ಯೆಹೋಶುವ 13:1-33

  • ಇನ್ನೂ ವಶ ಮಾಡಬೇಕಾಗಿದ್ದ ಪ್ರದೇಶಗಳು (1-7)

  • ಹಂಚಿಕೊಡಲಾದ ಯೋರ್ದನಿನ ಪೂರ್ವಕ್ಕಿದ್ದ ಪ್ರದೇಶಗಳು (8-14)

  • ರೂಬೇನ್‌ಗೆ ಸಿಕ್ಕಿದ ಆಸ್ತಿ (15-23)

  • ಗಾದನಿಗೆ ಸಿಕ್ಕಿದ ಆಸ್ತಿ (24-28)

  • ಮನಸ್ಸೆಗೆ ಪೂರ್ವಕ್ಕೆ ಸಿಕ್ಕಿದ ಆಸ್ತಿ (29-32)

  • ಯೆಹೋವನೇ ಲೇವಿಯರ ಆಸ್ತಿ (33)

13  ಯೆಹೋಶುವ ಈಗ ತುಂಬ ಮುದುಕನಾಗಿದ್ದ. ಅವನ ಸಾವು ಹತ್ರ ಇತ್ತು.+ ಹಾಗಾಗಿ ಯೆಹೋವ ಅವನಿಗೆ ಹೀಗೆ ಹೇಳಿದನು: “ನೀನು ಮುದುಕನಾಗಿದ್ದೀಯ, ಇನ್ನು ಹೆಚ್ಚು ದಿನ ಬದುಕಲ್ಲ. ಆದ್ರೆ ವಶ ಮಾಡ್ಕೊಳ್ಳಬೇಕಾದ* ಪ್ರದೇಶಗಳು ಇನ್ನೂ ತುಂಬ ಇವೆ.  ಉಳಿದಿರೋ ಪ್ರದೇಶಗಳು+ ಯಾವುದಂದ್ರೆ: ಫಿಲಿಷ್ಟಿಯರ ಮತ್ತು ಗೆಷೂರ್ಯರ+ ಎಲ್ಲ ಪ್ರದೇಶಗಳು  (ಈಜಿಪ್ಟಿನ ಪೂರ್ವಕ್ಕಿರೋ* ನೈಲ್‌ ನದಿಯ ಶಾಖೆಯಿಂದ* ಉತ್ತರಕ್ಕಿರೋ ಎಕ್ರೋನಿನ ಗಡಿಪ್ರದೇಶದ ತನಕ. ಇದನ್ನ ಕಾನಾನ್ಯರ ಪ್ರದೇಶ ಅಂತ ಹೇಳ್ತಿದ್ರು).+ ಇವುಗಳಲ್ಲಿ ಫಿಲಿಷ್ಟಿಯರ ಐದು ಪ್ರಭುಗಳ+ ಅಂದ್ರೆ ಗಾಜದವರ, ಅಷ್ಡೋದಿನವರ,+ ಅಷ್ಕೆಲೋನಿನವರ,+ ಗಿತ್ತೀಯರ,+ ಎಕ್ರೋನಿನವರ+ ಪ್ರದೇಶಗಳೂ ಇದ್ವು. ಅವ್ವೀಮ್ಯರ+ ಪ್ರದೇಶ  ದಕ್ಷಿಣದಲ್ಲಿತ್ತು. ಕಾನಾನ್ಯರ ಇಡೀ ಪ್ರದೇಶ, ಸೀದೋನ್ಯರಿಗೆ+ ಸೇರಿದ ಮೆಯಾರಾದಿಂದ ಅಮೋರಿಯರ ಗಡಿಪ್ರದೇಶದಲ್ಲಿದ್ದ ಅಫೇಕಿನ ತನಕದ ಪ್ರದೇಶ,  ಗೆಬಾಲ್ಯರ+ ಪ್ರದೇಶ, ಪೂರ್ವಕ್ಕಿರೋ ಇಡೀ ಲೆಬನೋನ್‌ ಪ್ರದೇಶ, ಹೆರ್ಮೋನ್‌ ಬೆಟ್ಟದ ಬುಡದಲ್ಲಿರೋ ಬಾಲ್ಗಾದಿನಿಂದ ಲೆಬೊ-ಹಾಮಾತಿನ+ ತನಕದ* ಪ್ರದೇಶ,  ಲೆಬನೋನಿನಿಂದ+ ಮಿಸ್ರೆಫೋತ್ಮಯಿಮ್‌ನ+ ತನಕ ಇರೋ ಬೆಟ್ಟ ಪ್ರದೇಶಗಳಲ್ಲಿ ಇರೋ ಜನ್ರ ಮತ್ತು ಸೀದೋನ್ಯರ+ ಎಲ್ಲ ಪ್ರದೇಶಗಳು. ಇಲ್ಲಿ ವಾಸ ಮಾಡ್ತಿರೋ ಎಲ್ಲ ಜನ್ರನ್ನ ನಾನು ಇಸ್ರಾಯೇಲ್ಯರ ಮುಂದಿಂದ ಓಡಿಸಿಬಿಡ್ತೀನಿ.*+ ನಾನು ಈಗಾಗ್ಲೇ ನಿನಗೆ ಆಜ್ಞೆ ಕೊಟ್ಟಿರೋ ತರ ನೀನು ಈ ದೇಶನ ಇಸ್ರಾಯೇಲ್ಯರಿಗೆ ಆಸ್ತಿಯಾಗಿ ನೇಮಿಸಿದ್ರೆ ಸಾಕು.+  ಹಾಗಾಗಿ ಈಗ ಇದನ್ನ ಒಂಬತ್ತು ಕುಲಗಳಿಗೆ, ಮನಸ್ಸೆಯ ಅರ್ಧ ಕುಲದವರಿಗೆ ಪಾಲು ಮಾಡಿ ಕೊಡು.”+  ಮನಸ್ಸೆ ಕುಲದ ಉಳಿದ ಅರ್ಧ ಜನ್ರಿಗೆ, ರೂಬೇನ್ಯರಿಗೆ, ಗಾದ್ಯರಿಗೆ ಮೋಶೆ ಯೋರ್ದನಿನ ಪೂರ್ವದ ಕಡೆ ಕೊಟ್ಟಿದ್ದ ಆಸ್ತಿನ ಅವರು ತಗೊಂಡ್ರು. ಯೆಹೋವನ ಸೇವಕ ಮೋಶೆ ಅವರಿಗೆ ಕೊಟ್ಟಿದ್ದ ಪ್ರದೇಶಗಳು ಯಾವುದಂದ್ರೆ:+  ಅರ್ನೋನ್‌ ಕಣಿವೆಯ+ ಅಂಚಲ್ಲಿದ್ದ ಅರೋಯೇರಿನಿಂದ+ ಕಣಿವೆಯ ಮಧ್ಯದಲ್ಲಿದ್ದ ಪಟ್ಟಣನೂ ಸೇರಿ, ದೀಬೋನಿನ ತನಕ ವಿಸ್ತರಿಸಿರೋ ಮೇದೆಬದ ಪ್ರಸ್ಥಭೂಮಿ ತನಕ* ಇರೋ ಎಲ್ಲ ಪ್ರದೇಶಗಳು, 10  ಹೆಷ್ಬೋನಲ್ಲಿ ಆಳ್ತಿದ್ದ ಅಮೋರಿಯರ ರಾಜ ಸೀಹೋನನ ಎಲ್ಲ ಪಟ್ಟಣಗಳು, ಇವು ಅಮ್ಮೋನಿಯರ ಗಡಿ ತನಕ ಇತ್ತು.+ 11  ಅಷ್ಟೇ ಅಲ್ಲ ಗಿಲ್ಯಾದ್‌, ಗೆಷೂರ್ಯರ ಮತ್ತು ಮಾಕಾತ್ಯರ+ ಪ್ರದೇಶಗಳು, ಇಡೀ ಹೆರ್ಮೋನ್‌ ಬೆಟ್ಟ ಹಾಗೂ ಸಲ್ಕಾ+ ತನಕ ಇರೋ ಬಾಷಾನಿನ ಎಲ್ಲ ಪ್ರದೇಶಗಳು,+ 12  ಅಷ್ಟರೋತ್‌ ಮತ್ತು ಎದ್ರೈಯಲ್ಲಿ ಆಳ್ತಿದ್ದ ಬಾಷಾನಿನ ರಾಜ ಓಗನ ಇಡೀ ಸಾಮ್ರಾಜ್ಯ. (ಇವನು ರೆಫಾಯರ ಕೊನೆಯವ್ರಲ್ಲಿ ಒಬ್ಬ.)+ ಮೋಶೆ ಇವ್ರನ್ನ ಸೋಲಿಸಿ ಆ ಪ್ರದೇಶಗಳಿಂದ ಓಡಿಸಿಬಿಟ್ಟ.*+ 13  ಆದ್ರೆ ಗೆಷೂರ್ಯರನ್ನ, ಮಾಕಾತ್ಯರನ್ನ ಇಸ್ರಾಯೇಲ್ಯರು ಓಡಿಸಲಿಲ್ಲ.*+ ಹಾಗಾಗಿ ಗೆಷೂರಿನ, ಮಾಕತಿನ ಜನ ಇವತ್ತಿನ ತನಕ ಇಸ್ರಾಯೇಲ್ಯರ ಮಧ್ಯದಲ್ಲೇ ಇದ್ದಾರೆ. 14  ಮೋಶೆ ಲೇವಿ ಕುಲದವ್ರಿಗೆ ಮಾತ್ರ ಆಸ್ತಿ ಕೊಡಲಿಲ್ಲ.+ ಇಸ್ರಾಯೇಲ್ಯರ ದೇವರಾದ ಯೆಹೋವ ಅವ್ರಿಗೆ ಮಾತು ಕೊಟ್ಟ ಹಾಗೇ+ ಜನ ದೇವರಿಗೆ ಬೆಂಕಿ ಮೂಲಕ ಕೊಡ್ತಿದ್ದ ಬಲಿಗಳ ಭಾಗನೇ ಅವ್ರ ಆಸ್ತಿಯಾಗಿತ್ತು.+ 15  ಆಮೇಲೆ ಮೋಶೆ ರೂಬೇನ್‌ ಕುಲದವ್ರಿಗೆ ಅವ್ರ ಮನೆತನಗಳ ಪ್ರಕಾರ ಆಸ್ತಿ ಕೊಟ್ಟ. ಆ ಪ್ರದೇಶಗಳು ಯಾವುದಂದ್ರೆ: 16  ಅರ್ನೋನ್‌ ಕಣಿವೆಯ ಅಂಚಲ್ಲಿದ್ದ ಅರೋಯೇರಿನಿಂದ ಕಣಿವೆಯ ಮಧ್ಯದಲ್ಲಿದ್ದ ಪಟ್ಟಣನೂ ಸೇರಿ, ಮೇದೆಬದ ಪ್ರಸ್ಥಭೂಮಿ ತನಕ ಇರೋ ಎಲ್ಲ ಪ್ರದೇಶಗಳು, 17  ಹೆಷ್ಬೋನ್‌ ಮತ್ತು ಪ್ರಸ್ಥಭೂಮಿ ಮೇಲಿರೋ ಅದ್ರ ಎಲ್ಲ ಪಟ್ಟಣಗಳು,+ ದೀಬೋನ್‌, ಬಾಮೋತ್‌-ಬಾಳ್‌, ಬೇತ್‌-ಬಾಳ್‌-ಮೆಯೋನ್‌,+ 18  ಯಹಜ,+ ಕೆದೇಮೋತ್‌,+ ಮೇಫಾಯತ್‌,+ 19  ಕಿರ್ಯಾತಯಿಮ್‌, ಸಿಬ್ಮ,+ ಕಣಿವೆ ಹತ್ರ ಇರೋ ಬೆಟ್ಟದ ಮೇಲಿನ ಚೆರೆತ್‌-ಶಹರ್‌, 20  ಬೇತ್‌-ಪೆಗೋರ್‌, ಪಿಸ್ಗಾದ ಇಳಿಜಾರು+ ಪ್ರದೇಶ, ಬೇತ್‌-ಯೆಷಿಮೋತ್‌,+ 21  ಪ್ರಸ್ಥಭೂಮಿಯ ಎಲ್ಲ ಪಟ್ಟಣಗಳು ಮತ್ತು ಹೆಷ್ಬೋನಲ್ಲಿ+ ಆಳ್ತಿದ್ದ ಅಮೋರಿಯರ ರಾಜ ಸೀಹೋನನ ಇಡೀ ಸಾಮ್ರಾಜ್ಯ. ಮೋಶೆ ಸೀಹೋನನನ್ನ ಮತ್ತು ಅದೇ ಪ್ರದೇಶದಲ್ಲಿ ವಾಸವಾಗಿದ್ದು ಇವನ ಕೈಕೆಳಗಿದ್ದ ಮಿದ್ಯಾನಿನ ಪ್ರಧಾನರಾದ ಎವೀ, ರೆಕೆಮ್‌, ಚೂರ್‌, ಹೂರ್‌ ಮತ್ತು ರೆಬಾ+ ಅನ್ನೋವ್ರನ್ನ ಸೋಲಿಸಿದ.+ 22  ಇಸ್ರಾಯೇಲ್ಯರು ಕತ್ತಿಯಿಂದ ಕೊಂದವ್ರಲ್ಲಿ ಬೆಯೋರನ ಮಗನೂ ಕಣಿಹೇಳುವವನೂ+ ಆಗಿದ್ದ ಬಿಳಾಮನೂ+ ಒಬ್ಬನಾಗಿದ್ದ. 23  ಯೋರ್ದನ್‌ ನದಿ ರೂಬೇನ್ಯರ ಗಡಿ ಆಗಿತ್ತು. ಈ ಪ್ರದೇಶದಲ್ಲಿದ್ದ ಪಟ್ಟಣಗಳು, ಹಳ್ಳಿಗಳು ರೂಬೇನ್‌ ಕುಲದ ಮನೆತನಗಳಿಗೆ ಸಿಕ್ಕಿದ ಆಸ್ತಿ. 24  ಆಮೇಲೆ ಮೋಶೆ ಗಾದ್‌ ಕುಲದವ್ರಿಗೆ ಅವ್ರ ಮನೆತನಗಳ ಪ್ರಕಾರ ಆಸ್ತಿ ಕೊಟ್ಟ. ಆ ಪ್ರದೇಶಗಳು ಯಾವುದಂದ್ರೆ: 25  ಯಜ್ಜೇರ್‌,+ ಗಿಲ್ಯಾದಿನ ಎಲ್ಲ ಪಟ್ಟಣಗಳು, ಅರೋಯೇರಿನ ತನಕ ವಿಸ್ತರಿಸಿರೋ ರಬ್ಬಾದ+ ಎದುರಿಗಿದ್ದ ಅಮ್ಮೋನಿಯರ+ ಅರ್ಧ ರಾಜ್ಯ, 26  ಹೆಷ್ಬೋನಿಂದ+ ರಾಮತ್‌-ಮಿಚ್ಪೆವರೆಗೆ, ಬೆಟೋನೀಮ್‌, ಮಹನಯಿಮಿನಿಂದ+ ದೆಬೀರಿನ ಗಡಿ ತನಕ, 27  ಹೆಷ್ಬೋನಿನ ರಾಜನಾಗಿದ್ದ ಸೀಹೋನನ+ ಉಳಿದ ಸಾಮ್ರಾಜ್ಯ ಅಂದ್ರೆ ಕಣಿವೆಯಲ್ಲಿದ್ದ ಬೇತ್‌-ಹಾರಾಮ್‌, ಬೇತ್‌-ನಿಮ್ರಾ,+ ಸುಕ್ಕೋತ್‌,+ ಚಾಫೋನ್‌ ಪ್ರದೇಶಗಳು. ಅವ್ರ ಪ್ರದೇಶ ಯೋರ್ದನಿನ ಪೂರ್ವ ಪ್ರದೇಶದಿಂದ ಕಿನ್ನೆರೆತ್‌ ಸಮುದ್ರದ+ ತನಕ* ಇತ್ತು. 28  ಈ ಪ್ರದೇಶದಲ್ಲಿದ್ದ ಪಟ್ಟಣಗಳು ಮತ್ತು ಹಳ್ಳಿಗಳು ಗಾದ್ಯರ ಮನೆತನಗಳಿಗೆ ಸಿಕ್ಕಿದ ಆಸ್ತಿ. 29  ಅಷ್ಟೇ ಅಲ್ಲ ಮೋಶೆ ಮನಸ್ಸೆಯ ಅರ್ಧ ಕುಲದವ್ರಿಗೆ ಅವ್ರ ಮನೆತನಗಳ ಪ್ರಕಾರ ಈ ಪ್ರದೇಶಗಳನ್ನ ಆಸ್ತಿಯಾಗಿ ಕೊಟ್ಟ.+ ಅವು ಯಾವುದಂದ್ರೆ: 30  ಮಹನಯಿಮಿನಿಂದ + ಬಾಷಾನಿನ ಎಲ್ಲ ಪ್ರದೇಶಗಳು ಅಂದ್ರೆ ಬಾಷಾನಿನ ರಾಜ ಓಗನ ಇಡೀ ಸಾಮ್ರಾಜ್ಯ, ಬಾಷಾನಿನಲ್ಲಿದ್ದ ಯಾಯೀರನ+ ಡೇರೆಗಳಿರೋ ಎಲ್ಲ ಗ್ರಾಮಗಳು, ಜೊತೆಗೆ 60 ಪಟ್ಟಣಗಳು, 31  ಮನಸ್ಸೆಯ ಮಗನಾಗಿದ್ದ ಮಾಕೀರನಿಗೆ+ ಅಂದ್ರೆ ಅವನ ಗಂಡು ಮಕ್ಕಳಲ್ಲಿ ಅರ್ಧ ಜನ್ರ ಕುಟುಂಬಗಳಿಗೆ ಗಿಲ್ಯಾದಿನ ಅರ್ಧ ಭಾಗ, ಬಾಷಾನಿನ ರಾಜ ಓಗನ ಸಾಮ್ರಾಜ್ಯದಲ್ಲಿದ್ದ ಅಷ್ಟರೋತ್‌ ಮತ್ತು ಎದ್ರೈ+ ಪಟ್ಟಣಗಳು ಸಿಕ್ತು. 32  ಇದಿಷ್ಟು ಯೋರ್ದನಿನ ಆಕಡೆ, ಯೆರಿಕೋವಿನ ಪೂರ್ವಕ್ಕಿದ್ದ ಮೋವಾಬಿನ ಬಯಲು ಪ್ರದೇಶಗಳಲ್ಲಿ ಮೋಶೆ ಅವ್ರಿಗೆ ಕೊಟ್ಟಿದ್ದ ಆಸ್ತಿಗಳು.+ 33  ಆದ್ರೆ ಮೋಶೆ ಲೇವಿ ಕುಲದವ್ರಿಗೆ ಆಸ್ತಿ ಕೊಟ್ಟಿರಲಿಲ್ಲ.+ ಇಸ್ರಾಯೇಲ್‌ ದೇವರಾದ ಯೆಹೋವ ಮಾತು ಕೊಟ್ಟ ಹಾಗೆ ಆತನೇ ಅವ್ರ ಆಸ್ತಿ.+

ಪಾದಟಿಪ್ಪಣಿ

ಅಥವಾ “ಜಯಿಸಬೇಕಾದ.”
ಅಥವಾ “ಶೀಹೋರಿಂದ.”
ಅಕ್ಷ. “ಎದುರಿಗಿರೋ.”
ಅಥವಾ “ಹಾಮಾತಿನ ಬಾಗಿಲ ತನಕದ.”
ಅಕ್ಷ. “ಹೊರಗೆ ಹಾಕು.”
ಅಥವಾ “ಎತ್ತರದಲ್ಲಿ ಸಮತಟ್ಟಾದ ಪ್ರದೇಶದ ತನಕ.”
ಅಕ್ಷ. “ಹೊರಗೆ ಹಾಕು.”
ಅಕ್ಷ. “ಹೊರಗೆ ಹಾಕು.”
ಅದು, ಗೆನೆಜರೇತ್‌ ಸರೋವರ ಅಥವಾ ಗಲಿಲಾಯ ಸಮುದ್ರ.