ಯೆಹೋಶುವ 18:1-28

  • ಉಳಿದ ಪ್ರದೇಶಗಳನ್ನ ಶೀಲೋನಲ್ಲಿ ಹಂಚ್ಕೊಟ್ರು (1-10)

  • ಬೆನ್ಯಾಮೀನನ ಆಸ್ತಿ (11-28)

18  ಆಮೇಲೆ ಇಸ್ರಾಯೇಲ್ಯರ ಇಡೀ ಜನಾಂಗ ಶೀಲೋನಲ್ಲಿ+ ಸಭೆ ಸೇರಿ, ಅಲ್ಲಿ ದೇವದರ್ಶನ ಡೇರೆಯನ್ನ ನಿಲ್ಲಿಸಿದ್ರು.+ ಈಗಾಗ್ಲೇ ಅವರು ಕಾನಾನ್‌ ದೇಶವನ್ನೆಲ್ಲ ವಶ ಮಾಡ್ಕೊಂಡಿದ್ರು.+  ಆದ್ರೆ ಇಸ್ರಾಯೇಲಿನ ಏಳು ಕುಲದವ್ರಿಗೆ ಇನ್ನೂ ಆಸ್ತಿ ಹಂಚ್ಕೊಟ್ಟಿರಲಿಲ್ಲ.  ಹಾಗಾಗಿ ಯೆಹೋಶುವ ಇಸ್ರಾಯೇಲ್ಯರಿಗೆ ಹೀಗಂದ: “ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮಗೆ ಕೊಟ್ಟಿರೋ ದೇಶನ ವಶ ಮಾಡ್ಕೊಳ್ಳೋಕೆ ಇನ್ನೆಷ್ಟು ತಡಮಾಡ್ತೀರ?+  ಪ್ರತಿ ಕುಲದಿಂದ ಮೂರು ಮೂರು ಜನ್ರನ್ನ ಆರಿಸಿ. ಇಡೀ ದೇಶ ಸುತ್ತಾಡಿ ಬರೋಕೆ ಅವ್ರನ್ನ ಕಳಿಸ್ತೀನಿ. ಅವರು ಹೋಗಿ ತಮ್ಮ ಕುಲಕ್ಕೆ ಬರಬೇಕಾದ ಪ್ರದೇಶಗಳ ಪಟ್ಟಿ ಮಾಡ್ಕೊಂಡು ನನ್ನ ಹತ್ರ ಬರಲಿ.  ಅವರು ಆ ಪ್ರದೇಶಗಳನ್ನ ಏಳು ಪಾಲುಮಾಡಿ ಅದನ್ನ ತಮ್ಮ ತಮ್ಮಲ್ಲೇ ಹಂಚ್ಕೊಳ್ಳಲಿ.+ ಯೆಹೂದ ಕುಲ ದಕ್ಷಿಣಕ್ಕಿರೋ ತಮ್ಮ ಪ್ರದೇಶದಲ್ಲಿ+ ಮತ್ತು ಯೋಸೇಫನ ವಂಶದವರು ಉತ್ತರಕ್ಕಿರೋ ತಮ್ಮ ಪ್ರದೇಶದಲ್ಲಿ ಉಳ್ಕೊಳ್ತಾರೆ.+  ಹಾಗಾಗಿ ನೀವು ಹೋಗಿ ದೇಶ ಸುತ್ತಾಡಿ ಅದನ್ನ ಏಳು ಪಾಲು ಮಾಡಿ, ಅವುಗಳ ನಕ್ಷೆನ ನನ್ನ ಹತ್ರ ತಗೊಂಡು ಬನ್ನಿ. ನಮ್ಮ ದೇವರಾದ ಯೆಹೋವನ ಮುಂದೆ ನಿಮಗಾಗಿ ಚೀಟಿ ಹಾಕ್ತೀನಿ.+  ಆದ್ರೆ ಲೇವಿಯರಿಗೆ ಅದ್ರಲ್ಲಿ ಯಾವುದೇ ಪಾಲು ಸಿಗಲ್ಲ.+ ಯಾಕಂದ್ರೆ ಯೆಹೋವನಿಗೆ ಮಾಡೋ ಪುರೋಹಿತ ಸೇವೆನೇ ಅವ್ರ ಆಸ್ತಿ.+ ಗಾದ್‌, ರೂಬೇನ್‌, ಮನಸ್ಸೆ ಕುಲದ ಅರ್ಧ ಜನ್ರಿಗೆ+ ಯೋರ್ದನಿನ ಪೂರ್ವಕ್ಕೆ ಈಗಾಗ್ಲೇ ಯೆಹೋವನ ಸೇವಕ ಮೋಶೆಯಿಂದ ಆಸ್ತಿ ಸಿಕ್ಕಿದೆ.”  ಆಗ ಆ ಗಂಡಸ್ರು ತಮ್ಮ ಪ್ರಯಾಣದ ಸಿದ್ಧತೆಗಳನ್ನ ಮಾಡ್ಕೊಂಡ್ರು. ಯೆಹೋಶುವ ಅವ್ರಿಗೆ “ಇಡೀ ದೇಶ ಸುತ್ತಾಡಿ ಪ್ರದೇಶಗಳ ಪಟ್ಟಿಮಾಡಿ ನನ್ನ ಹತ್ರ ಬನ್ನಿ. ನಾನು ಶೀಲೋನಲ್ಲಿ ಯೆಹೋವನ ಮುಂದೆ ನಿಮಗಾಗಿ ಚೀಟಿ ಹಾಕ್ತೀನಿ” ಅಂತ ಆಜ್ಞೆ ಕೊಟ್ಟ.+  ಆಮೇಲೆ ಆ ಗಂಡಸ್ರು ಇಡೀ ದೇಶ ಸುತ್ತಾಡಿ ಪಟ್ಟಣಗಳನ್ನೆಲ್ಲ ಪಟ್ಟಿಮಾಡಿದ್ರು. ಅವುಗಳನ್ನ ಏಳು ಪಾಲು ಮಾಡಿ ಪುಸ್ತಕದಲ್ಲಿ ಬರೆದು ಶೀಲೋನಲ್ಲಿದ್ದ ಯೆಹೋಶುವನ ಹತ್ರ ಬಂದ್ರು. 10  ಯೆಹೋಶುವ ಶೀಲೋನಲ್ಲಿ ಯೆಹೋವನ ಮುಂದೆ ಚೀಟಿ ಹಾಕಿದ.+ ಅಲ್ಲಿ ಯೆಹೋಶುವ ಇಸ್ರಾಯೇಲ್ಯರಿಗೆ ಅವ್ರವ್ರ ಪಾಲು ಹಂಚ್ಕೊಟ್ಟ.+ 11  ಬೆನ್ಯಾಮೀನ್‌ ಕುಲಕ್ಕೆ ಮೊದಲ ಚೀಟಿ ಬಿತ್ತು. ಅವ್ರ ಮನೆತನಗಳಿಗೆ ಸಿಕ್ಕ ಪ್ರದೇಶ ಯೆಹೂದ+ ಮತ್ತು ಯೋಸೇಫನ ಪ್ರದೇಶಗಳ ಮಧ್ಯದಲ್ಲಿತ್ತು.+ 12  ಉತ್ತರದ ಕಡೆಗೆ ಅವ್ರ ಗಡಿ ಯೋರ್ದನಿಂದ ಶುರುವಾಗಿ, ಯೆರಿಕೋವಿನ ಉತ್ತರಕ್ಕಿದ್ದ ಇಳಿಜಾರಿನ ತನಕ ಇತ್ತು.+ ಪಶ್ಚಿಮದ ಕಡೆಗೆ ಬೆಟ್ಟದ ತನಕ ಹೋಗಿ, ಅಲ್ಲಿಂದ ಬೇತಾವೆನಿನ ಕಾಡಿನ ತನಕ ಇತ್ತು.+ 13  ಅಲ್ಲಿಂದ ಈ ಗಡಿ ಲೂಜಿನ ಅಂದ್ರೆ ಲೂಜಿನ ದಕ್ಷಿಣಕ್ಕೆ ಇಳಿಜಾರಿನಲ್ಲಿದ್ದ ಬೆತೆಲಿನ+ ತನಕ ಹೋಗಿ ಕೆಳಗಿನ ಬೇತ್‌-ಹೋರೋನಿನ+ ದಕ್ಷಿಣಕ್ಕಿದ್ದ ಬೆಟ್ಟದ ಮೇಲಿನ ಅಟಾರೋತ್‌-ಅದ್ದಾರಿನ+ ತನಕ ಸಾಗಿತ್ತು. 14  ಆಮೇಲೆ ಈ ಗಡಿ ಬೇತ್‌-ಹೋರೋನಿನ ಮುಂದೆ ಇದ್ದ ಬೆಟ್ಟದಿಂದ ದಕ್ಷಿಣದ ಕಡೆಗೆ ಸಾಗಿ ಕಿರ್ಯತ್‌-ಬಾಳ್‌ ಅಂದ್ರೆ ಯೆಹೂದನ ಮಕ್ಕಳ ನಗರವಾಗಿದ್ದ ಕಿರ್ಯತ್‌-ಯಾರೀಮಿನ+ ತನಕ ವಿಸ್ತರಿಸಿ ಅಲ್ಲಿಗೆ ಮುಗಿತಿತ್ತು. ಇದು ಪಶ್ಚಿಮದ ಗಡಿ. 15  ದಕ್ಷಿಣದ ಗಡಿ ಕಿರ್ಯತ್‌-ಯಾರೀಮಿನ ತುತ್ತತುದಿಯಿಂದ ಪಶ್ಚಿಮದ ತನಕ ಇತ್ತು. ಅದು ನೆಫ್ತೋಹ+ ಅನ್ನೋ ನೀರಿನ ಬುಗ್ಗೆ ತನಕ ಹೋಗ್ತಿತ್ತು. 16  ಅಲ್ಲಿಂದ ಗಡಿ ಕೆಳಗಿಳಿದು ಹಿನ್ನೋಮ್‌* ಕಣಿವೆ+ ಮುಂದಿದ್ದ ಬೆಟ್ಟದ ತುದಿ ತನಕ ಇತ್ತು. ಆ ಬೆಟ್ಟ ರೆಫಾಯರ+ ಕಣಿವೆಯ ಉತ್ತರಕ್ಕಿತ್ತು. ಆಮೇಲೆ ಈ ಗಡಿ ಹಿನ್ನೋಮ್‌ ಕಣಿವೆಯ ತನಕ ಹೋಗಿ ದಕ್ಷಿಣಕ್ಕಿದ್ದ ಯೆಬೂಸಿಯರ+ ಇಳಿಜಾರಿನ ತನಕ ವಿಸ್ತರಿಸಿ ಏನ್‌-ರೋಗೆಲಿಗೆ+ ಇಳಿತಿತ್ತು. 17  ಆಮೇಲೆ ಅದು ಉತ್ತರದ ಕಡೆಗೆ ಏನ್‌-ಷೆಮೆಷಿನ ತನಕ ಹೋಗಿ, ಅದುಮೀಮಿಗೆ+ ಹತ್ತಿ ಹೋಗೋ ದಾರಿ ಮುಂದಿದ್ದ ಗೆಲೀಲೋತಿನ ತನಕ ಹರಡಿತ್ತು. ಅಲ್ಲಿಂದ ಕೆಳಗಿಳಿದು ರೂಬೇನನ ಮಗ ಬೋಹನನ+ ಕಲ್ಲಿನ ತನಕ ಹೋಗ್ತಿತ್ತು.+ 18  ಅಲ್ಲಿಂದ ಅದು ಅರಾಬಾದ ಮುಂದಿದ್ದ ಉತ್ತರದ ತಗ್ಗಿನಲ್ಲಿ ಸಾಗಿ ಅರಾಬಾದ ತನಕ ಹೋಗ್ತಿತ್ತು. 19  ಮುಂದೆ ಈ ಗಡಿ ಬೇತ್‌-ಹೊಗ್ಲಾದ+ ಉತ್ತರಕ್ಕಿದ್ದ ತಗ್ಗಿನ ತನಕ ಸಾಗಿ ಯೋರ್ದನಿನ ದಕ್ಷಿಣದ ಅಂಚಲ್ಲಿ ಮತ್ತು ಲವಣ ಸಮುದ್ರದ*+ ಉತ್ತರ ಕೊಲ್ಲಿಯಲ್ಲಿ ಮುಗಿತಿತ್ತು. ಇದು ದಕ್ಷಿಣದ ಗಡಿಯಾಗಿತ್ತು. 20  ಪೂರ್ವದ ಕಡೆಗೆ ಯೋರ್ದನ್‌ ನದಿನೇ ಅವ್ರ ಗಡಿಯಾಗಿತ್ತು. ಇದು ಬೆನ್ಯಾಮೀನ್‌ ವಂಶದ ಮನೆತನಗಳಿಗೆ ಸಿಕ್ಕ ಆಸ್ತಿಯ ನಾಲ್ಕೂ ಕಡೆಯ ಗಡಿಯಾಗಿತ್ತು. 21  ಬೆನ್ಯಾಮೀನ್‌ ಕುಲದ ಮನೆತನಗಳಿಗೆ ಸಿಕ್ಕಿದ ಪಟ್ಟಣಗಳು ಯಾವದಂದ್ರೆ: ಯೆರಿಕೋ, ಬೇತ್‌-ಹೊಗ್ಲಾ, ಏಮೆಕ್ಕೆಚ್ಚೀಚ್‌, 22  ಬೇತ್‌-ಅರಾಬ,+ ಚಮಾರಯಿಮ್‌, ಬೆತೆಲ್‌,+ 23  ಅವ್ವೀಮ್‌, ಪಾರಾ, ಒಫ್ರ, 24  ಕೆಫೆರ್‌-ಅಮ್ಮೋನ್ಯ, ಒಫ್ನೀ ಮತ್ತು ಗೆಬ.+ ಹೀಗೆ 12 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 25  ಗಿಬ್ಯೋನ್‌,+ ರಾಮ, ಬೇರೋತ್‌, 26  ಮಿಚ್ಪೆ, ಕೆಫೀರಾ, ಮೋಚಾ, 27  ರೆಕೆಮ್‌, ಇರ್ಪೇಲ್‌, ತರಲಾ, 28  ಚೀಲ,+ ಎಲೆಫ್‌, ಯೆಬೂಸ್‌ ಅಂದ್ರೆ ಯೆರೂಸಲೇಮ್‌,+ ಗಿಬೆಯಾ,+ ಕಿರ್ಯತ್‌. ಹೀಗೆ 14 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. ಇದು ಬೆನ್ಯಾಮೀನ್‌ ವಂಶದ ಮನೆತನಗಳಿಗೆ ಸಿಕ್ಕಿದ ಆಸ್ತಿ.

ಪಾದಟಿಪ್ಪಣಿ

ಅಕ್ಷ. “ಹಿನ್ನೋಮನ ಮಗನ.”
ಅದು, “ಮೃತ ಸಮುದ್ರ.”