ಯೆಹೆಜ್ಕೇಲ 7:1-27

  • ಅಂತ್ಯ ಬಂದಿದೆ (1-27)

    • ಇಲ್ಲಿ ತನಕ ಬಂದಿರದ ಕಷ್ಟ (5)

    • ಹಣವನ್ನ ಬೀದಿಗಳಲ್ಲಿ ಬಿಸಾಡ್ತಾರೆ (19)

    • ಆಲಯವನ್ನ ಅಪವಿತ್ರ ಮಾಡ್ತಾರೆ (22)

7  ಯೆಹೋವ ಮತ್ತೆ ಹೀಗಂದನು:  “ಮನುಷ್ಯಕುಮಾರನೇ, ವಿಶ್ವದ ರಾಜ ಯೆಹೋವ ಇಸ್ರಾಯೇಲ್ಯರ ದೇಶಕ್ಕೆ ಹೇಳೋದು ಏನಂದ್ರೆ ‘ಅಂತ್ಯ ಬಂದಿದೆ! ಹೌದು, ಇಡೀ ದೇಶದ ಮೇಲೆ ಅಂತ್ಯ ಬಂದಿದೆ.  ಈಗ ನಿನ್ನ ಅಂತ್ಯ ಬಂದಿದೆ. ನಾನು ನನ್ನ ಕೋಪಾಗ್ನಿಯನ್ನ ನಿನ್ನ ಮೇಲೆ ಸುರಿತೀನಿ. ನಿನ್ನ ನಡತೆಗೆ ಸರಿಯಾಗಿ ನಿನಗೆ ತೀರ್ಪು ಕೊಡ್ತೀನಿ. ನಿನ್ನ ಎಲ್ಲ ಅಸಹ್ಯ ಕೆಲಸಗಳಿಗೆ ಲೆಕ್ಕ ಕೇಳ್ತೀನಿ.  ನಾನು ನಿನ್ನನ್ನ ನೋಡಿ ಸ್ವಲ್ಪಾನೂ ಕನಿಕರಪಡಲ್ಲ, ಅಯ್ಯೋ ಪಾಪ ಅನ್ನಲ್ಲ.+ ನೀನು ಬಿತ್ತಿದ್ದನ್ನ ಕೊಯ್ಯೋ ತರ ಮಾಡ್ತೀನಿ. ನಿನ್ನ ಅಸಹ್ಯ ಕೆಲಸಗಳಿಗೆ ತಕ್ಕ ಶಿಕ್ಷೆ ಕೊಡ್ತೀನಿ.+ ಆಗ, ನಾನೇ ಯೆಹೋವ ಅಂತ ನಿನಗೆ ಗೊತ್ತಾಗುತ್ತೆ.’+  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಕಷ್ಟ! ಇಲ್ಲಿ ತನಕ ಯಾರ ಮೇಲೂ ಬಂದಿರದ ಕಷ್ಟ ಬರ್ತಾ ಇದೆ!+  ಅಂತ್ಯ ಬರ್ತಿದೆ, ಬಂದೇ ಬರುತ್ತೆ. ಅದು ಥಟ್ಟಂತ ನಿನ್ನ ಮೇಲೆ ಬೀಳುತ್ತೆ. ನೋಡು, ಅದು ಬರ್ತಿದೆ!  ದೇಶದಲ್ಲಿ ವಾಸಿಸ್ತಾ ಇರುವವನೇ, ನಿನ್ನ ಸರದಿ* ಬಂದಿದೆ. ಆ ಸಮಯ ಬರ್ತಿದೆ. ಆ ದಿನ ಹತ್ರ ಇದೆ.+ ಬೆಟ್ಟಗಳ ಮೇಲೆ ಹರ್ಷಧ್ವನಿ ಅಲ್ಲ, ಬರೀ ಗೋಳಾಟ ಕೇಳಿಸ್ತಾ ಇದೆ.  ಆದಷ್ಟು ಬೇಗ ನಾನು ನನ್ನ ಕ್ರೋಧವನ್ನ ನಿನ್ನ ಮೇಲೆ ಸುರಿತೀನಿ.+ ನನ್ನ ಕೋಪಾಗ್ನಿಯನ್ನ ನಿನ್ನ ಮೇಲೆ ಹಾಕ್ತೀನಿ.+ ನಿನ್ನ ನಡತೆಗೆ ಸರಿಯಾಗಿ ತೀರ್ಪು ಕೊಡ್ತೀನಿ. ನಿನ್ನ ಎಲ್ಲ ಅಸಹ್ಯ ಕೆಲಸಗಳಿಗೆ ನಿನ್ನಿಂದ ಲೆಕ್ಕ ಕೇಳ್ತೀನಿ.  ನಾನು ನಿನ್ನನ್ನ ನೋಡಿ ಸ್ವಲ್ಪಾನೂ ಕನಿಕರಪಡಲ್ಲ, ಅಯ್ಯೋ ಪಾಪ ಅನ್ನಲ್ಲ.+ ನೀನು ಬಿತ್ತಿದ್ದನ್ನ ನೀನೇ ಕೊಯ್ಯೋ ತರ ಮಾಡ್ತೀನಿ. ನಿನ್ನ ಅಸಹ್ಯ ಕೆಲಸಗಳಿಗೆ ತಕ್ಕ ಶಿಕ್ಷೆ ಆಗುತ್ತೆ. ಆಗ ಯೆಹೋವನಾದ ನಾನೇ ನಿನ್ನನ್ನ ಶಿಕ್ಷಿಸ್ತಾ ಇದ್ದೀನಿ ಅಂತ ನಿನಗೆ ಗೊತ್ತಾಗುತ್ತೆ.+ 10  ನೋಡು, ನೋಡು! ಆ ದಿನ ಬರ್ತಿದೆ!+ ನಿನ್ನ ಸರದಿ* ಬಂದಿದೆ, ನಿನ್ನನ್ನ ಶಿಕ್ಷಿಸೋಕೆ ನಾನು ಕೋಲು ಸಿದ್ಧ ಮಾಡಿದ್ದೀನಿ. ಅದಕ್ಕೆ ಜಂಬ ಜಾಸ್ತಿ.* 11  ಹಿಂಸಾಚಾರ ಬೆಳೆದು ಬೆಳೆದು ಕೆಟ್ಟತನವನ್ನ ಶಿಕ್ಷಿಸೋ ಕೋಲು ಅದು.+ ನಿಮ್ಮಲ್ಲಿ ಯಾರೂ ಬದುಕಲ್ಲ. ನಿಮ್ಮ ಹಣ-ಆಸ್ತಿ, ನಿಮ್ಮ ಜನ್ರು, ನಿಮ್ಮ ಪ್ರಖ್ಯಾತಿ ಯಾವುದೂ ಉಳಿಯಲ್ಲ. 12  ಆ ಸಮಯ ಬಂದೇ ಬರುತ್ತೆ, ಆ ದಿನ ನಿಜವಾಗ್ಲೂ ಬರುತ್ತೆ. ಕೊಂಡ್ಕೊಳ್ಳೋನು ಖುಷಿಪಡದಿರಲಿ, ಮಾರುವವನು ಅಳದಿರಲಿ. ಯಾಕಂದ್ರೆ ಎಲ್ಲ ಜನ್ರ ಮೇಲೆ ನನಗೆ ಕೋಪ ಬರ್ತಿದೆ.*+ 13  ಜಮೀನನ್ನ ಮಾರಿದವನ ಜೀವ ಉಳಿದ್ರೂ ಅವನು ತನ್ನ ಜಮೀನಿಗೆ ವಾಪಸ್‌ ಹೋಗಲ್ಲ. ಯಾಕಂದ್ರೆ ದರ್ಶನದಲ್ಲಿ ಹೇಳಿದ ವಿಷ್ಯಗಳು ಇಡೀ ಸಮೂಹದ ಮೇಲೆ ಬರುತ್ತೆ. ಯಾರೂ ವಾಪಸ್‌ ಹೋಗಲ್ಲ. ಅವ್ರ ತಪ್ಪಿಂದ* ಅವ್ರಲ್ಲಿ ಒಬ್ಬರ ಜೀವಾನೂ ಉಳಿಯಲ್ಲ. 14  ಅವರು ತುತ್ತೂರಿ ಊದಿದ್ದಾರೆ,+ ಎಲ್ರೂ ಸಿದ್ಧರಾಗಿದ್ದಾರೆ, ಆದ್ರೆ ಒಬ್ಬರೂ ಯುದ್ಧಕ್ಕೆ ಹೋಗ್ತಿಲ್ಲ. ಯಾಕಂದ್ರೆ ಇಡೀ ಸಮೂಹದ ಮೇಲೆ ನನಗೆ ಕೋಪ ಬರ್ತಿದೆ.+ 15  ಪಟ್ಟಣದ ಹೊರಗೆ ಕತ್ತಿ,+ ಒಳಗೆ ಅಂಟುರೋಗ, ಬರಗಾಲ ಇದೆ. ಪಟ್ಟಣದ ಹೊರಗೆ ಇರೋರು ಕತ್ತಿಯಿಂದ ಸಾಯ್ತಾರೆ, ಒಳಗೆ ಇರೋರು ಬರಗಾಲ, ಅಂಟುರೋಗದಿಂದ ನಾಶವಾಗ್ತಾರೆ.+ 16  ಇದ್ರಿಂದ ತಪ್ಪಿಸ್ಕೊಂಡವರು ಬೆಟ್ಟಗಳಿಗೆ ಹೋಗ್ತಾರೆ. ಅವ್ರಲ್ಲಿ ಒಬ್ಬೊಬ್ಬನೂ ತಾನು ಮಾಡಿದ ತಪ್ಪಿಗಾಗಿ ಕಣಿವೆಗಳಲ್ಲಿರೋ ಪಾರಿವಾಳಗಳ ತರ ಮುಲುಗ್ತಾನೆ.+ 17  ಭಯದಿಂದ ಅವ್ರೆಲ್ಲರ ಕೈಗಳು ಬಿದ್ದುಹೋಗುತ್ತೆ, ಅವ್ರ ಮಂಡಿಯಿಂದ ನೀರು ತೊಟ್ಟಿಕ್ಕುತ್ತೆ.*+ 18  ಅವರು ಗೋಣಿಬಟ್ಟೆ ಹಾಕೊಂಡಿದ್ದಾರೆ.+ ಅವ್ರ ಮೈಯೆಲ್ಲ ಗಡಗಡ ಅಂತ ನಡುಗ್ತಿದೆ. ಎಲ್ರೂ ನಾಚಿಕೆಪಡ್ತಾರೆ, ತಲೆ ಬೋಳಾಗುತ್ತೆ.*+ 19  ಅವರು ತಮ್ಮ ಬೆಳ್ಳಿಯನ್ನ ಬೀದಿಗಳಲ್ಲಿ ಬಿಸಾಡ್ತಾರೆ, ಅವ್ರ ಹತ್ರ ಇರೋ ಚಿನ್ನ ನೋಡಿ ಅವ್ರಿಗೇ ಅಸಹ್ಯ ಆಗುತ್ತೆ. ಯೆಹೋವನ ಉಗ್ರಕೋಪದ ದಿನ ಅವ್ರ ಹತ್ರ ಇರೋ ಚಿನ್ನಕ್ಕಾಗಲಿ ಬೆಳ್ಳಿಗಾಗಲಿ ಅವ್ರನ್ನ ಕಾಪಾಡೋಕೆ ಆಗಲ್ಲ.+ ಅವುಗಳಿಂದ ಅವ್ರಿಗೆ ತೃಪ್ತಿ ಆಗಲ್ಲ, ಹೊಟ್ಟೆ ತುಂಬಲ್ಲ. ಯಾಕಂದ್ರೆ ಅವರು ಪಾಪ ಮಾಡೋಕೆ ಆ ಚಿನ್ನಬೆಳ್ಳಿನೇ ಅವರಿಗೆ ಎಡವಿಸೋ ಕಲ್ಲಾಗಿದೆ. 20  ಅವರು ತಮ್ಮ ಅಂದಚೆಂದದ ಆಭರಣಗಳ ಬಗ್ಗೆ ಕೊಚ್ಕೊಳ್ತಿದ್ರು. ಆ ಆಭರಣಗಳಿಂದ ಅಸಹ್ಯ ಮೂರ್ತಿಗಳನ್ನ, ಹೇಸಿಗೆ ಹುಟ್ಟಿಸೋ ಮೂರ್ತಿಗಳನ್ನ ಮಾಡ್ಕೊಂಡ್ರು.+ ಹಾಗಾಗಿ ಆ ಚಿನ್ನ ಬೆಳ್ಳಿಯನ್ನ ನೋಡಿ ಅವ್ರಿಗೇ ಹೇಸಿಗೆ ಆಗೋ ತರ ನಾನು ಮಾಡ್ತೀನಿ. 21  ಆ* ಚಿನ್ನ ಬೆಳ್ಳಿಯನ್ನ ವಿದೇಶಿಯರಿಗೂ ಭೂಮಿಯಲ್ಲಿರೋ ಕೆಟ್ಟವರಿಗೂ ಕೊಡ್ತೀನಿ. ಅವರು ಅದನ್ನ ಲೂಟಿ ಮಾಡಿ ಅಪವಿತ್ರ ಮಾಡ್ತಾರೆ. 22  ನಾನು ಅವ್ರ* ಕಡೆಯಿಂದ ನನ್ನ ಮುಖ ತಿರುಗಿಸ್ಕೊಳ್ತೀನಿ,+ ಮರೆಯಾಗಿರೋ ನನ್ನ ಸ್ಥಳವನ್ನ* ಅವರು* ಅಪವಿತ್ರ ಮಾಡ್ತಾರೆ, ದರೋಡೆಕೋರರು ಅದ್ರೊಳಗೆ ನುಗ್ಗಿ ಅದನ್ನ ಅಪವಿತ್ರ ಮಾಡ್ತಾರೆ.+ 23  ಒಂದು ಸರಪಣಿ*+ ಮಾಡು. ಯಾಕಂದ್ರೆ ಅನ್ಯಾಯವಾಗಿ ತೀರ್ಪು ಕೊಟ್ಟು ಕೊಂದವ್ರ ರಕ್ತ ದೇಶದಲ್ಲೆಲ್ಲ ತುಂಬಿದೆ.+ ಪಟ್ಟಣದಲ್ಲಿ ಎಲ್ಲಿ ನೋಡಿದ್ರೂ ಬರೀ ಹಿಂಸೆ.+ 24  ಜನಾಂಗಗಳಲ್ಲೇ ತುಂಬ ಕೆಟ್ಟವರನ್ನ ನಾನು ಒಳಗೆ ಕರ್ಕೊಂಡು ಬರ್ತಿನಿ.+ ಅವರು ಅಲ್ಲಿನ ಮನೆಗಳನ್ನ ವಶ ಮಾಡ್ಕೊಳ್ತಾರೆ.+ ನಾನು ಬಲಿಷ್ಠರ ಗರ್ವ ಭಂಗ ಮಾಡ್ತೀನಿ. ಅವ್ರ ಪವಿತ್ರ ಸ್ಥಳಗಳು ಅಪವಿತ್ರ ಆಗುತ್ತೆ.+ 25  ಅವರು ಕಷ್ಟನೋವಲ್ಲಿ ಇರುವಾಗ ಶಾಂತಿ ನೆಮ್ಮದಿಗಾಗಿ ಹಾತೊರಿತಾರೆ, ಆದ್ರೆ ಅದು ಅವ್ರಿಗೆ ಸಿಗಲ್ಲ.+ 26  ಒಂದಾದ ಮೇಲೊಂದು ಕಷ್ಟ ಬರುತ್ತೆ, ಮೇಲಿಂದ ಮೇಲೆ ಸುದ್ದಿ ಕೇಳಿಸುತ್ತೆ. ಜನ್ರು ಪ್ರವಾದಿ ಹತ್ರ ಹೋಗಿ ಏನಾದ್ರೂ ದರ್ಶನ ಆಯ್ತಾ ಅಂತ ಕೇಳೋದು ವ್ಯರ್ಥ.+ ನಿಯಮ ಪುಸ್ತಕದಿಂದ ಪುರೋಹಿತರು ಕಲಿಸಿದ್ರೂ, ಹಿರಿಯರು ಸಲಹೆ ಕೊಟ್ರೂ ಅವ್ರಿಗೆ ಯಾವ ಪ್ರಯೋಜನನೂ ಸಿಗಲ್ಲ.+ 27  ರಾಜ ಅಳ್ತಾನೆ,+ ಪ್ರಧಾನವ್ಯಕ್ತಿ ಬೇಜಾರಲ್ಲಿ ಮುಳುಗಿ ಹೋಗ್ತಾನೆ. ಭೀತಿಯಿಂದ ದೇಶದ ಜನ್ರ ಕೈಗಳು ನಡುಗುತ್ತೆ. ಅವ್ರ ನಡತೆಗೆ ತಕ್ಕ ಹಾಗೆ ನಾನು ಅವ್ರ ಜೊತೆ ನಡ್ಕೊಳ್ತೀನಿ. ಅವರು ಬೇರೆಯವ್ರಿಗೆ ಹೇಗೆ ನ್ಯಾಯ ತೀರಿಸಿದ್ರೋ ಹಾಗೇ ನಾನು ಅವ್ರಿಗೆ ನ್ಯಾಯ ತೀರಿಸ್ತೀನಿ. ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’”+

ಪಾದಟಿಪ್ಪಣಿ

ಬಹುಶಃ, “ಮಾಲೆ.”
ಅಕ್ಷ. “ಕೋಲು ಹೂಬಿಟ್ಟಿದೆ, ದುರಹಂಕಾರ ಚಿಗುರಿದೆ.”
ಬಹುಶಃ, “ಮಾಲೆ.”
ನಾಶನ ಎಲ್ಲರ ಮೇಲೆ ಬರೋದ್ರಿಂದ ಆಸ್ತಿ ತಗೊಳ್ಳೋನಿಗೂ ಮಾರೋನಿಗೂ ಯಾವ ಪ್ರಯೋಜನನೂ ಆಗಲ್ಲ.
ಬಹುಶಃ, “ತಪ್ಪು ದಾರಿ ಹಿಡಿದಿದ್ರಿಂದ.”
ಅಂದ್ರೆ, ಭಯದಲ್ಲಿ ಉಚ್ಚೆ ಹೊಯ್ಕೊಳ್ತಾರೆ.
ಅಂದ್ರೆ, ಶೋಕದಿಂದಾಗಿ ಅವ್ರ ತಲೆ ಬೋಳಿಸಲಾಗುತ್ತೆ.
ಅದು, ಮೂರ್ತಿಗಳನ್ನ ಮಾಡೋಕೆ ಬಳಸಿದ.
ಅಂದ್ರೆ, ದೇವಜನರ.
ಯೆಹೋವನ ಆಲಯದ ಅತಿ ಪವಿತ್ರ ಸ್ಥಳಕ್ಕೆ ಸೂಚಿಸಬಹುದು.
ಅಂದ್ರೆ, ಶತ್ರುಗಳು.
ಅದು, ಜೈಲಿನ ಬೇಡಿ.