆಬುಲೂನಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿಯ ತನಕ ಇರುತ್ತೆ.+ 27  ಜೆಬುಲೂನಿನ ಪಾಲಿನ ದಕ್ಷಿಣಕ್ಕೆ ಗಾದಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿಯ ತನಕ ಇರುತ್ತೆ. 28  ಗಾದಿನ ಗಡಿಗೆ ಅಂಟ್ಕೊಂಡಿರೋ ದಕ್ಷಿಣ ಗಡಿ ತಾಮಾರದಿಂದ+ ಹೊರಟು ಮೆರೀಬೋತ್‌-ಕಾದೇಶಿನ+ ನೀರಿನ ಹತ್ರದಿಂದ ನಾಲೆ*+ ತನಕ ಹೋಗಿ ಅಲ್ಲಿಂದ ಮಹಾ ಸಮುದ್ರದ ತನಕ* ಹೋಗುತ್ತೆ. 29  ನೀವು ಇಸ್ರಾಯೇಲ್‌ ಕುಲಗಳಿಗೆ ಆಸ್ತಿಯಾಗಿ ಹಂಚಬೇಕಾದ ದೇಶ ಇದೇ.+ ಇದು ಅವ್ರಿಗೆ ಸಿಗೋ ಪಾಲು”+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 30  “ಪಟ್ಟಣದ ಹೊರಗೆ ಹೋಗೋಕೆ ಈ ದಾರಿಗಳಿರುತ್ತೆ: ಪಟ್ಟಣದ ಉತ್ತರ ಗಡಿ 4,500 ಮೊಳ ಉದ್ದ ಇರುತ್ತೆ.+ 31  ಪಟ್ಟಣದ ಬಾಗಿಲುಗಳಿಗೆ ಇಸ್ರಾಯೇಲಿನ ಕುಲಗಳ ಹೆಸ್ರನ್ನೇ ಇಡಲಾಗುತ್ತೆ. ಉತ್ತರದಲ್ಲಿ ರೂಬೇನ್‌ ಬಾಗಿಲು, ಯೆಹೂದ ಬಾಗಿಲು, ಲೇವಿ ಬಾಗಿಲು, ಹೀಗೆ ಮೂರು ಬಾಗಿಲು ಇರುತ್ತೆ. 32  ಪಟ್ಟಣದ ಪೂರ್ವ ಗಡಿ 4,500 ಮೊಳ ಉದ್ದ ಇರುತ್ತೆ. ಅಲ್ಲಿ ಯೋಸೇಫ್‌ ಬಾಗಿಲು, ಬೆನ್ಯಾಮೀನ್‌ ಬಾಗಿಲು, ದಾನ್‌ ಬಾಗಿಲು, ಹೀಗೆ ಮೂರು ಬಾಗಿಲು ಇರುತ್ತೆ. 33  ಪಟ್ಟಣದ ದಕ್ಷಿಣ ಗಡಿ 4,500 ಮೊಳ ಉದ್ದ ಇರುತ್ತೆ. ಅಲ್ಲಿ ಸಿಮೆಯೋನ್‌ ಬಾಗಿಲು, ಇಸ್ಸಾಕಾರ್‌ ಬಾಗಿಲು, ಜೆಬುಲೂನ್‌ ಬಾಗಿಲು, ಹೀಗೆ ಮೂರು ಬಾಗಿಲು ಇರುತ್ತೆ. 34  ಪಟ್ಟಣದ ಪಶ್ಚಿಮ ಗಡಿ 4,500 ಮೊಳ ಉದ್ದ ಇರುತ್ತೆ. ಅಲ್ಲಿ ಗಾದ್‌ ಬಾಗಿಲು, ಅಶೇರ್‌ ಬಾಗಿಲು, ನಫ್ತಾಲಿ ಬಾಗಿಲು, ಹೀಗೆ ಮೂರು ಬಾಗಿಲು ಇರುತ್ತೆ. 35  ಪಟ್ಟಣದ ಸುತ್ತಳತೆ 18,000 ಮೊಳ. ಅವತ್ತಿಂದ ಆ ಪಟ್ಟಣದ ಹೆಸ್ರು, ‘ಯೆಹೋವ ಅಲ್ಲಿದ್ದಾನೆ’+ ಅಂತ ಆಗುತ್ತೆ.”

ಪಾದಟಿಪ್ಪಣಿ

ಅಥವಾ “ಹಾಮಾತಿನ ಗಡಿ ತನಕ.”
ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.
ಅದು, ಮೆಡಿಟರೇನಿಯನ್‌ ಸಮುದ್ರ.
ಅದು, ಈಜಿಪ್ಟಿನ ನಾಲೆ. ಪದವಿವರಣೆ ನೋಡಿ.